12ನೇ ಶತಮಾನದ ಬಸವಾದಿಶರಣರ ಅನುಭವ ಮಂಟಪದಲ್ಲಿ ವಚನಗಳಿಂದ ಶರಣರ ವಚನಕ್ರಾಂತಿಯಲ್ಲಿ ತಮ್ಮದೇ ಆದ ಜ್ಞಾನವಿತ್ತವರು ಅಂಬಿಗರ ಚೌಡಯ್ಯನವರು. ಬಸವ ಬಾನಂಗಳದಲ್ಲಿ ಶಿವಶರಣರೆಂಬ ಅಮೂಲ್ಯ ನಕ್ಷತ್ರಗಳು ಮಿನುಗಿದವು. ಈ ನಕ್ಷತ್ರಗಳಲ್ಲಿ ಧ್ರುವತಾರೆಯಂತೆ ಮಿನುಗಿದವರು ಚೌಡಯ್ಯ. ನ್ಯಾಯನಿಷ್ಠುರಿ, ಖಂಡಿತವಾದಿ ಎನಿಸಿದ ಅವರ ಜಯಂತಿಯನ್ನು ಜ. 21ರಂದು ಆಚರಿಸಲಾಗುತ್ತದೆ.

"ವಸ್ತುವ ಕಾಬರೆಲ್ಲರು

ಆತ್ಮ ಹಲವು ಬಗೆ ಎಂದಡೆ, ಹಲವಾದುದುಂಟೆ?

ಒಂದು ಕುಂಭದ ನೀರು ಹಲವು ರಂಧ್ರಗಳಲ್ಲಿಳಿವುದು.

ಅದು ಕುಂಭದ ಭೇದವೋರಿ ಜಲದ ಭೇದವೋ?

ಈ ಉಭಯ ಭೇದವ ತಿಳಿದಲ್ಲಿಆತ್ಮನೊಂದೆಯೆಂದನಂಬಿಗ ಚೌಡಯ್ಯ."

ಅಂಬಿಗರ ಚೌಡಯ್ಯರ ಕಾಲ ಕ್ರಿ.ಶ.ಸುಮಾರು 1160. ಇವರ ಜನ್ಮ ಸ್ಥಳ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಚೌಡಾದಾನಪುರ.

ಇವರು ಸುಮಾರು 330 ವಚನಗಳನ್ನು ರಚಿಸಿದ್ದಾರೆ. ಇವರು ತಮ್ಮ ವಚನಗಳಲ್ಲಿ ಯಾವ ಇಷ್ಟದೈವಕ್ಕೆ ಋಣಿಯಾಗದೆ ತನ್ನ ಹೆಸರನ್ನೇ ವಚನಗಳ ಅಂಕಿತವಾಗಿಯೂ ಬಳಸಿಕೊಂಡು ದಿಟ್ಟತನದ ಎದೆಗಾರಿಕೆಯನ್ನು ತೋರಿಸಿದ್ದಾರೆ.

ಅಂಬಿಗರ ಚೌಡಯ್ಯ ಸಾಮಾನ್ಯ ಅಂಬಿಗನಲ್ಲ, ತಡೆಯಿಲ್ಲದ ಮಹಾನದಿಯ ಕಡೆ ಗಾಣವೆ ಹಾಯಿಸಿ ನುಡಿವಿಲ್ಲದ ನಿನೇನು ಗ್ರಾಮದಲ್ಲಿರಿಸುವನಂತೆ ಅಬ್ಬಾ ಅದೆಂಥ ಅಂಬಿಗನನ ಬಡಲಿಲ್ಲದ ಅಂಬಿಗ ಕಡೆ ಗಾಣಿಸುವ ಅಂಬಿಗ ಕಾಸಿನ ಆಸೆಯಿಲ್ಲದ ಅಂಬಿಗ ಆತ್ಮ ವಿಶ್ವಾಸದ ಅಂಬಿಗ ಆಧ್ಯಾತ್ಮ ಸಂಪದದ ಅಂಬಿಗ ಅನುಭವಿ ಅಂಬಿಗ.

ಅಂಬಿಗ ಎಂದರೆ ನೀರಿನಲ್ಲಿ ವ್ಯವಹರಿಸುವವನು, ತಾನೆ ದೋಣಿ ಮುಂತಾದವನನ್ನು ನಡೆಸುವವನು ಎಂದರ್ಥ. ಸಂಸಾರ ಸಾಗರವನ್ನು ದಾಟಿ ಮೋಕ್ಷ ಸಾಗರದಲ್ಲಿ ತನ್ನ ದೋಣಿಯನ್ನು ನಡೆಸಿದ ಚಂದಗೆಟ್ಟವರೆಲ್ಲ ಬಂದೇರಿ ದೋಣಿಯನ್ನು ಶಿವನೊಂದೆ ಠಾವಿಗೊಯ್ದಿಳುಹುವೆ ಎಂದು ಎದೆ ತಟ್ಟಿ ಹೇಳಿಕೊಂಡು ತಾನು ತನ್ನ ದೋಣಿ ಮತ್ತು ದೋಣಿಯಲ್ಲಿದ್ದ ಭಕ್ತರನ್ನೆಲ್ಲಾ ಶಿವ ಪಥದತ್ತ ಹಾಯಿಸಿದ ಮಹಾ ನಿಸ್ಸೀಮವಾದ ಕಾಯಕವನ್ನು ಕೈಕೊಂಡವನು ಅಂಬಿಗನ ಚೌಡಯ್ಯ.

ಹಾವೇರಿ ಜಿಲ್ಲೆಯ ರಾಣೆಬೆನ್ನೂರ ತಾಲೂಕಿನ ಶಿವಪುರದಲ್ಲಿ (ಇಂದಿನ ಚೌಡದಾನಪುರ) ಜನಿಸಿದ ಈ ಮಹಾಶಿವಶರಣರಿಗೆ ಉದ್ದಾಲಕರೆಂಬ ಗುರುಗಳು. ‘ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ’ ಎಂಬ ವಚನಕ್ಕೆ ತಕ್ಕಂತೆ ಇರುವ ಧರ್ಮಪತ್ನಿ ಮತ್ತು ಪುರವಂತ ಎಂಬ ಪುತ್ರ. ಸದ್ಗುರುವಿನ ಕೃಪಾಕಟಾಕ್ಷದಿಂದ ಶ್ರೇಷ್ಠ ತತ್ವಜ್ಞಾನಿಯಾದ ಇವರು ವಚನಗಳನ್ನು ರಚಿಸಿ ಶಿವಶರಣರ ಪಂಕ್ತಿಯಲ್ಲಿ ಅಗ್ರಸ್ಥಾನಕ್ಕೇರಿದರು.

ಚೌಡದಾನಪುರದಲ್ಲಿ ಪೂರ್ವ ಪಶ್ಚಿಮವಾಹಿನಿಯಾಗಿ ಹರಿಯುತ್ತಿರುವ ತುಂಗಭದ್ರಾನದಿಯಲ್ಲಿ ದೋಣಿ ಮೂಲಕ ನದಿ ದಾಟಿಸುವ ಕಾಯಕ ಮಾಡುತ್ತ ವಚನಗಳನ್ನು ರಚಿಸಿದ್ದಾರೆ. ಗುರುವಿನ ಘನಕೃಪೆಗೆ ಪಾತ್ರರಾಗಿ ಅವರ ಮೂಲಕ ಲಿಂಗಾಂಗ ಸಾಮರಸ್ಯವನ್ನರಿತು ಅಪಾರ ಪಾಂಡಿತ್ಯವನ್ನು ಗಳಿಸಿದರು.ಕಲ್ಯಾಣದ ಕೀರ್ತಿಯನ್ನು ಕೇಳಿ ಅನುಭವಮಂಟಪಕ್ಕೆ ಬಂದ ಈ ಶರಣದಂಪತಿಯನ್ನು ಶರಣ ಪ್ರಮಥರೆಲ್ಲ ಆದರದಿಂದ ಬರಮಾಡಿಕೊಂಡರಂತೆ. ಬಸವಪ್ರಭುವನ್ನು ಕಂಡು ಆನಂದಪರವಶರಾಗಿ ಭಕ್ತಿಯಿಂದ ಕೈ ಮುಗಿದ ಚೌಡಯ್ಯನವರು;

‘ಬಸವಣ್ಣನೇ ಭಕ್ತ ಪ್ರಭುದೇವರೇ ಜಂಗಮರು

ಇಂತೆಂಬ ಭೇದವಿಲ್ಲಯ್ಯ, ಅರಿವೇ ಗುರು,

ಗುರುವೇ ಪರಶಿವನು ಇದು ತಿಳಿದವನೇ

ಪರಂಜ್ಯೋತಿಯೆಂದ ಅಂಬಿಗರ ಚೌಡಯ್ಯ’

ಎಂಬ ವಚನದ ಮೂಲಕ ಮನಸಾರೆ ಹೊಗಳಿದ್ದಾರೆ. ಶಿವಶರಣರ ಸಂಗದಲ್ಲಿ ಕಾಲಕಳೆದು ಪರಿಪಕ್ವರಾದ ಇವರು ರಚಿಸಿದ ವಚನಗಳು ಹಸಿಗೋಡೆಯಲ್ಲಿ ಹರಳು ಎಸೆದಂತಿವೆ. ಇವರ ವಚನಗಳನ್ನು ಕಂಡ ಕವಿ ಕಾವ್ಯಾನಂದರು ‘ನಿಜದ ನಗಾರಿ ನಿರ್ಭಯತೆಯ ಭೇರಿ ಈ ಅಂಬಿಗರ ಚೌಡಯ್ಯ’ ಎಂದಿದ್ದಾರೆ. ಮುಪ್ಪಿನ ಷಡಕ್ಷರಿಯವರು ತಮ್ಮ ಸುಬೋಧ ಸಾಗರದಲ್ಲಿ ‘ಅಂಬಿಗರ ಚೌಡಯ್ಯನ ಮುಂಬಾಗಿಲನ್ನು ಕಾಯುವ ನಂಬಿಗೆಯ ಸೇವಕರು ಕುಂಭಿನಿಯೊಳಗಿನ್ನು ಸರಿಯದಾರು?’ ಎಂದು ಹಾಡಿ ಹರಸಿದ್ದಾರೆ. ಘನಲಿಂಗದೇವನು ‘ಡೋಹರ ಕಕ್ಕಯ್ಯ, ಮಾದಾರ ಚೆನ್ನಯ್ಯ, ಅಂಬಿಗರ ಚೌಡಯ್ಯಯಿಂತಿಪ್ಪ ಶಿವಶರಣರ ಮನೆ ಬಾಗಿಲನಿಕ್ಕುವ ಸೊಣಗನ ಮಾಡಿ ಎನ್ನಿರಿಸಯ್ಯ ಎಂದು ತಮ್ಮ ವಚನವೊಂದರಲ್ಲಿ ಹೇಳಿರುವುದೇ ಇದಕ್ಕೆ ನಿದರ್ಶನವಾಗಿದೆ.

ಮಹಾಕವಿ ಷಡಕ್ಷರಿಯವರು ತಮ್ಮ ‘ಬಸವರಾಜ ವಿಜಯ’ದಲ್ಲಿ ‘ನಿಡುಗುಡಿಮಾರನಂಬಿಗರ ಚೌಡಯ್ಯ’ ಎಂದು ಸ್ಮರಿಸಿದ್ದರೆ, ಮಹಾಲಿಂಗ ವಿರಚಿತ ಗುರುಬೋಧಾಮೃತದ ‘ಕುಂಬಾರ ಗುಂಡಯ್ಯ, ಅಂಬಿಗರ ಚೌಡಯ್ಯ, ಕೆಂಭಾವಿಯೊಳಗೆ ಮೆರೆವ ಬೋಗಣ್ಣನಿಗೆ ಸಂಭ್ರಮದೊಳೆರಗಿ ನಮಿಸುವೆ’ ಎಂಬ ಪದಗಳು ಹೃದಯಸ್ಪರ್ಶಿಯಾಗಿವೆ.

ಸ್ಥಿತಪ್ರಜ್ಞರಾದ ಅವರು ಕೊನೆಯಲ್ಲಿ ಚೌಡದಾನಪುರದ ನದಿಯ ದಡದಲ್ಲಿ ಸಮಾಧಿಸ್ಥರಾದರೆಂದು ತಿಳಿದುಬರುತ್ತದೆ. ಆದ್ದರಿಂದ ಈ ನದಿದಡದಲ್ಲಿರುವ ದಿಬ್ಬದ ಮೇಲಿರುವ ಸಮಾಧಿಯನ್ನು ‘ಅಂಬಿಗರ ಚೌಡಯ್ಯನವರ ಸಮಾಧಿ’ ಎಂದು ಗುರುತಿಸಲಾಗಿದೆ. ಪ್ರತಿವರ್ಷ ಅಂಬಿಗರ ಚೌಡಯ್ಯನವರ ಜಯಂತಿಯ ನಿಮಿತ್ತ ಸಂಕ್ರಮಣದ ಪರ್ವ ಕಾಲದಲ್ಲಿ ಬಹು ಸಡಗರ ಸಂಭ್ರಮದಿಂದ ಇಲ್ಲಿ ಜಾತ್ರಾಮಹೋತ್ಸವವು ಜರಗುತ್ತಲಿತ್ತು. ಈಗ ಪ್ರತಿವರ್ಷ ಜನವರಿ 21ರಂದು ಅಂಬಿಗರ ಚೌಡಯ್ಯನವರ ಜಯಂತಿಯನ್ನು ಆಚರಿಸಲಾಗುತ್ತದೆ.

ಲೇಖಕರು: ಬಸವಾಕ್ಷ ಸ್ವಾಮಿಗಳು, ಶ್ರೀ ವಿರಕ್ತ ಮಠ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.