ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಭವ ಮಂಟಪ: ‘ನಮ್ಮದು ಜಾತಿವಾದವಲ್ಲ. ಜಾತ್ಯತೀತ ಬೇಡಿಕೆ’

Last Updated 1 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ಹೆಚ್ಚು ಮೀಸಲಾತಿ ಬೇಕು ಎಂದು ಒತ್ತಾಯಿಸಿ ರಾಜ್ಯದ ಹಲವು ಪ್ರಬಲ ಸಮುದಾಯಗಳು ಬೀದಿಗಿಳಿದು ಹೋರಾಟ ಆರಂಭಿಸಿವೆ. ಪ್ರಭಾವಿ ಒಕ್ಕಲಿಗ ಸಮುದಾಯವು ಈ ಗುಂಪಿಗೆ ಇತ್ತೀಚಿನ ಸೇರ್ಪಡೆ. ಒಕ್ಕಲಿಗರಲ್ಲಿರುವ ಎಲ್ಲ 115 ಉಪ ಜಾತಿಗಳನ್ನು ಒಬಿಸಿ ಪಟ್ಟಿಗೆ ಸೇರಿಸಬೇಕು ಎಂಬುದು ಈ ಸಮುದಾಯದ ಆಗ್ರಹ. ಈ ಸಮುದಾಯದ ಇಬ್ಬರು ನಾಯಕರು ತಮ್ಮ ಬೇಡಿಕೆಯ ಹಿಂದಿನ ತರ್ಕವನ್ನು ಬಿಚ್ಚಿಟ್ಟಿದ್ದಾರೆ

ಎಲ್.ಎನ್‌. ಮುಕುಂದರಾಜ್

ನಿವೃತ್ತ ಅಧ್ಯಾಪಕ ಮತ್ತು ನಾಟಕಕಾರ

*ಒಕ್ಕಲುತನವನ್ನೇ ನಂಬಿದ ಒಕ್ಕಲಿಗರ ಸಾಂಸ್ಕತಿಕ ಅನನ್ಯತೆಗಳೇನು?

ಒಕ್ಕಲುತನ ಎನ್ನುವುದೇ ನೆಲ ಸಂಸ್ಕೃತಿಯೊಂದಿಗೆ ಬೆಸೆದುಕೊಂಡಿರುವಂಥದ್ದು. ಸಾಂಸ್ಕೃತಿಕ ವೈಶಿಷ್ಟ್ಯ ಬಹಳಷ್ಟಿದೆ. ಆದರೆ, ಅವೆಲ್ಲವೂ ಸಮುದಾಯದ ಸ್ಮೃತಿಪಟಲದಿಂದ ಮರೆಯಾಗುತ್ತಿವೆ. ಅವನ್ನು ಮತ್ತೆ ನೆನಪಿಸಿ, ಜಾಗೃತಗೊಳಿಸುವ ಸಮಯ ಬಂದಿದೆ. ಮಹಾಕವಿ ಕುವೆಂಪು ಅವರು ಸಾಂಸ್ಕೃತಿಕವಾಗಿ ಜೀವಶಕ್ತಿ ತುಂಬಿದ್ದರು. ವಿಶ್ವ ಮಾನವತೆಯ ಪಾಠ ಬೋಧಿಸಿದ್ದರು. ಆ ಶಕ್ತಿ ಮತ್ತೆ ಬರಬೇಕಿದೆ. ರಾಜಕಾರಣದಲ್ಲೂ ಸಮುದಾಯ ಎತ್ತರದ ಸ್ಥಾನದಲ್ಲಿದೆ. ಹಳ್ಳಿ ರೈತನೊಬ್ಬ ಈ ದೇಶದ ಅತ್ಯುನ್ನತ ಸ್ಥಾನವಾದ ಪ್ರಧಾನಿ (ದೇವೇಗೌಡ) ಪಟ್ಟಕ್ಕೆ ಏರಿದ್ದೂ ಇತಿಹಾಸವೇ.

*ಪ್ರಗತಿಪರ ಚಿಂತಕ, ಜಾತ್ಯತೀತರೆಂದು ಗುರುತಿಸಿಕೊಂಡವರು. ಈಗ ಜಾತಿಯ ಹೋರಾಟ?

ನಿಜ. ಬಹಳ ಜನ ಸಾಮಾಜಿಕ ಜಾಲತಾಣಗಳಲ್ಲಿ ಈ ಪ್ರಶ್ನೆ ಕೇಳಿದ್ದಾರೆ. ಜಾತಿ ರಾಜಕಾರಣ ಮಾಡಲು ನಾನು ಹೋರಾಟದಲ್ಲಿ ಭಾಗಿಯಾಗಿಲ್ಲ.ಹಳ್ಳಿಯಲ್ಲಿದ್ದ ನಾನು ದೇವರಾಜ ಅರಸು ಆಡಳಿತಾವಧಿಯ ಹಾವನೂರು ಆಯೋಗದ ವರದಿ ಪರಿಣಾಮ ಸರ್ಕಾರಿ ಹುದ್ದೆ ಪಡೆದೆ. ಹೀಗಾಗಿ, ಜಾತಿಯಿಂದ ಲಾಭ ಪಡೆದಿಲ್ಲವೆಂದರೂ ತಪ್ಪಾಗುತ್ತದೆ. ಮೀಸಲಾತಿ ಕಂಡರೆ ಆಗಲ್ಲ ಎಂದು ಹೇಳುವುದೂ ಮೂರ್ಖತನವಾಗುತ್ತದೆ. ಒಕ್ಕಲಿಗರ ಸ್ವಭಾವವೇ ಎಲ್ಲರನ್ನೂ ಒಳಗೊಳ್ಳುವುದು. ಅದು ವಿಶ್ವ ಮಾನವ ಪ್ರಜ್ಞೆ–ಜಾತ್ಯತೀತ ನಿಲುವು. ಒಕ್ಕಲಿಗ ಎನ್ನುವುದು ಜಾತಿಯಲ್ಲ. ಅದೊಂದು ಪ್ರಜ್ಞೆ. ಸಮುದಾಯ ಶೋಷಣೆಗೆ ಒಳಗಾಗುತ್ತಿದೆ ಎಂದಾಗ ನಮ್ಮಂಥವರು ಸುಮ್ಮನೆ ಕುಳಿತುಕೊಳ್ಳುವುದು ಸರಿಯೇ? ವಾಲ್ಮೀಕಿ, ಕುರುಬ, ಪಂಚಮಸಾಲಿ ಸಮುದಾಯದ ಹೋರಾಟಗಳಲ್ಲಿ ನನ್ನಂಥವರು (ಪ್ರಗತಿಪರರು) ಯಾರೂ ಇಲ್ಲ. ಇಲ್ಲಿನ ಹೋರಾಟ ಸಮತೋಲನದಲ್ಲಿ ನಡೆಯಬೇಕಿದೆ. ನಾವು ಕೇಳುವ ಮೀಸಲಾತಿ ಸೂತ್ರದಿಂದ ಎಲ್ಲರಿಗೂ ಅನುಕೂಲವಾಗುತ್ತದೆ. ಜನಸಂಖ್ಯೆ ಆಧಾರದಲ್ಲಿ ಬ್ರಾಹ್ಮಣರಿಗೂ ಕೊಡಿ, ಜಾತ್ಯತೀತರಿಗೂ ಮೀಸಲಾತಿ ಕೊಡಲಿ.

*ಅಂದರೆ, ಒಕ್ಕಲಿಗ ಸಮುದಾಯದ ಬೇಡಿಕೆ ನ್ಯಾಯಯುತವೆಂದೇ...

ಮೀಸಲಾತಿ ಪ್ರಮಾಣದ ಹಂಚಿಕೆ ನ್ಯಾಯಯುತ ವಾಗಿ ಇರಬೇಕು ಎನ್ನುವುದೇ ಹೋರಾಟದ ಉದ್ದೇಶ. ಶೇ 17ರಷ್ಟಿರುವ ಸಮುದಾಯದ ಜನ ಸಂಖ್ಯೆಗೆ ಮೀಸಲಾತಿ ಪ್ರಮಾಣ ಶೇ8.5ರಷ್ಟು ಇರಲೇ ಬೇಕು. ಸುಪ್ರೀಂ ಕೋರ್ಟ್‌ ನಿಗದಿಪಡಿಸಿದ ಶೇ 50ರ ಮೀಸಲಾತಿ ಪ್ರಮಾಣ ಮೀರಿದರೆ ಈ ಪ್ರಮಾಣವೂ ಹೆಚ್ಚಬೇಕು. ಒಕ್ಕಲಿಗ ಸಮುದಾಯಕ್ಕೆ ನ್ಯಾಯ ಸಿಕ್ಕಿದರೆ ಎಲ್ಲ ಸಮುದಾಯಗಳಿಗೂ ನ್ಯಾಯ ಸಿಕ್ಕಂತೆ.

*ಎಲ್ಲ ಉಪ ಪಂಗಡಗಳಿಗೂ ಪ್ರಾತಿನಿಧ್ಯ ಸಿಕ್ಕಿಲ್ಲ ಎಂದೇ...

ಪ್ರಾತಿನಿಧ್ಯವೇ ಸಿಕ್ಕಿಲ್ಲ ಎಂದಲ್ಲ. ಒಕ್ಕಲುತನವನ್ನೇ ನಂಬಿದವರಿಗೆ ಸಿಕ್ಕಿಲ್ಲ. ನಗರ ಕೇಂದ್ರಿತ ರಾಜಕೀಯ ಮಾಡಿಕೊಂಡು ಬಂದ ಕೆಲವೇ ಪಂಗಡಗಳು ಅವಕಾಶ ಗಿಟ್ಟಿಸಿಕೊಂಡಿವೆ. ಸಮಗ್ರ ಅಭಿವೃದ್ಧಿ ಎಂದಾದಾಗ 115 ಉಪ ಜಾತಿಗಳೂ ಎಲ್ಲಿವೆ, ಸ್ಥಿತಿ ಏನಿದೆ ಎನ್ನುವುದು ಮುಖ್ಯವಾಗುತ್ತದೆ. ನಮ್ಮದು ಆ ದಿಸೆಯಲ್ಲಿನ ಆಲೋಚನೆ. ಒಳ ಮೀಸಲಾತಿ ಎನ್ನುವ ಪದ ಹುಟ್ಟಿಕೊಂಡಿದ್ದೇ ದೇವೇಗೌಡರಿಂದ. ಒಕ್ಕಲಿಗ ಒಂದಲ್ಲ, ಎಲ್ಲ ಸಮುದಾಯದ ಎಲ್ಲ ಉಪ ಪಂಗಡಗಳಿಗೂ ಹಂಚಿಕೆಯಾಗಬೇಕೆಂಬ ಕಾರಣಕ್ಕೇ ಒಳ ಮೀಸಲಾತಿ ಪರಿಕಲ್ಪನೆ ಮೂಡಿದೆ. ಆ ಮೂಲಕ, ಕೇವಲ ಶೇ 0.1, ಅಂದರೆ 5 ಲಕ್ಷ ಜಸಂಖ್ಯೆ ಇರುವ ಸಮುದಾಯಕ್ಕೂ ಅನುಕೂಲ ಆಗಬೇಕು. ಬಸವಣ್ಣ, ಕುವೆಂಪು, ಅಂಬೇಡ್ಕರ್‌, ಬುದ್ಧನ ಚಿಂತನೆಯಲ್ಲಿ ಇದ್ದಿದ್ದೂ ಅದೇ. ತಬ್ಬಲಿಗಳೂ ಶಕ್ತಿಶಾಲಿಗಳಾಗಬೇಕು. ಈ ದೇಶವನ್ನು ಕಟ್ಟಿದವರು ಶ್ರಮಿಕರು. ಅವರೆಲ್ಲ ತಳ ಸಮುದಾಯದವರು, ಕೆಳಜಾತಿಯವರು. ಅವರ ವಂಶಸ್ಥರಿಗೆ, ರಕ್ತ ಸಂಬಂಧಿಗಳಿಗೆ ಏನೂ ಇಲ್ಲವೆಂದರೆ ಪರಮ ಅನ್ಯಾಯವಾಗುತ್ತದೆ, ಮನುಷ್ಯ ದ್ರೋಹವಾಗುತ್ತದೆ.

*ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ವರದಿಯನ್ನು ರಾಜ್ಯ ಸರ್ಕಾರ ಮೊದಲು ಸ್ವೀಕರಿಸಲಿ. ಅದು ಸರಿ ಇಲ್ಲ ಎಂದೆನಿಸಿದರೆ ವಿರೋಧಿಸಬಹುದಿತ್ತಲ್ಲವೇ?

ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮಾಡಿಸಿದ್ದ ವರದಿಯನ್ನು ಅವರ ಸರ್ಕಾರವೇ ಸ್ವೀಕರಿಸಬಹುದಿತ್ತು. ಬಳಿಕ ಬಂದ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಕೂಡಾ ಆ ಕೆಲಸ ಮಾಡಿಲ್ಲ. ಯಡಿಯೂರಪ್ಪ ನೇತೃತ್ವದ ಸರ್ಕಾರ ಕೂಡಾ ವರದಿ ಸ್ವೀಕರಿಸಿಲ್ಲ. ಆದರೆ, ಅದರಲ್ಲಿರುವ ಅಂಶಗಳು ಈಗಾಗಲೇ ಸೋರಿಕೆಯಾಗಿವೆ. ಹಾಗಿದ್ದರೆ, ಸೋರಿಕೆ ಹಿಂದಿನ ತಂತ್ರವೇನು. ವರದಿ ಸರಿ ಇಲ್ಲ ಎನ್ನುವುದು ಈಗಾಗಲೇ ಗೊತ್ತಾಗಿಬಿಟ್ಟಿದೆ. ಹಾಗಿದ್ದ ಮೇಲೆಯೂ ಸ್ವೀಕರಿಸುವುದರಲ್ಲಿ ಅರ್ಥವೇನು? ಕೆಟ್ಟ ಅಡುಗೆ ಮಾಡಿದ್ದನ್ನು ತಿಂದು ಆರೋಗ್ಯ ಕೆಡಿಸಿಕೊಳ್ಳಬೇಕೇ? ಹೊಸತಾಗಿ, ವೈಜ್ಞಾನಿಕವಾಗಿ ಸಮೀಕ್ಷೆ ಮಾಡಿಸುವುದೇ ಸೂಕ್ತ.

*ಕೇಂದ್ರ ಸರ್ಕಾರ ಶೇ 10ರಷ್ಟು ಮೀಸಲಾತಿ ಘೋಷಿಸಿದಾಗ ಒಬ್ಬರೂ ಮಾತನಾಡಿಲ್ಲವಲ್ಲ?

ನಿಜ. ಯಾರೂ ಧ್ವನಿ ಎತ್ತಿಲ್ಲ. ಅಷ್ಟರಮಟ್ಟಿಗೆ ಕೇಂದ್ರ ಸರ್ಕಾರ ಎಲ್ಲರ ಬಾಯಿಗೆ ಬಟ್ಟೆ ಕಟ್ಟಿ ಮೀಸಲಾತಿ ಘೋಷಿಸಿದೆ. ಆ ಮೂಲಕ ಜಾಣತನ ಮೆರೆದಿದೆ. ನಾವು ಮೀಸಲಾತಿಗಾಗಿ ಹೋರಾಟ ಮಾಡಿಕೊಂಡು ಬಂದೆವು. ಈಗ ಸಿಕ್ಕಿರುವುದನ್ನು ಬೀದಿಯಲ್ಲಿ ನಿಂತು ಕಿರುಚಾಡಿ ಪಡೆದುಕೊಂಡಿದ್ದೇವೆ.

*ಮೀಸಲಾತಿ ಅಷ್ಟು ಸುಲಭದ ತುತ್ತಲ್ಲ ಅಲ್ಲವೇ?

ಹೌದು. ಆ ಪ್ರಜ್ಞೆ (ಮೀಸಲಾತಿ) ಜಾಗೃತಿ ಗೊಳಿಸುವ ಕೆಲಸ ಮೊದಲ ಆಗಬೇಕು. ಸರ್ವರಿಗೆ ಸಮಬಾಳು, ಸರ್ವರಿಗೆ ಸಮಪಾಲು ಎನ್ನುವುದು ನಮ್ಮ ಬೇಡಿಕೆ– ಹೋರಾಟ. ಅದರ ನೇತೃತ್ವವನ್ನು ಸ್ವಾಮೀಜಿಗಳು ವಹಿಸುತ್ತಾರೆ. ನಾವೆಲ್ಲರೂ (ಸಮುದಾಯದವರು) ಹಿಂದೆ ಇರುತ್ತೇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT