ಬುಧವಾರ, ಡಿಸೆಂಬರ್ 2, 2020
26 °C

Pv Web Exclusive| ಭದ್ರಾ ಮೇಲ್ದಂಡೆ; ಸಂಘರ್ಷ ರಹಿತ ಭವಿಷ್ಯ ಅಗತ್ಯ

ಚಂದ್ರಹಾಸ ಹಿರೇಮಳಲಿ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ದಶಕದ ಹಿಂದೆ ಭದ್ರಾ ನೀರಿಗಾಗಿ ನಾಲಾ ಪ್ರದೇಶ, ಅಚ್ಚುಕಟ್ಟು ವ್ಯಾಪ್ತಿಯ ರೈತರ ಮಧ್ಯೆ ಸಂಘರ್ಷವೇ ನಡೆದಿತ್ತು. ಅಚ್ಚುಕಟ್ಟು ವ್ಯಾಪ್ತಿಯ ಕೊನೆಯ ಭಾಗಕ್ಕೆ ನೀರು ಹರಿಯದೇ ಅಲ್ಲಿನ ರೈತರು ಬೆಳೆ ನಷ್ಟ ಅನುಭವಿಸಿದ್ದರು. ಇದಕ್ಕೆಲ್ಲ ನಾಲಾ ಪ್ರದೇಶದ ರೈತರು ನಾಲೆಗಳಿಗೆ ದೊಡ್ಡದೊಡ್ಡ ಪಂಪ್‌ಸೆಟ್‌ ಹಾಕಿ ನೀರು ಎತ್ತುತ್ತಿರುವುದೇ ಕಾರಣ ಎಂದು ಸಂಘರ್ಷಕ್ಕೆ ಇಳಿದಿದ್ದರು. ರಾಜಕೀಯ ಕಾರಣಗಳಿಗಾಗಿ ಅಂತಹ ಅನಧಿಕೃತ ಪಂಪ್‌ಸೆಟ್‌ ತೆಗೆಸಲು ಅಧಿಕಾರಿಗಳಿಗೆ ಸಾಧ್ಯವಾಗಲೇ ಇಲ್ಲ.

ಇದನ್ನೂ ಓದಿ: 

ಕೊನೆಗೆ ನಾಲೆಗಳಲ್ಲಿ ಸೋರಿಕೆಯಾಗುವ ನೀರು ತಡೆದರೆ ಕೊನೆಯ ಭಾಗದ ಸಮಸ್ಯೆ ಬಗೆಹರಿಸಬಹುದು ಎಂದು ನಿರ್ಧರಿಸಿದ ಸರ್ಕಾರ ನೂರಾರು ಕೋಟಿ ಖರ್ಚು ಮಾಡಿ ನಾಲೆಗಳ ಆಧುನೀಕರಣ ಮಾಡಿತ್ತು. ನಂತರವೂ ನೀರು ಅಚ್ಚುಕಟ್ಟಿನ ಕೊನೆಯ ಭಾಗ ತಲುಪಲೇ ಇಲ್ಲ. ಮಳೆ ಕೊರತೆಯಾಗಿ ಭದ್ರಾ ಭರ್ತಿಯಾಗದ ವರ್ಷಗಳಲ್ಲಿ ಇಂದಿಗೂ ಆ ಸಮಸ್ಯೆ ಜೀವಂತವಾಗಿದೆ. ಅಲ್ಲಿನ ರೈತರಿಗೆ ಪದೇಪದೆ ಬೆಳೆ ತ್ಯಾಗ ಮಾಡುವುದು ಸಾಮಾನ್ಯ ಸಂಗತಿಯಾಗಿದೆ.

ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಲಿಂಕ್: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಈ ಮಧ್ಯೆ ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳ ಜನರ ಜೀವನಾಡಿಯಾಗಿದ್ದ ಭದ್ರೆಯನ್ನು ಈಗ ಚಿತ್ರದುರ್ಗ, ತುಮಕೂರು ಜಿಲ್ಲೆಗಳಿಗೂ ಹರಿಸಲು ಕ್ಷಣಗಣನೆ ಆರಂಭವಾಗಿದೆ. ಭದ್ರಾ ಮೇಲ್ದಂಡೆ ಯೋಜನೆಗಾಗಿ ₹ 325 ಕೋಟಿ ವೆಚ್ಚ ಮಾಡಲಾಗುತ್ತಿದೆ. 

90 ಮೀಟರ್ ಎತ್ತರಕ್ಕೆ ತುಂಗೆ ನೀರು

ಬಯಲು ಸೀಮೆಗೆ ನೀರು ಹರಿಸುವ ಮೊದಲು ಭದ್ರಾ ಜಲಾಶಯ ಸದಾ ತುಂಬಿರುವಂತೆ ನೋಡಿಕೊಳ್ಳಬೇಕಾದ ಮೂಲ ಕಾರ್ಯಗಳೇ ಇನ್ನೂ ಪೂರ್ಣಗೊಂಡಿಲ್ಲ. ತುಂಗಾ ಜಲಾಶಯದಿಂದ 17.4 ಟಿಎಂಸಿ ಅಡಿ ನೀರನ್ನು 90 ಮೀಟರ್ ಎತ್ತರದಲ್ಲಿರುವ ಭದ್ರಾ ಜಲಾಶಯಕ್ಕೆ ಲಿಫ್ಟ್‌ ಮಾಡಿ, ಭದ್ರಾ ಜಲಾಶಯದ 12.5 ಟಿಎಂಸಿ ಅಡಿ ನೀರು ಬಳಸಿಕೊಂಡು ಒಟ್ಟು 29.9 ಟಿಎಂಸಿ ನೀರು ಅಡಿ ನೀರನ್ನು ಚಿತ್ರದುರ್ಗ, ತುಮಕೂರು, ದಾವಣಗೆರೆ ಜಿಲ್ಲೆ ಜಗಳೂರು, ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ 2.25 ಲಕ್ಷ ಹೆಕ್ಟೇರ್‌ಗೆ ತುಂತುರು ನೀರಾವರಿ ಕಲ್ಪಿಸಲಾಗುತ್ತಿದೆ. ವಾಣಿ ವಿಲಾಸ ಸಾಗರಕ್ಕೆ 2 ಟಿಎಂಸಿ ಅಡಿ ತಲುಪಿಸಲಾಗುತ್ತದೆ.

ತುಂಗಾದಿಂದ ಭದ್ರಾಗೆ 90 ಮೀಟರ್ ವ್ಯತ್ಯಾಸವಿದೆ. ಎರಡು ಪಂಪ್‌ಹೌಸ್‌ ನಿರ್ಮಾಣ ಮಾಡಿ ಮೊದಲ ಹಂತದಲ್ಲಿ 45 ಮೀಟರ್ ಎತ್ತರಕ್ಕೆ ಪಂಪ್‌ ಮಾಡಲಾಗುತ್ತದೆ. ಅಲ್ಲಿಂದ ಸುರಂಗ ಮಾರ್ಗ, ಕಾಲುವೆಗಳ ಮೂಲಕ ಭದ್ರಾ ಜಲಾಶಯಕ್ಕೆ ನೀರು ಹರಿಸಲಾಗುತ್ತದೆ. ಈ ಕಾರ್ಯಗಳು ಇನ್ನೂ ಕುಂಟುತ್ತಾ ಸಾಗಿವೆ. ಎಲ್ಲ ಪೂರ್ಣಗೊಂಡು ಭದ್ರೆಗೆ ನೀರು ಹರಿದರೂ ಅಲ್ಲಿನ 12.5 ಟಿಎಂಸಿ ಅಡಿ ನೀರು ಬಳಕೆ ಮಾಡಲೇಬೇಕು. ಮಳೆ ಕೊರತೆಯಾಗಿ, ಭವಿಷ್ಯದಲ್ಲಿ ಅಚ್ಚುಕಟ್ಟುದಾರರು, ಭದ್ರಾ ಮೇಲ್ದಂಡೆಯ ತುಂತುರು ಯೋಜನೆ ವ್ಯಾಪ್ತಿಗೆ ಒಳಪಡುವ ರೈತರು ನೀರಿಗಾಗಿ ಕಾದಾಡುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.

‘ಹಿಂದೆ ಭದ್ರಾ ನೀರಿಗಾಗಿ ಅಚ್ಚುಕಟ್ಟು ವ್ಯಾಪ್ತಿಯ ರೈತರು, ನಾಲಾ ಪ್ರದೇಶದ ಜನರು ಹೊಡೆದಾಡಿದ್ದರು. ಭವಿಷ್ಯದಲ್ಲಿ ಇಂತಹ ಸ್ಥಿತಿ ಮರುಕಳಿಸದಂತೆ ಈಗಲೇ ಎಚ್ಚರಿಕೆ ವಹಿಸಬೇಕಿದೆ. ಬಯಲು ಸೀಮೆಗೆ ನೀರು ಹರಿಸುವ ನಿರ್ಧಾರ ಸ್ವಾಗತಾರ್ಹ. ಮೇಲ್ದಂಡೆ ಯೋಜನೆಗೆ ಅಗತ್ಯವಾದ 29.9 ಟಿಎಂಸಿ ಅಡಿ ನೀರು ಪೂರ್ಣವಾಗಿ ತುಂಗಾದಿಂದಲೇ ಲಿಫ್ಟ್‌ ಮಾಡಬೇಕು. ಮಳೆ ಕೊರತೆಯಾದಾಗ ನೀರು ನಿರ್ವಹಣೆ ಕುರಿತು ಆರಂಭದಲ್ಲೇ ನಿಯಮಗಳನ್ನು ಕಟ್ಟುನಿಟ್ಟಾಗಿ ರೂಪಿಸಬೇಕು’ ಎನ್ನುತ್ತಾರೆ ರೈತ ಮುಖಂಡರಾದ ತೇಜಸ್ವಿ ಪಟೇಲ್‌, ಎಚ್‌.ಆರ್.ಬಸವರಾಜಪ್ಪ, ಕೆ.ಟಿ.ಗಂಗಾಧರ್. 

ತುಂಗ ಜಲಾಶಯ ಸಮುದ್ರ ಮಟ್ಟದಿಂದ 588.24 ಮೀಟರ್ ಎತ್ತರವಿದೆ. 3.24 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. 186 ಅಡಿ ಗರಿಷ್ಠಮಟ್ಟ ಹೊಂದಿರುವ ಭದ್ರಾ ಜಲಾಶಯ 71.53 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ.

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ, ಶಿವಮೊಗ್ಗ ಜಿಲ್ಲೆಯ ಭದ್ರಾವತಿ, ಶಿವಮೊಗ್ಗ, ದಾವಣಗೆರೆ ಜಿಲ್ಲೆಯ ಚನ್ನಗಿರಿ, ಹೊನ್ನಾಳಿ, ದಾವಣಗೆರೆ, ಹರಿಹರ, ಹರಪನಹಳ್ಳಿ ತಾಲ್ಲೂಕಿನ 1,82,818 ಹೆಕ್ಟೇರ್ ಜಮೀನುಗಳಿಗೆ ಭದ್ರಾ ಜಲಾಶಯ ನೀರುಣಿಸುತ್ತದೆ. ಜತೆಗೆ, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳ ಹಲವು ನಗರ, ಪಟ್ಟಣ, ಗ್ರಾಮಗಳ ಕುಡಿಯುವ ನೀರಿನ ಯೋಜನೆಗಳಿಗೆ ಜಲಾಶಯವೇ ಆಧಾರ.

186 ಅಡಿ ಗರಿಷ್ಠ ಮಟ್ಟ ಇರುವ ಜಲಾಶಯ 2015ರಲ್ಲಿ 169, 2016ರಲ್ಲಿ 158 ಹಾಗೂ 2017ರಲ್ಲಿ 172 ಅಡಿಗೆ ತಲುಪಿತ್ತು. ಮೂರು ವರ್ಷಗಳು ಜಲಾಶಯ ಭರ್ತಿಯಾಗದ ಪರಿಣಾಮ ಅಚ್ಚುಕಟ್ಟು ಪ್ರದೇಶದ ರೈತರು ಎರಡು ಭತ್ತದ ಬೆಳೆ ತ್ಯಾಗ ಮಾಡಿದ್ದರು. 75 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಯಬೇಕಿದ್ದ 10 ಲಕ್ಷ ಟನ್ ಭತ್ತದ ಬೆಳೆ ಖೋತಾ ಆಗಿತ್ತು.

ಜಲಾಶಯ ಗರಿಷ್ಠಮಟ್ಟ ತಲುಪಿದರೆ 71.53 ಟಿಎಂಸಿ ಅಡಿ ನೀರು ಸಂಗ್ರಹವಾಗುತ್ತದೆ. ಅದರಲ್ಲಿ 13.832 ಟಿಎಂಸಿ ಅಡಿ ಡೆಡ್‌ ಸ್ಟೋರೇಜ್, 7 ಟಿಎಂಸಿ ಅಡಿ ಕುಡಿಯುವ ನೀರಿನ ಯೋಜನೆಗಳು, ಕೈಗಾರಿಕೆಗಳ ಬಳಕೆಗೆ ಮೀಸಲು. ಉಳಿದದ್ದು ಅಚ್ಚುಕಟ್ಟು ಪ್ರದೇಶ ಬೆಳೆಗಳಿಗೆ ಹರಿಸಲಾಗುತ್ತದೆ. ಐದೂವರೆ ದಶಕಗಳ ಇತಿಹಾಸದಲ್ಲಿ ಗರಿಷ್ಠ ಮಟ್ಟ ತಲುಪಿರುವುದು 28 ಬಾರಿ. 1969ರಲ್ಲಿ ಮೊದಲ ಬಾರಿ ಗರಿಷ್ಠ ಮಟ್ಟ ತಲುಪಿತ್ತು. 1990ರಿಂದ 94ರವರೆಗೆ ಐದು ವರ್ಷ ನಿರಂತರವಾಗಿ ಭರ್ತಿಯಾಗಿತ್ತು. ಮತ್ತೆ 2005ರಿಂದ 11ರವರೆಗೆ ಸತತ 6 ವರ್ಷ ಗರಿಷ್ಠಮಟ್ಟ ತಲುಪಿತ್ತು. 2013, 2014ರಲ್ಲೂ ಜಲಾಶಯ ಭರ್ತಿಯಾಗಿತ್ತು. ಇಲ್ಲಿಯವರೆಗೆ ಮತ್ತೆ ಮೂರು ವರ್ಷ ಸತತವಾಗಿ ಭರ್ತಿಯಾಗಿದೆ.

ತುಂಗಾ ಜಲಾಶಯಕ್ಕೆ ಮಳೆಗಾಲದಲ್ಲಿ ಸಾಕಷ್ಟು ನೀರು ಹರಿದುಬರುತ್ತದೆ. ಜಲಾಶಯ ಕೇವಲ 3.24 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಹಾಗಾಗಿ, ಹಲವು ಟಿಎಂಸಿ ಅಡಿ ನೀರು ತುಂಬಾ ನದಿಗೆ ಹರಿಸಲಾಗುತ್ತಿದೆ. ಈ ನೀರು ಭದ್ರಾ ಮೇಲ್ದಂಡೆಗೆ ಬಳಕೆಯಾಗಲಿದೆ. ಹಾಗಾಗಿ, ಉತ್ತಮ ಮಳೆಯಾದಾಗ ಯಾವುದೇ ಸಮಸ್ಯೆ, ಸಂಘರ್ಷಕ್ಕೆ ಅವಕಾಶವೇ ಇರುವುದಿಲ್ಲ. ಮಳೆ ಕೊರತೆಯಾಗಿ ಜಲಾಶಯ ತುಂಬದೇ ಇದ್ದ ವರ್ಷಗಳಲ್ಲಿ ನೀರು ನಿರ್ವಹಣೆ ಕುರಿತು ಸೂಕ್ತ ನಿಯಮಗಳನ್ನು ರೂಪಿಸದೇ ಹೋದರೆ ಹೊಸ ಯೋಜನೆಗಳು ಮತ್ತಷ್ಟು ಸಮಸ್ಯೆ ಸೃಷ್ಟಿಸುವುದು ಖಚಿತ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು