ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಬಹುಸಂಸ್ಕೃತಿಯ ಭಾರತಕ್ಕೆ ಬಹುಭಾಷಾ ಬೋಧನೆ

ಹೊಸ ಶಿಕ್ಷಣ ನೀತಿಯು ಭಾಷೆಗೆ ನೀಡಿರುವ ಮಹತ್ವವು ಭಾಷೆಗಳ ನಡುವೆ ಸೌಹಾರ್ದ ಬೆಳೆಸಬಲ್ಲದು
Last Updated 21 ಅಕ್ಟೋಬರ್ 2021, 21:13 IST
ಅಕ್ಷರ ಗಾತ್ರ

ನಮ್ಮ ದೇಶದಲ್ಲಿ ಔಪಚಾರಿಕ ಶಿಕ್ಷಣದ ಅವಕಾಶವು ಎಲ್ಲರಿಗೂ ಸಮಾನವಾಗಿ ಲಭ್ಯವಿದೆ ಎನ್ನುವುದು ತಾತ್ವಿಕವಾಗಿ ಅಥವಾ ಕಾನೂನಿನ ದೃಷ್ಟಿಯಲ್ಲಿ ನಿಜವಾದರೂ ವಾಸ್ತವದಲ್ಲಿ ಅನಕ್ಷರತೆ, ಬಡತನ, ಸಾಮಾಜಿಕ ತಾರತಮ್ಯ ಇತ್ಯಾದಿ ಇರುವ ಕಾರಣದಿಂದ ಸಮಾನ ಅವಕಾಶಗಳು ಎಲ್ಲರಿಗೂ ದೊರೆಯುತ್ತಿಲ್ಲ.

ರಾಜ್ಯಗಳ ಪಠ್ಯಕ್ರಮ, ಕೇಂದ್ರೀಯ ಪಠ್ಯಕ್ರಮ ಮುಂತಾದ ಭಿನ್ನತೆಗಳು ಇದ್ದೇ ಇವೆ. ಅಲ್ಲದೆ, ವಿಭಿನ್ನ ಭೌಗೋಳಿಕ ಪರಿಸ್ಥಿತಿ, ಇಂಗ್ಲಿಷ್ ಮಾಧ್ಯಮ ಶಾಲೆಗಳ ದುಬಾರಿ ಶುಲ್ಕ– ಹೀಗೆ ಸಮಾನ ಅವಕಾಶಕ್ಕೆ ತೊಡಕಾಗುವ ಹಲವು ಅಂಶಗಳಿವೆಯಾದರೂ ಮುಖ್ಯವಾಗಿ ಚರ್ಚೆಯಾಗುತ್ತಿರುವುದು ಬೋಧನೆಯ ಮಾಧ್ಯಮವೇ. ಅದರಲ್ಲೂ ಇಂಗ್ಲಿಷ್ ಮಾಧ್ಯಮವೇ ಅಸಮಾನತೆಗೆ ಕಾರಣ ಎನ್ನುವುದು ಸಾಮಾನ್ಯ ಅಭಿಪ್ರಾಯ. ನಮ್ಮ ರಾಜ್ಯದ ಸರ್ಕಾರಿ ಶಾಲೆಗಳಲ್ಲೂ ಆರಂಭದಿಂದಲೇ ಇಂಗ್ಲಿಷ್ ಕಲಿಸಬೇಕು ಎಂಬ ಒತ್ತಾಯ ಬಂದುದೂ ಈ ಹಿನ್ನೆಲೆಯಲ್ಲಿಯೇ.

ದೇಶದ ಎಲ್ಲ ಮಕ್ಕಳಿಗೂ ಶಿಕ್ಷಣದ ಅವಕಾಶ ಸಮಾನವಾಗಿ ದೊರೆಯಬೇಕು ಎನ್ನುವ ದಿಸೆಯಲ್ಲಿ ಕಳೆದ ಹಲವಾರು ವರ್ಷಗಳಿಂದ ನಮ್ಮ ಪ್ರಾಥಮಿಕ ಶಿಕ್ಷಣ ವ್ಯವಸ್ಥೆಯ ಬಗ್ಗೆ ಮಾತನಾಡುತ್ತಿರುವ ಶಿಕ್ಷಣ ತಜ್ಞರು ಹಾಗೂ ಚಿಂತಕರು ‘ಸಮಾನ ಶಿಕ್ಷಣ’ದ ಬಗ್ಗೆ ಒತ್ತು ಕೊಡುತ್ತಿರುವುದನ್ನು ಕೇಳುತ್ತಿದ್ದೇವೆ. ಯು.ಆರ್. ಅನಂತಮೂರ್ತಿಯವರು ಕೂಡ ಇದನ್ನು ಪದೇ ಪದೇ ಹೇಳುತ್ತಿದ್ದರು. ಶಿಕ್ಷಣವನ್ನು ರಾಷ್ಟ್ರೀಕರಣ ಮಾಡಬೇಕು ಎಂಬ ಬೇಡಿಕೆಯನ್ನು ಮಂಡಿಸುವವರೂ ಇದ್ದಾರೆ. ಆದರೆ ಸಮಾನ ಶಿಕ್ಷಣ ಎಂದರೆ ಏನು, ಅದರ ಸ್ವರೂಪ ಏನು, ಅದನ್ನು ಅನುಷ್ಠಾನಗೊಳಿಸುವುದು ಹೇಗೆ, ರಾಜ್ಯಗಳ ಒಳಗೆ ಸಮಾನ ಶಿಕ್ಷಣ ಇರಬೇಕೆ ಅಥವಾ ಇಡೀ ದೇಶಕ್ಕೇ ಅನ್ವಯಿಸುವಂಥ ಸಮಾನ ಶಿಕ್ಷಣ ಇರಬೇಕೆ, ಯಾವ ಹಂತದವರೆಗೆ ಸಮಾನ ಶಿಕ್ಷಣ ಇರಬೇಕು ಮುಂತಾದ ಪ್ರಶ್ನೆಗಳನ್ನು ಇಟ್ಟುಕೊಂಡು ಅನುಷ್ಠಾನಯೋಗ್ಯವಾದ ಸಲಹೆಗಳನ್ನು ನೀಡಿದುದು ಅಷ್ಟೇನೂ ಕಾಣುವುದಿಲ್ಲ.

ಶಿಕ್ಷಣದಲ್ಲಿ ಅದರಲ್ಲೂ ಪ್ರಾಥಮಿಕ ಶಿಕ್ಷಣದಲ್ಲಿ ಕಲಿಕೆಯ ಸಮಾನ ಅವಕಾಶಕ್ಕೆ ಅಡ್ಡಗಾಲಾಗಿ ನಿಂತಿರುವುದು ಮುಖ್ಯವಾಗಿ ಭಾಷೆ ಎಂಬ ಹಿನ್ನೆಲೆಯಲ್ಲಿ, ಈಗಿನ ರಾಷ್ಟ್ರೀಯ ಶಿಕ್ಷಣ ನೀತಿಯು ಭಾಷೆಗೆ ವಿಶೇಷ ಮಹತ್ವ ನೀಡಿರುವುದು ಉಲ್ಲೇಖನೀಯ. ಬಹುಭಾಷಿಕತೆಯನ್ನು ಉತ್ತೇಜಿಸಬೇಕು ಎಂಬುದನ್ನು ಹೊಸ ನೀತಿಯು ಸ್ಪಷ್ಟವಾಗಿ ಪ್ರತಿಪಾದಿಸಿದೆ. ಶಿಕ್ಷಣ ತಜ್ಞರು ಈಚೆಗೆ ಅನುಭವ ಆಧಾರಿತ ಕಲಿಕೆ ಎನ್ನುವ ಪರಿಕಲ್ಪನೆಗೆ ಹೆಚ್ಚು ಒತ್ತು ಕೊಡುತ್ತಿದ್ದಾರೆ. ಈ ಶಿಕ್ಷಣ ನೀತಿಯೂ ಅದನ್ನು ಪರಿಗಣಿಸಿದೆ. ಬಹುಭಾಷಿಕತೆಯು ಅನುಭವದ ವ್ಯಾಪ್ತಿಯನ್ನು ಹಿಗ್ಗಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ.

ವ್ಯಕ್ತಿಗೆ ಸಾಮಾಜಿಕ, ಸಾಂಸ್ಕೃತಿಕ, ಸಾಹಿತ್ಯಕ, ಆರ್ಥಿಕ– ಹೀಗೆ ಯಾವುದೇ ನೆಲೆಯಲ್ಲಿ ಸಬಲತೆಯನ್ನು ತರುವಲ್ಲಿಯೂ ಬಹುಭಾಷಿಕತೆಯ ಕೊಡುಗೆ ಗಣನೀಯವೇ ಹೌದು. ಅಲ್ಲದೆ, ಇನ್ನಿತರ ಭಾಷೆಗಳ ತಿಳಿವಳಿಕೆಯಿದ್ದವರು ತಮ್ಮ ಮನೆಭಾಷೆಯನ್ನು ಇನ್ನಷ್ಟು ಚೆನ್ನಾಗಿ ಬಳಸಬಲ್ಲರು ಮತ್ತು ಶ್ರೀಮಂತಗೊಳಿಸ
ಬಲ್ಲರು ಎನ್ನುವುದೂ ಸಿದ್ಧವಾದ ಸಂಗತಿಯೇ. ಭಾಷಾ ಕೌಶಲ ಮತ್ತು ಗಣಿತದ ಮೂಲಕ ತರ್ಕಕೌಶಲ
ವನ್ನು ಬಾಲ್ಯದಿಂದಲೇ ರೂಢಿಸುವ ದಿಸೆಯಲ್ಲಿ ಅದಕ್ಕೆ ಪೂರಕವಾದ ಪಠ್ಯಕ್ರಮವನ್ನು ಅನುಷ್ಠಾನಕ್ಕೆ ತರಬೇಕು ಎಂಬ ಆಶಯವನ್ನು ಹೊಸ ಶಿಕ್ಷಣ ನೀತಿಯು ವ್ಯಕ್ತಪಡಿಸಿದೆ. ಇದಕ್ಕೆ ಅನುಕೂಲವಾಗುವಂತೆ ತೀರಾ ಪ್ರಾಥಮಿಕ ಹಂತದಲ್ಲಿ ಇತರ ಬೋಧನಾ ವಿಷಯಗಳ ಗಾತ್ರವನ್ನು ಕುಗ್ಗಿಸುವ ಸಲಹೆಯೂ ಇದೆ. ಇದು ಯುಕ್ತವಾದ ಶಿಫಾರಸೇ ಆಗಿದೆ. ವಿಷಯವನ್ನು ಗ್ರಹಿಸಲು ಹಾಗೂ ಪರಿಣಾಮಕಾರಿಯಾಗಿ ಅಭಿವ್ಯಕ್ತಿಸಲು ಅಗತ್ಯವಾದ ಭಾಷಾ ಕೌಶಲ ಮತ್ತು ತರ್ಕಬುದ್ಧಿ ಇವೆರಡಕ್ಕೆ ನೀಡಬೇಕಾದಷ್ಟು ಪ್ರಾಮುಖ್ಯವನ್ನು ಈವರೆಗೆ ನೀಡದೆ ಇರುವುದರಿಂದ ತುಂಬ ಹಾನಿಯಾಗಿದೆ. ಇದರರ್ಥ ಹಿಂದಿನ ಶಿಕ್ಷಣ ನೀತಿಗಳು ಅದನ್ನು ಪರಿಗಣಿಸಿಲ್ಲ ಎಂದಲ್ಲ; ಅನುಷ್ಠಾನದಲ್ಲಿಯಂತೂ ಇವಕ್ಕೆ ಮಹತ್ವ ಸಿಕ್ಕಿಲ್ಲ.

ಎಂಟನೇ ತರಗತಿಯವರೆಗೆ ಮತ್ತು ಆನಂತರ ಕೂಡ ಮಕ್ಕಳಿಗೆ ಚೆನ್ನಾಗಿ ಗೊತ್ತಿರುವ ಭಾಷೆಯಲ್ಲೇ ಕಲಿಕೆ ನಡೆಯಬೇಕು ಎಂದು ಈಗಿನ ಶಿಕ್ಷಣ ನೀತಿ ಹೇಳಿದೆ. ಅದರಲ್ಲೂ ಕನಿಷ್ಠ ಐದನೇತರಗತಿಯ
ವರೆಗೆ ಸಾಧ್ಯವಾದಲ್ಲಿ ಎಂಟನೇ ತರಗತಿಯವರೆಗೆಮಕ್ಕಳ ಮನೆಭಾಷೆ/ ತಾಯಿಭಾಷೆ/ ಸ್ಥಳೀಯಭಾಷೆ/ ಪ್ರಾದೇಶಿಕ ಭಾಷೆಯಲ್ಲಿ ಶಿಕ್ಷಣ ನೀಡಬೇಕು ಎಂದು ಹೇಳಲಾಗಿದೆ.

ಮಾತೃಭಾಷಾ ಶಿಕ್ಷಣ ಎಂಬ ಪರಿಕಲ್ಪನೆಯನ್ನು ಮೇಲಿನ ನಾಲ್ಕೂ ನಮೂನೆಯ ಭಾಷೆಗಳಿಗೆ ಅನ್ವಯಿಸಿದುದು ಕೂಡ ಸಮಂಜಸವೇ ಆಗಿದೆ. ಪ್ರಾಥಮಿಕ ಹಂತದಲ್ಲಿಯೇ ಬಹುಭಾಷಿಕ ಬೋಧನೆಗೆ ಒತ್ತು ನೀಡಬೇಕು ಎಂಬ ಶಿಫಾರಸು ಕೂಡ ಇದೆ. ಮೇಲಿನ ನಾಲ್ಕೂ ನಮೂನೆಯ ಭಾಷೆಗಳನ್ನು ಉಲ್ಲೇಖಿಸಿದ್ದರಿಂದ ಬಹುಭಾಷಿಕ ಬೋಧನೆ ಅನಿವಾರ್ಯವೇ ಆಗುತ್ತದೆ. ಬೋಧಕರು ಕೂಡ ತಮ್ಮನ್ನು ತಾವು ಹೊಸ ರೀತಿಯ ಬೋಧನೆಗೆ ಸಿದ್ಧಗೊಳಿಸಿಕೊಳ್ಳುವುದು ಅತ್ಯಂತ ಅಗತ್ಯ.

ಹೊಸ ಶಿಕ್ಷಣ ನೀತಿಯ ಬಗ್ಗೆ ಅನೇಕ ಗೋಷ್ಠಿಗಳು ನಡೆದಿವೆ. ಪರ– ವಿರೋಧದ ಚರ್ಚೆಗಳೂ ಆಗಿವೆ. ಆದರೆ ಈ ನೀತಿಯು ಹೇಳಿದ ದ್ವಿಭಾಷಿಕ ಪಠ್ಯಪುಸ್ತಕ ಎಂಬ ಒಂದು ಅತಿ ಮುಖ್ಯ ವಿಚಾರದ ಬಗ್ಗೆ ಅಷ್ಟಾಗಿ ಯಾರೂ ಗಮನ ನೀಡಿದಂತೆ ಕಾಣಲಿಲ್ಲ ಅಥವಾ ಅಂಥ ಚರ್ಚೆ ನಡೆದಿದ್ದರೂ ಅದನ್ನು ನಾನು ಗಮನಿಸದೆ ಇರಬಹುದು. ಏನೇ ಇರಲಿ, ಸಮಾನ ಶಿಕ್ಷಣ ಎಂಬ ಪರಿಕಲ್ಪನೆಯನ್ನು ಸ್ವಲ್ಪ ಮಟ್ಟಿಗಾದರೂ ಅನುಷ್ಠಾನಕ್ಕೆ ತರುವಲ್ಲಿ ಈ ದ್ವಿಭಾಷಿಕ ಪಠ್ಯಪುಸ್ತಕಗಳು ಉಪಯುಕ್ತವಾಗಬಲ್ಲವು.

ತಮ್ಮ ಮನೆಭಾಷೆ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಮಕ್ಕಳು ಗಣಿತ ಮತ್ತು ವಿಜ್ಞಾನದಂಥ ವಿಷಯಗಳ ಬಗ್ಗೆ ಮಾತಾಡಲು ಮತ್ತು ಯೋಚಿಸಲು ಸಮರ್ಥರಾಗಬೇಕು. ಅದಕ್ಕಾಗಿ ಗಣಿತ ಮತ್ತು ವಿಜ್ಞಾನ ವಿಷಯಗಳಿಗೆ ಸಂಬಂಧಿಸಿದ ಅತ್ಯುತ್ತಮ ಗುಣಮಟ್ಟದ ದ್ವಿಭಾಷಿಕ ಪಠ್ಯಪುಸ್ತಕಗಳನ್ನು ಸಿದ್ಧಪಡಿಸಬೇಕು ಎಂದು ರಾಷ್ಟ್ರೀಯ ಶಿಕ್ಷಣ ನೀತಿ ಹೇಳುತ್ತದೆ. ಕೇವಲ ಗಣಿತ ಮತ್ತು ವಿಜ್ಞಾನಕ್ಕಷ್ಟೇ ಅಲ್ಲ, ಇದನ್ನು ಸಮಾಜವಿಜ್ಞಾನ ವಿಷಯಕ್ಕೂ ಅನ್ವಯಿಸುವುದು ಅಗತ್ಯ.

ಚಿಕ್ಕ ಮಕ್ಕಳಿಗೆ ಒಂದಕ್ಕಿಂತ ಹೆಚ್ಚು ಭಾಷೆಗಳು ಹೊರೆಯಾಗುತ್ತವೆ ಎಂಬುದು ಸರಿಯಲ್ಲ. ಈ ಅಂಶವನ್ನು ಹೊಸ ಶಿಕ್ಷಣ ನೀತಿಯೂ ಒಪ್ಪುತ್ತದೆ. ಬಹುಭಾಷಿಕರಾದವರು ಭಾಷಾ ವಿಚಾರವಾಗಿ ಸಂಘರ್ಷ ಮಾಡುವ ಸಂಭವವೂ ಕಡಿಮೆ! ಕರ್ನಾಟಕವನ್ನು ಪರಿಗಣಿಸಿದರೆ ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಗಣಿತ, ವಿಜ್ಞಾನ ಮತ್ತು ಸಮಾಜವಿಜ್ಞಾನ ಪಠ್ಯಪುಸ್ತಕಗಳು ಇದ್ದರೆ ಇಂಗ್ಲಿಷ್ ಮಾಧ್ಯಮದ ಸಮಸ್ಯೆ ಸ್ವಲ್ಪವಾದರೂ ಪರಿಹಾರವಾದೀತು. ಅಷ್ಟರಮಟ್ಟಿಗೆ ಸಮಾನ ಶಿಕ್ಷಣ ಅನುಷ್ಠಾನವಾದಂತಾದೀತು. ಆದರೆ, ದ್ವಿಭಾಷಿಕ ಪಠ್ಯಪುಸ್ತಕಗಳ ಪದ್ಧತಿ ಪರಿಣಾಮಕಾರಿಯಾಗಬೇಕಾದರೆ, ಬೋಧಕರು ಕೂಡ ಅಷ್ಟೇ ಉನ್ನತ ಮಟ್ಟದ ಭಾಷಾ ಕೌಶಲವನ್ನು ಹೊಂದಿರಬೇಕಾಗುತ್ತದೆ. ಈ ದಿಸೆಯಲ್ಲಿ ಬೋಧಕರಿಗೆ ನೀಡಬೇಕಾದ ತರಬೇತಿಯ ಬಗ್ಗೆಯೂ ಶಿಕ್ಷಣ ನೀತಿ ಪ್ರಸ್ತಾಪಿಸಿದೆ. ತ್ರಿಭಾಷಾ ಸೂತ್ರವನ್ನೇ ಈ ಶಿಕ್ಷಣ ನೀತಿಯೂ ಹೇಳಿದೆಯಾದರೂ ಇದರಲ್ಲಿಆಯಾ ರಾಜ್ಯಗಳಿಗೆ ಭಾಷೆಗಳನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವಿದೆ. ಈಗಿರುವಂತೆ, ಹಿಂದಿಯು ಒಂದು ಭಾಷೆಯಾಗಿರಬೇಕಾಗಿಲ್ಲ. ಮುಖ್ಯವಾಗಿ, ಹಿಂದಿ ರಾಜ್ಯಗಳೂ ದಕ್ಷಿಣದ ಭಾಷೆಗಳನ್ನು ಬೋಧಿಸುವ ಸಲಹೆಯಿದೆ.

ಅಲ್ಲದೆ, ವಿವಿಧ ರಾಜ್ಯಗಳ ನಡುವೆ ಭಾಷಾ ಶಿಕ್ಷಕರನ್ನು ವಿನಿಮಯ ಮಾಡಿಕೊಳ್ಳುವ ವಿಶಿಷ್ಟ ಸಲಹೆ ಕೂಡ
ಅಲ್ಲಿದೆ. ಮಕ್ಕಳು ಖುಷಿಯಿಂದ ಪಾಲ್ಗೊಳ್ಳಬಹುದಾದ ‘ಫನ್ ಪ್ರಾಜೆಕ್ಟು’ಗಳ ಮೂಲಕ ಹೊರಭಾಷೆಗಳ ಕುರಿತಾದ ಅರಿವನ್ನು ಉಂಟುಮಾಡಬೇಕೆನ್ನುವುದೂ ಸ್ವಾಗತಾರ್ಹವೇ ಆಗಿದೆ.

ವಿವಿಧ ಭಾರತೀಯ ಭಾಷೆಗಳ ನಡುವಿನ ಭಾಷಾಂತರ ಪ್ರಕ್ರಿಯೆಯನ್ನು ಉತ್ತೇಜಿಸುವುದನ್ನು ಶಿಕ್ಷಣ ನೀತಿಯ ಭಾಗವಾಗಿಸಿರುವುದು ಕೂಡ ಹೊಸ ನೀತಿಯು ಭಾಷೆಗೆ ನೀಡಿದ ಮಹತ್ವವನ್ನು ತೋರಿಸುತ್ತದೆ. ಇಂಥ ಉಪಕ್ರಮಗಳು ಭಾಷೆಗಳ ನಡುವಿನ ಮೇಲು–ಕೀಳು ಭಾವನೆಯನ್ನು ತೊಡೆದುಹಾಕಬಲ್ಲವು ಮತ್ತು ವಿವಿಧ ಭಾರತೀಯ ಭಾಷೆಗಳ ನಡುವೆ ಸೌಹಾರ್ದವನ್ನು ಬೆಳೆಸ ಬಲ್ಲವು. ಒಟ್ಟಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಭಾಷೆ ಎನ್ನುವ ಸಾಂಸ್ಕೃತಿಕ ದ್ರವ್ಯಕ್ಕೆ ನೀಡಿರುವ ಪ್ರಾಮುಖ್ಯವು ಅನುಷ್ಠಾನದ ಹೊತ್ತಿನಲ್ಲೂ ಅಷ್ಟೇ ಮಹತ್ವವನ್ನು ಪಡೆದರೆ ಮುಂದಿನ ಎರಡು ದಶಕಗಳಲ್ಲಿ ಸ್ಪಷ್ಟವಾದ ಸಕಾರಾತ್ಮಕ ಬದಲಾವಣೆ ಕಾಣಬಹುದು. ಸುಶಿಕ್ಷಿತರು ನಿಜವಾದ ಸಂಪನ್ಮೂಲಗಳಾಗಿ ರೂಪುಗೊಳ್ಳಬಲ್ಲರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT