ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಬಡವರಿಂದ ದೂರವಾಗುತ್ತಿದೆಯೇ ‘ರೇವ್ಡಿ’?

ಜನಪರ ಕಾರ್ಯಕ್ರಮಗಳು ಜನರು ಬೆಳವಣಿಗೆಯಲ್ಲಿ ಪಾಲ್ಗೊಳ್ಳುವುದಕ್ಕೆ ಅವಶ್ಯಕ
Last Updated 25 ಆಗಸ್ಟ್ 2022, 22:36 IST
ಅಕ್ಷರ ಗಾತ್ರ

ಎಳ್ಳನ್ನು ಚೆನ್ನಾಗಿ ಹುರಿದು ಬೆಲ್ಲದ ಪಾಕದಲ್ಲಿ ಹಾಕಿ ಸಣ್ಣ ಉಂಡೆಗಳನ್ನಾಗಿ ಮಾಡಿದರೆ ರುಚಿಯಾದ ರೇವ್ಡಿ ಸಿದ್ಧ. ಹಬ್ಬದ ಸಂದರ್ಭಗಳಲ್ಲಿ ‘ಉಚಿತ’ವಾಗಿ ಹಂಚುವ ಪೌಷ್ಟಿಕ ಸಿಹಿ ತಿನಿಸು ರೇವ್ಡಿ ಈಗ ಸುದ್ದಿಯಲ್ಲಿದೆ.

ರಾಜಕೀಯ ಪಕ್ಷಗಳು ಕೊಡುವ ಉಚಿತ ಕೊಡುಗೆ ಗಳನ್ನು ಪ್ರಧಾನಿಯವರು ರೇವ್ಡಿಗೆ ಹೋಲಿಸಿ, ‘ನಮ್ಮ ದೇಶದಲ್ಲಿ ಉಚಿತವಾಗಿ ರೇವ್ಡಿಗಳನ್ನು ಹಂಚಿ ವೋಟು ಗಳಿಸುವ ಪ್ರಯತ್ನ ನಡೆಯುತ್ತಿದೆ. ಈ ರೇವ್ಡಿ ಸಂಸ್ಕೃತಿ ದೇಶದ ಬೆಳವಣಿಗೆಗೆ ತುಂಬಾ ಅಪಾಯಕಾರಿ. ಜನ ಈ ಬಗ್ಗೆ ಎಚ್ಚರದಿಂದ ಇರಬೇಕು’ ಎಂದು ಅದರ ವಿರುದ್ಧ ಸಮರ ಸಾರಿದ್ದಾರೆ. ಅದಕ್ಕೆ ಅರವಿಂದ ಕೇಜ್ರಿವಾಲ್ ಅವರು ‘ನಾನು ಉಚಿತವಾಗಿ ರೇವ್ಡಿಯನ್ನು ಹಂಚು ತ್ತಿದ್ದೇನೆ ಎಂದು ಆಪಾದನೆ ಮಾಡಲಾಗಿದೆ. ನನ್ನನ್ನು
ನಿಂದಿಸಲಾಗುತ್ತಿದೆ, ಗೇಲಿ ಮಾಡಲಾಗುತ್ತಿದೆ. ದೆಹಲಿಯ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಉಚಿತವಾಗಿ ಒಳ್ಳೆಯ ಶಿಕ್ಷಣ ಕೊಡುತ್ತಿದ್ದೇನೆ. ದೆಹಲಿಯಲ್ಲಿ ಯಾರಿಗಾ ದರೂ ಅಪಘಾತವಾದರೆ ಅವರಿಗೆ ಪುಕ್ಕಟೆಯಾಗಿ ಚಿಕಿತ್ಸೆ ಸಿಗುತ್ತಿದೆ. ಅದು ತಪ್ಪಾ?’ ಎಂದು ಕೇಳುತ್ತಿದ್ದಾರೆ.

ಆಮ್‌ ಆದ್ಮಿ ಪಕ್ಷ ಮಾತ್ರವಲ್ಲ; ಎಲ್ಲ ರಾಜಕೀಯ ಪಕ್ಷಗಳೂ ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಘೋಷಣೆ ಮಾಡುತ್ತಲೇ ಬಂದಿವೆ. ಬಿಜೆಪಿ ಕೂಡ ಎಲ್ಲರ ಬ್ಯಾಂಕ್ ಖಾತೆಗೆ ₹ 15 ಲಕ್ಷ ಜಮಾ ಮಾಡುವುದಾಗಿ ಹೇಳಿತ್ತು. ಪುಕ್ಕಟೆ ಅಡುಗೆ ಅನಿಲ ಕೊಡುವ ಕಾರ್ಯಕ್ರಮ ಹಾಕಿಕೊಂಡಿತ್ತು. ಎಲ್ಲ ರಾಜಕೀಯ ಪಕ್ಷಗಳೂ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಒಂದಿಷ್ಟು ವಿನಾಯಿತಿ ಕೊಡುವ, ಆಮಿಷ ತೋರಿಸುವ ಕೆಲಸವನ್ನು ಮಾಡುತ್ತಿರುತ್ತವೆ.

ಸಮಸ್ಯೆ ಅಂದರೆ ಉಚಿತ ಕೊಡುಗೆ ಅಂದರೇನು ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಕೆಲವು ಸರ್ಕಾರಗಳು ಪಠ್ಯ
ಪುಸ್ತಕಗಳು, ಸಮವಸ್ತ್ರ, ಆಹಾರ, ಆರೋಗ್ಯಸೇವೆ, ಶಿಕ್ಷಣ ಇತ್ಯಾದಿಗಳನ್ನು ಉಚಿತವಾಗಿ ನೀಡುತ್ತಿವೆ. ಆದರೆ ಈಗ ಇವೆಲ್ಲವನ್ನೂ ದಾನ ಅನ್ನುವಂತೆ ಬಣ್ಣಿಸಲಾಗುತ್ತಿದೆ. ಶಿಕ್ಷಣ, ಆರೋಗ್ಯ, ಜೀವನೋಪಾಯ ಮತ್ತು ಘನತೆಯಿಂದ ಬದುಕುವ ಸ್ಥಿತಿಯನ್ನು ಕಲ್ಪಿಸಿಕೊಡು
ವುದು ಸರ್ಕಾರದ ಕರ್ತವ್ಯ. ಕಲ್ಯಾಣ ರಾಜ್ಯದ ಕಲ್ಪನೆಯನ್ನು ತಪ್ಪು ಎಂದು ಬಿಂಬಿಸುವುದಾಗಲಿ, ನಮ್ಮ ಇಂದಿನ ಆರ್ಥಿಕ ಬಿಕ್ಕಟ್ಟುಗಳಿಗೆ ಅಂತಹ ಕೊಡುಗೆಗಳೇ ಕಾರಣ ಅನ್ನುವುದಾಗಲಿ, ಶ್ರೀಲಂಕಾವನ್ನು ಗುಮ್ಮನಾಗಿ ತೋರಿಸಿ ಆತಂಕ ಹುಟ್ಟಿಸುವುದಾಗಲಿ ಸೂಕ್ತವಲ್ಲ.

ಜಗತ್ತಿನ ಆರ್ಥಿಕ ಬೆಳವಣಿಗೆಯನ್ನು ಗಮನಿಸಿದರೆ, ಕಲ್ಯಾಣ ಕಾರ್ಯಕ್ರಮಗಳ ಮಹತ್ವ ಅರ್ಥವಾಗುತ್ತದೆ. ಜಾಗತಿಕ ಯುದ್ಧದ ನಂತರ, ವಿವಿಧ ದೇಶಗಳಲ್ಲಿ ಜಾರಿಗೆ ತಂದ ಕಲ್ಯಾಣ ಕಾರ್ಯಕ್ರಮಗಳಿಂದ ಅಸಮಾನತೆ ಕಡಿಮೆಯಾಗಿದೆ. ಇದನ್ನು ಥಾಮಸ್ ಪಿಕೆಟ್ಟಿಯವರ ಅಧ್ಯಯನ ತೋರಿಸಿದೆ. ಶ್ರೀಮಂತರ ಮೇಲೆ ಹೆಚ್ಚು ತೆರಿಗೆ ಹಾಕಿ, ಶಿಕ್ಷಣ, ಆರೋಗ್ಯ, ಪಿಂಚಣಿಯಂತಹ ಸೌಲಭ್ಯ
ಗಳನ್ನು ನೀಡಿದ್ದರಿಂದಲೇ ಅಸಮಾನತೆಯಲ್ಲಿ ಇಳಿಕೆ, ಆರ್ಥಿಕ ಪ್ರಗತಿ ಸಾಧ್ಯವಾಗಿದ್ದು ಎಂದು ತಿಳಿಸಿದೆ. ಅಮೆರಿಕದ ಆರ್ಥಿಕ ಪ್ರಗತಿಗೂ ಅಲ್ಲಿ ಶಿಕ್ಷಣದಲ್ಲಿ ಸಾಧಿಸಿದ ಪ್ರಗತಿ ಬಹುಮಟ್ಟಿಗೆ ಕಾರಣ ಅನ್ನುವುದು ಸ್ಪಷ್ಟ. ಇಂತಹ ಕ್ರಮಗಳಿಂದ ಫಲಾನುಭವಿಗಳಿಗೆ ಮಾತ್ರವಲ್ಲದೆ ಇಡೀ ಸಮಾಜಕ್ಕೆ ಅನುಕೂಲವಾಗಿದೆ ಎನ್ನುತ್ತಾರೆ ಪಿಕೆಟ್ಟಿ.

1950ರಲ್ಲಿ ಭಾರತವು ಆರ್ಥಿಕವಾಗಿ ಚೀನಾ ಇದ್ದ ಸ್ಥಿತಿಯಲ್ಲೇ ಇತ್ತು. ಆದರೆ ಚೀನಾ ಪ್ರತಿಯೊಬ್ಬ
ರಿಗೂ ಆಹಾರ, ಆರೋಗ್ಯ, ಶಿಕ್ಷಣ ಕೊಡುವ ಮೂಲಕ ಭಾರತಕ್ಕಿಂತ ಹಲವು ಪಟ್ಟು ಮುನ್ನಡೆ ಸಾಧಿಸಿದೆ. ನಮ್ಮಲ್ಲಿ ನರೇಗಾ, ಪಡಿತರ ಪದ್ಧತಿ, ರಾಜ್ಯ ಸರ್ಕಾರಗಳ ಶಿಕ್ಷಣ ಹಾಗೂ ಆರೋಗ್ಯ ಯೋಜನೆಗಳು, ಇವೆಲ್ಲಾ ದೀರ್ಘಾವಧಿಯಲ್ಲಿ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಿವೆ. ತಕ್ಷಣದ ಲಾಭವನ್ನು ಗಮನದಲ್ಲಿಟ್ಟು ಪೊಳ್ಳು ಭರವಸೆಗಳನ್ನು ಕೊಡುವುದು ಒಳ್ಳೆಯದಲ್ಲ. ಆದರೆ ಯಾವುದು ಸರಿ ಯಾವುದು ತಪ್ಪು ಎಂದು ನಿರ್ಧರಿಸುವುದು ಕಷ್ಟ. ಉದಾಹರಣೆಗೆ ಉಚಿತವಾಗಿ ಲ್ಯಾಪ್‍ಟಾಪ್ ಕೊಡುವುದು ಉತ್ಪಾದಕತೆಯನ್ನು, ಜ್ಞಾನವನ್ನು, ನೈಪುಣ್ಯವನ್ನು
ಹೆಚ್ಚಿಸುವುದಕ್ಕೆ ಅವಶ್ಯಕ ಎಂದು ಯೋಚಿಸಬಹುದು. ಇವನ್ನು ಹೆಚ್ಚು ಸೂಕ್ಷ್ಮವಾಗಿ ಗಮನಿಸಬೇಕು.

ಜನರಿಗೆ ಕೊಡುವ ನೆರವಿನಿಂದ ಜನ ಸೋಮಾರಿಗಳಾಗುತ್ತಾರೆ ಅನ್ನುವ ಟೀಕೆಗೂ ಅರ್ಥವಿಲ್ಲ, ಬದಲಿಗೆ ಜನ ಹೆಚ್ಚು ಉತ್ಪಾದಕ ಹಾಗೂ ಕ್ರಿಯಾತ್ಮಕವಾಗುತ್ತಾರೆ ಅನ್ನುತ್ತಾರೆ ಅರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿ. ಕೇಂದ್ರವು ಬಡವರಿಗೆ ಮಾತ್ರವಲ್ಲ ಕಾರ್ಪೊರೇಟ್‌ ಸಂಸ್ಥೆಗಳಿಗೂ ಉಚಿತ ಕೊಡುಗೆಗಳನ್ನು ಕೊಡುತ್ತಿದೆ. ಉದಾಹರಣೆಗೆ 2019ರಲ್ಲಿ ಆರ್ಥಿಕ ಹಿಂಜರಿತದಿಂದ ಹೊರಬರುವುದಕ್ಕೆ ಆರ್ಥಿಕತೆಯನ್ನು ‘ಉತ್ತೇಜಿಸುವ’ ಉದ್ದೇಶದಿಂದ ಕಾರ್ಪೊರೇಟ್ ತೆರಿಗೆಯಲ್ಲಿ ಕಡಿತ ಮಾಡಲಾಯಿತು. ಈ ‘ಉತ್ತೇಜನ’ ಪ್ರಕ್ರಿಯೆಯಿಂದ ತೆರಿಗೆ ಸಂಗ್ರಹಣೆ ₹ 1.45 ಲಕ್ಷ ಕೋಟಿಯಷ್ಟು ಕಡಿಮೆಯಾಯಿತು. ಆದರೆ ಆರ್ಥಿಕತೆ ಪುನಶ್ಚೇತನ ಕಾಣಲಿಲ್ಲ. ಕಾರ್ಪೊರೇಟ್‍ ಸಂಸ್ಥೆಗಳಿಗೆ ಕೊಡುವ ರಿಯಾಯಿತಿಗಳು ಕೂಡ ರೇವ್ಡಿಯೇ. ನಿಜವಾಗಿ ಅವು ಅನವಶ್ಯಕ ಖರ್ಚು. ಇತ್ತೀಚಿನ ದಿನಗಳಲ್ಲಿ ವಿತ್ತೀಯ ಸ್ಥಿರತೆ ಸಾಧಿಸಲು ವಿತ್ತೀಯ ಕೊರತೆಯನ್ನು ನಿಯಂತ್ರಿಸ ಲಾಗುತ್ತಿದೆ. ಅದಕ್ಕಾಗಿ ಸಬ್ಸಿಡಿ ಹಾಗೂ ಸಾಮಾಜಿಕ ವೆಚ್ಚಗಳ ಕಡಿತ ಮಾಡಲಾಗುತ್ತಿದೆ.

ಕಾರ್ಪೊರೇಟ್‌ ಸಂಸ್ಥೆಗಳಿಗೆ ನೀಡುವ ನೆರವನ್ನು ‘ಉತ್ತೇಜನ’ ಎಂದು ಕರೆದು ಮುಂದುವರಿಸುತ್ತೇವೆ. ಬಡವರಿಗೆ ಕೊಡುವುದು ‘ಉಚಿತ ಕೊಡುಗೆ’ ಅಂತ ಭಾವಿಸಿ ನಿಲ್ಲಿಸಲು ಒತ್ತಾಯಿಸುತ್ತೇವೆ. ‘ಜನಪ್ರಿಯ ಯೋಜನೆಗಳನ್ನು ಹಾಗೂ ಉಚಿತ ಕೊಡುಗೆಗಳನ್ನು ನಿಲ್ಲಿಸದೇ ಹೋದರೆ ನಾವು ಶ್ರೀಲಂಕಾ ಸ್ಥಿತಿ ತಲುಪುವುದು ಖಾತರಿ’ ಎನ್ನಲಾಗುತ್ತಿದೆ. ಶಿಕ್ಷಣ, ಆರೋಗ್ಯ ನೆರವು ನೀಡುವುದು, ಸಂಕಟದಲ್ಲಿರುವವರಿಗೆ ಹಣ ವರ್ಗಾಯಿಸುವುದು ಅಥವಾ ಸಬ್ಸಿಡಿ ನೀಡುವುದು ಬಹುತೇಕ ದೇಶಗಳಲ್ಲಿ ಇದೆ. ಬಂಡವಾಳಶಾಹಿ ವ್ಯವಸ್ಥೆಯಲ್ಲಿ, ಮಾರುಕಟ್ಟೆ ಆರ್ಥಿಕತೆಗಳು ಸೃಷ್ಟಿಸುವ ಅಸಮಾನತೆಯನ್ನು ತಗ್ಗಿಸುವುದಕ್ಕೆ ಸಬ್ಸಿಡಿ, ಪ್ರಗತಿಪರ ತೆರಿಗೆ ಇತ್ಯಾದಿ ಕ್ರಮಗಳು ಅವಶ್ಯಕ ಎಂದು ಪರಿಗಣಿಸಲಾಗಿದೆ. ಪ್ರಗತಿಪರ ತೆರಿಗೆಯಿಂದ ಬಂದ ಹಣವನ್ನು ಇಂತಹ ಕ್ರಮಗಳಲ್ಲಿ ಹೂಡುವುದು ಸ್ವೀಕೃತ ಕ್ರಮವಾಗಿದೆ.

ಬೆಳವಣಿಗೆಯ ಪ್ರಕ್ರಿಯೆಯಲ್ಲೇ ಎಲ್ಲರಿಗೂ ಒಂದು ಕನಿಷ್ಠ ಜೀವನಮಟ್ಟ ಹಾಗೂ ಗುಣಮಟ್ಟದ ಬದುಕು ಸಾಧ್ಯವಾದರೆ ಒಳ್ಳೆಯದು. ಅದು ಸಾಧ್ಯವಾಗದೇ ಹೋದಾಗ ಬಡವರು ಹಾಗೂ ಅವಶ್ಯಕತೆ ಇರುವವರಿಗೆ ಸರ್ಕಾರ ಇಂತಹ ಕ್ರಮಗಳ ಮೂಲಕ ಬೆಂಬಲಿಸಬೇಕಾಗುತ್ತದೆ. ಎಲ್ಲರನ್ನೂ ಬೆಳವಣಿಗೆಯ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುವ ವಿಧಾನವಾಗಿ ಇದನ್ನು ಕಾಣಬೇಕು. ಅದರ ‘ಅಪಬಳಕೆ’ ಆಗುತ್ತಿದೆ ಅನ್ನುವುದು ಸಂಪತ್ತಿನ ಮರುಹಂಚಿಕೆಯ ಪ್ರಕ್ರಿಯೆಗೆ ಅಡ್ಡಿಯಾಗಬಾರದು.

1990ರಲ್ಲಿ ಉದಾರೀಕರಣ ನೀತಿ ಜಾರಿಗೆ ಬಂದಾಗಿನಿಂದ ಅಸಮಾನತೆ ಹೆಚ್ಚುತ್ತಿದೆ. ಇದನ್ನು ಎಲ್ಲ ಅಧ್ಯಯನಗಳೂ ಹೇಳುತ್ತಿವೆ. ನಿರುದ್ಯೋಗ, ದಾರಿದ್ರ್ಯ, ಪೌಷ್ಟಿಕಾಂಶದ ಕೊರತೆ, ಹಣದುಬ್ಬರ ಇವೆಲ್ಲಾ ಜನರನ್ನು ಹೆಚ್ಚೆಚ್ಚು ನಿರ್ಗತಿಕರನ್ನಾಗಿಸುತ್ತಿವೆ. ಆರ್ಥಿಕ ಪ್ರಗತಿಯ ಫಲ ಇವರಿಗೆ ಹರಿದು ಬರುತ್ತಿಲ್ಲ. ಜನ ಅಸಹಾಯಕರಾಗಿದ್ದಾರೆ. ಜನರಿಗೆ ಬೇಕಾದ ಮೂಲಭೂತ ಸೌಕರ್ಯಗಳು ರಾಜಕೀಯ ಪಕ್ಷಗಳ ಚುನಾವಣಾ ಘೋಷಣೆಗಳಾಗಿವೆ. ಅಧಿಕಾರಕ್ಕೆ ಬಂದರೆ ಅವುಗಳನ್ನು ಪುಕ್ಕಟೆಯಾಗಿ ಕೊಡುವುದಾಗಿ ಭರವಸೆ ಕೊಡುತ್ತಿವೆ. ದುರಂತವೆಂದರೆ ಸರ್ಕಾರಗಳ ಸಂವಿಧಾನಾತ್ಮಕ ಕರ್ತವ್ಯ ಇಂದು ವಿತ್ತೀಯ ಸ್ಥಿರತೆಗೆ ಮಾರಕವಾಗಿ ಕಾಣುತ್ತಿದೆ.

ಜನಪರ ಯೋಜನೆಗಳಿಗೆ ಮಾಡಬೇಕಾದ ಖರ್ಚು ದುಂದುವೆಚ್ಚವೆನಿಸುತ್ತಿದೆ. ನಮ್ಮ ಆರ್ಥಿಕತೆ ಕುಸಿಯುವುದಕ್ಕೆ ಇಂಥ ಯೋಜನೆಗಳು ಕಾರಣವಲ್ಲ. ಆರ್ಥಿಕ ವೈಫಲ್ಯದಿಂದಾಗಿ ಅದಕ್ಕೆ ಬೇಕಾದ ಹಣ ಕ್ರೋಡೀಕರಿಸಲು ಸಾಧ್ಯವಾಗುತ್ತಿಲ್ಲ. ಹಣ ಸಂಗ್ರಹಕ್ಕೆ ಸಂಪತ್ತಿನ ಮೇಲೆ ತೆರಿಗೆಯಂತಹ ಕ್ರಮಗಳನ್ನು ನಾವು ತೆಗೆದುಕೊಳ್ಳಲು ಸಿದ್ಧರಿಲ್ಲ ಅನ್ನುವುದು ನಮ್ಮ ಉದ್ದಿಮೆಗಳ ಪರ ನಿಲುವನ್ನು ತೋರಿಸುತ್ತದೆ. ಆರ್ಥಿಕ

ಟಿ.ಎಸ್. ವೇಣುಗೋಪಾಲ್
ಟಿ.ಎಸ್. ವೇಣುಗೋಪಾಲ್

ಬಿಕ್ಕಟ್ಟಿಗೆ ನಿಜವಾದ ಕಾರಣ ಅರಿಯಬೇಕಾಗಿದೆ. ಭಾವನಾ ತ್ಮಕ ಅಥವಾ ಪುಕ್ಕಟೆ ಕೊಡುಗೆಯಂತಹ ವಿಷಯಗಳಿಂದ ದಿಕ್ಕುತಪ್ಪಿಸುವುದು, ತಪ್ಪುವುದು ಪರಿಹಾರವಲ್ಲ. ಆರ್ಥಿಕ ಪ್ರಶ್ನೆಗಳು ನಮ್ಮ ಸಾವು ಬದುಕಿನ ಪ್ರಶ್ನೆಗಳು.

ಇದನ್ನು ರಾಜಕೀಯ ಪಕ್ಷಗಳು ನಿರ್ಧರಿಸುವಂತಾಗಬಾರದು. ಜನಪರ ಕಾರ್ಯಕ್ರಮಗಳು ಜನರು ಬೆಳವಣಿಗೆ ಯಲ್ಲಿ ಪಾಲ್ಗೊಳ್ಳುವುದಕ್ಕೆ ಅವಶ್ಯಕ. ಅಸಮಾನತೆ ತಗ್ಗುವುದಕ್ಕೆ, ಸಂಪತ್ತಿನ ಮರುಹಂಚಿಕೆಯಾಗುವುದಕ್ಕೆ ಕಲ್ಯಾಣ ಕಾರ್ಯಕ್ರಮಗಳು ಮುಂದುವರಿಯುವುದು, ಅದಕ್ಕೆ ಬೇಕಾದ ಹಣ ಸಂಗ್ರಹಣೆ, ಸಂಪತ್ತಿನ ಮೇಲೆ ತೆರಿಗೆಯಂತಹ ಕ್ರಮಗಳು ಚಾಲ್ತಿಗೆ ಬರಬೇಕಾದದ್ದು ಇಂದಿನ ತುರ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT