ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ನೆಹರೂ ವ್ಯಕ್ತಿತ್ವ, ವೈಚಾರಿಕತೆ ಮುಕ್ತ ಮನಸ್ಸಿನಿಂದ ಅರಿಯಬೇಕಾದ ಕಾಲ

ಮಕ್ಕಳನ್ನು ಬೆಳೆಸುವುದು; ದೇಶ ಕಟ್ಟುವುದು
Last Updated 12 ನವೆಂಬರ್ 2021, 19:31 IST
ಅಕ್ಷರ ಗಾತ್ರ

ಆಧುನಿಕ ಭಾರತವನ್ನು ನಿರ್ಮಿಸಿದ ಶ್ರೇಷ್ಠ ನಾಯಕ ರಲ್ಲೊಬ್ಬರಾದ ಜವಾಹರಲಾಲ್ ನೆಹರೂ ಸ್ವಾತಂತ್ರ್ಯ ಚಳವಳಿಗೆ ಪೂರ್ಣವಾಗಿ ಸಮರ್ಪಿಸಿಕೊಂಡಿದ್ದ ಕಾಲದಲ್ಲಿ, ಮಗಳನ್ನು ಜ್ಞಾನಿಯಾಗಿ ಬೆಳೆಸುವ ಕರ್ತವ್ಯವೂ ಅವರನ್ನು ಕಾಡತೊಡಗಿತು. ಬೋರ್ಡಿಂಗ್ ಸ್ಕೂಲಿನಲ್ಲಿದ್ದ ಹತ್ತು ವರ್ಷದ ಮಗಳು ಇಂದಿರಾ ಭಾರತ, ಇಂಗ್ಲೆಂಡ್‌ಗಳ ಇತಿಹಾಸವನ್ನು ಅಷ್ಟಿಷ್ಟು ಓದಿಕೊಂಡಿದ್ದರಿಂದ, ನೆಹರೂ ತಾವು ಬಲ್ಲ ಜಗತ್ತಿನ ಚರಿತ್ರೆಯನ್ನು ಪತ್ರ ರೂಪದಲ್ಲಿ ಮಗಳಿಗೆ ಬರೆಯತೊಡಗಿದರು. ಅಲ್ಲಿ ಬೆಚ್ಚನೆಯ ಪ್ರೀತಿಯಿತ್ತು; ಮಗಳಿಗೆ ಲೋಕವನ್ನು ನೋಡುವ ಆರೋಗ್ಯಕರ ನೋಟ ಕಲಿಸುವ ಹೊಣೆಯಿತ್ತು. ‘ಲೆಟರ್ ಫ್ರಂ ಎ ಫಾದರ್ ಟು ಹಿಸ್ ಡಾಟರ್’ ಎಂದು 1929ರಲ್ಲಿ ಪ್ರಕಟವಾದ ಪತ್ರಗಳನ್ನು ಕಾದಂಬರಿಕಾರ ಪ್ರೇಮಚಂದ್ ಅವರು ಹಿಂದಿಗೆ ಅನುವಾದಿಸಿ ಜನಪ್ರಿಯಗೊಳಿಸಿದರು. 1941ರಲ್ಲಿ ಕಪಟರಾಳ ಕೃಷ್ಣರಾಯರು ಅವನ್ನು ‘ಮಗಳಿಗೆ ಅಪ್ಪ ಬರೆದ ಪತ್ರಗಳು’ ಎಂದು ಅನುವಾದಿಸಿ ಕನ್ನಡ ಪ್ರಜ್ಞೆಯನ್ನು ಜಾಗೃತಗೊಳಿಸುವ ಕರ್ತವ್ಯ ಮಾಡಿದರು.

ಇಂಥ ಅರ್ಥಪೂರ್ಣ ಸಾಂಸ್ಕೃತಿಕ ಕರ್ತವ್ಯಗಳ ಮುಂದುವರಿಕೆಯಾಗಿ ಹೊಸ ತಲೆಮಾರಿನ ‘ಋತು ಮಾನ’ ಈ ಕನ್ನಡಾನುವಾದವನ್ನು ಪ್ರಿಂಟ್ (store.ruthumana.com) ಹಾಗೂ ಇ-ಪುಸ್ತಕ (ruthumana app) ರೂಪಗಳಲ್ಲಿ ಪ್ರಕಟಿಸಿದೆ. ನೆಹರೂ ಪತ್ರಗಳು ‘ಚರಿತ್ರೆಯನ್ನು ಸರಿಯಾದ ಕ್ರಮದಲ್ಲಿ ಅರಿಯುವುದನ್ನು ಕಲಿಸುತ್ತಲೇ, ಮಕ್ಕಳಲ್ಲಿ ಆಧುನಿಕ ದೃಷ್ಟಿಕೋನ ಮತ್ತು ವೈಚಾರಿಕ ಮನೋಭಾವ’ ಬೆಳೆಸುತ್ತವೆ ಎನ್ನುವ ಪ್ರಕಾಶಕರು, ‘ಇದನ್ನು ನಾವು ಪ್ರಕಟಿಸಲು ಇನ್ನೊಂದು ಸ್ಪಷ್ಟ ಕಾರಣ- ನೆಹರೂ ಸುತ್ತ ದ್ವೇಷದ ಗೋಡೆ ಕಟ್ಟಿ ಅವರ ವ್ಯಕ್ತಿತ್ವವನ್ನು ದಮನಿಸುವ ವಿಷಕಾರಿ ಬೆಳವಣಿಗೆಗಳು’ ಎಂದಿರುವುದು ಗಮನಾರ್ಹವಾಗಿದೆ. ‘ಸ್ವಾತಂತ್ರ್ಯೋತ್ತರ ಹೊಸ ಭಾರತವನ್ನು ಸೆಕ್ಯುಲರ್, ವೈಜ್ಞಾನಿಕ ಚಿಂತನೆಯ ಅಡಿಪಾಯದ ಮೇಲೆ ಕಟ್ಟಬೇಕು’ ಎಂದು ಕನಸಿದ್ದ ನೆಹರೂ ವ್ಯಕ್ತಿತ್ವ, ಉದಾರವಾದಿ ನೋಟ, ಸಾಧನೆಗಳನ್ನು ಈಚಿನ ‘ಚೀರ್ರಾಜಕಾರಣ’ ವ್ಯವಸ್ಥಿತವಾಗಿ ಹಿನ್ನೆಲೆಗೆ ತಳ್ಳಲೆತ್ನಿಸುತ್ತಿದೆ. ಇತ್ತ ಕಾಂಗ್ರೆಸ್ಸಿಗರಲ್ಲಿ ತಮ್ಮ ಪಕ್ಷವೇ ರೂಪಿಸಿದ ವಿಶ್ವನಾಯಕರೊಬ್ಬರ ಮಾದರಿಯನ್ನು ಮರುಸ್ಥಾಪಿಸುವ ತಾತ್ವಿಕ ಬದ್ಧತೆ, ಬೌದ್ಧಿಕ ಸಿದ್ಧತೆಗಳು ಕಾಣೆಯಾಗತೊಡ ಗಿವೆ. ನೆಹರೂ ಜನ್ಮದಿನದ (ನವೆಂಬರ್ 14) ನೆನಪಿನಲ್ಲಾದರೂ ಕಣ್ಣು ಮಬ್ಬಾಗಿರುವ ಕಾಂಗ್ರೆಸ್ಸಿಗರೂ, ‘ಮೆಳ್ಳೆಗಣ್ಣಿನ’ ಕೋಮುವಾದಿಗಳೂ ಈ ಪುಸ್ತಕವನ್ನು ಮುಕ್ತ ಮನಸ್ಸಿನಿಂದ ಓದಬೇಕು; ಮಗಳನ್ನು ಬೆಳೆಸುತ್ತಲೇ ದೇಶದ ಕಿರಿಯರಿಗೂ, ಹಿರಿಯರಿಗೂ ಚರಿತ್ರೆಯನ್ನು ನೋಡುವ ಹೊಸ ನೋಟ ಕೊಟ್ಟು, ದೇಶನಿರ್ಮಾಣದ ತಳಹದಿ ಹಾಕಿದ ನೆಹರೂ ಮಾರ್ಗವನ್ನು ಅರಿತು, ಅನುಸರಿಸಬೇಕು.

ವಾಚಾಳಿ ನಾಲಗೆಗಳು ಗಳಹಿದ್ದೇ ಚರಿತ್ರೆ, ನಾಯಕರಿಗೆ ಭಾಷಣ ಬರೆದುಕೊಡುವ ವಿಕೃತ ಆಸಕ್ತ ಹಿತಗಳು ನೇಯ್ದಿದ್ದೇ ಚರಿತ್ರೆ ಎಂಬ ಬುರುಗು ನೊರೆ ಎದ್ದಿರುವ ಕಾಲದಲ್ಲಿ ನೆಹರೂ ಪತ್ರಗಳ ಮೂಲಕ ಲೋಕವನ್ನು ನೋಡಿದರೆ ನಮ್ಮ ಸಂಕುಚಿತತೆ ಕಡಿಮೆಯಾಗಬಲ್ಲದು. ಮಕ್ಕಳು, ತಂದೆತಾಯಿಗಳು, ಸಮಾಜ ಹಾದಿ ತಪ್ಪದಿರಲು ಚರಿತ್ರೆಯನ್ನು ಹೇಗೆ ಹೇಳಿಕೊಡಬೇಕೆಂಬ ಪಾಠವೂ ಇಲ್ಲಿದೆ: ‘ಈ ಪತ್ರದಲ್ಲಿ ಹೇಳುತ್ತಿರುವುದು ಈ ಜಗತ್ತನ್ನು ಒಟ್ಟಾಗಿ ನೋಡುವುದಕ್ಕೂ, ಅಲ್ಲಿರುವ ಬೇರೆ ಬೇರೆ ಜನರು ನಮ್ಮ ಸಹೋದರ ಸಹೋದರಿಯರೆಂದು ತಿಳಿ ಯುವುದಕ್ಕೂ ನಿನ್ನನ್ನು ತೊಡಗಿಸುವುದೆಂದು ನನ್ನ ನಂಬಿಕೆ.’

‘ಮನೆಯೇ ಮೊದಲ ಪಾಠಶಾಲೆ’ ಎಂಬ ನಾಣ್ಣುಡಿಯ ಅರ್ಥವನ್ನು ತಂದೆಯೊಬ್ಬ ಬರೆದ ಈ ಪತ್ರ-ಪಾಠಗಳು ವಿಸ್ತರಿಸುತ್ತವೆ. ಮುಕ್ತ ಮನಸ್ಸಿನ ಎಳೆಯ ಮಕ್ಕಳಿಗೆ ಯಾವುದೇ ಒಂದು ರೀತಿಯ ವಿಶಾಲ ನೋಟ ಕಲಿಸಿದರೂ ಸಾಕು, ಅವರು ಜಾತಿ, ಧರ್ಮ, ನಾಡುಗಳ ಸಂಕುಚಿತ ಗಡಿಗೆರೆ ಮೀರಿ ಎಲ್ಲರನ್ನೂ ಸಮಾನರನ್ನಾಗಿ ಕಾಣುವ ನೋಟ ಬೆಳೆಸಿಕೊಳ್ಳಬಲ್ಲರು. ಈ ಉದ್ದೇಶದಿಂದ ಮಗಳಿಗೆ ಭೂಮಿ, ಪ್ರಾಣಿ, ಮನುಷ್ಯನ ವಿಕಾಸ, ಭಾಷೆ, ಧರ್ಮ, ಪ್ರಾಚೀನ ಸಂಸ್ಕೃತಿ, ನಾಗರಿಕತೆ…ಎಲ್ಲದರ ಬಗೆಗೂ ಬರೆಯುವ ನೆಹರೂ, ಮಗಳನ್ನು ಜಾಣೆಯಾಗಿಸುತ್ತಲೇ ಉದಾರ ನೋಟವನ್ನೂ ಬೆಳೆಸಲೆತ್ನಿ ಸುತ್ತಾರೆ. ಜನರ ಮೈಬಣ್ಣದ ಬಗ್ಗೆ ಬರೆಯುತ್ತಾ ನೆಹರೂ ಹೇಳುತ್ತಾರೆ: ‘ದೊಡ್ಡ ದೊಡ್ಡ ಮನೆಗಳಲ್ಲಿರುವ ಶ್ರೀಮಂತರು ತಮ್ಮನ್ನೂ, ತಮ್ಮ ರೂಪವನ್ನೂ ಕಾಪಾಡಿ ಕೊಳ್ಳುತ್ತಿರಬಹುದು…ಆದರೆ ಸ್ವತಃ ದುಡಿಯದೆ ಇತರರ ದುಡಿತದ ಮೇಲೆ ಬಾಳುವೆ ಮಾಡುವುದೇನೂ ದೊಡ್ಡತನದ ಲಕ್ಷಣವಲ್ಲ’.

ಭಾಷೆಗಳಲ್ಲಿನ ಹೋಲಿಕೆ, ಏಕತೆ ಕುರಿತು ಬರೆಯುತ್ತಾ, ಭಾಷಿಕರ ನಡುವಣ ಕಚ್ಚಾಟಕ್ಕೆ ಪರಿಹಾರ ಸೂಚಿಸುವ ನೆಹರೂ, ಸಂಸ್ಕೃತಿಯನ್ನು ಚರ್ಚಿಸುತ್ತಾ ಹೇಳುತ್ತಾರೆ: ‘ಸ್ವಾರ್ಥವಿಲ್ಲದೆ ಎಲ್ಲರ ಹಿತಕ್ಕಾಗಿ ಪರರೊಂದಿಗೆ ದುಡಿಯುವ ಮನುಷ್ಯನೇ ಸಂಸ್ಕೃತಿಯ ಹೆಗ್ಗುರುತು. ಒಂಟಿಗನಾಗಿ ದುಡಿಯುವುದಕ್ಕಿಂತ ಒಂದಾಗಿ ದುಡಿಯುವುದು ಮಿಗಿಲಾದ ಕೆಲಸ.’ ಧರ್ಮವನ್ನು ವಿವರಿಸುತ್ತಾ, ‘ಧರ್ಮದ ಕಲ್ಪನೆ ಎಷ್ಟು ಬೆಳೆದರೂ ಧರ್ಮದ ಹೆಸರಿನಲ್ಲಿ ಜನರು ತಮ್ಮಲ್ಲಿ ಕಚ್ಚಾಡುವುದನ್ನು ಇಂದಿಗೂ ನೋಡುತ್ತೇವೆ. ಎಷ್ಟೋ ಜನರಿಗೆ ಧರ್ಮವೆಂದರೆ ಈಗಲೂ ಹೆದರಿಕೆಯ ಮಾತಾಗಿದೆ’ ಎಂದು ಸ್ಪಷ್ಟವಾಗಿ ಹೇಳುತ್ತಾರೆ.

ಎಳೆಯ ಮಗಳನ್ನು ಜನಪರ ಕಾಳಜಿಯ ಜ್ಞಾನಿಯಾಗಿಸಬಲ್ಲ ಕಿವಿಮಾತುಗಳೂ ಇಲ್ಲಿವೆ: ‘ಈಗಿನ ಕಾಲದಲ್ಲಿ ಏನೂ ದುಡಿಯದ ಮನುಷ್ಯನಿಗೆ ಹೆಚ್ಚು ಉಳಿತಾಯವಾಗುತ್ತಿದೆ, ಕಷ್ಟ ಪಡುವವನಿಗೆ ಮಾತ್ರ ಅದರ ಪಾಲು ಸಿಕ್ಕುವುದಿಲ್ಲ.’

‘ನೈಲ್ ಮತ್ತು ಗಂಗಾ ನದಿಗಳು ಅನ್ನ,ನೀರನ್ನು ಕೊಡುತ್ತಿರುವುದೇ ಅವು ಪವಿತ್ರವೆಂದು ತಿಳಿಯಲು ಕಾರಣ.’

ಮಗಳನ್ನು ಮುಕ್ತ ಮನಸ್ಸಿನ ಜಾತ್ಯತೀತ ಪ್ರಜೆ ಯನ್ನಾಗಿ ಬೆಳೆಸುವ ನೆಹರೂ ಮಾರ್ಗ ಎಲ್ಲ ತಂದೆ ತಾಯಿಗಳಿಗೂ ಆದರ್ಶ ಮಾದರಿಯಾಗಿದೆಯಲ್ಲವೆ? ಈ ಮಾತು ಬರೆಯುವಾಗ, ಕನ್ನಡ ಚಿಂತನೆ ಒಂದು ಕಾಲಕ್ಕೆ ನೆಹರೂ ವೈಚಾರಿಕತೆಯಿಂದ ಪ್ರೇರಣೆ ಪಡೆದು, ಬರಬರುತ್ತಾ ನಿರುತ್ಸಾಹ ತಳೆದದ್ದೇಕೆ ಎಂಬ ಪ್ರಶ್ನೆ ಎದುರಾಗುತ್ತದೆ. ನೆಹರೂ ಗುರಿ-ದಾರಿಗಳನ್ನು, ಯೋಜನೆಗಳನ್ನು ಒಪ್ಪದ ಲೋಹಿಯಾರ ಕಟು ವಿಮರ್ಶೆಯ ಪ್ರಭಾವದಿಂದಲೂ ನವ್ಯ ಘಟ್ಟದ ಕನ್ನಡ ಲೇಖಕರು ನೆಹರೂ ಬಗ್ಗೆ ನಿರಾಸಕ್ತರಾದರು; ಹೀಗಾಗಿ ಕನ್ನಡದಲ್ಲಿ ನೆಹರೂ ಚಿಂತನೆಯ ಪ್ರಭಾವ ಕಡಿಮೆಯಾಯಿತು. ತಮ್ಮ ವಿಮರ್ಶೆ ಮೀರಿ ನೆಹರೂ ವ್ಯಕ್ತಿತ್ವವನ್ನು ಗ್ರಹಿಸಬೇಕೆಂದು ಲೋಹಿಯಾರೇ ಸೂಚಿಸಿ ದ್ದನ್ನು ಸಮಾಜವಾದಿ ನಾಯಕ ಕೋಣಂದೂರು ಲಿಂಗಪ್ಪ ನೆನೆಯುತ್ತಾರೆ: ಲೋಹಿಯಾ ಬೆಂಗಳೂರಿನ ಶಾಸಕರ ಭವನದಲ್ಲಿ ಉಳಿದುಕೊಂಡಿದ್ದ ಕಾಲದಲ್ಲಿ ಸಮಾಜವಾದಿ ನಾಯಕರೊಬ್ಬರು ನೆಹರೂ ಟೀಕೆಯಿಂದ ಲೋಹಿಯಾಗೆ ಖುಷಿಯಾಗಬಹುದೆಂದು ನೆಹರೂರನ್ನು ಬಯ್ಯತೊಡಗಿದರು. ಸಿಟ್ಟಿಗೆದ್ದ ಲೋಹಿಯಾ ರೇಗಿದರು: ‘ಏನು ತಲೆಹರಟೆ ಮಾತಾಡ್ತಾ ಇದೀಯಯ್ಯಾ. ನನ್ನ ಜಗಳ ಪ್ರೈಂ ಮಿನಿಸ್ಟರ್ ನೆಹರೂ ಜೊತೆಗೇ ಹೊರತು, ಪಂಡಿತ್ ನೆಹರೂ ಜೊತೆಗಲ್ಲ; ಪಂಡಿತ್ ಜೀ ದೊಡ್ಡ ಮನುಷ್ಯ. ಸ್ವಾತಂತ್ರ್ಯ ಹೋರಾಟದಲ್ಲಿ ಅವರು ಮಾಡಿರೋ ತ್ಯಾಗ ಎಂಥದೂಂತ ನಿನಗೆ ಗೊತ್ತಿದೆಯೆ?’ ನೆಹರೂ ಟೀಕೆಗಾಗಿ ಮಾತ್ರ ಲೋಹಿಯಾ ಹೆಸರು ಪಠಿಸುವ ಬಿಜೆಪಿಗಳು ಲೋಹಿಯಾ ಮಾತನ್ನು ಸರಿಯಾಗಿ ಕೇಳಿಸಿಕೊಳ್ಳಬೇಕು!

ನಟರಾಜ್ ಹುಳಿಯಾರ್
ನಟರಾಜ್ ಹುಳಿಯಾರ್

ಮತ್ತೊಂದು ಪ್ರಸಂಗ: ಒಮ್ಮೆ ಲೋಹಿಯಾರಂತೆಯೇ ನೆಹರೂ ಟೀಕಾಕಾರರಾಗಿದ್ದ ಲಂಕೇಶ್, 1991ರ ವಿಚಾರ ಸಂಕಿರಣವೊಂದರಲ್ಲಿ ಹೇಳಿದರು: ‘ಸರ್ದಾರ್ ಪಟೇಲ್ ಮತ್ತು ನೆಹರೂ ನಡುವೆ, ಪ್ರಧಾನಿಯಾಗಲು ನೆಹರೂ ಅವರನ್ನು ಗಾಂಧೀಜಿ ಆಯ್ಕೆ ಮಾಡಿಕೊಂಡಿದ್ದಕ್ಕೆ ಕಾರಣ: ನೆಹರೂ ಜಾತ್ಯತೀತವಾಗಿ ಎಲ್ಲರನ್ನೂ ಒಟ್ಟಾಗಿಸಿ ದೇಶ ಕಟ್ಟಬಲ್ಲರೆಂಬ ನಂಬಿಕೆ.’ ಈ ಒಳನೋಟವನ್ನು ನೆಹರೂರನ್ನು

ಟೀಕಿಸುವ ಲೋಹಿಯಾವಾದಿಗಳು ಹಾಗೂ ನೆಹರೂ ಕೊಡುಗೆಯನ್ನೇ ಮರೆತಂತಿರುವ ಅಂಬೇಡ್ಕರ್ ವಾದಿಗಳಿಬ್ಬರೂ ಅರಿಯಬೇಕು. ನೆಹರೂ ಚಿಂತನೆ-ಯೋಜನೆಗಳ ಏಳುಬೀಳುಗಳೇನೇ ಇರಲಿ, ಸ್ವಾತಂತ್ರ್ಯ ಚಳುವಳಿಯೇ ಕಲಿಸಿದ ಜವಾಬ್ದಾರಿ, ಲೋಕಸಾಹಿತ್ಯದ ವಿಸ್ತಾರ ಓದು, ಲೇಖಕನ ಆತ್ಮಪರೀಕ್ಷೆ, ವೈಚಾರಿಕತೆ, ಜಾತಿ-ಮತಾತೀತತೆ ಇವೆಲ್ಲವೂ ಅವರನ್ನು ಭಾರತದ ಶ್ರೇಷ್ಠ ಪ್ರಧಾನಮಂತ್ರಿಯನ್ನಾಗಿ ಮಾಡಿವೆ; ಲೋಕದ ದೊಡ್ಡ ನಾಯಕರ ಸಾಲಿನಲ್ಲೂ ಇರಿಸಿವೆ. ನೆಹರೂ ಅವರ ‘ಮಗಳಿಗೆ ಅಪ್ಪ ಬರೆದ ಪತ್ರಗಳು’ ಪುಸ್ತಕದ ಮುಂದುವರಿದ ರೂಪ ‘ಗ್ಲಿಂಪ್ಸಸ್ ಆಫ್ ವರ್ಲ್ಡ್ ಹಿಸ್ಟರಿ’, ‘ಡಿಸ್ಕವರಿ ಆಫ್ ಇಂಡಿಯಾ’, ‘ಆ್ಯನ್ ಆಟೋಬಯಾಗ್ರಫಿ’ ಪುಸ್ತಕಗಳ ಆಳ, ಆರೋಗ್ಯ, ಇಂಗ್ಲಿಷಿನ ಸೊಬಗು ಇವೆಲ್ಲವನ್ನೂ ನೋಡುತ್ತಿದ್ದರೆ, ಈ ದೇಶದ ಪ್ರಧಾನಿಯಾಗುವ ಮುನ್ನ ಅವರ ಸಿದ್ಧತೆ, ಅರ್ಹತೆ ಗಳನ್ನು ಕಂಡು ಹೆಮ್ಮೆಯಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT