ಭಾನುವಾರ, ನವೆಂಬರ್ 29, 2020
25 °C

ಸಂಬಳ ಕೊಟ್ಟೀತೇ ಕನ್ನಡ? ಬಹುಭಾಷೆಯ ನಡುವೆ ಕನ್ನಡದ ಸ್ವಗತ...

ವೇಣು ಶರ್ಮ Updated:

ಅಕ್ಷರ ಗಾತ್ರ : | |

kannada

ಭಾಷೆಯ ಉಳಿವಿನ ಹೋರಾಟದ ಧ್ವನಿ ಒಂದೆಡೆ. ತಲ್ಲಣದ ಕಾಲಘಟ್ಟದಲ್ಲಿ ವಾಸ್ತವದ ನೆಲೆಗಟ್ಟಿನಲ್ಲಿ ಕನ್ನಡದ ಬಗ್ಗೆ ಮಾತನಾಡಬೇಕು ಅನಿಸಿತು.

ಇಂದು ಕನ್ನಡಕ್ಕೆ ಬೇರೆ ಭಾಷೆಯ ಬೆದರಿಕೆ, ಹೇರಿಕೆ, ಬೇರೆ ಭಾಷಿಕರ ದಾಳಿ, ಬೇರೆ ಭಾಷೆಯವರು ಕಸಿದುಕೊಳ್ಳುತ್ತಿರುವ ಕನ್ನಡತನ ಇತ್ಯಾದಿ ಹೇಳಿಕೆಗಳು ಅಥವಾ ಒಮ್ಮೊಮ್ಮೆ ಕ್ಲೀಷೆಯ ಪದಪುಂಜಗಳೆನಿಸಿಕೊಳ್ಳುವ ಸಂಗತಿಗಳಿಂದ ಆಚೆ ಒಂದು ದೃಷ್ಟಿ ಹರಿಸೋಣ. 

ಕನ್ನಡ ಅನ್ನದ ಭಾಷೆ ಆಗಬೇಕು. ಅರ್ಥಾತ್‌ ಸಂಬಳ ಕೊಡುವ, ಹಸಿವು ತಣಿಸುವ ಭಾಷೆಯಾಗುವ ವಿಚಾರದಲ್ಲಿ ಎಷ್ಟು ಗಟ್ಟಿಯಾಗಿದೆ ಎಂಬುದನ್ನು ಅವಲೋಕಿಸುವ ಸಂದರ್ಭ ಇದು. 

ಸ್ವಲ್ಪ ನನ್ನ ಬದುಕಿನ ಭಾಷಾ ಹಿನ್ನೆಲೆಯನ್ನು ಹೇಳಿಕೊಳ್ಳುತ್ತೇನೆ.

ಮರಾಠಿ ನನ್ನ ಮಾತೃಭಾಷೆ. ಮೂಲತಃ ಮಹಾರಾಷ್ಟ್ರದಿಂದ ವಲಸೆ ಬಂದು ಕೇರಳದ ಕಾಸರಗೋಡಿನಲ್ಲಿ ನೆಲೆಸಿರುವ ಕುಟುಂಬದಲ್ಲಿ ಹುಟ್ಟಿ ಬೆಳೆದವನು. ಮಂಗಳೂರಿನ ಅಲೋಶಿಯಸ್‌ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿದ್ದ ತಂದೆಯವರಿಂದ ಕನ್ನಡವನ್ನು ಸ್ಪಷ್ಟವಾಗಿ ಕಲಿತವನು. ತುಳು, ಕೊಂಕಣಿ, ಮಲೆಯಾಳವನ್ನು ನನ್ನೂರು ಕಲಿಸಿತು. ಬೆಂಗಳೂರಿನಲ್ಲಿ 15 ವರ್ಷ ದುಡಿದಾಗ ಬೆಂಗಳೂರು ತಮಿಳು ಕಲಿಸಿತು. ಇಂಗ್ಲಿಷ್-ಹಿಂದಿ ನನ್ನ ಉದ್ಯಮದ, ಊಟದ ಭಾಷೆ. ಕನ್ನಡ ನನ್ನ ಬದುಕಿನ, ಅಂತರಾತ್ಮದ ಭಾಷೆ.

ಏಳೆಂಟು ಭಾಷೆಯನ್ನು ಬಲ್ಲ ನಾನು ಕನ್ನಡಾಭಿಮಾನಿ. ಕನ್ನಡದ ಉಳಿವು ಮತ್ತು ಒಳಿತಿಗಾಗಿ ಈ ಬಾರಿಯ ಕನ್ನಡ ದಿನಕ್ಕೆ ನನ್ನ ಅಭಿಲಾಷೆಯ ನೀತಿ ರೂಪಣೆ ಮೊದಲು (POLICY FIRST)  ಚಿಂತನೆಯ ‘ಮೈ ಅಂತರಾತ್ಮ’ದ 11 ಸೂತ್ರಗಳನ್ನು ಹಂಚಿಕೊಳ್ಳಲು ಇದು ಸಕಾಲ.

1. ಪೀಠಿಕೆಯಲ್ಲೇ ಹೇಳಿದಂತೆ ಕನ್ನಡವು ಹಸಿವು ತಣಿಸುವ, ಸಂಬಳ ನೀಡುವ ದುಡಿತದ ಭಾಷೆಯಾಗಿ ಬೆಳೆಯಲಿ.

2. ಪುಳಕಿತಗೊಳಿಸುವ ನಾಡಗೀತೆ ‘ಜೈ ಭಾರತ ಜನನಿಯ ತನುಜಾತೆʼ ಸಂಗೀತ-ಸಾಹಿತ್ಯದ ಆಶಯ ನಮ್ಮ ಅಂತರಾತ್ಮದೊಳಗೆ ಬೀಜವಾಗಿ ಹುಟ್ಟಿ ಮೊಳಕೆಯೊಡೆದು ಹೆಮ್ಮರವಾಗಿ ಬೆಳೆಯಲಿ.

3. ಯುವ ಜನಾಂಗ, ಶಾಲಾ ಮಕ್ಕಳು, ಹೊಸ ತಲೆಮಾರು ದಿನಕ್ಕೊಂದು ಕನ್ನಡ ಪದವನ್ನು, ವಾಕ್ಯವನ್ನು ಬರೆದು ಕಲಿಯಲಿ.

4. ಹಳೆ ಬೇರು ಹೊಸ ಚಿಗುರು ಎಂಬಂತೆ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಚಿಗುರು ಬೆಳೆಯಲು, ಹಳೆ ಬೇರು ಅವಕಾಶ ನೀಡಿ ಹುರಿದುಂಬಿಸಲಿ. ಯುವಕರ ಹೊಸ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ‘ಹಿರಿತನದ’ ಕೆಲಸವಾಗಲಿ.

5. ಸಾಹಿತ್ಯ ಕ್ಷೇತ್ರವು ಎಡ-ಬಲ ಪಂಥವಾಗಿ ಒಡೆಯದೆ, ಕನ್ನಡವೇ ಒಂದು ಪಂಥವಾಗಿ ಒಂದುಗೂಡಿ ಬೆಳೆಯಲಿ. ಕನ್ನಡಕ್ಕಾಗಿ ದನಿ ಎತ್ತಿದವರನ್ನು ಹಣಿಯುವ ಕೆಲಸ ಆಗದಿರಲಿ.

6. ವಿಶ್ವದ ಭಾಷೆಗಳ ಬದುಕಿನ ಸಾಹಿತ್ಯ ಕನ್ನಡಕ್ಕೆ ಭಾಷಾಂತರಗೊಂಡು ಜನ-ಭಾವದಲ್ಲಿ ‘ವಸುದೈವ ಕುಟುಂಬಕಂ’ಎನ್ನುವ ಉದಾತ್ತ ಚಿಂತನೆಯಲ್ಲಿ ಬೆಳೆಯಲಿ.

7. ಕನ್ನಡ ಭಾಷೆಯಲ್ಲಿ ರಾಜಕೀಯದ ಬಣ್ಣ ಸೇರದಿರಲಿ. ಅದು ರಾಜಕೀಯದ ಸಂಕೋಲೆಯಿಂದ ಕಳಚಿಕೊಂಡು ತನ್ನದೇ ಹಾದಿಯಲ್ಲಿ ಹೆಜ್ಜೆ ಇಡುತ್ತಾ ಮುನ್ನಡೆಯಲಿ. ನವೆಂಬರ್ 1 ಎಂಬ ಒಂದು ದಿನ-ವಾರದ ಕಾರ್ಯಕ್ರಮವನ್ನು ಮೀರಿ, ಎಲ್ಲ ಕಂಟಕವನ್ನು ಮೀರಿ ಬೆಳೆಯಲಿ.

8. ಕನ್ನಡ ಭಾಷೆ ಉಳಿಸುವ ಹೋರಾಟ ದಂದೆಗಳಿಂದ ಹೊರಬಂದು ಶ್ರೀಗಂಧ ಕಂಪು ಬೀರಲಿ.

9. ಕನ್ನಡ ‘ಎನ್ನಡಾ’ ಎಂಬಂತಾಗದೆ ಕನ್ನಡ, ಕಂಗ್ಲಿಷ್, ಹಿಂಗ್ಲಿಷ್, ಬ್ಯಾಂಗ್ಲಿಷ್, ತೆಲುಗಿಷ್ ಆಗದಂತೆ ಜಾಗೃತೆ ವಹಿಸಿ.

10. ಮನೆಯೊಳಗಿನ ಕನ್ನಡ ಸ್ನೇಹಿತರೊಂದಿಗಿನ ಭಾಷೆಯಾಗಿ, ಶಾಲಾ ಮಕ್ಕಳು ಮಾತನಾಡುವ ಭಾಷೆಯಾಗಿ, ಅಂಗಡಿ ವ್ಯವಹಾರ ಭಾಷೆಯಾಗಿ, ಮೂಲ ಶಿಕ್ಷಣದ ಭಾಷೆಯಾಗಿ ಬೆಳೆದು ವಿದೇಶಿ ಭಾಷೆಗಿಂತ ಮಿಗಿಲಾಗಿ ಬೆಲೆಯುವ ಕಾನೂನು ರಚನೆಯಾಗಲಿ.

11. ಕೊನೆಯದಾಗಿ, ಕನ್ನಡ ಭಾಷೆಯನ್ನು ಎತ್ತರಿಸಲು, ಅದರ ಉಳಿವು, ಒಳಿತಿಗಾಗಿ ಸರ್ಕಾರ, ಕನ್ನಡ ಸಂಘಟನೆಗಳು, ಸಾಹಿತ್ಯ ಪರಿಷತ್, ಅಕಾಡೆಮಿ, ವಿಶ್ವವಿದ್ಯಾನಿಲಯಗಳು ಹಾಗೂ ಮಾಧ್ಯಮಗಳು ಮುಂದಿನ ಐದು ವರ್ಷಗಳ ಸ್ಪಷ್ಟ ರೂಪುರೇಷೆ-ನೀಲಿ ನಕ್ಷೆ ರೂಪಿಸಲು ಕನ್ನಡ ದಿನ ವೇದಿಕೆಯಾಗಲಿ.

ಎಲ್ಲ ಕನ್ನಡ ಮನಸ್ಸುಗಳು ಒಂದಾಗಿ ಶ್ರಮಿಸಿದಲ್ಲಿ ಇದು ಸಾಧ್ಯ.


ವೇಣು ಶರ್ಮ

ಲೇಖಕ: ಸಂಸ್ಥಾಪಕ, ಮೈ ಅಂತರಾತ್ಮ.ಆರ್ಗ್‌ (myantharathma.org)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು