ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುನಾಮಿ: ನೆರವು ತಂದ ಸಂಕಷ್ಟ

ಪುನರ್ವಸತಿ ಯೋಜನೆಗಳಲ್ಲಿ ಸಂತ್ರಸ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿದ್ದರೆ...
Last Updated 7 ಡಿಸೆಂಬರ್ 2020, 19:31 IST
ಅಕ್ಷರ ಗಾತ್ರ
ADVERTISEMENT
""

ವಿಶ್ವಸಂಸ್ಥೆಯ ಪ್ರಕೃತಿ ವಿಕೋಪ ನಿಗಾವಣೆ ವಿಭಾಗದ ಮೂಲಗಳಂತೆ, ಜಗತ್ತಿನಾದ್ಯಂತ ಪ್ರತಿವರ್ಷ ಸರಾಸರಿ 367 ನೈಸರ್ಗಿಕ ಅವಘಡಗಳು ಸಂಭವಿಸುತ್ತವೆ. ಚಂಡಮಾರುತ, ಪ್ರವಾಹ, ಭೂಕಂಪನ ಮುಂತಾದವುಗಳಿಂದ ಲಕ್ಷಾಂತರ ಜನ ಪ್ರಾಣ ಕಳೆದುಕೊಳ್ಳುವುದರೊಡನೆ ಅಪಾರ ಪ್ರಮಾಣದಲ್ಲಿ ಆಸ್ತಿಹಾನಿ ಸಂಭವಿಸುತ್ತದೆ.

ಇಂತಹ ಅವಘಡಗಳ ನಂತರ ಸಂತ್ರಸ್ತರ ನೆರವಿಗೆ ಸರ್ಕಾರಗಳು, ಸ್ವಯಂಸೇವಾ ಸಂಸ್ಥೆಗಳು, ಜಾಗತಿಕ ಮಟ್ಟದ ನೆರವಿನ ಸಂಘಟನೆಗಳು ಧಾವಿಸುವುದು ಇಂದು ಸಾಮಾನ್ಯ. ಇಂಥ ವ್ಯಾಪಕ ನೆರವು ಸಂತ್ರಸ್ತರ ಬದುಕನ್ನು ಮೊದಲಿಗಿಂತ ಉತ್ತಮಗೊಳಿಸಬೇಕು ಎಂಬುದು ವಿಶ್ವಸಂಸ್ಥೆ 2015ರಲ್ಲಿ ರೂಪಿಸಿದ ‘ಬಿಲ್ಡ್ ಬ್ಯಾಕ್ ಬೆಟರ್’ (ಬಿಬಿಬಿ) ಎಂಬ ಯೋಜನೆಯ ಮುಖ್ಯ ಉದ್ದೇಶ. ಆದರೆ ಹೀಗೆ ಹರಿದುಬಂದ ನೆರವನ್ನು ಸರ್ಕಾರ ಸರಿಯಾದ ರೀತಿಯಲ್ಲಿ ನಿರ್ವಹಿಸದಿದ್ದಾಗ ಮತ್ತು ಪುನರುಜ್ಜೀವನ ಕಾರ್ಯಕ್ರಮದಲ್ಲಿ ಸಂತ್ರಸ್ತರ ಸಕ್ರಿಯ ಭಾಗವಹಿಸುವಿಕೆಗೆ ಅವಕಾಶ ಕಲ್ಪಿಸದಿದ್ದಾಗ, ಪ್ರಾಕೃತಿಕ ಅವಘಡಕ್ಕಿಂತ ನೆರವಿನ ಮಹಾಪೂರವೇ ಹೆಚ್ಚು ಹಾನಿ ಉಂಟುಮಾಡುತ್ತದೆ ಎಂಬುದನ್ನು ಇತ್ತೀಚಿನ ಅನೇಕ ಸಂಶೋಧನೆಗಳು ಸ್ಪಷ್ಟವಾಗಿ ತೋರಿಸಿಕೊಟ್ಟಿವೆ.

ದೆಹಲಿ ಐಐಟಿ ಸಂಸ್ಥೆಯ ಪ್ರಾಧ್ಯಾಪಕ ಅಜಯ್ ಸೈನಿ ಮತ್ತು ಕೆನಡಾದ ವಾಟರ್ಲೂ ವಿಶ್ವವಿದ್ಯಾಲಯದ ಸಿಮ್ರನ್‍ಜಿತ್ ಸಿಂಗ್, ನಿಕೋಬಾರ್ ದ್ವೀಪ ಸಮೂಹದಲ್ಲಿ ದಶಕಗಳ ಕಾಲ ನಡೆಸಿದ ಅಧ್ಯಯನಗಳಿಂದ ಹೊರಬಂದಿರುವ ಮೂರು ಮಹತ್ವದ ಕೃತಿಗಳು, ಸಂತ್ರಸ್ತರ ಸಹಭಾಗಿತ್ವವಿಲ್ಲದೆ, ಅವಘಡಗಳ ಸಮಯದಲ್ಲಿ ಅವರ ಮೇಲೆ ಹೊರಿಸಲಾಗುವ ಅಭಿವೃದ್ಧಿ, ಪುನರುಜ್ಜೀವನ ಯೋಜನೆಗಳು ತರುವ ಪರಿಣಾಮಗಳ ಬಗ್ಗೆ ಅನೇಕ ಒಳನೋಟಗಳನ್ನು ಒದಗಿಸುತ್ತವೆ.

2004ರ ಡಿಸೆಂಬರ್ 26ರಂದು ಹಿಂದೂ ಮಹಾಸಾಗರದ ಸುಮಾತ್ರಾದ ಬಳಿ ಸಂಭವಿಸಿದ ಭೂಕಂಪ ಮತ್ತು ಅದರಿಂದ ಉಂಟಾದ ಸುನಾಮಿ, 14 ದೇಶಗಳಲ್ಲಿ 2.5 ಲಕ್ಷ ಜನರನ್ನು ಆಹುತಿ ತೆಗೆದುಕೊಂಡು, 20 ಲಕ್ಷ ಜನರ ನೆಲೆಯನ್ನು ನಾಶ ಮಾಡಿತು. ನಮ್ಮ ದೇಶದಲ್ಲಿ ನಿಕೋಬಾರ್ ದ್ವೀಪ ಸಮೂಹದಲ್ಲಿ ಒಂದೇ ದಿನದಲ್ಲಿ 10,000 ಜನರ ಸಾವಿಗೆ ಕಾರಣವಾಗಿ, ಎಂಟು ದ್ವೀಪಗಳಲ್ಲಿದ್ದ ಅನೇಕ ಹಳ್ಳಿಗಳನ್ನು ನಿರ್ನಾಮ ಮಾಡಿತು. ಈ ಹಳ್ಳಿಗಳಲ್ಲಿದ್ದ 20,000 ನಿಕೋಬಾರಿ ಮತ್ತು ಶೋಂಪೆನ್ ಬುಡಕಟ್ಟು ಜನರೂ ಸೇರಿದಂತೆ 29,000 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸಿ, 118 ತಾತ್ಕಾಲಿಕ ಶಿಬಿರಗಳಲ್ಲಿ ವಸತಿ ಕಲ್ಪಿಸಿ, ಪರಿಹಾರ ಕೆಲಸಗಳನ್ನು ಪ್ರಾರಂಭಿಸಲಾಯಿತು.

ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳುವಾಗ ಸರ್ಕಾರಿ ಅಧಿಕಾರಿಗಳು ಮತ್ತು ಎನ್‍ಜಿಒಗಳು ಬುಡಕಟ್ಟು ಜನರೊಡನೆ ಸಮಾಲೋಚನೆ ನಡೆಸಿದರೂ ಅದು ಅಲ್ಪ ಸ್ವಲ್ಪ ಹಿಂದಿ ಭಾಷೆ ಬಲ್ಲ ಯುವಜನರೊಡನೆ ಮಾತ್ರ. ‘ಸುನಾಮಿ ಕ್ಯಾಪ್ಟನ್’ಗಳೆಂದು ಕರೆಯಲಾದ ಈ ಯುವಕರಿಗೆ ಇಡೀ ಸಮುದಾಯದ ಒಳಿತನ್ನು ಕಾಪಾಡುವ ಅನುಭವವಾಗಲೀ ದೂರದೃಷ್ಟಿಯಾಗಲೀ ಇರಲಿಲ್ಲ. ಈ ಎಲ್ಲರೂ ನೆರವು ಒದಗಿಸುವವರ ಸೂಚನೆಯನ್ನು ಒಪ್ಪಿ ಗೋಣಾಡಿಸಲು ಪ್ರಾರಂಭಿಸಿದ್ದರಿಂದ ಸಮುದಾಯದ ಪ್ರಾಮಾಣಿಕ ಅಗತ್ಯಗಳಿಗೆ ಮಾನ್ಯತೆ ದೊರೆಯಲೇ ಇಲ್ಲ. ಸುನಾಮಿ ಕ್ಯಾಪ್ಟನ್‍ಗಳಿಗೆ ಪ್ರಾಶಸ್ತ್ಯ, ನಾಯಕತ್ವ ದೊರೆತು, ಸಾಂಪ್ರದಾಯಿಕವಾಗಿ ಸಮುದಾಯದ ನಾಯಕತ್ವ ವಹಿಸಿದ್ದ ಹಿರಿಯರು ಅನಾದರಕ್ಕೆ ಒಳಗಾದರು. ಸಮುದಾಯದಲ್ಲಿ ಈ ಹಿಂದೆ ಕಂಡಿರದಿದ್ದ ತಿಕ್ಕಾಟ, ಘರ್ಷಣೆಗಳು ಪ್ರಾರಂಭವಾದವು. ನೆರವಿನ ಸ್ವರೂಪ, ವಿಧಾನಗಳನ್ನು ನಿರ್ಧರಿಸುವ ಎಲ್ಲ ಅಧಿಕಾರವೂ ಆಡಳಿತಗಾರರಲ್ಲೇ ಉಳಿಯಿತು.

ನಿಕೋಬಾರಿ ಬುಡಕಟ್ಟು ಜನರ ಮನೆಗಳು ಮೂಲಭೂತವಾಗಿ ಸಾಗರಕ್ಕೆ ಸಮೀಪವಾಗಿ, ನೆಲದಿಂದ ಸ್ವಲ್ಪ ಎತ್ತರಕ್ಕೆ ಅಟ್ಟಣಿಗೆಗಳ ಮೇಲೆ, ಹುಲ್ಲು ಮತ್ತು ಸೀಳಿದ ಬಿದಿರುಗಳಿಂದ ನಿರ್ಮಿಸಿದ ಗುಡಿಸಿಲುಗಳು. ಸಾಗರದಿಂದ ಬೀಸಿಬರುವ ಗಾಳಿಗೆ ಮುಖಮಾಡಿ ನಿಂತ ಆರಾಮದಾಯಕ ಗುಡಿಸಿಲುಗಳ ಕೆಳಗೆ, ಅವರು ಜೀವನೋಪಾಯಕ್ಕೆ ಸಾಕುವ ಹಂದಿಗಳ ವಾಸ. ವಿಶಾಲವಾದ ಒಂದೇ ಮನೆಯಲ್ಲಿ ಮೂರು ತಲೆಮಾರುಗಳು ಒಟ್ಟಿಗೆ ಜೀವಿಸುವುದು ಬಹು ಸಾಮಾನ್ಯ. ಇಂತಹ ಜನ, ಸುನಾಮಿಯಿಂದ ಮನೆಗಳನ್ನು ಕಳೆದುಕೊಂಡಾಗ ಅವರಿಗಾಗಿ, ಸಾಗರತೀರದಿಂದ ದೂರವಾಗಿ, ದ್ವೀಪದ ಎತ್ತರವಾದ ಜಾಗದಲ್ಲಿ, ಕಾಂಕ್ರೀಟ್ ಮನೆಗಳನ್ನು ನಿರ್ಮಿಸುವ ಯೋಜನೆ ಪ್ರಾರಂಭವಾಯಿತು. 4.5 ಚದರ ಅಡಿ ವಿಸ್ತೀರ್ಣದ 7,000 ಮನೆಗಳಿಗೆ ಒಟ್ಟು ವೆಚ್ಚ ಸುಮಾರು ₹ 700 ಕೋಟಿ. ಪ್ರತೀ ಮನೆಗೆ ₹ 10 ಲಕ್ಷ. ಈ ಮನೆಗಳ ನಿರ್ಮಾಣಕ್ಕೆ 2 ಲಕ್ಷ ಟನ್‍ಗಳಷ್ಟು ಕಾಂಕ್ರೀಟ್ ಬ್ಲಾಕ್‍ಗಳು, ಉಕ್ಕಿನ ಕಂಬಗಳು, ಕಿಟಕಿ, ಬಾಗಿಲುಗಳು ಹಾಗೂ ಇನ್ನಿತರ ಕಟ್ಟಡ ಸಾಮಗ್ರಿಗಳನ್ನು ತುಂಬಿದ ಹಡಗುಗಳು ಪೋರ್ಟ್‌ಬ್ಲೇರ್‌ ತಲುಪಿದವು. ಸಾವಿರಾರು ಕಾರ್ಮಿಕರೂ ಬಂದರು. 2005ರ ಅಂತ್ಯದ ವೇಳೆಗೆ ಈ ನಿರ್ಮಾಣದ ಟೆಂಡರ್‌ಗಳ ಬೆನ್ನುಹತ್ತಿದ ಕಂಟ್ರಾಕ್ಟರ್‌ಗಳಿಂದ, ಮಧ್ಯವರ್ತಿಗಳಿಂದ ಪೋರ್ಟ್‌ಬ್ಲೇರ್‌ ತುಂಬಿಹೋಗಿತ್ತು ಎನ್ನುತ್ತಾರೆ ಪ್ರೊ. ಸಿಮ್ರನ್‍ಜಿತ್ ಸಿಂಗ್.

ನಿಕೋಬಾರಿಗಳಿಗೆ ಈ ಮನೆಗಳು ಬೇಕಿರಲಿಲ್ಲ. ನಾನ್‍ಕೌರಿ ದ್ವೀಪದ ತಪೋಂಗ್ ಹಳ್ಳಿಯ ಮುಖ್ಯಸ್ಥ ಹಿಲರಿ, ‘ನಮ್ಮ ಬದುಕನ್ನು ನಾವು ಕಟ್ಟಿಕೊಳ್ಳುತ್ತೇವೆ. ನಮಗೆ ನಿಮ್ಮ ಹಣ, ಬಿಸ್ಕತ್, ಚಿಪ್ಸ್, ನೂಡಲ್ಸ್, ದಿಢೀರ್ ಆಹಾರಗಳು ಬೇಡ. ನಮಗೆ ಸಹಾಯ ಮಾಡಬೇಕು ಎಂದಿದ್ದರೆ ತೋಡುದೋಣಿ ಮತ್ತು ಕೈಕೊಡಲಿಗಳನ್ನು ಕೊಡಿ. ನಮ್ಮ ಗುಡಿಸಿಲು, ತೋಟಗಳನ್ನು ನಾವು ನಿರ್ಮಿಸಿಕೊಳ್ಳುತ್ತೇವೆ’ ಎಂಬ ಕಳಕಳಿಯ ಬೇಡಿಕೆಯನ್ನು ಸರ್ಕಾರದ ಮುಂದಿಟ್ಟರು. ಆದರೆ ಸರ್ಕಾರ ಒಪ್ಪಲಿಲ್ಲ.

2011ರಲ್ಲಿ ಮನೆಗಳ ನಿರ್ಮಾಣ ಪೂರ್ಣಗೊಂಡು ಹಂಚಿಕೆ ಪ್ರಾರಂಭವಾಯಿತು. ಮನೆಗಳು ಚಿಕ್ಕವಾಗಿದ್ದರಿಂದ ಮೂರು ತಲೆಮಾರುಗಳು ಒಂದೇ ಸೂರಿನಡಿ ಬಾಳುವಂತಿರಲಿಲ್ಲ. ಹೀಗಾಗಿ ನೂರಾರು ವರ್ಷಗಳಿಂದ ಒಟ್ಟಿಗೆ ಬಾಳಿದ ಕೂಡುಕುಟುಂಬಗಳು ಒಡೆದವು. ಹಿರಿಯರು ಮಾನಸಿಕವಾಗಿ ಕುಗ್ಗಿಹೋದರು. ಸಾಗರತೀರದಿಂದ ದೂರವಾಗಿದ್ದರಿಂದ ಮೀನುಗಾರಿಕೆ ಕಷ್ಟವಾಯಿತು. ಹೊಸ ಮನೆಗಳಲ್ಲಿ ಹಂದಿಗಳನ್ನು ಸಾಕಲು ಅವಕಾಶವಿರಲಿಲ್ಲ. ಜೀವನೋಪಾಯದ ಮಾರ್ಗಗಳಿಗೇ ಸಂಚಕಾರ ಬಂದಿದ್ದರಿಂದ ಸರ್ಕಾರಿ ನೆರವಿನ ಮೇಲೆಯೇ ಅವಲಂಬನೆ ಹೆಚ್ಚಾಯಿತು.

ಸಂತ್ರಸ್ತರ ಶಿಬಿರಗಳಲ್ಲಿ ಕಳೆದ ಐದಾರು ವರ್ಷಗಳಲ್ಲಿ ಬುಡಕಟ್ಟು ಜನರ ಜೀವನಶೈಲಿ ಸಂಪೂರ್ಣವಾಗಿ ಬದಲಾಗಿತ್ತು. ನೆರವಿನ ರೂಪದಲ್ಲಿ ಬಂದ ದಿಢೀರ್ ಆಹಾರಗಳಿಗೆ ಅವರು ಒಗ್ಗಿಹೋಗಿದ್ದರು. ಅಲ್ಲಿ ಕೆಲಸ ಮಾಡುತ್ತಿದ್ದ 60ಕ್ಕೂ ಹೆಚ್ಚು ಎನ್‍ಜಿಒಗಳು ಮತ್ತು ಹೊರಗಿನಿಂದ ಬಂದ ಸಾವಿರಾರು ಕಾರ್ಮಿಕರಿಂದ ಬೈಕ್‍ಗಳು, ಮೊಬೈಲ್‍ ಫೋನ್, ಟಿ.ವಿ., ಅನೇಕ ಉಪಕರಣಗಳು ಆದಿವಾಸಿಗಳ ಜೀವನವನ್ನು ಪ್ರವೇಶಿಸಿದ್ದವು. ಬ್ಯಾಂಕ್ ಖಾತೆಗಳನ್ನು ತೆರೆಸಿ ಸರ್ಕಾರ ಹಂಚಿದ ಹಣ ಧಾರಾಳವಾಗಿ ಇತ್ತು. ಇಂಡಿಯನ್ ಮೇಡ್ ಫಾರಿನ್ ಲಿಕ್ಕರ್ ಬಳಕೆ ವ್ಯಾಪಕವಾಯಿತು.

‘ಸಹಾಯಧನ ನಿಂತು, ಬ್ಯಾಂಕ್ ಖಾತೆ ಖಾಲಿಯಾದ ಮೇಲೆ, ಸುನಾಮಿಗಿಂತ ಹೆಚ್ಚಿನ ಜನರನ್ನು ಜಂಗ್ಲೀ ಎಂಬ ಕಳ್ಳಬಟ್ಟಿ ಕೊಲ್ಲುತ್ತಿದೆ’ ಎನ್ನುತ್ತಾರೆ ನಾನ್‍ಕೌರಿ ಬುಡಕಟ್ಟು ಸಮುದಾಯದ ಹಿರಿಯ ಚೂಪಾನ್. ಎಲ್ಲದಕ್ಕಿಂತ ಹೆಚ್ಚಾಗಿ ದ್ವೀಪವಾಸಿಗಳಿಗೆ ಅಪರಿಚಿತವಾಗಿದ್ದ ಭೋಗಜೀವನದ ಎಲ್ಲ ಸೌಲಭ್ಯಗಳ ಹೊಸ ಪ್ರಪಂಚ ಇಂದು ಅವರ ಕಣ್ಣ ಮುಂದಿದೆ. ಸುನಾಮಿಯ ನಂತರ, ಬುಡಕಟ್ಟು ಯುವಜನರಿಗೆ ತಮ್ಮ ಸಾಂಪ್ರದಾಯಿಕ ವೃತ್ತಿ, ಜೀವನಶೈಲಿ ಬಗ್ಗೆ ಆಸಕ್ತಿ, ಗೌರವ ಬಹಳ ಕಡಿಮೆಯಾಗಿದೆ.

ಅಜಯ್‍ ಸೈನಿ ಮತ್ತು ಸಿಮ್ರನ್‍ಜಿತ್ ಅವರ ಸಂಶೋಧನೆಯಂತೆ, ಸುನಾಮಿ ನಂತರದ ಪರಿಸ್ಥಿತಿಯನ್ನು ನಿರ್ವಹಿಸಲು, ಶ್ರೀಮಂತ ಜ್ಞಾನಭಂಡಾರ ಮತ್ತುಅನುಭವಗಳಿದ್ದ ನಿಕೋಬಾರಿ ಸಮುದಾಯಕ್ಕೆ ಹೊರಗಿನ ತಜ್ಞರ ಅಗತ್ಯವಿರಲಿಲ್ಲ. ನಾನ್‍ಕೌರಿ ಆದಿವಾಸಿ, ಬುಡಕಟ್ಟು ಮಂಡಳಿಯ ವಕ್ತಾರ ರಷೀದ್ ಯೂಸುಫ್ ಹೇಳುವಂತೆ ಅವರಿಗೆ ಬೇಕಿದ್ದುದು ‘ಅವರ ಮಾತುಗಳನ್ನು ತಾಳ್ಮೆಯಿಂದ ಕೇಳಿಸಿಕೊಳ್ಳುವ ಕಿವಿಗಳು ಮತ್ತು ಅಗತ್ಯಗಳನ್ನು ಅರ್ಥಮಾಡಿಕೊಳ್ಳುವ ಮನಸ್ಸು ಮಾತ್ರ’. ಆದರೆ ಸರ್ಕಾರಿ ಅಧಿಕಾರಿಗಳು ಮತ್ತು ಎನ್‍ಜಿಒಗಳು ‘ಸುನಾಮಿ ಸಂತ್ರಸ್ತರಿಗೇನು ಬೇಕು ಎಂಬುದು ಅವರಿಗಿಂತ ತಮಗೆ ಚೆನ್ನಾಗಿ ತಿಳಿದಿದೆ’ ಎಂಬ ಧೋರಣೆ ತಳೆದು, ಯೋಜನೆಗಳನ್ನು ಅವರ ಮೇಲೆ ಹೇರಿದ್ದರಿಂದ ಬದುಕನ್ನು ಮತ್ತೆ ಕಟ್ಟಿಕೊಳ್ಳುವ ಅವರ ಯಾವ ಪ್ರಯತ್ನವೂ ನಿರೀಕ್ಷಿತ ಫಲ ನೀಡುತ್ತಿಲ್ಲ ಎಂಬುದು ಈ ಇಬ್ಬರು ಸಂಶೋಧಕರ ಒಟ್ಟಾರೆ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT