ಭಾನುವಾರ, ಜನವರಿ 17, 2021
22 °C
ಪ್ರಾಯೋಗಿಕವಾಗಿ ಕಷ್ಟಸಾಧ್ಯ ಬೇಡಿಕೆ ಮುಂದಿಟ್ಟು ಕುರುಬ ಸಮುದಾಯ ಹೋರಾಟಕ್ಕಿಳಿದಿರುವುದು ಏಕೆ?

ದಿನೇಶ್ ಅಮಿನ್‌ ಮಟ್ಟು ಬರಹ: ಎಸ್‌.ಟಿ ಬೇಡಿಕೆಯ ತೆರೆಮರೆ ರಾಜಕಾರಣ

ದಿನೇಶ್ ಅಮಿನ್‌ ಮಟ್ಟು Updated:

ಅಕ್ಷರ ಗಾತ್ರ : | |

ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸ ಬೇಕೆಂದು ಆಗ್ರಹಿಸಿ ಆ ಜಾತಿಯ ಸ್ವಾಮೀಜಿಗಳು, ನಾಯಕರು ಹೋರಾಟಕ್ಕೆ ಇಳಿದಿದ್ದಾರೆ. ಈ ಬೇಡಿಕೆ ಈಡೇರಿಕೆಯು ಅಸಾಧ್ಯವಾದುದಲ್ಲ ಮತ್ತು ಸುಲಭ ಸಾಧ್ಯವೂ ಅಲ್ಲ.  ಮೀಸಲಾತಿಗಾಗಿ ಈಗ ರಚಿಸಿರುವ ಗುಂಪುಗಳಿಂದ ಪರಿಶಿಷ್ಟ ಜಾತಿ (ಎಸ್.ಸಿ), ಪರಿಶಿಷ್ಟ ಪಂಗಡ (ಎಸ್.ಟಿ) ಇಲ್ಲವೇ ಹಿಂದುಳಿದ ವರ್ಗಗಳಿಗೆ ಸೇರಿರುವ ಜಾತಿಗಳನ್ನು ಹೊರಹಾಕುವುದು ಇಲ್ಲವೇ ಆ ಗುಂಪುಗಳಿಗೆ ಸೇರಿಸಿಕೊಳ್ಳುವುದು ದೀರ್ಘ ಪ್ರಕ್ರಿಯೆ. ಎಸ್‌.ಸಿ ಮತ್ತು ಎಸ್‌.ಟಿ ಸಮುದಾಯಕ್ಕೆ ಬೇರೆ ಜಾತಿಯನ್ನು ಸೇರಿಸುವುದು ಇನ್ನಷ್ಟು ದೀರ್ಘವಾದ ಕಸರತ್ತು. ಈ ಬಗ್ಗೆ ಸಂಸತ್ ತೀರ್ಮಾನ ಕೈಗೊಂಡು ಸಂವಿಧಾನಕ್ಕೆ ತಿದ್ದುಪಡಿ ಮಾಡಬೇಕಾಗುತ್ತದೆ.

ಇದು, ಕೇಂದ್ರ ಮಟ್ಟದಲ್ಲಿ ನಡೆಯಬೇಕಾದ ಕೆಲಸ. ಇಂತಹದ್ದೊಂದು ನಿರ್ಧಾರ ಕೈಗೊಳ್ಳುವುದರಿಂದ ರಾಜ್ಯ ಮಟ್ಟದಲ್ಲಿ ಉದ್ಭವಿಸಬಹುದಾದ ಬಿಕ್ಕಟ್ಟುಗಳನ್ನು ಪರಿಹರಿಸಿಕೊಳ್ಳುವುದು ಇನ್ನೂ ದೊಡ್ಡ ಸವಾಲು.

ಮೊದಲನೆಯದಾಗಿ, ರಾಜ್ಯದಲ್ಲಿ ಪ್ರಸ್ತುತ ಜಾರಿಯಲ್ಲಿರುವ ಮೀಸಲಾತಿ ನೀತಿಯ ಪ್ರಕಾರ, ಕುರುಬರು ಸೇರಿದಂತೆ 93 ಹಿಂದುಳಿದ ಜಾತಿಗಳಿಗೆ ಪ್ರವರ್ಗ 2(ಎ)ದಲ್ಲಿ ಶೇ 15ರಷ್ಟು ಮೀಸಲಾತಿ ಇದೆ. ಈಗ ಕುರುಬರು ತಾವು ಸೇರಬೇಕೆಂದು ಬಯಸುತ್ತಿರುವ ಪರಿಶಿಷ್ಟ ಪಂಗಡಕ್ಕೆ ರಾಜ್ಯದಲ್ಲಿ ಇರುವ ಮೀಸಲಾತಿ ಪ್ರಮಾಣ ಶೇ 3 ಮಾತ್ರ. ಕುರುಬರು ಎಸ್.ಟಿಗೆ ಸೇರಿಕೊಂಡರೆ ಅವರು ಈಗಿನ ಶೇ 15ರ ಬದಲಿಗೆ ಶೇ 3ರ  ಮೀಸಲಾತಿಯಲ್ಲಿ ಪಾಲು ಪಡೆಯಬೇಕಾಗುತ್ತದೆ.

ಎರಡನೆಯದಾಗಿ, ಈಗ 2(ಎ) ಅಡಿ ಮೀಸಲಾತಿ ಪಡೆಯುತ್ತಿರುವ ಹಿಂದುಳಿದ ಜಾತಿಗಳಲ್ಲಿ ಶೇ 6ರಷ್ಟಿರುವ ಕುರುಬರದ್ದೇ ದೊಡ್ಡ ಸಂಖ್ಯೆ. ಸಹಜವಾಗಿ ಈ ಕೆಟಗರಿಯ ಮೀಸಲಾತಿಯ ದೊಡ್ಡ ಫಲಾನುಭವಿಗಳು ಅವರೇ ಆಗಿದ್ದಾರೆ. ಪರಿಶಿಷ್ಟ ಪಂಗಡ ಸೇರಿಬಿಟ್ಟರೆ ಅಲ್ಲಿ ಕುರುಬರು ಸಂಖ್ಯೆಯಲ್ಲಿ ತಮ್ಮಷ್ಟೇ ಇರುವ ಮತ್ತು ತಮ್ಮಷ್ಟೇ ಪ್ರಬಲವಾಗಿರುವ ವಾಲ್ಮೀಕಿ ಸಮುದಾಯದ ಜೊತೆ ಪೈಪೋಟಿ ನಡೆಸಬೇಕಾಗುತ್ತದೆ. ಮೂರನೆಯದಾಗಿ, ಯಾವುದೇ ಕುಲಶಾಸ್ತ್ರೀಯ ಅಧ್ಯಯನ ಇಲ್ಲದೆ ಏಕಾಏಕಿ ಒಂದು ಜಾತಿಯನ್ನು ಎಸ್.ಸಿ ಇಲ್ಲವೇ ಎಸ್.ಟಿಗೆ ಸೇರಿಸಿದರೆ ನ್ಯಾಯಾಲಯದ ಮುಂದೆ ಸಮರ್ಥಿಸಿಕೊಳ್ಳುವುದು ಕಷ್ಟ.

ನಾಲ್ಕನೆಯದಾಗಿ, ಎಸ್.ಟಿಗೆ ಸೇರುವ ಬೇಡಿಕೆಯು ಬರೀ ಕುರುಬ ಜಾತಿಗಷ್ಟೇ ಸೀಮಿತವಾಗಿ ಉಳಿಯ ಲಾರದು. ಇದರಿಂದ ಪ್ರೇರಿತರಾಗಿ ಪ್ರವರ್ಗ 2(ಎ)ಯಲ್ಲಿ ರುವ ಇತರ 92 ಜಾತಿಗಳು ಕೂಡಾ ಹೋರಾಟ ಪ್ರಾರಂಭಿ ಸಬಹುದು. ಹಿಂದುಳಿದ ಜಾತಿಗಳಲ್ಲಿನ ಕಾಡುಗೊಲ್ಲರು ಮತ್ತು ಗಂಗಾಮತಸ್ಥರನ್ನು (ಕೋಲಿ, ಮೊಗವೀರ) ಎಸ್.ಟಿಗೆ ಸೇರಿಸಬೇಕೆಂದು ಈ ಹಿಂದಿನ, ಕಾಂಗ್ರೆಸ್‌ ನೇತೃತ್ವದ ಸರ್ಕಾರ ಈಗಾಗಲೇ ಕೇಂದ್ರಕ್ಕೆ ಶಿಫಾರಸು ಮಾಡಿದೆ. ಈಡಿಗ-ಬಿಲ್ಲವ ಜಾತಿಗಳಲ್ಲಿ ಕೂಡಾ ಈ ಬೇಡಿಕೆಯು ಆಗಾಗ ಚರ್ಚೆಗೊಳಗಾಗಿದೆ. ‘ನಾವು ಒಂದು ಕಾಲದಲ್ಲಿ ಬಿಲ್ಲು ಹಿಡಿದವರು, ಮರ ಹತ್ತಿ ಶೇಂದಿ ತೆಗೆಯುವವರು, ಕುಲಶಾಸ್ತ್ರೀಯ ಅಧ್ಯಯನ ನಡೆಸಿದರೆ ನಮ್ಮ ವೃತ್ತಿಯ ಆಧಾರದಲ್ಲಿ ನಮ್ಮನ್ನೂ ಎಸ್.ಟಿಗೆ ಸೇರಿಸಲೇಬೇಕಾಗುತ್ತದೆ’ ಎಂದು ಅವರು ಹೇಳುತ್ತಾ ಬಂದಿದ್ದಾರೆ.

ಈ ಬೇಡಿಕೆಗಳ ಸರಣಿ ಅಲ್ಲಿಗೇ ನಿಲ್ಲಲಾರದು. ಉಳಿದ ಹಿಂದುಳಿದ ಸಣ್ಣ ಜಾತಿಗಳಿಗೆ ದೊಡ್ಡದಾಗಿ ದನಿ ಎತ್ತುವ ಶಕ್ತಿ ಇಲ್ಲದೆ ಸದ್ಯಕ್ಕೆ ಅವು ಸುಮ್ಮನಿವೆ. ಮುಂದಿನ ದಿನಗಳಲ್ಲಿ ಮಡಿವಾಳರು, ಕುಂಬಾರರು, ಕಮ್ಮಾರರು, ಸವಿತಾ ಸಮಾಜ... ಹೀಗೆ ಎಲ್ಲರೂ ಮನವಿ ಪತ್ರವನ್ನು ಹಿಡಿದುಕೊಂಡು, ತಮ್ಮನ್ನೂ ಎಸ್.ಟಿಗೆ ಸೇರಿಸಿ ಎಂದು ಮುಖ್ಯಮಂತ್ರಿ ಮನೆ ಮುಂದೆ ನಿಲ್ಲುತ್ತಾರೆ. ಆಗ ರಾಜ್ಯ ಸರ್ಕಾರ ಏನು ಮಾಡಲಿದೆ?

ಇದು, ಕುರುಬರು ಈಗ ಇರುವ ಮನೆಯೊಳಗಿನ ಸಮಸ್ಯೆ. ಇವರು ಹೋಗಬಯಸುವ ಮನೆಯಲ್ಲಿ ಇನ್ನಷ್ಟು ಬಿಕ್ಕಟ್ಟುಗಳು ಹುಟ್ಟಿಕೊಳ್ಳಲಿವೆ. ಎಸ್‌.ಟಿಗೆ ಈಗ ಇರುವ ಮೀಸಲಾತಿಯನ್ನು ಶೇ 7ಕ್ಕೆ ಹೆಚ್ಚಿಸಬೇಕೆಂದು ವಾಲ್ಮೀಕಿ ಸಮುದಾಯವು ಕೆಲವು ವರ್ಷಗಳಿಂದ ಒತ್ತಾಯಿಸುತ್ತಾ ಬಂದಿದೆ. ಈ ಹಿನ್ನೆಲೆಯಲ್ಲಿಯೇ ಅಧ್ಯಯನಕ್ಕಾಗಿ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮಿತಿ ರಚನೆಯಾದುದು. ಆ ಸಮಿತಿ ವರದಿ ಕೂಡಾ ನೀಡಿದೆ.

ಈ ಮೀಸಲಾತಿ ಹೆಚ್ಚಳದ ಬೇಡಿಕೆಯು ಪರಿಶಿಷ್ಟ ಪಂಗಡದಲ್ಲಿ ಈಗಿರುವ ಜಾತಿಗಳಿಗೆ ಸೀಮಿತವಾದುದು. ಇದೇ ಪಂಗಡಕ್ಕೆ ಕುರುಬರು ಸೇರಿದರೆ ಆ ಮೀಸಲಾತಿ ಪ್ರಮಾಣ (ಶೇ 7) ಸಾಕಾದೀತೇ? ಅಂದರೆ ಶೇ 12-13ಕ್ಕೆ ಹೆಚ್ಚಿಸಬೇಕಾಗುತ್ತದೆ. ಆದರೆ ನ್ಯಾಯಾಲಯ ಹೇರಿರುವ ಶೇ 50ರ ನಿರ್ಬಂಧವನ್ನು ಸಡಿಲಿಸದೆ ಮೀಸಲಾತಿ ಪ್ರಮಾಣ ಹೆಚ್ಚಿಸುವುದು ಹೇಗೆ? ಇದು ಸಾಧ್ಯವಾಗಬೇಕಾದರೆ, ಪ್ರವರ್ಗ 2(ಎ)ಗೆ ಇರುವ ಮೀಸಲಾತಿ ಪ್ರಮಾಣದಲ್ಲಿ ಶೇ 6ರಷ್ಟು ಕಡಿತಗೊಳಿಸಬೇಕಾಗುತ್ತದೆ. ಆಗ ಅಲ್ಲಿರುವ ಜಾತಿಗಳು ಸುಮ್ಮನಿರಲು ಸಾಧ್ಯವೇ?

ಇದರ ಜೊತೆ ಈಗಾಗಲೇ ಈ ಬೇಡಿಕೆ ಇಟ್ಟಿರುವ ನೂರಾರು ಜಾತಿಗಳು ದೇಶದಲ್ಲಿವೆ. ಕುರುಬ ಜಾತಿ ಕೂಡಾ ಕರ್ನಾಟಕಕ್ಕಷ್ಟೇ ಸೀಮಿತವಾಗಿಲ್ಲ. ಬೇರೆ ರಾಜ್ಯಗಳಲ್ಲಿರುವ ಕುರುಬರು ಸಹ ತಮ್ಮನ್ನು ಎಸ್.ಟಿಗೆ ಸೇರಿಸಬೇಕೆಂದು ಪಟ್ಟು ಹಿಡಿಯಬಹುದು. ಆಗ ಆ ರಾಜ್ಯದಲ್ಲಿರುವ ನೂರಾರು ಜಾತಿಗಳಲ್ಲಿ ತಲ್ಲಣಗಳು ಶುರುವಾಗಬಹುದು. ಅದು ಇನ್ನೊಂದು ಕಸರತ್ತು.

ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂಬ ಈಗಿನ ಬೇಡಿಕೆ ಬಗ್ಗೆ ಕುರುಬ ಸಮಾಜದ ರಾಜಕೀಯ ನಾಯಕರು ಈ ರೀತಿ ಆಸಕ್ತಿ ವಹಿಸಲು ಉದ್ಯೋಗ ಮತ್ತು ಶಿಕ್ಷಣದ ಮೀಸಲಾತಿ ಒಂದೇ ಕಾರಣ ಅಲ್ಲ, ಅವರ ಕಣ್ಣು ರಾಜಕೀಯ ಮೀಸಲಾತಿಯ ಮೇಲಿದೆ. ರಾಜ್ಯದಲ್ಲಿ ಈಗ 15 ವಿಧಾನಸಭಾ ಕ್ಷೇತ್ರಗಳು ಮತ್ತು ಎರಡು ಲೋಕಸಭಾ ಕ್ಷೇತ್ರಗಳು ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿವೆ. ಈಗ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿರುವ ಎಲ್ಲ ವಿಧಾನಸಭಾ ಮತ್ತು ಲೋಕಸಭಾ ಕ್ಷೇತ್ರಗಳನ್ನು ಪ್ರತಿನಿಧಿಸುತ್ತಿರುವವರು ವಾಲ್ಮೀಕಿ ಸಮುದಾಯದ ನಾಯಕರು. ಕುರುಬರು ಅಲ್ಲಿ ಪ್ರವೇಶಿಸಿ ಪೈಪೋಟಿಗಿಳಿದರೆ ರಾಜಕೀಯ ಕ್ಷೇತ್ರದಲ್ಲಿ ನಡೆಯಬಹುದಾದ ಸಂಘರ್ಷವನ್ನು ಯಾರಾದರೂ ಊಹಿಸಿಕೊಳ್ಳಬಹುದು.

ಹಾಗಿದ್ದರೆ ಪ್ರಾಯೋಗಿಕವಾಗಿ ಕಷ್ಟಸಾಧ್ಯವಾಗಿರುವ ಈ ಸಂಕೀರ್ಣ ಸ್ವರೂಪದ ಬೇಡಿಕೆಯನ್ನು ಕುರುಬ ಸಮುದಾಯದ ನಾಯಕರು ಮುಂದಿಟ್ಟು ಹೋರಾಟಕ್ಕಿಳಿದಿರುವುದು ಯಾಕೆ? ಈ ಹೋರಾಟ ಪ್ರಾರಂಭಿಸಿದ ನಾಯಕರಿಗೆ ಇದರ ಪರಿಣಾಮದ ಬಗ್ಗೆ ತಿಳಿದಿಲ್ಲವೇ? ತೆರೆಯ ಮುಂದೆ ಕಾಣಿಸುವ ಹೋರಾಟಗಾರರ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿವೆಯೇ? ತೆರೆಯ ಮರೆಯಲ್ಲಿ ನಡೆಯುತ್ತಿರುವ ಕೆಲವು ಬೆಳವಣಿಗೆಗಳು ಇಂತಹ ಪ್ರಶ್ನೆಗಳು ಹುಟ್ಟಲು ಕಾರಣವಾಗಿವೆ.

ಕರ್ನಾಟಕದಲ್ಲಿ ಕುರುಬರೂ ಸೇರಿದಂತೆ ಹಿಂದುಳಿದ ಜಾತಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ತನ್ನೆಡೆ ಸೆಳೆಯಲು ಬಿಜೆಪಿಗೆ ಅಡ್ಡಿಯಾಗಿರುವುದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ. ಎಸ್.ಬಂಗಾರಪ್ಪನವರ ನಂತರ ಆ ಮಟ್ಟಕ್ಕೆ ಬೆಳೆದಿರುವ ನಾಯಕರು ಸದ್ಯಕ್ಕೆ ಹಿಂದುಳಿದ ಬೇರೆ ಜಾತಿಗಳಲ್ಲಿ ಇಲ್ಲ. ಬಂಗಾರಪ್ಪನವರನ್ನು ಸೆಳೆದು ಈಡಿಗರ ಒಂದಷ್ಟು ಮತಗಳನ್ನು ಬುಟ್ಟಿಗೆ ಹಾಕಿಕೊಂಡಿರುವ ಬಿಜೆಪಿಯ ಕಣ್ಣು ಈಗ ಕುರುಬರ ಮೇಲೆ ಬಿದ್ದಿದೆ.

ಕುರುಬರೂ ಸೇರಿದಂತೆ ಉಳಿದ ಹಿಂದುಳಿದ ಜಾತಿಗಳನ್ನು ಕಾಂಗ್ರೆಸ್ ಪಕ್ಷದಿಂದ ಹೊರಗೆಳೆಯಲು ಅಡ್ಡ ನಿಂತಿರುವುದು ಸಿದ್ದರಾಮಯ್ಯನವರು. ಒಮ್ಮೆ ಅವರ ತಲೆ ಮೇಲಿನ ‘ಹಿಂದುಳಿದ ಜಾತಿಗಳ ನಾಯಕ’ನೆಂಬ ಕಿರೀಟವನ್ನು ಕಿತ್ತುಹಾಕಿದರೆ, ಆಗ ಆ ಇಡೀ ಗುಂಪು ಚೆಲ್ಲಾಪಿಲ್ಲಿಯಾಗುತ್ತದೆ. ಈ ಹುನ್ನಾರ ಈಗಾಗಲೇ ಫಲ ನೀಡತೊಡಗಿದೆ. ಇದೇ ಮೊದಲ ಬಾರಿಗೆ ಸಿದ್ದರಾಮಯ್ಯನವರ ಹಾಜರಿ ಇಲ್ಲದೆ ಕುರುಬ ಸಮಾಜದ ನಾಯಕರು ಮತ್ತು ಸ್ವಾಮೀಜಿಗಳು ತಮ್ಮ ಸಮುದಾಯವನ್ನುಎಸ್.ಟಿಗೆ ಸೇರ್ಪಡೆಗೊಳಿಸಬೇಕೆಂಬ ಪ್ರಮುಖ ಹೋರಾಟ ಪ್ರಾರಂಭಿಸಿದ್ದಾರೆ.

ಇದನ್ನೂ ಓದಿ:  ಮೀಸಲಾತಿ ಹೋರಾಟಕ್ಕೆ ನೂರು ಬಾರಿ ಕರೆದಿರುವೆ, ಸಿದ್ದರಾಮಯ್ಯ ಬರ್ತಿಲ್ಲ: ಈಶ್ವರಪ್ಪ

ಈ ಗುಮಾನಿಗೆ ಪೂರಕವಾಗಿ ಇನ್ನಷ್ಟು ಬೆಳವಣಿಗೆಗಳು ನಡೆಯುತ್ತಿವೆ. ಎಸ್.ಟಿಗೆ ಸೇರಿಸಬೇಕೆಂದು ಹೋರಾಟಕ್ಕಿಳಿದಿರುವ ಕುರುಬ ನಾಯಕರು ಮತ್ತು ಸ್ವಾಮೀಜಿಗಳು ನಿರಂತರವಾಗಿ ಸಂಪರ್ಕ-ಸಮಾಲೋಚನೆಯಲ್ಲಿ ತೊಡಗಿರುವುದು ಆರ್‌ಎಸ್‌ಎಸ್‌ ನಾಯಕರ ಜೊತೆ. ದೆಹಲಿಗೆ ಹೋದರೆ ಅವರು ವಿಶೇಷವಾಗಿ ಬಿ.ಎಲ್.ಸಂತೋಷ್ ಅವರ ಜೊತೆ ಸಮಾಲೋಚನೆ ನಡೆಸುತ್ತಾರೆ. ರಾಜ್ಯದಲ್ಲಿರುವ ಆರ್‌ಎಸ್‌ಎಸ್‌ ನಾಯಕರು ಕೂಡಾ ಹೋರಾಟಗಾರರ ಸಂಪರ್ಕದಲ್ಲಿದ್ದಾರೆ.

ತಮಾಷೆಯೆನಿಸಿದರೂ ಈ ಬಿಕ್ಕಟ್ಟಿನ ಶಮನಕ್ಕೆ ಸುಲಭದ ಪರಿಹಾರ ಇದೆ. ಅದು, ಪ್ರವರ್ಗ 2(ಎ)ದಲ್ಲಿರುವ ಎಲ್ಲ 93 ಜಾತಿಗಳನ್ನು ಅವರಿಗಿರುವ ಶೇ 15ರ ಮೀಸಲಾತಿ ಜೊತೆ ಪರಿಶಿಷ್ಟ ಪಂಗಡಕ್ಕೆ ಸೇರಿಸಿ ಬಿಟ್ಟು ಆ ಪ್ರವರ್ಗವನ್ನೇ ರದ್ದು ಮಾಡಿಬಿಡುವುದು ಮತ್ತು ಅಲ್ಲೊಂದು ಒಳಮೀಸಲಾತಿ ಹೋರಾಟ ಪ್ರಾರಂಭಿಸುವುದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು