ಶುಕ್ರವಾರ, ಮೇ 14, 2021
32 °C

ನಿಘಂಟು ಕ್ಷೇತ್ರದಲ್ಲಿ ‘ಜಿ.ವಿ. ಮಾರ್ಗ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಿಘಂಟು ಕ್ಷೇತ್ರದಲ್ಲಿ ಕನ್ನಡದಲ್ಲಿ ನಡೆದಿರುವ ಕಾರ್ಯಗಳಲ್ಲೆಲ್ಲ ಜಿ. ವೆಂಕಟಸುಬ್ಬಯ್ಯ ಅವರ ಕಾರ್ಯ ನಿಶ್ಚಯವಾಗಿಯೂ ಮಹತ್ತರವಾದುದು. ಸಮಕಾಲೀನ ಕನ್ನಡ ವಿದ್ವತ್ ಲೋಕದಲ್ಲಿ ಕನ್ನಡ ನಿಘಂಟು ಹಾಗೂ ಜಿ. ವೆಂಕಟಸುಬ್ಬಯ್ಯ ಅವರ ಹೆಸರು ಒಂದಕ್ಕೊಂದು ಹಾಸುಹೊಕ್ಕಾಗಿರುವುದು ವಿಶಿಷ್ಟ ಸಂಗತಿಯೇ ಆಗಿಬಿಟ್ಟಿದೆ. ಅವರ ಎರಡು ಕೃತಿಗಳು ನಿಘಂಟು ಶಾಸ್ತ್ರದ ತಾತ್ವಿಕತೆಗಳನ್ನೊಳಗೊಂಡಿವೆ. ಏಳು ನಿಘಂಟುಗಳನ್ನು ಸ್ವತಃ ರಚಿಸಿದ್ದಾರೆ.


ಅಂಗಡಿ

ವೆಂಕಟಸುಬ್ಬಯ್ಯನವರ ನಿಘಂಟು ಶಾಸ್ತ್ರಕ್ಕೆ ಸಂಬಂಧಿಸಿದ ‘ಕನ್ನಡ ನಿಘಂಟು ಪರಿಚಯ’ ಕೃತಿ ರಚನೆಗಿಂತ ಮುಂಚೆ ಒಂದೆರಡು ಬಿಡಿ ಲೇಖನಗಳನ್ನು ಬಿಟ್ಟರೆ ಆ ಶಾಸ್ತ್ರಕ್ಕೆ ಸಂಬಂಧಿಸಿದ ಬರಹಗಳೇ ಕನ್ನಡದಲ್ಲಿ ಇರಲಿಲ್ಲವೆಂದರೆ ಆಶ್ಚರ್ಯಪಡಬೇಕಾಗಿಲ್ಲ. 1993ರಲ್ಲಿ ಪ್ರಕಟವಾದ ಅವರ ಈ ಕೃತಿಯು ಆ ಅವಧಿಯ ನಿಘಂಟು ವಿದ್ಯಾರ್ಥಿಗಳೆಲ್ಲರಿಗೂ ಏಕೈಕ ಪಠ್ಯವಾಯಿತು. 

ನಿಘಂಟುಗಳು ಹಾಗೂ ನಿಘಂಟುಗಳ ತಾತ್ವಿಕ ನೆಲೆಗೆ ಸಂಬಂಧಿಸಿದ 19 ಲೇಖನಗಳು ‘ಕನ್ನಡ ನಿಘಂಟು ಪರಿವಾರ’ ಎಂಬ  ಸಂಕಲನದಲ್ಲಿವೆ. ಜಿ. ವೆಂಕಟಸುಬ್ಬಯ್ಯ ಅವರು ‘ಪ್ರಜಾವಾಣಿ’ ದಿನಪತ್ರಿಕೆಯ  ‘ಇಗೋ ಕನ್ನಡ’ ಎಂಬ ಅಂಕಣದಲ್ಲಿ ಶಬ್ದ ಪ್ರಯೋಗಗಳ ಬಗ್ಗೆ ಚರ್ಚಿಸಿದ್ದಾರೆ. ಇಗೋ ಕನ್ನಡದ ಶಬ್ದಾರ್ಥ ನಮೂದುಗಳನ್ನು ಮೂರು ನೆಲೆಗಳಲ್ಲಿ ವಿಂಗಡಿಸಬಹುದು. ಆಸಕ್ತ ವಿದ್ವಾಂಸರಿಗೆ ತಲೆದೋರುವ ಪ್ರಶ್ನೆಗಳು, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳಿಗೆ ತೋರಿದ ಸಂಶಯಗಳು ಹಾಗೂ ಸಾಮಾನ್ಯ ಓದುಗರು ಎದುರಿಸುವ ಪ್ರಶ್ನೆಗಳು. ಕೇಳುಗರ ಪ್ರಶ್ನೆಗಳನ್ನು ಜಿ. ವೆಂಕಟಸುಬ್ಬಯ್ಯ ಅವರು ಗಂಭೀರವಾಗಿ ತೆಗೆದುಕೊಂಡು ಸಮಪರ್ಕವಾಗಿ ಮತ್ತು ಖಚಿತವಾಗಿ ಉತ್ತರಿಸಿದ್ದಾರೆ. 

ಜಿ. ವೆಂಕಟಸುಬ್ಬಯ್ಯ ಅವರು ಮುದ್ದಣನ ಕೃತಿಗಳನ್ನು ಗಮನದಲ್ಲಿಟ್ಟುಕೊಂಡು ‘ಮುದ್ದಣ ಪದ ಪ್ರಯೋಗ ಕೋಶ’ವನ್ನು ಸಿದ್ಧಪಡಿಸಿದ್ದಾರೆ. ಮುದ್ದಣನು ಹೊಸ ಶಬ್ದಗಳನ್ನು ನಿರ್ಮಿಸುವಲ್ಲಿ ಬಹಳ ನಿಪುಣ. ಉದಾ; ಸಹಸ್ರಾಕ್ಷ ಎಂಬುದಕ್ಕೆ ಗಾಳಿದೇರ್ ಎಂದು ಬಳಸಿ ಹೊಸ ಪದವನ್ನು ಟಂಕಿಸಿದ್ದಾನೆ. ಅವರು 1998ರಲ್ಲಿ ‘ಎರವಲು ಪದಕೋಶ’ವನ್ನು ರಚಿಸಿದರು. ಸಾಮಾನ್ಯ ಓದುಗರ ವಿಶೇಷವಾಗಿ ಉಪಾಧ್ಯಾಯರ, ವಿದ್ಯಾರ್ಥಿಗಳ ದಿನನಿತ್ಯದ ಉಪಯೋಗಕ್ಕಾಗಿ ಜಿ. ವೆಂಕಟಸುಬ್ಬಯ್ಯ ಅವರು ‘ಕನ್ನಡ–ಕನ್ನಡ ಸಂಕ್ಷಿಪ್ತ ನಿಘಂಟು’ ಸಿದ್ಧಪಡಿಸಿದರು.

ವೆಂಕಟಸುಬ್ಬಯ್ಯನವರು ಕನ್ನಡ ನಿಘಂಟು ಕ್ಷೇತ್ರಕ್ಕೆ ಗುರುತರವಾದ ಕಾಣಿಕೆಯನ್ನು ಕೊಟ್ಟಿದ್ದಾರೆ. ಚಲನಶೀಲವಾದ ಭಾಷೆಯ ಜೊತೆಗೆ ಲೇಖಕನಾದವನು ಬೆಳೆಯುತ್ತಾನೆ ಎಂಬುದಕ್ಕೆ ಅವರು ರಚಿಸಿದ ಕೋಶಗಳು ಉತ್ತಮ ನಿದರ್ಶನಗಳಾಗಿವೆ. ತನ್ಮೂಲಕ ಕನ್ನಡ ನಿಘಂಟು ಕ್ಷೇತ್ರದಲ್ಲಿ ‘ಜಿ.ವಿ. ಮಾರ್ಗ’ ನಿರ್ಮಾಣವಾಗಿದೆ.

(ಲೇಖಕ: ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕ)

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು