ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕ ಬಜೆಟ್‌–2023 | ಮರೆತುಹೋದ ಸಮಗ್ರ ಬೆಳವಣಿಗೆ ನೀತಿ –ಕೃಷ್ಣಕುಮಾರ್ ಗೌಡ

ಪುನರುಚ್ಚಾರ ಚಾಳಿ ಪ್ರವಾಹ ನಿಯಂತ್ರಣದ ಅವಾಸ್ತವ ಪ್ರಸ್ತಾವ
Last Updated 18 ಫೆಬ್ರುವರಿ 2023, 7:41 IST
ಅಕ್ಷರ ಗಾತ್ರ

ರಾಜ್ಯದ ರಾಜಧಾನಿ ಬೆಂಗಳೂರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಜೆಟ್‌ನಲ್ಲಿ ನೀಡಿರುವ ಯೋಜನೆಗಳು ಹಾಗೂ ಅನುದಾನಗಳು ಹಿಂದೆ ಕೇಳಿದ್ದವೇ ಆಗಿವೆ. ಎರಡು ವರ್ಷಗಳಿಂದ ಇವೇ ಯೋಜನೆಗಳನ್ನು ಬಜೆಟ್‌ನಲ್ಲಿ ಪ್ರಕಟಿಸಲಾಗುತ್ತಿದೆ. ಆದರೆ, ಅವುಗಳ ಅನುಷ್ಠಾನವಾಗದೆ ಮುಂದಿನ ಬಜೆಟ್‌ನಲ್ಲಿ ಒಂದುಚೂರು ಆಗಿರುವ ಕಾಮಗಾರಿಗಳನ್ನು ತೋರಿಸಿ, ಅದನ್ನೇ ಈ ಬಾರಿಯೂ ಪುನರುಚ್ಚರಿಸಲಾಗಿದೆ.

ಅಮೃತ ನಗರೋತ್ಥಾನ ಯೋಜನೆ ಎಂದು ಮೂರು ವರ್ಷಗಳಿಂದಲೂ ಸರ್ಕಾರ ಹೇಳುತ್ತಲೇ ಬಂದಿದೆ. ಅದನ್ನು ಮೂರು ವರ್ಷದ ಅವಧಿಯಲ್ಲಿ ಅನುಷ್ಠಾನ ಮಾಡುವುದಾಗಿ ಹೇಳಿ, ಪ್ರತಿ ಬಜೆಟ್‌ನಲ್ಲೂ ಅದನ್ನೇ ಮತ್ತೆ ತಂದರೆ ಪ್ರಯೋಜನವಾದರೂ ಏನು? ಬೆಂಗಳೂರು ಸಿಲಿಕಾನ್‌ ಸಿಟಿ, ಐಟಿ ಹಬ್‌ ಆಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿದೆ. ಕಳೆದ ಬಾರಿ ಸುರಿದ ಅತಿಯಾದ ಮಳೆ ‘ಮುಳುಗಡೆ ನಗರಿ’ ಎಂಬ ಅಪಖ್ಯಾತಿಯನ್ನು ತಂದುಕೊಟ್ಟಿತು. ಇದನ್ನು ತಡೆಯಲು ವಿಶ್ವಬ್ಯಾಂಕಿನಿಂದ ಮೂರು ಸಾವಿರ ಕೋಟಿ ರೂಪಾಯಿಗಳ ನೆರವಿನೊಂದಿಗೆ ಹವಾಮಾನ ಬದಲಾವಣೆ ಪರಿಣಾಮವನ್ನು ಕಡಿಮೆ ಮಾಡಲು ಮತ್ತು ಪ್ರವಾಹವನ್ನು ನಿಯಂತ್ರಿಸಲು ಯೋಜನೆ ಅನುಷ್ಠಾನ ಮಾಡುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ. ಆದರೆ, ಅವರೇ ಹೇಳು‌ವ ಪ್ರಕಾರ, ಇದಕ್ಕಾಗಿ ನಗರದಲ್ಲಿ ಇರುವ ಎಲ್ಲ ಕೆರೆಗಳಿಗೆ ಸ್ಲ್ಯೂಸ್‌ ಗೇಟ್‌ (ತೂಬು) ಹಾಕಿ ನಿಯಂತ್ರಿಸಲಾಗುತ್ತದೆ. ಒಂದು ಗೇಟ್‌ ಅಳವಡಿಸಿದರೆ ಪ್ರವಾಹ ನಿಯಂತ್ರಣ ಸಾಧ್ಯವೇ ಎಂಬುದನ್ನು ಯಾರಾದರೂ ಅರ್ಥೈಸಿಕೊಳ್ಳಬಹುದು. ಪ್ರವಾಹದ ನಿಯಂತ್ರಣವೆಂದರೆ ಅದಕ್ಕೆ ಕಾಲುವೆಗಳ ನಿರ್ಮಾಣ ಅತ್ಯಂತ ಅಗತ್ಯ. ಅದನ್ನೂ ಹೇಳಿದ್ದಾರೆ. ಅದಕ್ಕೂ ₹1,500 ಕೋಟಿ ವ್ಯಯಮಾಡುತ್ತಿದ್ದಾರೆ.

ಹವಾಮಾನ ಬದಲಾವಣೆ ಪರಿಣಾಮವನ್ನು ಕಡಿಮೆ ಮಾಡಲು ಕೇವಲ ಪ್ರವಾಹ ನಿಯಂತ್ರಣ, ಕೆರೆಗಳಿಗೆ ಗೇಟ್‌ ಅಳವಡಿಸು ವುದು ಎಂದು ಯೋಜಿಸಲಾಗಿದೆ. ನಗರದಲ್ಲಿ ತಾಪಮಾನ ಹೆಚ್ಚಾಗುತ್ತಿರುವು ದಕ್ಕೆ ಹಲವಾರು ಕಾರಣಗಳಿವೆ: ಹಸಿರು ಹೊದಿಕೆ ಕಡಿಮೆ, ಉದ್ಯಾನ ಗಳಲ್ಲಿ ಸ್ವಚ್ಛತೆ, ವಾಯುಮಾಲಿನ್ಯ, ಇಂಗುಗುಂಡಿಗಳ ನಿರ್ಮಾಣ ಕಡಿಮೆ ಇರುವುದು ಹೀಗೆ. ವರ್ಷಕ್ಕೆ 15 ಲಕ್ಷ ಸಸಿಗಳನ್ನು ನೆಟ್ಟರೆ ಹವಾಮಾನ ಬದಲಾವಣೆಯನ್ನು ತಡೆಯಲು ಸಾಧ್ಯವಾಗುವುದಿಲ್ಲ.

ಇನ್ನು ಒಂದೆರಡು ಮೇಲ್ಸೇತುವೆ ಅಥವಾ ಎಲಿವೇಟೆಡ್‌ ರಸ್ತೆಯಿಂದ ಸಂಚಾರ ದಟ್ಟಣೆ ಕಡಿಮೆಯಾಗುವುದಿಲ್ಲ. ರಸ್ತೆ ನಿರ್ಮಾಣದ ಸಂದರ್ಭದಲ್ಲಿ ಮೂಲತಃ ಬೇಕಿರುವ ಸೌಲಭ್ಯಗಳನ್ನು ಒದಗಿಸದೆ, ಗುಂಡಿಮುಕ್ತ ರಸ್ತೆಯನ್ನು ನಿರ್ಮಿಸದೆ ಯಾವ ದಟ್ಟಣೆಯನ್ನೂ ನಿಯಂತ್ರಿಸಲು ಸಾಧ್ಯವಿಲ್ಲ. ಜಂಕ್ಷನ್‌ಗಳಲ್ಲಿ ರಸ್ತೆಯನ್ನು ಸೂಕ್ತವಾಗಿ ನಿರ್ವಹಣೆ ಮಾಡಿದ್ದೇ ಆದಲ್ಲಿ, ಅಂದರೆ ರಸ್ತೆ ಗುಂಡಿಗಳಿಲ್ಲದೆ, ಅಡೆತಡೆಗಳಿಲ್ಲದೆ ರಸ್ತೆ ಇದ್ದರೆ ಸಾಕಷ್ಟು ದಟ್ಟಣೆ ಕಡಿಮೆಯಾಗುತ್ತದೆ. ಒಂದು ಮೇಲ್ಸೇತುವೆಯಿಂದ ಇಳಿಯುವ ವಾಹನ ಮುಂದೆ ಸರಾಗವಾಗಿ ಸಂಚರಿಸುವಂತೆ ಮಾಡುವ ಯೋಜನೆಗಳೂ ಅತ್ಯಗತ್ಯ.

ಬಜೆಟ್‌ನಲ್ಲಿ ಹಳೆಯವೂ ಸೇರಿದಂತೆ ಹೊಸದಾಗಿಯೂ ಅನೇಕ ಘೋಷಣೆಗಳನ್ನು ಮಾಡಲಾಗಿದೆ. ಇವೆಲ್ಲವೂ ಹೇಳಿದ ಗಡುವಿಗೆ ಅನುಗುಣವಾಗಿ ಅನುಷ್ಠಾನವಾದರೆ ನಮ್ಮ ಬೆಂಗಳೂರಿಗೆ ಸ್ವಲ್ಪವಾದರೂ ಪರಿಹಾರ ಸಿಗುತ್ತದೆ. ಮುಂದಿನ ದಿನಗಳಲ್ಲಿ ನಮ್ಮ ಮೆಟ್ರೊ, ಸಬರ್ಬನ್ ರೈಲು, ಪಿಆರ್‌ಆರ್‌, ಎಸ್‌ಟಿಆರ್‌ಆರ್‌ ಕಾಮಗಾರಿ ವೇಗ ಪಡೆಯಬೇಕಿದೆ. ಕೆಂಗೇರಿ ಹಾಗೂ ಹುಸ್ಕೂರು ಹೊಸ ರೈಲು ಮಾರ್ಗ, ಕನಕಪುರ ರಸ್ತೆ ವಿಸ್ತರಣೆ, ತಲಘಟ್ಟಪುರ ಬಳಿ ಹೊಸ ಬಸ್ ನಿಲ್ದಾಣಗಳ ಕಾಮಗಾರಿಗಳೂ ಕನಿಷ್ಠ ಅವಧಿಯಲ್ಲಿ ಪೂರ್ಣಗೊಳ್ಳಬೇಕು. ನಗರದ ಹೊರವಲಯ ಅತ್ಯಂತ ವೇಗವಾಗಿ ಬೆಳೆಯುತ್ತಿದ್ದರೂ ಅದಕ್ಕೆ ಪೂರಕವಾಗಿರುವ ಯೋಜನೆಗಳನ್ನು ಪ್ರಕಟಿಸಿಲ್ಲ. ಇಷ್ಟಾದರೂ, ಈ ಬಜೆಟ್‌ನಲ್ಲಿರುವ ಯೋಜನೆಗಳನ್ನು ಮುಂದಿನ ಬಜೆಟ್‌ನಲ್ಲಿ ಮತ್ತೆ ಪ್ರಸ್ತಾಪಿಸಬಾರದು. ಅಂದರೆ ಅಷ್ಟರೊಳಗೆ ಎಲ್ಲ ಕಾಮಗಾರಿಗಳನ್ನೂ ಮುಗಿಸಬೇಕು. ಇದರ ಜೊತೆಗೆ ನಗರದ ಸಮಗ್ರ ಬೆಳವಣಿಗೆಗೆ ಒಂದು ನೀತಿ ರಚನೆಯಾಗಬೇಕು. ಅದನ್ನು ಈ ಬಜೆಟ್‌ನಲ್ಲಿ ನಿರೀಕ್ಷಿಸಲಾಗಿತ್ತು. ಆದರೆ ಅದು ಸಾಧ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ಇಂತಹ ನೀತಿ ರೂಪುಗೊಳ್ಳಲೇಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT