ಬುಧವಾರ, ಸೆಪ್ಟೆಂಬರ್ 22, 2021
29 °C

ಯಾರ ‘ಸಹಕಾರ’ದಿಂದ ಯಾರ ‘ಸಮೃದ್ಧಿ’?

ಶಿವಸುಂದರ್ Updated:

ಅಕ್ಷರ ಗಾತ್ರ : | |

Prajavani

‘ಸಹಕಾರದಿಂದ ಸಮೃದ್ಧಿ’ ಎಂಬ ಘೋಷ ವಾಕ್ಯದೊಂದಿಗೆ ಒಕ್ಕೂಟ ಸರ್ಕಾರವು ಹೊಸ ಸಹಕಾರ ಸಚಿವಾಲಯಕ್ಕೆ ಜನ್ಮ ಕೊಟ್ಟು ಎರಡು ವಾರಗಳೇ ಕಳೆದವು. ಆದರೂ ಅದರ ಸುತ್ತ ಎದ್ದಿರುವ ಸಂದೇಹ ಹಾಗೂ ಆತಂಕಗಳು ಬಗೆಹರಿದಿಲ್ಲ.

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಈ ಕ್ರಮವನ್ನು ಅನಿವಾರ್ಯವಾಗಿ ಸಮರ್ಥಿಸಿಕೊಳ್ಳಲೇ ಬೇಕಿರುವ ಬಿಜೆಪಿ ನೇತಾರರು ನಂಬಬಹುದಾದ ಯಾವ ತುರ್ತು ಕಾರಣಗಳನ್ನೂ ಮುಂದಿಡುತ್ತಿಲ್ಲ. ಅವರು ಒಂದೋ ಸಹಕಾರಿ ಕ್ಷೇತ್ರದ ಮಹತ್ವಗಳ ಬಗ್ಗೆ ಸಾರ್ವಕಾಲಿಕ ಸತ್ಯಗಳನ್ನು ಹೇಳುತ್ತಾರೆ ಅಥವಾ ಹಾಲಿ ಸಹಕಾರಿ ಕ್ಷೇತ್ರದಲ್ಲಿರುವ ಸಮಸ್ಯೆಗಳನ್ನು ಪಟ್ಟಿ ಮಾಡುತ್ತಾರೆ. ವಾಸ್ತವವಾಗಿ, ರಾಜ್ಯಗಳ ಪಟ್ಟಿಯಲ್ಲಿರುವ ಸಹಕಾರಿ ಕ್ಷೇತ್ರದ ಬಗ್ಗೆ ಇಂಥಾ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳುವಾಗ ಮೋದಿಯವರ ಸರ್ಕಾರ ಇತರ ಪಕ್ಷಗಳ ಜೊತೆಗಾಗಲೀ ರಾಜ್ಯ ಸರ್ಕಾರಗಳ ಜೊತೆಗಾಗಲೀ ಯಾವುದೇ ಸಮಾಲೋಚನೆಯನ್ನೂ ಮಾಡಿರಲಿಲ್ಲ.

‘ಸಹಕಾರಿ ಒಕ್ಕೂಟ ತತ್ವ’ವನ್ನು ಅನುಸರಿಸುವುದಾಗಿ ಬಿಜೆಪಿ ಪ್ರಾರಂಭದಲ್ಲಿ ಭರವಸೆ ನೀಡಿತ್ತು. ಆದರೆ, ನೋಟು ನಿಷೇಧ, ಜಿಎಸ್‌ಟಿಯಲ್ಲಿ ರಾಜ್ಯಗಳ ಪಾಲು ಹಾಗೂ ಪರಿಹಾರದಲ್ಲಿ ನಿರಂತರ ವಂಚನೆ, ಸಂವಿಧಾನದ 370ನೇ ವಿಧಿ ಅಡಿಯಲ್ಲಿನ ವಿಶೇಷ ಸ್ಥಾನಮಾನ ರದ್ದತಿ, ರಾಜ್ಯದ ಪಟ್ಟಿಯಲ್ಲಿರುವ ಕೃಷಿ ಕ್ಷೇತ್ರದ ಬಗ್ಗೆ ಸಂಸತ್ತಿನ ರೀತಿ ರಿವಾಜುಗಳನ್ನು ಉಲ್ಲಂಘಿಸಿ ಮೂರು ಕೃಷಿ ನೀತಿಗಳನ್ನು ಜಾರಿಗೊಳಿಸಿದ್ದು... ಇತ್ಯಾದಿ ಕ್ರಮಗಳು ಸರ್ಕಾರದ ದಮನಕಾರಿ ಒಕ್ಕೂಟ ನೀತಿಯನ್ನು ಸಾಬೀತುಪಡಿಸಿವೆ.

ಇವೆಲ್ಲವೂ, ಹೊಸ ‘ಸಹಕಾರಿ’ ಸಚಿವಾಲಯದ ಹಿಂದೆ ಇರುವುದು ‘ಸಹಕಾರಿ’ ಉದ್ದೇಶವೇ ಎಂಬ ಪ್ರಶ್ನೆಯನ್ನು ಸಹಜವಾಗಿ ಹುಟ್ಟು ಹಾಕಿದೆ. ಹಾಗೆ ನೋಡಿದರೆ, ಈ ಬಗ್ಗೆ ಸರ್ಕಾರ ಸಮಾಲೋಚನೆ ಮಾಡಿದ್ದು ಆರ್‌ಎಸ್‌ಎಸ್‌ನ ಅಂಗಸಂಸ್ಥೆಯಾದ ಸಹಕಾರ ಭಾರತಿಯ ಜೊತೆಗೆ ಮಾತ್ರ.

ಆ ಸಮಾಲೋಚನೆಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸಹಕಾರ ಭಾರತಿಯ ಮುಖ್ಯಸ್ಥರೂ ಮತ್ತು ಭಾರತೀಯ ರಿಸರ್ವ್‌ ಬ್ಯಾಂಕ್‌ನ ನಾಮ ನಿರ್ದೇಶಿತ ಸದಸ್ಯರೂ ಆಗಿರುವ ಸತೀಶ್ ಮರಾಠೆಯವರ ಪ್ರಕಾರ ಈ ಹೊಸ ಇಲಾಖೆಯ ಸೃಷ್ಟಿ ಮತ್ತು ಉದ್ದೇಶಗಳೆಲ್ಲ ಸಹಕಾರ ಭಾರತಿಯ ಸಲಹೆಯಂತೇ ರೂಪಿತವಾಗಿವೆ. ಅವುಗಳಲ್ಲಿ ಪ್ರಮುಖವಾದದ್ದು ‘ಇಡೀ ದೇಶದ ಎಲ್ಲಾ ಸಹಕಾರಿಗಳನ್ನು ಒಂದೇ ರೀತಿಯ ನಿಯಂತ್ರಣಕ್ಕೆ ತರುವಂತಹ ಕೇಂದ್ರೀಯ ಕಾಯ್ದೆ. ಮತ್ತೊಂದು ‘ಈ ಸಹಕಾರಿಗಳಿಗೂ ಸುಲಭವಾಗಿ ವ್ಯವಹಾರ ನಡೆಸಲು ಅನುಕೂಲವಾಗುವಂತೆ ಕಾಯ್ದೆಗಳ ಉದಾರೀಕರಣ’. ಇವೆರಡೂ ಈ ಹೊಸ ಇಲಾಖೆಯ ಪ್ರಮುಖ ಕೆಲಸ ಆಗಿರಲಿದೆ ಎಂದು ಈ ಇಲಾಖೆಯ ಪ್ರಥಮ ಸಚಿವರಾಗಿರುವ ಅಮಿತ್ ಶಾ ಅವರು ಕೂಡಾ ಘೋಷಿಸಿದ್ದಾರೆ.

ಆದರೆ, ಅಮಿತ್ ಶಾ ಅವರು ತಮ್ಮ ಈ ‘ಸಹಕಾರ ಹಸ್ತ ಚಾಚುವ’ ಮುಂಚೆ ಸುಪ್ರೀಂ ಕೋರ್ಟು ಇದೇ 20ರಂದು ಬಹುಮತದ ತೀರ್ಮಾನದ ಮೂಲಕ ಸಂವಿಧಾನದ 97ನೇ ತಿದ್ದುಪಡಿಯನ್ನು ಭಾಗಶಃ ರದ್ದು ಮಾಡಿಬಿಟ್ಟಿತು. ಈ ಒಕ್ಕೂಟ ವಿರೋಧಿ
ತಿದ್ದುಪಡಿಯನ್ನು 2011ರಲ್ಲಿ ಜಾರಿ ಮಾಡಿದ್ದು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ! ಅದರ ತ್ವರಿತ ಮುಂದುವರಿಕೆಯೇ
ಶಾ ಅವರ ಹೊಸ ಸಚಿವಾಲಯ!

ಈ ತಿದ್ದುಪಡಿಯು ಸಹಕಾರಿಗಳ ನಿರ್ವಹಣೆಯಲ್ಲೂ ಒಕ್ಕೂಟ ಸರ್ಕಾರ ಮಧ್ಯಪ್ರವೇಶ ಮಾಡಲು ಅವಕಾಶ ಮಾಡಿಕೊಡುತ್ತಿತ್ತು. ರಾಜ್ಯಗಳ ಪಟ್ಟಿಯಲ್ಲಿರುವ ಇಂಥಾ ವಿಷಯಗಳಿಗೆ ಸಾಂವಿಧಾನಿಕ ತಿದ್ದುಪಡಿ ತರಬೇಕೆಂದರೆ ಸಂಸತ್ತಿನ ಎರಡೂ ಸದನಗಳಲ್ಲಿ ಮೂರನೇ ಎರಡರಷ್ಟು ಬಹುಮತ ಹಾಗೂ ಒಟ್ಟಾರೆ ದೇಶದ ಅರ್ಧ ಭಾಗದಷ್ಟು ಶಾಸನ ಸಭೆಗಳಲ್ಲಿ ಮೂರನೇ ಎರಡರಷ್ಟು ಬಹುಮತವನ್ನು ಪಡೆದು ತಿದ್ದುಪಡಿ ಮಾಡಬೇಕಾಗುತ್ತದೆ. ಕಾಂಗ್ರೆಸ್ ಸರ್ಕಾರ ಸಂಸತ್ತಿನಲ್ಲಿ ಬಹುಮತವನ್ನು ಪಡೆದುಕೊಂಡಿದ್ದರೂ ರಾಜ್ಯ ಶಾಸನ ಸಭೆಗಳ ಸಮ್ಮತಿಯನ್ನೇ ಪಡೆದುಕೊಂಡಿರಲಿಲ್ಲ.

ಈ ಕಾಯ್ದೆಯನ್ನು ಸುಪ್ರೀಂ ಕೋರ್ಟು ಭಾಗಶಃ ರದ್ದುಗೊಳಿಸಿದೆ. ಆದರೆ ಅದೇ ಸಮಯದಲ್ಲಿ ಭಾರತದ ನಾಗರಿಕರು ಸಹಕಾರಿಯನ್ನು ರಚಿಸಿಕೊಳ್ಳುವುದು ಮೂಲಭೂತ ಹಕ್ಕೆಂಬುದನ್ನೂ ಬಹುರಾಜ್ಯಗಳಲ್ಲಿ ವ್ಯವಹರಿಸುವ ಸಹಕಾರಿಗಳ ಮೇಲೆ ಒಕ್ಕೂಟ ಸರ್ಕಾರದ ಅಧಿಕಾರವನ್ನೂ ಸುಪ್ರೀಂ ಕೋರ್ಟು ಮಾನ್ಯ ಮಾಡಿರುವುದು ಮತ್ತೊಂದು ವಿಷಯ.

ಹೀಗಾಗಿ ಕೇಂದ್ರ ಸರ್ಕಾರವು ಅತ್ಯಂತ ತುರ್ತಾಗಿ ಹಾಗೂ ಹಲವು ದೂರಗಾಮಿ ಉದ್ದೇಶಗಳನ್ನು ಇಟ್ಟುಕೊಂಡು ಸೃಷ್ಟಿಸಿದ ಹೊಸ ಸಹಕಾರಿ ಸಚಿವಾಲಯಕ್ಕೆ ಪ್ರಾರಂಭದಲ್ಲೇ ದೊಡ್ಡ ತೊಡಕು ಎದುರಾಗಿದೆ. ಇದನ್ನು ಬಗೆಹರಿಸಿಕೊಳ್ಳಬೇಕೆಂದರೆ ಸಾಂವಿಧಾನಿಕ ಪ್ರಕ್ರಿಯೆಯನ್ನು ಹೊಸದಾಗಿ ಪ್ರಾರಂಭಿಸಬೇಕಾಗುತ್ತದೆ. ಉತ್ತರಪ್ರದೇಶ, ಪಂಜಾಬ್ ಹಾಗೂ ಇತರ ರಾಜ್ಯಗಳ ವಿಧಾನಸಭೆ ಚುನಾವಣೆಗಳಿಗೆ ಮುಂಚೆಯಂತೂ ಅದು ಆಗುವ ಸಂಭವ ಕಡಿಮೆ. ಆದರೂ ಬಿಜೆಪಿಗೆ ಈಗಿರುವ ಅಧಿಕಾರ ಬಲವನ್ನು ನೋಡಿದರೆ ಇದೊಂದು ನಿವಾರಿಸಿಕೊಳ್ಳಬಹುದಾದ ಅಡಚಣೆಯೇ ಆಗಿದೆ.

ಸಹಕಾರಿ ಕ್ಷೇತ್ರದಲ್ಲಿ ‘ಭಾರತ ಸರ್ಕಾರ’ ಮತ್ತು ‘ಸಹಕಾರ ಭಾರತಿ’ ತರಬೇಕೆಂದಿರುವ ಬದಲಾವಣೆಗಳು ಮತ್ತದರ ಫಲಾನುಭವಿಗಳು  ಯಾರು ಎಂದು ಅರ್ಥಮಾಡಿಕೊಳ್ಳುವುದಂತೂ ತುರ್ತಾಗಿದೆ.

ಈಗಾಗಲೇ ಸಾಕಷ್ಟು ಚರ್ಚೆಯಾಗಿರುವಂತೆ ಸಹಕಾರಿ ಕ್ಷೇತ್ರವು ಗ್ರಾಮೀಣ ಅರ್ಥಿಕತೆಯಲ್ಲಿ ಅತ್ಯಂತ ಪ್ರಭಾವಿ ವ್ಯವಸ್ಥೆಯಾಗಿದ್ದು ರೈತರ ಬದುಕನ್ನು ಹಾಗೂ ಗ್ರಾಮೀಣ ರಾಜಕೀಯವನ್ನು ನಿಯಂತ್ರಿಸುತ್ತದೆ. ಅಷ್ಟು ಮಾತ್ರವಲ್ಲ. ಗ್ರಾಮೀಣ ಪ್ರದೇಶದ ಪ್ರಭಾವಿ
ಸಮುದಾಯಗಳ ಪ್ರಬಲ ವರ್ಗಗಳಿಗೆ ಮುಂದಿನ ರಾಜಕೀಯಕ್ಕೆ ಚಿಮ್ಮು ಹಲಗೆಯಾಗಿಯೂ ಕೆಲಸ ಮಾಡುತ್ತದೆ. ಸಹಕಾರ ಕ್ಷೇತ್ರ ಪ್ರಬಲವಾಗಿರುವ ಮಹಾರಾಷ್ಟ್ರ, ಕೇರಳ, ಕರ್ನಾಟಕ, ಗುಜರಾತ್ ಇನ್ನಿತರ ರಾಜ್ಯಗಳಲ್ಲಿ ಸಹಕಾರಿ ಕ್ಷೇತ್ರದ ಮೇಲೆ ಹಿಡಿತ ಸಾಧಿಸುವವರು ರಾಜ್ಯದ ರಾಜಕಾರಣದ ಮೇಲೆ ಹಿಡಿತ ಸಾಧಿಸುತ್ತಾ ಬಂದಿದ್ದಾರೆ. ಸಹಕಾರಿ ಕ್ಷೇತ್ರವು ದುರ್ಬಲ ಸಮುದಾಯಗಳಿಗೆ ಕೆಲವು ಆರ್ಥಿಕ ಅನುಕೂಲಗಳನ್ನು ಮಾಡಿಕೊಟ್ಟಿದ್ದರೂ ಗ್ರಾಮೀಣ ಪ್ರದೇಶದ ಸಾಂಪ್ರದಾಯಿಕ ಸಾಮಾಜಿಕ-ಆರ್ಥಿಕ ಅಧಿಕಾರ ರಚನೆಯನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ಎಲ್ಲಾ ರಾಜಕೀಯ ಪಕ್ಷಗಳಿಗೂ ಈ ಸಾಮಾಜಿಕ ಸ್ತರಗಳೇ ಸಾಮಾಜಿಕ ನೆಲೆಗಳೂ ಆಗಿವೆ.

ಕೇಂದ್ರದ ಹೊಸ ಸಚಿವಾಲಯವು ‘ನಿಜಕ್ಕೂ ಜನರ ಸಹಕಾರಿ ಚಳವಳಿಯ ಕ್ಷೇತ್ರವನ್ನಾಗಿ ಮಾಡುವ’ ಉದ್ದೇಶವನ್ನು ಘೋಷಿಸಿದ್ದರೂ ಅದರ ಮೂಲ ಉದ್ದೇಶ ಈಗಿರುವ ಗ್ರಾಮೀಣ ಸಮೀಕರಣವನ್ನು ಮತ್ತಷ್ಟು ಗಟ್ಟಿಗೊಳಿಸಿ ತನ್ನೆಡೆಗೆ ಒಲಿಸಿಕೊಳ್ಳುವುದೇ ವಿನಾ ಅದನ್ನು ಬದಲಿಸುವುದೇನಲ್ಲ.

ಹೊಸ ಸಚಿವಾಲಯವು ಹೊಸ ತಿದ್ದುಪಡಿಗಳೊಂದಿಗೆ ಕಾರ್ಯಾಚರಣೆ ಪ್ರಾರಂಭಿಸಿದರೆ ಈ ಸಹಕಾರಿಗಳ ಹಣದ ಹರಿವು ಹಾಗೂ ಆಡಳಿತಗಳ ಮೇಲೆ ಕೇಂದ್ರೀಯವಾಗಿ ನಿಯಂತ್ರಣ ಸಾಧಿಸಬಹುದು. ಅಥವಾ ಪೂರಕ ರಾಜಕೀಯ ಸಂದರ್ಭವೇ ಇದ್ದರೆ ಪ್ರೋತ್ಸಾಹಿಸಬಹುದು. ಅರ್ಥಾತ್ ಸಾಮ, ದಂಡ ನೀತಿಗಳ ಮೂಲಕ ತನ್ನೆಡೆಗೆ ಒಲಿಸಿಕೊಳ್ಳಬಹುದು. ಇದು ತತ್‌ಕ್ಷಣದ
ರಾಜಕೀಯ ಪ್ರಯೋಜನ.

ಸಹಕಾರಿ ಕ್ಷೇತ್ರವನ್ನು ದೊಡ್ಡ ಕಾರ್ಪೊರೇಟ್ ಆರ್ಥಿಕತೆಗೆ ಪೂರಕವಾಗಿ (ಪ್ರತಿಸ್ಪರ್ಧಿಯಾಗಿ ಅಲ್ಲ) ಹಂತಹಂತವಾಗಿ ಅಭಿವೃದ್ಧಿಪಡಿಸುವ ಉದ್ದೇಶವನ್ನು ಈ ಹೊಸ ಸಚಿವಾಲಯ ಹೊಂದಿದೆ. ಸಹಕಾರಿಗಳಿಗೆ ‘ಸುಲಭವಾಗಿ ವ್ಯವಹಾರ ನಡೆಸಲು ಪೂರಕವಾದ ಔದ್ಯಮಿಕ ಚೌಕಟ್ಟನ್ನು ಒದಗಿಸುವುದು’ ಎಂಬ ಘೋಷಣೆಯಲ್ಲಿ ಅದು ಸ್ಪಷ್ಟವಾಗುತ್ತದೆ. ಇಂದು ಸಹಕಾರಿ ಕ್ಷೇತ್ರದಲ್ಲಿರುವ ಅಂದಾಜು ₹14 ಲಕ್ಷ ಕೋಟಿ ಆರ್ಥಿಕ ಬಲ ಹಾಗೂ ಅಂದಾಜು 27 ಕೋಟಿ ಗ್ರಾಹಕ/ಸದಸ್ಯ/ಉತ್ಪಾದಕರ ಸಾಮಾಜಿಕ ಬಲವನ್ನು ಬಳಸಿಕೊಂಡು ಸಹಕಾರಿ ಕ್ಷೇತ್ರವನ್ನು ಬಹು ಕ್ಷೇತ್ರೀಯ ಉದ್ಯಮವನ್ನಾಗಿ ಬೆಳೆಸುವುದಾಗಿ ಸಹಕಾರ ಭಾರತಿಯ ಮರಾಠೆಯವರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಭಾರತದ ಕೃಷಿಯ ಉತ್ಪಾದನೆ ಹಾಗೂ ಮಾರುಕಟ್ಟೆಗಳಲ್ಲಿ ದೊಡ್ಡದಾಗಿ ಪ್ರವೇಶ ಮಾಡಲಿರುವ ಕಾರ್ಪೊರೇಟ್ ಕಂಪನಿಗಳಿಗೆ ಪೂರಕವಾಗಿ ಕೃಷಿ ಸಹಕಾರಿಗಳನ್ನು ಬಳಸಿಕೊಳ್ಳುವ ಮೂಲಕ ಈ ಪ್ರಕ್ರಿಯೆ ಪ್ರಾರಂಭವಾಗಲಿದೆ. ಕೇಂದ್ರದ ಹೊಸ ಗುತ್ತಿಗೆ ಕೃಷಿ, ಎಪಿಎಂಸಿ ಬೈಪಾಸ್ ಹಾಗೂ ಅಗತ್ಯ ವಸ್ತು ಕಾಯ್ದೆ ನೀತಿಗಳಲ್ಲಿ ಈಗಾಗಲೇ ಕೃಷಿ ಸಹಕಾರಿಗಳನ್ನು ರೈತ ಹಾಗೂ ಕಾರ್ಪೊರೇಟ್ ದೊಡ್ಡ ಬಂಡವಾಳಿಗರ ನಡುವಿನ ದಲ್ಲಾಳಿಗಳ ಹಾಗೆ ಬಳಸಿಕೊಳ್ಳುವ ಪ್ರಸ್ತಾಪವಿದೆ.

ಇದಲ್ಲದೆ ಸಹಕಾರಿ ಕ್ಷೇತ್ರವನ್ನು ವಿಮೆ, ವಿದ್ಯುತ್ ವಿತರಣೆ, ಇನ್ನಿತರ ಕ್ಷೇತ್ರಗಳಿಗೂ ವಿಸ್ತರಿಸುವ ಮಹದಾಶಯ ಈ ಹೊಸ ಸಚಿವಾಲಯಕ್ಕಿದೆ. ಅದಕ್ಕಾಗಿ ಬೇಕಿರುವ ಬಂಡವಾಳವನ್ನು ಮಾರುಕಟ್ಟೆಯಿಂದ ಸಂಗ್ರಹಿಸಲು ಷೇರು ಮಾರುಕಟ್ಟೆ ಪ್ರವೇಶಿಸಲು ಬೇಕಿರುವ ತಿದ್ದುಪಡಿಗಳೇ ‘ಈಸ್ ಆಫ್ ಡೂಯಿಂಗ್ ಬಿಸಿನೆಸ್‌ನ ತಾತ್ಪರ್ಯ’. ಅಲ್ಲಿಗೆ ಯಶಸ್ವಿ ಸಹಕಾರಿಗಳನ್ನು ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆಗೆ ಖರೀದಿಸುವ ಕಾರ್ಪೊರೇಟ್ ಬಂಡವಾಳಿಗರೇ ಅಸಲಿ ಮಾಲೀಕರೂ ಆಗಲಿದ್ದಾರೆ. ತಾತ್ಪರ್ಯವಿಷ್ಟೆ. ಸಹಕಾರಿ ಕ್ಷೇತ್ರದ ಕಾರ್ಪೊರೇಟೀಕರಣ.

ಇದು ಇಂದಿನ ಬಂಡವಾಳಶಾಹಿ ಜಾಗತೀಕರಣದ ಕಾಲಘಟ್ಟದಲ್ಲಿ ಜಗತ್ತಿನೆಲ್ಲೆಡೆ ನಡೆಯುತ್ತಿರುವ ಪ್ರಕ್ರಿಯೆ. ಬಲವಾದ ಸಹಕಾರಿ ರಚನೆಗಳುಳ್ಳ ಅಮುಲ್‌ನಂತಹ ಯಶಸ್ವಿ ಸಹಕಾರಿಗಳು ಸಹ ಜಗತ್ತಿನೆಲ್ಲೆಡೆ ಕಾರ್ಪೊರೇಟ್ ಬಂಡವಾಳಶಾಹಿ ವಲಯ ಸೃಷ್ಟಿಸಿದ ಗ್ರಾಹಕರಿಗೆ ಸೇವೆ ಸಲ್ಲಿಸುತ್ತಿವೆ. ಇಂಥ ಸಹಕಾರಿಗಳ ಮಾರುಕಟ್ಟೆ ಯಶಸ್ಸು ಸಹ ಬಂಡವಾಳಶಾಹಿ ಉಪಭೋಗಿತನದ ನಿರಂತರ ಬೆಳವಣಿಗೆಯ ಮೇಲೆ ಅವಲಂಬಿತವಾಗಿರುತ್ತದೆ. ಹೀಗಾಗಿ ಸಹಕಾರಿಗಳು, ಕಾರ್ಪೊರೇಟ್ ಆರ್ಥಿಕತೆಗೆ ಪೂರಕವಾದ ಮತ್ತೊಂದು ವಿಭಾಗವಾಗುತ್ತವೆ.

ಹಾಗೆ ನೋಡಿದರೆ ಸಹಕಾರಿ ಕ್ಶೇತ್ರವನ್ನು ಬಂಡವಾಳವಾದ ಹಾಗೂ ಸಮಾಜವಾದಗಳ, ಖಾಸಗಿ ಮತ್ತು ಸರ್ಕಾರಿ ಉದ್ಯಮಗಳ ವ್ಯವಸ್ಥೆಯಿಂದ ಹೊರತಾದ ಮೂರನೇ ಜನವಲಯವೆಂದು ಬಣ್ಣಿಸಲಾಗುತ್ತಿತ್ತು. ಆದರೆ, ಒಟ್ಟಾರೆಯಾಗಿ ಕಾರ್ಪೊರೇಟ್ ಬಂಡವಾಳಶಾಹಿ ವ್ಯವಸ್ಥೆಯೇ ಆರ್ಥಿಕತೆ ಮತ್ತು ರಾಜಕೀಯವನ್ನು ಆವರಿಸಿಕೊಂಡಿರುವಾಗ ಸಹಕಾರಿ ಕ್ಷೇತ್ರವೊಂದು ಮಾತ್ರ ಜನ ಆರ್ಥಿಕತೆಯ ದ್ವೀಪವಾಗುಳಿಯಲಾರದು.

ಒಂದೋ ಕೊಪ್ಪದ ಸಹಕಾರಿ ಸಾರಿಗೆಯ ರೀತಿ ಬಂಡವಾಳದ ರಕ್ತಹೀನತೆಯಿಂದ ನಿಧಾನವಾಗಿ ಸಾಯುವಂತೆ ಸರ್ಕಾರವೇ ನೋಡಿಕೊಳ್ಳುತ್ತದೆ. ಇಲ್ಲವೇ ಈ ಸಹಕಾರಿಗಳೇ ನಿಧಾನವಾಗಿ ಕಾರ್ಪೊರೇಟ್ ಆರ್ಥಿಕತೆಯ ಉತ್ಪಾದನೆ ಅಥವಾ ಮಾರುಕಟ್ಟೆ ವಲಯಗಳ ಅಗತ್ಯಗಳನ್ನು ಪೂರೈಸುವ ಮಿರರ್ ಇಮೇಜುಗಳಾಗಿ ಬದಲಾಗುತ್ತವೆ. ಒಂದು ಬಲವಾದ ಸಮಾಜಮುಖಿ ರಾಜಕೀಯ-ಅರ್ಥಿಕ ಸನ್ನಿವೇಶದಲ್ಲಿ ಮಾತ್ರ ಸಹಕಾರಿಗಳು ಜನರಿಗೆ ಸೇವೆ ಸಲ್ಲಿಸುತ್ತವೆ. ಇಲ್ಲದಿದ್ದಲ್ಲಿ ಕಾರ್ಪೊರೇಟುಗಳ ಮಧ್ಯವರ್ತಿಗಳಾಗುತ್ತವೆ. ನಮ್ಮಲ್ಲಿ ಸಹಕಾರಿ ಕ್ಷೇತ್ರಗಳ ಕಾರ್ಪೊರೇಟೀಕರಣ ಘೋಷಿತವಾಗಿದೆ ಹಾಗೂ ತ್ವರಿತವಾಗಿ ನಡೆಯುತ್ತಿದೆ. ಅಷ್ಟೆ ವ್ಯತ್ಯಾಸ.

ಲೇಖಕ: ಸಾಮಾಜಿಕ ಕಾರ್ಯಕರ್ತ

----------------------

ಉದ್ದೇಶ, ಚಟುವಟಿಕೆ ಇನ್ನೂ ಸ್ಪಷ್ಟ ಆಗಿಲ್ಲ

ಸಹಕಾರ ಇಲಾಖೆ, ಸಹಕಾರ ಸಂಸ್ಥೆಗಳು ರಾಜ್ಯದ ಪಟ್ಟಿಯಲ್ಲಿ ಇರುವಂಥದ್ದು. ಇದೀಗ, ಕೇಂದ್ರ ಸರ್ಕಾರ ಕಾಯ್ದೆ ತಂದು ಸಹಕಾರ ಇಲಾಖೆಯನ್ನು ರಚನೆ ಮಾಡಿ, ಅದಕ್ಕೆ ಸಚಿವರನ್ನೂ ನೇಮಿಸಿದೆ. ಆದರೆ, ಇಲಾಖೆ ರಚಿಸಿರುವ ಉದ್ದೇಶ, ಅದರ ಚಟುವಟಿಕೆ ಏನು ಎನ್ನುವುದನ್ನು ಸ್ಪಷ್ಟಪಡಿಸಿಲ್ಲ. ಸಹಕಾರ ಸಂಘಗಳು, ಅದರಲ್ಲೂ ವಿಶೇಷವಾಗಿ ಗ್ರಾಮೀಣ ಭಾಗದ ಸಹಕಾರ ಸಂಘಗಳು, ಕೃಷಿಗೆ ಸಾಲ ನೀಡುವ ಪತ್ತಿನ ಸಹಕಾರ ಸಂಘಗಳನ್ನು ಬಲಪಡಿಸಲು ಈ ಕಾಯ್ದೆ, ಇಲಾಖೆಯ ಮೂಲಕ ಪ್ರಯತ್ನವಾದರೆ ಅನುಕೂಲ. ಆರ್ಥಿಕ ನೆರವು ನೀಡಿದರೆ ರೈತರಿಗೆ ಸಹಾಯವಾಗಲಿದೆ. ಎಷ್ಟೇ ಬ್ಯಾಂಕುಗಳು ಬಂದರೂ ಇನ್ನೂ ಕೊನೆಯ ಸ್ಥಾನದಲ್ಲಿರುವ ರೈತರನ್ನು ತಲುಪಲು ಸಾಧ್ಯವಾಗಿಲ್ಲ. ಹೀಗಾಗಿ, ಈ ಮೂಲಕ ಆ ಉದ್ದೇಶ ಈಡೇರಿದರೆ ಕೇಂದ್ರದ ಪ್ರಯತ್ನ ಸಾರ್ಥಕ ಆಗಬಹುದು. ಅದಕ್ಕೆ ನಾವು ಆರು ತಿಂಗಳು, ಒಂದು ವರ್ಷ ಕಾದು ನೋಡಬೇಕು.

ಇನ್ನೊಂದು ವಿಷಯವೆಂದರೆ, 2011ರ ಡಿಸೆಂಬರ್‌ನಲ್ಲಿ ಸಂವಿಧಾನದ 97ನೇ ತಿದ್ದಿಪಡಿ ಮೂಲಕ ಸಹಕಾರ ಸಂಘಗಳಿಗೆ ಕಾಯಕಲ್ಪ ನೀಡುವ ಪ್ರಯತ್ನವನ್ನು ಅಂದಿನ ಕೇಂದ್ರ ಸರಕಾರ ಮಾಡಿತ್ತು. ಎಲ್ಲ ರಾಜ್ಯಗಳು ಅದನ್ನು ಪಾಲಿಸಬೇಕು ಮತ್ತು ರಾಜ್ಯದ ಕಾಯ್ದೆಗಳಲ್ಲಿ ಬದಲಾವಣೆ ತರಬೇಕು ಎಂದೂ ಹೇಳಿತ್ತು. ಆದರೆ, ಕೆಲವು ರಾಜ್ಯಗಳು ಅದನ್ನು ಒಪ್ಪಿದರೆ, ಕೇರಳವೂ ಸೇರಿದಂತೆ ಕೆಲವು ರಾಜ್ಯಗಳು ಒಪ್ಪಿರಲಿಲ್ಲ. ರಾಜ್ಯಕ್ಕೆ ಸಂಬಂಧಿಸಿದ ವಿಚಾರದಲ್ಲಿ ಕೇಂದ್ರ ಯಾಕೆ ಮಧ್ಯಪ್ರವೇಶಿಸಬೇಕೆಂಬ ಕಾರಣಕ್ಕೆ ಇತ್ತೀಚೆಗೆ ಸುಪ್ರೀಂ ಕೋರ್ಟ್‌ ಈ ಕಾಯ್ದೆಯನ್ನು ವಜಾ ಮಾಡಿದೆ. ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ ಕೇಂದ್ರ ಆರಂಭಿಸಿರುವ ಸಹಕಾರ ಸಚಿವಾಲಯದ ಉದ್ದೇಶ ಊರ್ಜಿತವೇ ಎನ್ನುವುದನ್ನೂ ನೋಡಬೇಕು.

- ರಮಣ ರೆಡ್ಡಿ ಜಿ. ಎಸ್‌., ಮಾಜಿ ಆಡಳಿತ ವ್ಯವಸ್ಥಾಪಕರು, ರಾಜ್ಯ ಅಪೆಕ್ಸ್‌ ಬ್ಯಾಂಕ್

---

ರಾಜಕೀಯ ತೀರ್ಮಾನ, ಸಾಂವಿಧಾನಿಕ ಅಲ್ಲ

ಸಹಕಾರ ಸಚಿವಾಲಯ ಸೃಷ್ಟಿಸುತ್ತಿರುವುದು ಕೇಂದ್ರ ಸರ್ಕಾರದ ರಾಜಕೀಯ ತೀರ್ಮಾನವೇ ಹೊರತು ಸಾಂವಿಧಾನಿಕ ಅಲ್ಲ. ಯಾಕೆಂದರೆ, ‘ಸಹಕಾರ’ ಎನ್ನುವಂಥದ್ದು ರಾಜ್ಯದ ಪಟ್ಟಿಯಲ್ಲಿರುವ ವಿಷಯ. ಒಂದೊಮ್ಮೆ ಈ ವಿಷಯ ರಾಜ್ಯ–ಕೇಂದ್ರದ ಸಹವರ್ತಿ ಪಟ್ಟಿಯಲ್ಲಿರುತ್ತಿದ್ದರೆ ಕೇಂದ್ರಕ್ಕೂ ಅಧಿಕಾರ ಬರುತ್ತಿತ್ತು. ಆದರೆ, ಇದೀಗ ಪ್ರತ್ಯೇಕ ಸಚಿವಾಲಯ ಆರಂಭಿಸುವ ಮೂಲಕ ಈ ವಲಯದಲ್ಲಿ ರಾಜ್ಯಗಳಿಗಿರುವ ಅಧಿಕಾರದ ಮೇಲೆ ಪರೋಕ್ಷವಾಗಿ ನಿಯಂತ್ರಣ ಸಾಧಿಸಲು ಕೇಂದ್ರ ಸರ್ಕಾರ ಹೊರಟಿದೆ.

‘ಸಹಕಾರ ಕ್ಷೇತ್ರ ರಾಜ್ಯ ವಲಯದಲ್ಲಿ ಬರುವುದರಿಂದ ಕೇಂದ್ರ ಸರ್ಕಾರವು ಸಹಕಾರ ಕ್ಷೇತ್ರಕ್ಕೆ ಸಂಬಂಧಿಸಿ ಕಾನೂನು ರೂಪಿಸುವಂತಿಲ್ಲ’ ಎಂದು ಸುಪ್ರೀಂ ಕೋರ್ಟ್‌, ಸಂವಿಧಾನದ 97ನೇ ತಿದ್ದುಪಡಿಯನ್ನು ಇತ್ತೀಚೆಗೆ ರದ್ದುಪಡಿಸಿದೆ. ಶೇ 51ರಷ್ಟು ರಾಜ್ಯಗಳು ಈ ತಿದ್ದುಪಡಿಯನ್ನು ಒಪ್ಪಿಕೊಂಡಿರಲಿಲ್ಲ. ಈ ತಿದ್ದುಪಡಿ ಮೂಲಕ, ಸಹಕಾರ ಕ್ಷೇತ್ರಗಳಲ್ಲಿನ ರಾಜ್ಯಗಳ ಅಧಿಕಾರವನ್ನು ಕಿತ್ತುಕೊಳ್ಳಲು ಕೇಂದ್ರಕ್ಕೆ ಅಧಿಕಾರ ಇಲ್ಲ ಎಂದೂ ನ್ಯಾಯಾಲಯ ಸ್ಪಷ್ಟವಾಗಿ ಹೇಳಿದೆ. ಕೇಂದ್ರದಲ್ಲಿ ಕೃಷಿ ಸಚಿವಾಲಯದ ಅಡಿಯಲ್ಲಿ ಸಣ್ಣ ವಿಭಾಗವಾಗಿದ್ದ, ಜಂಟಿ ಕಾರ್ಯದರ್ಶಿಯೊಬ್ಬರು ನಿಬಂಧಕರಾಗಿದ್ದ ಸಹಕಾರ ಘಟಕವನ್ನು ಈಗ ಕೇಂದ್ರ ಸರ್ಕಾರ ಪ್ರತ್ಯೇಕ ಸಚಿವಾಲಯವಾಗಿ ಮಾಡುತ್ತಿದೆ. ರಾಜಕೀಯವಾಗಿ ಈ ತೀರ್ಮಾನ ಕೈಗೊಂಡಿರುವುದರಿಂದ, ಕೇಂದ್ರ ಸರ್ಕಾರ ಬೆಂಬಲಿತ ಪಕ್ಷಗಳು ಇದನ್ನು ಬೆಂಬಲಿಸುತ್ತಿವೆ. ವಿರೋಧ ಪಕ್ಷವಾದ ಕಾಂಗ್ರೆಸ್‌ ಸಹಜವಾಗಿ ವಿರೋಧ ವ್ಯಕ್ತಪಡಿಸುತ್ತಿದೆ. ಈ ಹಿಂದೆ, 1991ರಲ್ಲಿಯೇ ಕೇಂದ್ರ ಸರ್ಕಾರ ಮಾದರಿ ಸಹಕಾರ ಕಾಯ್ದೆಯನ್ನು ರೂಪಿಸಿತ್ತು. ಅದನ್ನು ಒಂಬತ್ತು ರಾಜ್ಯಗಳು ಮಾತ್ರ ಒಪ್ಪಿಕೊಂಡಿದ್ದವು. ಈಗ  ಸಂಘ ಪರಿವಾರ ಸಂಘಟನೆಯ ಸಹಕಾರ ಭಾರತಿಯ ಪ್ರಚೋದನೆಯಿಂದ ರಾಷ್ಟ್ರೀಯ ಮಟ್ಟದಲ್ಲಿ ಸಹಕಾರ ಇಲಾಖೆ ರಚನೆಯಾಗುತ್ತಿದೆ. ಸಹಕಾರ ವಲಯವನ್ನು ನೇರವಾಗಿ ಹಿಡಿತಕ್ಕೆ ತೆಗೆದುಕೊಳ್ಳಲು ಅವಕಾಶ ಇಲ್ಲದೇ ಇರುವುದರಿಂದ, ಈ ಮೂಲಕ ಪರೋಕ್ಷವಾಗಿ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಕೇಂದ್ರ ಪ್ರಯತ್ನಿಸುತ್ತಿದೆ.

- ಸಿ.ಎನ್‌. ಪರಶಿವಮೂರ್ತಿ, ಸಹಕಾರ ಸಂಘಗಳ ಹೆಚ್ಚುವರಿ ನಿಬಂಧಕ (ನಿವೃತ್ತ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು