ಸೋಮವಾರ, ಮಾರ್ಚ್ 27, 2023
29 °C
ಪೌಷ್ಟಿಕಾಂಶ ಕೊರತೆಯ ವೈಜ್ಞಾನಿಕ ಮಾಪನಕ್ಕೆ ಗ್ಯಾಲಪ್ ಸಮೀಕ್ಷೆಯನ್ನು ಆಧರಿಸಿರುವುದು ಅಸಂಗತ

ಸೂರ್ಯ-ನಮಸ್ಕಾರ: ಈ ಸೂಚ್ಯಂಕವನ್ನು ಭಾರತ ಪ್ರಶ್ನಿಸಬೇಕು

ಎ.ಸೂರ್ಯ ಪ್ರಕಾಶ್ Updated:

ಅಕ್ಷರ ಗಾತ್ರ : | |

PV Photo

ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ ಮತ್ತಿತರ ದಕ್ಷಿಣ ಏಷ್ಯಾ ರಾಷ್ಟ್ರಗಳಿಗಿಂತ ಕೆಳಗಿನ ಸ್ಥಾನದಲ್ಲಿ ಭಾರತವನ್ನು 2021ರ ‘ಜಾಗತಿಕ ಹಸಿವು ಸೂಚ್ಯಂಕ’ (ಜಿಎಚ್ಐ) ಇರಿಸಿದೆ. ಆ ಮೂಲಕ ಭಾರತದ ಸ್ಥಾನವನ್ನು ತಗ್ಗಿಸಿರುವ ಈ ಸೂಚ್ಯಂಕವನ್ನು ಹಲವು ಕಾರಣಗಳಿಗಾಗಿ ಪ್ರಶ್ನಿಸು ವುದು ಅಗತ್ಯ. ಆ ಕಾರಣಗಳು ಯಾವುವೆಂದರೆ, ಈ ಸೂಚ್ಯಂಕವನ್ನು ಸಿದ್ಧಪಡಿಸಲು ಅವಲಂಬಿಸಲಾಗುವಂತಹ ಹಳೆಯ ಅಂಕಿಅಂಶಗಳು, ದೋಷಪೂರಿತ ವಿಧಾನ ಹಾಗೂ ಜಾಗತಿಕ ಸಂಸ್ಥೆಗಳ ಇಳಿಮುಖವಾಗುತ್ತಿರುವ ವಿಶ್ವಾಸಾರ್ಹತೆ.

ಜಾಗತಿಕ ಹಾಗೂ ಪ್ರಾದೇಶಿಕ ಹಂತಗಳಲ್ಲಿ ಹಸಿವನ್ನು ಪತ್ತೆ ಹಚ್ಚಲು ಯತ್ನಿಸುವ ಈ ವರದಿ, ನಾಲ್ಕು ಸೂಚಕಗಳನ್ನು ಆಧರಿಸಿದೆ: ಪೌಷ್ಟಿಕತೆಯ ಕೊರತೆ, ಎತ್ತರಕ್ಕೆ ತಕ್ಕ ತೂಕ ಇಲ್ಲದಿರುವುದು, ವಯಸ್ಸಿಗೆ ತಕ್ಕ ಎತ್ತರ ಇಲ್ಲದಿರುವುದು ಹಾಗೂ ಮಕ್ಕಳ ಮರಣ.

116 ರಾಷ್ಟ್ರಗಳ ಪೈಕಿ ಭಾರತವನ್ನು 101ನೇ ಸ್ಥಾನದಲ್ಲಿ ಈ ವರದಿ ಇರಿಸಿದೆ. ಭಾರತದ ಅಂಕ, ಇತರ ಹಲವು ದಕ್ಷಿಣ ಏಷ್ಯಾ ರಾಷ್ಟ್ರಗಳಿಗಿಂತ ಕೆಳಗಿನ ಸ್ಥಾನದಲ್ಲಿದೆ. ಭಾರತ ಗಳಿಸಿರುವ ಅಂಕ 27.5. ಬದಲಿಗೆ 5ಕ್ಕಿಂತ ಕಡಿಮೆ ಅಂಕ ಗಳಿಸಿ ಹಸಿವು ಬಾಧಿಸದಿರುವ 18 ರಾಷ್ಟ್ರಗಳಿವೆ. 2020ರಲ್ಲಿ 94ನೇ ಸ್ಥಾನ ಗಳಿಸಿದ್ದ ಭಾರತವು ಈಗ 101ಕ್ಕೆ ಇಳಿದಿದೆ.

ಕೆಳಕಂಡ ಕಾರಣಗಳಿಗಾಗಿ ಜಿಎಚ್ಐ ಅನ್ನು ಪ್ರಶ್ನಿಸುವುದು ಅಗತ್ಯ: ‘ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಎತ್ತರಕ್ಕೆ ತಕ್ಕ ತೂಕ ಇಲ್ಲದಿರುವುದು’ ಹಾಗೂ ಐದಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ವಯಸ್ಸಿಗೆ ತಕ್ಕಂತೆ ಎತ್ತರ ಇಲ್ಲದಿರುವುದರ ಕುರಿತ ಸೂಚಕಗಳಿಗಾಗಿ, ಈ ಸಂಶೋಧನೆಯು 2016-18ರ ಅವಧಿಗೆ ಲಭ್ಯವಿರುವ ಅಧಿಕೃತ ಅಂಕಿ ಅಂಶಗಳನ್ನು ಅವಲಂಬಿಸಿದೆ. ಒಳ್ಳೆಯದಕ್ಕೋ ಕೆಟ್ಟದ್ದಕ್ಕೋ ಅವು 2021ರ ವಾಸ್ತವ ಚಿತ್ರಣವನ್ನು ಬಿಂಬಿಸುವುದಿಲ್ಲ.

ಇದಷ್ಟೇ ಅಲ್ಲದೆ, ಜಿಎಚ್ಐ ಅವಲಂಬಿಸಿದಂತಹ ಎಫ್ಎಒ (ಆಹಾರ ಮತ್ತು ಕೃಷಿ ಸಂಸ್ಥೆ) ದತ್ತಾಂಶವನ್ನು ಪಡೆದುಕೊಳ್ಳಲು ಎಫ್ಎಒ ಬಳಸಿದ ವಿಧಾನವೇ ಪ್ರಶ್ನಾರ್ಹ. ಏಕೆಂದರೆ ಅದು ಟೆಲಿಫೋನ್ ಮೂಲಕ ಗ್ಯಾಲಪ್ ಸಂಸ್ಥೆಯು ನಡೆಸಿದಂತಹ ಸಮೀಕ್ಷೆಯನ್ನು ಆಧರಿಸಿದೆ. ಅಷ್ಟೇ ಅಲ್ಲ, ಕೇಳಿದಂತಹ ಪ್ರಶ್ನೆಗಳು, ಕೋವಿಡ್-19ರ ಅವಧಿಯಲ್ಲಿ ಉದ್ಯೋಗ ಸ್ಥಿತಿಗತಿ, ಉದ್ಯೋಗ ಅಥವಾ ವ್ಯವಹಾರ ನಷ್ಟ ಅಥವಾ ಆದಾಯ ನಷ್ಟದಂತಹ ವಿಚಾರಗಳಿಗೆ ಸಂಬಂಧಿಸಿದುದಾಗಿತ್ತು. ಸಾಂಕ್ರಾಮಿಕದ ಸಂದರ್ಭದಲ್ಲಿ ಜನರಿಗೆ ಅಗತ್ಯ ಆಹಾರ ಸರಬರಾಜು ಖಚಿತಪಡಿಸುವುದಕ್ಕಾಗಿ ಸರ್ಕಾರ ಹಾಗೂ ಇತರ ಸಂಸ್ಥೆಗಳು ಯಶಸ್ವಿಯಾಗಿ ಬೃಹತ್ ಪ್ರಚಾರಾಂದೋಲನವನ್ನು ಕೈಗೊಂಡಿದ್ದರೂ ಜನರು ಆಹಾರ ಸಾಮಗ್ರಿಗಳನ್ನು ಪಡೆದುಕೊಂಡ ವಿಚಾರಗಳ ಬಗ್ಗೆ ಸಮೀಕ್ಷೆಯಲ್ಲಿ ಪಾಲ್ಗೊಂಡವರಿಗೆ ಪ್ರಶ್ನೆಗಳನ್ನೇ ಕೇಳಿಲ್ಲ. ಪೌಷ್ಟಿಕಾಂಶ ಕೊರತೆಯ ವೈಜ್ಞಾನಿಕ ಮಾಪನಕ್ಕೆ ತೂಕ ಹಾಗೂ ಎತ್ತರದ ಅಳತೆಯು ಅಗತ್ಯವಾದುದಾದರೂ ಶುದ್ಧ ದೂರವಾಣಿ ಮಾತುಕತೆಗಳ ಅಂದಾಜು ಆಧರಿಸಿದ ಗ್ಯಾಲಪ್ ಸಮೀಕ್ಷೆಯನ್ನು ಆಧರಿಸಿರುವುದು ಅಸಂಗತ.

ಜಿಎಚ್ಐ ಶ್ರೇಯಾಂಕಗಳ ಕುರಿತಂತೆ ಇನ್ನಿತರ ಕೆಲವು ವಿಚಾರಗಳು ಇಲ್ಲಿವೆ. ಜಿಎಚ್ಐ ಶ್ರೇಯಾಂಕಗಳಲ್ಲಿ ಮೊದಲ 18 ರಾಷ್ಟ್ರಗಳಲ್ಲಿ, ಬಹುತೇಕ ರಾಷ್ಟ್ರಗಳು 2000ದಲ್ಲಿ 5 ಅಥವಾ 5.5ಕ್ಕಿಂತ ಕಡಿಮೆ ಅಂಕಗಳನ್ನು ಹೊಂದಿದ್ದವು. ಹೆಚ್ಚಿನವು ಇದೇ ಪ್ರಮಾಣವನ್ನು ಕಾಪಾಡಿಕೊಂಡಿವೆ. ಆದರೆ, 2000ದಲ್ಲಿ 13.5 ಅಂಕ ಗಳಿಸಿದ್ದ ಚೀನಾ ಅದ್ಭುತವಾದ ಸುಧಾರಣೆಯನ್ನು ಸಾಧಿಸಿದೆ. ಇದು ಸರಿಯಾದ ದತ್ತಾಂಶವನ್ನು ಆಧರಿಸಿ ದೆಯೇ? ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್ಒ) ಮಹಾಪ್ರಧಾನ ಕಾರ್ಯದರ್ಶಿಯಾಗಿ ತನಗೆ ಬೇಕಾದ ಅಭ್ಯರ್ಥಿ ಆಯ್ಕೆಯಾಗುವಲ್ಲಿ ಚೀನಾದ ಕಾರ್ಯಾ ಚರಣೆಯ ನಂತರ ಡಬ್ಲ್ಯುಎಚ್ಒದಲ್ಲಿನ ವಿಚಿತ್ರ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಈ ಪ್ರಶ್ನೆಯನ್ನು ಎತ್ತುವುದು ಅವಶ್ಯವಾಗಿದೆ.

ಅಷ್ಟೇ ಅಲ್ಲ, ನಾಲ್ಕು ಸೂಚಕಗಳಿಗಾಗಿ ತನ್ನ ದತ್ತಾಂಶ ಗಳನ್ನು ಜಿಎಚ್ಐ ಎಲ್ಲಿಂದ ಎತ್ತಿಕೊಳ್ಳುತ್ತದೆ? ವಿಶ್ವಸಂಸ್ಥೆ ಹಾಗೂ ಇತರ ಅಂತರರಾಷ್ಟ್ರೀಯ ಸಂಸ್ಥೆಗಳಾದ ಡಬ್ಲ್ಯುಎಚ್ಒ, ವಿಶ್ವಬ್ಯಾಂಕ್, ಯುನಿಸೆಫ್, ಎಫ್ಎಒ ಮತ್ತು ‘ತಜ್ಞ ಅಂದಾಜು’ ವರದಿಗಳಿಂದ ದತ್ತಾಂಶಗಳನ್ನು ತೆಗೆದುಕೊಳ್ಳುವುದಾಗಿ ವರದಿ ಹೇಳುತ್ತದೆ.

ಈ ವರದಿ ಗಮನ ಸೆಳೆದುಕೊಳ್ಳುವಂತೆ ಮಾಡು ವಲ್ಲಿ ಅಷ್ಟೊಂದು ವಿಶ್ವಸಂಸ್ಥೆ ಘಟಕಗಳು ಹಾಗೂ ಡಬ್ಲ್ಯುಎಚ್ಒ ಒಳಗೊಳ್ಳುವಿಕೆಗೆ ಕಾರಣವೇನು? ‘ಉದ್ಯಮ ಸ್ನೇಹಿ’ ಶ್ರೇಯಾಂಕಕ್ಕೆ ಸಂಬಂಧಿಸಿದಂತೆ ಚೀನಾದ ಸ್ಥಾನವನ್ನು ಉತ್ತಮಪಡಿಸುವುದಕ್ಕಾಗಿ ಚೀನಾಕ್ಕೆ ಸಂಬಂಧಿಸಿದ ದತ್ತಾಂಶಗಳನ್ನು ತಿರುಚಲಾಗಿತ್ತು ಎಂಬ ಬಗ್ಗೆ ವಿಶ್ವಬ್ಯಾಂಕ್ ಹಿರಿಯ ಅಧಿಕಾರಿಗಳ ಕುರಿತಾಗಿ ಹೊರಬಿದ್ದಂತಹ ಹಗರಣದ ಬೆಳಕಿನಲ್ಲಿ ಈಗ ಚೀನಾ ಒದಗಿಸಿದ ದತ್ತಾಂಶಗಳು ಅಥವಾ ಚೀನಾದಿಂದ ವಿಶ್ವ ಸಂಸ್ಥೆ ಘಟಕಗಳು ಸಂಗ್ರಹಿಸಿದಂತಹ ದತ್ತಾಂಶಗಳು, ಜಿಎಚ್ಐ ಅಳವಡಿಸಿಕೊಂಡಂಥ ದತ್ತಾಂಶಗಳನ್ನು ಕೂಲಂಕಷವಾಗಿ ಪರಿಶೀಲಿಸಬೇಕಾದುದು ಅಗತ್ಯ. ವಿಶ್ವಸಂಸ್ಥೆಯ ಘಟಕಗಳಿಂದ ಹೊರಬೀಳುವ ಪ್ರತೀ ವರದಿ ಅಥವಾ ಮೌಲ್ಯಮಾಪನದ ಬಗ್ಗೆ ಪೂರ್ಣ ಎಚ್ಚರಿಕೆ ವಹಿಸಬೇಕೆಂಬುದನ್ನು ಈ ಹಗರಣ ಭಾರತಕ್ಕೆ ನೆನಪಿಸುತ್ತದೆ.

ಸ್ವತಂತ್ರ ಪರಿಶೋಧನೆಯಿಂದಾಗಿ ಈ ಹಗರಣವು ಹೊರಬಿದ್ದ ನಂತರ, ಶ್ರೇಯಾಂಕ ನೀಡಿಕೆ ಯನ್ನು ವಿಶ್ವಬ್ಯಾಂಕ್ ನಿಲ್ಲಿಸಿತ್ತು. ಶ್ರೇಯಾಂಕಗಳ ನೀಡಿಕೆ ಯಲ್ಲಿ ವಿಶ್ವಬ್ಯಾಂಕ್ ಅಧ್ಯಕ್ಷ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಸೇರಿದಂತೆ ವಿಶ್ವಬ್ಯಾಂಕ್ ಮೇಲಧಿಕಾರಿಗಳ ಹಸ್ತಕ್ಷೇಪವನ್ನು ಈ ಪರಿಶೋಧನೆ ತೋರಿಸಿತ್ತು. ಚೀನಾದ ಶ್ರೇಯಾಂಕದಲ್ಲಿ 78ರಿಂದ 85ಕ್ಕೆ ಆದ ಕುಸಿತವನ್ನು ಬದಲಿಸುವುದಕ್ಕಾಗಿ ದತ್ತಾಂಶಗಳ ತಿರುಚುವಿಕೆಗಾಗಿ ಅವರು ಆದೇಶಿಸಿದ್ದರು.

ವುಹಾನ್‌ನಲ್ಲಿ ಕೋವಿಡ್- 19 ವೈರಸ್ ಹುಟ್ಟಿನ ಕುರಿತಾಗಿ ಸಮರ್ಪಕ ತನಿಖೆ ನಡೆಯದಂತೆ ಚೀನಾ ಹತ್ತಿಕ್ಕಿದ ರೀತಿ ಹಾಗೂ ಅದರ ಅಸಹಕಾರವನ್ನು ಎತ್ತಿ ಹೇಳುವಲ್ಲಿ ಡಬ್ಲ್ಯುಎಚ್ಒ ಮಹಾ ನಿರ್ದೇಶಕರ ನಿರಾಸಕ್ತಿಯ ವಿವರಗಳು ಕ್ಷೋಭೆ ಉಂಟು ಮಾಡು ವಂತಹವು. ಈ ಬೆಳವಣಿಗೆಗಳನ್ನು ಗಮನಿಸಿದಲ್ಲಿ, ಡಬ್ಲ್ಯುಎಚ್ಒ ಸಂಗ್ರಹಿಸಿದ ದತ್ತಾಂಶಗಳು ಹಾಗೂ ಅವನ್ನು ಬಳಸಿಕೊಂಡು ಜಿಎಚ್ಐ ಶ್ರೇಯಾಂಕಗಳನ್ನು ಅಂತಿಮಗೊಳಿಸಿದ್ದು ಎಷ್ಟರಮಟ್ಟಿಗೆ ನಂಬಲರ್ಹ? ಭಾರತದಲ್ಲಿ ಬೇರೂರಿರುವ ಪ್ರಜಾಸತ್ತಾತ್ಮಕ ಪರಂಪರೆಗಳನ್ನು ಮೂದಲಿಸುತ್ತಿರುವ ಇತರ ಕೆಲವು ಜಾಗತಿಕ ಸಂಸ್ಥೆಗಳ ಹಾದಿಯಲ್ಲೇ ಭಾರತವನ್ನು ಶಕ್ತಿಗುಂದಿದಂತೆ ಬಿಂಬಿಸುವ ಜಿಎಚ್ಐ ವರದಿಯೂ ಇದೆ. ಜಿಎಚ್ಐ ವರದಿ ತಯಾರಿಯಲ್ಲಿ ಸಂಸ್ಥೆಗಳು ಅಳವಡಿಸಿಕೊಂಡ ವಿಧಾನಗಳಲ್ಲಿನ ದೋಷಗಳನ್ನು ಗಮನಿಸಿದಾಗ, ಪ್ಯಾರಿಸ್ ಮೂಲದ ರಿಪೋರ್ಟರ್ಸ್ ವಿಥೌಟ್ ಬಾರ್ಡರ್ಸ್ (ಆರ್‌ಎಸ್ಎಫ್) ಸಿದ್ಧಪಡಿಸಿದ ‘ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕ’ ಹಾಗೂ ಸ್ವೀಡಿಷ್ ಸಂಸ್ಥೆ ವಿ-ಡೆಮ್ ಸಿದ್ಧಪಡಿಸಿದ ‘ಪ್ರಜಾಪ್ರಭುತ್ವ ವರದಿ– 2020’ ಗಳಲ್ಲಿ ಎದ್ದುಕಾಣಿಸುವ ಅಸಂಗತತೆಗಳು ನೆನಪಾಗುತ್ತವೆ.

ಹಲವು ದೇವಪ್ರಭುತ್ವದ ರಾಷ್ಟ್ರಗಳು ಹಾಗೂ ಪ್ರಜಾಸತ್ತೆಯ ಮೂಲತತ್ವಗಳೂ ಇಲ್ಲದಂತಹ ರಾಷ್ಟ್ರಗಳಲ್ಲೇ ಭಾರತಕ್ಕಿಂತ ಹೆಚ್ಚಿನ ಪತ್ರಿಕಾ ಸ್ವಾತಂತ್ರ್ಯ ಇದೆ ಎಂದು ಆರ್‌ಎಸ್ಎಫ್ ವರದಿ ಪ್ರತಿಪಾದಿಸಿತ್ತು. ಮುಸ್ಲಿಮರು ಮಾತ್ರ ನಾಗರಿಕರಾಗಿರಬಹುದಾದ ಹಾಗೂ ಶರಿಯತ್ ಕಾನೂನು ಪರಮೋಚ್ಚ ಕಾನೂನು ಆಗಿರುವಂತಹ ಮಾಲ್ಡೀವ್ಸ್, ಭಾರತಕ್ಕಿಂತ ಹೆಚ್ಚಿನ ಪತ್ರಿಕಾ ಸ್ವಾತಂತ್ರ್ಯ ಇರುವ ಉತ್ತಮ ‘ಪ್ರಜಾಪ್ರಭುತ್ವ’ ಎನಿಸಿದೆಯಂತೆ. ವರದಿಗಳಲ್ಲಿನ ಇಂತಹ ಹಲವು ಉದಾಹರಣೆಗಳು ಯಾವುದೋ ಕಾರ್ಯಸೂಚಿಗಳ ಪರ ಕೆಲಸ ಮಾಡುವಂತಹವು ಎಂಬುದನ್ನು ಸ್ಪಷ್ಟಪಡಿಸುತ್ತವೆ.

ಅಲ್ಲದೆ, ವಿಶ್ವಸಂಸ್ಥೆಗೆ ಹಣಕಾಸು ನೀಡಿಕೆಯನ್ನು ಚೀನಾ ಹೆಚ್ಚಿಸಿದ ನಂತರ, ವಿಶ್ವಸಂಸ್ಥೆ ಹಾಗೂ ಅದರ ಎಲ್ಲಾ ಘಟಕಗಳು, ಪಾಶ್ಚಿಮಾತ್ಯ ವಿಶ್ವವಿದ್ಯಾಲಯಗಳು ಮತ್ತು ಚಿಂತಕರ ಚಾವಡಿಗಳನ್ನು ನಿಯಂತ್ರಿಸುವಂತಹ ಯತ್ನಗಳು ಎದ್ದು ಕಾಣಿಸುತ್ತಿವೆ. ಭಾರತದ ಕೋವ್ಯಾಕ್ಸಿನ್‌ಗೆ ಡಬ್ಲ್ಯುಎಚ್ಒ ಇನ್ನೂ ಪ್ರಮಾಣಪತ್ರ ನೀಡದಿರುವುದು ಸೇರಿದಂತೆ ವಿಶ್ವಬ್ಯಾಂಕ್ ಹಾಗೂ ಡಬ್ಲ್ಯುಎಚ್‌ಒದ ಇತ್ತೀಚಿನ ವರ್ತನೆಗಳ ಹಿನ್ನೆಲೆಯಲ್ಲಿ ಭಾರತದ ಅಧಿಕಾರವರ್ಗ ಪೂರ್ಣ ಎಚ್ಚರಿಕೆ ತಾಳುವುದು ಅವಶ್ಯ.

ಹೀಗಾಗಿ, ಸಂಶೋಧನೆ, ತನಿಖೆ ಹಾಗೂ ವಿಶ್ಲೇಷಣೆಗಳ ಮೂಲ ತತ್ವಗಳನ್ನು ಆಧರಿಸಿದ ಪರಿಶೀಲನೆಯನ್ನು ತಾಳಿಕೊಳ್ಳಲಾಗದಂತಹ ‘ಜಾಗತಿಕ’ ಎಂದು ಕರೆಸಿಕೊಳ್ಳುವ ಇಂತಹ ಮಹಾನ್ ವರದಿಗಳ ವಾಸ್ತವಾಂಶಗಳ ಬಗ್ಗೆ ಕೂಗಿ ಹೇಳುವ ಸಮಯ ಬಂದಿದೆ.


ಎ. ಸೂರ್ಯ ಪ್ರಕಾಶ್

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು