ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಭೂಮಿಯಲ್ಲಿ ಗಂಧದ ಘಮ: ಎಸ್.ಜಿ.ಶಿವಾನಂದಮೂರ್ತಿ ಲೇಖನ

ಶ್ರೀಗಂಧದ ಮರ ಬೆಳೆಸಲು ಈಗಿಲ್ಲ ಅಡೆತಡೆ l ಮರಳಲಿದೆಯೇ ಶ್ರೀಗಂಧದ ನಾಡೆಂಬ ಮೆರುಗು?
Last Updated 20 ಏಪ್ರಿಲ್ 2022, 19:58 IST
ಅಕ್ಷರ ಗಾತ್ರ

ರಾಷ್ಟ್ರದಲ್ಲಿಯೇ ಅತಿ ಹೆಚ್ಚು ಶ್ರೀಗಂಧದ ಉತ್ಪಾದನೆಗೆ ಹೆಸರಾಗಿದ್ದ ಕರ್ನಾಟಕವನ್ನು ಶ್ರೀಗಂಧದ ನಾಡು, ಗಂಧದ ಬೀಡು ಎಂದೆಲ್ಲ ಕರೆಯಲಾಗುತ್ತದೆ. ಆದರೆ ಅನೇಕ ಕಾರಣಗಳಿಂದ ನಾಡಿನಲ್ಲಿ ಶ್ರೀಗಂಧದ ಉತ್ಪಾದನೆ ಕುಂಠಿತವಾಗಿದೆ. ಇದನ್ನು ಮನಗಂಡ ಸರ್ಕಾರವು ಕರ್ನಾಟಕ ಅರಣ್ಯ ಕಾಯ್ದೆ– 1963ಕ್ಕೆ 2001ರಲ್ಲಿ ತಿದ್ದುಪಡಿ ತಂದಿದೆ ಹಾಗೂ ಒಂದು ವರ್ಷದ ನಂತರ, ಶ್ರೀಗಂಧ ಕಟಾವಣೆ ಹಾಗೂ ಅದರ ವಿಲೇವಾರಿ ಸಂಬಂಧ 1969ರ ಕರ್ನಾಟಕ ಅರಣ್ಯ ನಿಯಮಗಳಿಗೂ ತಿದ್ದುಪಡಿ ತಂದಿದೆ.

ಇದರ ಪ್ರಕಾರ, ರೈತರು ತಮ್ಮ ಜಮೀನುಗಳಲ್ಲಿ ಬೆಳೆದಿರುವ ಶ್ರೀಗಂಧದ ಮರಗಳನ್ನು ಈ ಮೊದಲಿನಂತೆ ಅರಣ್ಯ ಇಲಾಖೆಯೊಂದಿಗೆ ಘೋಷಣೆ ಮಾಡಿಕೊಳ್ಳಬೇಕಾದ ಅಗತ್ಯವಿಲ್ಲ. ಒಂದುವೇಳೆ ಅವರ ಜಮೀನುಗಳಲ್ಲಿ ಶ್ರೀಗಂಧದ ಮರಗಳ ಕಳ್ಳತನವಾಗಿದ್ದಲ್ಲಿ ಅಥವಾ ಅವುಗಳಿಗೆ ಹಾನಿಯುಂಟಾಗಿದ್ದಲ್ಲಿ ಆ ಬಗ್ಗೆ ಅರಣ್ಯ ಇಲಾಖೆ ಅಥವಾ ಪೊಲೀಸ್‌ ಇಲಾಖೆಗೆ ದೂರು ನೀಡಬೇಕೆಂಬ ನಿಯಮವನ್ನು ಸಹ ತೆಗೆದುಹಾಕಲಾಗಿದೆ. ಶ್ರೀಗಂಧದ ಮರಗಳನ್ನು ಕಟಾವು ಮಾಡಲು ಈಗ ಅರಣ್ಯ ಇಲಾಖೆಯು ಕಾಲಮಿತಿಯೊಳಗೆ ಅನುಮತಿ ನೀಡಬೇ
ಕಾಗುತ್ತದೆ. ಮರಗಳು ಮಳೆಗಾಳಿಗೆ ಸಿಲುಕಿದಾಗ, ಒಣಗಿ ಬಿದ್ದಾಗ, ಮರಗಳಿಂದ ಆಸ್ತಿಪಾಸ್ತಿಗೆ, ಪ್ರಾಣಕ್ಕೆ ಹಾನಿಯಾಗುವ ಸಂಭವವಿದ್ದಾಗ, ಕೃಷಿ ವಿಸ್ತರಣೆಗೆ ಅಡ್ಡಿಯಾಗುವ ಸಂದರ್ಭಗಳಲ್ಲಿ ಮರಗಳನ್ನು ತೆರವುಗೊಳಿಸುವ ಬೇಡಿಕೆಯನ್ನು ಅರಣ್ಯ ಇಲಾಖೆಯು ತಿರಸ್ಕರಿಸುವಂತಿಲ್ಲ. ಇಲ್ಲಿ ಶ್ರೀಗಂಧ ಬೆಳೆಯುವವರಿಗೆ ಮರಗಳನ್ನು ಮಾರಾಟ ಮಾಡಲು ಸ್ವಾತಂತ್ರ್ಯ ನೀಡಲಾಗಿದೆ. ಆದರೆ ಅರಣ್ಯ ಇಲಾಖೆಗೆ ಅಥವಾ ರಾಜ್ಯ ಸರ್ಕಾರಿ ಅಧೀನದ ಸಂಸ್ಥೆಗಳಿಗೆ ಅವುಗಳನ್ನು ಮಾರಾಟ ಮಾಡುವುದಕ್ಕೆ ಪೂರಕವಾಗಿ ಕಾಲಕ್ಕೆ ತಕ್ಕಂತೆ ಬೆಲೆಯನ್ನು ಘೋಷಣೆ ಮಾಡಲಾಗುತ್ತದೆ. ಡಿಪೊಗಳಲ್ಲಿ ಅದನ್ನು ಸ್ವೀಕರಿಸಿದ ಮೂರು ತಿಂಗಳೊಳಗಾಗಿ ಹಣ ಪಾವತಿಸಿ ರಸೀದಿ ನೀಡಬೇಕಾಗಿದೆ.

ಇಂತಹ ಕ್ರಮಗಳ ಮೂಲಕ ಸರ್ಕಾರವು ಶ್ರೀಗಂಧ ತೆರವು ಮತ್ತು ವಿಲೇವಾರಿಗೆ ಸಂಬಂಧಿಸಿದ ವಿಧಾನಗಳನ್ನು ಸುಗಮಗೊಳಿಸಿದೆ. ಇದು, ರೈತರು ಖಾಸಗಿಜಮೀನುಗಳಲ್ಲಿ ನಿರಾತಂಕವಾಗಿ ಶ್ರೀಗಂಧ ಬೆಳೆಯಲು ಪ್ರೋತ್ಸಾಹಿಸುವ ನಡೆಯಾಗಿದೆ.

ಈ ಮೊದಲು, ಶ್ರೀಗಂಧದ ಮರವನ್ನು ಎಲ್ಲೇ ಬೆಳೆದರೂ ಅದು ರಾಜ್ಯ ಸರ್ಕಾರದ ಸ್ವತ್ತಾಗಿತ್ತು. ಈಗ ಖಾಸಗಿ ಜಮೀನುಗಳಲ್ಲಿ ಬೆಳೆದ ರೈತರೇ ಅವುಗಳ ಮಾಲೀಕರೆಂದು ಘೋಷಣೆ ಮಾಡಲಾಗಿದೆ. ಇಂತಹ ಸರಳೀಕೃತ ವಿಧಾನಗಳ ಫಲಶ್ರುತಿಯಾಗಿ ರೈತರು ಹೆಚ್ಚಿನ ಪ್ರಮಾಣದಲ್ಲಿ ಶ್ರೀಗಂಧದ ಮರಗಳನ್ನು ರಾಜ್ಯದ ಉದ್ದಗಲಕ್ಕೂ ಬೆಳೆಸಲು ಪ್ರಾರಂಭಿಸಿದ್ದಾರೆ. ಇದೊಂದು ಆಶಾದಾಯಕ ಬೆಳವಣಿಗೆಯಾಗಿದ್ದು, ಶ್ರೀಗಂಧದ ನಾಡೆಂಬ ಮೆರುಗನ್ನು ರಾಜ್ಯಕ್ಕೆ ಮರಳಿ ತರಲು ನೆರವಾಗಲಿದೆ. ಅರಣ್ಯ ಇಲಾಖೆಯಿಂದ ರೈತರಿಗೆ ಅತಿ ಕಡಿಮೆ ದರದಲ್ಲಿ ಶ್ರೀಗಂಧದ ಸಸಿಗಳನ್ನು ವಿತರಿಸುವುದಷ್ಟೇ ಅಲ್ಲ ಅದನ್ನು ಬೆಳೆಸಲು ಹಣಕಾಸಿನ ನೆರವನ್ನೂ ಕಲ್ಪಿಸಲಾಗಿದೆ.

ಶ್ರೀಗಂಧದ ಮರಗಳನ್ನು ಖಾಸಗಿ ಜಮೀನುಗಳಲ್ಲಿ ಬೆಳೆಸುವುದರಿಂದ ಅರಣ್ಯ ಪ್ರದೇಶಗಳು ಅಥವಾ ಸಾರ್ವಜನಿಕ ಭೂಮಿಯಲ್ಲಿ ಬೆಳೆಯುವುದಕ್ಕಿಂತ ಹೆಚ್ಚಿನ ಅನುಕೂಲವಾಗುತ್ತದೆ. ಏಕೆಂದರೆ, ಅಂತಹ ಸ್ಥಳಗಳಲ್ಲಿ ಪ್ರಾರಂಭಿಕ ಹಂತದಲ್ಲಿ ಗಿಡಗಳು ಕಾಳ್ಗಿಚ್ಚಿಗೆ ಆಹುತಿ
ಯಾಗುವ ಅಥವಾ ಸಸ್ಯಾಹಾರಿ ಪ್ರಾಣಿಗಳು ತಿಂದು ಹಾಳು ಮಾಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಸಾರ್ವಜನಿಕ ಭೂಮಿಯಲ್ಲಿ ಅದರಲ್ಲೂ ಅರಣ್ಯ ಭೂಮಿಯಲ್ಲಿ ಹೆಚ್ಚಿನ ವಿಸ್ತಾರದಲ್ಲಿ ಬೆಳೆಸುವಾಗ ಅವುಗಳಿಗೆ ಹಾನಿಯಾಗದಂತೆ ನಿಭಾಯಿಸುವುದು ಸುಲಭದ ಕಾರ್ಯವೇನಲ್ಲ. ಈ ಕಾರಣಗಳಿಂದ ಶ್ರೀಗಂಧದ ಗಿಡಗಳು ಬಹಳಷ್ಟು ಸಂಖ್ಯೆಯಲ್ಲಿ ಕಡಿಮೆಯಾಗುತ್ತಾ ಬರುತ್ತವೆ. ಅದೇ ಖಾಸಗಿ ಭೂಮಿ
ಯಲ್ಲಿ ಬೆಳೆಸಿದ ಮರಗಳಿಗೆ ಮಾಲೀಕರು ರಕ್ಷಣೆ ಒದಗಿಸುವುದರಿಂದ ಅವು ಸುರಕ್ಷಿತವಾಗಿ ಬೆಳೆಯಲು ಅನುವಾಗುತ್ತದೆ.

ಅರಣ್ಯ ಪ್ರದೇಶದಲ್ಲಿ ಹಬ್ಬುವ ಬಳ್ಳಿಗಳು ಅಥವಾ ಅಕ್ಕಪಕ್ಕದ ಮರಗಳ ಕೊಂಬೆಗಳು ಶ್ರೀಗಂಧದ ಗಿಡಗಳ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತವೆ. ಖಾಸಗಿ ಭೂಮಿಯಲ್ಲಿ ಬಳ್ಳಿಗಳಿಂದಾಗಲೀ ಅಕ್ಕಪಕ್ಕದ ಮರಗಳ ಕೊಂಬೆಗಳಿಂದಾಗಲೀ ಹಾನಿಯಾಗದಂತೆ ರೈತರು ನೋಡಿಕೊಳ್ಳುವುದರಿಂದ ಶ್ರೀಗಂಧದ ಸಸಿ ಉತ್ತಮವಾಗಿ ಬೆಳೆಯಲು ಸಾಧ್ಯವಾಗುತ್ತದೆ. ಇದರಿಂದ ಕೃಷಿ ಭೂಮಿ
ಯಲ್ಲಿ ಅವುಗಳನ್ನು ಸುಮಾರು 15ರಿಂದ 20 ವರ್ಷಗಳಲ್ಲಿ ಕಟಾವು ಮಾಡಬಹುದು. ಆದರೆ ಅರಣ್ಯ ಪ್ರದೇಶದಲ್ಲಿ ಬೆಳೆಯುವ ಮರಗಳ ಕಟಾವಣೆಗೆ 25ರಿಂದ 30 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವರ್ಷಗಳೇ ಬೇಕಾಗುತ್ತದೆ.

ಆದರೆ ಶ್ರೀಗಂಧದ ಮರಗಳು ಬೆಳೆಯತೊಡಗಿದಂತೆ ರೈತರು ತೀವ್ರ ತೆರನಾದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಮರಕ್ಕಿರುವ ಹೆಚ್ಚಿನ ಬೆಲೆಯ ಕಾರಣದಿಂದ ಕಳ್ಳರು ಅವುಗಳನ್ನು ಕಡಿದುಕೊಂಡು ಹೋಗುವುದು ಅಥವಾ ಅಕ್ರಮವಾಗಿ ಸಾಗಣೆ ಮಾಡುವುದು ಹೆಚ್ಚುತ್ತಿದೆ. ಖಾಸಗಿ ಭೂಮಿಯಲ್ಲಿ ಬೆಳೆಯುವ ಶ್ರೀಗಂಧದ ಮರಗಳಿಗೆಅರಣ್ಯ ಇಲಾಖೆಯಿಂದ ರಕ್ಷಣೆ ನೀಡುವುದು ಸಾಧ್ಯ
ವಿಲ್ಲದ ಮಾತು. ಆದರೆ ರೈತರು ತಮಗೆ ಉಂಟಾಗುವ ನಷ್ಟವನ್ನು ತಡೆಗಟ್ಟಲು ಕೆಳಕಂಡ ಕೆಲವು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುವುದು ಅವಶ್ಯ:

lದೊಡ್ಡ ಪ್ರಮಾಣದಲ್ಲಿ ಶ್ರೀಗಂಧದ ಮರಗಳನ್ನು ಬೆಳೆಸುವ ರೈತರು ನೆಡುತೋಪುಗಳಿಗೆ ಬಿಗಿ ಕಾವಲಿನ ವ್ಯವಸ್ಥೆ ಮಾಡಬೇಕಿದೆ. ಅಂದರೆ ಚೈನ್ ಲಿಂಕ್ ಮೆಶ್ ಫೆನ್ಸಿಂಗ್ ಅಥವಾ ಕಲ್ಲಿನ ಗೋಡೆಗಳನ್ನು ಸುತ್ತಲೂ ನಿರ್ಮಿಸಿ, ರಾತ್ರಿ, ಹಗಲು ಕಾವಲು ಕಾಯುವ ವ್ಯವಸ್ಥೆ ಮಾಡಬೇಕಾಗುತ್ತದೆ. ಅರಣ್ಯ ಇಲಾಖೆಯು ಇತ್ತೀಚೆಗೆ ಶ್ರೀಗಂಧದ ನೆಡುತೋಪುಗಳನ್ನು ಎಸ್ಟೇಟ್ ಮಾದರಿಯಲ್ಲಿ ಬೆಳೆಸುತ್ತಿರುವಂತಹ ಕ್ರಮವನ್ನು ರೈತರೂ ಅನುಸರಿಸಬಹುದಾಗಿದೆ.

lರೈತರು ಗುಂಪುಗಳನ್ನು ರಚಿಸಿಕೊಂಡು ಸಹಕಾರ ತತ್ವದ ಆಧಾರದ ಮೇಲೆ ಶ್ರೀಗಂಧವನ್ನು ಬೆಳೆಸಬಹುದು. ಹೀಗಾದಾಗ ಭದ್ರತೆಗೆ ನೀಡುವ ವೆಚ್ಚ ಸಮನಾಗಿ ಹಂಚಿಕೆಯಾಗುತ್ತದೆ.

lಸಿ.ಸಿ. ಟಿ.ವಿ. ಕ್ಯಾಮೆರಾ, ಕಣ್ಗಾವಲು ಉಪಕರಣ, ಹೈ ಸ್ಪೀಡ್ ಇನ್‌ಫ್ರಾರೆಡ್ ಉಪಕರಣ ಮುಂತಾದವನ್ನು ಅವಶ್ಯಕತೆಗನುಗುಣವಾಗಿ ಶ್ರೀಗಂಧದ ನೆಡುತೋಪಿನಲ್ಲಿ ಅಳವಡಿಸಿಕೊಳ್ಳಬೇಕಿದೆ. ಈ ಉಪಕರಣಗಳು ಕಳ್ಳಕಾಕರ ಚಲನವಲನದಾಖಲಿಸಿ ನಿಯಂತ್ರಣ ಕೊಠಡಿಗೆ ರವಾನಿಸುವುದರಿಂದ, ತಕ್ಷಣವೇ ಮುಂದಿನ ಕ್ರಮ ಜರುಗಿಸಲು ಸಾಧ್ಯವಾಗುತ್ತದೆ. ಬೆಂಗಳೂರಿನ ಮರವಿಜ್ಞಾನ ಮತ್ತು ತಾಂತ್ರಿಕ ಸಂಸ್ಥೆಯು ಇಂತಹ ಭದ್ರತಾ ವ್ಯವಸ್ಥೆಗೆ ಸಂಬಂಧಿಸಿದ ನೂತನ ಆವಿಷ್ಕಾರಗಳ ಅಭಿವೃದ್ಧಿಗಾಗಿ ಹಣಕಾಸು ನೆರವು ಒದಗಿಸುತ್ತಿದೆ.

lಖಾಸಗಿ ಭೂಮಿಯಲ್ಲಿ ಬೆಳೆಯುವ ಶ್ರೀಗಂಧದ ಮರಗಳಿಗೆ ವಿಮೆ ಸೌಲಭ್ಯದ ಅವಶ್ಯಕತೆಯಿದೆ. ಇದಕ್ಕೆ ಅರಣ್ಯ ಇಲಾಖೆಯು ಉತ್ತಮ ವಿಮಾ ಕಂಪನಿಯೊಂದಿಗೆ ವಿಮೆ ಮಾಡಿಸಲು ಸಹಕರಿಸಬೇಕಿದೆ. ಕಳ್ಳತನವಾದಲ್ಲಿ, ನಷ್ಟ ಉಂಟಾದಲ್ಲಿ ನೀಡಬೇಕಾದ ಪರಿಹಾರದ ಮೊತ್ತವನ್ನು ಬೆಳೆಯುತ್ತಿರುವ ಶ್ರೀಗಂಧದ ಮರಗಳ ವಯಸ್ಸಿಗನುಗುಣವಾಗಿ ನಿಗದಿಪಡಿಸಬೇಕಿದೆ.

lಅನಿವಾರ್ಯ ಸಂದರ್ಭಗಳಲ್ಲಿ ಸರ್ಕಾರವು ಖಾಸಗಿ ಜಮೀನುಗಳನ್ನು ಸಾರ್ವಜನಿಕ ಉದ್ದೇಶಕ್ಕಾಗಿ ಪಡೆದುಕೊಂಡ ಪ್ರಕರಣಗಳಲ್ಲಿ, ಅಲ್ಲಿ ಬೆಳೆದಿರುವ ಮರಗಳನ್ನು ಕಟಾವು ಮಾಡಿ, ಮಾರಾಟದಿಂದ ಬಂದಂತಹ ಮೊಬಲಗನ್ನು ಪಾವತಿಸಲಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಎಳೆ ವಯಸ್ಸಿನ ಮರಗಳಿದ್ದಲ್ಲಿ, ಅಂತಹವು ಮಾರಾಟ ಮಾಡಲು ಯೋಗ್ಯವಾಗಿರುವುದಿಲ್ಲ. ಆಗ ಅವುಗಳನ್ನು ಬೆಳೆಸಲು ತಗಲಿರುವ ವೆಚ್ಚವನ್ನು ಪರಿಹಾರವಾಗಿ ನೀಡಲಾಗುತ್ತದೆ. ಇಲ್ಲೊಂದು ಸಲಹೆಯೆಂದರೆ, ಕೃಷಿ ಭೂಮಿಯಲ್ಲಿ ಮರಗಳನ್ನು ಕೃಷಿವನ ನಿರ್ಮಾಣದ ಉದ್ದೇಶದಿಂದ ಬೆಳೆಸಿದ ಪ್ರಕರಣಗಳಲ್ಲಿ ಮಾರಾಟಕ್ಕೆ ಯೋಗ್ಯವಲ್ಲದ ಎಳೆ ವಯಸ್ಸಿನ ಶ್ರೀಗಂಧದ ಮರಗಳಿದ್ದಲ್ಲಿ, ಅವುಗಳಿಗೆ ಸಹಾನುಭೂತಿಯಿಂದ ಪರಿಹಾರದ ಮೊತ್ತವನ್ನು ನಿಗದಿಪಡಿಸಬೇಕಿದೆ. ಇಲ್ಲಿಯವರೆಗೂ ಮರಗಳನ್ನು ಬೆಳೆಯಲು ತಗಲಿರುವ ವೆಚ್ಚದೊಂದಿಗೆ, ಅವರ ಪ್ರಯತ್ನವನ್ನು ಗುರುತಿಸುವ ಸಲುವಾಗಿ ಹಾಗೂ ಕೃಷಿವನದ ವಿಚಾರವನ್ನು ಸಾರ್ವಜನಿಕವಾಗಿ ಪ್ರಚುರಪಡಿಸಿ
ರುವುದಕ್ಕಾಗಿ ಹೆಚ್ಚುವರಿ ಪರಿಹಾರ ನೀಡಬೇಕಾದುದು ಅವಶ್ಯ.

ಲೇಖಕ: ನಿವೃತ್ತ ಹೆಚ್ಚುವರಿ ಪ್ರಧಾನ ಮುಖ್ಯ
ಅರಣ್ಯ ಸಂರಕ್ಷಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT