ಗುರುವಾರ , ಜೂನ್ 30, 2022
22 °C

ಅರವಿಂದ ಚೊಕ್ಕಾಡಿಯವರ ಲೇಖನ: ಗಾಂಧೀಜಿಯ ಮರುಹುಟ್ಟಿನ ‘ಮೌನ’

ಅರವಿಂದ ಚೊಕ್ಕಾಡಿ Updated:

ಅಕ್ಷರ ಗಾತ್ರ : | |

ಗಾಂಧೀಜಿ ಹತ್ಯೆಯಾದ ದಿನ ಜನವರಿ 30ರಂದು ಬೆಳಗ್ಗೆ 11 ಗಂಟೆಗೆ ಶಾಲೆಯಲ್ಲಿ ಗಂಟೆ ಹೊಡೆಯುವ ಪದ್ಧತಿ ಇತ್ತು. 30 ವರ್ಷಗಳ ಹಿಂದೆ ಇದ್ದಂತಹ ಪದ್ಧತಿ ಅದು. ಆಗ ಒಂದು ನಿಮಿಷ ಮೌನ ಪ್ರಾರ್ಥನೆಯನ್ನು ಮಾಡಿ, ಎಲ್ಲ ಹುತಾತ್ಮರನ್ನು‌ ನೆನಪಿಸಿಕೊಳ್ಳುವ ಕ್ರಮವಿತ್ತು. ನಂತರದ ದಿನಗಳಲ್ಲಿ ವರ್ತಮಾನದ ವಿವಿಧ ತಂಡಗಳು ಸ್ವಾತಂತ್ರ್ಯ ಹೋರಾಟಗಾರರನ್ನು ಹಂಚಿಕೆ ಮಾಡಿಕೊಳ್ಳುತ್ತಾ ಹೋದ ಹಾಗೆ ಹುತಾತ್ಮರ ದಿನಾಚರಣೆಯ ರೂಪ ಬದಲಾಗತೊಡಗಿತು.

ಈ ಬದಲಾವಣೆಯಲ್ಲಿ ತಾತ್ವಿಕವಾದ ವಿಚಿತ್ರ ವಿಡಂಬನೆ ಇದೆ. ಗಾಂಧೀಜಿ ಒಬ್ಬ ಶುದ್ಧ ಧಾರ್ಮಿಕ ಹಿಂದೂ. ಸ್ವಾತಂತ್ರ್ಯ ಹೋರಾಟವನ್ನು ಅವರೊಬ್ಬರೇ ಮಾಡಿದ್ದೂ ಅಲ್ಲ, ಅವರೊಬ್ಬರೇ ನಾಯಕರಾಗಿ ಇದ್ದದ್ದೂ ಅಲ್ಲ. ಆದರೆ ಎಲ್ಲ ಭಿನ್ನ ಸಿದ್ಧಾಂತಿಗಳು ಮತ್ತು ಸಿದ್ಧಾಂತವೇ ಇಲ್ಲದವರು ನಡೆಸಿದ ಸ್ವಾತಂತ್ರ್ಯ ಹೋರಾಟವನ್ನು ಗಾಂಧೀಜಿ ಪ್ರತಿನಿಧಿಸುತ್ತಾರೆ. ಈ ಪ್ರತಿನಿಧಿತ್ವಕ್ಕೆ ಮುಖ್ಯವಾದ ಕಾರಣಗಳು ಎರಡು: ಗಾಂಧೀಜಿಯ ಹೊರತಾಗಿ ಉಳಿದೆಲ್ಲರ ಸ್ವಾತಂತ್ರ್ಯ ಹೋರಾಟವು ಬ್ರಿಟಿಷ್ ಪ್ರಭುತ್ವದ ದಾಸ್ಯದಿಂದ ಬಿಡುಗಡೆ ಪಡೆಯುವುದಕ್ಕಾಗಿ ನಡೆದಿತ್ತು. ಆ ಗುರಿ ಈಡೇರಿದ ನಂತರ ಆ ಎಲ್ಲ ಸ್ವಾತಂತ್ರ್ಯ ಹೋರಾಟಗಾರರು ಗೌರವಕ್ಕೆ ಅರ್ಹರಾಗುತ್ತಾರೆ. ಆದರೆ ಬ್ರಿಟಿಷರಿಲ್ಲದ ನಾಡಿನಲ್ಲಿ ಅವರಿಗೆ ವೈಚಾರಿಕ ಪ್ರಸ್ತುತತೆ ಇರುವುದಿಲ್ಲ. ಗಾಂಧೀಜಿಯದ್ದು ಬ್ರಿಟಿಷ್ ದಾಸ್ಯದ ವಿರೋಧಿ ಹೋರಾಟವೂ ಆಗಿತ್ತು, ಸ್ವರಾಜ್ಯಕ್ಕಾಗಿನ ಹೋರಾಟವೂ ಆಗಿತ್ತು. ಬ್ರಿಟಿಷರು ಹೋದ ಕೂಡಲೇ ಸ್ವರಾಜ್ಯದ ಸಾಕಾರವಾಗಲಿಲ್ಲ. ಆದ್ದರಿಂದ ಸ್ವರಾಜ್ಯದ ಸಾಕಾರವಾಗುವವರೆಗೂ ಗಾಂಧೀಜಿಗೆ ವೈಚಾರಿಕ ಪ್ರಸ್ತುತತೆ ಇರುತ್ತದೆ.


ಅರವಿಂದ ಚೊಕ್ಕಾಡಿ

ಎರಡನೆಯದಾಗಿ, ಗಾಂಧೀಜಿ ಪ್ರಕೃತಿಯ ಸಹಜ ಅಸ್ತಿತ್ವದ ಹಾಗೆ. ಗುರಿಯೊಂದು ಇರುವುದು ಮನುಷ್ಯರಿಗೆ. ಗುರಿ ಎನ್ನುವುದು ಕೃತಕ. ನಿಜವಾಗಿ ಗುರಿ ಎನ್ನುವುದು ಇರುವುದಿಲ್ಲ. ಗುರಿಯನ್ನು ಜನರು ಕಂಡುಕೊಳ್ಳುತ್ತಾರೆ.

‘ಯಾನ’ ಸಹಜವಾದದ್ದು. ಯಾನ ಮನುಷ್ಯರಿಗೆ ಮಾತ್ರ ಇರುವುದಲ್ಲ. ಪ್ರಾಣಿ, ಪಕ್ಷಿ, ನೀರು, ಗಾಳಿ, ಬೆಳಕು, ಭೂಮಿ, ಸೂರ್ಯ, ಚಂದ್ರ ಎಲ್ಲಕ್ಕೂ ‘ಯಾನ’ ಇದೆ. ಚಲನೆಯೇ ಸೃಷ್ಟಿಯ ಶಾಶ್ವತ, ಸಹಜ ಸ್ಥಿತಿ. ಉಳಿದೆಲ್ಲ ಸ್ವಾತಂತ್ರ್ಯ ಹೋರಾಟಗಾರರದ್ದು ‘ಗುರಿ’ ಪ್ರಧಾನ ಆಗಿದ್ದರೆ, ಮುತ್ಸದ್ದಿ ನೆಹರೂ, ಚತುರ ರಾಜಾಜಿ, ಯೋಧ ಬೋಸ್, ನಿಷ್ಠ ಪಟೇಲ್- ಇವರೆಲ್ಲರೊಂದಿಗಿದ್ದೂ ಇವರ್‍ಯಾರಂತೆಯೂ ಅಲ್ಲದ ಗಾಂಧೀಜಿಯದ್ದು ‘ಯಾನ’.

ಗಾಂಧೀಜಿಯ ಪರಿಕಲ್ಪನೆಯ ಸ್ವರಾಜ್ಯ ಬಹುಶಃ ಎಂದೂ ಸಾಧ್ಯವಾಗುವುದಿಲ್ಲ. ಅದರ ಅರಿವು ಗಾಂಧೀಜಿಗೂ ಇತ್ತು. ಅದರ ಬಗ್ಗೆ ಸ್ವತಃ ಗಾಂಧಿಯೇ, ‘ಸ್ವರಾಜ್ಯ ನನ್ನ ಜೀವಿತಾವಧಿಯಲ್ಲಿ ಕಾಣಲಾಗದಷ್ಟು ಬಹುದೂರದಲ್ಲಿದೆ ಎಂಬ ಯಾತನಾಮಯ ಅರಿವು ನನಗಿದೆ’ ಎಂದು ಹೇಳಿದ್ದರು. ಆದರೆ ಸ್ವರಾಜ್ಯದ ಆಕಾಂಕ್ಷೆಯ ಒಂದು ಯಾನ ಇದೆಯಲ್ಲ ಆ ಯಾನಕ್ಕೆ ಯಾರಿಗೇ ಆದರೂ ಶಾಶ್ವತ ಸಂಗಾತಿ ಗಾಂಧೀಜಿಯೇ. ಜಪಾನ್, ಇಂಗ್ಲೆಂಡ್, ಲ್ಯಾಟಿನ್ ಅಮೆರಿಕ, ರಷ್ಯಾ ಹೀಗೆ ಜಗತ್ತಿನ ಯಾವ ಮೂಲೆಯಲ್ಲಾದರೂ ಸ್ವರಾಜ್ಯದ ಆಕಾಂಕ್ಷೆಯಿಂದ ಹೆಜ್ಜೆ ಇಡಲು ಹೊರಟವರಿಗೆ ಗಾಂಧಿ ಸಂಗಾತಿಯಾಗುತ್ತಾರೆ. ಆದ್ದರಿಂದಲೇ ಗಾಂಧಿಯ ವ್ಯಾಪ್ತಿ ಇಡೀ ಭೂಮಿಯೇ.

ಮನುಷ್ಯರ ವೈಚಾರಿಕತೆಯಲ್ಲಿ ವ್ಯತ್ಯಾಸವಿದೆ. ಆದರೆ ಭಾವನೆಗಳು ಇಡೀ ಮಾನವ ಜನಾಂಗಕ್ಕೆ ಒಂದೇ ರೀತಿ. ಸಹಜ ಬದುಕಿನ ಆಕಾಂಕ್ಷೆಯ ಭಾವ ಇರುವ ವಿಶ್ವದ ಯಾವುದೇ ಜಾಗದಲ್ಲಿರುವ ಮನುಷ್ಯನನ್ನು ಗಾಂಧಿ ಭಾವವಾಗಿ ತಲುಪುತ್ತಾರೆ. ವಿಚಾರವಾಗಿ ಬೆಳೆಯುತ್ತಾರೆ. ಗಾಂಧೀಜಿಯ ವ್ಯಕ್ತಿತ್ವಕ್ಕೆ ಈ ಸ್ವಭಾವ ಇದೆ. ಆದ್ದರಿಂದಲೇ ಎಲ್ಲ ಸ್ವಾತಂತ್ರ್ಯ ಹೋರಾಟಗಾರರಿಗೆ ಸಲ್ಲಿಸಲೇಬೇಕಾದ ‘ಮೌನ’ವನ್ನು ಸಲ್ಲಿಸಲು ಗಾಂಧಿ ಹುತಾತ್ಮರಾದ ದಿನ ಅರ್ಥಪೂರ್ಣವೂ ಆಗಿದೆ.

ಗಾಂಧೀಜಿಯ ಮೇಲೆ ಎಡಪಂಥೀಯರಿಗೆ, ಅಂಬೇಡ್ಕರ್‌ವಾದಿಗಳಿಗೆಲ್ಲ ಆಕ್ಷೇಪಗಳಿವೆ. ಆದರೆ ಅವು ತೀವ್ರತೆಯನ್ನು ಕಳೆದುಕೊಂಡಿದ್ದು ಇಂದೀಗ ಪ್ರಬಲವಾಗಿ ಉಳಿದಿರುವುದು ಸಾವರ್ಕರ್‌ವಾದಿಗಳ ಆಕ್ಷೇಪವೇ. ಆದ್ದರಿಂದ ಅದರ ಬಗ್ಗೆ ಚರ್ಚಿಸಬೇಕು.

ಗಾಂಧಿ ಆಸ್ತಿಕ ಹಿಂದೂ. ಸಾವರ್ಕರ್ ನಾಸ್ತಿಕ ಹಿಂದೂ. ಗಾಂಧೀಜಿಗೆ ರಾಜಕೀಯವೂ ಧರ್ಮದ ಉದಾತ್ತ ನೆಲೆಯನ್ನು ತಲುಪಲು ಇರುವ ಸಾಧನವಾಗಿದ್ದರೆ, ಸಾವರ್ಕರ್ ಅವರಿಗೆ ಧರ್ಮವು ರಾಜಕೀಯ ನೆಲೆಯನ್ನು ತಲುಪಲು ಇರುವ ಸಾಧನವಾಗಿದೆ. ಶುದ್ಧ ಧಾರ್ಮಿಕತೆ ಮತ್ತು ಶುದ್ಧ ನಾಸ್ತಿಕತೆ ಪರಸ್ಪರ ವಿರುದ್ಧವಲ್ಲ. ವಿರೋಧಿಗಳು ಮುಖಾಮುಖಿಯಾಗುತ್ತಾರೆ. ಶುದ್ಧ ಧಾರ್ಮಿಕತೆ ಮತ್ತು ಶುದ್ಧ ನಾಸ್ತಿಕತೆ ಸಮಾನಾಂತರ ಸರಳ ರೇಖೆಗಳು. ಎಂದೂ ಒಂದನ್ನೊಂದು ಸೇರುವುದಿಲ್ಲ. ಆದರೆ ಜೊತೆಯಾಗಿ ಇರುತ್ತವೆ. ಸಾವರ್ಕರ್ ಕೂಡ ಸ್ವಾತಂತ್ರ್ಯ ಹೋರಾಟಗಾರನಾಗುವುದು ಗಾಂಧೀಜಿ ನಾಯಕನಾಗಿರುವ ಸ್ವಾತಂತ್ರ್ಯ ಹೋರಾಟದಲ್ಲೆ. ಗಾಂಧೀಜಿಗೆ ಮಹತ್ವ ಇಲ್ಲದಿದ್ದರೆ ಸಾವರ್ಕರ್ ಅವರ ಪ್ರಾರಂಭಿಕ ಬ್ರಿಟಿಷ್ ವಿರೋಧಿ ಹೋರಾಟಗಳಿಗೆ ಮಹತ್ವ ಉಳಿಯುವುದಿಲ್ಲ. ಗೋಡ್ಸೆಯನ್ನು ನಾಯಕನನ್ನಾಗಿ ಮಾಡಲು ಹೊರಡುವವರಿಗೆ ಇದರ ಅರಿವಿರಬೇಕು.

‘ಗೋಡ್ಸೆಯು ಗಾಂಧೀಜಿಯನ್ನು ಕೊಂದದ್ದು ತಪ್ಪು; ಆದರೆ ಗೋಡ್ಸೆ ಕೊಟ್ಟ ಕಾರಣ ಸರಿ’ ಎಂಬ ವಾದದ ಒಳಧ್ವನಿ ಗೋಡ್ಸೆಯನ್ನು ಪ್ರತಿನಾಯಕನನ್ನಾಗಿ ಮಾಡುವುದು. ಆದರೆ ಗೋಡ್ಸೆ ನಾಯಕ ಆಗಿಬಿಟ್ಟರೆ ಗಾಂಧಿ ಮಾತ್ರ ಅಲ್ಲ, ಸಾವರ್ಕರ್, ಬೋಸ್, ಭಗತ್, ಆಜಾದ್, ತಿಲಕ್, ಗೋಖಲೆ ಯಾರೂ ಸ್ವಾತಂತ್ರ್ಯ ಹೋರಾಟಗಾರರ ಸ್ಥಾನದಲ್ಲಿ ಇರುವುದಿಲ್ಲ. ಯಾಕೆಂದರೆ ಸಾವರ್ಕರರನ್ನೂ ಸ್ವಾತಂತ್ರ್ಯ ಹೋರಾಟಗಾರ ಎಂದಿರುವುದು ಗಾಂಧಿಯನ್ನು ನಾಯಕನನ್ನಾಗಿ ಸ್ವೀಕರಿಸಿದ ವ್ಯವಸ್ಥೆ ಮತ್ತು ಶಾಸನ. ಅದೇ ಶಾಸನ ಗೋಡ್ಸೆಯನ್ನು ಹಂತಕನೆಂದು ಪರಿಗಣಿಸಿದೆ. ಆದ್ದರಿಂದ ಸಾವರ್ಕರ್ ಅವರ ಅಭಿಮಾನಿಗಳಲ್ಲಿ ಕೆಲವರು, ಗಾಂಧಿ ಬರೆದ ಐವತ್ತ ಮೂರೂವರೆ ಸಾವಿರ ಪುಟಗಳನ್ನು ಓದದೆ, ನಾಥೂರಾಮ್ ಗೋಡ್ಸೆಯೇ ಬರೆದ ಶೈಲಿಯಲ್ಲಿ ಗೋಡ್ಸೆಯ ತಮ್ಮ ಬರೆದ ಪುಸ್ತಕವನ್ನು‌ ಮುಂದಿಟ್ಟುಕೊಂಡು ಗೋಡ್ಸೆಯ ಪರ ವಾದಿಸುವಾಗ, ಆ ವಾದದ ಅಂತ್ಯವು ಸಾವರ್ಕರ್ ಸೇರಿದಂತೆ ಎಲ್ಲ ಸ್ವಾತಂತ್ರ್ಯ ಹೋರಾಟಗಾರರನ್ನೂ ಅವರ ಸ್ಥಾನದಿಂದ ತೆಗೆಯುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಆದರೆ ಅಂತಹ ಗೋಡ್ಸೆಯೂ ಒಬ್ಬ ನಾಸ್ತಿಕ ಹಿಂದೂ! ಇದೇ ಇಲ್ಲಿನ ವೈಚಿತ್ರ್ಯ, ವಿಡಂಬನೆ.

ವರ್ತಮಾನದ ಭಾರತದಲ್ಲಿ ಸ್ವಾತಂತ್ರ್ಯ ಹೋರಾಟಗಾರರನ್ನು ಭಗತ್ ಸಿಂಗ್ ತಂಡ, ಸಾವರ್ಕರ್ ತಂಡ, ನೆಹರೂ ತಂಡ ನಮಗೇ ಅರಿವಿಲ್ಲದಂತೆ ಹಂಚಿಕೆ ಮಾಡಿಕೊಳ್ಳುತ್ತಾ ಹೋಗಿರುವಾಗ, ಎಲ್ಲ ತಂಡಗಳನ್ನೂ ಸಂಪರ್ಕಿಸುವ ಏಕೈಕ ಶಕ್ತಿಯಾಗಿ ಇರುವುದು ಗಾಂಧೀಜಿಯೇ. ಏಕೆಂದರೆ ಯಾವ ತಂಡದವರೂ ಅವರ ವಿಚಾರಕ್ಕೆ ಸಣ್ಣ ಭಿನ್ನಾಭಿಪ್ರಾಯ ಉಳ್ಳವರನ್ನೂ ತಮ್ಮ ಜೊತೆ ಇರಿಸಿಕೊಳ್ಳಲು ಸಿದ್ಧರಿಲ್ಲ. ‌ಇಂತಹ ಸಂದರ್ಭದಲ್ಲಿ ರಾಷ್ಟ್ರೀಯ ಏಕತೆ ಎನ್ನುವುದೇನನ್ನಾದರೂ ಉಳಿಸಿಕೊಳ್ಳುವುದಿದ್ದರೆ ಅದು ಗಾಂಧೀಜಿಯ ಮೂಲಕವೇ ಆಗಬೇಕು. ಏಕೆಂದರೆ ಉಳಿದ ಯಾರಿಗೂ ಎಲ್ಲರನ್ನೂ ತನ್ನ ಜೊತೆಗೆ ಉಳಿಸಿಕೊಳ್ಳಲು ಆಗುವುದಿಲ್ಲ.

ಗಾಂಧಿಯುಗ ಮುಗಿದು ಏಳು ದಶಕಗಳ ಬಳಿಕ ಗಾಂಧಿ ಒಂದು ರಾಷ್ಟ್ರೀಯ ತುರ್ತಾಗಿ ಮರುಹುಟ್ಟು ಪಡೆಯುತ್ತಿರುವುದು ಒಂದು ವಿಸ್ಮಯ. ಒಮ್ಮೆ ಮರುಹುಟ್ಟು ಪಡೆದರೆ ಗಾಂಧಿ ಆರ್ಥಿಕತೆ, ಗಾಂಧಿ ನೈತಿಕತೆ, ಗಾಂಧಿ ಧಾರ್ಮಿಕತೆ, ಗಾಂಧಿ ಮಾದರಿಯ ಶಿಕ್ಷಣ ಹೀಗೆ ಬಹುರೂಪಿ ವಿಸ್ತರಣೆಯೂ ಪ್ರಾರಂಭವಾಗುತ್ತದೆ.

ಏಕತೆಯನ್ನು ಬಹುರೂಪಿಯಾಗಿಸುವ, ಬಹುವಾದದ್ದನ್ನು ಏಕತೆಗೆ ತರುವ ಗಾಂಧೀಜಿಯ ವ್ಯಕ್ತಿತ್ವದ ಅನನ್ಯತೆಯ ಮಂಥನವು ವರ್ತಮಾನದ ಅಗತ್ಯವಾಗಿದೆ. ಹುತಾತ್ಮರ ದಿನವು ಬಯಸುವ ‘ಮೌನ’ವನ್ನು ತಂದುಕೊಳ್ಳದ ಹೊರತು ಈ ಮಂಥನ ಸಾಧ್ಯವಿಲ್ಲ. ಆದರೆ ಹುತಾತ್ಮರ ದಿನವು ಬಯಸುವ ‘ಮೌನ’ ಈಗ ಸಾಧ್ಯವಿಲ್ಲ. ಏಕೆಂದರೆ ವರ್ತಮಾನದ ಭಾರತದಲ್ಲಿ ನಡೆಯುತ್ತಿರುವುದು ‘ಮಾತಿನ ಯುಗ’. ಮಾತು ಸೋತ ಅನುಭವವನ್ನು ಪಡೆಯಲಿರುವ ಭಾರತವು ಧ್ಯಾನಸ್ಥ ಮೌನದ ಮಹತ್ತನ್ನು ಅರ್ಥಮಾಡಿಕೊಳ್ಳುವ ತನಕ ಕಾಯಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು