ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾವು ಮರೆತ ಸಾಧಕಿ ಫಾತಿಮಾ

ಈ ಅನನ್ಯ ಸಮಾಜ ಸುಧಾರಕಿಯ ಬಗೆಗಿನ ದಾಖಲೆಗಳನ್ನು ಚರಿತ್ರೆಯ ಪುಟಗಳಿಂದ ಹೆಕ್ಕಬೇಕಾಗಿದೆ
Last Updated 12 ಜನವರಿ 2021, 19:31 IST
ಅಕ್ಷರ ಗಾತ್ರ

ದೇಶದ ಮಹಿಳಾ ಶಿಕ್ಷಣ ಕ್ಷೇತ್ರಕ್ಕೆ ಭದ್ರ ಬುನಾದಿ ಹಾಕಿದ ಶ್ರೇಯ ಸಮಾಜ ಸುಧಾರಕಿ ಸಾವಿತ್ರಿಬಾಯಿ ಫುಲೆ ಅವರಿಗೆ ಸಲ್ಲುತ್ತದೆ. ಆದರೆ ಸಾವಿತ್ರಿಬಾಯಿ ಅವರ ಸಂಗಾತಿಯಾಗಿ ಅವರ ಜೊತೆಜೊತೆಯಲ್ಲೇ ಹೆಜ್ಜೆ ಹಾಕಿದ ಶಿಕ್ಷಕಿಯೊಬ್ಬರಿದ್ದರು. ಹಗಲು ರಾತ್ರಿಯೆನ್ನದೇ ಮಹಿಳಾ ಶಿಕ್ಷಣ ಕ್ರಾಂತಿಗೆ ಅವರ ಹೆಗಲೆಣೆಯಾಗಿ ದುಡಿದಿದ್ದರು. ಜ್ಯೋತಿಬಾ ಫುಲೆ ಮತ್ತು ಸಾವಿತ್ರಿಬಾಯಿ ಫುಲೆ ದಂಪತಿಯು ದಲಿತರು ಮತ್ತು ಮಹಿಳೆಯರಿಗಾಗಿ ತೆರೆದಿದ್ದ ಶಿಕ್ಷಣ ಸಂಸ್ಥೆಯ ಜವಾಬ್ದಾರಿಯನ್ನು ಹೊತ್ತು ಮುನ್ನಡೆಸಿದ್ದರು. ಅವರೇ ಇತಿಹಾಸವು ಮರೆತಿರುವ ಫಾತಿಮಾ ಶೇಖ್‌.

ಸ್ತ್ರೀವಾದಿ ಶಿಕ್ಷಕಿಯಾಗಿದ್ದ ಫಾತಿಮಾ, ರಾಷ್ಟ್ರದಲ್ಲಿ ಮುಸ್ಲಿಂ ಸಮುದಾಯದಿಂದ ಬಂದ ಮೊದಲ ಶಿಕ್ಷಕಿಯಾಗಿದ್ದರು. ಸಾವಿತ್ರಿಬಾಯಿ ಅವರ ಗೆಳತಿ, ಸಹೋದ್ಯೋಗಿ ಹಾಗೂ ಅವರ ಆಶ್ರಯದಾತೆಯಾಗಿದ್ದರು. ಸಾವಿತ್ರಿಬಾಯಿ ಅವರಿಗೆ ಒಂದೂವರೆ ಶತಮಾನದ ಬಳಿಕವಾದರೂ ಚರಿತ್ರೆಯಲ್ಲಿ ಪ್ರವೇಶ ಸಿಕ್ಕಿತು. ಆದರೆ ಫಾತಿಮಾ ಅವರ ಕುರಿತು ಈವರೆಗೂ ಯಾವುದೇ ಸಂಶೋಧನೆ ನಡೆದಿಲ್ಲ. ಅವರ ಹೆಸರಿನಲ್ಲಿ ಪ್ರಶಸ್ತಿ, ಪುರಸ್ಕಾರಗಳು ಪ್ರಾರಂಭವಾಗಿಲ್ಲ. ಅವರ ಅನನ್ಯ ಸಾಧನೆಯ ಕುರಿತು ಚರ್ಚೆ, ವಿಚಾರ ಸಂಕಿರಣಗಳು ಸಹ ನಡೆದಿಲ್ಲ. ಇದೆಲ್ಲಕ್ಕಿಂತ ಮುಖ್ಯವಾಗಿ, ಅವರ ಕುರಿತು ಹೆಚ್ಚಿನ ಮಾಹಿತಿಯೇ ದಾಖಲಾಗಿಲ್ಲ. ಇದು ಇತಿಹಾಸದ ದುರಂತ.

ಫಾತಿಮಾ ಅವರ ಜನ್ಮದಿನಾಂಕದ ಬಗ್ಗೆ ಸಹ ಸ್ಪಷ್ಟವಾದ ಮಾಹಿತಿಯಿಲ್ಲ. ಆದರೆ, ಅವರು ಹುಟ್ಟಿದ್ದು ಈಗ್ಗೆ 200 ವರ್ಷಗಳ ಹಿಂದೆ ಎಂದು ಅಂದಾಜಿಸಲಾಗಿದೆ. ಕೆಲವು ದಾಖಲೆಗಳನ್ನು ಆಧಾರವಾಗಿಟ್ಟು ನಡೆದ ವ್ಯಾಪಕ ಚರ್ಚೆಗಳ ನಂತರ ಜನವರಿ ಒಂಬತ್ತನ್ನು ಅವರ ಜನ್ಮದಿನಾಂಕವೆಂದು ತೀರ್ಮಾನಿಸಲಾಗಿದೆ. ಆದರೂ ಫಾತಿಮಾ ಅವರ ಜನ್ಮದಿನವನ್ನು ಸರ್ಕಾರವಾಗಲೀ ಸಂಘ ಸಂಸ್ಥೆಗಳಾಗಲೀ ಆಚರಿಸದಿರುವುದು ನಾನಾ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.

ಪುಣೆಯನ್ನು ಕಾರ್ಯಕ್ಷೇತ್ರವಾಗಿ ಹೊಂದಿದ್ದ ಫಾತಿಮಾ ಮತ್ತು ಅವರ ಸಹೋದರ ಉಸ್ಮಾನ್ ಶೇಖ್‌ ಅವರ ಪ್ರಗತಿಪರ ಕಾರ್ಯಗಳ ಬಗ್ಗೆ ಸಮಾಜದ ಒಂದು ವರ್ಗದ ವಿರೋಧವಿತ್ತು. ಅಲ್ಲದೆ, ಅವರದೇ ಆದ ಮುಸ್ಲಿಂ ಸಮುದಾಯ ಅವರ ಈ ಕಾರ್ಯಗಳನ್ನು ಹೇಗೆ ಸ್ವೀಕರಿಸಿತ್ತು, ಅವರಿಗೆ ಪ್ರಶಂಸೆ ದೊರೆಯಿತೇ ಅಥವಾ ವಿರೋಧಿಸಿತೇ ಎಂಬ ವಿವರ ಎಲ್ಲಿಯೂ ನಮಗೆ ದೊರಕುವುದಿಲ್ಲ.

ಅಲ್ಪಸಂಖ್ಯಾತರು, ದಲಿತರು ಹಾಗೂ ಮಹಿಳೆಯರು ಶೋಷಣೆಯಿಂದ ಮುಕ್ತರಾಗಲು ಅಕ್ಷರ ಒಂದು ಪ್ರಮುಖ ಅಸ್ತ್ರ. ದಲಿತರು ಮತ್ತು ಮಹಿಳೆಯರ ಮೇಲೆ ಇಂದಿಗೂ ನಡೆಯುತ್ತಿರುವ ಶೋಷಣೆಗೆ ಅಕ್ಷರ ಜ್ಞಾನದ ಕೊರತೆಯೇ ಕಾರಣ. ಇಂತಹ ಅಕ್ಷರದ ಅಸ್ತ್ರವು ಮಹಿಳೆಯರ ಕೈಗೆ ಸಿಗುವಂತೆ ಮಾಡುವಲ್ಲಿ ಫಾತಿಮಾ ಮತ್ತು ಸಾವಿತ್ರಿಬಾಯಿ ಅವರ ಕೊಡುಗೆ ಅನನ್ಯವಾದುದು.

ಹೆಣ್ಣುಮಕ್ಕಳು ಮತ್ತು ದಲಿತ ಮಕ್ಕಳಿಗಾಗಿ ಫುಲೆ ದಂಪತಿ ಶಾಲೆಯನ್ನು ತೆರೆದಿದ್ದ ಆರಂಭಿಕ ದಿನಗಳು ಅವು. ಫಾತಿಮಾ ಈ ಶಾಲೆಯಲ್ಲಿ ಪಾಠ ಮಾಡುತ್ತಿದ್ದರು. ಮನೆಮನೆಗೆ ತೆರಳಿ ತಮ್ಮ ಹೆಣ್ಣುಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಕುಟುಂಬದವರನ್ನು ಪ್ರೋತ್ಸಾಹಿಸುತ್ತಿದ್ದರು. ಜೊತೆಗೆ ಶಾಲೆಯ ಇತರ ಎಲ್ಲ ವ್ಯವಹಾರಗಳನ್ನೂ ನಿರ್ವಹಿಸುತ್ತಿದ್ದರು. ಶಾಲೆಯ ಯೋಜನೆಗಳು ಸಮರ್ಪಕವಾಗಿ ರೂಪುಗೊಳ್ಳುವುದರ ಹಿಂದೆ ಆಕೆಯ ಕೊಡುಗೆಯೂ ಇತ್ತು.

ಅನಾರೋಗ್ಯದ ಕಾರಣದಿಂದ ಒಮ್ಮೆ ಸಾವಿತ್ರಿಬಾಯಿ ತವರಿಗೆ ಹೋಗಿರುತ್ತಾರೆ. ಆಗ ಅವರು ಶಾಲೆಯ ಸಂಪೂರ್ಣ ಜವಾಬ್ದಾರಿಯನ್ನು ಸಹಶಿಕ್ಷಕಿ ಫಾತಿಮಾ ಅವರಿಗೆ ನೀಡುತ್ತಾರೆ. ತಮ್ಮ ಗೈರುಹಾಜರಿಯಿಂದ ಫಾತಿಮಾ ಅವರಿಗೆ ತೊಂದರೆಯಾಗಿರಬಹುದು ಎಂದು ಪತ್ರವೊಂದರಲ್ಲಿ ಸಾವಿತ್ರಿಬಾಯಿ ಬರೆದಿದ್ದಾರೆ.

ಫಾತಿಮಾ ಅವರ ಪರಿಶ್ರಮಕ್ಕೆ ದಾಖಲೆಯಾಗಿ ಸಾವಿತ್ರಿಬಾಯಿ ಬರೆದಿರುವ ಇಂತಹ ಮೂರು ಪತ್ರಗಳಷ್ಟೇ ಲಭ್ಯವಾಗಿವೆ. ಫಾತಿಮಾ ಅವರನ್ನು ಸಾವಿತ್ರಿಬಾಯಿ ಈ ಪತ್ರಗಳಲ್ಲಿ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಈ ಇಬ್ಬರೂ ಗೆಳತಿಯರು ತಮ್ಮ ಕೆಲಸದ ಅನುಭವಗಳನ್ನು ಪತ್ರಗಳ ಮೂಲಕ ಪರಸ್ಪರ ಹಂಚಿಕೊಳ್ಳುತ್ತಿದ್ದರು.
ಇಷ್ಟೇ ಅಲ್ಲದೆ, ಸಾವಿತ್ರಿಬಾಯಿ ಮತ್ತು ಅವರ ಪತಿ ಜ್ಯೋತಿಬಾ ಅವರ ನಡುವೆಯೂ ಬಹಳಷ್ಟು ಪತ್ರ ವ್ಯವಹಾರಗಳು ನಡೆದಿದ್ದವು. ಅವುಗಳಲ್ಲೂ ಫಾತಿಮಾ ಅವರ ಪರಿಶ್ರಮದ ಪ್ರಸ್ತಾಪ ಇರುವ ಸಾಧ್ಯತೆ ಇದೆ. ಆದರೆ ಆ ಯಾವ ಪತ್ರಗಳೂ ಈಗ ಲಭ್ಯವಾಗದಿರುವುದು ವಿಷಾದಕರ.

ಸಮಾಜದ ಹೊರಗೆ ನಿಂತು ದೃಷ್ಟಿ ಹಾಯಿಸಿದರೆ ಎಲ್ಲವೂ ಬದಲಾದಂತೆ ತೋರುತ್ತದೆ. ಆದರೆ ಭಾರತದ ಜನಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರು ಇಂದಿಗೂ ಆರ್ಥಿಕ, ಸಾಮಾಜಿಕ, ರಾಜಕೀಯ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಹಿಂದೆಯೇ ಉಳಿದಿದ್ದಾರೆ. ಹೀಗಾಗಿ, ಯಾವ ಕ್ರಾಂತಿಕಾರಿ ಗುರಿಯನ್ನು ತಲುಪಲು ಫಾತಿಮಾ ಜೀವನಪರ್ಯಂತ ಶ್ರಮಿಸಿದರೋ ಆ ಗುರಿ ಇಂದಿಗೂ ಅಪೂರ್ಣವಾಗಿಯೇ ಉಳಿದಿದೆ. ಪ್ರಗತಿಪರ ವಿಚಾರಧಾರೆಯವರಿಗೂ ಇದೊಂದು ಸವಾಲಾಗಿಯೇ ಮುಂದುವರಿದಿದೆ.

ಶಿಕ್ಷಣದ ಚರಿತ್ರೆಯಲ್ಲಿ ಗುರುವಿನ ಸ್ಮರಣೆಯನ್ನು ಸಹಜವಾಗಿ ದಾಖಲಿಸಲಾಗುತ್ತದೆ. ಅದೇ ಪುರುಷನ ಸ್ಥಾನದಲ್ಲಿ ಮಹಿಳಾ ಗುರುವಿದ್ದರೆ ಅವಳನ್ನು ಗುರುತಿಸಿ ಆಕೆಯ ಬಗ್ಗೆ ದಾಖಲಿಸುವುದು ಕಡಿಮೆ. ಪುರುಷಪ್ರಧಾನ ಸಮಾಜವು ಮಹಿಳೆಯರ ಸಮಾಜಮುಖಿ ಕೆಲಸಗಳನ್ನು ಯಾವತ್ತೂ ಗೌಣವಾಗಿಸುತ್ತಲೂ ಅವಮಾನಿಸುತ್ತಲೂ
ಬಂದಿದೆ. ಇಂತಹವರ ಸಾಲಿಗೆ ಸೇರಿಹೋಗಿರುವ ಅಮೂಲ್ಯ ಹೋರಾಟಗಾರ್ತಿ ಫಾತಿಮಾ ಅವರ ಬದುಕು– ಹೋರಾಟಗಳ ಕುರಿತು ಸಂಶೋಧನೆ ಮತ್ತು ದಾಖಲೀಕರಣದ ಕೆಲಸ ಅಗತ್ಯವಾಗಿ ನಡೆಯಬೇಕಾಗಿದೆ.

ಚರಿತ್ರೆಯನ್ನು ಸ್ತ್ರೀಪರ ನೋಟದಿಂದ ನೋಡುವುದು ಬಹಳ ಅವಶ್ಯಕ. ದೇಶದ ರಾಜಕಾರಣ ಹಾಗೂ ಶಿಕ್ಷಣ ವಲಯವು ಸಾವಿತ್ರಿಬಾಯಿ ಅವರನ್ನು ನೆನಪಿಸಿಕೊಳ್ಳುತ್ತದೆ, ಗೌರವಿಸುತ್ತದೆ. ಅದು ಸೂಕ್ತವೂ ಆಗಿದೆ. ಆದರೆ ಅದೇ ಸಂದರ್ಭದಲ್ಲಿ ಫಾತಿಮಾ ಅವರು ಕೂಡ ಮಹಿಳಾ ಶಿಕ್ಷಣಕ್ಕಾಗಿ ಬಹಳಷ್ಟು ಶ್ರಮವಹಿಸಿದವರು. ಅವರನ್ನು ಮಾತ್ರ ಯಾಕೆ ಮರೆವಿಗೆ ಸರಿಸಲಾಗುತ್ತಿದೆ ಎಂಬ ಪ್ರಶ್ನೆ ಸಹಜವಾಗಿಯೇ ಕಾಡುತ್ತದೆ.

ಸಾವಿತ್ರಿಬಾಯಿ ಅವರ ಜನ್ಮದಿನದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್‌ ಮೂಲಕ ಅವರನ್ನು ನೆನಪಿಸಿಕೊಂಡಿದ್ದಾರೆ. ಕಳೆದ ವರ್ಷ ಗೂಗಲ್ ಸಹ ಡೂಡಲ್ ಮೂಲಕ ಅವರನ್ನು ಗೌರವಿಸಿತ್ತು. ಪುಣೆ ವಿಶ್ವವಿದ್ಯಾಲಯವನ್ನು ‘ಸಾವಿತ್ರಿಬಾಯಿ ಫುಲೆ ಪುಣೆ ವಿಶ್ವವಿದ್ಯಾಲಯ’ ಎಂದು ಮರುನಾಮಕರಣ ಮಾಡಲಾಗಿದೆ. ಶಾಲೆ, ಕಾಲೇಜುಗಳಲ್ಲಿ ಸಾವಿತ್ರಿಬಾಯಿ ಅವರ ಕುರಿತು ಪಠ್ಯಗಳಾಗುತ್ತಿವೆ. ಅನೇಕ ರಾಜ್ಯ ಸರ್ಕಾರಗಳ ವತಿಯಿಂದ ಅವರ ಹೆಸರಿನಲ್ಲಿ ಪ್ರಶಸ್ತಿಗಳನ್ನು ಕೊಡಲಾಗುತ್ತಿದೆ. ಅವರ ಕುರಿತು ಸಂಶೋಧನೆ, ಅಧ್ಯಯನಗಳು ಸಹ ನಡೆಯುತ್ತಿವೆ. ಸಾವಿತ್ರಿಬಾಯಿಯವರ ಹೆಸರಿನ ಅಂಚೆ ಚೀಟಿ ಬಿಡುಗಡೆಯಾಗಿದೆ. ಅವರ ಜೀವನ ಮತ್ತು ಕೃತಿಗಳನ್ನು ಆಧರಿಸಿ ಟಿ.ವಿ ಧಾರಾವಾಹಿಯನ್ನೂ ನಿರ್ಮಿಸಲಾಗಿದೆ. ಇವೆಲ್ಲ ಅನೂಚಾನವಾಗಿ ನಡೆದುಬಂದ ಸಂಗತಿಗಳೇನಲ್ಲ. ಇಂತಹ ಕಾರ್ಯಕ್ಕೆ ಒಂದೂವರೆ ಶತಮಾನವೇ ಬೇಕಾಯಿತು. ಆದರೂ ಅಂತಿಮವಾಗಿ ಫುಲೆ ದಂಪತಿ ಈಗ ಸಾರ್ವಜನಿಕ ವಲಯದಲ್ಲಿ ತಮ್ಮ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಆದರೆ ಅನನ್ಯ ಸಮಾಜ ಸುಧಾರಕಿಯಾಗಿದ್ದರೂ ಫಾತಿಮಾ ಮಾತ್ರ ಇತಿಹಾಸದಲ್ಲಿ ಕಳೆದುಹೋಗಿದ್ದಾರೆ. ಈ ಕಾರಣದಿಂದ, ಫಾತಿಮಾ ಅವರ ಬಗ್ಗೆ ದಾಖಲಿಸುವುದು ಬಹಳ ಸಂಕೀರ್ಣವಾದ ವಿಷಯವೇ ಸರಿ. ಇದರ ನಡುವೆಯೂ ಮಹಾರಾಷ್ಟ್ರ ರಾಜ್ಯ ಪಠ್ಯಪುಸ್ತಕ ಬ್ಯೂರೊ ಆದ ಬಾಲಭಾರತಿಯು 2014ರಲ್ಲಿ ಫಾತಿಮಾ ಅವರ ಸಂಕ್ಷಿಪ್ತ ಪರಿಚಯವನ್ನು ಉರ್ದು ಪಠ್ಯಪುಸ್ತಕದಲ್ಲಿ ಸೇರ್ಪಡೆಗೊಳಿಸಿದೆ.

ಮನುಕುಲದ ಶೈಕ್ಷಣಿಕ ಇತಿಹಾಸವನ್ನು ಜಾತಿವಾರು ಸಂಘಟಿಸಲು ಸಾಧ್ಯವಿಲ್ಲ. ಮಹಾನ್‌ ಸಾಧಕರ ಚರಿತ್ರೆಯನ್ನು ಅವರವರ ಸಮುದಾಯದವರೇ ದಾಖಲಿಸಬೇಕು, ಅವರೇ ಆ ಕುರಿತು ಸಂಶೋಧನೆ ನಡೆಸಬೇಕೆಂದೇನೂ ಇಲ್ಲ. ಸಾವಿತ್ರಿಬಾಯಿ ಅವರನ್ನು ಮುಖ್ಯವಾಹಿನಿಗೆ ತಂದಂತೆ, ಫಾತಿಮಾ ಅವರನ್ನೂ ಮುಖ್ಯವಾಹಿನಿಗೆ ತರುವುದು ಭಾರತೀಯರೆಲ್ಲರ ಜವಾಬ್ದಾರಿಯಾಗಿದೆ. ಭಾರತೀಯ ಇತಿಹಾಸದ ಮರೆವಿಗೆ ಒಳಗಾಗಿರುವ ಫಾತಿಮಾ ಅವರಂತಹ ಮಹನೀಯರ ಕುರಿತು ಸರಿಯಾದ ದಾಖಲಾತಿಗಳನ್ನು ಹೆಕ್ಕಿ ತೆಗೆಯಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT