ಮಂಗಳವಾರ, ಜೂನ್ 28, 2022
27 °C
ಜಗವೆಲ್ಲ ಆವರಿಸಿರುವ ಕೋವಿಡ್‌ ಕರಾಳತೆಗೆ ಭರವಸೆಯ ಬೆಳಕಾಗಬಲ್ಲುದೇ ಕ್ರೀಡೆ?

ವಿಶ್ಲೇಷಣೆ: ಒಲಿಂಪಿಕ್ಸ್ ಜ್ಯೋತಿಯಲಿ ಕೊರೊನಾ ಅಳಿಯಲಿ

ಗಿರೀಶ ದೊಡ್ಡಮನಿ Updated:

ಅಕ್ಷರ ಗಾತ್ರ : | |

Prajavani

ಭಾರತದ ಟೆನಿಸ್ ಕ್ರೀಡೆಯ ದಿಗ್ಗಜ ಲಿಯಾಂಡರ್ ಪೇಸ್ 1996ರಲ್ಲಿ ಅಟ್ಲಾಂಟಾ ಒಲಿಂಪಿಕ್ಸ್‌ನಲ್ಲಿ ಗೆದ್ದ ಕಂಚಿನ ಪದಕಕ್ಕೆ ಈ ವರ್ಷ ಬೆಳ್ಳಿ ಮಹೋತ್ಸವದ ಸಂಭ್ರಮ. ಕೋವಿಡ್ ಸಾಂಕ್ರಾಮಿಕವು ಹೋದ ವರ್ಷ ವಿಶ್ವವನ್ನು ಕಾಡಿಸದೇ ಹೋಗಿದ್ದರೆ ಪೇಸ್ ಎಂಟು ಬಾರಿ ಒಲಿಂಪಿಕ್ಸ್‌ನಲ್ಲಿ ಆಡಿದ ವಿಶಿಷ್ಟ ಸಾಧನೆ ಮಾಡಿ ಒಂದು ವರ್ಷವಾಗಿರುತ್ತಿತ್ತು. ಆದರೆ ಟೋಕಿಯೊ ಒಲಿಂಪಿಕ್ಸ್‌ ಮುಂದಕ್ಕೆ ಹೋಯಿತು. 48ರ ಹರೆಯದ ಪೇಸ್ ಅವರಿಗೆ ಈಗಲೂ ಕಣಕ್ಕಿಳಿಯುವ ಮನಸ್ಸಿದೆ.  ಆದರೆ, ಅವರಿಗೆ ಈ ಬಾರಿ ಅವಕಾಶ ಸಿಗುವುದು ಕಷ್ಟ. ಏಕೆಂದರೆ, ಅವರು ಒಲಿಂಪಿಕ್ಸ್‌ನ ಡಬಲ್ಸ್ ಮತ್ತು ಮಿಶ್ರ ಡಬಲ್ಸ್‌ನಲ್ಲಿ ಅರ್ಹತೆ ಪಡೆಯುವಷ್ಟು ಶ್ರೇಯಾಂಕ ಹೊಂದಿಲ್ಲ. ಜಗತ್ತಿನ ಅತಿದೊಡ್ಡ ಕ್ರೀಡಾಮೇಳ ಒಂದು ಬಾರಿ ಮುಂದೆ ಹೋಗಿದ್ದಕ್ಕೆ ಅಭೂತಪೂರ್ವ ದಾಖಲೆ ಬರೆಯುವ ಅವಕಾಶ ಭಾರತದ ಆಟಗಾರನಿಗೆ ಬಹುತೇಕ ಕೈತಪ್ಪಿದಂತಾಗಿದೆ. ವಿಶ್ವದಾದ್ಯಂತ ಅದೆಷ್ಟೋ ಕ್ರೀಡಾಪಟುಗಳಿಗೆ ಇಂತಹದೇ ನಿರಾಶೆ ಆಗಿರಬಹುದಲ್ಲವೇ?

ಮುಂದಿನ ತಿಂಗಳು ನಡೆಯಲಿರುವ ಒಲಿಂಪಿಕ್ಸ್‌ ನಲ್ಲಿ ಸ್ಪರ್ಧಿಸುವ ಕನಸು ಕಾಣುತ್ತಿರುವ ನೂರಾರು ಅಥ್ಲೀಟ್‌ಗಳು ಕಠಿಣ ಪರಿಶ್ರಮವಹಿಸಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಅವರೆಲ್ಲರ ದೃಷ್ಟಿ ಈಗ ಟೋಕಿಯೊದತ್ತ ನೆಟ್ಟಿದೆ. ಆದರೆ, ಕೋವಿಡ್ ಎರಡನೇ ಅಲೆಯ ಆರ್ಭಟದ ಮುಂದೆ ಈ ನಿರೀಕ್ಷೆಗಳು ಈಡೇರುವುವೇ ಎಂಬುದನ್ನು ಸದ್ಯ ಖಚಿತವಾಗಿ ಹೇಳಲಾಗದಂಥ ಸ್ಥಿತಿಯಿದೆ. ಕೂಟದ ಆರಂಭಕ್ಕೆ ಇನ್ನು 50 ದಿನಗಳು ಮಾತ್ರ ಉಳಿದಿವೆ.

ಅಂತರರಾಷ್ಟ್ರೀಯ ಒಲಿಂಪಿಕ್ ಸಂಸ್ಥೆ ಮತ್ತು ಜಪಾನ್ ಸರ್ಕಾರ ಮಾತ್ರ ‘ಏನೇ ಆಗಲಿ, ಈ ಸಲ ಕ್ರೀಡೆಗಳನ್ನು ನಡೆಸಿಯೇ ತೀರುತ್ತೇವೆ’ ಎಂಬ ಹೇಳಿಕೆಗಳನ್ನು ನೀಡುತ್ತ ಬಂದಿವೆ. ಆದರೆ ಜಪಾನ್‌ನಲ್ಲೇ ಆತಿಥ್ಯಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ವಿಶ್ವದ ಬೇರೆ ಬೇರೆ ದೇಶಗಳಿಂದ ಕ್ರೀಡಾಪಟುಗಳು, ಸಿಬ್ಬಂದಿ, ಅಧಿಕಾರಿಗಳು, ಆಡಳಿತ ಪ್ರತಿನಿಧಿಗಳು ಮತ್ತು ಮಾಧ್ಯಮ ಪ್ರತಿನಿಧಿಗಳು ಸೇರಿ ಸುಮಾರು 80 ಸಾವಿರ ಜನರು ಒಲಿಂಪಿಕ್ ಗ್ರಾಮದಲ್ಲಿ ಸೇರುತ್ತಾರೆ. ಸೋಂಕು ಪ್ರಸರಣಕ್ಕೆ ಇದು ಕಾರಣವಾಗಬಹುದೆಂಬ ಆತಂಕ ವೈದ್ಯಕೀಯ ಸಮೂಹದ್ದು.  ಕೂಟ ನಡೆಯಲಿರುವ ಟೋಕಿಯೊ ಮತ್ತು ಸುತ್ತಲಿನ ಪ್ರಮುಖ ನಗರಗಳಲ್ಲಿ ಜೂನ್‌ 20ರವರೆಗೆ ಕೋವಿಡ್ ತುರ್ತು ಪರಿಸ್ಥಿತಿ ವಿಸ್ತರಿಸಲಾಗಿದೆ. ಒಲಿಂಪಿಕ್ಸ್‌ಗೆ ಪ್ರಾಯೋಜಕತ್ವ ನೀಡಿರುವ ಇಲ್ಲಿಯ ಪ್ರಮುಖ ಪತ್ರಿಕೆ ‘ಅಸಾಹಿ ಶಿಂಬುನ್’ ಕೂಡ ಕೂಟವನ್ನು ರದ್ದು ಮಾಡಬೇಕು ಎಂದು ಈಚೆಗೆ ಸಂಪಾದಕೀಯ ಬರೆದಿದೆ. ಕೂಟ ಮುಂದೂಡುವಂತೆ ಅಥವಾ ರದ್ದು ಮಾಡುವಂತೆ ವಿವಿಧ ಸಮೀಕ್ಷೆಗಳಲ್ಲಿ
ಶೇ 83ರಷ್ಟು ಮಂದಿ ಒತ್ತಾಯಿಸಿದ್ದಾರೆ. ಆದರೆ ಈಗಾಗಲೇ ಒಂದು ಬಾರಿ ಮುಂದೂಡಿರುವ ಕೂಟವನ್ನು ಮತ್ತೆ ಮುಂದೂಡಲು ಐಒಸಿಗೂ ಮನಸ್ಸಿಲ್ಲ. ಏಕೆಂದರೆ 2022ರಲ್ಲಿ ಬೀಜಿಂಗ್‌ನಲ್ಲಿ ಚಳಿಗಾಲದ ಒಲಿಂಪಿಕ್ಸ್‌ ನಡೆಯಲಿದೆ.  ಇದನ್ನು 2023ಕ್ಕೆ ಮುಂದೂಡುವಂತೆಯೂ ಇಲ್ಲ.  ಏಕೆಂದರೆ, 2024ರಲ್ಲಿ ಪ್ಯಾರಿಸ್‌ನಲ್ಲಿ ನಡೆಯಲಿರುವ ಕೂಟದ ಸಿದ್ಧತೆಗೆ ಅಡೆತಡೆ ಯುಂಟಾಗುತ್ತದೆ. ಅದರಿಂದಾಗಿ ಆಯೋಜಕರು ‘ಮಾಡು ಇಲ್ಲವೇ ಮಡಿ’ ಎಂಬ ಪರಿಸ್ಥಿತಿಯಲ್ಲಿ ಇದ್ದಾರೆ.

ಒಂದೊಮ್ಮೆ ಈ ಸಲ ರದ್ದುಪಡಿಸಿದರೆ ಅಪಾರವಾದ ಆರ್ಥಿಕ ನಷ್ಟವನ್ನು ಜಪಾನ್ ಮೈಮೇಲೆ ಎಳೆದುಕೊಳ್ಳಬೇಕಾಗುತ್ತದೆ. ಈ ಕೂಟದ ಆಯೋಜನೆಗೆ ಸುಮಾರು ₹ 92 ಸಾವಿರ ಕೋಟಿ ವೆಚ್ಚ ಆಗಬಹುದೆಂದು
ಅಂದಾಜಿಸಲಾಗಿತ್ತು.  ಆದರೆ ಮುಂದೂಡಿಕೆಯಿಂದ 20 ಸಾವಿರ ಕೋಟಿ ರೂಪಾಯಿಯ ಹೆಚ್ಚುವರಿ ಹೊರೆ ಬೀಳಲಿದೆ ಎಂಬ ಲೆಕ್ಕಾಚಾರ ಇದೆ. ಇದು ಆಯೋಜನೆಯ ಲೆಕ್ಕ ಮಾತ್ರ. ಆದರೆ ಬೇರೆ ಬೇರೆ ದೇಶಗಳು ಒಲಿಂಪಿಕ್ಸ್ ಸಿದ್ಧತೆಗಾಗಿ ಕಳೆದ ನಾಲ್ಕು ವರ್ಷಗಳಲ್ಲಿ ಮಾಡಿದ ವೆಚ್ಚ ಸಾಮಾನ್ಯವಾದುದೇನಲ್ಲ. ರಿಯೊ ಒಲಿಂಪಿಕ್ಸ್‌ ನಂತರ ಭಾರತವು ‘ಟಾಪ್ ಯೋಜನೆ’ಯ ಮೂಲಕ ಒಲಿಂಪಿಕ್ಸ್‌ ಸಿದ್ಧತೆಗೆ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿದೆ. ವಿಶೇಷ ತರಬೇತಿಗಾಗಿ ಕ್ರೀಡಾಪಟುಗಳನ್ನು ವಿದೇಶಗಳಿಗೆ ಕಳಿಸಿದೆ. 

ಇದೆಲ್ಲದರ ಆಚೆಗೆ ಆಯೋಜಕರು ಪ್ರಾಯೋಜಕರನ್ನು ಉಳಿಸಿಕೊಂಡು ಹೋಗಲು ಮಾಡಿರುವ ಹೆಣಗಾಟ ದೊಡ್ಡದು. ಪ್ರಸಾರ, ಪ್ರಾಯೋಜಕತ್ವದಿಂದ ಬರುವ ಆದಾಯದಲ್ಲಿ ಮುಂದೂಡಿಕೆಯಿಂದಾದ ನಷ್ಟವನ್ನಾದರೂ ಭರಿಸಿಕೊಳ್ಳುವ ಯೋಚನೆಯೂ ಇರಬಹುದು. ಇಂತಹ ಕಠಿಣ ಸನ್ನಿವೇಶಗಳನ್ನು ದಶಕಗಳಿಂದ ಎದುರಿ ಸುತ್ತಲೇ ಬಂದಿರುವ ಜಪಾನ್ ದೇಶದ ಛಲ ಜನಜನಿತವಾಗಿದೆ. ಎರಡನೇ ಮಹಾಯುದ್ಧದ ವೇಳೆ ಹಿರೊಶಿಮಾ– ನಾಗಾಸಾಕಿ ಮೇಲೆ ನಡೆದ ಬಾಂಬ್ ದಾಳಿಯಿಂದ ತತ್ತರಿಸಿದ್ದ ದೇಶವು ನಂತರ ಅಭಿವೃದ್ಧಿಯಲ್ಲಿ ಅಮೆರಿಕ, ಯುರೋಪ್ ರಾಷ್ಟ್ರಗಳಿಗೆ ಸಡ್ಡು ಹೊಡೆದಿರುವ ಯಶೋಗಾಥೆ ಮೈನವಿರೇಳಿಸುವಂತಹುದು. ಅಷ್ಟೇ ಏಕೆ, ಅಸಂಖ್ಯಾತ ಭೂಕಂಪ, ಚಂಡಮಾರುತ ಮತ್ತು ಸುನಾಮಿಗಳ ಹಾವಳಿಯ ಎದುರು ಪುಟಿದೆದ್ದು ದೇಶ ಕಟ್ಟಿದ್ದಾರೆ ಅಲ್ಲಿಯ ಜನ. ಆಗ ಅದೆಲ್ಲ ಸಾಧನೆಗೆ ದೇಶದ ಜನರ ಸಂಪೂರ್ಣ ಬೆಂಬಲ ಇತ್ತು.

ಆದರೆ ಈ ಬಾರಿ ಕಣ್ಣಿಗೆ ಕಾಣದ ಕೊರೊನಾ ವೈರಾಣುವಿನ ವಿರುದ್ಧದ ಹೋರಾಟಕ್ಕೆ ಸ್ಥಳೀಯರ ಬೆಂಬಲದ ಕೊರತೆ ಎದುರಾಗಿದೆ. ಅದಕ್ಕಾಗಿಯೇ ಲಸಿಕೆ ನೀಡುವ ಕಾರ್ಯಕ್ರಮವನ್ನು ಶರವೇಗದಲ್ಲಿ ಜಪಾನ್ ಕೈಗೊಂಡಿದೆ. ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲು ಬರುವ ವರು ತಮ್ಮ ದೇಶಗಳಿಂದಲೇ ಲಸಿಕೆ ಹಾಕಿಸಿಕೊಂಡು ಬರುವುದನ್ನು ಕಡ್ಡಾಯಗೊಳಿಸಿದೆ. ಅಂತರರಾಷ್ಟ್ರೀಯ ವಿಮಾನಯಾನ ನಿರ್ಬಂಧಗಳ ನಡುವೆಯೂ ಕೂಟವನ್ನು ಯಶಸ್ವಿಯಾಗಿ ಆಯೋಜಿಸುವ ಭರವಸೆಯಲ್ಲಿ ಆಯೋಜಕರಿದ್ದಾರೆ. ಆದರೆ, ಇದು ಜಪಾನ್‌ ಪಾಲಿಗೆ ತಂತಿಯ ಮೇಲಿನ ನಡಿಗೆ. ಕಾಲು ಜಾರಿದರೆ ಪ್ರಪಾತಕ್ಕೆ ಬೀಳುವ ಅಪಾಯವಿದೆ. ದೇಶದ ಪ್ರತಿಷ್ಠೆ, ಕ್ರೀಡಾಪಟುಗಳು ಮತ್ತು ಜನರ ಪ್ರಾಣಕ್ಕೆ ಕುತ್ತು ಬರಬಹುದು. ಹಿಂದೆ ಮಹಾಯುದ್ಧಗಳ ಕಾರಣದಿಂದ 1916, 1940 ಮತ್ತು 1944ರಲ್ಲಿ ಒಲಿಂಪಿಕ್ಸ್‌ ರದ್ದಾಗಿದ್ದವು. ಆಗ ಇಷ್ಟೆಲ್ಲ ತಂತ್ರಜ್ಞಾನ, ಖರ್ಚು, ಆದಾಯಗಳ ಲೆಕ್ಕಾಚಾರಗಳು ಇರಲಿಲ್ಲ. ಆದರೆ ಈಗ ಕ್ರೀಡಾಲೋಕ ಬದಲಾಗಿದೆ. ವಾಣಿಜ್ಯೀಕರಣದ ಒಂದು ಭಾಗವೇ ಆಗಿಹೋಗಿದೆ. ಅದರಲ್ಲೂ ಒಲಿಂಪಿಕ್ಸ್‌ನಂತಹ ಬೃಹತ್‌ ಕ್ರೀಡಾಕೂಟ ಆತಿಥೇಯ ದೇಶದ ವಿತ್ತ ಭವಿಷ್ಯದ ಮೇಲೆ ಪರಿಣಾಮ ಬೀರುವಂಥದ್ದು.

ಆದರೂ ಭ್ರಾತೃತ್ವ, ಸಾಮರಸ್ಯ ಮತ್ತು ಮನೋ ಲ್ಲಾಸದ ಸಂದೇಶ ಸಾರುವ ಒಲಿಂಪಿಕ್‌ ಕ್ರೀಡೆಗಳು ನಡೆಯಬೇಕು ಎಂಬುದು ಕ್ರೀಡಾಪ್ರೇಮಿಗಳ ಆಸೆ. ಜಪಾನ್ ಸರ್ಕಾರವು ಅಂದುಕೊಂಡಂತೆ ಎಲ್ಲವೂ ನಡೆದರೆ, ಕೊರೊನಾ ವಿರುದ್ಧದ ಹೋರಾಟಕ್ಕೆ ಹೆಚ್ಚಿನ ಬಲ ಬರಬಹುದು.

ಇನ್ನು ಭಾರತದ ಮಟ್ಟಿಗೆ ಹೇಳುವುದಾದರೆ, ಇಂಗ್ಲೆಂಡ್‌ನಲ್ಲಿ ತರಬೇತಿ ಪಡೆಯುತ್ತಿರುವ ಪಿ.ವಿ. ಸಿಂಧು, ಯುರೋಪ್‌ನಲ್ಲಿರುವ ಶೂಟಿಂಗ್ ಪಟುಗಳು, ಅಥ್ಲೀಟ್‌ ನೀರಜ್ ಚೋಪ್ರಾ, ಬೆಂಗಳೂರಿನ ಅಶ್ವಾ ರೋಹಿ ಫವಾದ್ ಮಿರ್ಜಾ, ಕುಸ್ತಿಪಟು ಬಜರಂಗ್ ಪೂನಿಯಾ, ಸೇಲಿಂಗ್ ತಂಡ ಮತ್ತು ಬಾಕ್ಸಿಂಗ್ ಪ್ರತಿಭೆಗಳು ಒಲಿಂಪಿಕ್ಸ್ ಅಂಗಳದಲ್ಲಿ ಹೆಜ್ಜೆಗುರುತು ಮೂಡಿಸುವ ಕನಸು ಕಾಣುತ್ತಿದ್ದಾರೆ.  ಕೊರೊನಾ ಕಾಲದಲ್ಲಿ  ಮಾನಸಿಕವಾಗಿ ಸದೃಢವಾಗಿ ಉಳಿಯುವ ಕಠಿಣ ಸವಾಲು ಎದುರಿಸುತ್ತಿರುವ ಕ್ರೀಡಾಪಟುಗಳಿಗೆ ಲಿಯಾಂಡರ್ ಪೇಸ್ ಮೂರು ದಶಕಗಳಿಂದ ಮಾಡಿರುವ ಸಾಧನೆ ಪ್ರೇರಣೆಯಾಗಬಲ್ಲದು.

‘ಒಲಿಂಪಿಕ್ ಕ್ರೀಡೆಗಳಲ್ಲಿ ಗೆಲ್ಲುವುದೊಂದೇ ಮುಖ್ಯ ವಲ್ಲ. ಸ್ಪರ್ಧಿಸುವುದೇ ಮುಖ್ಯ. ಏಕೆಂದರೆ, ಜೀವನ ವೆಂದರೆ ಛಲದಿಂದ ಹೋರಾಟ ಮಾಡುವುದೆಂದು ಅರ್ಥ. ಸಾಧನೆಯೊಂದೇ ಮಾನದಂಡವಲ್ಲ’ ಎಂದು ಆಧುನಿಕ ಒಲಿಂಪಿಕ್ಸ್‌ನ ಪಿತಾಮಹ ಪಿಯರೆ ಡಿ ಕೂಬರ್ತಿ 1894ರಲ್ಲಿ ಹೇಳಿದ್ದ ಮಾತು ಇಂದಿಗೂ ಪ್ರಸ್ತುತ. ಕೋವಿಡ್‌ ಬಿಕ್ಕಟ್ಟಿನ ಕಾಲದಲ್ಲಿ ಪದಕ ಜಯದ
ಸಂಭ್ರಮಕ್ಕಿಂತಲೂ ಸ್ಪರ್ಧಿಸುವ ಛಲವೇ ಮನುಕುಲದ ಭವಿಷ್ಯಕ್ಕೆ ಪ್ರೇರಣೆಯಾಗಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು