ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಮೌಲಿಕ ಶಿಕ್ಷಣ: ಆಲೋಚನಾ ಕ್ರಮ

ನೈತಿಕ‌ ಮೌಲ್ಯಗಳ ಶಿಕ್ಷಣ ರೂಪಿಸಬೇಕಾದ ಆಲೋಚನಾ ಕ್ರಮ ಎಲ್ಲಕ್ಕಿಂತ ಮುಖ್ಯವಾದುದು
Last Updated 2 ಫೆಬ್ರುವರಿ 2023, 19:31 IST
ಅಕ್ಷರ ಗಾತ್ರ

ನೈತಿಕ ಶಿಕ್ಷಣದ ಕುರಿತ ಚರ್ಚೆಗಳು ಸದಾಕಾಲ ಇರುತ್ತವೆ. ಸಮಾಜದಲ್ಲಿ ಅನೈತಿಕತೆ ಕಾಣಿಸಿದಾಗೆಲ್ಲ ಶಿಕ್ಷಣದ ಮೂಲಕ ಅನೈತಿಕತೆಯನ್ನು ತಡೆಯುವ ಒಂದು ಚಿಂತನೆ ಸಮಾಜದಲ್ಲಿ ಜಾಗೃತವಾಗುತ್ತದೆ. ಇದೊಂದು ವಿರೋಧಾಭಾಸದ ಶೈಕ್ಷಣಿಕ ಪರಿಕಲ್ಪನೆ. ನೈತಿಕತೆಯು ವ್ಯಕ್ತಿಯಲ್ಲಿ ಅಂತಃಸತ್ವವಾಗಿ ರೂಢಿಯಾಗಿ ನಡವಳಿಕೆಯಲ್ಲಿ ಕಂಡುಬರಬೇಕಾದ ಕಲಿಕಾಂಶವೇ ವಿನಾ ಬೌದ್ಧಿಕ ಕಲಿಕೆಯಾಗಿ ಉಳಿದು ಪರೀಕ್ಷೆಯಲ್ಲಿ ಉತ್ತರ ಬರೆದು ಅಂಕಗಳನ್ನು ಪಡೆದು ಕೈಬಿಡುವಂಥದ್ದಲ್ಲ.

ರೂಢಿಯಾಗಬೇಕಾದ ಕಲಿಕೆ ಬರೀ ಬೋಧನೆ ಯಿಂದ ಬರುವುದಿಲ್ಲ. ಅತ್ಯುತ್ತಮವಾದದ್ದು ಎಲ್ಲರಿಗೂ ಗೊತ್ತಿರುತ್ತದೆ. ಎಲ್ಲರೂ ಉಪದೇಶಿಸುತ್ತಾರೆ. ಆದರೆ ಆಚರಿಸಲು ಆಗುವುದಿಲ್ಲ. ಉದಾಹರಣೆಗೆ, ಒಂದು ತರಗತಿಯಲ್ಲಿ ಸತ್ಯ ಹರಿಶ್ಚಂದ್ರನ ಕಥೆಯನ್ನು ಬೋಧಿಸಿದ ನಂತರ, ವಿದ್ಯಾರ್ಥಿ ಮಾಡಬೇಕಾದ ಕೆಲಸವನ್ನು ಮಾಡದೇ ಇದ್ದಾಗ ಆತನೇನಾದರೂ ‘ಸೋಮಾರಿ ತನದಿಂದ ಮಾಡಲಿಲ್ಲ’ ಎಂದು ಸತ್ಯವನ್ನೇ ಹೇಳಿದರೆ ಏನಾದೀತು? ವಿದ್ಯಾರ್ಥಿಯು ಶಿಕ್ಷೆಯ ಅನುಭವವನ್ನೇ ಪಡೆಯಬೇಕಾಗುತ್ತದೆ. ಆಗ ಉಂಟಾಗುವ ನಿಜವಾದ ಕಲಿಕೆ ಏನು? ಸತ್ಯ ಹೇಳಿದರೆ ತೊಂದರೆಯಾಗುತ್ತದೆ ಎಂದು ವಿದ್ಯಾರ್ಥಿಗೆ ಗೊತ್ತಾಗುತ್ತದೆ. ಸತ್ಯವನ್ನು ಹೇಳಬೇಕೆಂದು ಬೌದ್ಧಿಕವಾಗಿ ಗೊತ್ತಿರುತ್ತದೆ. ಆದರೆ ರೂಢಿಯ ನಡವಳಿಕೆ
ಯಲ್ಲಿ ಸುಳ್ಳೇ ಕಾಣಿಸಿಕೊಳ್ಳುತ್ತದೆ.‌

ಭ್ರಷ್ಟಾಚಾರ ಮಾಡಬಾರದು ಎಂದು ಗೊತ್ತಿಲ್ಲದೇ ಇರುವ ಯಾವ ಭ್ರಷ್ಟನೂ ಜಗತ್ತಿನಲ್ಲಿ ಇರಲು ಸಾಧ್ಯವಿಲ್ಲ.‌ ಆಗ ಭಗವದ್ಗೀತೆ, ಕುರಾನ್, ಬೈಬಲ್, ತ್ರಿಪಿಟಕಗಳನ್ನೆಲ್ಲ ಇಟ್ಟುಕೊಂಡು ಬೋಧಿಸಿದಾಗ ಅವುಗಳ ವಿಷಯಗಳು ಬೌದ್ಧಿಕ ತಿಳಿವಳಿಕೆಯಾಗಿ ವಿದ್ಯಾರ್ಥಿಗೆ ಸಿಗಬಹುದೇ ವಿನಾ ವರ್ತನೆಯನ್ನು ರೂಪಿಸುವುದಿಲ್ಲ. ವರ್ತನೆಗಳನ್ನು ಜೀವನದ ಕಠೋರ ವಾಸ್ತವಗಳು ರೂಪಿಸುತ್ತವೆ. ತನ್ನ ಪರಿಸರದ ನಡವಳಿಕೆಗಳಲ್ಲಿ ನೈತಿಕ ಮೌಲ್ಯಗಳು ಇದ್ದಾಗ ವಿದ್ಯಾರ್ಥಿಗಳು ಅವುಗಳನ್ನು ವರ್ತನೆಯಲ್ಲಿ ರೂಢಿಸಿ
ಕೊಳ್ಳುತ್ತಾರೆ. ಆದರೆ ಆಗ ಅಲ್ಲಿ ಇನ್ನೊಂದು ಪ್ರಶ್ನೆ ಉದ್ಭವಿಸುತ್ತದೆ.‌ ಇಡೀ ಸಮಾಜದಲ್ಲೇ ನೈತಿಕ ಮೌಲ್ಯಗಳು ಆಚರಣೆಯಲ್ಲಿ ಇದ್ದರೆ ಅವನ್ನು ಶಿಕ್ಷಣದಲ್ಲಿ ಕಲಿಸಬೇಕಾದ ಅಗತ್ಯವೇ ಇರುವುದಿಲ್ಲ. ಅಂದರೆ, ಸಮಾಜದಲ್ಲಿ ನೈತಿಕತೆ ಇಲ್ಲದಿದ್ದರೆ ನೈತಿಕತೆಯನ್ನು ಕಲಿಸಿ ಉಪಯೋಗವಿಲ್ಲ. ಸಮಾಜದಲ್ಲಿ ನೈತಿಕತೆ ಇದ್ದರೆ ಶಿಕ್ಷಣದಲ್ಲಿ ಅದನ್ನು ಕಲಿಸಬೇಕಾದ ಅಗತ್ಯವಿಲ್ಲ. ಇದು ನೈತಿಕ ಶಿಕ್ಷಣದ ಬಿಕ್ಕಟ್ಟು. ಯಾವ ಕಾಲದ ಸಮಾಜವೂ ಪರಿಪೂರ್ಣ ನೈತಿಕ ಮೌಲ್ಯಗಳನ್ನು ಹೊಂದಿರಲಿಲ್ಲ.‌ ಸಮಾಜವನ್ನು ಅರ್ಥೈಸುವಾಗ ಏಕಕಾಲಕ್ಕೆ ಎರಡು ಮಾನದಂಡಗಳು ಬಳಕೆಯಾಗುತ್ತವೆ.‌ ವರ್ತಮಾನದ ಎಲ್ಲ ಅನುಭವಗಳೂ ನಮಗಾಗುವುದರಿಂದ ಅದರ ನಕಾರಾತ್ಮಕ ಅನುಭವಗಳಿಗೆ ಹೆಚ್ಚಿನ ಮಹತ್ವ ಸಿಗುತ್ತದೆ.‌ ಇತಿಹಾಸದ ಸಮಾಜವನ್ನು ಪರಿಗಣಿಸುವಾಗ ಅದರ ಅನುಭವದಲ್ಲಿ ನಾವು ಪಾಲುದಾರರಲ್ಲ ಮತ್ತು ನಕಾರಾತ್ಮಕ ಸಂಗತಿಗಳು ಹುದುಗಿಹೋಗಿರುತ್ತವೆ. ಆದ್ದರಿಂದ ಒಳ್ಳೆಯ ವಿಷಯಗಳನ್ನು ಜಾಸ್ತಿ ಪರಿಗಣಿಸುತ್ತೇವೆ. ಆದ್ದರಿಂದ ಹಿಂದೆಯೆಲ್ಲ ಚೆನ್ನಾಗಿತ್ತು ಎನ್ನುವ ಒಂದು ಕಾಲ್ಪನಿಕ ನೀತಿವಂತ ವ್ಯವಸ್ಥೆ ಪರಿಗಣನೆಗೆ ಬರುತ್ತದೆ. ಹಾಗಿರುವಾಗ ನೈತಿಕ ಶಿಕ್ಷಣ ಕೊಡಬೇಕೆ ಎನ್ನುವುದೇ ಪ್ರಶ್ನಾರ್ಹ. ಆದರೆ, ಬೇರೆ ಯಾವ ಕಾರಣಗಳಲ್ಲದೆ ಹೋದರೂ ನೈತಿಕ ಶಿಕ್ಷಣವೊಂದು ಇದೆ ಎಂಬ ಭಾವನಾತ್ಮಕ ಭದ್ರತೆ ಮತ್ತು ವ್ಯವಸ್ಥೆಗೆ ನೈತಿಕ ಮೌಲ್ಯಗಳ ಬಗ್ಗೆ ಕಾಳಜಿ ಇದೆ ಎನ್ನುವುದನ್ನು ಸೂಚಿಸಲು ಇಂಥ ಶಿಕ್ಷಣ ಬೇಕಾಗುತ್ತದೆ.

ಸಾಮಾನ್ಯವಾಗಿ ನೈತಿಕ ಮೌಲ್ಯಗಳು ಎಂದ ತಕ್ಷಣ ಅವು ತಾನೇ ತಾನಾಗಿ ಧಾರ್ಮಿಕ ರಚನೆಗಳೊಂದಿಗೆ ಗುರುತಿಸಿಕೊಳ್ಳತೊಡಗುತ್ತವೆ.‌ ಮತಧರ್ಮಗಳಿಗೂ ನೈತಿಕತೆಗೂ ಸಂಬಂಧ ಇಲ್ಲವೇ ಎಂದು ಕೇಳಿದರೆ ಸಂಬಂಧ ಇದೆ.‌ ಮತಧರ್ಮಗಳು ಬಹಳಷ್ಟು ಹಿಂದಿನವು. ಇಂದು ನೈತಿಕತೆಗೆ ಸಂಬಂಧಿಸಿದ ನಿಯಮಗಳಾಗಿ ಕಾಣಿಸುವ ಸಂಗತಿಗಳೆಲ್ಲವೂ ಮತಧರ್ಮಗಳ ಪ್ರಾರಂಭದ ಕಾಲಕ್ಕೆ ಕಾನೂನುಗಳ ರೂಪದಲ್ಲಿ ಕೆಲಸ ಮಾಡಿದವುಗಳೇ ಆಗಿವೆ.‌ ಕ್ರಮೇಣ ಪ್ರಭುತ್ವಗಳು ಬದಲಾದಂತೆ ಅವು ಶಾಸನದ ರೂಪವನ್ನು ಕಳೆದುಕೊಂಡು ನೈತಿಕ ಮೌಲ್ಯಗಳ ರೂಪಕ್ಕೆ ಬಂದಿವೆ. ನೈತಿಕ ಮೌಲ್ಯಗಳಿಗೆ ಶಾಸನ
ಗಳಿಗಿರುವ ಅಧಿಕಾರಾತ್ಮಕ ಶಕ್ತಿ ಇರುವುದಿಲ್ಲ.‌ ಆದರೆ ಮನುಷ್ಯನ ಪ್ರಜ್ಞೆಯ ಭಾಗವಾಗಿ ಅವು ಬಹು ಬೇಗ ಬಂದುಬಿಡುತ್ತವೆ. ಆದ್ದರಿಂದ ನೈತಿಕ ಮೌಲ್ಯಗಳಿಗೆ ಆಲೋಚನಾ ಕ್ರಮಗಳನ್ನು ರೂಪಿಸುವ ಶಕ್ತಿ ಇರುತ್ತದೆ. ಅವಶ್ಯವಾಗಿ ಆ ಆಲೋಚನಾ ಕ್ರಮಗಳಿಗೆ ಪರಂಪರೆಯ ನೈತಿಕ ಮೌಲ್ಯಗಳು ಎಷ್ಟು ಮಹತ್ವದವುಗಳೋ ಆಧುನಿಕ ಸಾಂವಿಧಾನಿಕ ಮೌಲ್ಯಗಳು ಮತ್ತು ಅಂತರರಾಷ್ಟ್ರೀಯ ತತ್ವಗಳೂ ಅಷ್ಟೇ ಮಹತ್ವದ್ದಾಗಿವೆ.

ನೈತಿಕ ಮೌಲ್ಯಗಳು ಯಾವಾಗಲೂ ಸಾಮಾಜಿಕ ಸನ್ನಿವೇಶವನ್ನು ಅವಲಂಬಿಸಿರುತ್ತವೆ.‌ ಇಂದಿನದ್ದು ಜಾಗತಿಕ ಸಾಮಾಜಿಕ ಸನ್ನಿವೇಶವಾಗಿದೆ. ಆಗ ಕೊಡುವ ನೈತಿಕ ಶಿಕ್ಷಣವೂ ಜಾಗತಿಕ ಸನ್ನಿವೇಶವನ್ನು ಅರ್ಥ ಮಾಡಿಕೊಂಡದ್ದಾಗಿರಬೇಕಾಗುತ್ತದೆ. ಅಂಥ ನೈತಿಕ ಶಿಕ್ಷಣದ ಪಠ್ಯದಲ್ಲಿ ಒಂದು ತಿಳಿವಳಿಕೆಯಾಗಿ ವಿವಿಧ ಮತಧರ್ಮಗಳ ಮೌಲ್ಯಗಳನ್ನು ಸೇರಿಸಿಕೊಳ್ಳಬೇಕು. ಆದರೆ ಅವೇ ಮೌಲ್ಯ ಎಂದು ಆಗಬಾರದು.‌ ವರ್ತಮಾನದ ಜಾಗತಿಕ ಮೌಲ್ಯಗಳೊಂದಿಗೆ ಅವು ಬೆಸೆಯುವಂತಿರಬೇಕು.
ಮತಧರ್ಮಗಳು ರೂಪಿಸಿದ ಸಮುದಾಯಗಳು ಇವೆ. ಆದರೆ ಅವು ರೂಪಿಸಿದ ನೈತಿಕ ಮೌಲ್ಯಗಳ ವ್ಯಾಪ್ತಿಯನ್ನು ಮೀರಿ ತಂತ್ರಜ್ಞಾನವು ಎಲ್ಲರನ್ನೂ ವಿಕಾಸಗೊಳಿಸಿದೆ. ಆದ್ದರಿಂದ ಆಧುನಿಕ ನೈತಿಕ‌ ಮೌಲ್ಯಗಳ ಸ್ವರೂಪ ವೈಜ್ಞಾನಿಕವಾಗಿ ಸಮಾಜಶಾಸ್ತ್ರ
ವನ್ನು ಅರ್ಥ ಮಾಡಿಕೊಂಡಿರಬೇಕಾಗುತ್ತದೆ.

ಈ ತಳಹದಿಯ ಪಠ್ಯಕ್ರಮವನ್ನು ಯಾವ ವಿಧಾನ ಗಳಲ್ಲಿ ವಿದ್ಯಾರ್ಥಿಗಳಿಗೆ ತಲುಪಿಸಬೇಕು ಎನ್ನುವುದು ಬಹಳ ಮುಖ್ಯ. ಮೊದಲು ಮೌಲ್ಯಗಳ ಸಾಪೇಕ್ಷತಾ ರೂಪದ ಅರಿವು ವಿದ್ಯಾರ್ಥಿಗಳಿಗೆ ಉಂಟಾಗಬೇಕು. ಅಂದರೆ ಒಂದು ಸನ್ನಿವೇಶದಲ್ಲಿ ನೈತಿಕ ಮೌಲ್ಯವಾಗಿದ್ದದ್ದೇ ಎಲ್ಲ ಸನ್ನಿವೇಶಕ್ಕೂ ಆಗುವುದಿಲ್ಲ ಎನ್ನುವುದು. ಉದಾಹರಣೆಗೆ, ಅಹಿಂಸೆಯು ಜಾಗತಿಕ ಸಮಾಜದ ಮೌಲ್ಯ. ಆದರೆ ಯುದ್ಧ ರಂಗದಲ್ಲಿ ಅದು ಮೌಲ್ಯವಾಗುವುದಿಲ್ಲ. ಮೌಲ್ಯಗಳಲ್ಲಿ ಮೇಲು ಮಟ್ಟದ ಮೌಲ್ಯ ಮತ್ತು ಕೆಳ ಮಟ್ಟದ ಮೌಲ್ಯಗಳೂ ಇವೆ. ಏಕಕಾಲಕ್ಕೆ ಎರಡೆರಡು ಮೌಲ್ಯಗಳು ಪರಸ್ಪರ ಸಂಘರ್ಷಕ್ಕಿಳಿದಾಗ ಯಾವುದು ಪ್ರಧಾನ ಆದ್ಯತೆಯಾಗುತ್ತದೆಯೋ ಆ ಸನ್ನಿವೇಶಕ್ಕೆ ಅದು ಮೇಲ್ಮಟ್ಟದ ಮೌಲ್ಯ.‌ ಇನ್ನೊಂದು ಮೌಲ್ಯವು ಕೆಳಮಟ್ಟದ ಮೌಲ್ಯ. ಮತ್ತೊಂದು ಸನ್ನಿವೇಶದಲ್ಲಿ ಅವು ಅದಲುಬದಲು ಆಗಲೂಬಹುದು. ನೈತಿಕ ಮೌಲ್ಯಗಳ ಚಲನಶೀಲ ಸ್ವಭಾವವನ್ನು ಅರ್ಥ ಮಾಡಿಸಬೇಕು.

ಬಹಳಷ್ಟು ಮೌಲ್ಯಗಳು ಮನುಷ್ಯನ ಸಹಜ ಮೃಗೀಯ ವರ್ತನೆಗಳನ್ನು ನಿಯಂತ್ರಿಸುವ ರೂಪದಲ್ಲಿವೆ.‌ ಉದಾಹರಣೆಗೆ, ಲೈಂಗಿಕತೆ ಎಲ್ಲ ಜೀವಿಗಳಲ್ಲಿರುವ ಸಹಜ ವ್ಯವಸ್ಥೆ. ಅದನ್ನು ದೇವರ ಭಯದಿಂದ, ಗದರಿಸುವುದರಿಂದ, ಮೊಬೈಲ್ ಫೋನ್ ಕೊಡದೆ ಇರುವುದರಿಂದ ನಿಯಂತ್ರಿಸಲು ಸಾಧ್ಯವಿಲ್ಲ. ಅಜ್ಜನ ಕಾಲದಲ್ಲಿ ಮರದ ಮರೆಯಲ್ಲಿ ನೀರಿಗೆ ಹೋಗುವ ಯುವತಿಯರನ್ನು ನೋಡುವ ರೂಪದಲ್ಲಿದ್ದ ಆ ಪ್ರವೃತ್ತಿಯು ಮಕ್ಕಳ‌ ಕಾಲಕ್ಕೆ ಮೊಬೈಲ್ ಫೋನ್ ನೋಡುವ ವಿಧಾನಕ್ಕೆ ಬದಲಾಗಿರುತ್ತದೆ. ಆದರೆ ಮೂಲ ಪ್ರವೃತ್ತಿ ಸಾರ್ವಕಾಲಿಕವೆ ಆಗಿರುತ್ತದೆ.‌ ಹಾಗೆಂದು ಒಂದು ವಯಸ್ಸಿನಲ್ಲಿ ಕಾಣಿಸುವ ಈ ಪ್ರವೃತ್ತಿ ಮುಂದೆ ಬದಲಾಗುತ್ತದೆ ಎನ್ನುವುದೂ ಸಾರ್ವಕಾಲಿಕ ಸತ್ಯವೇ ಆಗಿರುತ್ತದೆ. ಆಗ, ಆಸೆಗಳನ್ನು ಮುಂದಕ್ಕೆ ಹಾಕುವ ಮೂಲಕ ಮನುಷ್ಯರ ಅಂತಃಶಕ್ತಿ ಹೇಗೆ ಜಾಸ್ತಿಯಾಗುತ್ತದೆ ಎಂದು ಅರ್ಥ ಮಾಡಿಸಬೇಕು.

ಎಲ್ಲಕ್ಕಿಂತ ಮುಖ್ಯವಾದದ್ದು ನೈತಿಕ‌ ಮೌಲ್ಯಗಳ ಶಿಕ್ಷಣವು ರೂಪಿಸಬೇಕಾದ ಆಲೋಚನಾ ಕ್ರಮವಾಗಿದೆ.‌ ಸತ್ಯ ಹರಿಶ್ಚಂದ್ರನ ಕಥೆಯನ್ನು, ಸತ್ಯಕ್ಕೆ ನಿಷ್ಠನಾದ್ದರಿಂದ ಅವನು ಲೋಕೋತ್ತರ ನಾಯಕನಾದ ಎಂಬ ಅರ್ಥದಲ್ಲೂ ತೆಗೆದುಕೊಳ್ಳಲು ಬರುತ್ತದೆ. ಸತ್ಯಕ್ಕೆ ನಿಷ್ಠನಾದ್ದರಿಂದ ಅಷ್ಟೆಲ್ಲ ಕಷ್ಟಗಳನ್ನು ಅನುಭವಿಸಬೇಕಾಯಿತು ಎಂಬ ಅರ್ಥದಲ್ಲೂ ತೆಗೆದುಕೊಳ್ಳಲು ಬರುತ್ತದೆ.‌ ವಿದ್ಯಾರ್ಥಿ ಯಾವ ಅರ್ಥದಲ್ಲಿ ತೆಗೆದುಕೊಳ್ಳಬಹುದು ಎನ್ನುವುದು ಅವರಲ್ಲಿ ರೂಪುಗೊಂಡ ಆಲೋಚನಾ ಕ್ರಮದಿಂದ ನಿರ್ಧಾರವಾಗುತ್ತದೆ. ಈ ರೀತಿಯ ಆಲೋಚನಾ ಕ್ರಮ ರೂಪುಗೊಳ್ಳಬೇಕಾದರೆ ಮೌಲ್ಯ ಶಿಕ್ಷಣದ ಅರಿವು ಎಲ್ಲ ಶಿಕ್ಷಕರಿಗೂ ಇದ್ದು ಅವರು ತಮ್ಮ ತಮ್ಮ ವಿಷಯಗಳನ್ನು ಬೋಧಿಸುವಾಗ ಸೂಕ್ತವಾದ ಆಲೋಚನಾ ಕ್ರಮಕ್ಕೆ ಹೊಂದಿಸಿ ಬೋಧಿಸಬೇಕಾಗುತ್ತದೆ. ಕೇವಲ ಯಾರೋ ಒಬ್ಬರು ಹೋಗಿ ಕಥೆ ಹೇಳುವುದರಿಂದ ಉಪಯೋಗವಾಗುವುದಿಲ್ಲ. ಸದ್ಯ ನಮ್ಮಲ್ಲಿ ನಡೆಯುತ್ತಿರುವ ನೈತಿಕ ಶಿಕ್ಷಣದ ಬಗೆಗಿನ ಚರ್ಚೆಗಳು ಇಂತಹ ಅಗತ್ಯಗಳನ್ನು ಗಮನಿಸಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT