ಶನಿವಾರ, ಮೇ 15, 2021
26 °C
ರಾಷ್ಟ್ರಪತಿ, ಉಪರಾಷ್ಟ್ರಪತಿಗೆ ಅನ್ವಯಿಸುವ ನೀತಿ ಪ್ರಧಾನಿ, ಮುಖ್ಯಮಂತ್ರಿಗೂ ಅನ್ವಯವಾಗಬಾರದೇಕೆ?

ವಿಶ್ಲೇಷಣೆ: ಭಾಷಿಕ ಭ್ರಷ್ಟಾಚಾರದತ್ತ ಭಾರತ

ಬರಗೂರು ರಾಮಚಂದ್ರಪ್ಪ Updated:

ಅಕ್ಷರ ಗಾತ್ರ : | |

‘ನಾಗರ ನಾಲಗೆಗಳ ನವಭಾರತ’ ಎಂಬ ನನ್ನ ಲೇಖನವು 2019ರ ಏಪ್ರಿಲ್ ತಿಂಗಳಲ್ಲಿ ‘ಪ್ರಜಾವಾಣಿ’ಯಲ್ಲಿ ಪ್ರಕಟವಾದಾಗ, ನನ್ನ ಸ್ನೇಹಿತರೊಬ್ಬರು ಪ್ರತಿಕ್ರಿಯಿಸಿದ್ದು ಈಗ ಮತ್ತೆ ನೆನಪಾಗುತ್ತಿದೆ. ಅವರು ಹೀಗೆಂದಿದ್ದರು: ‘ನಿಮ್ಮ ಲೇಖನ ಚೆನ್ನಾಗಿದೆ. ಆದರೆ ನಾಗರಗಳು ನಿಮ್ಮ ಮನೆಯ ಮುಂದೆ ಧರಣಿ ಸತ್ಯಾಗ್ರಹ ಮಾಡಬಹುದು’.

ಬಾಯಿಗೆ ಬಂದಂತೆ ವಿಷಪೂರಿತ ಮಾತುಗಳನ್ನಾಡುತ್ತಿದ್ದವರನ್ನು ದಿನಾಂಕ ಸಮೇತ ಉಲ್ಲೇಖಿಸಿ ಆ ಲೇಖನದಲ್ಲಿ ನಾನು ಪ್ರಸ್ತಾಪಿಸಿದ್ದೆ. ಅಂತಹ ನಿರ್ಲಜ್ಜ ನಾಲಗೆಯ ಧರ್ಮಾಂಧರನ್ನು ತಮಗೆ ಹೋಲಿಸಿ ಅವಮಾನ ಮಾಡಲಾಗಿದೆಯೆಂದು ನಾಗರಗಳು ಸಿಟ್ಟಾಗಿ ಧರಣಿ ಕೂರುತ್ತವೆಯೆಂಬ ಮಾತಿನಲ್ಲಿ, ಧರ್ಮಾಂಧರ ವಿಷವು ನಾಗರಗಳ ವಿಷಕ್ಕಿಂತ ಅಪಾಯಕಾರಿಯೆಂಬ ವಿಷಾದದ ವ್ಯಂಗ್ಯ ನನ್ನ ಸ್ನೇಹಿತರ ಮಾತಿನಲ್ಲಿತ್ತು.

ಅಂದಿನ ನನ್ನ ಉಲ್ಲೇಖಗಳಲ್ಲಿ ಧರ್ಮಾಂಧತೆಯ ಹಿಂಸಾತ್ಮಕ ಭಾಷೆ ಬಳಸಿದ ರಾಜಕಾರಣಿಗಳ ಹೆಸರೇ ಹೆಚ್ಚಿದ್ದವು. ಧರ್ಮಾಂಧತೆ ಮತ್ತು ಪಕ್ಷಾಂಧತೆಗಳು ಒಂದಾದಾಗ ಉಂಟಾಗುವ ವಿಷಾತ್ಮಕ ಪರಿಣಾಮವು ಪ್ರಜಾಸತ್ತಾತ್ಮಕ ಮೌಲ್ಯವನ್ನು ಮಣ್ಣು ಮುಕ್ಕಿಸುತ್ತದೆ ಎಂಬುದಕ್ಕೆ ಇತ್ತೀಚಿನ ಚುನಾವಣಾ ಭಾಷಣಗಳು ಪ್ರತ್ಯಕ್ಷ ಸಾಕ್ಷಿಯಾಗಿವೆ.

ಹಿಂಸೆಯೆನ್ನುವುದು ದೈಹಿಕ, ಮಾನಸಿಕ ಮತ್ತು ಭಾಷಿಕ ರೂಪಗಳಲ್ಲಿ ಪ್ರಕಟವಾಗುತ್ತದೆ. ಹಲ್ಲೆಗಳಲ್ಲಿ ದೈಹಿಕ ಹಿಂಸೆ; ಸಾಮಾಜಿಕ ಮತ್ತು ಆರ್ಥಿಕ ಸಂರಚನೆಯ ಅಸಮಾನತೆಯಲ್ಲಿ ಮಾನಸಿಕ ಹಿಂಸೆ; ದೈಹಿಕ ಮತ್ತು ಮಾನಸಿಕ ಹಿಂಸೆಗಳನ್ನು ಪ್ರಚೋದಿಸುವ ಭಾಷಿಕ ಹಿಂಸೆ. ಈ ಮೂರೂ ಒಟ್ಟುಗೂಡಿದ ರಾಜಕೀಯ ವಾತಾವರಣಕ್ಕೆ ನಮ್ಮ ಚುನಾವಣೆಗಳನ್ನು ಬಳಸಲಾಗುತ್ತಿದೆ. ಈಗ ಪಶ್ಚಿಮ ಬಂಗಾಳದ ಚುನಾವಣೆಯನ್ನೇ ಗಮನಿಸಿ; ಪ್ರಧಾನಿ ನರೇಂದ್ರ ಮೋದಿಯವರು ಚುನಾವಣಾ ಪ್ರಚಾರ ವೇದಿಕೆಯಿಂದ ‘ದೀದಿ... ಓ... ದೀದೀ’ ಎಂದು ದನಿಯೇರಿಸಿ ಕೂಗುತ್ತಾರೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ‘ಮೋದಿಯೇನು ದೇವಮಾನವರಾ?’ ಎಂದೆಲ್ಲ ಪ್ರಶ್ನಿಸಿ ಝಾಡಿಸುತ್ತಾರೆ. ಇಲ್ಲಿ ಮೋದಿ ಮತ್ತು ಮಮತಾ ಎಂಬ ವ್ಯಕ್ತಿಗಳಷ್ಟೇ ಮುಖ್ಯವಾಗುವುದಿಲ್ಲ. ಪ್ರಧಾನಿ ಮತ್ತು ಮುಖ್ಯಮಂತ್ರಿಗಳಿಬ್ಬರ ಬೀದಿ ಜಗಳದ ಭಾಷೆಯಾಗಿ ಈ ಪ್ರಸಂಗವನ್ನು ನೋಡಬೇಕು.

ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಸಂವಿಧಾನಾತ್ಮಕ ಸಂಸದೀಯ ನೇತಾರರು ವೋಟಿಗಾಗಿ ಸಲ್ಲದ ಭಾಷೆ ಬಳಸಿ ವೈಯಕ್ತಿಕ ನಿಂದನೆಗೆ ಇಳಿಯುವುದು, ಹಿಂಬಾಲಕರನ್ನು ಪ್ರಚೋದಿಸುವುದು, ಪ್ರಜಾಪ್ರಭುತ್ವದ ನಡೆ-ನುಡಿಗೆ ವಿರುದ್ಧವಾಗಿ ವರ್ತಿಸುವುದು ಖಂಡನೀಯ. ವಾಗ್ಮಿತೆ ಎನ್ನುವುದು ಅಬ್ಬರಿಸಿ ಬೊಬ್ಬಿರಿಯುವ ವಿಧಾನವಲ್ಲ ಎಂಬುದು ಕಡೇಪಕ್ಷ ರಾಷ್ಟ್ರ ಮಟ್ಟದ ನೇತಾರರ ವಿವೇಕವಾಗಬೇಕು. ಹಿಂದೆ ಪ್ರಧಾನಿಗಳಾಗಿದ್ದ ನೆಹರೂ, ಇಂದಿರಾ ಗಾಂಧಿ, ವಾಜಪೇಯಿ ಮುಂತಾದ ವಾಗ್ಮಿಗಳ ಭಾಷಣಗಳನ್ನು ನಾನು ಕೇಳಿದ್ದೇನೆ. ಲಾಲ್‍ಬಹದ್ದೂರ್ ಶಾಸ್ತ್ರಿ, ಮನಮೋಹನ ಸಿಂಗ್, ಐ.ಕೆ.ಗುಜ್ರಾಲ್, ದೇವೇಗೌಡರಂಥವರ ಮೆದುಮಾತುಗಳನ್ನು ಆಲಿಸಿದ್ದೇನೆ. ಕರ್ನಾಟಕದಲ್ಲಿ ಕೆಂಗಲ್ ಹನುಮಂತಯ್ಯ, ನಿಜಲಿಂಗಪ್ಪ, ಕಡಿದಾಳ್ ಮಂಜಪ್ಪ, ದೇವರಾಜ ಅರಸು, ವೀರೇಂದ್ರ ಪಾಟೀಲ್, ಬಂಗಾರಪ್ಪ, ಎಸ್.ಎಂ.ಕೃಷ್ಣ, ವೀರಪ್ಪ ಮೊಯಿಲಿ ಮುಂತಾದವರ ಭಾಷಣಗಳನ್ನು ಕೇಳಿದ್ದೇನೆ. ಇವರಲ್ಲಿ ಯಾರೂ ‘ವಿಷಯ ವಂಚಿತ’ ವಾಗ್ಮಿಗಳಲ್ಲ. ನಿಂದನೆಯ ಆನಂದದಲ್ಲಿ ಸಂಭ್ರಮಿಸುತ್ತಿರಲಿಲ್ಲ.

ಇಂದು ಸಂಸತ್ತು ಮತ್ತು ಶಾಸನಸಭೆಗಳಲ್ಲಿ ‘ಬಹುಪಾಲು’ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ಮೊದಲ ಸಾಲಿನ ನೇತಾರರು ಚುನಾವಣಾ ಭಾಷಣ ಮಾಡುವುದೇ ಹೆಚ್ಚು. ಏಟಿಗೆ ತಿರುಗೇಟು ನೀಡುವ ಅನಿವಾರ್ಯತೆಯಿದ್ದರೂ ಅದು ದಾಖಲೆಗಳನ್ನು ಆಧರಿಸಿದ ವೈಚಾರಿಕ ವಾಗ್ವಾದವಾಗಬೇಕೇ ಹೊರತು ಪಕ್ಷಪೀಡಿತ ಅಪಕ್ವ ಭಾಷಣವಾಗಬಾರದು. ಆದರೆ ಆಂಗಿಕ ಅಭಿನಯದ ಮೂಲಕ ಮೇಜು ಕುಟ್ಟುವ, ಕೆಲವೊಮ್ಮೆ ‘ನೀನೊ ನಾನೊ’ ಎಂಬ ನಡೆನುಡಿಯ ನಾಯಕರೇ ಜನಪ್ರಿಯರೆನ್ನಿಸಿಕೊಳ್ಳುತ್ತಿದ್ದಾರೆ. ಸರ್ಕಾರ ಅಥವಾ ವಿರೋಧ ಪಕ್ಷಗಳ ಯೋಜನೆ, ಯೋಚನೆಗಳನ್ನು ಸೈದ್ಧಾಂತಿಕ ಪರಿಭಾಷೆಯ ಮೂಲಕ ಟೀಕಿಸುವ ಬದಲು ಬೈಗುಳ ಭಾಷೆಯಲ್ಲಿ ಬಾಯಿ ಬಡಾಯಿಸುವವರೇ ‘ಜನಮೆಚ್ಚುವ ನೇತಾರರು’ ಎಂಬಂತೆ ಬಿಂಬಿತರಾಗುತ್ತಿದ್ದಾರೆ. ಬಹುಪಾಲು ಜನರೂ ಇಂಥವರಿಗೇ ಪರಾಕು ಹೇಳುತ್ತಿದ್ದಾರೆ.

ಯಾವ ಮಾರ್ಗದಲ್ಲಾದರೂ ಸರಿ, ಚುನಾವಣೆಯಲ್ಲಿ ಜನರನ್ನು ಮರುಳು ಮಾಡುವ ‘ಮಾತು ಮಂತ್ರವಾದಿ’ಗಳೇ ಇಂದು ಬಹುಪಾಲು ಪಕ್ಷಗಳಿಗೆ ಬೇಕು. ಹೀಗಾಗಿ ಚುನಾವಣೆಯ ಬಹಿರಂಗ ಸಭೆಗಳು ಸವಾಲು- ಪ್ರತಿ ಸವಾಲುಗಳನ್ನು ಕೆಳಮಟ್ಟಕ್ಕೆ ಇಳಿಸಿ, ವೈಯಕ್ತಿಕ ನಿಂದನೆಯಿಂದ ಪ್ರಚೋದಿಸಿ, ಜಾತಿ-ಧರ್ಮಗಳನ್ನು ಧ್ರುವೀಕರಿಸಿ ಪ್ರಜಾಪ್ರಭುತ್ವದ ಶೀಲಹರಣ ಮಾಡುತ್ತಿವೆ.

ಚುನಾವಣೆಯ ಸಂದರ್ಭದಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದ ಆರ್ಭಟಾನಂದರು ಇಂದು ಸಂಸತ್ತು ಮತ್ತು ಶಾಸನಸಭೆಗಳ ಮೊದಲ ಸ್ಥಾನಕ್ಕೆ ಬರುತ್ತಿರುವುದು ವಿಷಾದಕರ ಸಂಗತಿ. ಅಷ್ಟೇ ಅಲ್ಲ, ಕೆಲವು ಧರ್ಮಾಧೀಶರಲ್ಲಿ ರಾಜಕಾರಣಿಗಳೂ ರಾಜಕಾರಣಿಗಳಲ್ಲಿ ಧರ್ಮಾಧೀಶರೂ ಪರಕಾಯ ಪ್ರವೇಶ ಮಾಡಿದ್ದಾರೆ. ಇಂಥವರ ಅಂತರವಿಲ್ಲದ ನಡೆ, ನುಡಿಗಳು ಸಮಾಜದ ಸಾಮರಸ್ಯಕ್ಕೆ ಸವಾಲಾಗುತ್ತಿರುವುದೂ ಉಂಟು. ಇಂತಹ ಸನ್ನಿವೇಶವು ಚುನಾವಣೆಗಳಲ್ಲಿ ತನ್ನದೇ ಪ್ರಭಾವ, ಪರಿಣಾಮಗಳಿಗೆ ಕಾರಣವಾಗುತ್ತಿದೆ.

ಒಟ್ಟಾರೆ, ಸೈದ್ಧಾಂತಿಕ ರಾಜಕಾರಣದ ಜಾಗವನ್ನು ಸಮಯಸಾಧಕ ರಾಜಕಾರಣ ಆಕ್ರಮಿಸಿದೆ. ಬಾಯ್ತುಂಬ ಕೆಸರು ಉಗುಳುವುದು ಚುನಾವಣೆಯ ಚಾಳಿಯಾಗುತ್ತಿದೆ. ಇಂಥ ಚಾಳಿಯವರು ಚಾಳೀಸು ಹಾಕಿಕೊಂಡಾದರೂ ಬಸವಣ್ಣನವರ ‘ನುಡಿದರೆ ಮುತ್ತಿನ ಹಾರದಂತಿರಬೇಕು ಎಂಬ ವಚನವನ್ನೂ ‘ಅನ್ಯರಿಗೆ ಅಸಹ್ಯ ಪಡಬೇಡ| ತನ್ನ ಬಣ್ಣಿಸ ಬೇಡ| ಇದಿರ ಹಳಿಯಲು ಬೇಡ|’ ಎಂಬ ಸಂದೇಶಾತ್ಮಕ ಸಾಲುಗಳನ್ನೂ ಓದಿಕೊಳ್ಳಬೇಕು. ಅಮಲು ಹಿಡಿಸುವ ಅಬ್ಬರಕ್ಕೆ ಬದಲಾಗಿ ಅಲ್ಲಮರ ‘ಅರಿವೇ ಗುರು’ ಆದರ್ಶವಾಗಬೇಕು. ಗಾಂಧೀಜಿಯವರಿಂದ ಸಾಮಾಜಿಕ ಸಹಿಷ್ಣುತೆ, ಅಂಬೇಡ್ಕರ್ ಅವರಿಂದ ಸಾಮಾಜಿಕ ನ್ಯಾಯದ ಪ್ರಜ್ಞೆಯನ್ನು ಮನದ ಮಾತಾಗಿಸಿಕೊಳ್ಳಬೇಕು; ನೆಲದ ನುಡಿಯಾಗಿಸಬೇಕು.

ಆದರೆ ವೋಟಿಗಾಗಿ ಭಾಷಿಕ ಭ್ರಷ್ಟಾಚಾರದಲ್ಲಿ ತೊಡಗಿದವರು ಮಾನಸಿಕವಾಗಿಯೂ ಭ್ರಷ್ಟರೇ ಆಗಿರುತ್ತಾರೆ. ಸುಳ್ಳು ಭರವಸೆಗಳನ್ನು ಭಾಷಿಕ ಭ್ರಷ್ಟಾಚಾರದ ಭಾಗವಾಗಿಸುತ್ತಾರೆ. ತಂತಮ್ಮ ಸಂಸದೀಯ ಸ್ಥಾನಮಾನದ ಘನತೆ ಗಾಂಭೀರ್ಯಗಳನ್ನು ಗಾಳಿಗೆ ತೂರುವವರು ರಾಷ್ಟ್ರ ಮತ್ತು ರಾಜ್ಯಗಳಲ್ಲಿ ಮುಂಚೂಣಿ ನಾಯಕರಾಗುತ್ತಿದ್ದಾರೆ; ಕಡೇಪಕ್ಷ ಪ್ರಥಮ ಸ್ಥಾನದ ನೇತಾರರು ಮಾದರಿಯಾಗಿರಬೇಕೆಂಬ ಅಪೇಕ್ಷೆಯೂ ಅಂಚಿಗೆ ಸರಿಯುತ್ತಿದೆ. ಇಂತಹ ಸನ್ನಿವೇಶದಲ್ಲಿ ನನ್ನಲ್ಲೊಂದು ಪ್ರಶ್ನೆ ಮೂಡುತ್ತಿದೆ; ಪ್ರಧಾನಿ ಮತ್ತು ಮುಖ್ಯಮಂತ್ರಿಗಳು ತಂತಮ್ಮ ಪಕ್ಷದ ಪ್ರತಿನಿಧಿಗಳಾಗಿ ಚುನಾವಣೆ ಪ್ರಚಾರ ಮಾಡುವುದು ಸರಿಯೇ?

ನಿಜ; ಬಹುಮತ ಗಳಿಸಿದ ಪಕ್ಷದ ಶಾಸಕಾಂಗ/ ಸಂಸದೀಯ ನಾಯಕರಾಗಿ ಆಯ್ಕೆಯಾದವರು ಮುಖ್ಯಮಂತ್ರಿ/ ಪ್ರಧಾನ ಮಂತ್ರಿ ಆಗುತ್ತಾರೆ. ಆಯ್ಕೆಯಾಗುವವರೆಗೆ ಅವರು ಪಕ್ಷದ ಪ್ರತಿನಿಧಿಗಳು; ಆಯ್ಕೆಯಾದ ಮೇಲೆ ಅವರು ಪಕ್ಷದ ಪ್ರಧಾನಿಯಲ್ಲ, ದೇಶದ ಪ್ರಧಾನಿ; ಪಕ್ಷದ ಮುಖ್ಯಮಂತ್ರಿಯಲ್ಲ, ರಾಜ್ಯದ ಮುಖ್ಯಮಂತ್ರಿ. ತಂತಮ್ಮ ಪಕ್ಷದ ಪ್ರಣಾಳಿಕೆಯ ಅನುಷ್ಠಾನದ ಹೊಣೆ ಅವರ ಮೇಲಿದ್ದರೂ ಅವರು ಕೇವಲ ಪಕ್ಷದವರಾಗಿ ಉಳಿಯುವುದಿಲ್ಲ; ಯಾವುದೇ ಪಕ್ಷಕ್ಕೆ ಸೇರಿದ ಎಲ್ಲ ಜನರ ಒಳಿತಿಗಾಗಿ ದುಡಿಯುವ ಸಮಗ್ರ ಸಂಕೇತವಾಗಿ ಪ್ರಧಾನಿ ಅಥವಾ ಮುಖ್ಯಮಂತ್ರಿ ಸ್ಥಾನವನ್ನು ಪ್ರತಿನಿಧಿಸಬೇಕು. ಆದ್ದರಿಂದ ರಾಷ್ಟ್ರಪತಿ, ಉಪರಾಷ್ಟ್ರಪತಿಗಳಿಗೆ ಅನ್ವಯಿಸಿರುವ ನೀತಿ ನಿಯಮಗಳನ್ನು ಪ್ರಧಾನಿ ಮತ್ತು ಮುಖ್ಯಮಂತ್ರಿಗಳಿಗೂ ಯಾಕೆ ಅನ್ವಯಿಸಬಾರದು?

ಪಕ್ಷಗಳ ಪ್ರತಿನಿಧಿಯಾಗಿ ಸ್ಪರ್ಧಿಸಿದರೂ ಆಯ್ಕೆಯಾದ ಮೇಲೆ ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿಯವರು ಪಕ್ಷದೂರವಾದ ಪ್ರಜಾಪ್ರಭುತ್ವದ ಪ್ರತಿನಿಧಿಗಳಾಗುತ್ತಾರೆ; ಚುನಾವಣೆ ಪ್ರಚಾರಗಳಿಗಂತೂ ಬರುವಂತಿಲ್ಲ. ಈ ಪದ್ಧತಿಯನ್ನು ರಾಷ್ಟ್ರ ಮತ್ತು ರಾಜ್ಯದ ಪ್ರಜಾಸತ್ತಾತ್ಮಕ ಪ್ರಥಮ ಸ್ಥಾನಿಗಳಾದ ಪ್ರಧಾನಿ ಮತ್ತು ಮುಖ್ಯಮಂತ್ರಿಗಳಿಗೆ ಯಾಕೆ ಅನ್ವಯಿಸಬಾರದು? ಈ ಅಂಶವನ್ನು ಒಂದು ತಿದ್ದುಪಡಿಯಾಗಿ ಸಂವಿಧಾನದಲ್ಲಿ ಸೇರಿಸಬಹುದಲ್ಲವೇ? ಇದು ಮತ್ತಷ್ಟು ಚರ್ಚೆ ಮತ್ತು ಚಿಂತನೆಗಳನ್ನು ಬಯಸುವ ನನ್ನ ಪ್ರಶ್ನೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು