ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ | ಅಂಟಾರ್ಕ್ಟಿಕಾ: ಸಂಶೋಧನೆಗೆ ಬಿಗಿ ನೀತಿ

ಈ ಬಯಲು ಪ್ರಯೋಗಾಲಯವನ್ನು ರಕ್ಷಿಸಲು ಕಾನೂನು ಬಿಗಿಗೊಳಿಸುವುದು ಅನಿವಾರ್ಯ
Last Updated 31 ಜುಲೈ 2022, 20:00 IST
ಅಕ್ಷರ ಗಾತ್ರ

ಲೋಕಸಭೆಯಲ್ಲಿ ಅನೇಕ ಮಸೂದೆಗಳು ಮಂಡನೆಯಾಗುತ್ತವೆ, ಅದರಲ್ಲಿ ಕೆಲವು ಸದ್ದುಗದ್ದಲದ ನಡುವೆ ಯಾವುದೇ ಚರ್ಚೆ ಇಲ್ಲದೆ ಅಂಗೀಕಾರ ಆಗುತ್ತವೆ. ಜುಲೈ 22ರಂದು ಗದ್ದಲದ ನಡುವೆಯೇ ಅಂಗೀಕರಿಸಿದ ಮಸೂದೆಯೊಂದು ಅಂಟಾರ್ಕ್ಟಿಕಾ ಖಂಡದಲ್ಲಿ ಭಾರತ ನಡೆಸುವ ಸಂಶೋಧನಾ ಚಟುವಟಿಕೆಗಳನ್ನು ಕಾನೂನಿನ ಮೂಲಕ ನಿಯಂತ್ರಿಸುವುದಕ್ಕೆ ಸಂಬಂಧಿಸಿದೆ.

ಬೆಲೆ ಏರಿಕೆ ಬಗ್ಗೆ ಲೋಕಸಭೆಯಲ್ಲಿ ದೊಡ್ಡ ಮಟ್ಟದಲ್ಲಿ ಗದ್ದಲ, ಗಲಾಟೆ ಆಗುತ್ತಿದ್ದ ಸಂದರ್ಭದಲ್ಲಿ ಸದ್ದಿಲ್ಲದೆ ಈ ಮಸೂದೆ ಮಂಡನೆಯೂ ಆಯಿತು, ಅಂಗೀಕಾರವೂ ಪಡೆಯಿತು. ಚರ್ಚೆಯೇ ಆಗಲಿಲ್ಲ. ಏಕೆಂದರೆ ಈ ಮಸೂದೆಯು ಭಾರತದ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರಗಳ ಲಾಭ– ನಷ್ಟಗಳನ್ನು ನಿರ್ದೇಶಿಸುವಂತಹುದು ಆಗಿರಲಿಲ್ಲ.

ಅಂಟಾರ್ಕ್ಟಿಕಾ ಖಂಡಕ್ಕೆ ಅನೇಕ ವಿಶೇಷಣಗಳಿವೆ. ಭೂಗೋಳದ ದಕ್ಷಿಣ ತುದಿಯಲ್ಲಿರುವ ನಿರ್ಜನಖಂಡ, ಶ್ವೇತಖಂಡ, ಹಿಮದ ಮರುಭೂಮಿ, ಜಗತ್ತಿನ ಅತಿ ಶೀತಲಖಂಡ, ಅತಿ ಎತ್ತರದಖಂಡ, ದುರ್ಗಮಖಂಡ ಇತ್ಯಾದಿ. ಈ ಒಂದೊಂದೂ ನಿಜವೇ ಹೌದು. 1911ರಲ್ಲಿ ನಾರ್ವೆಯ ಅಮುಂಡ್‍ಸನ್ ಈ ಖಂಡದ ದಕ್ಷಿಣ ಧ್ರುವದ ಮೇಲೆ ನಿಂತ ನಂತರ ಅನೇಕ ರಾಷ್ಟ್ರಗಳು ಈ ಹಿಮದ ಖಂಡದ ಬಗ್ಗೆ ಅತಿ ಉತ್ಸಾಹ ತೋರಿದವು. ಈ ಖಂಡದಲ್ಲಿ ಹಿಮದ ಸ್ತರಗಳ ಕೆಳಗೆ ಹುದುಗಿರಬಹುದಾದ ಖನಿಜ ಸಂಪನ್ಮೂಲದ ಒಡೆತನ ಗಳಿಸುವುದೇ ಆ ದೇಶಗಳ ಪ್ರಧಾನ ಗುರಿಯಾಗಿತ್ತು.

ನಾರ್ವೆ, ಆಸ್ಟ್ರೇಲಿಯಾ ಸೇರಿದಂತೆ ಹಲವು ರಾಷ್ಟ್ರ ಗಳು ಅವಸರದಲ್ಲಿ ಯಾತ್ರೆ ಹೊರಟು ಸಾವು– ನೋವನ್ನೂ ಲೆಕ್ಕಿಸದೆ ಅಲ್ಲಿ ಶಿಬಿರ ಹೂಡಿ ತಮ್ಮ ತಮ್ಮ ಭೂಭಾಗಗಳನ್ನು ಗುರುತಿಸಿಕೊಂಡು ಧ್ವಜ ಹಾರಿಸಿದ್ದವು; ಪರಸ್ಪರ ಘರ್ಷಣೆಯಲ್ಲಿ ತೊಡಗಿದ್ದವು.

ಕೊನೆಗೆ 1959ರಲ್ಲಿ ಒಮ್ಮತಕ್ಕೆ ಬಂದವು. ಪರಿಣಾಮವಾಗಿ ಅಂತರರಾಷ್ಟ್ರೀಯ ಒಪ್ಪಂದವೊಂದು ರೂಪುಗೊಂಡಿತು. ಅದು ಈಗಲೂ ಊರ್ಜಿತವಾಗಿದೆ. ಈ ಒಪ್ಪಂದಕ್ಕೆ ಭಾರತವೂ ಸೇರಿದಂತೆ 30 ದೇಶಗಳು ಸಹಿ ಹಾಕಿವೆ. ಈ ಒಪ್ಪಂದದ ರೀತ್ಯ ಅಂಟಾರ್ಕ್ಟಿಕಾ ಖಂಡ ಯಾವೊಂದು ದೇಶದ ಸ್ವತ್ತೂ ಅಲ್ಲ; ಅದು ಇಡೀ ಜಗತ್ತಿಗೆ ಸೇರಿದ ನಿಸರ್ಗದ ಆಸ್ತಿ. ಅಲ್ಲಿ ಮಿಲಿಟರಿಗೆ ಪ್ರವೇಶವಿಲ್ಲ, ಗಣಿಗಾರಿಕೆ ನಡೆಸುವಂತಿಲ್ಲ, ಸುತ್ತಣ ದಕ್ಷಿಣ ಸಾಗರದಲ್ಲಿ ಮೀನುಗಾರಿಕೆಗೆ ಅವಕಾಶವಿಲ್ಲ, ಪರಮಾಣು ಸ್ಫೋಟಿಸು ವಂತಿಲ್ಲ. ಇಂತಹ ಹಲವು ಕರಾರುಗಳು ಜಾರಿಗೆ ಬಂದ ಮೇಲೆ ಈಗ ಅಂಟಾರ್ಕ್ಟಿಕಾ ಖಂಡ ವಿಜ್ಞಾನಕ್ಕೆ ಮುಡುಪಾದ ಖಂಡ ಎಂದು ಜಗತ್ತು ಒಪ್ಪಿಕೊಂಡಿದೆ.

ಈ 30 ರಾಷ್ಟ್ರಗಳು ಒಂದು ಕೂಟವನ್ನು ನಿರ್ಮಿಸಿ ಕೊಂಡಿವೆ. ಅಲ್ಲಿನ ಕಾನೂನು ಕಟ್ಟಲೆಗಳನ್ನು ಕಾಲಕಾಲಕ್ಕೆ ಪರಿಷ್ಕರಿಸಿ ಮರು ರೂಪಿಸುತ್ತವೆ. ನಿಜವಾಗಿ ವಿಜ್ಞಾನದಲ್ಲಿ ಆಸಕ್ತಿ ಇರುವ ರಾಷ್ಟ್ರಗಳು ಅಲ್ಲಿ ಕೇಂದ್ರಗಳನ್ನು ತೆರೆದು, ಸಂಶೋಧನೆಯಲ್ಲಿ ತೊಡಗಿವೆ. ಜೀವನ್ಮರಣ ಹೋರಾಟ ಎಂಬುದು ಅಲ್ಲಿ ನಿತ್ಯ ನಿರಂತರ. ಏಕೆಂದರೆ ರಷ್ಯಾ ತೆರೆದ ಓಸ್ತಾಕ್ ಎಂಬ ಕೇಂದ್ರದಲ್ಲಿ 1983ರಲ್ಲಿ ಉಷ್ಣತೆ ಮೈನಸ್ 89 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿತ್ತು. ಇಲ್ಲಿ ಜಗತ್ತಿನ ಶೇ 90 ಭಾಗ ಸಿಹಿನೀರು ಹಿಮಗಡ್ಡೆಯ ರೂಪದಲ್ಲಿದೆ. ಒಂದುವೇಳೆ ಇದೆಲ್ಲವೂ ಕರಗಿದರೆ ಜಗತ್ತಿನ ಸಾಗರ ಮಟ್ಟ 60 ಮೀಟರ್ ಹೆಚ್ಚುತ್ತದೆಂಬ ಎಚ್ಚರಿಕೆಯನ್ನು ವಿಜ್ಞಾನಿಗಳು ಕೊಟ್ಟಿದ್ದಾರೆ. ಆದರೆ ಒಮ್ಮೆಗೇ ಹೀಗಾಗುವುದು ಅಸಂಭವ.

ವಿಜ್ಞಾನದ ಅನೇಕ ಕ್ಷೇತ್ರಗಳ ಬಗ್ಗೆ ಇಲ್ಲಿರುವ ಒಂದೊಂದು ಸಂಶೋಧನಾ ಕೇಂದ್ರವೂ ದೊಡ್ಡ ಪ್ರಮಾಣದಲ್ಲಿ ಕೆಲಸ ಮಾಡುತ್ತಿದೆ. ಅಲ್ಲಿನ ಸೂಕ್ಷ್ಮಜೀವಿಗಳು, ಹಿಮನದಿಗಳ ಸರಿತ, ಶೈತ್ಯಕ್ಕೆ ಜೀವಿಗಳ ಹೊಂದಾಣಿಕೆ, ಭೂಕಾಂತತ್ವ, ಖಂಡದ ನೆತ್ತಿಯ ಮೇಲೆ ಕಂಡಿದ್ದ ಓಜೋನ್ ಪದರದ ರಂಧ್ರ- ಹೀಗೆ ಅಂಟಾರ್ಕ್ಟಿಕಾ ಖಂಡದ ಸಂಶೋಧನೆ ಎಂದರೆ ವಿಜ್ಞಾನದ ಎಲ್ಲ ಜ್ಞಾನಶಿಸ್ತುಗಳ ಸಂಗಮ. 1976ರಲ್ಲಿ ಇಲ್ಲಿನ ಲಾರ್ಸನ್ ಐಸ್ ಷೆಲ್ಪ್ ಎಂಬ ಭಾಗದಿಂದ ಕಿತ್ತುಬಂದ ಹಿಮದ ತುಂಡು 3,600 ಚದರ ಕಿಲೊಮೀಟರ್ ವಿಸ್ತೀರ್ಣವಿತ್ತು. ಹೆಚ್ಚು ಕಡಿಮೆ ಇಡೀ ಉಡುಪಿ ಜಿಲ್ಲೆಯನ್ನೇ ಅದರ ಮೇಲೆ ಕೂಡಿಸಬಹುದಾಗಿತ್ತು. ಈ ಬಗೆಯ ಸಂಗತಿಗಳು ದಕ್ಷಿಣ ಸಾಗರದ ಮೇಲೆ ಬೀರುವ ಪ್ರಭಾವ ಕುರಿತೇ ಸಂಶೋಧನೆ ಗಳಾಗುತ್ತಿವೆ.

ಭಾರತ, 1981ರಲ್ಲೇ ಅಂಟಾರ್ಕ್ಟಿಕಾ ಯಾತ್ರೆಯನ್ನು ಅತ್ಯಂತ ಯಶಸ್ವಿಯಾಗಿ ಕೈಗೊಂಡಿತ್ತು. ಅಲ್ಲಿ ದಕ್ಷಿಣ ಗಂಗೋತ್ರಿ ಎಂಬ ಕೇಂದ್ರವನ್ನು ತೆರೆದು ಸಂಶೋಧನೆ ಮಾಡಿ 1983ರಲ್ಲಿ ಅಂಟಾರ್ಕ್ಟಿಕಾ ಕೂಟದ ಸದಸ್ಯತ್ವ ಗಳಿಸಿತು. 40 ವರ್ಷಗಳಿಂದ ಪ್ರತಿವರ್ಷವೂ ಈ ಖಂಡಕ್ಕೆ ಸಂಶೋಧಕರನ್ನು ಕಳಿಸುತ್ತಿದೆ. ‘ದಕ್ಷಿಣ ಗಂಗೋತ್ರಿ’ ಕೇಂದ್ರ ಹಿಮದಿಂದಲೇ ಮುಚ್ಚಿಹೋಗಿತ್ತು. ತೇಲುವ ಹಿಮಗಡ್ಡೆಯ ಮೇಲೆ ಅದನ್ನು ಸ್ಥಾಪಿಸಲಾಗಿತ್ತು. ಮುಂದೆ ಅದನ್ನು ತೊರೆದು, ಮೈತ್ರಿ ಎಂಬ ಕೇಂದ್ರವನ್ನು ತೆರೆಯಿತು. ಇದೀಗ ಭಾರತೀ ಎಂಬ ಮತ್ತೊಂದು ಕೇಂದ್ರದಲ್ಲಿ ಭಾರತ ಸಂಶೋಧನಾ ನಿರತವಾಗಿದೆ.

ಉಳಿದ ಕೂಟ ದೇಶಗಳಂತೆ ಭಾರತ ಇಲ್ಲಿಅಂತರರಾಷ್ಟ್ರೀಯ ಕಾನೂನಿಗೆ ಬದ್ಧವಾಗಿಯೇ ಕೆಲಸ ಮಾಡುತ್ತಿದೆ. ಹೀಗಿರುವಾಗ, ಲೋಕಸಭೆಯಲ್ಲಿ ಅಂಟಾರ್ಕ್ಟಿಕಾ ಕುರಿತ ಮಸೂದೆಯನ್ನು ಮಂಡಿಸುವ ಅಗತ್ಯವೇನಿತ್ತು? ಏಕಿಷ್ಟು ತರಾತುರಿ ಎನ್ನಿಸಬಹುದು. ವಾಸ್ತವವಾಗಿ ಇದು ತರಾತುರಿಯಲ್ಲ, ಬದಲು ತಡವಾದ ನಿರ್ಧಾರ. ಈಗಾಗಲೇ ಆ ಖಂಡದ ಕೂಟ ರಾಷ್ಟ್ರಗಳಲ್ಲಿ 27 ರಾಷ್ಟ್ರಗಳು ತಮ್ಮ ತಮ್ಮ ದೇಶಗಳಲ್ಲಿ, ಅಂಟಾರ್ಕ್ಟಿಕಾ ದಲ್ಲಿ ಸಂಶೋಧನೆ ಮಾಡುವಾಗ, ಪಾಲಿಸಬೇಕಾದ ನೀತಿನಿಯಮಗಳನ್ನು ಕಾನೂನುಬದ್ಧಗೊಳಿಸಿವೆ;
ನ್ಯಾಯಮಂಡಳಿಗಳನ್ನು ಸ್ಥಾಪಿಸಿವೆ. ಭಾರತಕ್ಕೆ ಈ ಒತ್ತಡವೂ ಇತ್ತು. ಜೊತೆಗೆ 2016ರ ಪ್ಯಾರಿಸ್ ಒಪ್ಪಂದಕ್ಕೆ ಬದ್ಧವಾಗಿ ಪರಿಸರ ಉಳಿಸುವ ಹೊಣೆಯೂ ಇತ್ತು. ಏಕೆಂದರೆ ಈ ಹಿಮದ ಖಂಡದಲ್ಲಿ ಮಾಲಿನ್ಯವು ಶೂನ್ಯ. ಅಲ್ಲಿಗೆ ಹೋದ ಸಂಶೋಧನಾ ತಂಡಗಳು ಮಾಲಿನ್ಯ ಮಾಡುತ್ತಿರುವುದು ಉಂಟು.

ಲೋಕಸಭೆಯಲ್ಲಿ ಈಗ ಅಂಗೀಕಾರ ಪಡೆದಿರುವ ಮಸೂದೆಯು ನಮ್ಮ ಸಂಶೋಧನೆ ಕುರಿತಂತೆ ಹಲವು ಕಠಿಣ ಕಾನೂನುಗಳನ್ನು ಒಳಗೊಳ್ಳುತ್ತದೆ. ನಮ್ಮಲ್ಲಿರುವ ಪರಿಸರ ಕೂನೂನನ್ನು ಹಿಮದ ಖಂಡಕ್ಕೂ ವಿಸ್ತರಿಸಲು ಉದ್ದೇಶಿಸಲಾಗಿದೆ. ಸರ್ಕಾರ ಕಳಿಸುವ ತಂಡಗಳ ಜೊತೆಗೆ ಖಾಸಗಿ ತಂಡಗಳೂ ಹೋಗುತ್ತವೆ. ಬಿಡಿ ವ್ಯಕ್ತಿಗಳು ಭಾಗಿಯಾಗುವ ಅವಕಾಶವಿದೆ. ಅಂಥ ಸಂದರ್ಭದಲ್ಲಿ ಕಾನೂನು ಮುರಿದರೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಮಸೂದೆ ಸೂಚಿಸುತ್ತದೆ. ಇದನ್ನು ಅನ್ವಯಗೊಳಿಸಲು ದೊಡ್ಡ ಪಡೆಯೇ ಇದೆ.

ರಕ್ಷಣಾ ಸಚಿವಾಲಯ, ವಿದೇಶಾಂಗ ಸಚಿವಾಲಯ, ಆರ್ಥಿಕ ಸಚಿವಾಲಯ, ಕಾನೂನು ಸಚಿವಾಲಯ, ವಿಜ್ಞಾನ– ತಂತ್ರಜ್ಞಾನ ಸಚಿವಾಲಯ, ಪ್ರವಾಸೋದ್ಯಮ ಸಚಿವಾಲಯ ಹೀಗೆ ಅನೇಕ ಕ್ಷೇತ್ರದ ಸದಸ್ಯರು ಈ ಸಮಿತಿಯಲ್ಲಿರುತ್ತಾರೆ. ಗೋವಾದಲ್ಲಿರುವ ರಾಷ್ಟ್ರೀಯ ಧ್ರುವ ಮತ್ತು ಸಾಗರ ಸಂಶೋಧನಾ ಕೇಂದ್ರವು ಭಾರತದ ಅಂಟಾರ್ಕ್ಟಿಕಾ ಯಾತ್ರೆಯನ್ನು ರೂಪಿಸುತ್ತದೆ, ಅನುಷ್ಠಾನಗೊಳಿಸುತ್ತದೆ. ಇದೀಗ ಅದರ ಹೊಣೆ ಹೆಚ್ಚಾಗಿದೆ. ಈ ಮಸೂದೆಯ ಪ್ರಕಾರ ಅಂಟಾರ್ಕ್ಟಿಕಾದಲ್ಲಿ ಹೊಸ ಪ್ರಭೇದದ ಪಕ್ಷಿ– ಪ್ರಾಣಿ, ಗಿಡ- ಮರ, ಅಷ್ಟೇ ಏಕೆ, ಸೂಕ್ಷ್ಮಜೀವಿಗಳನ್ನೂ ಪರಿಚಯಿಸುವಂತಿಲ್ಲ. ಮೂಲದಲ್ಲಿ ಹೇಗಿದೆಯೋ ಆ ಪರಿಸರ ಹಾಗೆಯೇ ಉಳಿಯಬೇಕು ಎಂಬ ಅಂಶವೂ ಮಸೂದೆಯಲ್ಲಿ ಸೇರಿದೆ.

ಅಂಟಾರ್ಕ್ಟಿಕಾದಲ್ಲಿ ಸಂಶೋಧನೆಯ ಹೆಸರಿ ನಲ್ಲಿಈಗಾಗಲೆನಗರಗಳೇ ತಲೆ ಎತ್ತಿವೆ. ವಿಮಾನ ಮತ್ತು ಹೆಲಿಕಾಪ್ಟರ್‌ಗಳ ಹಾರಾಟ ಅಲ್ಲಿ ಸರ್ವಸಾಮಾನ್ಯ. ಹೀಗೆ ಹಾರಾಡುವಾಗ ಅಲ್ಲಿನ ಜೀವಿಗಳಿಗೆ ಗಾಸಿಯಾಗ ಬಾರದು, ಅವು ಗಾಬರಿಗೆ ಒಳಗಾಗಬಾರದು ಎಂಬ ಅಂಶವನ್ನು ಭಾರತ ಸಮ್ಮತಿಸಿ, ಕೆಳಹಂತದ ಹಾರಾಟವನ್ನು ನಿಷೇಧಿಸಿದೆ. ಅಲ್ಲಿ ಯಾವುದೇ ಗಣಿ ಕಾರ್ಯಾಚರಣೆಗೂ ಅವಕಾಶವಿಲ್ಲ. ಯಾವ ಜೀವಿಗಳನ್ನೂ ಬಂಧಿಸಿಟ್ಟು ಸಂಶೋಧನೆ ಮಾಡುವಂತಿಲ್ಲ, ಭಾರತಕ್ಕೆ ತರುವಂತಿಲ್ಲ. ಈ ನಿಯಮಗಳನ್ನು ಉಲ್ಲಂಘಿಸಿದರೆ ಏಳು ವರ್ಷದವರೆಗೆ ಕಠಿಣ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ, ಇಲ್ಲವೇ ₹ 50 ಲಕ್ಷದವರೆಗೆ ದಂಡ ತೆರಬೇಕಾಗುತ್ತದೆ. ಇಡೀ ಖಂಡವೇ ಬಯಲು ಪ್ರಯೋಗಾಲಯ. ಇದನ್ನು ಉಳಿಸಿಕೊಳ್ಳಲು ಕಾನೂನಿನ ಕುಣಿಕೆಯನ್ನು ಬಿಗಿಸೊಳಿಸುವುದು ಅನಿವಾರ್ಯ ಎಂಬ ತೀರ್ಮಾನಕ್ಕೆ ಭಾರತವೂ ಬದ್ಧವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT