ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್‌.ಎಸ್‌.ದೊರೆಸ್ವಾಮಿಗೆ ನುಡಿ-ನಮನ: ಹೋರಾಟನಿರತರ ಬೆಸೆಯುುವ ಚುಂಬಕ ಶಕ್ತಿ

ಸ್ವಾತಂತ್ರ್ಯ ಹೋರಾಟಗಾರ
Last Updated 26 ಮೇ 2021, 22:33 IST
ಅಕ್ಷರ ಗಾತ್ರ

ಹೋರಾಟದ ಹಾದಿಯಲ್ಲಿ ಹೇಗಿರಬೇಕು? ದೇಶ ಮತ್ತು ಸಮಾಜದ ಕುರಿತು ಹೇಗೆ ಯೋಚಿಸಬೇಕು? ಮತ್ತು ಜನರ ನಡುವೆ ನಾವು ಹೇಗೆ ಇರಬೇಕು ಎಂಬುದಕ್ಕೆ ಎಚ್‌.ಎಸ್‌. ದೊರೆಸ್ವಾಮಿಯವರು ಒಂದು ಆದರ್ಶಪ್ರಾಯ ಮಾದರಿಯಾಗಿ ನಮ್ಮೊಂದಿಗೆ ಇದ್ದರು.

ಸಮಯ ಸಿಕ್ಕಾಗ, ಶನಿವಾರ ಅಥವಾ ಭಾನುವಾರ ಪುರುಸೊತ್ತು ಇದ್ದಾಗ ಮಾತ್ರ ಹೋರಾಟಗಳನ್ನು ಮಾಡಬಾರದು ಎಂಬುದು ಅವರ ನಿಲುವು ಆಗಿತ್ತು. ಜನರು ತಪ್ಪು ಎಂದು ಅರ್ಥೈಸುವ ರೀತಿಯಲ್ಲಿ ಯಾವತ್ತೂ ಹೋರಾಟವನ್ನು ಮಾಡಲೇಬಾರದು ಎಂಬ ತತ್ವಕ್ಕೆ ಅವರು ಅಂಟಿಕೊಂಡಿದ್ದರು. ಯಾವುದೇ ಒಂದು ವಿಷಯದ ಕುರಿತು ಹೋರಾಟ ಕೈಗೆತ್ತಿಕೊಂಡರೆ ಅದು ಬಗೆಹರಿಯುವವರೆಗೂ ಹೋರಾಟ ಮುಂದುವರಿಸಬೇಕು ಎಂಬ ನಿಲುವನ್ನು ಅವರು ಜೀವನದ ಕೊನೆಯವರೆಗೂ ಸಡಿಲಿಸಲೇ ಇಲ್ಲ. ಅವರ ಉಪಸ್ಥಿತಿ ಇರುವ ಎಲ್ಲ ಹೋರಾಟಗಳೂ ಸಂಘಟಿತ ರೂಪ ಪಡೆದುಕೊಳ್ಳುತ್ತಿದ್ದವು. ಎಲ್ಲ ಹೋರಾಟಗಾರರನ್ನೂ ಒಂದು ವೇದಿಕೆಗೆ ಸೆಳೆಯುವ ಚುಂಬಕ ಶಕ್ತಿಯಂತೆ ಅವರು ಕೆಲಸ ಮಾಡುತ್ತಿದ್ದರು. ಆ ವಿಚಾರದಲ್ಲಿ ಬಾಧಿತರಾಗಿರುವ ಎಲ್ಲ ಜನರು ಮತ್ತು ಅದೇ ವಿಚಾರದಲ್ಲಿ ಹೋರಾಟ ನಡೆಸುತ್ತಿರುವ ಎಲ್ಲ ಸಂಘಟನೆಗಳನ್ನೂ ಒಗ್ಗೂಡಿಸಿ ಮುನ್ನಡೆಯಬೇಕು ಎಂಬುದನ್ನು ಹೋರಾಟಗಾರರಿಗೆ ಸದಾ ನೆನಪಿಸುತ್ತಿದ್ದರು. ಕೊನೆಯ ದಿನದವರೆಗೂ ಈ ಪ್ರಯತ್ನ ಮುಂದುವರಿಸಿದ್ದರು. ರೈತ ಸಂಘಟನೆಗಳ ಎಲ್ಲ ಬಣಗಳು ಒಂದಾಗಬೇಕು, ದಲಿತ ಸಂಘಟನೆಗಳ ಎಲ್ಲ ಗುಂಪುಗಳು ಒಗ್ಗೂಡಬೇಕು, ಎಡ ಪಕ್ಷಗಳೂ ಒಟ್ಟಾಗಬೇಕು ಎಂಬ ಆಸೆ ಅವರಲ್ಲಿತ್ತು.

ಜನರು ತಮ್ಮ ಹಕ್ಕುಗಳನ್ನು ಪಡೆಯಲು ಯಾರಿಗೂ ತಲೆ ಬಾಗಬಾರದು. ಹಕ್ಕಿಗಾಗಿ ಹೋರಾಟ ನಡೆಸಬೇಕು. ಅನಿವಾರ್ಯ ಆದಲ್ಲಿ ಜೈಲಿಗೆ ಹೋಗುವುದಕ್ಕೂ ಸಿದ್ಧರಾಗಿರಬೇಕು ಎಂಬುದು ಅವರ ತತ್ವವಾಗಿತ್ತು. ದೇಶದ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ಅವರಿಗೆ ಗಾಢವಾದ ಅಭಿಮಾನ ಇತ್ತು. ದೇಶದಲ್ಲಿ ಸಾರ್ವಜನಿಕ ಆಸ್ತಿಗಳನ್ನು ಖಾಸಗಿಯವರಿಗೆ ಪರಭಾರೆ ಮಾಡುವ ನಿರ್ಣಯಗಳು ಆದ ಸಂದರ್ಭಗಳಲ್ಲಿ ಅತಿಯಾಗಿ ನೊಂದುಕೊಳ್ಳುತ್ತಿದ್ದರು. ‘ಸಾರ್ವಜನಿಕ ಆಸ್ತಿಗಳ ವಿಕ್ರಯದಿಂದ ಜನರ ಸ್ವಾತಂತ್ರ್ಯದ ಹರಣ ಆಗುತ್ತಿದೆ’ ಎಂದು ಬೇಸರ ಪಟ್ಟಿಕೊಳ್ಳುತ್ತಿದ್ದರು.

‘ಸಮಾಜ ಸೇವೆಯಲ್ಲಿ ಇರುವವನು ಸ್ವಯಂಪ್ರೇರಿತವಾಗಿ ಬಡತನವನ್ನು ಅಪ್ಪಿಕೊಳ್ಳಬೇಕು’ ಎಂಬ ಮಹಾತ್ಮ ಗಾಂಧಿಯವರ ಮಾತನ್ನು ಜೀವನದುದ್ದಕ್ಕೂ ಪಾಲಿಸಿದವರು ದೊರೆಸ್ವಾಮಿ. ಪ್ರೌಢಶಾಲಾ ದಿನಗಳಲ್ಲಿ ಪುಸ್ತಕವೊಂದರಲ್ಲಿ ಗಾಂಧಿಯವರ ಮಾತನ್ನು ಓದಿದ್ದ ಅವರು, ಕಟ್ಟಕಡೆಯವರೆಗೂ ಅದನ್ನು ಅಕ್ಷರಶಃ ಅನುಕರಿಸಿದರು. ಕೆಂಗಲ್‌ ಹನುಮಂತಯ್ಯ ಅವರು ಮುಖ್ಯಮಂತ್ರಿಯಾದ ಬಳಿಕ ದೊರೆಸ್ವಾಮಿ ಅವರನ್ನು ಕರೆದು ಸಂಪುಟ ದರ್ಜೆ ಸಚಿವ ಸ್ಥಾನ ನೀಡುವುದಾಗಿ ಹೇಳಿದ್ದರು. ‘ಸಚಿವನಾದರೂ ನಾನು ಈಗ ಇದ್ದಂತೆಯೇ ಇರುವೆ. ತಪ್ಪು ಕಂಡಾಗ ನೇರವಾಗಿ ಹೇಳುತ್ತೇನೆ. ಅದಕ್ಕೆ ಸಮ್ಮತವಿದ್ದರೆ ಸಚಿವ ಸ್ಥಾನ ಕೊಡಬಹುದು’ ಎಂದು ದೊರೆಸ್ವಾಮಿ ಪ್ರತಿಕ್ರಿಯಿಸಿದ್ದರಂತೆ. ‘ಅದೆಲ್ಲ ಅಸಾಧ್ಯ. ತಪ್ಪಿನ ಬಗ್ಗೆ ಮಾತನಾಡಬಾರದು’ ಎಂದು ಕೆಂಗಲ್‌ ಹೇಳಿದಾಗ, ‘ನಿಮ್ಮ ಕಿವಿಯಲ್ಲಾದರೂ ಹೇಳುವ ಸ್ವಾತಂತ್ರ್ಯ ಇರಬೇಕಲ್ಲ’ ಎಂದು ಪ್ರತ್ಯುತ್ತರ ನೀಡಿ ಸಚಿವ ಸ್ಥಾನವನ್ನು ನಿರಾಕರಿಸಿದ್ದರು.

ಜೀವನ ಪೂರ್ತಿ ಬಾಡಿಗೆ ಮನೆಯಲ್ಲೇ ಕಳೆದವರು ದೊರೆಸ್ವಾಮಿ. ಮೂರು ವರ್ಷಗಳ ಹಿಂದೆ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮವೊಂದರಲ್ಲಿ ದೊರೆಸ್ವಾಮಿ ದಂಪತಿಯನ್ನು ಭೇಟಿಮಾಡಿದ್ದರು. ಅವರು ಬಾಡಿಗೆ ಮನೆಯಲ್ಲೇ ಇರುವ ವಿಚಾರ ತಿಳಿದ ಸಿದ್ದರಾಮಯ್ಯ, ದೊಡ್ಡ ಮನೆ ಮತ್ತು ಆಳುಗಳನ್ನು ಒದಗಿಸುವ ವ್ಯವಸ್ಥೆ ಮಾಡುವುದಾಗಿ ಕೇಳಿದ್ದರು. ದೊರೆಸ್ವಾಮಿಯವರ ಪತ್ನಿ ಈ ಕುರಿತು ಪತಿಯಲ್ಲಿ ಹೇಳಿದಾಗ, ‘ನೀನು ಬೇಕಾದರೆ ಅಲ್ಲಿಗೆ ಹೋಗು. ನಾನು ಗಾಂಧಿ ಭವನದಲ್ಲಿ ಇರುತ್ತೇನೆ’ ಎಂದಿದ್ದರು. ಹೋರಾಟದ ಹಾದಿಯಲ್ಲಿ ಮುಕ್ತ ಸ್ವಾತಂತ್ರ್ಯ ಬಯಸಿದ್ದ ಕಾರಣಕ್ಕಾಗಿಯೇ ಅವರು ಮಕ್ಕಳು, ಮೊಮ್ಮಕ್ಕಳ ಜತೆ ವಾಸಿಸಲಿಲ್ಲ. ಮಕ್ಕಳ ಜತೆಗಿದ್ದರೆ ಅವರಿಗೆ ತೊಂದರೆ ಆಗಬಹುದು ಮತ್ತು ತಮಗೂ ಹೋರಾಟದಲ್ಲಿ ಭಾಗವಹಿಸಲು ಅಡ್ಡಿಗಳು ಎದುರಾಗಬಹುದು ಎಂಬುದು ಅವರ ನಿಲುವಾಗಿತ್ತು.

ಜಾತಿ, ಧರ್ಮ ಸೇರಿದಂತೆ ಯಾವ ವಿಚಾರದಲ್ಲೂ ಜನರಲ್ಲಿ ಭೇದ ತೋರುತ್ತಿರಲಿಲ್ಲ. ಶತಮಾನ ಪೂರೈಸಿದರೂ ಅಗಾಧವಾದ ನೆನಪಿನ ಶಕ್ತಿ ಅವರಲ್ಲಿತ್ತು. ಸಾಹಿತ್ಯ, ಕ್ರೀಡೆ ಸೇರಿದಂತೆ ಎಲ್ಲ ವಿಚಾರಗಳಲ್ಲೂ ಆಸಕ್ತಿ ಇತ್ತು. ಕ್ರಿಕೆಟ್‌ ಬಗ್ಗೆ ಅತೀವ ಪ್ರೀತಿ ಇತ್ತು ಅವರಿಗೆ. ಸಮ ಸಮಾಜದ ಕನಸು ಅವರ ಕಣ್ಣಲ್ಲಿ ಇತ್ತು. ಅದನ್ನು ಸದಾ ಕಾವೂ ಜತೆಗಿರುವವರಿಗೆ ನೆನಪಿಸುತ್ತಲೇ ಇದ್ದ ಜೀವ ದೊರೆಸ್ವಾಮಿ.

ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಅವರ ಕನಸಿನ ಫಲವಾಗಿಯೇ ರೂಪುಗೊಂಡಿತ್ತು. ಹೆಚ್ಚು ಜನರನ್ನು ಕಾಡುತ್ತಿರುವ ಯಾವುದಾದರೂ ಒಂದು ಸಮಸ್ಯೆಯನ್ನು ಕೈಗೆತ್ತಿಕೊಂಡು ನಿರಂತರ ಹೋರಾಟ ನಡೆಸಬೇಕು ಎಂದು ಬಯಸಿದ್ದರು. ಅವರ ಸೂಚನೆಯಂತೆ ಆರು ತಿಂಗಳ ಕಾಲ ಅಧ್ಯಯನ ನಡೆಸಿದ ಬಳಿಕ ಭೂಮಿ ಮತ್ತು ವಸತಿ ವಂಚಿತರ ಪರವಾಗಿ ಹೋರಾಟ ಆರಂಭಿಸಲು ನಿರ್ಧರಿಸಲಾಯಿತು. ಅದೇ ಉದ್ದೇಶಕ್ಕಾಗಿ ಹೋರಾಟ ನಡೆಸುತ್ತಿದ್ದ ಎಲ್ಲ ಸಂಘಟನೆಗಳನ್ನೂ ಒಗ್ಗೂಡಿಸುವ ಪ್ರಯತ್ನ ಮಾಡಲಾಯಿತು. ಹಲವು ಸಂಘಟನೆಗಳು ಒಗ್ಗೂಡಿದವು. ನಿರಂತರ ಹೋರಾಟವೂ ನಡೆಯಿತು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕೆಲವು ಸಮಸ್ಯೆಗಳಿಗೆ ಪರಿಹಾರ ದೊರಕಿತು. ದಿಡ್ಡಳ್ಳಿಯ ಆದಿವಾಸಿಗಳಿಗೆ ವಸತಿ ಸೌಕರ್ಯ ಕಲ್ಪಿಸಲು ಆಗ್ರಹಿಸಲು ನಡೆಸಿದ ಹೋರಾಟಕ್ಕೂ ಅವರೇ ಮಾರ್ಗದರ್ಶಕರಾಗಿದ್ದರು. ಹೋರಾಟದ ಫಲವಾಗಿ 328 ಕುಟುಂಬಗಳಿಗೆ ಸುಸಜ್ಜಿತವಾದ ವಸತಿ ವ್ಯವಸ್ಥೆ ದೊರಕಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಈ ವಿಷಯದಲ್ಲಿ ಏನೂ ಪ್ರಗತಿ ಆಗಲಿಲ್ಲ. ಈ ಬಗ್ಗೆ ದೊರೆಸ್ವಾಮಿ ಅವರಿಗೆ ಬಹಳ ಕೊರಗು ಇತ್ತು.

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಜಾರಿಯ ವಿರುದ್ಧದ ಹೋರಾಟಗಳಲ್ಲೂ ದೊರೆಸ್ವಾಮಿ ಸಕ್ರಿಯರಾಗಿದ್ದರು. ಕೇಂದ್ರ ಸರ್ಕಾರ ಜನರ ಗಮನ ಬೇರೆಡೆ ಸೆಳೆಯಲು ಇಂತಹ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಅರಿತಿದ್ದ ಅವರು, ಬಿಜೆಪಿ ಹಿಂದೆ ನೀಡಿದ್ದ ಭರವಸೆಗಳನ್ನು ಮುಂದಿಟ್ಟುಕೊಂಡು 2024ರವರೆಗೂ ನಿರಂತರ ಹೋರಾಟ ನಡೆಸುವ ಪ್ರಸ್ತಾವ ಮುಂದಿಟ್ಟಿದ್ದರು. ಅದಕ್ಕೆ ಪೂರಕವಾಗಿ ಪ್ರತಿ ತಿಂಗಳು ಮೂರರಿಂದ ನಾಲ್ಕು ದಿನಗಳ ಕಾಲ ಹೋರಾಟ ನಡೆಸಲು ತೀರ್ಮಾನಿಸಲಾಗಿತ್ತು. 2020ರಲ್ಲಿ ನಾಲ್ಕು ದಿನಗಳ ಪ್ರತಿಭಟನೆಯನ್ನೂ ನಡೆಸಲಾಗಿತ್ತು. 2020ರ ಮಾರ್ಚ್‌ನಿಂದ ಕೊರೊನಾ ಕಾರಣದಿಂದ ಲಾಕ್‌ಡೌನ್‌ ಜಾರಿಯಾಗಿ ಹೋರಾಟಕ್ಕೆ ತಡೆ ಬಿತ್ತು. ಜೀವನದ ಕೊನೆಯ ಹಂತದಲ್ಲಿ ಆರಂಭಿಸಿದ್ದ ಹೋರಾಟವೊಂದನ್ನು ಮುಂದುವರಿಸಲು ಆಗಲಿಲ್ಲ ಎಂಬ ನೋವು ಅವರನ್ನು ಕಾಡುತ್ತಲೇ ಇತ್ತು.
-ಸಿರಿಮನೆ ನಾಗರಾಜ್‌, ಭೂಮಿ ಮತ್ತು ವಸತಿ ವಂಚಿತರ ಹೋರಾಟ ಸಮಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT