ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಮಾಧ್ಯಮ ಮಂದಿಗೆ ಲಂಗು ಲಗಾಮಿಲ್ಲವೇ?

Last Updated 5 ಅಕ್ಟೋಬರ್ 2020, 6:38 IST
ಅಕ್ಷರ ಗಾತ್ರ

ರಾಜ್ಯದ ಜಿಲ್ಲಾ ಕೇಂದ್ರವೊಂದರಲ್ಲಿ ಪ್ರಾದೇಶಿಕ ಸಾರಿಗೆ ಕಚೇರಿಯ ಶಿಥಿಲವಾದ ಕಟ್ಟಡದಲ್ಲಿ ಕೆಲಸ ನಿರ್ವಹಿಸುವ, ಮಳೆ ನೀರಿನಿಂದ ಸೋರುವ ಗೋಡೆಯ ನಡುವೆ ಕಡತಗಳನ್ನು ಕಾಯ್ದುಕೊಳ್ಳಲು ಹೆಣಗಾಡುವ ಸಿಬ್ಬಂದಿಯ ದುಃಸ್ಥಿತಿಯ ಬಗ್ಗೆ ಒಬ್ಬ ಪತ್ರಕರ್ತರಾಗಿ ಕಳಕಳಿಯಿಂದ ನಿಮ್ಮ ಪತ್ರಿಕೆಗೆ ಲೇಖನವೊಂದನ್ನು ಬರೆಯುತ್ತೀರಿ. ಮರುದಿನ ಅದು ತಲುಪಬೇಕಾದವರನ್ನು ತಲುಪಿ, ಅದಾಗಲೇ ಮಂಜೂರಾಗಿದ್ದ, ಆದರೆ ಬಿಡುಗಡೆ ಭಾಗ್ಯ ಕಾಣದ ಹಣ ಕೂಡಲೇ ಬಿಡುಗಡೆಯಾಗಿ, ನೂತನ ಕಟ್ಟಡದ ಕಾರ್ಯಾರಂಭಕ್ಕೆ ಚಾಲನೆ ಸಿಗುತ್ತದೆ. ಇತ್ತ, ‘ಅಬ್ಬಾ ಮಾಧ್ಯಮದ ಪ್ರಭಾವವೇ!, ಸಾರ್ಥಕವಾಯಿತು ಪತ್ರಿಕೋದ್ಯಮಕ್ಕೆ ಬಂದು’ ಎಂದುಕೊಂಡು ನಿಮ್ಮ ಬೆನ್ನನ್ನು ನೀವೇ ತಟ್ಟಿಕೊಳ್ಳುತ್ತಿರುವಾಗ, ಅತ್ತ ಪತ್ರಕರ್ತರ ಗುಂಪೊಂದು ಆ ಕಚೇರಿಯ ಮುಖ್ಯಸ್ಥರ ಬಳಿ ಹೋಗುತ್ತದೆ. ‘ತಮ್ಮಿಂದಾದ ಈ ಮಹತ್ಕಾರ್ಯ’ಕ್ಕೆ ಇನಾಮು ರೂಪದಲ್ಲಿ, ಬೆಂಗಳೂರಿಗೆ ತೆರಳುವ ತಮ್ಮ ಸಾರಿಗೆ ವೆಚ್ಚ ಭರಿಸಬೇಕೆಂಬ ಬೇಡಿಕೆ ಇಡುತ್ತದೆ! ಅದಕ್ಕೊಪ್ಪಿ ಅವರು ವ್ಯವಸ್ಥೆ ಮಾಡಿಕೊಡುವ ವಾಹನದಲ್ಲಿ ಉಚಿತವಾಗಿ ಬೆಂಗಳೂರು ಟ್ರಿಪ್‌ ಮಾಡಿ ಮುಗಿಸುತ್ತದೆ.

ಪಶ್ಚಿಮಘಟ್ಟ ವ್ಯಾಪ್ತಿಯ ಗುಡ್ಡವೊಂದರಲ್ಲಿ ಗಣಿಗಾರಿಕೆ ಪ್ರಯತ್ನಗಳ ವಿರುದ್ಧ ಹೋರಾಟ ಆರಂಭವಾಗುತ್ತದೆ. ತನಿಖಾ ಪತ್ರಿಕೋದ್ಯಮದ ಗುಂಗಿನಲ್ಲಿ ಪತ್ರಕರ್ತರ ಗುಂಪೊಂದು ಖುದ್ದು ಸ್ಥಳಕ್ಕೆ ತೆರಳಿ, ಗುಡ್ಡದ ಬುಡದಡಿಯ ಗ್ರಾಮಸ್ಥರ ಅಹವಾಲು ಆಲಿಸಿ, ಗಣಿಗಾರಿಕೆಯಿಂದ ಸುತ್ತಮುತ್ತಲಿನ ಪರಿಸರಕ್ಕೆ ಆಗುವ ಅಪಾರ ಹಾನಿಯ ಬಗ್ಗೆ ತಮ್ಮ ತಮ್ಮ ಪತ್ರಿಕೆಗಳಲ್ಲಿ, ಟಿ.ವಿಗಳಲ್ಲಿ ಸಚಿತ್ರ ವರದಿ ಮಾಡುತ್ತದೆ. ಅವರಲ್ಲಿ ಕೆಲವರು ಗಣಿಗಾರಿಕೆಯ ಕರಾಳ ಮುಖವನ್ನು ಅನಾವರಣಗೊಳಿಸಿದ ಖುಷಿಯಲ್ಲಿ ತೇಲುತ್ತಿದ್ದರೆ, ಇನ್ನೊಂದಷ್ಟು ಮಂದಿ ‘ಮಾಧ್ಯಮಮಿತ್ರರನ್ನು ಸ್ಥಳಕ್ಕೆ ಕರೆತರಲು ಶ್ರಮಿಸಿದ್ದಕ್ಕಾಗಿ’ಸೂಕ್ತ ಪ್ರತಿಫಲದ ನಿರೀಕ್ಷೆಯಲ್ಲಿರುತ್ತಾರೆ! ಗ್ರಾಮಸ್ಥರ ವೋಟಿನ ಮೇಲೆ ಕಣ್ಣಿಟ್ಟು ಆ ಗಣಿಗಾರಿಕೆಯನ್ನು ವಿರೋಧಿಸುವ ರಾಜಕೀಯ ನೇತಾರನ ಶಹಬ್ಬಾಸ್‌ಗಿರಿಗಾಗಿ ಎದುರುನೋಡುತ್ತಾ, ಆತನ ಮನೆಯ ಬಾಗಿಲು ಕಾಯುತ್ತಿರುತ್ತಾರೆ.

ಇದು, ಎಲ್ಲ ಕ್ಷೇತ್ರಗಳಲ್ಲೂ ಇಂದು ಇರುವಂತೆ ಮಾಧ್ಯಮ ಕ್ಷೇತ್ರದಲ್ಲೂ ಢಾಳಾಗಿ ಕಾಣುವ ಎರಡು ತದ್ವಿರುದ್ಧ ನಡೆಗಳ ಚಿತ್ರಣ. ಆದರೂ ಅದೊಂದು ಸಹಜ ನಡಾವಳಿ ಎಂಬಂತೆ ಆಗಿರುವ ಮನುಷ್ಯನ ಎರಡು ಮುಖಗಳ ದರ್ಶನ. ಹಾಗೆಂದು ಅಷ್ಟೊಂದು ಸರಳವಾಗಿ ಅದನ್ನು ವ್ಯಾಖ್ಯಾನಿಸಲಾದೀತೇ?

ಸಮಾಜದ ಮುಖವಾಣಿಯಾಗಿ ಸರಿ ತಪ್ಪುಗಳನ್ನು ಮುಕ್ತವಾಗಿ ತೆರೆದಿಟ್ಟು, ವಿವೇಚನೆಯಿಂದ ತಮ್ಮದೇ ನಿಲುವು ರೂಢಿಸಿಕೊಳ್ಳಲು ಜನರಿಗೆ ಅನುವು ಮಾಡಿಕೊಡಬೇಕಾದದ್ದು ಪತ್ರಿಕೋದ್ಯಮದ ಮೂಲಭೂತ ಕರ್ತವ್ಯ. ಆದರೆ, ಸಾಗರದಷ್ಟು ಹೊಣೆಗಾರಿಕೆಯ ಮಾಧ್ಯಮ ಕ್ಷೇತ್ರದ ಸಣ್ಣ ತೊರೆಯೊಂದು ಈ ಪರಿಧಿಯಿಂದ ಹೊರಬಂದು ಬಹಳಷ್ಟು ಕಾಲವಾಗಿದೆ. ತಮ್ಮ ವೈಯಕ್ತಿಕ ನಿಲುವಿಗೆ ತಕ್ಕಂತೆ ಜನಾಭಿಪ್ರಾಯವನ್ನು ರೂಪಿಸಲು ಹೊರಡುವ ಕೆಲವೇ ಮಂದಿ ಇಂದು ಇಡೀ ಮಾಧ್ಯಮ ರಂಗದ ವಕ್ತಾರರಂತೆ ಸಮಾಜದ ಕಣ್ಣಿಗೆ ರಾಚುತ್ತಿದ್ದಾರೆ. ಆದರೆ ಇದು ದಿನ ಬೆಳಗಾಗುವುದರಲ್ಲಿ ಸೃಷ್ಟಿಯಾದ ದಿಢೀರ್‌ ಬೆಳವಣಿಗೆಯೇನಲ್ಲ. ಅಗಾಧವಾದ ವೃತ್ತಿನಿಷ್ಠ ಪತ್ರಿಕೋದ್ಯಮದೊಟ್ಟಿಗೆ ಸಣ್ಣ ಪ್ರಮಾಣದಲ್ಲಿಯಾದರೂ ಲಾಗಾಯ್ತಿನಿಂದಲೂ ಸಾಗಿಬಂದಿರುವ ಅನಿಷ್ಟ ಪದ್ಧತಿಯ ಉತ್ತುಂಗದ ಸ್ಥಿತಿ ಈಗಿನದು. ಇಲ್ಲದಿದ್ದರೆ ಗಾಂಧೀಜಿ 1931ರಲ್ಲೇ ‘ಯಂಗ್‌ ಇಂಡಿಯಾ’ ವಾರಪತ್ರಿಕೆಯ ಮೇ ತಿಂಗಳ ಸಂಚಿಕೆಯೊಂದರಲ್ಲಿ ‘ಪಾಯಿಸನಸ್‌ ಜರ್ನಲಿಸಂ’ ಎಂಬ ಹೆಸರಿನ ಲೇಖನವನ್ನು ಬರೆಯುತ್ತಿರಲಿಲ್ಲ! ಪ್ರಚೋದನಾತ್ಮಕ ಬರಹಗಳ ಬಗ್ಗೆ ಆ ಲೇಖನದಲ್ಲಿ ತೀವ್ರ ಕಳವಳ ವ್ಯಕ್ತಪಡಿಸಿರುವ ಅವರು, ಪತ್ರಕರ್ತರಿಗೆ ಇರಲೇಬೇಕಾದ ಸ್ವನಿಯಂತ್ರಣ ಮತ್ತು ಸ್ವಶಿಸ್ತಿನ ಅಗತ್ಯವನ್ನು ಒತ್ತಿ ಹೇಳಿದ್ದಾರೆ.

ಅಷ್ಟಕ್ಕೂ ಸಮಾಜದ ಆಗುಹೋಗುಗಳ ಕುರಿತು ಸ್ವತಃ ತೀರ್ಪು ಬರೆಯಲು ಮುಂದಾಗುವ ಕೆಲವು ಪತ್ರಕರ್ತರಿಗೆ ಈ ಪರಮಾಧಿಕಾರವನ್ನು ಕೊಟ್ಟವರಾದರೂ ಯಾರು? ಇಂದಿನ ಕೆಲವು ಮಾಧ್ಯಮ ಮಂದಿಯ ಅವತಾರಗಳನ್ನು ಕಂಡು ಇಂತಹದ್ದೊಂದು ಪ್ರಶ್ನೆ ಯಾರಲ್ಲಾದರೂ ಉದ್ಭವಿಸಿದರೆ, ಆ ಪ್ರಶ್ನೆಗೂ ದಶಕಗಳ ನಂಟಿದೆ! ಪ‍್ರಜಾಪ್ರಭುತ್ವಕ್ಕೆ ಅತ್ಯಗತ್ಯವಾದ ಮುಕ್ತ ಪತ್ರಿಕೋದ್ಯಮಕ್ಕೆ ಅಂತಹದ್ದೊಂದು ಅಧಿಕಾರದ ದಂಡವನ್ನು ಕೊಡುವುದು ಉಚಿತವೇ ಅಲ್ಲವೇ ಎಂಬ ಜಿಜ್ಞಾಸೆ ನಮ್ಮ ಸಂವಿಧಾನ ರಚನಾಕಾರರಲ್ಲೇ ಹುಟ್ಟಿಕೊಂಡಿತ್ತು. ಅಮೆರಿಕದ ಸಂವಿಧಾನದಂತೆ ನಮ್ಮ ಪತ್ರಿಕಾ ಕ್ಷೇತ್ರಕ್ಕೆ ಪ್ರತ್ಯೇಕ ಕಟ್ಟಳೆಗಳನ್ನು ರಚಿಸುವುದೇ ಅಥವಾ ಇಂಗ್ಲೆಂಡ್‌ ಮಾದರಿಯಲ್ಲಿ ಪತ್ರಿಕಾ ಸ್ವಾತಂತ್ರ್ಯವು ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದಲ್ಲೇ ಒಳಗೊಳ್ಳಬೇಕೇ ಎಂಬ ಬಗ್ಗೆ ಅವರ ನಡುವೆ ತೀವ್ರ ಚರ್ಚೆ ನಡೆದಿತ್ತು.

ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗಿದ್ದ ಡಾ. ಬಿ.ಆರ್‌.ಅಂಬೇಡ್ಕರ್‌ ಅವರ ಪ್ರಕಾರ, ಪತ್ರಿಕಾ ಕ್ಷೇತ್ರವು ನಾಗರಿಕರ ಮುಖವಾಣಿ. ಹೀಗಾಗಿ ಅದಕ್ಕೆ ವಿಶೇಷ ಹಕ್ಕುಗಳನ್ನು ಕೊಡಮಾಡುವ ಅಗತ್ಯವೇನಿಲ್ಲ. ಈ ಕ್ಷೇತ್ರದಲ್ಲಿ ಇರುವವರೆಲ್ಲರೂ ನಾಗರಿಕರೇ ಆದ್ದರಿಂದ ಪತ್ರಿಕೆಯಲ್ಲಿ ಬರೆಯುವಾಗಲೂ ಅವರು ತಮ್ಮ ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನೇ ಚಲಾಯಿಸುತ್ತಿರುತ್ತಾರೆ. ಅಂಬೇಡ್ಕರ್‌ ಅವರ ಈ ಅಭಿಪ್ರಾಯಕ್ಕೆ ಮನ್ನಣೆ ದೊರೆತು, ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಪ್ರತಿಪಾದಿಸುವ ಆರ್ಟಿಕಲ್‌ 19(1)(ಎ)ಯಲ್ಲೇ ಪತ್ರಿಕಾ ಹಕ್ಕುಗಳನ್ನೂ ಸೇರಿಸಲಾಯಿತು.

ಭಾರತದಂತಹ ಬೃಹತ್‌ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ, ವಿಶಾಲವಾದ ಅರ್ಥದಲ್ಲಿ, ಕಟ್ಟುಪಾಡುಗಳಿಲ್ಲದ ಮುಕ್ತ ಪತ್ರಿಕೋದ್ಯಮ ಅತ್ಯಂತ ಅವಶ್ಯಕ. ಅಂತಹದ್ದೊಂದು ಮೌಲಿಕ ಅಗತ್ಯಕ್ಕೆ ಕುಂದುಂಟು ಮಾಡುವ ಕೆಲಸವನ್ನು ಸರ್ಕಾರಗಳು ಮಾಡಹೊರಟಾಗಲೆಲ್ಲ ಈ ಕ್ಷೇತ್ರದ ರಕ್ಷಣೆಗೆ ಧಾವಿಸಿ ಬಂದದ್ದು ನ್ಯಾಯಾಂಗ. ಸಕಾಲ್‌ ವೃತ್ತಪತ್ರಿಕೆ ವರ್ಸಸ್‌ ಕೇಂದ್ರ ಸರ್ಕಾರದ ಪ್ರಕರಣದಲ್ಲಿ ವೃತ್ತಪತ್ರಿಕಾ (ಬೆಲೆ ಮತ್ತು ಪುಟಗಳು) ಕಾಯ್ದೆ 1956ರ ಮೂಲಕ ಪತ್ರಿಕೆಗಳ ಜಾಹೀರಾತು ಸ್ಥಳವನ್ನು ನಿಯಂತ್ರಿಸಲು ಮುಂದಾದ ಸರ್ಕಾರದ ಹುನ್ನಾರಕ್ಕೆ ಹೊಡೆತ ಕೊಟ್ಟದ್ದು ಇದೇ ನ್ಯಾಯಾಂಗ. ನಿಸ್ಪೃಹ ಪತ್ರಿಕಾರಂಗವು ಸರ್ಕಾರದೊಟ್ಟಿಗೆ ಮುಖಾಮುಖಿಯಾದಾಗಲೆಲ್ಲಾ, ಉನ್ನತ ನ್ಯಾಯಾಂಗವು ಮುಕ್ತ ಅಭಿವ್ಯಕ್ತಿಗೆ ಮನ್ನಣೆ ಕೊಟ್ಟಿರುವ ಇಂತಹ ಅನೇಕ ನಿದರ್ಶನಗಳು ದೇಶದ ಚರಿತ್ರೆಯುದ್ದಕ್ಕೂ ನಮಗೆ ಕಾಣಸಿಗುತ್ತವೆ. ಆದರೆ ಆ ಸ್ವಾತಂತ್ರ್ಯವು ಸ್ವೇಚ್ಛಾಚಾರಕ್ಕೆ ತಿರುಗತೊಡಗಿದಾಗ ಅದೇ ನ್ಯಾಯಾಂಗವು ಚಾಟಿಯಲ್ಲಿ ತಿವಿದು ಎಚ್ಚರಿಸುವುದನ್ನೂ ಮರೆತಿಲ್ಲ. ಪ್ರಜಾಪ್ರಭುತ್ವವು ವಾಕ್‌ ಸ್ವಾತಂತ್ರ್ಯದ ಬುನಾದಿ ಎನ್ನುವುದಾದರೆ, ಆ ಪ್ರಜಾಪ್ರಭುತ್ವದ ಮಾದರಿಯಲ್ಲೇ ವಾಕ್‌ ಸ್ವಾತಂತ್ರ್ಯವನ್ನು ನಿಯಂತ್ರಿಸಿಕೊಳ್ಳಬೇಕಾದ ಹೊಣೆಗಾರಿಕೆ ಸಮಾಜದ ಮೇಲಿರುತ್ತದೆ ಎಂದು ಹೇಳದೇ ಬಿಟ್ಟಿಲ್ಲ.

ಬಿಹಾರದ ಬಾಲಿಕಾ ಗೃಹವೊಂದರಲ್ಲಿ ಮಕ್ಕಳ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಅತಿರಂಜಿತ ವರದಿಗಳನ್ನು ನಿರ್ಬಂಧಿಸಿದ ಪಟ್ನಾ ಹೈಕೋರ್ಟ್‌ನ ಆದೇಶ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆಯ ಸಂದರ್ಭದಲ್ಲಿ, ಸುಪ್ರೀಂಕೋರ್ಟ್‌ ಮಾಧ್ಯಮಗಳ ಕಿವಿ ಹಿಂಡಿದ್ದೂ ಇದೆ. ಯಾವುದೇ ಪ್ರಕರಣದ ‘ಮಾಧ್ಯಮ ವಿಚಾರಣೆ’ಗೆ ಅವಕಾಶ ಇಲ್ಲವಾದ್ದರಿಂದ ಪತ್ರಿಕೆಗಳು ಸಮತೋಲನ ಕಾಯ್ದುಕೊಳ್ಳಬೇಕು, ಸ್ವಯಂ ಗಡಿರೇಖೆ ಎಳೆದುಕೊಳ್ಳಬೇಕು ಎಂದು ಅದು ಸ್ಪಷ್ಟವಾಗಿ ಹೇಳಿದೆ.

ಈ ಮಾತಿಗೆ ಮನ್ನಣೆ ಕೊಡದೆ, ತನಿಖಾ ಪತ್ರಿಕೋದ್ಯಮ ಹಾದಿ ತಪ್ಪಿ ‘ಮಾಧ್ಯಮ ವಿಚಾರಣೆ’ಯತ್ತ ಹೊರಳಿದರೆ, ಆರೋಪಿಗಳಿಗೂ ಅಪರಾಧಿಗಳಿಗೂ ನಡುವಿನ ಕನಿಷ್ಠ ವ್ಯತ್ಯಾಸವನ್ನೂ ಅರಿಯದಿದ್ದರೆ, ತಮಗಿಲ್ಲದ ವಿಶೇಷ ಹಕ್ಕುಗಳನ್ನು ಆವಾಹಿಸಿಕೊಂಡು ‘ತಾರಾ ಪತ್ರಕರ್ತ’ರಾಗಲು ಹವಣಿಸಿದರೆ, ಈ ಕ್ಷೇತ್ರಕ್ಕೆ ಹೊರತಾದವರು ಬಂದು ನಮಗೆ ಈ ಕುರಿತು ನೀತಿ ಪಾಠ ಹೇಳುವಂತಹ ಸ್ಥಿತಿ ನಿರ್ಮಾಣವಾಗುತ್ತದೆ. ಹೇಗೆಂದರೆ, ಮಾಧ್ಯಮಗಳು ಆರೋಪಿಗಳ ಹಿಗ್ಗಾಮುಗ್ಗಾ ಜನ್ಮ ಜಾಲಾಡಿದ 2ಜಿ ಹಗರಣ ಮತ್ತು ಆರುಷಿ ತಲ್ವಾರ್‌ ಪ್ರಕರಣದ ಗತಿ ಏನಾಯಿತು ಎಂದು, ತಮ್ಮ ವಿರುದ್ಧ ಮಾಧ್ಯಮಗಳಲ್ಲಿ ನಡೆಯುತ್ತಿರುವ ತೇಜೋವಧೆಯ ವಿರುದ್ಧ ಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ ಸುಶಾಂತ್‌ ಸಿಂಗ್‌ ಪ್ರಕರಣದ ಪ್ರಮುಖ ಆರೋಪಿ ರಿಯಾ ಚಕ್ರವರ್ತಿ ಅವರು ಈಗ ಪ್ರಶ್ನಿಸಿರುವಂತೆ.

ಸ್ವಾತಂತ್ರ್ಯ ಪೂರ್ವದಲ್ಲಿ ಧ್ಯೇಯವಷ್ಟೇ ಆಗಿದ್ದ, ಸ್ವಾತಂತ್ರ್ಯಾನಂತರ ಒಂದು ವೃತ್ತಿಯಾಗಿ ಬದಲಾದ, ಈಗಿನ ಕಾಲಘಟ್ಟದಲ್ಲಿ ಸಂಪೂರ್ಣ ಉದ್ಯಮದ ಸ್ವರೂಪ ಪಡೆದಿರುವ ಪತ್ರಿಕಾರಂಗ ಇಂದು ಪತ್ರಿಕೆಗಳನ್ನಷ್ಟೇ ಒಳಗೊಂಡಿಲ್ಲ. ಅದೀಗ, ಜನಾಭಿವ್ಯಕ್ತಿಗೆ ವೇದಿಕೆಯಾಗಿರುವ ಸಮಗ್ರ ಮಾಧ್ಯಮಗಳನ್ನೂ ಒಳಗೊಂಡು ಮಾಧ್ಯಮ ಕ್ಷೇತ್ರ ಎನಿಸಿಕೊಂಡಿದೆ. ಹಾಗೆಂದು ವ್ಯಾಪ್ತಿ ವಿಶಾಲವಾದ ಮಾತ್ರಕ್ಕೆ, ಸ್ವರೂಪ ಬದಲಾದ ಕಾರಣಕ್ಕೆ ಅದರ ಬುನಾದಿ ಅಲುಗಾಡಬೇಕಿಲ್ಲ, ಮೌಲ್ಯಗಳು ಬದಲಾಗಬೇಕಿಲ್ಲ, ನೈತಿಕತೆಗೆ ತುಕ್ಕು ಹಿಡಿಯಬೇಕಿಲ್ಲ. ಎಲ್ಲ ಕ್ಷೇತ್ರಗಳಲ್ಲೂ ಅಪೇಕ್ಷಣೀಯವಾದ ವೃತ್ತಿಪರತೆಯ ಜೊತೆಗೆ ತನ್ನ ಬೆನ್ನಿಗಿರುವ ಅಪಾರ ಸಾಮಾಜಿಕ ಹೊಣೆಗಾರಿಕೆಯನ್ನು ಮರೆತರೆ, ಈ ಸಮಾಜಮುಖಿ ಅಸ್ತ್ರವನ್ನು ದುರ್ಬಲಗೊಳಿಸುವ ಪ್ರಯತ್ನಗಳು ಮೇಲುಗೈ ಸಾಧಿಸುತ್ತವೆ. ಆ ಅಸ್ತ್ರ ಮೊನಚು ಕಳೆದುಕೊಳ್ಳುವುದಕ್ಕಿಂತ ನೈತಿಕ ದುರಂತ ಮತ್ತೊಂದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT