ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ತಳಮಳ ತರುವ ಬಿಸಿಲ ಝಳ

ನಗರ, ಪಟ್ಟಣಗಳು ‘ಶಾಖ ದ್ವೀಪ’ಗಳಾಗದಿರಲು ಬೇಕು ಪರಿಸರಸ್ನೇಹಿ ಕ್ರಿಯಾಯೋಜನೆ
Last Updated 19 ಮಾರ್ಚ್ 2021, 19:31 IST
ಅಕ್ಷರ ಗಾತ್ರ

ದೇಶದ ವಿವಿಧ ಭಾಗಗಳಲ್ಲಿ ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿನ ಬೇಸಿಗೆಯ ಬಿಸಿಲಿನ ಪರಿಸ್ಥಿತಿಯ ಬಗ್ಗೆ, ಭಾರತೀಯ ಹವಾಮಾನ ಇಲಾಖೆಯು ಈ ತಿಂಗಳ ಒಂದರಂದು ಮೊದಲ ಮುನ್ಸೂಚನೆಯನ್ನು ನೀಡಿದೆ. ಇದರಂತೆ, ಉತ್ತರ ಭಾರತದ ಬಹುತೇಕ ಭಾಗಗಳಲ್ಲಿ, ಅದರಲ್ಲೂ ವಿಶೇಷವಾಗಿ ದೆಹಲಿ, ಹರಿಯಾಣ ಮತ್ತು ಉತ್ತರಪ್ರದೇಶದ ಪಶ್ಚಿಮ ಭಾಗದಲ್ಲಿ ಸುಡು ಬಿಸಿಲು ಕಂಡು ಬರಲಿದ್ದು, ಉಷ್ಣತೆ ವಾಡಿಕೆಗಿಂತ ಸ್ವಲ್ಪ ಹೆಚ್ಚಾಗಿ ಇರಲಿದೆ.

ಮಹಾರಾಷ್ಟ್ರ, ರಾಯಲಸೀಮ, ತಮಿಳುನಾಡು, ಕೇರಳ, ಕರ್ನಾಟಕದಲ್ಲಿ ಹಗಲಿನ ಉಷ್ಣತೆಯಲ್ಲಿ ಸ್ವಲ್ಪ ಇಳಿಕೆಯಾಗಲಿದೆ. ಆದರೆ ದೇಶದ 23 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಜನಸಾಮಾನ್ಯರ ಬದುಕನ್ನು ನರಕಸದೃಶಗೊಳಿಸಿ, ಸಾವು ನೋವುಗಳಿಗೆ ಕಾರಣವಾಗುವ ಅತಿ ಪ್ರಖರ ‘ಬಿಸಿಲ ಝಳ’ದ (ಹೀಟ್ ವೇವ್) ಬಗ್ಗೆ ಈ ಮುನ್ಸೂಚನೆ ಏನನ್ನೂ ಹೇಳುವುದಿಲ್ಲ. ಒಂದೆರಡು ತಿಂಗಳ ಮುಂಚೆಯೇ ಬಿಸಿಲ ಝಳದ ಬಗ್ಗೆ ಮುನ್ಸೂಚನೆ ನೀಡಬಲ್ಲ ವ್ಯವಸ್ಥೆ ನಮ್ಮಲ್ಲಿ ಇನ್ನೂ ಪ್ರಾಯೋಗಿಕ ಹಂತದಲ್ಲಿದೆ.

ವಿಶ್ವ ಪವನ ವಿಜ್ಞಾನ ಸಂಸ್ಥೆ ನೀಡುವ ಅರ್ಥ ವಿವರಣೆ ಯಂತೆ, ಯಾವುದೇ ಪ್ರದೇಶದಲ್ಲಿನ ಉಷ್ಣತೆ, ಅಲ್ಲಿನ ವಾಡಿಕೆಯ ಸರಾಸರಿ ಗರಿಷ್ಠ ಉಷ್ಣತೆಗಿಂತ 5 ಡಿಗ್ರಿ ಸೆಲ್ಸಿಯಸ್‍ಗಳಿಗಿಂತ ಹೆಚ್ಚಿದ್ದು, ಆ ಪರಿಸ್ಥಿತಿ 5 ದಿನಗಳಿಗೂ ಹೆಚ್ಚಿನ ಕಾಲ ಮುಂದುವರಿದರೆ ಅದನ್ನು ಬಿಸಿಲಿನ ಝಳವೆಂದು ಗುರುತಿಸಲಾಗುತ್ತದೆ. ನಮ್ಮ ದೇಶದಲ್ಲಿ ಹವಾಮಾನ ಇಲಾಖೆಯ ಸೂತ್ರದಂತೆ, ಉಷ್ಣತೆ 44 ಡಿಗ್ರಿ ಸೆಲ್ಸಿಯಸ್‍ಗಳಿಗಿಂತ ಒಂದಕ್ಕಿಂತ ಹೆಚ್ಚು ದಿನಗಳ ಕಾಲ ಇದ್ದರೆ ಆ ಪರಿಸ್ಥಿತಿ ಬಿಸಿಲ ಝಳವಾಗುತ್ತದೆ.

ವಾಯುಗುಣ ಬದಲಾವಣೆ ಮತ್ತು ಜಾಗತಿಕ ತಾಪಮಾನ ಹೆಚ್ಚಳದ ನೇರ ಪರಿಣಾಮಗಳಲ್ಲಿ ಬಿಸಿಲಿನ ಝಳವೂ ಒಂದು. ಉತ್ತರಪ್ರದೇಶದ ಬಹುಭಾಗ, ಪಶ್ಚಿಮ ಬಂಗಾಳ, ಜಾರ್ಖಂಡ್, ಒಡಿಶಾ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ರಾಜಸ್ಥಾನ, ಪಂಜಾಬ್, ಹರಿಯಾಣದಲ್ಲಿ ವರ್ಷದಿಂದ ವರ್ಷಕ್ಕೆ ಬಿಸಿಲಿನ ಝಳದ ಪ್ರಕರಣಗಳ ಸಂಖ್ಯೆ ಮತ್ತು ತೀಕ್ಷ್ಣತೆ ಹೆಚ್ಚುತ್ತಿದೆ. ದೆಹಲಿ ಯಲ್ಲಿನ ಉಷ್ಣತೆ ಸಹಿಸಲು ಅಸಾಧ್ಯವಾದ 48 ಡಿಗ್ರಿ ಸೆಲ್ಸಿಯಸ್‍ಗಳಿಗೆ ಏರಿದರೆ, ರಾಜಸ್ಥಾನದ ಚುರು ಪ್ರದೇಶದಲ್ಲಿ ಇಡೀ ದೇಶದಲ್ಲಿಯೇ ಅತಿ ಹೆಚ್ಚಿನ 50.8 ಡಿಗ್ರಿಯ ಮಟ್ಟಕ್ಕೆ ಈ ಹಿಂದೆ ಏರಿದೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ದಾಖಲೆಗಳಂತೆ, 1992- 2016ರ ಅವಧಿಯಲ್ಲಿ ದೇಶದ ವಿವಿಧ ಭಾಗಗಳಲ್ಲಿ ಬಿಸಿಲ ಝಳದ ಪ್ರಕರಣಗಳಿಂದ 25,716 ಸಾವುಗಳು ಸಂಭವಿಸಿವೆ. ನೈಸರ್ಗಿಕ ಅವಘಡಗಳಿಂದ ಸಂಭವಿಸುವ ಸಾವುಗಳ ಸಂಖ್ಯೆಯಲ್ಲಿ ಬಿಸಿಲ ಝಳದಿಂದಾಗುವ ಸಾವುಗಳಿಗೆ ಮೂರನೆಯ ಸ್ಥಾನವಿದೆ.

ಡಾ. ಎಚ್.ಆರ್. ಕೃಷ್ಣಮೂರ್ತಿ
ಡಾ. ಎಚ್.ಆರ್. ಕೃಷ್ಣಮೂರ್ತಿ

ಭಾರತ ಸರ್ಕಾರದ ಪೃಥ್ವಿ ವಿಜ್ಞಾನ ಸಚಿವಾಲಯ (ಮಿನಿಸ್ಟ್ರಿ ಆಫ್ ಅರ್ತ್ ಸೈನ್ಸಸ್) ಸಿದ್ಧಪಡಿಸಿರುವ ವರದಿಯಂತೆ, 1901- 2018ರ ಅವಧಿಯಲ್ಲಿ ನಮ್ಮ ದೇಶದ ಸರಾಸರಿ ಉಷ್ಣತೆ 0.7 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಾಗಿದೆ. 2018- 2100ರ ನಡುವೆ 4.4 ಡಿಗ್ರಿ ಸೆಲ್ಸಿಯಸ್‍ಗಳಷ್ಟು ಏರಲಿದೆ. ಇದರಿಂದಾಗಿ ಬಿಸಿಲ ಝಳ ಗಳ ಸಂಖ್ಯೆ ಎರಡರಿಂದ ಮೂರು ಪಟ್ಟು ಹೆಚ್ಚಲಿದೆ. ಮೆಕೆನ್ಸಿ ಗ್ಲೋಬಲ್ ಸಂಸ್ಥೆ ಪ್ರಕಟಿಸಿರುವ ಅಧ್ಯಯನದ ಫಲಿತಾಂಶದಂತೆ 2050ರ ವೇಳೆಗೆ, ಭಾರತದ ಕೆಲವು ಭಾಗಗಳಲ್ಲಿ, ನೆರಳಿನಲ್ಲಿ ನಿಂತ ಆರೋಗ್ಯವಂತ ವ್ಯಕ್ತಿಯೂ ಐದು ಗಂಟೆಗಳಿಗಿಂತ ಹೆಚ್ಚುಕಾಲ ಬಿಸಿಲ ಝಳವನ್ನು ಸಹಿಸಲಾಗದ ಪರಿಸ್ಥಿತಿ ಉಂಟಾಗಲಿದೆ.

ಬಿಸಿಲ ಝಳದ ಅಪಾಯವನ್ನು ಎದುರಿಸಲು ವೈಜ್ಞಾನಿಕವಾದ ಕ್ರಿಯಾ ಯೋಜನೆ (ಹೀಟ್ ಆ್ಯಕ್ಷನ್ ಪ್ಲಾನ್) ಅವಶ್ಯಕ. ನಮ್ಮ ದೇಶದ ಮೊದಲ ಬಿಸಿಲ ಝಳ ಕ್ರಿಯಾ ಯೋಜನೆ ರೂಪುಗೊಂಡು, ಕಾರ್ಯಗತ ವಾಗಿರುವುದು ಅಹಮದಾಬಾದ್‍ನಲ್ಲಿ. 2010ರ ಬೇಸಿಗೆಯಲ್ಲಿ, ಉಷ್ಣತೆ 46.8 ಡಿಗ್ರಿ ಸೆಲ್ಸಿಯಸ್ ಮುಟ್ಟಿ, ಬಿಸಿಲ ಝಳ ತರುವ ಅತಿ ಬಳಲಿಕೆ, ಉಷ್ಣಾಘಾತ, ಸೆಡೆತ, ನಿರ್ಜಲೀಕರಣ, ಅಂಗಾಂಗ ವೈಫಲ್ಯ ಮುಂತಾದವು ಗಳಿಂದ 1,344 ಜನ ಸಾವಿಗೀಡಾದರು. ಈ ಅವಘಡದ ನಂತರ ಎಚ್ಚೆತ್ತ ಅಹಮದಾಬಾದ್ ಮುನಿಸಿಪಲ್ ಕಾರ್ಪೊರೇಷನ್, ಗಾಂಧಿ ನಗರದ ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್, ಅಮೆರಿಕದ ನ್ಯಾಚುರಲ್ ರಿಸೋರ್ಸಸ್ ಡಿಫೆನ್ಸ್ ಕೌನ್ಸಿಲ್ ಮತ್ತು ಕೆಲವು ಸ್ವಯಂಸೇವಾ ಸಂಸ್ಥೆಗಳ ಸಹಯೋಗದಲ್ಲಿ ನಾಲ್ಕು ಅಂಶಗಳ ಕಾರ್ಯ ಯೋಜನೆಯನ್ನು ಅಭಿವೃದ್ಧಿಪಡಿಸಿತು.

ಬಿಸಿಲ ಝಳದ ಅಪಾಯಗಳ ಬಗ್ಗೆ ಮತ್ತು ಕೈಗೊಳ್ಳಬೇಕಾದ ಎಚ್ಚರಿಕೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು, ಬಿಸಿಲ ಝಳದ ಪ್ರಾರಂಭ, ಮುನ್ನಡೆ ಯುವ ರೀತಿ, ಅಂತ್ಯಗಳ ಬಗ್ಗೆ ಮಾಹಿತಿ ನೀಡಿ ವಿವಿಧ ಇಲಾಖೆಗಳ ನಡುವೆ ಕಾರ್ಯಾಚರಣೆಯಲ್ಲಿ ಸಮನ್ವಯ ತರುವುದು, ವೈದ್ಯರು, ವೈದ್ಯಕೀಯ ಸಿಬ್ಬಂದಿಗೆ ಪರಿಸ್ಥಿತಿ ನಿರ್ವಹಿಸುವ ತರಬೇತಿ ನೀಡುವುದು, ಆಸ್ಪತ್ರೆಗಳನ್ನು ಸಜ್ಜುಗೊಳಿಸುವುದು ಮತ್ತು ಕಡೆಯದಾಗಿ ಬಿಸಿಲ ಝಳದ ಅವಧಿಯಲ್ಲಿ ಕುಡಿಯುವ ನೀರು, ಆಶ್ರಯ ತಾಣಗಳು, ತುರ್ತು ನೆರವನ್ನು ವ್ಯವಸ್ಥೆಗೊಳಿಸುವುದು ಈ ಕಾರ್ಯಾಚರಣೆಯ ಮುಖ್ಯ ಅಂಶಗಳಾಗಿದ್ದವು.

ಈ ವ್ಯವಸ್ಥೆ ಜಾರಿಗೆ ಬಂದಿದ್ದು 2013ರಲ್ಲಿ. 2015ರಲ್ಲಿ ಅಹಮದಾಬಾದ್ ಮತ್ತೊಮ್ಮೆ ತೀವ್ರವಾದ ಬಿಸಿಲ ಝಳದ ಹಿಡಿತಕ್ಕೆ ಸಿಲುಕಿದಾಗ ಸತ್ತವರ ಸಂಖ್ಯೆ 20. ಇದಾದ ನಂತರ ಈ ಕ್ರಿಯಾ ಯೋಜನೆಯನ್ನು ಉನ್ನತೀಕರಿಸಲಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಮತ್ತು ಭಾರತೀಯ ಹವಾಮಾನ ಇಲಾಖೆಯು ಜೊತೆಸೇರಿ 23 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಬಿಸಿಲ ಝಳ ಕ್ರಿಯಾ ಯೋಜನೆಯನ್ನು ಕಾರ್ಯಗತಗೊಳಿಸಿದ್ದರೂ ಈ ವ್ಯವಸ್ಥೆಯ ವಿಶ್ವಸನೀಯತೆ ಮತ್ತು ದಕ್ಷತೆಗೆ ಸಂಬಂಧಿಸಿದಂತೆ ನಡೆದಿರುವ ಮೌಲ್ಯಮಾಪನವು ವಿವಿಧ ಇಲಾಖೆಗಳ ನಡುವೆ ಸಂವಹನ ಮತ್ತು ಸಮನ್ವಯದ ಕೊರತೆಗಳನ್ನು ಎತ್ತಿ ತೋರಿದೆ.

ಬಿಸಿಲ ಝಳದ ಬಗ್ಗೆ ಸಾಕಷ್ಟು ಮುಂಚೆ ಮುನ್ಸೂಚನೆ ದೊರೆತರೆ ಪರಿಸ್ಥಿತಿಯನ್ನು ನಿಭಾಯಿಸಿ, ಸಾವಿನ ಪ್ರಮಾಣ ವನ್ನು ಇಳಿಸಬಹುದು. ಪುಣೆಯಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟ್ರಾಪಿಕಲ್ ಮಿಟಿಯೊರಾಲಜಿಯು ಭಾರತೀಯ ಹವಾಮಾನ ಇಲಾಖೆ, ಸಾವಿತ್ರಿಬಾಯಿ ಫುಲೆ ವಿಶ್ವವಿದ್ಯಾಲಯ ಮತ್ತು ನ್ಯೂಯಾರ್ಕ್ ವಿಶ್ವವಿದ್ಯಾಲಯದ ಜೊತೆಗೆ ಸೇರಿ, ಪೃಥ್ವಿ ವಿಜ್ಞಾನ ಸಚಿವಾಲಯದ ಧನ ಸಹಾಯದಿಂದ ಎರಡು ವಾರಗಳಷ್ಟು ಮುಂಚೆ ಮುನ್ಸೂಚನೆಯನ್ನು ನೀಡುವ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿ, ಬಳಸಿ, ಪರೀಕ್ಷಿಸುತ್ತಿದೆ.

ದೇಶದ ವಾಯವ್ಯ ಭಾಗದ ರಾಜಸ್ಥಾನ, ಪಂಜಾಬ್, ಹರಿಯಾಣದಲ್ಲಿ ಈ ಮುನ್ಸೂಚನೆ ಶೇ 70ರಷ್ಟು ನಿಖರ ವಾಗಿದ್ದರೆ, ಆಂಧ್ರ, ತೆಲಂಗಾಣ, ಒಡಿಶಾ ರಾಜ್ಯಗಳಲ್ಲಿ ನಿಖರತೆಯ ಪ್ರಮಾಣ ಶೇ 50ರಷ್ಟು. ಈ ಮುನ್ಸೂಚನೆ ಮುಖ್ಯವಾಗಿ ಅವಲಂಬಿತವಾಗಿರುವುದು 1981- 2017ರ ನಡುವಿನ ದೇಶದ ವಿವಿಧ ಭಾಗಗಳಲ್ಲಿನ ಗರಿಷ್ಠ ಉಷ್ಣತೆಯ ದತ್ತಾಂಶದ ಮೇಲೆ. ಉಷ್ಣತೆಯ ಜೊತೆಗೆ ಅತಿ ಮುಖ್ಯವಾಗಿ ಆರ್ದ್ರತೆಯನ್ನೂ ಸೇರಿಸಿ ವಿಶ್ವಸನೀಯವಾದ ಮುನ್ಸೂಚನೆಯನ್ನು ನೀಡುವ ದಿಕ್ಕಿನಲ್ಲಿ ಮೇಲಿನ ಎಲ್ಲ ಸಂಸ್ಥೆಗಳು ನಿರತವಾಗಿವೆ.

ಬಿಸಿಲಿನ ಝಳಕ್ಕೆ ಸಂಬಂಧಿಸಿದ ಎಲ್ಲ ಅಧ್ಯಯನಗಳೂ ಮುಂಬರುವ ವರ್ಷಗಳಲ್ಲಿ ಪರಿಸ್ಥಿತಿ ಮತ್ತಷ್ಟು ಗಂಭೀರ ವಾಗಲಿದೆಯೆಂಬ ಎಚ್ಚರಿಕೆ ನೀಡಿವೆ. ಹೀಗಿದ್ದರೂ 2005ರ ರಾಷ್ಟ್ರೀಯ ವಿಪತ್ತು ನಿರ್ವಹಣಾ ಶಾಸನದಡಿಯಲ್ಲಿ, ಬಿಸಿಲ ಝಳವನ್ನು ನೈಸರ್ಗಿಕ ವಿಪತ್ತೆಂದು ಕೇಂದ್ರ ಸರ್ಕಾರ ಇದುವರೆವಿಗೂ ಪರಿಗಣಿಸಿಲ್ಲ. ಇದಾಗದ ಹೊರತು ಬಿಸಿಲ ಝಳವನ್ನು ಎದುರಿಸಿ, ಪರಿಣಾಮ ಗಳನ್ನು ನಿಯಂತ್ರಿಸಲು, ಮೀಸಲಿಟ್ಟ ನಿಧಿಯಿಂದ ಧನಸಹಾಯ ದೊರೆಯುವುದಿಲ್ಲ. ಇದು ಈ ಕೂಡಲೇ ಆಗಬೇಕಾದ ಕೆಲಸ.

ಇದಕ್ಕಿಂತ ಮುಖ್ಯವಾಗಿ ವಾಯುಗುಣ ಬದಲಾದಂತೆ ನಮ್ಮ ನಗರ, ಪಟ್ಟಣಗಳ ವಿನ್ಯಾಸವೂ ಬದಲಾಗಬೇಕು. ನೀರು, ನೆಲ, ಶಕ್ತಿಯ ಬಳಕೆ, ಸಂಚಾರ ವ್ಯವಸ್ಥೆ, ಕಟ್ಟಡಗಳ ವಿನ್ಯಾಸ ಮುಂತಾದವು ಪರಿಸರಸ್ನೇಹಿ ಆಗಬೇಕು. ಅಹಮದಾಬಾದ್, ಹೈದರಾಬಾದ್‌ನಲ್ಲಿ ಇದೀಗ ಪ್ರಾರಂಭವಾಗಿರುವ ‘ಕೂಲ್ ರೂಫ್’ ಯೋಜನೆಯಿಂದ ಕಟ್ಟಡಗಳ ಒಳಗೆ ಉಷ್ಣತೆ 3 ಡಿಗ್ರಿ ಸೆಲ್ಸಿಯಸ್‍ಗಳಷ್ಟು ಕಡಿಮೆಯಾಗಿದೆ. ಇಂತಹ ನವೀನ ಪರಿಕಲ್ಪನೆಗಳ ಜೊತೆಗೆ ನಗರ, ಪಟ್ಟಣಗಳು ‘ಶಾಖ ದ್ವೀಪ’ಗಳಾಗುವುದನ್ನು ತಪ್ಪಿಸುವ ಮರಗಿಡಗಳ ಹಸಿರು ಹೊದಿಕೆಗಳು, ಉದ್ಯಾನಗಳು, ನೈಸರ್ಗಿಕ ನೀರಿನಾಗರ ಗಳನ್ನು ನಗರ ಪರಿಸರದ ಅನ್ಯೋನ್ಯ ಭಾಗವನ್ನಾಗಿಸುವ ಹೊಸ ವಿನ್ಯಾಸಗಳು ಜಾರಿಗೆ ಬರಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT