ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇಣುಗೋಪಾಲ್‌ ಟಿ.ಎಸ್‌ ಬರಹ: ಬೆಳವಣಿಗೆಯ ಮಾಪಕ– ಒಂದು ಜಿಜ್ಞಾಸೆ

ಜಿಡಿಪಿಯ ಕನ್ನಡಿಯಲ್ಲಿ ಏನೋ ಐಬಿದೆ ಎಂದು ಹಲವರಿಗೆ ಅನ್ನಿಸಿದೆ
Last Updated 19 ಜುಲೈ 2022, 19:30 IST
ಅಕ್ಷರ ಗಾತ್ರ

ಜಿಡಿಪಿಯಲ್ಲಿ ಶೇಕಡ 2ರಷ್ಟು ಕುಸಿತ ಅಥವಾ ಶೇಕಡ 1ರಷ್ಟು ಹೆಚ್ಚಳ ಎನ್ನುವಂತಹ ಸುದ್ದಿಯನ್ನು ಆಗಾಗ್ಗೆ ಓದುತ್ತಲೇ ಇರುತ್ತೇವೆ. ಜಿಡಿಪಿಯ ಕನ್ನಡಿಯಲ್ಲಿ ನಮ್ಮ ಪ್ರಗತಿಯ ಬಿಂಬವನ್ನು ನೋಡಿಕೊಂಡು ದುಃಖಿತರೋ ಉಲ್ಲಸಿತರೋ ಆಗುತ್ತಿರುತ್ತೇವೆ. ಜಿಡಿಪಿ ಹೆಚ್ಚಾದರೆ, ಏನೋ ಸಾಧಿಸಿಬಿಟ್ಟಿದ್ದೇವೆ ಎಂದು ಬೀಗುತ್ತಿರುತ್ತೇವೆ. ಬಿದ್ದಾಗ, ಏನೇನೋ ಕಾರಣ ಕೊಟ್ಟು ಸಮರ್ಥಿಸಿಕೊಳ್ಳುತ್ತಿರುತ್ತೇವೆ. ಆದರೆ ಆ ಕನ್ನಡಿಯಲ್ಲಿ ಏನೋ ಐಬಿದೆ, ಅಲ್ಲಿ ಕಾಣುತ್ತಿರುವ ಚಿತ್ರ ಹಾಗೂ ಜನರ ವಾಸ್ತವದ ಅನುಭವ ಎರಡೂ ಬೇರೆ ಎಂದು ಹಲವರಿಗೆ ಅನ್ನಿಸಿದೆ.

ಜಿಡಿಪಿ ಅಂದರೆ ಗ್ರಾಸ್ ಡೊಮೆಸ್ಟಿಕ್ ಪ್ರಾಡಕ್ಟ್ (ನಿವ್ವಳ ಆಂತರಿಕ ಉತ್ಪನ್ನ) ಅನ್ನುವುದು ಅನಾದಿಕಾಲದಿಂದ ಇದ್ದ ಕಲ್ಪನೆಯೇನೋ ಎನ್ನುವಂತೆ ಮಾತನಾಡುತ್ತಿದ್ದೇವೆ. ಆದರೆ ಅದು ತೀರಾ ಇತ್ತೀಚಿನ ಪರಿಕಲ್ಪನೆ. ಮಹಾನ್ ಆರ್ಥಿಕ ಕುಸಿತವನ್ನು ಎದುರಿಸುವ ಸಲುವಾಗಿ 1930ರಲ್ಲಿ ಹುಟ್ಟಿಕೊಂಡಿತು. ಅದಕ್ಕಿಂತ ಮೊದಲು ‘ಆರ್ಥಿಕತೆ’ ಎನ್ನುವ ಪರಿಕಲ್ಪನೆ ಇರಲಿಲ್ಲ. ಆರ್ಥಿಕ ಪ್ರಗತಿ ಎಂದೆಲ್ಲಾ ಜನ ಮಾತನಾಡುತ್ತಿರಲಿಲ್ಲ. ಮಳೆ ಬಂದರೆ ಬೆಳೆ. ದೇಶದ ಸಂಪತ್ತು ಅಂದರೆ ರಾಜನ ಸಂಪತ್ತು. ಯುದ್ಧದಲ್ಲಿ ಗೆದ್ದರೆ ಸಂಪತ್ತು ಬೆಳೆಯುತ್ತಿತ್ತು. ಈಗಿನಂತೆ ದೇಶದ ಸಂಪತ್ತನ್ನು ಲೆಕ್ಕ ಹಾಕುವ ಪರಿಪಾಟವೇ ಇರಲಿಲ್ಲ. ಯುದ್ಧ ಮಾಡುವುದಕ್ಕೆ ತಮ್ಮಲ್ಲಿರುವ ದುಡ್ಡು ಸಾಕೋ ಇಲ್ಲವೋ ಎನ್ನುವುದು ಗೊತ್ತಾದರೆ ಸಾಕಿತ್ತು.

1930ರ ಆರ್ಥಿಕ ಕುಸಿತವು ಸರ್ಕಾರವನ್ನು ಕಂಗೆಡಿಸಿತು. ಅದಕ್ಕೆ ಪರಿಹಾರ ಕಂಡುಕೊಳ್ಳಬೇಕಾದರೆದೇಶದಲ್ಲಿ ಏನಾಗುತ್ತಿದೆ ಅನ್ನುವುದು ಗೊತ್ತಿರಬೇಕಿತ್ತು.
ಆರ್ಥಿಕ ಚಟುವಟಿಕೆಗಳನ್ನು ಅರ್ಥಮಾಡಿಕೊಳ್ಳುವುದು ಅವಶ್ಯಕವಾಯಿತು. ಆಗ ದೇಶದ ಸಂಪತ್ತನ್ನು ಲೆಕ್ಕ ಹಾಕುವ ಪ್ರಯತ್ನ ಮೊದಲಿಗೆ ನಡೆಯಿತು. ಇದರ ಜವಾಬ್ದಾರಿಯನ್ನು ಸೈಮನ್ ಕುಜ್ನೆಟ್ಸ್‌ಗೆ ಅಮೆರಿಕದ ಅಧ್ಯಕ್ಷ ಹರ್ಬರ್ಟ್ ಹೂವರ್ ವಹಿಸಿದರು. ಕುಜ್ನೆಟ್ಸ್‌ ಎಲ್ಲ ಆರ್ಥಿಕ ಚಟುವಟಿಕೆಗಳನ್ನೂ ಕ್ರೋಡೀಕರಿಸಿ ಒಂದು ಸಂಖ್ಯೆಗೆ ಇಳಿಸಿದರು. ಅದಕ್ಕಾಗಿ ತಂಡವೊಂದನ್ನು ಕಟ್ಟಿಕೊಂಡು, ಅಮೆರಿಕದ ಉದ್ದಗಲಕ್ಕೂ ಸುತ್ತಿ, ರೈತರು ಏನು ಬೆಳೆಯುತ್ತಾರೆ, ಉದ್ಯಮಿಗಳು ಏನು ತಯಾರಿಸುತ್ತಾರೆ ಎಂಬ ಮಾಹಿತಿಯನ್ನು ಸಂಗ್ರಹಿಸಿದರು.

ಜನರ ಒಳಿತಿಗೆ ಪೂರಕವಾದ ಆರ್ಥಿಕ ಚಟುವಟಿಕೆಗಳನ್ನು ಮಾತ್ರ ರಾಷ್ಟ್ರೀಯ ವರಮಾನದ ಲೆಕ್ಕಾಚಾರದಲ್ಲಿ ಸೇರಿಸಬೇಕು ಅನ್ನುವುದು ಅವರ ಅಭಿಪ್ರಾಯವಾಗಿತ್ತು. ಹಾಗಾಗಿ, ಯುದ್ಧ ಒಳ್ಳೆಯದಲ್ಲ, ಅದರ ವೆಚ್ಚವನ್ನು ಸೇರಿಸಬಾರದೆಂದು ವಾದಿಸಿದ್ದರು. ಅದು ನಡೆಯಲಿಲ್ಲ. ಯುದ್ಧದ ಖರ್ಚು, ಅಫೀಮು, ಮತ್ತೇನೇನೋ ರಾಷ್ಟ್ರೀಯ ವರಮಾನದ ಲೆಕ್ಕಾಚಾರದಲ್ಲಿ ಸೇರಿಕೊಂಡವು. ಕುಜ್ನೆಟ್ಸ್ ಹುಟ್ಟುಹಾಕಿದ ಜಿಡಿಪಿ ಇಂದು ಜಗತ್ತನ್ನೇ ಆವರಿಸಿಕೊಂಡಿದೆ.

ಏನಿದು ಜಿಡಿಪಿ? ಅದು ಆ ವರ್ಷ ರಾಷ್ಟ್ರದಲ್ಲಿ ತಯಾರಾದ ಎಲ್ಲಾ ಸರಕು, ಸೇವೆಗಳ ಒಟ್ಟು ಮೊತ್ತ. ಜಿಡಿಪಿಯು ಮಾರುಕಟ್ಟೆಯ ವ್ಯವಹಾರಗಳನ್ನು ಮಾತ್ರ ಪರಿಗಣಿಸುತ್ತದೆ. ಹಣ ವಿನಿಮಯವಿಲ್ಲದ ಯಾವ ವ್ಯವಹಾರವೂ ಇದರಲ್ಲಿ ಸೇರುವುದಿಲ್ಲ. ಮಹಿಳೆಯರ ಮನೆಗೆಲಸ, ಹಳ್ಳಿಗಳಲ್ಲಿ ಮೈಲುಗಟ್ಟಲೆ ನಡೆದು ನೀರನ್ನು ಹೊತ್ತು ತರುವ ಶ್ರಮ ಇಂಥವೆಲ್ಲಾ ಇದರಲ್ಲಿ ಸೇರುವುದಿಲ್ಲ. ಆದರೆ ಮಾಲ್‍ಗಳಲ್ಲಿ ಮಾರುವ ಬಾಟಲಿ ನೀರು, ಹಾಲಿನಪುಡಿ ಇವೆಲ್ಲಾ ಸೇರುತ್ತವೆ. ಇವೆಲ್ಲ ದೇಶದ ಸಂಪತ್ತನ್ನು ಹೆಚ್ಚಿಸುತ್ತವೆ. ಕಾಡಿನ ಮರ ರಾಷ್ಟ್ರೀಯ ಸಂಪತ್ತಾಗಬೇಕಾದರೆ ಅದನ್ನು ಕಡಿದು ಪೀಠೋಪಕರಣ ಮಾಡಿ ಮಾರಬೇಕು. ಡ್ರಗ್ಸ್ ವ್ಯಾಪಾರ, ವೇಶ್ಯಾವಾಟಿಕೆಯು ದೇಶದ ಜಿಡಿಪಿಯನ್ನು ಹೆಚ್ಚಿಸುತ್ತವೆ. ಆದರೆ ಸರ್ಕಾರಿ ಶಾಲೆಗಳು, ಆಸ್ಪತ್ರೆಗಳ ಸೇವೆಯು ರಾಷ್ಟ್ರೀಯ ವರಮಾನದಲ್ಲಿ ಸೇರಬೇಕಾದರೆ ಅವುಗಳಿಂದ ದುಬಾರಿ ಶುಲ್ಕ ವಸೂಲಿ ಮಾಡಬೇಕು. ಅಂದರೆ ಜನರಿಗೆ ಎಟುಕದಂತೆ ಮಾಡಬೇಕು. ಬದುಕಿಗೆ ಅರ್ಥಪೂರ್ಣವಾದದ್ದನ್ನು ಬಿಟ್ಟು ಉಳಿದದ್ದೆಲ್ಲವನ್ನೂ ಜಿಡಿಪಿ ಅಳೆಯುತ್ತದೆ.

ಬೆಳವಣಿಗೆ ಅಂದರೆ ನಿರಂತರವಾಗಿ ಉತ್ಪಾದನೆ ಆಗುತ್ತಿರಬೇಕು. ಬೇಕೋ ಬೇಡವೋ ಜನ ಅವುಗಳನ್ನು ಕೊಳ್ಳುತ್ತಲೇ ಇರಬೇಕು. ಅವೆಲ್ಲಾ ಬೇಕೇ ಬೇಕು ಎಂದು ಜಾಹೀರಾತುಗಳು ನಂಬಿಸಿವೆ. ಇಷ್ಟಾದರೂ ಬೇಡಿಕೆಯ ಕೊರತೆಯೇ ನಮ್ಮ ಆರ್ಥಿಕ ಬಿಕ್ಕಟ್ಟಿಗೆ ಕಾರಣ ಎನ್ನುತ್ತೇವೆ. ಹಾಗಾದರೆ ಜನ ಇನ್ನೇನು ಕೊಳ್ಳಬೇಕೆಂದು ದಿಗಿಲಾಗುತ್ತದೆ. ಆಧುನಿಕ ಅರ್ಥಶಾಸ್ತ್ರ ನಿಂತಿರುವುದೇ ಮಾನವನ ಇಂಗದ ಆಸೆಗಳ ಮೇಲೆ. ಇದೊಂದು ಹುಚ್ಚು ಅನ್ನುವುದು ನಮ್ಮ ಅಂತರಾಳಕ್ಕೆ ಗೊತ್ತು. ನಿರಂತರ ವಿಸ್ತರಣೆಯನ್ನು ಒಳ್ಳೆಯ ಬೆಳವಣಿಗೆಯಾಗಿ ನೋಡುವುದು ಅರ್ಥಶಾಸ್ತ್ರದಲ್ಲಿ ಮಾತ್ರ. ಜೀವಶಾಸ್ತ್ರದಲ್ಲಿ ಇದನ್ನು ಕ್ಯಾನ್ಸರ್ ಅನ್ನುತ್ತಾರೆ.

ಸರ್ಕಾರಗಳು ಬೆಳವಣಿಗೆಯನ್ನು ಗರಿಷ್ಠಗೊಳಿಸುವುದಕ್ಕಾಗಿಯೇ ನಿಯಮಗಳು, ಯೋಜನೆಗಳನ್ನುರೂಪಿಸುತ್ತಿವೆ. ಸಂಪತ್ತು ಹೇಗೆ ವಿತರಣೆಯಾಗುತ್ತಿದೆ ಅನ್ನುವುದನ್ನು ಜಿಡಿಪಿ ಹೇಳುವುದಿಲ್ಲ. ಪರಿಸರ ಮಾಲಿನ್ಯ, ಅಸಮಾನತೆ ಅದಕ್ಕೆ ಸಮಸ್ಯೆಗಳಲ್ಲ. ಮುಂಬೈನ ಕೊಳೆಗೇರಿಯ ಗುಡಿಸಲುಗಳ ಮಧ್ಯದಲ್ಲಿ ಭವ್ಯ ಬಂಗಲೆಯನ್ನು ನೋಡಿ ಬೀಗುತ್ತೇವೆ.

ಹೀಗೆ, ಜಿಡಿಪಿಯ ಬಗ್ಗೆ ಹತ್ತು ಹಲವು ತಕರಾರುಗಳು ಸಾಧ್ಯ. ಅವನ್ನು ಸುಧಾರಿಸುವ ಹಲವು ಪ್ರಯತ್ನಗಳಾಗಿವೆ. ಪರಿಸರಕ್ಕೆ ಮಹತ್ವ ಕೊಡಬೇಕೆಂಬ ಕಾರಣಕ್ಕೆ ಚೀನಾದ ನಿಯು ವೆನ್‍ಯುವಾನ್ ಹಸಿರು ಜಿಡಿಪಿಯ ಪರಿಕಲ್ಪನೆಯನ್ನು ಮುಂದಿಟ್ಟಿದ್ದಾರೆ. ಭೂತಾನ್‌ನಂತಹ ದೇಶಗಳಲ್ಲಿ ಜನರ ಸಂತೋಷವನ್ನು ಆಧರಿಸಿ ದೇಶದ ಬೆಳವಣಿಗೆಯನ್ನು ಅಳೆಯುವ ಪ್ರಯತ್ನ ನಡೆದಿದೆ. ಜನರ ಕಲ್ಯಾಣವನ್ನು ಗಮನದಲ್ಲಿ ಇಟ್ಟುಕೊಂಡು ಮಾನವ ಅಭಿವೃದ್ಧಿ ಸೂಚಿಯನ್ನು ಸೂಚಿಸಲಾಗಿದೆ. ಇವೆಲ್ಲದರ ನಡುವೆ ಜಿಡಿಪಿಯ ಆಧಿಪತ್ಯ ಮುಂದುವರಿದೇ ಇದೆ.

ಜಿಡಿಪಿಗಿಂತ ‘ರಾಷ್ಟ್ರೀಯ ವರಮಾನ’ ಪರಿಕಲ್ಪನೆಯು ಒಳ್ಳೆಯ ಮಾಪಕ ಅನ್ನುತ್ತಾರೆ ಥಾಮಸ್ ಪಿಕೆಟ್ಟಿ. ಏಕೆಂದರೆ, ಅದರಲ್ಲಿ ಯಂತ್ರಗಳ ಸವಕಲು, ನೈಸರ್ಗಿಕ ಸಂಪನ್ಮೂಲ ಇವೆಲ್ಲವನ್ನೂ ಕಳೆಯಲಾಗುತ್ತದೆ. ಉದಾಹರಣೆಗೆ, ದೇಶದಲ್ಲಿ ಲಕ್ಷ ಕೋಟಿ ಡಾಲರ್ ಮೌಲ್ಯದ ಪೆಟ್ರೋಲ್ ತೆಗೆಯಲಾಗುತ್ತದೆ ಎಂದು ಭಾವಿಸಿಕೊಳ್ಳಿ. ಜಿಡಿಪಿ ಅದಕ್ಕೆ ತಕ್ಕಂತೆ ಹೆಚ್ಚುತ್ತದೆ. ಆದರೆ ರಾಷ್ಟ್ರೀಯ ವರಮಾನ ಕಡಿಮೆಯಾಗುತ್ತದೆ. ಯಾಕೆಂದರೆ ಅಷ್ಟೇ ಪ್ರಮಾಣದಲ್ಲಿ ನೈಸರ್ಗಿಕ ಸಂಪನ್ಮೂಲ ಕಡಿಮೆಯಾಗುತ್ತದೆ. ಜೊತೆಗೆ ಅದರಿಂದಾಗುವ ಪರಿಸರದ ಹಾನಿಯೂ ಸೇರಿಕೊಳ್ಳುತ್ತದೆ. ಆದರೆ ಹಣದ ರೂಪದಲ್ಲಿ ಪರಿಸರಹಾನಿ ಲೆಕ್ಕ ಹಾಕುವುದರಲ್ಲಿ ಒಂದು ಅಪಾಯವಿದೆ. ಅಂತಹ ನಷ್ಟವನ್ನು ಹಣದಿಂದ ಭರಿಸಬಹುದೆಂಬ ಭ್ರಮೆ ಸೃಷ್ಟಿಯಾಗುತ್ತದೆ. ಅದರ ಬದಲು, ಪರಿಸರದಲ್ಲಿನ ಇಂಗಾಲಾಮ್ಲದ ಪ್ರಮಾಣಕ್ಕೆ ಮಿತಿ ಹಾಕುವುದು ಒಳ್ಳೆಯದು. ಹಾಗೆಯೇ ಯಾರಿಂದ, ಯಾವ ಪ್ರಮಾಣದಲ್ಲಿ ಪರಿಸರ ಹಾಳಾಗುತ್ತದೆ ಎನ್ನುವುದನ್ನೂ ಗಮನಿಸಬೇಕು. ಜೊತೆಗೆ ಕೇವಲ ಪರಿಸರಕ್ಕೆ ಸೀಮಿತ ಮಾಡಿಕೊಂಡರೆ ಸಾಲುವುದಿಲ್ಲ. ಆರ್ಥಿಕ, ಸಾಮಾಜಿಕ ಸೂಚ್ಯಂಕಗಳನ್ನೂ ಗಮನಿಸಬೇಕು.

ವಾಸ್ತವ ಜಗತ್ತಿಗೆ ಹಲವು ಆಯಾಮಗಳಿರುತ್ತವೆ. ಅವುಗಳನ್ನೆಲ್ಲಾ ಕ್ರೋಡೀಕರಿಸಿ ಒಂದು ಸಂಖ್ಯೆಗೆ ಇಳಿಸಲು ಪ್ರಯತ್ನಿಸಿದರೆ ಎಷ್ಟೋ ಮಾಹಿತಿಗಳನ್ನು ಕಳೆದುಕೊಳ್ಳುತ್ತೇವೆ. ಹಾಗಾಗಿ ನೀತಿಗಳನ್ನು ರೂಪಿಸುವವರು ಜಿಡಿಪಿ (ಅಥವಾ ರಾಷ್ಟ್ರೀಯ ವರಮಾನ) ಜೊತೆಗೆ ಇನ್ನಿತರ ಪ್ರಮುಖ ಸೂಚಿಗಳನ್ನೂ ಗಮನಿಸುವುದು ಹೆಚ್ಚು ಸೂಕ್ತ. ಹವಾಮಾನ ಬದಲಾವಣೆ ಹಾಗೂ ಅದರ ಪರಿಣಾಮ, ಸಂಪತ್ತು ಹಾಗೂ ವರಮಾನದ ಅಸಮಾನತೆ, ಆರೋಗ್ಯ, ಶಿಕ್ಷಣ, ಮಹಿಳೆಯರ ದುಡಿಮೆ, ಮಾರುಕಟ್ಟೆಯಲ್ಲಿನ ಕೂಲಿ ದರ, ಪೌಷ್ಟಿಕ ಆಹಾರವನ್ನು ಕೊಳ್ಳುವ ಜನರ ಸಾಮರ್ಥ್ಯ ಇವೆಲ್ಲವೂ ದೇಶದ ಬೆಳವಣಿಗೆಯ ದೃಷ್ಟಿಯಿಂದ ಮುಖ್ಯವಾಗುತ್ತವೆ.

ಇವೆಲ್ಲವನ್ನೂ ಅರ್ಥಮಾಡಿಕೊಳ್ಳುವುದಕ್ಕೂ ಸರಳವಾದ ಕ್ರಮವನ್ನು ಅನುಸರಿಸುವುದು ಒಳ್ಳೆಯದು. ಉದಾಹರಣೆಗೆ, ಶೇಕಡ 50ರಷ್ಟು ಕಡು ಬಡವರಿಗೆ ಎಷ್ಟು ಸಂಪತ್ತು ಹಂಚಿಕೆಯಾಗುತ್ತದೆ ಮತ್ತು ಮೇಲಿನ ಶೇಕಡ 10ರಷ್ಟು ಅತ್ಯಂತ ಶ್ರೀಮಂತರಿಗೆ ಎಷ್ಟು ಹರಿದು ಹೋಗುತ್ತದೆ ಎನ್ನುವುದರ ಮೂಲಕ ಅಸಮಾನತೆಯನ್ನು ಅರ್ಥಮಾಡಿಕೊಳ್ಳುವುದು ಒಳ್ಳೆಯದು.

ಇವೆಲ್ಲವನ್ನೂ ಒಟ್ಟೊಟ್ಟಿಗೇ ಗಮನಿಸಿದರೆ, ಬೆಳವಣಿಗೆಯನ್ನು ನೋಡುವ ಕ್ರಮವೇ ಬದಲಾಗುತ್ತದೆ. ಜಾಗತಿಕ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ರೂಪಿಸುವ ನೀತಿಗಳೂ ಬದಲಾಗಬಹುದು. ಹೆಚ್ಚು ಸಮಾನ ಸಮಾಜವನ್ನು ರೂಪಿಸಲು ಸಾಧ್ಯವಾಗಬಹುದು. ನಮ್ಮ ದೃಷ್ಟಿಕೋನ ವಿಶಾಲವಾದಷ್ಟೂ ಬದುಕಿನ ವಾಸ್ತವ ಹೆಚ್ಚು ಚೆನ್ನಾಗಿ ಅರ್ಥವಾಗುತ್ತದೆ. ಇದು ನಮ್ಮ ಅರ್ಥಶಾಸ್ತ್ರಜ್ಞರ ಭಾವಕೋಶದೊಳಕ್ಕೆ ಹೊಕ್ಕರೆ, ಅವರು ರೂಪಿಸುವ ನೀತಿಗಳಿಂದ ಜನರಿಗೆ ಹೆಚ್ಚು ನೆಮ್ಮದಿ ಸಿಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT