ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲೆಮಾರಿಗಳ ಅಹವಾಲು: ಮನೆಯೇ ಇಲ್ಲದವರಿಗೆ ಮಠದ ಸಾರಥ್ಯವೆಲ್ಲಿ?

Last Updated 24 ಫೆಬ್ರುವರಿ 2021, 20:15 IST
ಅಕ್ಷರ ಗಾತ್ರ

ಮೀಸಲಾತಿ ಪಟ್ಟಿಯಲ್ಲಿ ಪರಿಷ್ಕರಣೆ, ಬದಲಾವಣೆ, ಪ್ರಮಾಣ ಹೆಚ್ಚಳ ಮಾಡುವಂತೆ ಹಲವು ಸಮುದಾಯದ ರಾಜಕಾರಣಿಗಳು, ಮಠಾಧೀಶರು ಬೀದಿಗಿಳಿದಿದ್ದಾರೆ. ಸದಾ ಬೀದಿಯಲ್ಲೇ ಬದುಕುವ 74 ಅಲೆಮಾರಿ ಸಮುದಾಯಗಳು ಮೀಸಲಾತಿ ಪಟ್ಟಿಯಲ್ಲಿದ್ದರೂ, ಅದರ ಲಾಭ ಪಡೆಯಲು ಆಗಿಲ್ಲ. ಅವರ ಪರ ಧ್ವನಿ ಎತ್ತಲು ಒಬ್ಬೇ ಒಬ್ಬ ಶಾಸಕ ಅಥವಾ ಸಂಸದರಿಲ್ಲ. ಅವರ ಕೂಗು ಅಕ್ಷರಶಃ ಅರಣ್ಯ ರೋದನವಾಗಿದೆ.

ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ 101 ಜಾತಿಗಳಲ್ಲಿ 51 ಅಲೆಮಾರಿ ಸಮುದಾಯಗಳು, ಪರಿಶಿಷ್ಟ ಪಂಗಡಗಳ ಪಟ್ಟಿಯಲ್ಲಿರುವ 54 ಜಾತಿಗಳಲ್ಲಿ 23 ಅಲೆಮಾರಿ ಸಮುದಾಯಗಳಿವೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ 54 ಶಾಸಕರು ರಾಜ್ಯ ವಿಧಾನಸಭೆಯಲ್ಲಿದ್ದಾರೆ. ಆದರೆ, ಈ ಅಲೆಮಾರಿ ಸಮುದಾಯಗಳನ್ನು ಪ್ರತಿನಿಧಿಸುವ ಒಬ್ಬ ಶಾಸಕ ವಿಧಾನಸಭೆ ಮತ್ತು ಸಂಸತ್ ಪ್ರವೇಶಿಸಿದ ಉದಾಹರಣೆ ಇಲ್ಲ. ಜಿಲ್ಲಾ ಪಂಚಾಯಿತಿಯ ಒಬ್ಬ ಸದಸ್ಯ, ಗ್ರಾಮ ಪಂಚಾಯಿತಿ ಮತ್ತು ನಗರ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಬೆರಳೆಣಿಕೆಯ ಸದಸ್ಯರು ಇದ್ದಾರೆ ಎಂಬುದಷ್ಟೇ ಈ ಸಮುದಾಯದ ಹೆಗ್ಗಳಿಕೆ

‘ಸಾಧು–ಸಂತರ ವೇಷಧರಿಸಿ ಭಿಕ್ಷಾಟನೆ ಮಾಡುವ ವೃತ್ತಿಯ ‘ಸುಡಗಾಡು ಸಿದ್ಧ’ ಸಮುದಾಯ ಅಲೆಮಾರಿಗಳ ಪಟ್ಟಿಯಲ್ಲಿ ಇದೆ. ಆದರೆ, ನಮ್ಮ ಪರ ಧ್ವನಿಯಾಗಲು ನಿಜವಾದ ಸ್ವಾಮೀಜಿಗಳ್ಯಾರೂ ಇಲ್ಲ. ಈ ತನಕ ನೆಲೆ ನಿಲ್ಲಲು ಸಾಧ್ಯವಾಗದ ನಮಗೆ ಮನೆಗಳೇ ಇಲ್ಲ, ಇನ್ನು ಮಠ ಎಲ್ಲಿಂದ ಕಟ್ಟೋದು ಸ್ವಾಮಿ’ ಎನ್ನುತ್ತಾರೆ ಈ ಸಮುದಾಯದ ಜನರು.

ಹಗಲು ವೇಷ, ಬೈರಾಗಿ ವೇಷ, ಗೊಂಬೆಯಾಟ, ಮೋಡಿಯಾಟ, ಹಚ್ಚೆ ಹಾಕುವುದು, ಕೋಲೆ ಬಸವನ ಆಟ, ತತ್ವಪದ ಗಾಯನ,ಶಹನಾಯಿ ನುಡಿಸುವುದು, ಗರುಡಗಂಭ ಹೊತ್ತು ಭಿಕ್ಷಾಟನೆ, ಕಣಿ ಹೇಳುವುದು, ತಲೆಕೂದಲು ವ್ಯಾಪಾರ, ರಂಗೋಲಿ ಮಾರಾಟ, ಬುಟ್ಟಿ, ಚಾಪೆ ಹೆಣೆಯುವುದು, ಕಾಚು ತಯಾರಿಕೆ, ಹಂದಿ ಸಾಕಾಣಿಕೆ, ಮೀನುಗಾರಿಕೆ, ಚರ್ಮಗಾರಿಕೆ, ಅಲೆಮಾರಿ ಬೇಟೆಗಾರಿಕೆ, ಅರಣ್ಯ ಕಿರು ಉತ್ಪನ್ನಗಳ ಸಂಗ್ರಹ... ಹೀಗೆ ಹಲವು ಪಾರಂಪರಿಕ ಕಸುಬುಗಳನ್ನು ನಂಬಿಕೊಂಡು ಊರಿನಿಂದ ಊರಿಗೆ ಅಲೆದಾಡಿಕೊಂಡು ತುತ್ತಿನ ಚೀಲ ತುಂಬಿಸಿಕೊಳ್ಳುವುದು ಇವರ ವೃತ್ತಿ.

ಅರಣ್ಯ ನಾಶಕ್ಕೆ ಅಡ್ಡಿಯಾಗಿದ್ದ ಕಾರಣಕ್ಕೆ ಬ್ರಿಟಿಷರಿಂದ ಅಪರಾಧಿ ಬುಡಕಟ್ಟು ಎಂದು ಘೋಷಣೆ ಮಾಡಿಸಿಕೊಂಡ ಗಂಟಿ ಚೋರ್ಸ್‌, ಮಾಂಗ್ ಗಾರುಡಿ ಸಮುದಾಯಗಳು ಅಲೆಮಾರಿ ಪಟ್ಟಿಯಲ್ಲಿವೆ. ‘ಅಪರಾಧಿ ಬುಡಕಟ್ಟು ಎಂದು ಬ್ರಿಟಿಷರ ಘೋಷಣೆ’ ಎಂಬ ಅಂಶ ಸರ್ಕಾರ ಸಿದ್ಧಪಡಿಸಿರುವ ಈ ಸಮುದಾಯಗಳ ಪಾರಂಪರಿಕ ವೃತ್ತಿ ಪಟ್ಟಿಯಲ್ಲಿ ಈಗಲೂ ಇದೆ.

‘ಸ್ವಂತ ಊರಿಲ್ಲದ ಕಾರಣ ಮಕ್ಕಳೊಂದಿಗೆ ಊರೂರು ಸುತ್ತುವ ಅಲೆಮಾರಿಗಳಿಗೆ ಪ್ರಾಥಮಿಕ ಶಿಕ್ಷಣವೇ ದೊರೆಯುತ್ತಿಲ್ಲ. ಶಿಕ್ಷಣವೇ ಇಲ್ಲದ ಕಾರಣ ಸರ್ಕಾರಿ ಉದ್ಯೋಗ ಮತ್ತು ಇತರ ಮೀಸಲಾತಿ ಸೌಲಭ್ಯ ಪಡೆಯಲಾಗಿಲ್ಲ. ಆಶ್ರಯ ಮನೆಗಳ ಯಾವ ಯೋಜನೆಯೂ ಇವರನ್ನು ತಲುಪಿಲ್ಲ. ಸ್ವಂತ ನಿವೇಶನ ಇದ್ದವರಿಗೆ ಆಶ್ರಯ ಮನೆಗಳು ಮಂಜೂರಾಗುತ್ತವೆ. ಆಧಾರ್ ಕಾರ್ಡ್, ಪಡಿತರ ಚೀಟಿಯನ್ನೇ ಹೊಂದಿರದ ನಮಗೆ ಸ್ವಂತ ನಿವೇಶನ ಎಲ್ಲಿದೆ’ ಎಂದು ಅವರು ಪ್ರಶ್ನಿಸುತ್ತಾರೆ.

‘ದೊಂಬ, ಕೊರಮ, ಕೊರಚ, ಸುಡಗಾಡು ಸಿದ್ಧ, ಶಿಳ್ಳೆಕ್ಯಾತ ಹೀಗೆ... ನಮ್ಮ ಸಮುದಾಯದ ಹೆಸರುಗಳೇ ಬೈಗುಳದ ಸೂಚಕವಾಗಿವೆ. ಇಂತಹ ಜಾತಿ ಎಂದು ಹೇಳಿಕೊಳ್ಳಲು ಸಾಧ್ಯವಾಗದಷ್ಟು ಹೀನಾಯ ಸ್ಥಿತಿ ನಮ್ಮದು. ಅಸ್ಪೃಶ್ಯರಲ್ಲೇ ಅಸ್ಪೃಶ್ಯರು ನಾವು’ ಎನ್ನುತ್ತಾರೆ ಅಲೆಮಾರಿ ಮಹಾಸಭಾದ ರಾಜ್ಯ ಉಪಾಧ್ಯಕ್ಷ ಬಿ.ಎಚ್. ಮಂಜುನಾಥ ದಾಯತ್ಕರ್.

‘ಸಾಮಾನ್ಯವಾಗಿ ಈ ಸಮುದಾಯಗಳು ನಗರದೊಳಗೆ ಅಥವಾ ನಗರದ ಅಂಚಿನಲ್ಲಿ ಟೆಂಟ್‌ಗಳಲ್ಲಿ ಜೀವನ ನಡೆಸುತ್ತಿವೆ. ಸರ್ಕಾರ ಸವಲತ್ತುಗಳನ್ನು ದೊರಕಿಸುವ ಮಾತು ಹಾಗಿರಲಿ; ಕಳ್ಳತನ, ದರೋಡೆ ಪ್ರಕರಣಗಳಲ್ಲಿ ನಿಜವಾದ ಆರೋಪಿಗಳು ಸಿಗದಿದ್ದಾಗ ಪೊಲೀಸರು ಇವರನ್ನು ಬಂಧಿಸಿ ಕೇಸುಗಳನ್ನು ಹಾಕಿ ಜೈಲಿಗೆ ತಳ್ಳುತ್ತಾರೆ. ನಮ್ಮ ಕುಲಕಸುಬೇ ಕಳ್ಳತನ ಎಂದು ಪೊಲೀಸರು ನಂಬಿದ್ದಾರೆ. ಜಾಮೀನು ಪಡೆಯಲೂ ಆಗದ ಎಷ್ಟೋ ಮಂದಿ ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸಿದ್ದಾರೆ’ ಎಂದು ಮಹಾಸಭಾದ ರಾಜ್ಯ ಖಜಾಂಚಿ ಆದರ್ಶ ಯಲ್ಲಪ್ಪ ಅಳಲು ತೋಡಿಕೊಳ್ಳುತ್ತಾರೆ.

ಹೆಸರಿಗಷ್ಟೇ ಕೋಶ: ಪ್ರತ್ಯೇಕ ನಿಗಮ ಬೇಕು

ಅಲೆಮಾರಿ ಸಮುದಾಯಗಳಲ್ಲಿ ಅಲ್ಪಸ್ವಲ್ಪ ಶಿಕ್ಷಣ ಪಡೆದ ಕೆಲವರು ಅಲೆಮಾರಿ ಬುಡಕಟ್ಟು ಮಹಾಸಭಾ ಎಂಬ ಸಂಘಟನೆ ಕಟ್ಟಿಕೊಂಡು ಸರ್ಕಾರದ ಮೇಲೆ ಒತ್ತಡ ಹೇರುವ ಕೆಲಸವನ್ನು ಇತ್ತೀಚಿನ ವರ್ಷಗಳಲ್ಲಿ ಆರಂಭಿಸಿದ್ದಾರೆ. ಅದರ ಫಲವಾಗಿ ಕರ್ನಾಟಕ ಬುಡಕಟ್ಟು ಸಂಶೋಧನಾ ಸಂಸ್ಥೆ ಮತ್ತು ಅಂಬೇಡ್ಕರ್ ಸಂಶೋಧನಾ ಸಂಸ್ಥೆ ಇವರ ಸ್ಥಿತಿಗತಿಗಳ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡಿತ್ತು.

‘ಇದನ್ನು ಆಧರಿಸಿ 2014–15ನೇ ಸಾಲಿನ ಬಜೆಟ್‌ನಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ₹123 ಕೋಟಿ ಪ್ಯಾಕೇಜ್‌ ಘೋಷಣೆ ಮಾಡಿದ್ದರು. ಆದರೆ, ಅನುದಾನ ಬಳಕೆಗೆ ಮಾರ್ಗಸೂಚಿ ನೀಡಲಿಲ್ಲ’ ಎಂದು ಮಹಾಸಭಾದ ರಾಜ್ಯ ಕಾರ್ಯಾಧ್ಯಕ್ಷ ವೆಂಕಟರಮಣಯ್ಯ ಹೇಳಿದರು.

‘ವಿಶ್ವೇಶ್ವರಯ್ಯ ಟವರ್‌ನಲ್ಲಿ ಇರುವ ಅಲೆಮಾರಿಗಳ ಅಭಿವೃದ್ಧಿ ಕೋಶದ ಕಚೇರಿ ಕೂಡ ಅಲೆಮಾರಿಗಳ ಬದುಕಿನಂತೆಯೇ ಆಗಿದೆ. ಕಾರಿಡಾರ್‌ನಲ್ಲೇ ನಾಲ್ಕೈದು ಬೀರುಗಳನ್ನು ಜೋಡಿಸಿಕೊಂಡು ಒಬ್ಬ ವಿಶೇಷಾಧಿಕಾರಿ ಮತ್ತು ಕಚೇರಿ ಅಧೀಕ್ಷಕ ಕಚೇರಿ ನಡೆಸುತ್ತಿದ್ದಾರೆ. ಇಡೀ ಕಚೇರಿಗೆ ಇಬ್ಬರೇ ಸಿಬ್ಬಂದಿ. ಎಸ್‌ಡಿಎ, ಎಫ್‌ಡಿಎ, ಡಿ ದರ್ಜೆ ನೌಕರ ಯಾರೂ ಇಲ್ಲ. ಇದು ಸರ್ಕಾರ ಅಲೆಮಾರಿಗಳ ಬಗ್ಗೆ ಹೊಂದಿರುವ ಕಾಳಜಿ’ ಎಂದು ಬೇಸರ ವ್ಯಕ್ತಪಡಿಸಿದರು.

‘2014ರಿಂದ 2020ರವರೆಗೆ ₹246 ಕೋಟಿ ಅನುದಾನವನ್ನು ಸರ್ಕಾರ ನೀಡಿದೆ. ಅದರಲ್ಲಿ ₹96 ಕೋಟಿ ಖರ್ಚಾಗದೇ ಉಳಿದಿದೆ. ಪರಿಶಿಷ್ಟ ಜಾತಿ ಮತ್ತು ವರ್ಗಗಳ ಕಲ್ಯಾಣಕ್ಕೆ ವರ್ಷಕ್ಕೆ ಕನಿಷ್ಠ ₹25 ಸಾವಿರ ಕೋಟಿ ಅನುದಾನ ಬರುತ್ತಿದೆ. 74 ಸಮುದಾಯಗಳಿರುವ ಅಲೆಮಾರಿಗಳಿಗೆ ₹25 ಕೋಟಿ ಅಥವಾ ₹30 ಕೋಟಿ ಅನುದಾನ ನೀಡಿ ಕೈತೊಳೆದುಕೊಳ್ಳಲಾಗುತ್ತಿದೆ. ಸಮಾಜ ಕಲ್ಯಾಣ ಇಲಾಖೆಗೆ ಅಲೆಮಾರಿಗಳ ಬದುಕೇ ಅರ್ಥವಾಗಿಲ್ಲ. ನಮ್ಮ ಪರ ಮಾತನಾಡುವ ಒಂದೇ ಒಂದು ಧ್ವನಿ ವಿಧಾನಸಭೆಯಲ್ಲಿ ಇಲ್ಲ. ಹೀಗಾಗಿ ನಮ್ಮ ಬೇಡಿಕೆಗಳು ಅರಣ್ಯ ರೋದನವಾಗಿವೆ’ ಎನ್ನುತ್ತಾರೆ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಕಿರಣಕುಮಾರ್ ಕೊತ್ತಗೆರೆ.

‘ಹೀಗಾಗಿ, ಪ್ರತ್ಯೇಕ ನಿಗಮವನ್ನು ಸರ್ಕಾರ ರಚಿಸಬೇಕು. ವರ್ಷಕ್ಕೆ ಕನಿಷ್ಠ ₹250 ಕೋಟಿ ಮೀಸಲಿಡಬೇಕು. ಸಮಾಜ ಕಲ್ಯಾಣ ಇಲಾಖೆಯಲ್ಲೇ ಅಲೆಮಾರಿಗಳಿಗೆ ಪ್ರತ್ಯೇಕ ಕೋಶ ರಚಿಸಬೇಕು’ ಎಂದು ಅವರು ಒತ್ತಾಯಿಸಿದರು.

ಅಂಕಿ–ಅಂಶ

51

ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ ಅಲೆಮಾರಿ ಸಮುದಾಯಗಳು

23

ಪರಿಶಿಷ್ಟ ಪಂಗಡಗಳ ಪಟ್ಟಿಯಲ್ಲಿರುವ ಅಲೆಮಾರಿ ಸಮುದಾಯಗಳು

9.63 ಲಕ್ಷ

ಒಟ್ಟು ಜನಸಂಖ್ಯೆ

ಶೇ 96.56ರಷ್ಟು

ಭೂರಹಿತ ಅಲೆಮಾರಿಗಳು

ಶೇ 41.92

ಸಾಕ್ಷರತೆಯ ಪ್ರಮಾಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT