ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ | ಒಂದು ದೇಶ– ಒಂದೇ ಸಹಕಾರ ಸಂಘ?

ಯಾವ ದೃಷ್ಟಿಯಿಂದ ನೋಡಿದರೂ ನಂದಿನಿ– ಅಮುಲ್‌ ವಿಲೀನ ಕಾರ್ಯಸಾಧುವಲ್ಲ
Last Updated 16 ಜನವರಿ 2023, 21:12 IST
ಅಕ್ಷರ ಗಾತ್ರ

ಕೇಂದ್ರ ಸಹಕಾರ ಸಚಿವರೂ ಆಗಿರುವ ಗೃಹ ಸಚಿವ ಅಮಿತ್‌ ಶಾ ಅವರು ಕರ್ನಾಟಕದ ನಂದಿನಿ ಮತ್ತು ಗುಜರಾತ್‌ ಮಹಾಮಂಡಳಿಯ ಅಮುಲ್– ಎರಡೂ ಸಂಸ್ಥೆಗಳು ಜೊತೆಯಾಗಿ ಕೆಲಸ ಮಾಡಬಹುದೆನ್ನುವ ಮಾತನ್ನು ಈಚೆಗೆ ಆಡಿದರೆಂದು ಸುದ್ದಿ. ಎರಡೂ ಸಂಸ್ಥೆಗಳನ್ನು ವಿಲೀನ ಮಾಡಬೇಕೆಂದು ಸಹ ಹೇಳಿದ್ದರು ಎನ್ನುವ ಮಾತು ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿತ್ತು. ಒಂದು ರೀತಿಯಲ್ಲಿ ಇದು, ಕರ್ನಾಟಕ ಮಹಾಜನತೆಯ ಪ್ರತಿಕ್ರಿಯೆ ಹೇಗಿರುತ್ತದೋ ಪರೀಕ್ಷಿಸಿ ನೋಡೋಣ ಎಂದು ಗಾಳಿಯಲ್ಲಿ ಬಿಟ್ಟ ಬಲೂನಿರಬಹುದು. ಆದರೆ ಈ ಮಾತನ್ನು ನಾವು ಲಘುವಾಗಿ ಪರಿಗಣಿಸಬಾರದು. ಯಾವುದೇ ಚರ್ಚೆಯಿಲ್ಲದೆ ಮೂರು ಕೃಷಿ ಕಾನೂನುಗಳನ್ನು ಜಾರಿ ಮಾಡಿ, ಒಂದು ವರ್ಷಕಾಲ ಹಟದಿಂದ ಕಣ್ಣುಮಿಟುಕಿಸದೇ ರೈತರೊಂದಿಗೆ ದೃಷ್ಟಿಯುದ್ಧ ಮಾಡಿದ ಸರ್ಕಾರವಿದು ಎನ್ನುವುದನ್ನು ನಾವು ನೆನಪಿಡಬೇಕು. ಸಿನಿಮಾ ಸಂಭಾಷಣೆಯಂತೆ ಹೇಳಿದ್ದನ್ನು ಹೇಳಿದಂತೆ ಮಾಡುವ, ಹೇಳದ್ದನ್ನೂ ಅಷ್ಟೇ ಗತ್ತಿನಿಂದ ಮಾಡುವುದನ್ನು ಈ ಸರ್ಕಾರ ಬಹಳಷ್ಟು ಬಾರಿ ತೋರಿಸಿಕೊಟ್ಟಿದೆ.

ತಾಂತ್ರಿಕವಾಗಿ ವಿಲೀನದ ಪ್ರಕ್ರಿಯೆ ಹೀಗಿರುತ್ತದೆ: ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ (ಕೆಎಂಎಫ್‌) ಮತ್ತು ಗುಜರಾತ್‌ ಸಹಕಾರ ಹಾಲು ಮಾರುಕಟ್ಟೆ ಮಹಾಮಂಡಳವು (ಜಿಸಿಎಂಎಂಎಫ್‌– ಅಮುಲ್‌) ರಾಜ್ಯದ ಸಹಕಾರಿ ಕಾನೂನಿನಿಂದ ಹೊರಬಿದ್ದು, ಕೇಂದ್ರದ ಬಹುರಾಜ್ಯ ಸಹಕಾರಿ ಕಾನೂನಿನಲ್ಲಿ ನೋಂದಣಿ ಆಗಬೇಕಾಗುತ್ತದೆ. ಇಂಥ ಪ್ರಕ್ರಿಯೆಯನ್ನು ಸರಳಗೊಳಿಸಲು ಸಂಸತ್ತಿನಲ್ಲಿ ಇತ್ತೀಚೆಗೆ ಬಹುರಾಜ್ಯ ಸಹಕಾರಿ ಕಾನೂನಿಗೆ ವ್ಯಾಪಕವಾದ ತಿದ್ದುಪಡಿಗಳನ್ನು ತರಲಾಗಿದೆ. ಗುಜರಾತ್‌ ಮಹಾಮಂಡಳದ ವ್ಯವಸ್ಥಾಪಕ ನಿರ್ದೇಶಕ ಆರ್.ಎಸ್.ಸೋಧಿ ಅವರನ್ನು ಇತ್ತೀಚೆಗೆ ಹಠಾತ್ತಾಗಿ ಬರ್ಖಾಸ್ತು ಮಾಡಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯನ್ ಮೆಹ್ತಾ ಅವರಿಗೆ ತಾತ್ಕಾಲಿಕವಾಗಿ ಆ ಹೊಣೆಯನ್ನು ವಹಿಸಲಾಗಿದೆ. ಉರ್ಜಿತ್ ಪಟೇಲ್‌ ಅವರು ಆರ್‌ಬಿಐ ಗವರ್ನರ್ ಆಗಿ ಅಧಿಕಾರ ಸ್ವೀಕರಿಸಿದ ಹೊಸದರಲ್ಲಿ ನೋಟು ರದ್ದತಿ ತೀರ್ಮಾನ ಕೈಗೊಳ್ಳಲಾಯಿತು ಎನ್ನುವುದನ್ನು ನಾವು ಮರೆಯಬಾರದು.

ಹೊಸ ತಿದ್ದುಪಡಿಯ ಪ್ರಕಾರ, ಯಾವುದೇ ಸಹಕಾರ ಸಂಘದ ಮಹಾಸಭೆಯಲ್ಲಿ ಹಾಜರಿದ್ದ ಮೂರನೇ ಎರಡರಷ್ಟು ಸದಸ್ಯರು ಈ ವಿಲೀನವನ್ನು ಒಪ್ಪಿ ಠರಾವಿಗೆ ವೋಟು ಹಾಕಿದರೆ, ವಿಲೀನ ಪ್ರಕ್ರಿಯೆಯನ್ನು ಕೈಗೊಳ್ಳಬಹುದು. ಕೇಂದ್ರೀಯ ರಿಜಿಸ್ಟ್ರಾರ್‌ ಅವರು ವಿಲೀನ ಪ್ರಕ್ರಿಯೆಯನ್ನು ಮಂಜೂರು ಮಾಡಿ ನೋಂದಣಿಗೊಳಿಸಿದ ದಿನದಿಂದಲೇ ರಾಜ್ಯದ ನೋಂದಣಿ ರದ್ದಾಗುತ್ತದೆ.

ಈ ಪ್ರಕ್ರಿಯೆಯಲ್ಲಿ ವೋಟು ಹಾಕುವವರು ಗ್ರಾಮ ಸ್ತರದಲ್ಲಿ ಕೆಎಂಎಫ್‌ಗೆ ಹಾಲು ಸರಬರಾಜು ಮಾಡುತ್ತಿರುವ ಸರ್ವಸದಸ್ಯರಲ್ಲ. ಬದಲಿಗೆ ಅವರ ಪ್ರತಿನಿಧಿಗಳ ಪ್ರತಿನಿಧಿಗಳು. ಗ್ರಾಮ ಸ್ತರದಲ್ಲಿ ಪ್ರಾಥಮಿಕ ಸಹಕಾರ ಸಂಘಗಳಿಂದ ಆಯ್ಕೆಯಾದ ಅಧ್ಯಕ್ಷರು ಈಗಿರುವ ಹದಿನಾರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟಗಳ ಮಹಾಸಭೆಯ ಸದಸ್ಯರಾಗುತ್ತಾರೆ. ಈ ಮಹಾಸಭೆಯಲ್ಲಿ ಅಧ್ಯಕ್ಷರಾಗಿ ಆಯ್ಕೆಯಾದ ಒಕ್ಕೂಟದ ಅಧ್ಯಕ್ಷರೇ ಮಹಾಮಂಡಳಿಯ ಆಡಳಿತ ಮಂಡಳಿಯ ಸದಸ್ಯರೂ ಆಗುತ್ತಾರೆ. ಈ ಹದಿನಾರು ಮಂದಿ ಪ್ರತಿನಿಧಿಗಳಲ್ಲಿ ಮೂರನೇ ಎರಡು ಭಾಗದಷ್ಟು ಜನ ವಿಲೀನ ಪ್ರಕ್ರಿಯೆಗೆ ತಮ್ಮ ಸಮ್ಮತಿಯನ್ನು ಸೂಚಿಸಿದರೆ ಪ್ರಕ್ರಿಯೆಯನ್ನು ತಾಂತ್ರಿಕವಾಗಿ ಸಂಪನ್ನಗೊಳಿಸಬಹುದು. ಒಂದು ಮಹಾಮಂಡಳಿಯ ದೀರ್ಘಕಾಲಿಕ ಭವಿಷ್ಯವನ್ನು ನಿರ್ದೇಶಿಸುವ ಈ ಕ್ರಿಯೆಯನ್ನು ಬರೀ ಹನ್ನೊಂದು ಜನರ ಒಪ್ಪಿಗೆಯಿಂದ ಕೈಗೊಳ್ಳಬಹುದು. ಈ ಪ್ರಕ್ರಿಯೆ ಪ್ರಜಾತಾಂತ್ರಿಕವಾಗಿದ್ದರೂ ಮಿತಿಗಳಿಂದ ಕೂಡಿದೆ ಎನ್ನುವುದನ್ನು ನಾವು ಗಮನಿಸಬೇಕು.

ಇನ್ನು ವ್ಯಾವಹಾರಿಕವಾದ ಚರ್ಚೆಗೆ ಮುಂದಾಗೋಣ. ಮಾರುಕಟ್ಟೆಯ ನಿಯಮಾವಳಿಗೆ ತಲೆಬಾಗುವ ಸಂಸ್ಥೆಗಳು ಈ ರೀತಿಯ ವಿಲೀನ ಪ್ರಕ್ರಿಯೆಯನ್ನು ಕೈಗೊಳ್ಳುತ್ತವೆ. ಕೋಕಾಕೋಲಾ ನಮ್ಮ ದೇಶಕ್ಕೆ ಬಂದ ಹೊಸದರಲ್ಲಿ ಥಮ್ಸ್ ಅಪ್‌ ಮತ್ತು ಅದಕ್ಕೆ ಸಂಬಂಧಿಸಿದ ಇತರ ಪೇಯಗಳ ಬ್ರ್ಯಾಂಡುಗಳನ್ನು ಕೈವಶ ಮಾಡಿಕೊಂಡಿತು. ಹೀಗೆ ದೊಡ್ಡ ಬ್ರ್ಯಾಂಡುಗಳು ಸಣ್ಣ ಬ್ರ್ಯಾಂಡುಗಳನ್ನು ಕಬಳಿಸುವುದು ಸಹಜವೇ. ಆದರೆ ಪ್ರತಿಬಾರಿಯೂ ಯಶಸ್ಸು ಸಿಗುತ್ತದೆ ಎಂದು ಹೇಳಲಾಗದು. ದೇಶವ್ಯಾಪಿ ಖ್ಯಾತಿ ಪಡೆದಿರುವ ಅಮುಲ್ ಬ್ರ್ಯಾಂಡು ದೊಡ್ಡದೆನ್ನುವುದರಲ್ಲಿ ಅನುಮಾನವಿಲ್ಲ. ಹಾಗೆಂದು ನಂದಿನಿ ಅದಕ್ಕೆ ಶರಣಾಗಬೇಕೇ? ಮಾರುಕಟ್ಟೆಯಲ್ಲಿ ಇತರ ಬ್ರ್ಯಾಂಡುಗಳ ಜೊತೆ ನಂದಿನಿ ಪೈಪೋಟಿ ಮಾಡಲಾಗದೇ ಹೈರಾಣಾಗುವ ಸಂದರ್ಭ ಬಂದರೆ ಮಾತ್ರ ಈ ಪ್ರಶ್ನೆಪ್ರಸ್ತುತವಾಗುತ್ತದೆ. ಆ ಸಂದರ್ಭ ಈಗ ಬಂದಿದೆಯೇ? ಇಲ್ಲ. ಹೀಗಾಗಿ ವ್ಯಾವಹಾರಿಕ ದೃಷ್ಟಿಯಿಂದಲೂ ವಿಲೀನ ಪ್ರಕ್ರಿಯೆಯ ಅವಶ್ಯಕತೆ ಕಾಣುತ್ತಿಲ್ಲ.

ಎರಡೂ ಸಂಸ್ಥೆಗಳು ಒಟ್ಟಿಗೆ ಕೆಲಸ ಮಾಡುವ ಸಾಧ್ಯತೆಯಿದೆಯೇ? ಖಂಡಿತವಾಗಿಯೂ ಇದೆ. ಸಹಕಾರಿ ಸಂಸ್ಥೆಗಳು ಪರಸ್ಪರ ಸಹಕರಿಸುವುದು ಸರಿಯಾದ ಮಾರ್ಗವೇ. ಆದರೆ ಸ್ವಹಿತಾಸಕ್ತಿಗಳನ್ನು ಕಾಪಾಡಿಕೊಂಡ ನಂತರವೇ ಪರಸ್ಪರ ಸಹಕಾರ ಸಾಧ್ಯ. ಅಮುಲ್ ಪಾರ್ಲರುಗಳಲ್ಲಿ ನಂದಿನಿಯ ಉತ್ಪನ್ನಗಳನ್ನು ಮಾರುವ ಮೂಲಕ ಈ ಸಹಕಾರ ಕೈಗೊಳ್ಳಬಹುದು. ಆದರೆ ಪಾರ್ಲರುಗಳಿಂದೀಚೆಗೆ, ಅಮುಲ್‌ನ ಪದಾರ್ಥಗಳನ್ನು ನಂದಿನಿಯ ಫ್ಯಾಕ್ಟರಿಗಳಲ್ಲಿ ಸಿದ್ಧಪಡಿಸುವ ಅವಕಾಶವಿದ್ದಲ್ಲಿ ಹಾಗೆ ಮಾಡುವುದರಲ್ಲಿ ವ್ಯಾವಹಾರಿಕ ಜಾಣ್ಮೆಯಿದೆ. ಆದರೆ ಗುಜರಾತ್‌ ಮಹಾಮಂಡಳಿ ಮಿಕ್ಕ ಸಂಸ್ಥೆಗಳೊಂದಿಗೆ ಸಹಕರಿಸುವ ಉತ್ಸುಕತೆಯನ್ನು ಈವರೆಗೆ ತೋರಿಸಿಲ್ಲ. ಅದು ಮತ್ತು ಜಿಲ್ಲಾ ಸ್ತರದ ಒಕ್ಕೂಟಗಳು ಅನೇಕ ರಾಜ್ಯಗಳನ್ನು ಹೊಕ್ಕು ತಮ್ಮದೇ ಹಾಲು ಉತ್ಪಾದನಾ ಕೇಂದ್ರಗಳನ್ನು ಸ್ಥಾಪಿಸಿ, ಸಹಕಾರ ವ್ಯವಸ್ಥೆಯ ಸಿದ್ಧಾಂತಗಳನ್ನು ಪಾಲಿಸದ, ಸದಸ್ಯರಲ್ಲದ ರೈತರಿಂದ ಹಾಲು ಸ್ವೀಕರಿಸುತ್ತಾ, ಆಯಾ ರಾಜ್ಯದ ಸ್ಥಳೀಯ ಸಹಕಾರ ವ್ಯವಸ್ಥೆಯನ್ನು ದುರ್ಬಲಗೊಳಿಸಿವೆ.

ಕರ್ನಾಟಕದಲ್ಲಿ ನಂದಿನಿ ಪ್ರಬಲವಾಗಿರುವುದರಿಂದ ಹಾಗೂ ಪ್ರತೀ ಲೀಟರ್‌ಗೆ ಇಂತಿಷ್ಟೆಂದು ಉತ್ಪಾದಕರಿಗೆ ರಾಜ್ಯ ಸರ್ಕಾರವು ಸಹಾಯಧನ ನೀಡುತ್ತಿರುವುದರಿಂದ ನಮ್ಮ ನಾಡಿನಲ್ಲಿ ಈ ಪ್ರಕ್ರಿಯೆ ಕಷ್ಟದ್ದಾಗಿ ಕಂಡಿರಬಹುದು. ಹಾಲು ಕೊಳ್ಳಲು ಸಾಧ್ಯವಾಗದಿದ್ದರೇನು, ಮಹಾಮಂಡಳಿಯನ್ನೇ ಕಬಳಿಸಬಹುದೋ ಎನ್ನುವ ಆಲೋಚನೆ ಇರಬಹುದೇ?

ಗ್ರಾಮಮಟ್ಟದಲ್ಲಿ ಸಹಕಾರ ಸಂಘಗಳನ್ನು ರಚಿಸುವ ಮಾತನ್ನು ಶಾ ಆಡಿದರಂತೆ. ಈ ಮಾತನ್ನು ಅವರು 40 ವರ್ಷ ತಡವಾಗಿ ಆಡುತ್ತಿದ್ದಾರೆ. 80ರ ದಶಕದಲ್ಲಿಯೇ ರಾಷ್ಟ್ರೀಯ ಹೈನುಗಾರಿಕೆ ಅಭಿವೃದ್ಧಿ ಮಂಡಳಿಯ ‘ಆಪರೇಷನ್ ಫ್ಲಡ್’ ಕಾರ್ಯಕ್ರಮದಲ್ಲಿ ಈ ಕೆಲಸವನ್ನು ಸಂಪನ್ನಗೊಳಿಸಲಾಗಿದೆ. ಇಂದಿನ ನಂದಿನಿಯ ಪ್ರಗತಿಗೆ ಆಗ ಹೂಡಿದ ಭದ್ರ ಬುನಾದಿಯೇ ಕಾರಣ ಎನ್ನುವುದರಲ್ಲಿ ಅನುಮಾನವಿಲ್ಲ. ‘ಕ್ಷೀರ ಪಿತಾಮಹ’ ಎಂದೇ ಗುರುತಿಸಲಾಗುವ ಡಾ. ವರ್ಗೀಸ್ ಕುರಿಯನ್ ಅವರು ಅಮುಲ್‌ನ ಅಧ್ಯಕ್ಷರೂ ಮತ್ತು ಅದೇ ಕಾಲಕ್ಕೆ ರಾಷ್ಟ್ರೀಯ ಹೈನುಗಾರಿಕೆ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರೂ ಆಗಿದ್ದರು. ಹೀಗಿದ್ದೂ ಅವರು ರಾಜ್ಯಗಳಲ್ಲಿ ವಿಕೇಂದ್ರೀಕೃತವಾದ ಸಹಕಾರ ವ್ಯವಸ್ಥೆ ಬೆಳೆಸುವುದನ್ನು ಪ್ರೋತ್ಸಾಹಿಸುತ್ತಿದ್ದರು. ಸಹಕಾರ ಕ್ಷೇತ್ರದಲ್ಲಿರುವ ಸಂಸ್ಥೆಗಳು ಒಟ್ಟಾಗಿ, ಖಾಸಗಿ ಡೈರಿಗಳ ಜೊತೆ ಪೈಪೋಟಿ ಮಾಡಲು ಸಾಧ್ಯ. ಆದರೆ ಕರ್ನಾಟಕದಲ್ಲಿ ಆ ಸಾಧ್ಯತೆಯೂ ಕಾಣಿಸುತ್ತಿಲ್ಲ. ರಾಜ್ಯದ ಬೊಕ್ಕಸದಿಂದ ಬೇಜವಾಬ್ದಾರಿಯಾಗಿ ರೈತರಿಗೆ ಕೊಡುತ್ತಿರುವ, ಯಾವುದೋ ತ್ವರಿತ ರಾಜಕೀಯ ಕಾರಣಕ್ಕಾಗಿ ರೂಪಿಸಿದ ಸಹಾಯಧನವೇ ಈಗ ಈ ಸಂಸ್ಥೆಗೆ ಶ್ರೀರಕ್ಷೆಯಾಗಿ ಪರಿಣಮಿಸಬಹುದು.

ಒಂದು ರಾಷ್ಟ್ರ ಒಂದು ಭಾಷೆ, ಒಂದು ರಾಷ್ಟ್ರ ಒಂದು ಚುನಾವಣೆ, ಒಂದು ರಾಷ್ಟ್ರ ಒಂದು ತೆರಿಗೆ– ಹೀಗೆ ಎಲ್ಲವನ್ನೂ ಕೇಂದ್ರೀಕರಿಸುತ್ತಿರುವ ಈ ಸಮಯ ದಲ್ಲಿ ನಮಗೆ ಒಂದು ರಾಷ್ಟ್ರ ಒಂದು ಸಹಕಾರ ಮಹಾಮಂಡಳಿಯ ಅವಶ್ಯಕತೆಯಿಲ್ಲ. ಕೇಂದ್ರ ಸರ್ಕಾರ ವಿಕೇಂದ್ರೀಕರಣದ ವಿರೋಧಿಯಾಗಿದೆ ಎನ್ನುವುದಕ್ಕೆ ಹೆಚ್ಚಿನ ಪುರಾವೆ ಕೊಡಬೇಕಿಲ್ಲ. ಕರ್ನಾಟಕ ಮಹಾ ಮಂಡಳಿಯಲ್ಲಿರುವ ರೈತ ಪ್ರತಿನಿಧಿಗಳು ರಾಜ್ಯದ ಹಿತದೃಷ್ಟಿಯನ್ನು ಕಾಪಾಡುತ್ತಾರೆಯೇ ಅಥವಾ ರಾಜಕೀಯವಾಗಿ ದೆಹಲಿಯಿಂದ ಮತ್ತು ಅಹಮದಾಬಾದಿನಿಂದ ಬರುವ ಆದೇಶವನ್ನು ಶಿರಸಾವಹಿಸಿ ಪಾಲಿಸುತ್ತಾರೆಯೇ ಎನ್ನುವುದನ್ನು ಗಮನಿಸಬೇಕು. ಆ ಆದೇಶ ಪಾಲಿಸಿದರೆ, ಮುಂದೆ ಸಾಗಲಿರುವ ಕಾಲಚಕ್ರವನ್ನು ಹಿಂದಕ್ಕೆಳೆಯುವುದು ಅಸಾಧ್ಯ. ಹೀಗಾಗಿಯೇ ಮಹಾಮಂಡಳಿಯ ಆಡಳಿತ ಮಂಡಳಿ ಸದಸ್ಯರ ಮೇಲೆ ಈಗಿನಿಂದಲೇ ಸ್ಥಳೀಯರು ಒತ್ತಡ ಹೇರಿ, ಬರಲಿರುವ ಕಂಟಕ ಎದುರಿಸಲು ಅವರನ್ನು ಸಿದ್ಧರಾಗಿಸಬೇಕು. ಇದು ಪಕ್ಷದ ವಿಚಾರವಲ್ಲ, ರಾಜ್ಯದ ವಿಚಾರ, ವಿಕೇಂದ್ರೀಕರಣದ ವಿಚಾರ ಎನ್ನುವುದನ್ನು ನಾವು ಎಂದಿಗೂ ಮರೆಯಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT