ಶನಿವಾರ, ಸೆಪ್ಟೆಂಬರ್ 18, 2021
27 °C
ಅಗತ್ಯ ತರಬೇತಿ, ಸಂಪನ್ಮೂಲಗಳಿವೆಯೇ ಎಂಬುದರ ಆತ್ಮಾವಲೋಕನ ನಡೆಯಬೇಕಿದೆ

ವಿಶ್ಲೇಷಣೆ | ಅವಸರಿಸದೆ ಬರಲಿ ಶಿಕ್ಷಣ ನೀತಿ

ಶರತ್ ಅನಂತಮೂರ್ತಿ Updated:

ಅಕ್ಷರ ಗಾತ್ರ : | |

ಕರ್ನಾಟಕದ ಉನ್ನತ ಶಿಕ್ಷಣ ಸಚಿವರು ಮತ್ತು ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ಅಧಿಕಾರಿಗಳು ಹೊಸ ಶಿಕ್ಷಣ ನೀತಿಯನ್ನು (ಎನ್‌ಇಪಿ) ಈ ವರ್ಷದಿಂದಲೇ ಪ್ರಾರಂಭಿಸುವ ಸರ್ಕಾರದ ಉದ್ದೇಶದ ಬಗ್ಗೆ ಇತ್ತೀಚೆಗೆ ಮಾತನಾಡಿದ್ದಾರೆ.

ಪದವಿ ಕಾಲೇಜುಗಳಲ್ಲಿ ಈಗಿರುವ ಸಾಮಾನ್ಯ ಮೂರು ವಿಷಯಗಳನ್ನು, ಅಂದರೆ ಉದಾಹರಣೆಗೆ ಪಿಸಿಎಂ ಅಥವಾ ಪಿಇಎಂ ಅಂತಹ ಸಂಯೋಜನೆಗಳ ಬದಲಿಗೆ, ಒಂದೇ ಜ್ಞಾನಶಾಖೆಯ ಎರಡು ಮುಖ್ಯ ವಿಷಯಗಳ ಜೊತೆ ಬೇರೊಂದು ಜ್ಞಾನಶಾಖೆಯ ವಿಷಯ ವನ್ನು (ಎಲೆಕ್ಟಿವ್) ಆಯ್ಕೆ ಮಾಡಿಕೊಳ್ಳಬಹುದು. ಪದವಿ ಮುಗಿಸುವ ಮುನ್ನ ತಾವು ಆರಿಸಿಕೊಂಡ ವಿಷಯಗಳಲ್ಲದೆ ಕೆಲವು ಕೌಶಲಗಳನ್ನು (skill sets) ಕೂಡ ಕಲಿ ಯುವ ಸಾಧ್ಯತೆಯ ಪ್ರಸ್ತಾವ ಈ ಶಿಕ್ಷಣ ನೀತಿಯಲ್ಲಿದೆ. ಜೊತೆಗೆ ಸಂಶೋಧನೆಯ ಹಾದಿಯನ್ನು ಹಿಡಿಯಬಯಸುವವರಿಗೆ ನಾಲ್ಕು ವರ್ಷಗಳ ಆನರ್ಸ್ ಕೋರ್ಸುಗಳನ್ನು ಆರಂಭಿಸುವ ಮಹತ್ವದ ಹೆಜ್ಜೆಯನ್ನೂ ಇದು ಒಳ ಗೊಂಡಿದೆ.

ಯಾವುದೇ ಪಠ್ಯಕ್ರಮ, ಕಲಿಸುವ ವಿಧಾನ, ವಿಷಯ ಗಳ ಆಯ್ಕೆಯ ಹಿಂದೆ ರಾಜಕೀಯ ನಿಲುವಿರುತ್ತದೆ. ಈ ಕೋನದಿಂದ ಎನ್‌ಇಪಿಯನ್ನು ಕೂಡ ವಿಶ್ಲೇಷಿಸಬಹುದು. ಆದರೆ ಅದು ಈ ಲೇಖನದ ಉದ್ದೇಶವಲ್ಲ. ಹಾಗೆ ನೋಡಿದರೆ, ಹೊಸ ರೀತಿಯ ಬಹುಶಿಸ್ತೀಯ ಕಲಿಕೆಯ ಬಗ್ಗೆ ಈ ಶಿಕ್ಷಣ ನೀತಿಯಲ್ಲಿ ಕೆಲವು ಒಳ್ಳೆಯ ಅಂಶ ಗಳ ಪ್ರಸ್ತಾಪವಿದೆ. ಕೇವಲ ‘ಗಿಳಿಪಾಠ’ದ ಮಾದರಿಯ ಕಲಿಕೆಯ ವಿಧಾನಗಳನ್ನು ಬಿಟ್ಟು ಬೇರೊಂದು ಬಗೆಯ ಕ್ರಿಯಾತ್ಮಕ ಕಲಿಕೆಯನ್ನು ಒದಗಿಸಬೇಕೆಂಬ ಸಂಕಲ್ಪವು ಸ್ವಾಗತಾರ್ಹವಾದುದಾಗಿದೆ. ಸಮಸ್ಯೆಯಿರುವುದು ಅವಸರದ ಅನುಷ್ಠಾನದಲ್ಲಿ.

ಹಲವಾರು ವರ್ಷಗಳಿಂದ ಸ್ನಾತಕೋತ್ತರ ವಿದ್ಯಾರ್ಥಿ ಗಳ ಬೋಧನೆಯಲ್ಲಿ ತೊಡಗಿಸಿಕೊಂಡ, ಇಂಥ ಸಂಸ್ಥೆಗಳ ರೀತಿನೀತಿಗಳನ್ನು ಅರಿತ ನಮ್ಮಂಥವರಿಗೆ ಹೊಸ ನೀತಿ ಯನ್ನು ಅಳವಡಿಸಲು ಸರ್ಕಾರ ತೋರಿಸುತ್ತಿರುವ ಅವ ಸರವು ಗಾಬರಿ ಹುಟ್ಟಿಸುವಂತಿದೆ. ಪದವಿ ಕಾಲೇಜುಗಳಲ್ಲಿ ಮತ್ತು ವಿಶ್ವವಿದ್ಯಾಲಯಗಳಲ್ಲಿ ಹೊಸ ನೀತಿಯ ಜಾರಿಗೆ ಅಗತ್ಯವಾದ ತಯಾರಿಯ ಬಗ್ಗೆ ಚರ್ಚೆಗಳು ನಡೆಯಬೇಕು. ಹೊಸ ನೀತಿಯನ್ನು ಪಾಲಿಸಲು ಅಗತ್ಯವಾದ ತರಬೇತಿ ಮತ್ತು ಸಂಪನ್ಮೂಲಗಳು ಇವೆಯೇ ಎಂಬುದರ ಬಗ್ಗೆ ಪ್ರಾಮಾಣಿಕವಾದ ಆತ್ಮಾವಲೋಕನ ಮಾಡಿಕೊಂಡು ಅದಕ್ಕೆ ಸಿದ್ಧವಾಗಬೇಕು. ಅದರ ಬದಲಿಗೆ, ವಿದ್ಯಾರ್ಥಿಗಳ ಜೊತೆ ನಿಕಟ ಸಂಪರ್ಕವಿರದ ಕೆಲವು ಕುಲಪತಿಗಳು ಅರೆ ಬರೆ ಪರಿಣತರ ಜೊತೆ ಆನ್‌ಲೈನ್ ಚರ್ಚೆಗಳನ್ನು ನಡೆಸಿ ನಿರ್ಧಾರಗಳನ್ನು ಪ್ರಕಟಿಸುತ್ತಿದ್ದಾರೆ.

ಇಂಥ ಆಮೂಲಾಗ್ರ ಬದಲಾವಣೆಗೆ, ವಿವಿಧ ಹಂತಗಳಲ್ಲಿ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಸಂವಾದಗಳನ್ನು ನಡೆಸಿ, ಅವರ ಸಮಸ್ಯೆಗಳನ್ನು ಪರಿಗಣಿಸಿ ನಡೆಸಬೇಕಾದ ತಯಾರಿಗೆ ಕನಿಷ್ಠ ಒಂದು ವರ್ಷವಾದರೂ ಬೇಕು. ಈಗ ಪಾಠ ಮಾಡುತ್ತಿರುವವರು ಸಹ, ತಾವು ಕಲಿಸಲು ಬಳಸು ತ್ತಿರುವ ಪರಿಕರ ಮತ್ತು ವಿಧಾನಗಳ ಬಗ್ಗೆ ಆಳವಾದ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ತುರ್ತು ಇದೆ.

ಇನ್ನೊಂದು ಅತ್ಯಂತ ಮುಖ್ಯವಾದ ವಿಷಯವಿದೆ. ಕೆಲವು ವಿಶೇಷ ಪರಿಣತ ಕ್ಷೇತ್ರಗಳನ್ನು ಪದವಿ ಕಾಲೇಜು ಗಳಲ್ಲೂ ವಿಶ್ವವಿದ್ಯಾಲಯಗಳಲ್ಲೂ ಬೆಳೆಸುವುದು ಹೊಸ ಶಿಕ್ಷಣ ನೀತಿಯ ಉದ್ದೇಶಗಳಲ್ಲಿ ಒಂದು. ಆದರೆ ಇದನ್ನು ಆರಂಭಿಸಿ, ಬೆಳೆಸಿ ಮುಂದುವರಿಸಲು ಇದರಲ್ಲಿ ಪೂರ್ತಿಯಾಗಿ ತೊಡಗಿಸಿಕೊಳ್ಳಬಲ್ಲ ಕಾಯಂ ಅಧ್ಯಾಪಕರ ಅಗತ್ಯವಿದೆ. ಇಂದು ಇಡೀ ವಿಭಾಗವನ್ನು ಒಬ್ಬಿಬ್ಬರೇ ನಡೆಸುತ್ತಿರುವ, ಎಲ್ಲ ಹುದ್ದೆಗಳಿಗೂ ಅತಿಥಿ ಉಪನ್ಯಾಸಕ ರನ್ನೇ ನೆಚ್ಚಿಕೊಂಡಿರುವ ಉನ್ನತ ಶಿಕ್ಷಣ ಸಂಸ್ಥೆಗಳ ಸಂಖ್ಯೆ ಕಡಿಮೆಯಿಲ್ಲ. ಇಂಥ ವಸ್ತುಸ್ಥಿತಿ ಕಣ್ಣೆದುರು ಇರುವಾಗ ಹೊಸ ನೀತಿಯ ಅನುಷ್ಠಾನ ಸಮರ್ಪಕವಾಗಿ ಆಗುತ್ತದೆಂದು ನಾವು ನಿರೀಕ್ಷಿಸಬಹುದೇ?

ಭವಿಷ್ಯದಲ್ಲಿ ಹೆಚ್ಚು ಬೇಡಿಕೆ ಬರಬಹುದಾದ ವಿಷಯ ಗಳಲ್ಲಿ ಹೊಸ ಬಗೆಯ ಕೋರ್ಸುಗಳನ್ನು ಆರಂಭಿಸುವುದಕ್ಕೆ, ಈಗ ಪ್ರತ್ಯೇಕವಾಗಿರುವ ಕೆಲವು ಕೋರ್ಸುಗಳನ್ನು ಜತೆಗೂಡಿಸಿ ಹೊಸ ಬಹುಶಿಸ್ತೀಯ ಕೋರ್ಸುಗಳನ್ನು ವಿದ್ಯಾರ್ಥಿಗಳಿಗೆ (ಮುಖ್ಯವಾಗಿ ಪದವಿ ಹಂತದಲ್ಲಿ ಒಂದು ವರ್ಷ ಹೆಚ್ಚಿನ ವ್ಯಾಸಂಗ ಮಾಡಿ ಆನರ್ಸ್‌ ಪದವಿ ಪಡೆ ಯುವವರಿಗೆ) ಪರಿಚಯಿಸಲು, ಇವುಗಳಿಗೆ ಯಾವ ಬಗೆಯ ಬೋಧನಾಕ್ರಮವನ್ನು ಅಳವಡಿಸಬೇಕೆಂದು ನಿರ್ಧರಿಸಲು ಘನವಾದ ಅಧ್ಯಯನ ನಡೆಯಬೇಕಿದೆ.

ಈ ಪ್ರಕ್ರಿಯೆಯನ್ನು ಕಡೆಗಣಿಸಿ, ‘ಎಲ್ಲರಿಗೂ ಅನ್ವಯ ವಾಗುವಂತಹ’ ಕೆಲವು ಆನ್‌ಲೈನ್ ಕೋರ್ಸುಗಳನ್ನು ಈಗಾಗಲೇ ತಯಾರಿಸಿದ್ದೇವೆಂದು ಹೇಳಲಾಗುತ್ತಿದೆ. ಎಲ್ಲರಿಗೂ ಒಂದೇ ಅಳತೆಯ ಅಂಗಿ ಹಾಕುವ ರೀತಿಯಲ್ಲಿ, ಶೇ 60ರಷ್ಟು ಕ್ಲಾಸ್‌ರೂಮ್ ಬೋಧನೆಯೂ ಶೇ 40ರಷ್ಟು ಈ ರೀತಿಯ ಆನ್‌ಲೈನ್ ಬೋಧನೆಯೂ ಇರಬೇಕೆಂದು ಕರ್ನಾಟಕದ ಎಲ್ಲ ಕಾಲೇಜುಗಳಿಗೆ ಅನ್ವಯಿಸುವ ಸುತ್ತೋಲೆ ಹೊರಡಿಸುವುದರ ಪ್ರಯೋಜನವನ್ನು ಪ್ರಶ್ನಿಸ ಬೇಕಿದೆ.

ಹೊಸ ಬಹುಶಿಸ್ತೀಯ ಕೋರ್ಸುಗಳನ್ನು ಆಯಾ ಕಾಲೇಜಿನಲ್ಲಿರುವ ಮತ್ತು ಅವರೊಡನೆ ಒಡನಾಡುವ ವಿಷಯತಜ್ಞರಿಂದ ನಡೆಸುವುದು ಉತ್ತಮ. ಆಗ ಏಕ ರೂಪ ಶಿಕ್ಷಣದ ಅನಿವಾರ್ಯದಿಂದ, ಅದರ ಸಾಧಾರಣ ಗುಣಮಟ್ಟದಿಂದ ತಪ್ಪಿಸಿಕೊಂಡು ಆಯಾ ಸಂಸ್ಥೆಗಳ ವೈಶಿಷ್ಟ್ಯವನ್ನು ಅಲ್ಲಿಯ ಬೋಧಕವರ್ಗದವರ ಪರಿಣತಿಯ ಪ್ರಯೋಜನವನ್ನು ಪಡೆಯಲು ಸಾಧ್ಯವಾಗುತ್ತದೆ. ಶಿಕ್ಷಕ-ವಿದ್ಯಾರ್ಥಿಗಳ ನಿಕಟ ಸಂಬಂಧದಲ್ಲಿ, ಅಲ್ಲಿ ನಡೆಯುವ ಚರ್ಚೆ, ಸಂವಾದಗಳಲ್ಲಿಯೇ ವಿಷಯಗಳ ಬಗ್ಗೆ ಹೆಚ್ಚಿನ ಆಸಕ್ತಿಯು ವಿದ್ಯಾರ್ಥಿಗಳಲ್ಲಿ ಬೆಳೆಯುತ್ತದೆ ಮತ್ತು ಅನನ್ಯವಾದ ಯೋಚನಾಕ್ರಮದ ಸಾಧ್ಯತೆಗಳು ತೆರೆದುಕೊಳ್ಳುತ್ತವೆ.

ಇದೆಲ್ಲದರ ನಡುವೆ ಕೌಶಲ ಕಲಿಕೆಯ ಕುರಿತಾದ ಮಹತ್ವದ ವಿಚಾರವೊಂದು ಕಡೆಗಣನೆಗೆ ಒಳಗಾಗಿದೆ. ಮರಗೆಲಸ, ಹೊಲಿಗೆ, ಯಂತ್ರೋಪಕರಣ ನಿರ್ವಹಣೆ, ಅನಿಮೇಶನ್ ಅಥವಾ ಕಂಪ್ಯೂಟರ್‌ ಪ್ರೋಗ್ರಾಮಿಂಗ್‌ ಇತ್ಯಾದಿ ಕೌಶಲಗಳನ್ನು ಪಾಲಿಟೆಕ್ನಿಕ್‌ನಂತಹ ಸಂಸ್ಥೆಗಳಲ್ಲಿ ಕಲಿಸುವುದು ಒಂದು ಬಗೆ.

ಇದರ ಹೊರತಾಗಿ ಕೆಲವು ಜ್ಞಾನಶಾಖೆಗಳ ವಿಷಯಗಳ ಕಲಿಕೆಗೆ ಮತ್ತು ಅವುಗಳಲ್ಲಿ ಹೆಚ್ಚಿನ ಸಾಧನೆ ಮಾಡಲು ಅಗತ್ಯವಾದ ಕೌಶಲಗಳನ್ನು ಸಹ ಗುರುತಿಸಿ ಅವುಗಳನ್ನು ಕಲಿಸುವ ಅಗತ್ಯವಿದೆ. ಉದಾ ಹರಣೆಗೆ, ಆಧುನಿಕ ಜೀವಶಾಸ್ತ್ರದ ಕೋರ್ಸಿನ ಒಬ್ಬ ವಿದ್ಯಾರ್ಥಿಯು ಸೂಕ್ಷ್ಮದರ್ಶಕದೊಳಗೆ ನೋಡಲು ಅನುವಾಗುವಂತಹ ಇಮೇಜುಗಳನ್ನು ತಯಾರಿಸುವ ಕೌಶಲವನ್ನು ಹೊಂದಿರಬೇಕು. ಇಂಥ ತರಬೇತಿ ಅವರಿಗೆ ದೊರೆತಿರಬೇಕು. ಇದಲ್ಲದೆ, ಕ್ವಾಂಟಮ್ ಮೆಕ್ಯಾನಿಕ್ಸ್‌ ನಂತಹ ಸೈದ್ಧಾಂತಿಕ ವಿಷಯಗಳ ಕಲಿಕೆಯಲ್ಲೂ ಪ್ರಾಥಮಿಕ ಹಂತದ ಅಲ್ಗಾರಿದಮ್‌ಗಳನ್ನು, ಕ್ವಾಂಟಮ್ ಕಂಪ್ಯೂಟಿಂಗ್‌ಗೆ ಅಗತ್ಯವಾದ ತಂತ್ರಾಂಶಗಳನ್ನು ಅಭಿವೃದ್ಧಿಪಡಿಸುವ ಕೌಶಲವನ್ನು ವಿದ್ಯಾರ್ಥಿಗಳಿಗೆ ಕಲಿಸಬೇಕು. ಹೀಗೆ ಕೌಶಲಾಭಿವೃದ್ಧಿಯನ್ನು ವಿಶಾಲವಾದ ಅರ್ಥದಲ್ಲಿ ಗ್ರಹಿಸದೇ ಇದ್ದರೆ ಅದೊಂದು ವ್ಯರ್ಥ ಮತ್ತು ಅರ್ಥಹೀನ ಚಟುವಟಿಕೆಯಾಗುವ ಅಪಾಯವಿದೆ.

ಈ ಎಲ್ಲದರ ಹಿನ್ನೆಲೆಯಲ್ಲಿ ಗಮನಿಸಿದಾಗ, ಇಂಥ ಮಹತ್ತರವಾದ ಬದಲಾವಣೆಗಳನ್ನು ತರುವ ಮುನ್ನ, ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ಬೋಧಕ ವರ್ಗದವರ ಜೊತೆ ಯಾವ ಬಗೆಯ ಸಮಾಲೋಚನೆ
ಗಳನ್ನು ನಡೆಸಲಾಗಿದೆ ಎಂಬ ಪ್ರಶ್ನೆ ಮುನ್ನೆಲೆಗೆ ಬರಬೇಕು. ಇಲ್ಲಿಯವರೆಗೂ ಅಲ್ಲಲ್ಲಿ ಕೆಲವು ಆನ್‌ಲೈನ್ ಕಾರ್ಯಾ ಗಾರಗಳು ನಡೆದು ಸಂವಾದ ನಡೆದ ಭಾಸವಾಗುತ್ತದೆ ಅಷ್ಟೇ. ಈ ನೀತಿಯಲ್ಲಿ ಅಡಕವಾಗಿರುವ ಅಂಕಿಅಂಶಗಳನ್ನು ವಸ್ತುನಿಷ್ಠವಾಗಿ ಚರ್ಚಿಸುವ ಬದಲು ಹೊಗಳಿಕೆಯ ಮಾತುಗಳನ್ನು, ಕ್ಲೀಷೆಯಾಗಿರುವ ನುಡಿಮುತ್ತುಗಳನ್ನು ಉದುರಿಸುವುದರಿಂದ ಯಾವ ಪ್ರಯೋಜನವೋ ತಿಳಿಯದಾಗಿದೆ.

ಹೊಸ ಶಿಕ್ಷಣ ನೀತಿಯನ್ನು ಪ್ರಾರಂಭಿಸುವ ಅವಸರ ವನ್ನು ಗಮನಿಸಿದರೆ, ಜಾಲತಾಣಗಳಲ್ಲಿ ಈಗಾಗಲೇ ಇರುವ ಕೆಲವು ಕೋರ್ಸುಗಳನ್ನು, ಈಗಾಗಲೇ ರೆಕಾರ್ಡ್‌ ಮಾಡಿದ ಪಾಠಗಳನ್ನು ಮರುಪ್ರಸಾರ ಮಾಡುವ ಮೂಲಕ, ಬೋಧಿಸಲು ತರಬೇತಿ ಪಡೆದ ಸಿಬ್ಬಂದಿಯಿಲ್ಲ ದಿದ್ದರೂ ಹೇಗೋ ನಡೆಸಬಹುದು ಎಂಬ ನಿಲುವು
ಕಾಣಿಸುತ್ತಿದೆ. ಪಬ್ಲಿಕ್ ಯೂನಿವರ್ಸಿಟಿಗಳು ಬಡ ವಿದ್ಯಾರ್ಥಿಗಳಿಗೆ, ಹಿಂದುಳಿದ ಜಾತಿ ವರ್ಗಗಳಿಗೆ ಉನ್ನತ ವಿದ್ಯಾಭ್ಯಾಸಕ್ಕೆ ಇರುವ ಒಂದೇ ದಾರಿ. ನಾಳೆ ಇವು ತಮ್ಮ ಗುಣಮಟ್ಟದಲ್ಲಿ ಇನ್ನೂ ಕುಸಿದರೆ ಅಥವಾ ಮುಚ್ಚಿಹೋದರೆ ವಿದ್ಯಾರ್ಥಿಗಳು ಖಾಸಗಿ ಸಂಸ್ಥೆಗಳಿಗೆ ಹೋಗಲಿ ಎಂಬುದು ಸರ್ಕಾರದ ಧೋರಣೆಯಾಗಿರುವಂತಿದೆ.

ಲೇಖಕ: ಪ್ರಾಧ್ಯಾಪಕ, ಸ್ಕೂಲ್‌ ಆಫ್‌ ಫಿಸಿಕ್ಸ್‌, ಹೈದರಾಬಾದ್‌ ವಿಶ್ವವಿದ್ಯಾಲಯ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು