ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಶ್ಲೇಷಣೆ: ಹೆಂಗಳೆಯರು ಮತ್ತು ರಾಜಕಾರಣ

Published : 28 ಏಪ್ರಿಲ್ 2023, 20:35 IST
Last Updated : 28 ಏಪ್ರಿಲ್ 2023, 20:35 IST
ಫಾಲೋ ಮಾಡಿ
Comments

‘ಅಷ್ಟಕ್ಕೂ ಅವಳು ಯಾರೊಡನೆಯೂ ಓಡಿಹೋಗದೆ, ಕಾಲುವೆಗೆ ಬಿದ್ದು ಸಾಯದೆ, ಮನೆಗೂ ಬಾರದೆ ಏನಾದಳಂತೆ? ಹೀಗೆ ಮಾಯವಾಗಿಬಿಡುತ್ತಿರುವ ಮಕ್ಕಳ ಬಗ್ಗೆ ಒಂದು ನಾಲ್ಕು ಜನ ಹೆಂಗಸರೋ ನಾಲ್ಕು ಜನ ಗಂಡಸರೋ ಕುಳಿತುಕೊಂಡು ಟಿ.ವಿ ಯಲ್ಲಿ ಮಾತನಾಡುವುದಿಲ್ಲವೇಕೆ? ... ನನ್ನ ಮಗಳಿಗಾಗಿ ನಾನೇ ಮೋಂಬತ್ತಿ ಹಚ್ಚುತ್ತೇನೆ ಎಂದು ಒಂದು ದಿನ ಹೊಸ್ತಿಲಾಚೆ ಹದಿನೇಳು ಮೋಂಬತ್ತಿ ಹಚ್ಚಿದಳು ಮಾಲಚ್ಮಿ’. ಪಿ.ಸತ್ಯವತಿಯವರ ‘ಹೆಸರಿಲ್ಲದ ಹುಡುಗಿ’ (‘ದಮಯಂತಿಯ ಮಗಳು’, ಅನು: ಅಜಯ ವರ್ಮ ಅಲ್ಲೂರಿ) ಕತೆಯಲ್ಲಿನ ತಾಯಿಯ ಅಸಹಾಯಕತೆಯ ಮೂಲದಲ್ಲಿ ಹೊಣೆಗಾರಿಕೆ ಮರೆತ ಪ್ರಜೆಗಳೂ ಪ್ರಭುಗಳೂ ಇದ್ದಾರೆ.

ಪ್ರತಿವರ್ಷವೂ ಅಸಂಖ್ಯ ಹೆಣ್ಣುಮಕ್ಕಳು ಕಾಣೆಯಾಗುತ್ತಲೇ ಇರುತ್ತಾರೆ. ಇದನ್ನು ಯಾರೂ

ಗಮನಿಸುವುದಿಲ್ಲ. ಯಾರಿಗೂ ಆ ಬಗ್ಗೆ ಅಂತಹ ಕಾಳಜಿ ಇಲ್ಲ. ಯಾಕೆಂದರೆ ಆ ಯುವತಿಯರು ಹೆಚ್ಚಾಗಿ ಬಡವರೂ ದುರ್ಬಲ ವರ್ಗದವರೂ ಆಗಿರುತ್ತಾರೆ. ಹಿಂದಿನ ಕೆಲವು ತಿಂಗಳುಗಳಿಂದ ಹೊರಬೀಳುತ್ತಿರುವ ಸುದ್ದಿಗಳನ್ನು ನೋಡಿದಾಗ ಗಾಬರಿಯಾಗುತ್ತದೆ. ಅದೊಂದು ವಿಷಯವೇ ಅಲ್ಲ ಎಂಬಂತಿರುವ ನಾಯಕರು ಹಾಗೂ ಸಾಮಾನ್ಯರ ನಡವಳಿಕೆಗಳು ಇನ್ನೂ ಗಾಬರಿ ಹುಟ್ಟಿಸುತ್ತವೆ. ಉನ್ನಾವೊ ಅತ್ಯಾಚಾರ ಸಂತ್ರಸ್ತೆಯ ಗುಡಿಸಲಿಗೆ ಬೆಂಕಿ ಹಾಕಿ ಎರಡು ಹಸುಳೆಗಳನ್ನು ಅವಳ ಎದುರಿಗೇ ಬೆಂಕಿಗೆ ಎಸೆಯುವ ಕ್ರೌರ್ಯದ ಕುಣಿತವು ಭಾರತೀಯರ ಮನಸ್ಸುಗಳನ್ನು ಕಲಕುವುದಿಲ್ಲ ಎಂದಾದರೆ, ಆ ಗ್ಯಾಂಗ್‌ರೇಪಿಸ್ಟ್‌ಗಳಿಗೆ ಜಾಮೀನು ಸಿಕ್ಕ ಬಗ್ಗೆ ಯಾರಿಗೂ ಖೇದ ಉಂಟಾಗುವುದಿಲ್ಲ ಎಂದಾದರೆ, ಇನ್ನು ಯಾವ ಮಾತಿನಿಂದ ಏನು ಪ್ರಯೋಜನ?

ಬಿಲ್ಕಿಸ್‍ ಬಾನು ಎದುರಿಗೇ ಅವಳ ಮಗುವನ್ನು ಕಲ್ಲಿನಿಂದ ಜಜ್ಜಿ ಕೊಂದು, ಅವಳ ಗ್ಯಾಂಗ್‌ರೇಪ್ ಮಾಡಿದವರನ್ನು ‘ಸನ್ನಡತೆ’ ಆಧಾರದಲ್ಲಿ ಬಿಡುಗಡೆ ಮಾಡಿದ್ದೂ ಅಲ್ಲದೆ, ಮಹಿಳೆಯರಿಂದ ಅವರ ಹಣೆಗೆ ತಿಲಕ ಇಡಿಸಿ, ಆರತಿ ಎತ್ತಿಸಿ ಅವರನ್ನು ಸ್ವಾಗತಿಸಿದ ದೃಶ್ಯವನ್ನೇ ಅರಗಿಸಿಕೊಳ್ಳಲಾಗದಿರುವ ಸನ್ನಿವೇಶದಲ್ಲಿ, ಈಗ ಮತ್ತೆ ಇಂತಹದೇ ದೃಶ್ಯಗಳು ಪುನರಾವರ್ತನೆಯಾಗುವುದು, ಮತ್ತದನ್ನು ಮೌನವಾಗಿ ಪ್ರೋತ್ಸಾಹಿಸುವುದನ್ನು ಹೇಗೆ ಅರ್ಥೈಸಬೇಕು?

ಸಂತ್ರಸ್ತರಲ್ಲಿ ಒಬ್ಬಾಕೆ ಮುಸ್ಲಿಂ, ಇನ್ನೊಬ್ಬಾಕೆ ದಲಿತಳಾಗಿರುವುದರಿಂದ ಅದೆಲ್ಲಾ ಸ್ವೀಕೃತವಾಗಿ ಬಿಡುತ್ತದೆಯೇ? ದೇಶದಲ್ಲಿ ಬಹಳ ಸುದ್ದಿಯಾದ ಇನ್ನೆರಡು ಪ್ರಕರಣಗಳ ಜೊತೆಗೆ ಇವನ್ನು ಇಟ್ಟು ನೋಡಿದಾಗ, ಕಟು ವಾಸ್ತವದ ಸಂಗತಿಗಳು ಬಯಲಾಗುತ್ತವೆ. ನಿರ್ಭಯಾ ಪ್ರಕರಣದಲ್ಲಿ ದೇಶದಾದ್ಯಂತ ಪ್ರತಿಭಟನೆ ನಡೆದು ಅಪರಾಧಿಗಳಿಗೆ ಶಿಕ್ಷೆ ಆಯಿತು. ಅಪರಾಧಿಗಳಿಗೆ ಪ್ರಬಲ ರಾಜಕೀಯ ಹಿನ್ನೆಲೆ ಇರಲಿಲ್ಲ. ಹೈದರಾಬಾದ್ ಪ್ರಕರಣದಲ್ಲಿಯೂ ಪ್ರತಿಭಟನೆ ಗಳು ನಡೆದವು. ಎನ್‌ಕೌಂಟರ್‌ನಲ್ಲಿ ಅಪರಾಧಿಗಳ ಸಾವು ಆಯಿತು. ಇವರಿಗೂ ಪ್ರಬಲ ರಾಜಕೀಯ ಹಿನ್ನೆಲೆ ಇರಲಿಲ್ಲ. ಉನ್ನಾವ್‌ ಮತ್ತು ಕಟುವಾದಲ್ಲಿ ನಡೆದ ಗ್ಯಾಂಗ್‌ರೇಪ್‍ಗಳನ್ನು ಮುಚ್ಚಿಡಲು ಪ್ರಯತ್ನಿಸಲಾಯಿತು.ಎರಡೂ ಪ್ರಕರಣಗಳಲ್ಲಿ ಅಪರಾಧಿಗಳಿಗೆ ಪ್ರಬಲ ರಾಜಕೀಯ ಹಿನ್ನೆಲೆ ಇದೆ.

ಉನ್ನಾವ್‌ ಪ್ರಕರಣದಲ್ಲಿ ಆರೋಪಿಗಳು ಕೇಸು ವಾಪಸ್‌ ತೆಗೆದುಕೊಳ್ಳುವಂತೆ ಸಂತ್ರಸ್ತೆಯನ್ನು ಬೆದರಿಸಿದರು. ಒಪ್ಪದಿದ್ದಾಗ ಆಕೆಯ ಶೆಡ್‍ಗೆ ಬೆಂಕಿ ಹಚ್ಚಿ, ಅವಳ ಮಗು ಹಾಗೂ ತಂಗಿ ಸೇರಿದಂತೆ ಎರಡು ಶಿಶುಗಳನ್ನು ಬೆಂಕಿಗೆ ಎಸೆಯಲಾಯಿತು. ಆದರೆ ಈ ಬಡ, ದಲಿತಳು, ಮುಸ್ಲಿಮಳ ಪರವಾಗಿ ದೇಶದಾದ್ಯಂತ

ಪ್ರತಿಭಟನೆಗಳು ಆಗಲೇ ಇಲ್ಲ. ವಾಟ್ಸ್‌ಆ್ಯಪ್ ಗ್ರೂಪ್‍ಗಳು ಮೌನವಾಗಿದ್ದವು. ಇವರು ಭಾರತೀಯರೆಂದಾಗಲೀ ಮನುಷ್ಯರೆಂದಾಗಲೀ ಮಹಿಳೆಯರೆಂದಾಗಲೀ ಇದನ್ನು ಹೀಗೇ ಬಿಟ್ಟರೆ ಅಪರಾಧಿಗಳಿಗೆ ಕುಮ್ಮಕ್ಕು ಕೊಟ್ಟಂತಾ ಗುತ್ತದೆ ಎಂದಾಗಲೀ ಭಾರತೀಯರಿಗೆ ಅನ್ನಿಸದೇ ಇರುವುದೇಕೆ?

ಬೆರಳೆಣಿಕೆಯಲ್ಲಿ ಬಿಟ್ಟರೆ, ನಮ್ಮ ಮಹಿಳಾ ಸಂಸದರು, ಆಯಾ ರಾಜ್ಯಗಳ ಮಹಿಳಾ ರಾಜಕಾರಣಿಗಳು ಈ ಬಗ್ಗೆ ತೀವ್ರವಾಗಿ ಪ್ರತಿರೋಧ ತೋರಲಿಲ್ಲ. ಯಾಕೆ? ನಮ್ಮಲ್ಲಿ ರಾಜಕೀಯ ಪ್ರಜ್ಞೆ ಬಹಳ ಕಡಿಮೆ ಇರುವುದನ್ನು ಇದು ತೋರಿಸುತ್ತದೆ. ಈ ಕಾರಣದಿಂದ, ರಾಜಕೀಯದಲ್ಲಿ ಮಹಿಳಾ ಪ್ರಾತಿನಿಧ್ಯ ಹೆಚ್ಚಾಗಬೇಕಾದ ಅವಶ್ಯಕತೆ ಇದೆ. ಈ ಮಾತುಗಳು ವೈರುಧ್ಯವೆನಿಸಬಹುದು. ಮಹಿಳಾ ಪ್ರಾತಿ ನಿಧ್ಯ ಹೆಚ್ಚಾಗುವುದೆಂದರೆ ಅಧಿಕಾರಕ್ಕಾಗಿ ಹೆಂಗಸರೂ ಹಪಹಪಿ ತೋರುವುದು ಎಂಬ ತಪ್ಪು ಅಭಿಪ್ರಾಯವೂ ಬರಬಹುದು. ಇದು ಅಷ್ಟು ಸರಳ ಸಂಗತಿಯಲ್ಲ.

ಮಹಿಳೆಯ ಮೇಲಿನ ದೌರ್ಜನ್ಯ ಕಡಿಮೆಯಾಗಬೇಕೆಂದರೆ ಮೊದಲ ಹೆಜ್ಜೆಯಾಗಿ ಈ ಪ್ರಾತಿನಿಧ್ಯದ ಅವಶ್ಯಕತೆ ಇದೆ. ಆದರೆ ಮುಂದುವರಿದ ಹಂತದಲ್ಲಿ ಅತಿ ಮುಖ್ಯವಾಗಿ ಬೇಕಿರುವುದು ಎಲ್ಲಾ ರೀತಿಯ ದೌರ್ಜನ್ಯ ಗಳನ್ನು ವಿರೋಧಿಸಬೇಕೆಂಬ ಜಾಗೃತಿ. ಒಂದೆಡೆ, ಜೇನಿನಂತಹ ಮಾತುಗಳನ್ನು ಹೆಣ್ಣುಮಕ್ಕಳ ಬಗೆಗೆ ಹೇಳುತ್ತಾ, ಇನ್ನೊಂದೆಡೆ, ಇಂತಹ ಪೈಶಾಚಿಕ ಕೃತ್ಯಗಳಿಗೆ ಮೂಕರೂ ಕಿವುಡರೂ ಕುರುಡರೂ ಆಗುವವರು ನಾಯಕರಿಂದ ಸಾಮಾನ್ಯರವರೆಗೆ ತುಂಬಿ ತುಳುಕುತ್ತಿದ್ದಾರೆ.

ಬೆರಳೆಣಿಕೆಯ ಮಹಿಳಾ ಪ್ರತಿನಿಧಿಗಳು ಒಂದೋ ತಾವು ಜೈವಿಕವಾಗಿ ಹೆಂಗಸರಾದರೂ ಮಾನಸಿಕವಾಗಿ ಗಂಡಾಳಿಕೆಯನ್ನು ಬೆಂಬಲಿಸುವವರಾಗಿರುತ್ತಾರೆ. ಇಲ್ಲವೇ ರಾಜಕಾರಣದಲ್ಲಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಈ ನಾಯಕರ ಬಾಲಂಗೋಚಿಗಳಾಗಿ ಬಾಯಿಮುಚ್ಚಿ ಕೊಂಡಿರುತ್ತಾರೆ. ಇದರೊಂದಿಗೆ ಮಹಿಳೆಯರಿಗೆ ಬಲಿಷ್ಠವಾದ ಆರ್ಥಿಕ, ಸಾಮಾಜಿಕ, ರಾಜಕೀಯ ನೆಲೆ ಇಲ್ಲದಿರುವುದೂ ಅವರು ಅಸಹಾಯಕರಾಗಲು ಕಾರಣ ವಾಗಿರುತ್ತದೆ. ಅವರು ದಿಟ್ಟವಾಗಿ ಮಾತಾಡುವಂತಾಗ ಬೇಕೆಂದರೆ, ಶೇ 50ರಷ್ಟು ರಾಜಕೀಯ ಮೀಸಲಾತಿ ಬರುವುದು ಅನಿವಾರ್ಯ.

ಕೆಲವನ್ನು ಶಾಸನದ ಮೂಲಕವೇ ಅಭ್ಯಾಸ ಮಾಡಿಸಬೇಕು ಮತ್ತದು ಪ್ರಾಯೋಗಿಕವಾಗಿ ಯಶಸ್ಸನ್ನೂ ಪಡೆಯುತ್ತದೆ. ಇದು ಬರೀ ಕನಸಿನ ಮಾತಲ್ಲ. ಇದು ನನಸಾದ ಒಂದು ಉದಾಹರಣೆಯನ್ನು ನಿಮ್ಮ ಮುಂದಿಡ ಬಯಸುತ್ತೇನೆ. ‘ಗಂಡ ಹೆಂಡತಿ ಇಬ್ಬರೂ ವೈದ್ಯರು. ಬೆಳಗ್ಗೆ ಕಣ್ಣುಜ್ಜಿ ನಾನು ಹೊರಬರುವ ವೇಳೆಗೆ ಅಡುಗೆ ಮನೆಯಲ್ಲಿ ಡಾ. ಗುಸ್ತೋ ಮ್ಯಾನ್ಯುಯೆಲ್ ಸೊಂಟಕ್ಕೆ ಏಪ್ರನ್ ಕಟ್ಟಿಕೊಂಡು ಕಚಕಚ ಮಾಂಸ ಕತ್ತರಿಸಿ, ಮೊಟ್ಟೆ ಹುರಿದು ಮುಗಿಸಿ ಪಾತ್ರೆ ತೊಳೆಯುತ್ತಾ ನಿಂತಿರುತ್ತಿದ್ದರು.

ಉತ್ಸವದ ಕಲಾಪ ಮುಗಿಸಿ ಸಂಜೆ ನಾನು ಮನೆಗೆ ಬಂದಾಗ ಪುನಃ ಅದೇ ಕೆಲಸ. ಆದರೆ ಈ ಬಾರಿ ಗುಸ್ತೋ ಜಾಗದಲ್ಲಿ ಡಾ. ಓಲಿವಾ ರೊಮಿರೋ. ಈ ದೃಶ್ಯ ನಾನಿದ್ದ ಮನೆಯ ಎದುರಿಗಿದ್ದ ಶಿಕ್ಷಕ ದಂಪತಿಯ ಮನೆಯಲ್ಲಿ, ಪಕ್ಕದಲ್ಲಿದ್ದ ಮತ್ತೊಬ್ಬ ವೈದ್ಯ ದಂಪತಿಯ ಮನೆಯಲ್ಲಿ, ಹೀಗೆ ಎಲ್ಲ ಮನೆಗಳಲ್ಲಿ ನಡೆಯುತ್ತಿದ್ದ ನಿತ್ಯಯಾತ್ರೆ’.

‘ಬೆಳಗ್ಗೆ ಕಚೇರಿಗೆ ಹೋಗುವವರೆಗೆ ಗಂಡ ಅಡುಗೆ ಮನೆಯಿಂದ ಆರಂಭಿಸಿ ಎಲ್ಲಾ ಕೆಲಸಗಳ ಉಸ್ತುವಾರಿ ನೋಡಿಕೊಂಡರೆ, ಪುಟ್ಟ ಮಕ್ಕಳನ್ನು ಕರೆದುಕೊಂಡು ಬಾಲವಾಡಿ, ಶಾಲೆಗಳಿಗೆ ಮುಟ್ಟಿಸಿ ಹೋಗುತ್ತಿದ್ದ ಹೆಂಡತಿ ಕಚೇರಿಯಿಂದ ಬಂದ ನಂತರ ಈ ಕೆಲಸಗಳನ್ನು ತಾನು ಕೈಗೆತ್ತಿಕೊಳ್ಳುತ್ತಿದ್ದಳು. ಇದನ್ನೇ ಫಿಡೆಲ್ ಕ್ಯಾಸ್ಟ್ರೋ ‘ಕ್ರಾಂತಿಯೊಳಗಿನ ಕ್ರಾಂತಿ’ ಎಂದು ಬಣ್ಣಿಸಿದ್ದಾರೆ’. (ನನ್ನೊಳಗಿನ ಹಾಡು ಕ್ಯೂಬಾ: ಜಿ.ಎನ್.ಮೋಹನ್).

ಇದು ಸುಮ್ಮನೇ ಆದದ್ದಲ್ಲ. ಅಲ್ಲಿನ ಸಂವಿಧಾನ ಹೆಣ್ಣಿಗೆ ಶಿಕ್ಷಣ, ಆರ್ಥಿಕತೆ, ರಾಜಕೀಯದಂತಹವುಗಳಲ್ಲಿ ಸಮಾನ ಹಕ್ಕು ನೀಡಿದೆ. ಮಾತ್ರವಲ್ಲ, ಕುಟುಂಬ ಕಾಯ್ದೆ- 1975, ಮನೆಯ ಕರ್ತವ್ಯಗಳನ್ನು ಬಾಳಸಂಗಾತಿಯ ಜೊತೆಗೆ ಸಮಾನವಾಗಿ ಹಂಚಿಕೊಳ್ಳಲು ಕ್ಯೂಬಾದ ಮಹಿಳೆಗೆ ಅನುವು ಮಾಡಿಕೊಡುತ್ತದೆ. 2000ನೇ ಇಸವಿಯಲ್ಲಿ ಪಾರ್ಲಿಮೆಂಟ್‍ನಲ್ಲಿ ಶೇ 22.8ರಷ್ಟು ಇದ್ದ ಮಹಿಳಾ ಪ್ರಾತಿನಿಧ್ಯ 2015ರಲ್ಲಿ ಶೇ 53 ಆಗಿದ್ದು, ಜಾಗತಿಕವಾಗಿ ಕ್ಯೂಬಾ ಎರಡನೆಯ ಸ್ಥಾನದಲ್ಲಿದೆ. ಇಂತಹ ಬೆಳವಣಿಗೆಯಿಂದ ಮಹಿಳೆ ತನ್ನದಲ್ಲದ ಕಾರಣಗಳಿಗಾಗಿ ಕೊಲೆಯಾಗುವ ಬರ್ಬರತೆಯಿಂದ, ಅಸಹಾಯಕತೆಯಿಂದ ಪಾರಾಗುವ ಸಾಧ್ಯತೆ ಹೆಚ್ಚುತ್ತದೆ. ಎಲ್ಲ ಕ್ಷೇತ್ರಗಳಲ್ಲೂ ನಿರಾಳವಾಗಿ ಕೊಡುಗೆ ನೀಡುತ್ತಾ ದೇಶ ಕಟ್ಟುವ ಭಾಗೀದಾರಳಾಗಲು ಅನುವು ಮಾಡಿಕೊಡುತ್ತದೆ.

ಇದು ಒಂದು ಹಂತ ಮಾತ್ರ. ಈ ಪ್ರತಿನಿಧಿಗಳು ಅಧಿಕಾರಕ್ಕಾಗಿ ಏನು ಬೇಕಾದರೂ ಉಲಿವ ಗಿಣಿಗಳೂ ಕುಣಿವ ಕೆಂಬೂತಗಳೂ ಆದರೆ ಆಗ ಇದೂ ವ್ಯರ್ಥವೇ. ಹಾಗಂತ ಪ್ರಜಾಪ್ರಭುತ್ವದಲ್ಲಿ ಮತ್ತು ಪ್ರಜಾಪ್ರಭುತ್ವವಲ್ಲದೆ ಸದ್ಯಕ್ಕೆ ಬೇರೆ ಆಯ್ಕೆಗಳಿಲ್ಲವಾದ್ದರಿಂದ ಇದರಲ್ಲೇ ಮನುಷ್ಯತ್ವವನ್ನು ಹುಡುಕಬೇಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT