ಗುರುವಾರ , ಫೆಬ್ರವರಿ 25, 2021
20 °C
ಅಧಿಕಾರದಾಹಿ ರಾಜಕೀಯ ಪಕ್ಷಗಳನ್ನು ದೂರವಿಟ್ಟ ರೈತ ಚಳವಳಿ ತೋರುತ್ತಿರುವ ದಿಟ್ಟ ಹಾದಿ...

ನಟರಾಜ್ ಹುಳಿಯಾರ್ ಲೇಖನ | ನವ ಎಚ್ಚರ: ನವ ಪಾಠಗಳು

ನಟರಾಜ್ ಹುಳಿಯಾರ್ Updated:

ಅಕ್ಷರ ಗಾತ್ರ : | |

‘ಈಗ ನಡೆಯುತ್ತಿರುವ ರೈತ ಚಳವಳಿ ಇತರ ಚಳವಳಿಗಳಂತಲ್ಲ; ಇದು ನಿಜಕ್ಕೂ ನೆಲಮಟ್ಟದಿಂದ ನಡೆಯುತ್ತಿರುವ ಚಳವಳಿ...’

ಪ್ರಮುಖ ರಾಜಕೀಯ ವಿಜ್ಞಾನಿ ಯೋಗೇಂದ್ರ ಯಾದವ್ ಈ ಮಾತನ್ನು ಮತ್ತೆಮತ್ತೆ ಹೇಳುತ್ತಿದ್ದಾರೆ. ಯಾದವ್ ಎಂಟು ವರ್ಷಗಳ ಕೆಳಗೆ ಭ್ರಷ್ಟಾಚಾರ ವಿರೋಧಿ ಆಂದೋಲನದಲ್ಲಿ ದುಡಿದವರು. ಆ ಆಂದೋಲನದ ಫಲವಾದ ಆಮ್ ಆದ್ಮಿ ಪಕ್ಷಕ್ಕೆ ತಮ್ಮ ಆಳವಾದ ರಾಜಕೀಯ ಜ್ಞಾನವನ್ನು, ಚುನಾವಣೆಗಳ ಅರಿವನ್ನು ಧಾರೆಯೆರೆದವರು. ದೆಹಲಿಯಲ್ಲಿ ‘ಆಪ್’ ಅಧಿಕಾರಕ್ಕೆ ಬಂದ ಮೇಲೆ, ತಮ್ಮ ರಾಜ್ಯ ಹರಿಯಾಣದಲ್ಲಿ ವಿಶಾಲವಾದ ರೈತ ಸಂಘಟನೆಯನ್ನು ಕಟ್ಟಲು ಹೊರಟಿದ್ದ ಯಾದವ್‌ಗೆ ರೈತ ಸಂಘಟನೆ ಅತ್ಯಗತ್ಯವೆಂಬ ಅರಿವಿತ್ತು. ಆದರೆ ದೆಹಲಿಯಲ್ಲಿ ಅಧಿಕಾರ ಹಿಡಿದ ತಾನು ಹರಿಯಾಣದಲ್ಲೂ ಗೆಲ್ಲಬಹುದು ಎಂಬ ಭ್ರಮೆಯಲ್ಲಿದ್ದ ‘ಹರಿಯಾಣ್ವಿ’ ಅರವಿಂದ ಕೇಜ್ರಿವಾಲ್‌ ಅವರು ಯೋಗೇಂದ್ರ ಯಾದವ್, ಪ್ರಶಾಂತ್‌ ಭೂಷಣ್ ಅವರು ಪಕ್ಷ ಬಿಡುವಂತೆ ಮಸಲತ್ತು ಮಾಡಿದರು; ಕೇಜ್ರಿವಾಲ್ ಹಾಗೆ ಮಾಡದಿದ್ದರೆ ಮೊನ್ನೆ ರೈತರು ಹರಿಯಾಣ ಸರ್ಕಾರದ ಲಾಠಿಗಳನ್ನು ಎದುರಿಸಬೇಕಾದ ಸಂದರ್ಭ ಬರುತ್ತಿರಲಿಲ್ಲವೇನೋ. ಕೇಜ್ರಿವಾಲ್, ಹರಿಯಾಣದ ಮುಖ್ಯಮಂತ್ರಿಯಾಗಿ ತಾವೇ ರೈತ ಚಳವಳಿಗಾರರನ್ನು ದೆಹಲಿಯತ್ತ ಬೀಳ್ಕೊಡಬಹುದಿತ್ತೇನೋ!

ಇದೀಗ ಕೇಜ್ರಿವಾಲ್, ಪಂಜಾಬ್ ಚುನಾವಣೆಯ ಮೇಲೆ ಕಣ್ಣಿಟ್ಟು ರೈತ ಚಳವಳಿಗೆ ಬೆಂಬಲ ಘೋಷಿಸುತ್ತಿದ್ದರೂ ರೈತರೇನೂ ಅದರಿಂದ ರೋಮಾಂಚನಗೊಂಡಿಲ್ಲ! ರೈತ ಚಳವಳಿಯನ್ನು ಕಾಂಗ್ರೆಸ್, ಅಕಾಲಿದಳ, ತೃಣಮೂಲ ಕಾಂಗ್ರೆಸ್, ಕಮ್ಯುನಿಸ್ಟ್ ಮುಂತಾದ ಪಕ್ಷಗಳು ಬೆಂಬಲಿಸಿದ್ದರೂ ರೈತ ನಾಯಕರು ರಾಜಕೀಯ ಪಕ್ಷಗಳನ್ನು ತೀರಾ ಒಳಗೆ ಬಿಟ್ಟುಕೊಂಡಿಲ್ಲ. ಯಾರಿಗೂ ತಮ್ಮ ಚಳವಳಿಯ ಬೆನ್ನೇರಿ ಅಧಿಕಾರ ಹಿಡಿಯುವ ಅವಕಾಶ ಕೊಟ್ಟಿಲ್ಲ. ಇವೆಲ್ಲ ರೈತ ಚಳವಳಿಯಿಂದ ಎಲ್ಲ ಜನತಾ ಚಳವಳಿಗಳೂ ಮುಂದಿನ ದಿನಗಳಲ್ಲಿ ಕಲಿಯಬಹುದಾದ ಹೊಸ ಪಾಠಗಳಂತಿವೆ.

ರೈತರ ಇವತ್ತಿನ ಕಟ್ಟೆಚ್ಚರಕ್ಕೆ ಈಚಿನ ಇತಿಹಾಸದಿಂದ ಕಲಿತಿರುವ ಪಾಠವೂ ಕಾರಣ. ಅಣ್ಣಾ ಹಜಾರೆ ನೇತೃತ್ವದ ಭ್ರಷ್ಟಾಚಾರ ವಿರೋಧಿ ಆಂದೋಲನವು ‘ಪ್ರಾಯೋಜಿತ’ ಆಂದೋಲನವಾಗಿತ್ತೆಂಬ ‘ಗುಟ್ಟು’ ಅದರ ನಾಯಕರಲ್ಲೊಬ್ಬರಾಗಿದ್ದ ಪ್ರಶಾಂತ್‌ ಭೂಷಣರಿಂದಲೇ ಅಧಿಕೃತವಾಗಿ ಬಹಿರಂಗವಾಗಿದೆ! ಆದ್ದರಿಂದಲೇ ಅಣ್ಣಾ ಹಜಾರೆ ರೈತರಿಗಾಗಿ ಉಪವಾಸ ಆರಂಭಿಸುತ್ತೇನೆಂದು ಕೂತಲ್ಲೇ ಕೂಗುತ್ತಿದ್ದರೂ ರೈತರು ಕೇರ್ ಮಾಡುತ್ತಿಲ್ಲ. ಹಿಂದೊಮ್ಮೆ ಅಣ್ಣಾ ಹಜಾರೆಯವರ ಪ್ರಾಯೋಜಿತ ಆಂದೋಲನವನ್ನು ಮುನ್ನಡೆಸಿದ ಶಕ್ತಿಗಳು ಈಗಿನ ರೈತ ಚಳವಳಿಯೂ ಅಂಥ ಚಳವಳಿಯೇ ಎಂದು ಮೊದಮೊದಲು ಕೇವಲವಾಗಿ ಕಾಣಲೆತ್ನಿಸಿದವು. ಬಾಯಿಬಡುಕರ ಚೀರಾಟಗಳು, ಪ್ರಾಯೋಜಿತ ಪ್ರಚಾರಗಳ ಮೂಲಕ ರೈತ ಚಳವಳಿಯನ್ನು ಹತ್ತಿಕ್ಕಲು ನೋಡಿದವು. ರೈತರು ಜಗ್ಗಲಿಲ್ಲ. ಅದಕ್ಕೆ ಮುಖ್ಯ ಕಾರಣ, ಚಳವಳಿಯ ಜುಟ್ಟನ್ನು ಯಾವ ರಾಜಕೀಯ ನಾಯಕರಿಗೂ ಕೊಡದಂತೆ ರೈತರು ಎಚ್ಚರವಾಗಿರುವುದು, ಸರ್ಕಾರ ಹಾಗೂ ಕೆಲವು ಮಾಧ್ಯಮಗಳ ವ್ಯವಸ್ಥಿತ ಅಪಪ್ರಚಾರಗಳನ್ನು ಪರ್ಯಾಯ ಮಾಧ್ಯಮಗಳ ಮೂಲಕ ರೈತಪರ ಹುಡುಗ, ಹುಡುಗಿಯರು ಹಿಮ್ಮೆಟ್ಟಿಸುತ್ತಿರುವುದು!

ಹಲವು ಸಿದ್ಧಾಂತಗಳ ರೈತ ಸಂಘಟನೆಗಳು ಒಗ್ಗೂಡಿರುವ ಈ ಚಳವಳಿಯಲ್ಲಿ ಕೃಷಿಗೆ ಸಂಬಂಧಿಸಿದ ಕಾನೂನುಗಳನ್ನು ತಂತಮ್ಮ ಭಾಷೆಗಳಲ್ಲಿ ಓದಿಕೊಂಡು, ಸ್ಪಷ್ಟವಾಗಿ ಮಾತನಾಡಬಲ್ಲ ಸಾವಿರಾರು ರೈತರಿದ್ದಾರೆ. ರೈತರು ಸ್ಥೂಲವಾಗಿಯಾದರೂ ಒಂದು ವರ್ಗವಾಗಿ ರೂಪುಗೊಳ್ಳತೊಡಗಿದ್ದಾರೆ. ಇದು ಸಿಎಎ ವಿರೋಧಿ ಚಳವಳಿಯಲ್ಲಿ ಮುಸಲ್ಮಾನ ಮಹಿಳೆಯರು ಒಂದು ವರ್ಗವಾಗಿ ರೂಪುಗೊಂಡು ನಡೆಸಿದ ಹೋರಾಟದಿಂದ ರೈತ ಚಳವಳಿ ಕಲಿತ ಪಾಠ. ವಿಶ್ವವಿದ್ಯಾಲಯಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಒಂದು ವರ್ಗವಾಗಿ ಯೋಚಿಸುತ್ತಾ, ಜನತಾ ಚಳವಳಿಗಳನ್ನು ಬೆಂಬಲಿಸುತ್ತಿರುವ ರೀತಿಯಿಂದಲೂ ಕಲಿತ ಪಾಠವಿದು.

ಹಿಂಸೆಗೆ ಅವಕಾಶವಾಗದಂತೆ ಲಕ್ಷಾಂತರ ರೈತರು ನಡೆದುಕೊಳ್ಳುತ್ತಿರುವ ರೀತಿಯಲ್ಲೂ ಹೊಸ ಮಾದರಿಗಳಿವೆ. ಹಿಂದೆ ರೈತ ಹೋರಾಟಗಳ ಸಂದರ್ಭದಲ್ಲಿ ಸರ್ಕಾರಗಳೇ ಹಿಂಸೆಯನ್ನು ಪ್ರಚೋದಿಸಿವೆ. ಬೃಹತ್ ರೈತ ಚಳವಳಿಯನ್ನು ಒಡೆದ ದುರುಳ ನಾಯಕರು ಕರ್ನಾಟಕದಲ್ಲೂ, ದೇಶದ ಇತರೆಡೆಯಲ್ಲೂ ಇದ್ದಾರೆ. ಚಳವಳಿಗಳೊಳಗೆ ರಾಜಕೀಯ ಪಕ್ಷಗಳ ಪುಂಡರು ನುಸುಳಿ, ಚಳವಳಿಗಳನ್ನು ಹಿಂಸೆಯತ್ತ ತಿರುಗಿಸಲೆತ್ನಿಸಿದ್ದಾರೆ. ಈ ಬಗ್ಗೆಯಂತೂ ಚಳವಳಿ ಸದಾ ಎಚ್ಚರದಲ್ಲಿರಬೇಕಾಗಿದೆ; ವಿದ್ಯುತ್ ಸಂಪರ್ಕ ಕಡಿದು ಹಾಕುವಂಥ ಮಾರ್ಗಗಳನ್ನು ಕೈಬಿಡಬೇಕಾಗಿದೆ. ಚಳವಳಿಯನ್ನು ಬಗ್ಗುಬಡಿಯಲು ಅವಕಾಶ ಕೊಡದಂಥ ಜಾಣತನವೂ ಚಳವಳಿಗಳಿಗಿರಬೇಕು.

ದೆಹಲಿಯ ಶಾಹೀನ್ ಬಾಗ್‌ನಲ್ಲಿ, ಅಸ್ಸಾಮಿನಲ್ಲಿ ಕಳೆದ ವರ್ಷ ಕೊರೆವ ಚಳಿಯಲ್ಲಿಯೂ ಬೀದಿಯಲ್ಲಿ ಕೂತ ಮಹಿಳೆಯರಂತೆ ರೈತರು ಕೂಡ ತಿಂಗಳುಗಟ್ಟಲೆ ಚಳವಳಿಗೆ ಸಿದ್ಧವಾಗಿರುವ ರೀತಿ ಕಂಡಿರುವ ಆರಾಮಜೀವಿಗಳಿಗೆ, ರೈತರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಕೊಂಚವಾದರೂ ಅರಿವು ಮೂಡಿರಬಹುದು. ದಶಕಗಳಿಂದ ರೈತ ಚಳವಳಿಗಳನ್ನು ಅಧ್ಯಯನ ಮಾಡುತ್ತಿರುವ ಸಂಶೋಧಕಿ ಶೈಲ್ ಮಾಯಾರಾಂ ಈ ಚಳವಳಿಯನ್ನೂ ಹತ್ತಿರದಿಂದ ನೋಡಿದ್ದಾರೆ. ನಿತ್ಯ ಊಟ ಒದಗಿಸುತ್ತಿರುವ ಗುರುದ್ವಾರಗಳು, ತಮ್ಮ ತೋಟಗಳಿಂದ ಹಣ್ಣು ತಂದುಕೊಡುತ್ತಿರುವ ರೈತರು, ಉಚಿತ ದಿನಸಿ ಹಂಚುತ್ತಿರುವ ಅಂಗಡಿಗಳು... ಇತ್ಯಾದಿಗಳೆಲ್ಲವೂ ದೆಹಲಿಯ ಗಡಿಯಲ್ಲಿ ಹೊಸದೊಂದು ಸಮುದಾಯ ಜೀವನವನ್ನೇ ಸೃಷ್ಟಿಸಿರುವುದನ್ನು ಕಂಡು ಅವರು ಅಚ್ಚರಿಗೊಂಡಿದ್ದಾರೆ.

ಅಪ್ಪ ಅಮ್ಮಂದಿರಿಗೆ ಬೆಂಬಲವಾಗಿ ಚಳವಳಿಗೆ ಧಾವಿಸುತ್ತಿರುವ ಹುಡುಗ, ಹುಡುಗಿಯರು, ಲಕ್ಷಾಂತರ ರೈತರು, ರೈತರ ಮಕ್ಕಳು, ರೈತ ಬೆಂಬಲಿಗರು ಪ್ರತಿಭಟನೆಯ ಭಾಗವಾಗಿ ಜಿಯೋ ‘ಸಿಮ್’ ಕೈಬಿಟ್ಟು ಇತರ ಮೊಬೈಲ್ ಸಂಪರ್ಕಗಳತ್ತ ಹೋಗುತ್ತಿರುವ ರೀತಿ... ಇವೆಲ್ಲವೂ ಚಳವಳಿಯ ಹೊಸ ಸಾಂಕೇತಿಕ ಮಾರ್ಗಗಳನ್ನು ಸೂಚಿಸುತ್ತಿವೆ. ಇವೆಲ್ಲ ದೇಶದುದ್ದಕ್ಕೂ ಅನ್ನದಾತರಿಗೆ ಬೌದ್ಧಿಕವಾಗಿ, ತಾತ್ವಿಕವಾಗಿ ಬೆಂಬಲವಾಗಿ ನಿಲ್ಲಲು ಎಲ್ಲ ಕಾಳಜಿವಂತರಿಗೂ ಪ್ರೇರಣೆಯಾಗಬಲ್ಲವು.

ಎರಡು ದಶಕಗಳ ಕೆಳಗೆ ಜಾಗತೀಕರಣದ ಮಾರುಕಟ್ಟೆಯ ವಿರುದ್ಧದ ಹೋರಾಟಗಳಲ್ಲಿ ರೈತ ಸಂಘಟನೆಗಳು ಒಂದಾಗಿ ದನಿಯೆತ್ತಿದ್ದರೂ ಮುಂದೆ ಪಕ್ಷ ರಾಜಕಾರಣದ ಕುತಂತ್ರಗಳಿಂದಾಗಿ ಒಡೆದುಹೋದವು. ರೈತಬಾಂಧವರು ನಿತ್ಯ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದ ದುರಂತವನ್ನು ರೈತರು ಅಸಹಾಯಕರಾಗಿ ನೋಡುತ್ತಲೇ ಇದ್ದರು. ಈ ಘಟ್ಟದಲ್ಲಿ ರೈತರ ಬಾಯಿಂದ ‘ಮಾಡು ಇಲ್ಲವೆ ಮಡಿ’ ಘೋಷಣೆಯೂ ಕೇಳಿಬರುತ್ತಿದೆ.


–ನಟರಾಜ್ ಹುಳಿಯಾರ್

ಕಲಬುರ್ಗಿಯಲ್ಲಿ ಡಿ. 25ರಂದು ಅಂಬೇಡ್ಕರ್ ಮನುಸ್ಮೃತಿ ಸುಟ್ಟ ದಿನಾಚರಣೆಯಲ್ಲಿ ರೈತಸಂಘ, ದಲಿತ ಸಂಘಟನೆಗಳೆರಡರ ಪ್ರತಿನಿಧಿಗಳೂ ಭಾಗಿಯಾಗಿದ್ದು ಕರ್ನಾಟಕದಲ್ಲೂ ಚಳವಳಿಗಳ ಹೊಸ ದಿಕ್ಕನ್ನು ಸೂಚಿಸುತ್ತಿತ್ತು. ಕರ್ನಾಟಕದ ದಲಿತ ಸಂಘರ್ಷ ಸಮಿತಿಗಳ ನಾಯಕರಂತೆ, ಉತ್ತರ ಪ್ರದೇಶದ ನವನಾಯಕ ಚಂದ್ರಶೇಖರ ಆಝಾದ್ ಕೂಡ ರೈತ ಚಳವಳಿಯನ್ನು ಬೆಂಬಲಿಸುತ್ತಿದ್ದಾರೆ. ಕಳೆದ ವರ್ಷದಿಂದ ಜನತಾ ಚಳವಳಿಗಳಿಗೆ ಜನಪ್ರಿಯ ನಟರು, ಹಾಡುಗಾರರು ಬೆಂಬಲ ಸೂಚಿಸುವ ಟ್ರೆಂಡ್ ರೈತ ಚಳವಳಿಯ ಸಂದರ್ಭದಲ್ಲೂ ಮುಂದುವರಿದಿದೆ. ಈ ಆರೋಗ್ಯಕರ ಸ್ಪಿರಿಟ್ ದಲಿತ, ಕಾರ್ಮಿಕ, ಮಹಿಳೆ, ಅಲ್ಪಸಂಖ್ಯಾತ ಹಾಗೂ ಇನ್ನಿತರರ ಹಕ್ಕುಗಳ ಹೋರಾಟದಲ್ಲೂ ಮುಂದುವರಿದರೆ ದೇಶದಲ್ಲಿ ಚಳವಳಿ ರಾಜಕಾರಣದ ಹೊಸ ಯುಗವೇ ಶುರುವಾಗುತ್ತದೆ.

ಹಾಗೆಯೇ, ಕೊರೆವ ಚಳಿಯಲ್ಲಿ ರೊಟ್ಟಿ ಬೇಯಿಸುತ್ತಿರುವ ತಾಯಂದಿರು, ಜಾತಿ, ವರ್ಗಗಳನ್ನು ಮೀರಿ ಎಲ್ಲರಿಂದಲೂ ಬೆಂಬಲ ಪಡೆಯುತ್ತಿರುವ ರೈತರು ಮುಂದೆ ದೇಶದ ದಲಿತ ಹೋರಾಟಗಳ ಸಂದರ್ಭಗಳಿಗೆ ಈ ‘ಸಮುದಾಯ ಪ್ರಜ್ಞೆ’ಯನ್ನು ವಿಸ್ತರಿಸುವಂತಾದರೆ, ಎಲ್ಲ ಜಾತಿಗಳ ಜೊತೆ ರೊಟ್ಟಿ ಹಂಚಿಕೊಂಡು ತಿನ್ನುವ ಈ ಅಭ್ಯಾಸ ಅವರ ಊರುಗಳ ದಲಿತ ಕೇರಿಗಳ ಜೊತೆಗೂ ಮುಂದುವರಿದರೆ... ಈ ಚಳವಳಿ ನಿಜಕ್ಕೂ ವಿಶಾಲವಾದ ಸಮುದಾಯ ಚಳವಳಿಯಾಗಬಲ್ಲದು.

ರೈತ ಚಳವಳಿಯು ರಾಜಕೀಯ ಪಕ್ಷಗಳನ್ನು ದೂರವಿಟ್ಟಿದ್ದರೂ ಚಳವಳಿಯ ರಾಜಕೀಯ ಪರಿಣಾಮಗಳು ಈಗಾಗಲೇ ಗೋಚರಿಸುತ್ತಿವೆ! ಚಳಿಯಲ್ಲಿ ನಡುಗುತ್ತಿದ್ದ ರೈತರ ಮೇಲೆ ಜಲಫಿರಂಗಿ ಹಾರಿಸಿ ಕ್ರೌರ್ಯವೆಸಗಿದ ಹರಿಯಾಣದ ಆಡಳಿತ ಪಕ್ಷಕ್ಕೆ ಇದೀಗ ಸ್ಥಳೀಯ ಚುನಾವಣೆಗಳಲ್ಲಿ ಭಾರಿ ಹಿನ್ನಡೆಯಾಗಿದೆ. ರೈತರು ಸಿಡಿದೆದ್ದಾಗಲೆಲ್ಲ...

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು