ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಆಹಾರಕ್ಕೆಂದು ವನ್ಯಜೀವಿ ಸಂರಕ್ಷಣೆ?

ವಿಶ್ವಸಂಸ್ಥೆಯ ಅಧ್ಯಯನಾಂಗವೊಂದು ನೀಡಿರುವ ಸಲಹೆ ವನ್ಯಜೀವಿ ಪ್ರಿಯರ ನಿದ್ದೆಗೆಡಿಸಿದೆ
Last Updated 30 ಸೆಪ್ಟೆಂಬರ್ 2022, 19:11 IST
ಅಕ್ಷರ ಗಾತ್ರ

ವನ್ಯಜೀವಿಗಳ ಸಂರಕ್ಷಣೆಯ ವಿಚಾರ ಬಂದಾಗ ಭಾರತದಲ್ಲಿ ಕೆಲವೊಮ್ಮೆ ಉತ್ಸಾಹದ ಗಾಳಿ ಬೀಸುತ್ತದೆ, ಇನ್ನೊಮ್ಮೆ ಆತಂಕದ ಅಲೆಗಳು ಏಳುತ್ತವೆ. ಏಷ್ಯಾದ ಒಂಟಿಕೊಂಬಿನ ಘೇಂಡಾಮೃಗಗಳ ಗಣತಿ ಇತ್ತೀಚೆಗೆ ಮುಗಿದಿದೆ. ಏಷ್ಯಾದ ಘೇಂಡಾಮೃಗ ತಜ್ಞರ ಎಣಿಕೆಯ ಪ್ರಕಾರ ಭಾರತ, ನೇಪಾಳ, ಭೂತಾನ್‌, ಇಂಡೊನೇಷ್ಯಾದಲ್ಲಿ ಸದ್ಯ 4,014 ಒಂಟಿಕೊಂಬಿನ ಘೇಂಡಾಗಳಿವೆ; ಸಮಾಧಾನಪಟ್ಟುಕೊಳ್ಳಬಹುದಾದ ಸಂಗತಿ.

ಗುಜರಾತಿನ ಗಿರ್‌ ಅರಣ್ಯಧಾಮದಲ್ಲಿ ಸಿಂಹಗಳ ಸಂಖ್ಯೆ ಈಗ 674ಕ್ಕೆ ಏರಿದೆ. ಸಿಂಹಗಳು ಈಗ ಸೌರಾಷ್ಟ್ರದ ಕಡಲತೀರವನ್ನು ಆವಾಸ ಮಾಡಿಕೊಂಡಿವೆ. ಕಳ್ಳಬೇಟೆಗೆ ಕಡಿವಾಣ ಹಾಕಿರುವುದು ಘೇಂಡಾಮೃಗಗಳ ಸಂತತಿಯ ವರ್ಧನೆಗೆ ಒಂದು ಕಾರಣ. ಹಾಗೆಯೇ ಸಿಂಹಗಳ ವೃದ್ಧಿಗೆ ಬೇಟೆ ಯಥೇಚ್ಛವಾಗಿ ದೊರೆಯುತ್ತಿರುವುದು ಒಂದು ಪ್ರಮುಖ ಕಾರಣ.

ಇದೇ ಮಾತನ್ನು ಭಾರತದಲ್ಲಿ ರಣಹದ್ದುಗಳ ಕುರಿತು ಹೇಳಲಾರೆವು. ಸತ್ತ ಪ್ರಾಣಿಗಳ ಕಳೇಬರವನ್ನು ಆಹಾರಕ್ಕಾಗಿ ಅವಲಂಬಿಸಿರುವ ಈ ಪಕ್ಷಿಯ ಸಂರಕ್ಷಣೆಯೂ ಅರಣ್ಯದ ಆರೋಗ್ಯ ಹಾಗೂ ಪರಿಸರದ ದೃಷ್ಟಿಯಿಂದ ಅತಿಮುಖ್ಯ. ಹರಿಯಾಣದ ಪಿಂಜಾರ್‌, ರಣಹದ್ದುಗಳ ಸಂರಕ್ಷಣೆಗೆ ಬಹುದೊಡ್ಡ ಕೇಂದ್ರ. ಉತ್ತರ ಪ್ರದೇಶವೂ ಇತ್ತೀಚೆಗೆ ಈ ಬಗ್ಗೆ ಆಸಕ್ತಿ ತಾಳಿದೆ. ಕರ್ನಾಟಕ ಸೇರಿದಂತೆ (ರಾಮದೇವರ ಬೆಟ್ಟ) ಇನ್ನೂ ಏಳು ರಾಜ್ಯಗಳು ರಣಹದ್ದುಗಳ ಸಂರಕ್ಷಣೆಗೆ ಮುಂದಾಗಿವೆ.

ಎಂಟು ಪ್ರಭೇದಗಳಿರುವ ರಣಹದ್ದುಗಳಲ್ಲಿ ಆರು ಪ್ರಭೇದಗಳು ಮಹಾರಾಷ್ಟ್ರದಲ್ಲೇ ಕಂಡುಬರುತ್ತವೆ. ವಿಶೇಷವೆಂದರೆ, ಈ ಪೈಕಿ ಎರಡು ನಾಶಭೀತಿ ಎದುರಿಸುತ್ತಿವೆ. ನಾಲ್ಕು ಅಳಿವಿನಂಚಿಗೆ ತಲುಪುತ್ತಿವೆ ಎಂದು ನಿಸರ್ಗ ಸಂರಕ್ಷಣಾ ಅಂತರರಾಷ್ಟ್ರೀಯ ಒಕ್ಕೂಟ (ಐಯುಸಿಎನ್) ವರದಿ ಮಾಡಿದೆ. ಇಷ್ಟಾಗಿಯೂ ನಮ್ಮಲ್ಲಿ ಒಟ್ಟು ರಣಹದ್ದುಗಳ ಸಂಖ್ಯೆ 19,000 ಮೀರಿಲ್ಲ. ನಮೀಬಿಯದಿಂದ ಎಂಟು ಸಿವಂಗಿಗಳನ್ನು (ಚೀತಾ) ತರಿಸಿಕೊಂಡು ಮಧ್ಯಪ್ರದೇಶದ ಕುನೊ ವನ್ಯಧಾಮಕ್ಕೆ ಇತ್ತೀಚೆಗೆ ಬಿಟ್ಟಿರುವುದು ಅನೇಕ ನಿರೀಕ್ಷೆಗಳನ್ನು ಹುಟ್ಟಿಸಿದೆ. ಅವು ಈ ಆವಾಸಕ್ಕೆ ಎಷ್ಟರಮಟ್ಟಿಗೆ ಹೊಂದಿಕೊಳ್ಳುತ್ತವೆ ಎಂಬುದು ಕುತೂಹಲಕಾರಿ ಸಂಗತಿ. 41,000 ಜೀವಿಪ್ರಭೇದಗಳು ಅಳಿವಿನಂಚಿಗೆ ಬಂದಿವೆ ಎಂಬ ಪಟ್ಟಿಯನ್ನೂ ಇದೇ ಐಯುಸಿಎನ್ ಕೊಟ್ಟಿದೆ. ಸಂರಕ್ಷಣೆ ಎಂಬುದು ಎಂದಿಗೂ ಸವಾಲೇ. ಏಕೆಂದರೆ ಮನುಷ್ಯನೇ ಧರಣಿಪತಿ. ಇಡೀ ಜೀವಿಗೋಳವನ್ನೇ ನಿಯಂತ್ರಿಸುತ್ತಿದ್ದಾನೆ.

ವಸ್ತುಸ್ಥಿತಿ ಹೀಗಿರುವಾಗ, ಜೀವಿವೈವಿಧ್ಯ ಮತ್ತು ಪರಿಸರ ವ್ಯವಸ್ಥೆ ಕುರಿತು ನೀತಿಸಂಹಿತೆ ರೂಪಿಸುವ, ವಿಶ್ವಸಂಸ್ಥೆಯ ಪರಿಸರ ಯೋಜನೆಯಡಿ ಕೆಲಸ ಮಾಡುತ್ತಿರುವ ಒಂದು ಅ‍ಧ್ಯಯನಾಂಗವು (The Intergovernmental Science-Policy Platform on Biodiversity and Ecosystem Services) ಹೊಸ ಆಲೋಚನೆಗಳನ್ನು ಹರಿಯಬಿಟ್ಟು ಜಗತ್ತನ್ನು ಬೆಚ್ಚಿಬೀಳಿಸಿದೆ. ಯೋಜಿತವಾಗಿ ಸಸ್ಯಗಳೂ ಸೇರಿದಂತೆ ವನ್ಯಜೀವಿಗಳನ್ನು ಸಂರಕ್ಷಿಸಿದರೆ ಅವನ್ನು ಯಥೋಚಿತವಾಗಿ ಆಹಾರವಾಗಿ ಏಕೆ ಬಳಸಿ ಕೊಳ್ಳಬಾರದು ಎಂಬ ಪ್ರಶ್ನೆಯನ್ನು ಎತ್ತಿದೆ. ವನ್ಯಜೀವಿ ಗಳನ್ನು ಅವುಗಳ ಆವಾಸದಲ್ಲೇ ಹಾಯಾಗಿ ಬದುಕಲು ಬಿಡುವುದು ಸಂರಕ್ಷಣೆಯ ಮೂಲ ತತ್ವ. ಅವನ್ನು ಆಹಾರಕ್ಕೆಂದು ಬಳಸಿಕೊಂಡರೂ ಅವುಗಳ ಸಂತತಿ ನಾಶವಾಗದಂತೆ ನೋಡಿಕೊಳ್ಳಬೇಕು ಎಂಬ ಷರಾ ಕೂಡ ಈ ಸಂಬಂಧದ ವರದಿಯಲ್ಲಿದೆ. ಇದೆಂಥ ತಿಕ್ಕಲು? ಅಭಿವೃದ್ಧಿಯ ಮಾತೇ ಇದು ಎಂದು ವನ್ಯಜೀವಿ ಸಂರಕ್ಷಕರಷ್ಟೇ ಅಲ್ಲ, ಜಗತ್ತಿನ ಜನಸಾಮಾನ್ಯರೂ ಕೇಳುತ್ತಿದ್ದಾರೆ. ಈ ಯೋಜನೆ ರೂಪಿಸಿದವರ ಮೇಲೆ ಹರಿಹಾಯ್ದಿದ್ದಾರೆ.

ಇಡೀ ಯೋಜನೆಯ ಸಾರಾಂಶವನ್ನು ಈ ವರ್ಷದ ಜುಲೈ 8ರಂದು ಜರ್ಮನಿಯ ಬಾನ್‌ನಲ್ಲಿ ಬಿಡುಗಡೆ ಮಾಡಲಾಯಿತು. ಈ ಯೋಜನೆಯ ಹಿನ್ನೆಲೆಯಲ್ಲಿ 300 ಮಂದಿ ಸಾಮಾಜಿಕ ಕಾರ್ಯಕರ್ತರಿದ್ದಾರೆ, ನೈಸರ್ಗಿಕ ವಿಜ್ಞಾನಿಗಳಿದ್ದಾರೆ. ಜಗತ್ತಿನ ಬೇರೆ ಬೇರೆ ಭಾಗಗಳನ್ನು ಇವರು ಪ್ರತಿನಿಧಿಸುತ್ತಾರೆ. ಇದರ ಸಲುವಾಗಿ ಸ್ಥಳೀಯ ಬುಡಕಟ್ಟುಗಳ ಆಹಾರ ಪದ್ಧತಿ, ಜೀವನ ಕುರಿತಂತೆ 6,200 ವೈಜ್ಞಾನಿಕ ವರದಿಗಳನ್ನು ಪರಿಶೀಲಿಸಿದ್ದಾರೆ. ಇಲ್ಲಿ ವನ್ಯಜೀವಿಗಳನ್ನು ಆಹಾರಕ್ಕಾಗಿ ಸಂರಕ್ಷಿಸುವುದು ಎಂಬ ಪ್ರಶ್ನೆ ಬಂದಾಗ ಧುತ್ತೆಂದು ಕಣ್ಣಮುಂದೆ ಬರುವುದು ಆನೆ, ಹುಲಿ, ಸಿಂಹ, ಕಿರುಬ, ಕರಡಿಯಂತಹ ಪ್ರಾಣಿಗಳು. ಈ ಅಧ್ಯಯನ ತಂಡ ಇವುಗಳ ಬಗ್ಗೆ ಹೆಚ್ಚೇನೂ ಹೇಳಿಲ್ಲ. ಅದು ಬೆರಳು ಮಾಡಿ ತೋರಿಸುತ್ತಿರುವುದು ಬೇರೆಯದೇ ಅಂಶ– ಜಾಗತಿಕ ಮಟ್ಟದಲ್ಲಿ ವಾಣಿಜ್ಯದ ಸರಕಾಗಿರುವ ಮೀನು, ಹಕ್ಕಿಗಳು, ದ್ವಿಚರಿಗಳು, ಕೆಲವು ಸಸ್ಯ ತಳಿಗಳಲ್ಲಿ ಶೇ 50 ಭಾಗ ಫಾರಂಗಳಲ್ಲಿ ಬೆಳೆದಂತಹವು. ಈ ಸತ್ಯ ಜಗತ್ತಿಗೆ ಇನ್ನೂ ತಿಳಿಯಬೇಕಾಗಿದೆ. ಟ್ರೋಫಿಗಳಿಗಾಗಿ ಆನೆಗಳನ್ನು ಕೊಲ್ಲುವ ಚಾಳಿ ಹೆಚ್ಚಾದಾಗ, 2014ರಲ್ಲಿ ಬೊಟ್ಸ್‌ವಾನ ಕಾನೂನಾತ್ಮಕವಾಗಿ ಇದನ್ನು ನಿಷೇಧಿಸಬೇಕಾಯಿತು. ಪರಿಣಾಮವೆಂದರೆ, ಆನೆಗಳ ಸಂತತಿ ಹದ್ದುಮೀರಿತು. ರೈತರ ಬೆಳೆಗಳು ನಾಶವಾಗುತ್ತ ಬಂದವು. ನುರಿತ ಬೇಟೆಗಾರರನ್ನು ಕರೆಸಿ ಹೆಚ್ಚುವರಿ ಆನೆಗಳನ್ನು ಕೊಲ್ಲಲು ಆ ದೇಶವು ಆದೇಶ ನೀಡಿತು. ಸ್ಥಳೀಯರು, ಕೊಂದ ಆನೆಗಳ ರುಚಿ ನೋಡಿದರು.

ತಾಂಜಾನಿಯದಲ್ಲೂ ಸೆರೆಂಗೆಟ್ಟಿ ರಾಷ್ಟ್ರೀಯ ಉದ್ಯಾನದ ಆಚೆಯಲ್ಲಿ ಕಾಡುಕೋಣ, ಜಿರಾಫೆ, ಕಾಡಾನೆಗಳನ್ನು ಬೇಟೆಯಾಡಲು ಅವಕಾಶವಿದೆ. ಆದರೆ ಅಲ್ಲಿ 22 ರಾಷ್ಟ್ರೀಯ ಉದ್ಯಾನಗಳಿವೆ ಎಂಬುದೂ, ಅಲ್ಲಿ ಸಂರಕ್ಷಣೆಗೆ ಬಿಗಿಕ್ರಮ ಕೈಗೊಳ್ಳಲಾಗಿದೆ ಎಂಬುದೂ ಮುಖ್ಯವಾಗುತ್ತವೆ. ಬೇಟೆಗೂ ಅಷ್ಟೇ, ಕೋಟಾ ವ್ಯವಸ್ಥೆ ಇದೆ. ಅದನ್ನು ಮೀರುವಂತಿಲ್ಲ. ಆ ದೇಶದ ನಿವ್ವಳ ಆಂತರಿಕ ಉತ್ಪನ್ನದ ಶೇ 17 ಭಾಗ ಪ್ರವಾಸದಿಂದ, ವಿಶೇಷವಾಗಿ ಶಿಕಾರಿಯ ಆಕರ್ಷಣೆಯಿಂದ ಬರುತ್ತಿದೆ. ಆದರೆ ‘ಬುಷ್‌ಮೀಟ್‌’ ಎನ್ನುವ ಒಂದು ಐಟಂ ಇದೆ. ವನ್ಯಜೀವಿಗಳನ್ನು ಕೊಂದು ತಿನ್ನಲು ಇದರಡಿಯಲ್ಲಿ ಅವಕಾಶವಿದೆ. ಈ ಪೈಕಿ ಕಪಿಗಳು ಮತ್ತು ಚೀಲವಿರುವ ಸ್ತನಿಗಳೇ ಹೆಚ್ಚು. ಪರಿಣಾಮ, 2016ರ ಹೊತ್ತಿಗೆ ಇಡೀ ಆಫ್ರಿಕಾದ 301 ಪ್ರಭೇದದ ನೆಲವಾಸಿ ಸ್ತನಿಗಳು ಅಳಿವಿನಂಚಿಗೆ ಬಂದವು, ಜೊತೆಗೆ ಜನರಿಗೆ ಎಬೊಲಾ ವೈರಸ್‌ಗಳನ್ನು ಛೂಬಿಟ್ಟವು. ಇದಕ್ಕೆ ತದ್ವಿರುದ್ಧವಾಗಿ ಸಮುದಾಯಕ್ಕೆ ವನ್ಯಜೀವಿಗಳ ಸಂರಕ್ಷಣೆಗೆಂದು ಮುಕ್ತ ಅವಕಾಶ ಕೊಟ್ಟಿದ್ದರಿಂದ ನಮೀಬಿಯದಲ್ಲಿ ಆನೆಗಳ ಸಂಖ್ಯೆ ಹೆಚ್ಚಿದೆ. 1995ರಲ್ಲಿ ಅಲ್ಲಿ 7,600 ಆನೆಗಳಿದ್ದವು. ಈಗ ಅವುಗಳ ಸಂಖ್ಯೆ 23,600ಕ್ಕೆ ತಲುಪಿದೆ ಎಂಬುದು ಸಕಾರಾತ್ಮಕ ಫಲಿತಾಂಶ.

ಆಹಾರಕ್ಕೆಂದೇ ವನ್ಯಜೀವಿಗಳನ್ನು ಸಂರಕ್ಷಿಸಲು ಭಾರತದಲ್ಲಿ ಹೆಜ್ಜೆ ಇಟ್ಟರೆ ಅದು ಯಾವ ಸ್ಥಿತಿಗೆ ತಲುಪುತ್ತದೆ ಎಂಬುದನ್ನು ಊಹಿಸಲಾಗದು. ಲಂಗುಲಗಾಮಿಲ್ಲದೆ ಖಾಸಗಿ ವನ್ಯಜೀವಿ ಸಂರಕ್ಷಣಾ ಕೇಂದ್ರಗಳು ತಲೆ ಎತ್ತುತ್ತವೆ. ಅವುಗಳ ಮೂಲಕ ವೈರಸ್‌ಗಳ ದಾಳಿಯೂ ಹೆಚ್ಚುತ್ತದೆ ಎನ್ನುವುದು ಸಕಾರಣ ಊಹೆ. ಚೀನಾದಲ್ಲಿ ವನ್ಯ ಬಾವಲಿಗಳ ಮೂಲಕ ಕೊರೊನಾ ವೈರಸ್‌ ದಾಳಿ ಮಾಡಿ ಜಗತ್ತು ಈಗಲೂ ಅದರ ಹಿಡಿತದಿಂದ ಪಾರಾಗಲು ಒದ್ದಾಡುತ್ತಿರುವುದು ಕಣ್ಣಮುಂದೆಯೇ ಇದೆ. ವನ್ಯಜೀವಿ ಸಂರಕ್ಷಣಾ ನೀತಿ ಭಾರತದಲ್ಲಿ ಬಿಗಿಯಾಗೇ ಇದೆ. ಬೇರೂರಿದೆ. ಆದರೆ 2006ರ ಅರಣ್ಯನೀತಿಯು ಬುಡಕಟ್ಟುಗಳ ಆಹಾರ ಪದ್ಧತಿಗೆ ಅಡ್ಡಬರುತ್ತಿದೆ ಎಂಬ ಕಾರಣ ಮುಂದೊಡ್ಡಿ ಕೆಲವು ಪ್ರದೇಶಗಳ ವ್ಯಾಪ್ತಿಗೆ ಅನ್ವಯವಾಗುವಂತೆ ಅರಣ್ಯ ಇಲಾಖೆಯು ನಿಯಮಗಳನ್ನು ಸಡಿಲಿಸಿದೆ. ಹೀಗಿದ್ದರೂ

ಡಾ. ಟಿ.ಆರ್.‌ಅನಂತರಾಮು
ಡಾ. ಟಿ.ಆರ್.‌ಅನಂತರಾಮು

ಕೆಲವೊಮ್ಮೆ ಅತಿರೇಕದ ಪ್ರಸಂಗಗಳಾಗಿರುವುದೂ ಉಂಟು. ರಾಜಸ್ಥಾನದ ಬಿಲ್‌ ಬುಡಕಟ್ಟಿನಲ್ಲಿ ನವದಂಪತಿಗೆ ನರಿ ಮಾಂಸ ಕೊಡುವ ಪದ್ಧತಿ ಇದೆ. ಕೊನೆಗೆ ನರಿಗಳ ಸಂಖ್ಯೆ ಕ್ಷೀಣಿಸುತ್ತ ಬಂದಾಗ, ಬೇಟೆಯನ್ನು ನಿಷೇಧಿಸಬೇಕಾಯಿತು. ಬುಡಕಟ್ಟು ಜನರ ಪರ ಮಾತನಾಡುವವರು ‘ವನ್ಯಜೀವಿಗಳನ್ನು ಆಹಾರಕ್ಕಾಗಿ ಬಳಸದಿದ್ದರೆ, ಆ ಜನರಿಗೆ ಪ್ರೋಟೀನ್‌ ಎಲ್ಲಿ ಸಿಕ್ಕಬೇಕು? ಅವರ ಆಹಾರ ಪದ್ಧತಿಯನ್ನೇ ಪ್ರಶ್ನಿಸಿದರೆ ಅವರು ಬದುಕುವ ಬಗೆ ಹೇಗೆ’ ಎಂದು ಪ್ರಶ್ನಿಸುತ್ತಿದ್ದಾರೆ.

ಇದು ಏನೇ ಇರಲಿ, ಸದ್ಯ ಜೀವಿವೈವಿಧ್ಯ ಮತ್ತು ಪರಿಸರ ವ್ಯವಸ್ಥೆಯ ನೀತಿಸಂಹಿತೆ ರೂಪಿಸುವ ಅಂಗ ಈಗ ಸಾರಾಂಶವನ್ನಷ್ಟೇ ಬಿಡುಗಡೆ ಮಾಡಿದೆ. ಸದ್ಯದಲ್ಲಿ ಸಂಪೂರ್ಣ ವರದಿ ಬಿಡುಗಡೆಯಾಗಬಹುದು. ಆಗಲೂ ಅದು ಎಂದಿಗಿಂತ ಹೆಚ್ಚು ಚರ್ಚೆಗೊಳಗಾಗಬಹುದು. ಇಂಥ ಕಠೋರ ಸಲಹೆಯನ್ನು ಭಾರತ ಒಪ್ಪಲಾರದು ಎಂದು ಪ್ರಾಣಿ ದಯಾ ಸಂಘಗಳು ಆಶಾಭಾವ ತಳೆದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT