ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ | ಬಿಜೆಪಿಯ ವಿಜಯ: ಜಾತಿವಾದದ ಅಂತ್ಯವಲ್ಲ

ಬಿಹಾರದಲ್ಲಿ ನಿತೀಶ್ ಕುಮಾರ್ ಮಾಡಿದ ಪ್ರಯೋಗವನ್ನೇ ಉತ್ತರಪ್ರದೇಶದಲ್ಲಿ ಬಿಜೆಪಿ ಮಾಡಿದೆ
Last Updated 22 ಮಾರ್ಚ್ 2022, 19:31 IST
ಅಕ್ಷರ ಗಾತ್ರ

ಉತ್ತರಪ್ರದೇಶದಲ್ಲಿನ ತನ್ನ ಗೆಲುವು ಜಾತಿವಾದದ ವಿರುದ್ಧದ ವಿಜಯ ಎಂಬಂಥ ಬಿಜೆಪಿಯ ಪ್ರತಿಪಾದನೆಗೆ ಯಾವುದೇ ನೆಲಗಟ್ಟಿಲ್ಲ. ಯಾದವ ಮತಗಳನ್ನು ಮುಖ್ಯವಾಗಿ ಅವಲಂಬಿಸಿಕೊಂಡು ಇತರ ಹಿಂದುಳಿದ ಜಾತಿಗಳನ್ನೂ ತನ್ನತ್ತ ಒಟ್ಟುಗೂಡಿಸಿಕೊಳ್ಳಲು ಯತ್ನಿಸಿದ ಸಮಾಜವಾದಿ ಪಕ್ಷದ ವಿರುದ್ಧದ ಬಿಜೆಪಿಯ ಗೆಲುವು ಬಿರುಗಾಳಿಯಂತಹದ್ದು. ಆದರೆ ಇದು, ‘ಜಾತಿವಾದಿ’ ಪಕ್ಷದ ವಿರುದ್ಧ ‘ಜಾತಿರಹಿತ’ ಪಕ್ಷದ ಗೆಲುವಲ್ಲ. ಚೆನ್ನಾಗಿ ಪೋಷಿಸಿ, ಬೆಳೆಸಿದ ಜಾತಿ ಒಕ್ಕೂಟಗಳನ್ನು ತನ್ನ ಜೊತೆಗಿಟ್ಟುಕೊಂಡು, ಈ ವಿಷಯದಲ್ಲಿ ದುರ್ಬಲವಾಗಿರುವ ತನ್ನ ಎದುರಾಳಿಯ ವಿರುದ್ಧ ಪಕ್ಷವೊಂದು ಸಾಧಿಸಿದ ಗೆಲುವು ಇದು.

ಹೌದು, ಅತಿರೇಕದ ರಾಷ್ಟ್ರೀಯವಾದ ಹಾಗೂ ಹಿಂದುತ್ವದ ಪಾತ್ರವೂ ಇಲ್ಲಿದೆ. ಆದರೆ, ಸಾಮಾಜಿಕ ಬದುಕಿನ ‘ಗಂಗಾ’ದಲ್ಲಿ ಪ್ರತ್ಯೇಕ ಬಾವುಟಗಳೊಡನೆ ಸಾಗುತ್ತಿದ್ದ ಜಾತಿ ದೋಣಿಗಳನ್ನು ಒಟ್ಟು ಮಾಡಲು ಹಗ್ಗದಂತೆ ಇವುಗಳನ್ನು ಬಿಜೆಪಿ ಬಳಸಿಕೊಂಡಿದೆ. ಈ ದೋಣಿಗಳೇನೂ ಜಾಗ ಖಾಲಿ ಮಾಡಿಲ್ಲ.

ಆಡಳಿತದಲ್ಲಿ ಯಾದವರ ಪ್ರಾಬಲ್ಯ ಸಹಿಸದ ಇತರ ಹಿಂದುಳಿದ ಜಾತಿಗಳು ಹಾಗೂ ದಲಿತರಿಗೆ ರಾಜಕೀಯ ಸಾಧನವಾಗಿ ತನ್ನನ್ನು ತಾನು ಕೊಟ್ಟುಕೊಳ್ಳುವಲ್ಲಿ ಬಿಜೆಪಿ ಮೊದಲಿಗೆ ಯಶಸ್ವಿಯಾಯಿತು. ‘ಯಾದವ್ ರಾಜ್’ ಎಂದು ಯಾದವರು, ಹಾಗೆಯೇ ಯಾದವೇತರರೂ ವಿಭಿನ್ನ ಕಾರಣಗಳಿಗಾಗಿ ಪರಿಭಾವಿಸುವಂತಹ ಅಖಿಲೇಶ್ ಯಾದವ್ ನೇತೃತ್ವದ ಆಡಳಿತವು (2012-2017) ಯಾದವ ವಿರೋಧಿ ಭಾವನೆಗಳನ್ನು ಬೆಳೆಸಿತಲ್ಲದೆ ಬಿಜೆಪಿಗೆ ಪುಷ್ಕಳ ಸುಗ್ಗಿಯ ಫಲವನ್ನೇ ನೀಡಿತು.

ರಾಷ್ಟ್ರವಾದಿ ಪಕ್ಷಕ್ಕೆ ತಕ್ಕಂತೆ ಜಾತಿರಹಿತ ನಿಲುವುಗಳೊಂದಿಗೇನೂ ಬಿಜೆಪಿ ಮತದಾರರ ಬಳಿ ಹೋಗಲಿಲ್ಲ. ‘ಯಾದವ್, ತೇಲಿ, ಮೌರ್ಯ, ಜಾಟವ ಅಥವಾ ಪಾಸಿ ಯಾರೇ ಆಗಲಿ ಎಲ್ಲರೂ ಒಂದೇ ಕುಟುಂಬದ ಸದಸ್ಯರು. ರಾಷ್ಟ್ರ ನಿರ್ಮಾಣಕ್ಕೆ ಎಲ್ಲರೂ ಒಟ್ಟಾಗೋಣ’ ಎಂದೇನೂ ಬಿಜೆಪಿ ಹೇಳಲಿಲ್ಲ. ಈ ಸಮುದಾಯಗಳ ಮಧ್ಯೆ ಸೋದರತ್ವ ಬೆಸೆಯುವ ಕೆಲಸವನ್ನೂ ಮಾಡಲಿಲ್ಲ. ಬದಲಿಗೆ, ತನ್ನ ರಾಜಕೀಯ ಲಾಭಕ್ಕಾಗಿ ಯಾದವರು ಮತ್ತು ಇತರ ಹಿಂದುಳಿದ ಜಾತಿಗಳು ಹಾಗೂ ಜಾಟವರು ಮತ್ತು ಇತರ ಪರಿಶಿಷ್ಟ ಜಾತಿಗಳ ನಡುವಿನ ಕಂದರವನ್ನು ಹೆಚ್ಚು ಮಾಡಿ ವೈಷಮ್ಯ ಬೆಳೆಸುವ ಕೆಲಸ ಮಾಡಿತು.

ನಿಜ, ಬಿಹಾರದಲ್ಲಿ ನಿತೀಶ್ ಕುಮಾರ್ ಮಾಡಿದ್ದನ್ನೇ ಇಲ್ಲಿ ಬಿಜೆಪಿ ಮಾಡಿತು. ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷದಲ್ಲಿರುವಂತೆ, ಬಿಹಾರದಲ್ಲೂ ರಾಷ್ಟ್ರೀಯ ಜನತಾ ದಳದಲ್ಲಿ ಯಾದವರ ಪ್ರಾಬಲ್ಯ ಜೋರಾಗಿದೆ. ಯಾದವೇತರ ಹಿಂದುಳಿದ ಜಾತಿಗಳ ಮೈತ್ರಿಕೂಟವನ್ನು ನಿತೀಶ್ ಹೆಣೆದರು. ಅಸಾಧಾರಣ ಮತದಾರ ನೆಲೆಯೊಂದನ್ನು ಕಟ್ಟುವುದಕ್ಕಾಗಿ ದಲಿತರಲ್ಲಿ ಪ್ರಮುಖ ಜಾತಿಯಾಗಿರುವ ದುಸಾದ್‌ ಸಮುದಾಯವನ್ನು ಪ್ರತ್ಯೇಕಗೊಳಿಸಲು ‘ಮಹಾದಲಿತ್’ ಎಂಬ ಹೊಸ ವರ್ಗ ವನ್ನೇ ಅವರು ರಚಿಸಿದರು. ಅದು ಈಗಲೂ ಅವರಿಗೆ ಫಲ ನೀಡುತ್ತಿದೆ.

ಆದರೆ, ಬಿಜೆಪಿಯು ನಿತೀಶ್ ಅವರಿಗಿಂತ ಮುಂದೆ ಹೋಗಿದೆ. ಪ್ರತೀ ಜಾತಿಯ ‘ಸಮುದಾಯ ನಾಯಕ’ರನ್ನು ಗುರುತಿಸಿ ಅವರ ಜೊತೆಗೆ ಸಕ್ರಿಯ ಸಂಪರ್ಕ ಇಟ್ಟುಕೊಳ್ಳುವಂತೆ ಸ್ಥಳೀಯ ಬಿಜೆಪಿ ಕಾರ್ಯಕರ್ತರಿಗೆ ನಿರ್ದೇಶಿಸಲಾಗುತ್ತಿತ್ತು. ಕೇಂದ್ರದಲ್ಲಿ ಮೋದಿ ನೇತೃತ್ವದ ಸರ್ಕಾರ ಹಾಗೂ ರಾಜ್ಯದಲ್ಲಿ ಯೋಗಿ ನೇತೃತ್ವದ ಸರ್ಕಾರ ಸಮುದಾಯಕ್ಕೆ ತಂದುಕೊಟ್ಟಿರುವ ‘ಲಾಭ’ಗಳ ಬಗ್ಗೆ ಆಯಾಯ ಜಾತಿಗಳ ಮತದಾರರ ಮಧ್ಯೆ ಅರಿವನ್ನು ಈ ‘ಸಮುದಾಯ ನಾಯಕ’ರ ಮೂಲಕ ಪಕ್ಷದ ಕಾರ್ಯಕರ್ತರು ಬಿತ್ತಬೇಕಿತ್ತು. ಜಾತಿಯ ಜನರ ಮಧ್ಯೆ ಪ್ರಭಾವ ಬೀರುವವರಾಗಿ ಸಮುದಾಯ ನಾಯಕರನ್ನು ಬಳಸಿಕೊಂಡರೆ, ಪಕ್ಷದ ಸಂಘಟನೆಯ ಪ್ರಮುಖ ಸ್ಥಾನಗಳಿಗೆ ಅವರನ್ನು ಪ್ರತಿನಿಧಿಸುವ ರಾಜಕಾರಣಿಗಳನ್ನು ನೇಮಕ ಮಾಡಿ, ಜಾತಿಗಳೊಳಗಿನ ಸಂಪರ್ಕವನ್ನು ಬಿಜೆಪಿ ಆಳವಾಗಿಸಿಕೊಂಡಿತು. ಅಭ್ಯರ್ಥಿಗಳ ಆಯ್ಕೆಯ ಮೂಲಕವೂ ಜಾತಿಯ ಸಂಪರ್ಕವನ್ನು ಬಿಜೆಪಿ ಮತ್ತಷ್ಟು ಗಾಢವಾಗಿಸಿಕೊಂಡಿತು. ಹೀಗಾಗಿ ಚುನಾವಣೆಗೆ ಮುಂಚೆ, ಹಿಂದುಳಿದ ಜಾತಿಗಳು ಹಾಗೂ ಜಾಟವೇತರ ಸಮುದಾಯಗಳ ಮೈತ್ರಿಕೂಟವನ್ನು ರಚಿಸಲು ಯತ್ನಿಸಿದ ಸಮಾಜವಾದಿ ಪಕ್ಷದ ವಿರುದ್ಧ ಯಾದವೇತರ ಹಿಂದುಳಿದ ಜಾತಿಗಳು ಹಾಗೂ ಜಾಟವೇತರ ಪರಿಶಿಷ್ಟ ಜಾತಿಗಳೊಂದಿಗಿನ ತನ್ನ ಆಳವಾದ ಸಂಪರ್ಕ
ಗಳಿಂದಾಗಿ ಬಿಜೆಪಿ ಮೇಲುಗೈ ಸಾಧಿಸಿತು. ಅಂದರೆ, ಬಿಜೆಪಿಯ ವಿಜಯವು ಮೇಲ್ಪದರದ ಜಾತಿವಾದದ ವಿರುದ್ಧ ಆಳವಾಗಿ ಬೇರೂರಿದ ಜಾತಿವಾದದ ಗೆಲುವು ಎಂದು ಅರ್ಥೈಸಬೇಕಾಗುತ್ತದೆ.

ತನ್ನದು ಜಾತಿರಹಿತ ಹಾಗೂ ರಾಷ್ಟ್ರವಾದದ ರಾಜಕಾರಣ ಎಂಬಂತಹ ಉನ್ನತ ನೈತಿಕ ನಿಲುವನ್ನು ಬಿಜೆಪಿ ಪ್ರದರ್ಶಿಸಲಾಗದು. ಬಿಜೆಪಿಯು ಜಾತಿ ಯನ್ನು ಒಡೆಯುತ್ತಿಲ್ಲ; ಇತರ ರಾಜಕೀಯ ಪಕ್ಷಗಳು ಮಾಡಿದ್ದಂತೆಯೇ ಜಾತಿಯ ಬೇರುಗಳನ್ನು ಬಲಪಡಿಸುತ್ತಿದೆ. ಮೂರು ವಿಭಿನ್ನ ರೂಪಗಳಲ್ಲಿ ಜಾತಿಯು ಅಸ್ತಿತ್ವದಲ್ಲಿದೆ. ಮೊದಲನೆಯದು, ರಾಜಕೀಯ ರೂಪ. ಚುನಾವಣೆಗಳಲ್ಲಿ ಬೆಂಬಲವನ್ನು ಗಳಿಸಿಕೊಳ್ಳಲು ಜಾತಿಯ ರಾಜಕೀಯ ಅಭಿವ್ಯಕ್ತಿಯನ್ನು ಇತರ ರಾಜ ಕೀಯ ಪಕ್ಷಗಳಂತೆ ಬಿಜೆಪಿಯೂ ಬಳಸಿಕೊಳ್ಳುತ್ತಿದೆ. ಸರ್ಕಾರವನ್ನು ಮುನ್ನಡೆಸುವ ರಾಜಕೀಯ ಪಕ್ಷವು ಬದಲಾಗುತ್ತದೆ. ಆದರೆ ಜಾತಿಗಳ ರಾಜಕೀಯ ಸಂಘಟನೆಗಳು ಬದಲಾಗುವುದಿಲ್ಲ. ವಿವಿಧ ಜಾತಿಗಳನ್ನೊಳಗೊಂಡ ತನ್ನ ‘ಕಾಮನಬಿಲ್ಲಿನ ಕೂಟ’ದ ಮೂಲಕ ಜಾತಿಗಳನ್ನು ಕರಗಿಸಲಾಗಿದೆ ಎಂದು ಬಿಜೆಪಿಯು ನಮ್ಮನ್ನು ನಂಬಿಸಲಾಗದು. ‘ಕಾಮನಬಿಲ್ಲು’ ಇಂದಲ್ಲ ನಾಳೆ ಮಾಯವಾಗಿಬಿಡುತ್ತದೆ.

ಜಾತಿಯ ಎರಡನೇ ರೂಪ ಎಂದರೆ ಸಾಮಾಜಿಕ ಸಂಘಟನೆ. ಜಾತಿಯನ್ನು ಒಡೆಯಬೇಕೆಂದು ಬಿಜೆಪಿ ಬಯಸಿದಲ್ಲಿ ಜಾತಿಯ ಸಾಮಾಜಿಕ ಶ್ರೇಣಿಯನ್ನು ಒಡೆಯಬೇಕಾಗುತ್ತದೆ. ಉತ್ತರಪ್ರದೇಶದ ಎಷ್ಟು ಮಂದಿ ಠಾಕೂರರು ಮೌರ್ಯ ಅಳಿಯ ಅಥವಾ ಪಾಸಿ ಸೊಸೆಯನ್ನು ಒಪ್ಪಿಕೊಳ್ಳಬಲ್ಲರು? ಚುನಾವಣೆಗೆ ಮುಂಚೆ, ದಲಿತರೊಬ್ಬರ, ಅಚ್ಚುಕಟ್ಟಾಗಿ ಕಾಣಿಸುತ್ತಿದ್ದ ಮನೆಯಲ್ಲಿ ಯೋಗಿ ಆದಿತ್ಯನಾಥ ಊಟ ಮಾಡುತ್ತಿರುವಂತಹ ಛಾಯಾಚಿತ್ರ ಪ್ರಕಟವಾಗಿತ್ತು. ಆದರೆ ದಲಿತರೊಂದಿಗೆ ಪಂಕ್ತಿಯಲ್ಲಿ ಪ್ರಭಾವಿ ಜಾತಿಯ ಎಷ್ಟು ಮಂದಿ ಊಟ ಮಾಡಬಲ್ಲರು?

ಕರ್ಮಕ್ಕೆ ಅನುಸಾರವಾದ ಪುನರ್ಜನ್ಮ, ಶುದ್ಧ ರಕ್ತ ಕುರಿತಾದ ಆಳವಾದ ತಪ್ಪುಗ್ರಹಿಕೆಯ ಪರಿಕಲ್ಪನೆಗಳಿಂದಾಗಿ ಸಾಮಾಜಿಕ ಶ್ರೇಣೀಕರಣ ಬೇರೂರಿದೆ. ಈ ಪರಿಕಲ್ಪನೆಗಳೇ ಸಾಮಾಜಿಕ ಶ್ರೇಣೀಕರಣದ ಬೇರುಗಳಾಗಿವೆ. ಆದರೆ ಈ ಬೇರುಗಳನ್ನೆಂದೂ ಬಿಜೆಪಿ ಟೀಕಿಸಿಲ್ಲ, ಪ್ರಶ್ನಿಸಿಲ್ಲ. ಏಕೆಂದರೆ, ಹಾಗೆ ಪ್ರಶ್ನಿಸಿದರೆ ಅದು ತಾನು ಪ್ರತಿಪಾದಿಸುವಂತಹ ಹಿಂದೂ ಧರ್ಮದ ನಂಬಿಕೆ ಹಾಗೂ ಸಂಪ್ರದಾಯಗಳನ್ನೇ ಪ್ರಶ್ನಿಸಿದಂತಾಗುತ್ತದೆ.

ಜಾತಿಯ ಮೂರನೇ ರೂಪ, ಆರ್ಥಿಕ ಸಂಘಟನೆ. ಶತಶತಮಾನಗಳಿಂದ ನಿಗದಿತ ಕೆಲಸವನ್ನು ಪ್ರತೀ ಜಾತಿಗೆ ವಹಿಸಲಾಗಿದೆ. ಈ ಕೆಲಸಗಳ ಮೇಲು, ಕೀಳು ಎಂಬಂಥ ವರ್ಗೀಕರಣಗಳು ಅಸ್ಪೃಶ್ಯತೆ, ಪ್ರತ್ಯೇಕತೆ ಹಾಗೂ ಶ್ರೇಣೀಕರಣಕ್ಕೆ ಆಧಾರವಾಗಿವೆ. ಕೈಗಾರಿಕೀಕರಣ ಹಾಗೂ ನಗರೀಕರಣಗಳಿಂದಾಗಿ ಜಾತಿ ಹಾಗೂ ಉದ್ಯೋಗದ ಮಧ್ಯದ ಸಂಬಂಧ ದುರ್ಬಲವಾಗುತ್ತಿದೆ. ಆದರೆ, ಹಳ್ಳಿಯಿಂದ ದೂರವಾಗಿ ಕೈಗಾರಿಕೆ ಅಥವಾ ವ್ಯಾಪಾರದಂತಹ ಇತರ ಉದ್ಯೋಗಗಳಲ್ಲಿ ತೊಡಗಿಕೊಂಡಿದ್ದರೂ ಕೆಳಜಾತಿಯವರನ್ನು ಕೆಳಜಾತಿಯವರಂತೆಯೇ ಈಗಲೂ ನೋಡಲಾಗುತ್ತದೆ. ಜಾತಿಯ ಆರ್ಥಿಕ ರೂಪಕ್ಕಿಂತ, ಸಾಮಾಜಿಕ ರೂಪ ದೀರ್ಘಕಾಲ ಜೀವಂತ ವಾಗಿರುವಂತಿದೆ.

ಜಾತಿ ಅಳಿಯುವುದಿಲ್ಲ ಎಂಬುದಕ್ಕೆ ಅನೇಕ ಉದಾಹರಣೆಗಳಿರುವಂತೆಯೇ ಅದು ಮಸುಕಾಗುತ್ತಿದೆ ಎಂಬು ದಕ್ಕೂ ಹಲವು ಉದಾಹರಣೆಗಳಿವೆ. ಜಾತಿ ಒಡೆಯುವ ಮಾರ್ಗವೆಂದರೆ, ಈವರೆಗೆ ಪ್ರಭಾವಿ ಜಾತಿಗಳೇ ಹೊಂದಿದ್ದ ಉದ್ಯೋಗಗಳನ್ನು ದುರ್ಬಲ ಜಾತಿಗಳಿಗೆ ನೀಡುವುದು. ಸಂಕ್ಷಿಪ್ತವಾಗಿ ಹೇಳುವುದಾದಲ್ಲಿ, ಜಾತಿ ವಾದವನ್ನು ನಿರ್ಮೂಲನ ಮಾಡಲು ಬಯಸುವ ರಾಜಕೀಯ ಪಕ್ಷವು ಕೈಗಾರಿಕೆ ಹಾಗೂ ವ್ಯಾಪಾರ ರಂಗ ದಲ್ಲಿ ಉದ್ಯೋಗ ಸೃಷ್ಟಿಯನ್ನು ತನ್ನ ಮುಖ್ಯ ಆದ್ಯತೆ ಯಾಗಿಸಿಕೊಳ್ಳಬೇಕು. ಉತ್ತರಪ್ರದೇಶದಲ್ಲಿ ಬಿಜೆಪಿ ಅದನ್ನು ಮಾಡುತ್ತಿದೆಯೇ? ಸೆಂಟರ್ ಫಾರ್ ಮಾನಿಟ ರಿಂಗ್ ಆಫ್ ಇಂಡಿಯನ್ ಎಕಾನಮಿ ಪ್ರಕಾರ, ಉತ್ತರ ಪ್ರದೇಶದ 15-29 ವಯೋಮಾನದ ಒಟ್ಟು 7.09 ಕೋಟಿ ಯುವಜನರ ಪೈಕಿ ಸುಮಾರು ಶೇಕಡ 17ರಷ್ಟು ಮಂದಿ ಮಾತ್ರ 2021ರ ಸೆಪ್ಟೆಂಬರ್- ಡಿಸೆಂಬರ್‌ನಲ್ಲಿ ಉದ್ಯೋಗ ಗಳನ್ನು ಹೊಂದಿದ್ದರು. ಜಾತಿ ಹಾಗೂ ಉದ್ಯೋಗದ ನಡುವಣ ಸಂಬಂಧ ಹೇಗೆ ತಾನೇ ಒಡೆಯುತ್ತದೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT