ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಕೈಬಿಟ್ಟು ಹೋಗಿದೆ ಕಲಿಕೆಯ ಮೂಲತತ್ವ

ಭಾಷೆಯ ಕಲಿಕೆಗೆ ಮಹತ್ವ ನೀಡದೇ ಇರುವುದು ಹಲವು ಸಮಸ್ಯೆಗಳ ಮೂಲ
Published 10 ಡಿಸೆಂಬರ್ 2023, 19:43 IST
Last Updated 10 ಡಿಸೆಂಬರ್ 2023, 19:43 IST
ಅಕ್ಷರ ಗಾತ್ರ

ಮಕ್ಕಳು ಏನನ್ನೂ ಕಲಿಯುವುದಿಲ್ಲ ಎನ್ನುವ ದೂರು ಅಧ್ಯಾಪಕರು, ಪೋಷಕರು ಮತ್ತು ಸಮುದಾಯದಲ್ಲಿ ಜನಜನಿತವಾಗಿದೆ. ಈ ದೂರು ಪಠ್ಯದ ಕಲಿಕೆಗೂ ಸಂಬಂಧಿಸಿರುತ್ತದೆ, ವರ್ತನಾ ಕಲಿಕೆಗೂ ಸಂಬಂಧಿಸಿರುತ್ತದೆ. ಉದಾಹರಣೆಗೆ, ಪಠ್ಯವಸ್ತುವನ್ನು ವಿದ್ಯಾರ್ಥಿಗೆ ಸಮರ್ಪಕವಾಗಿ ನಿರೂಪಿಸಲು ಆಗದೇ ಇದ್ದಾಗ, ಅದನ್ನು ವಿದ್ಯಾರ್ಥಿಗಳು ಕಲಿಯುತ್ತಿಲ್ಲ ಎನ್ನುವ ಆರೋಪ ಇರುತ್ತದೆ. ವ್ಯವಹರಿಸುವಿಕೆ ಒರಟಾಗಿದ್ದಾಗ ‘ಇಂದಿನ ವಿದ್ಯಾರ್ಥಿಗಳಿಗೆ ಯಾರೊಂದಿಗೆ ಹೇಗೆ ವರ್ತಿಸಬೇಕು ಎಂಬುದು ಗೊತ್ತಿಲ್ಲ’ ಎನ್ನುವ ಶೈಲಿಯ ಆರೋಪ ಕೇಳಿಬರುತ್ತದೆ.

ಮೊದಲನೆಯ ವರ್ಗದ ಆರೋಪವು ವಿದ್ಯಾರ್ಥಿಯನ್ನು ಲಿಖಿತ ಅಥವಾ ಮೌಖಿಕ ಮೌಲ್ಯಮಾಪನಕ್ಕೆ ಒಳಪಡಿಸಿದಾಗ ನಿರೀಕ್ಷಿತ ಉತ್ತರ ಲಭ್ಯವಾಗದೇ ಹೋದರೆ ವ್ಯಕ್ತವಾಗುತ್ತದೆ. ಅಂದರೆ, ಇಲ್ಲಿ ವಿದ್ಯಾರ್ಥಿಯು ಆರೋಪ ಮುಕ್ತನಾಗಬೇಕಾದರೆ ತಾನು ತಿಳಿದುಕೊಂಡದ್ದನ್ನು ಹೇಳುವುದು ಮುಖ್ಯವಾಗುತ್ತದೆ ವಿನಾ ಜ್ಞಾನದ ಸಾಮರ್ಥ್ಯ ಅಲ್ಲ. ತಿಳಿದದ್ದನ್ನು ಅಭಿವ್ಯಕ್ತಪಡಿಸದೇ ಇರುವುದರಲ್ಲಿ ಎರಡು ಸಾಧ್ಯತೆಗಳು ಇರುತ್ತವೆ. ಮೊದಲನೆಯದು, ಎಲ್ಲರಿಗೂ ಅರ್ಥ ಮಾಡಿಸುವ ಹಾಗೆ ಕಲಿತಿಲ್ಲದೇ ಇರುವುದು. ಎರಡನೆಯದು, ಕಲಿಕೆ ನಡೆದಿದ್ದರೂ ಲಿಖಿತ ಅಥವಾ ಮೌಖಿಕ ರೂಪದಲ್ಲಿ ಅಭಿವ್ಯಕ್ತಪಡಿಸಲು ತಿಳಿಯದೇ ಇರುವುದು. ಇದಕ್ಕೆ ಮುಖ್ಯವಾದ ಕಾರಣ, ಭಾಷಾ ಸಾಮರ್ಥ್ಯದ ಕೊರತೆ. ವಾಸ್ತವದ ಕಲಿಕಾ ಸನ್ನಿವೇಶದಲ್ಲಿ ಇದಕ್ಕೆ ಹೆಚ್ಚು ಮಹತ್ವ ಇದೆ. 

ಸರ್ವಶಿಕ್ಷಣ ಅಭಿಯಾನದ ನಂತರ ಬಂದ ಶೈಕ್ಷಣಿಕ ಸುಧಾರಣೆಗಳ ಕಾಲದ ಶಿಕ್ಷಣವು ಭಾಷಾ ಕಲಿಕೆಯನ್ನು ಬಹಳ‌ಷ್ಟು ಕಡೆಗಣಿಸಿದೆ. ಇದು ಕನ್ನಡಕ್ಕೆ ಮಾತ್ರ ಸಂಬಂಧಿಸಿದ್ದಲ್ಲ. ಇಂಗ್ಲಿಷ್ ಮಾಧ್ಯಮದ ಶಾಲೆಗಳೇ ಆದರೂ ಅಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಗಣಿತ, ವಿಜ್ಞಾನದ ಕಲಿಕೆಗೆ ಪ್ರಾಧಾನ್ಯ ಕೊಡಲಾಗುತ್ತದೆಯೇ ವಿನಾ ಇಂಗ್ಲಿಷ್ ಭಾಷೆಯನ್ನು ಕಲಿಯುವುದಕ್ಕೆ ಅಲ್ಲ. ಇಂಗ್ಲಿಷ್‌ ಭಾಷೆಯನ್ನು ಸಮರ್ಥವಾಗಿ ಕಲಿಯದೆ ಇಂಗ್ಲಿಷ್‌ನಲ್ಲಿ ಪಠ್ಯವಸ್ತುವನ್ನು ಕಲಿಯುವುದು ಹೇಗೆ ಎಂದರೆ, ಅದು ಪರೀಕ್ಷೆಯಲ್ಲಿ ಬರಬಹುದಾದ ಪ್ರಶ್ನೆಗಳ ಉತ್ತರಗಳನ್ನು ಮಾತ್ರ ಇಂಗ್ಲಿಷ್‌ನಲ್ಲಿ ಅಭ್ಯಾಸ ಮಾಡಿಸುವ ಪದ್ಧತಿ ಆಗಿರುತ್ತದೆ.‌ ಆಗ ಪರೀಕ್ಷೆಯಲ್ಲಿ ಬರಬಹುದಾದ ಸಂಭವನೀಯ ಪ್ರಶ್ನೆಗಳಿಗೆ ಸಂಬಂಧಿಸಿದ ಉತ್ತರಗಳನ್ನು ಬಿಟ್ಟರೆ ಪಠ್ಯವಸ್ತುವಿನ ಬೇರಾವ ವಿಚಾರಗಳನ್ನೂ ಇಂಗ್ಲಿಷ್‌ನಲ್ಲಿ ಪ್ರಕಟಪಡಿಸಲು ಸಾಧ್ಯವಾಗುವುದಿಲ್ಲ. ವಿದ್ಯಾರ್ಥಿಗಳಿಗೆ ವಿಚಾರ ಅರ್ಥವಾಗಿರುತ್ತದೆ, ಅದನ್ನು ಪ್ರಕಟಪಡಿಸಲು ಬೇಕಾದ ಭಾಷಾ ಸಾಮರ್ಥ್ಯ ಸಾಲುವುದಿಲ್ಲ.

ಕನ್ನಡ ಭಾಷಾ ಸಾಮರ್ಥ್ಯ ಸ್ವಲ್ಪ ಚೆನ್ನಾಗಿರುವ ವಿದ್ಯಾರ್ಥಿಗಳು, ಅರ್ಥವಾದದ್ದನ್ನು ಕನ್ನಡದಲ್ಲಿ ಹೇಳು ಎಂದರೆ ಹೇಳುತ್ತಾರೆ.‌ ಆದರೆ ಇಂಗ್ಲಿಷ್‌ ಮಾಧ್ಯಮದಲ್ಲಿ ಕಲಿಯಬೇಕೆಂಬ ಹಪಹಪಿಯು ಇಂಗ್ಲಿಷ್‌ ಭಾಷೆಯನ್ನು ಕಲಿಯುವಲ್ಲಿಯೇ ಇಲ್ಲದಿರುವಾಗ, ಇನ್ನು ಕನ್ನಡವನ್ನು ಕಲಿಯುವಲ್ಲಿ ಎಷ್ಟರಮಟ್ಟಿಗೆ ಇರಬಹುದು? ಪರಿಸರದಿಂದ ಕನ್ನಡವನ್ನು ಸ್ವಲ್ಪ ಅಚ್ಚುಕಟ್ಟಾಗಿ ತಿಳಿದ ವಿದ್ಯಾರ್ಥಿಗಳು ‘ಕನ್ನಡದಲ್ಲಿ ಹೇಳು’ ಎಂದಾಗ ಹೇಳುತ್ತಾರೆ. ಕನ್ನಡ ಭಾಷಾ ಸಾಮರ್ಥ್ಯ ಇಲ್ಲದ ವಿದ್ಯಾರ್ಥಿಗಳಿಗೆ ತಮಗಿರುವ ತಿಳಿವಳಿಕೆಯನ್ನು ಕನ್ನಡದಲ್ಲೂ ಹೇಳಲು ಆಗುವುದಿಲ್ಲ, ಇಂಗ್ಲಿಷ್‌ನಲ್ಲೂ ಹೇಳಲು ಆಗುವುದಿಲ್ಲ. ಉತ್ತರಪತ್ರಿಕೆಯ ಮೌಲ್ಯಮಾಪನ ಮಾಡುವಾಗ ಈ ಸನ್ನಿವೇಶವು ತುಂಬ ಚೆನ್ನಾಗಿ ಅರ್ಥವಾಗುತ್ತದೆ.

ಇಂಗ್ಲಿಷ್ ಮಾಧ್ಯಮದ ಉತ್ತರ ಪತ್ರಿಕೆಗಳಲ್ಲಿ ಎರಡೇ ಮುಖ್ಯ ವಿಧಗಳಿರುತ್ತವೆ. ಒಂದೋ ಖಚಿತ, ಸ್ಪಷ್ಟ ಮತ್ತು ಸಮರ್ಪಕ ಉತ್ತರಗಳು. ಇದಲ್ಲದಿದ್ದರೆ ಏನೂ ಇಲ್ಲದ ಉತ್ತರ ಪತ್ರಿಕೆಗಳು.‌ ಸ್ಪಷ್ಟ ಮತ್ತು ಸರಿಯಾದ ಉತ್ತರ ಪತ್ರಿಕೆಯು ವಿದ್ಯಾರ್ಥಿಯು ಒಂದೋ ಇಂಗ್ಲಿಷ್ ಭಾಷೆಯನ್ನು ಚೆನ್ನಾಗಿ ಬಲ್ಲವನಾಗಿದ್ದಾನೆ ಅಥವಾ ಇಂಗ್ಲಿಷ್‌ನಲ್ಲಿ ಕೊಟ್ಟ ಉತ್ತರಗಳನ್ನು ಚೆನ್ನಾಗಿ ಅಭ್ಯಾಸ ಮಾಡಿದ್ದಾನೆ ಎಂಬುದನ್ನು ಸೂಚಿಸುತ್ತದೆ. ಉತ್ತರವನ್ನು ಮಾತ್ರ ಬಲ್ಲವನಾಗಿದ್ದರೆ ಕೆಲವು ಪ್ರಶ್ನೆಗಳಿಗೆ ಉತ್ತರಿಸಿಯೇ ಇರುವುದಿಲ್ಲ. ಅಂದರೆ ಆ ಪ್ರಶ್ನೆಗೆ ಸಂಬಂಧಿಸಿದ ಉತ್ತರವನ್ನು ಅವನಿಗೆ ಅಭ್ಯಾಸ ಮಾಡಿಸಿಯೇ ಇರುವುದಿಲ್ಲ ಎಂದು ಅರ್ಥ ಮಾಡಿ
ಕೊಳ್ಳಬಹುದು. ಇಂಗ್ಲಿಷ್ ಭಾಷೆಯನ್ನೇ ಬಲ್ಲವನಾಗಿದ್ದರೆ ಯಾವ ಪ್ರಶ್ನೆಗೂ ಆತ ಉತ್ತರಿಸದೇ ಬಿಡುವುದಿಲ್ಲ. ಉತ್ತರ ತಪ್ಪೇ ಇದ್ದಾಗಲೂ ತಾನು ಅರ್ಥ ಮಾಡಿಕೊಂಡದ್ದನ್ನು ಬರೆದಿರುತ್ತಾನೆ.

ಕನ್ನಡ ಮಾಧ್ಯಮದ ಉತ್ತರ ಪತ್ರಿಕೆಗಳಾದಾಗ ಅದರಲ್ಲಿ ಮೂರು ಬಗೆಯ ವರ್ಗೀಕರಣಕ್ಕೆ ಮಹತ್ವವಿದೆ. ಕನ್ನಡವನ್ನು ಚೆನ್ನಾಗಿ ಬಲ್ಲವರು ಅಥವಾ ಕನ್ನಡದಲ್ಲಿ ಉತ್ತರ ಬಲ್ಲವರದು ಇಂಗ್ಲಿಷ್ ಮಾಧ್ಯಮದ ರೀತಿಯಲ್ಲೇ ಮೊದಲ ವರ್ಗೀಕರಣ. ಎರಡನೆಯದು, ಉತ್ತರ ಮತ್ತು ಭಾಷೆ ಎರಡೂ ಗೊತ್ತಿಲ್ಲದೆ ಉತ್ತರಿಸದೇ ಇರುವವರು. ಮೂರನೆಯ ವರ್ಗೀಕರಣ ಬಹಳ ಆಸಕ್ತಿದಾಯಕ. ಖಚಿತವಾಗಿ ಇದೇ ಉತ್ತರ ಎಂದು ಅವರಿಗೆ ಗೊತ್ತಿರುವುದಿಲ್ಲ. ಆದರೆ ಅಂದಾಜಿನ ಮೇಲೆ ಉತ್ತರವನ್ನು ಬರೆದಿರುತ್ತಾರೆ. ಬರೆದ ಅನಗತ್ಯ ವಿವರಗಳ ನಡುವೆ ಎಲ್ಲೋ ಒಂದು ಕಡೆ ಉತ್ತರ ಇರುತ್ತದೆ ಅಥವಾ ಖಚಿತ ಉತ್ತರಕ್ಕೆ ಸಮೀಪವಾದ ತಿಳಿವಳಿಕೆ ಇರುತ್ತದೆ. ಪೂರ್ಣ ಅಂಕಗಳು ಬಾರದೆ ಇದ್ದರೂ ಅಂಕವನ್ನೇ ಕೊಡದೆ ಇರಲು ಆಗುವುದಿಲ್ಲ. ಈ ವರ್ಗದ ವಿದ್ಯಾರ್ಥಿಗಳಿಗೆ ಪಠ್ಯವಸ್ತುವಿನ ಬಗ್ಗೆ ಸಮರ್ಪಕ ತಿಳಿವಳಿಕೆ ಇರುವುದಿಲ್ಲ. ಭಾಷಾ ಸಾಮರ್ಥ್ಯ ಇರುವುದರಿಂದಾಗಿ, ತನಗೆ ಸಮರ್ಪಕ ತಿಳಿವಳಿಕೆ ಇಲ್ಲದಿದ್ದರೂ ಅರ್ಥ ಆದ ಪರಿಕಲ್ಪನೆಯನ್ನೇ ಬಳಸಿಕೊಂಡು ಬರೆಯುವ ಸಾಮರ್ಥ್ಯ ಇರುತ್ತದೆ.

ವಿದ್ಯಾರ್ಥಿಗಳನ್ನು ಮೌಖಿಕವಾಗಿ ಮೌಲ್ಯಮಾಪನಕ್ಕೆ ಒಳಪಡಿಸಿದಾಗ, ತಿಳಿದದ್ದನ್ನು ಪ್ರಕಟಪಡಿಸಲು ಇನ್ನೊಂದು ಅಡಚಣೆ ಇರುತ್ತದೆ.‌ ಉತ್ತರದ ಮೌಲ್ಯಮಾಪನ ಅದೇ ಸ್ಥಳದಲ್ಲಿ, ಅದೇ ಕ್ಷಣದಲ್ಲಿ ನಡೆಯುವುದರಿಂದ, ಆತ್ಮವಿಶ್ವಾಸದ ಕೊರತೆಯು ಗೊತ್ತಿರುವುದನ್ನು ಹೇಳಲು ಸಾಧ್ಯವಾಗದ ಸ್ಥಿತಿಗೆ ವಿದ್ಯಾರ್ಥಿಯನ್ನು ತಳ್ಳುತ್ತದೆ. ಈ ಕೊರತೆಯು ಕೌಟುಂಬಿಕ ಮತ್ತು ಸಾಮುದಾಯಿಕ ಸನ್ನಿವೇಶದಲ್ಲಿ ಮಕ್ಕಳ ನಿರ್ವಹಣೆಯ ಸಮಸ್ಯೆಯಿಂದಾಗಿ ಮತ್ತು ಶಾಲಾ ಸನ್ನಿವೇಶದಲ್ಲಿ ಅಂತಹ ವಿದ್ಯಾರ್ಥಿಗಳನ್ನು ಗುರುತಿಸಿ ಆತ್ಮವಿಶ್ವಾಸ ತುಂಬುವ ಕಾರ್ಯವು ನಡೆದಿಲ್ಲದೇ ಇರುವ ಕಾರಣದಿಂದಾಗಿ ಆಗುತ್ತದೆ.‌ ಜೊತೆಗೆ ಭಾಷಾ ಸಾಮರ್ಥ್ಯದ ಕೊರತೆಯೂ ಇದರೊಂದಿಗೆ ಸೇರಿಕೊಳ್ಳುತ್ತದೆ.‌ ಅಂದರೆ, ಕಲಿತುದನ್ನು ಪ್ರಕಟಪಡಿಸುವ ಸಾಮರ್ಥ್ಯವು ವಿದ್ಯಾರ್ಥಿಗಳಲ್ಲಿ ಬೆಳೆಯುವ ಹಾಗೆ ಮಾಡಬೇಕಾಗಿದೆ.

ಎರಡನೆಯದಾಗಿ, ವಿದ್ಯಾರ್ಥಿಗಳ ವರ್ತನೆಯ ಮೇಲಿನ ಆರೋಪಗಳನ್ನು ಗಮನಿಸಬೇಕು. ವರ್ತನೆಗಳು ತಲೆಮಾರಿನಿಂದ ತಲೆಮಾರಿಗೆ ವಿಧಾನದಲ್ಲಿ ವ್ಯತ್ಯಾಸವನ್ನು ಕಾಣುತ್ತವೆ. ಉದಾಹರಣೆಗೆ, ಒಂದು ತಲೆಮಾರು ಯೋಗ್ಯ ಅಧ್ಯಾಪಕರನ್ನು ಪಾದಪೂಜೆ ಮಾಡಿ ಗೌರವಿಸಿರಬಹುದು. ಮತ್ತೊಂದು ತಲೆಮಾರು ಅಂಥದ್ದನ್ನೆಲ್ಲ ಮಾಡದೆ, ‘ಚೆನ್ನಾಗಿ ಪಾಠ ಮಾಡುತ್ತಾರೆ ಕಣಯ್ಯ’ ಎನ್ನಬಹುದು. ಯೋಗ್ಯವಾದದ್ದನ್ನು ಗೌರವಿಸಬೇಕು ಎನ್ನುವ ಪ್ರಜ್ಞೆಯಲ್ಲಿ ಎರಡೂ ತಲೆಮಾರುಗಳ ನಡುವೆ ಇಲ್ಲಿ ಯಾವ ವ್ಯತ್ಯಾಸವೂ ಆಗಿಲ್ಲ. ಆ ಕಲಿಕೆ ವಿದ್ಯಾರ್ಥಿಗಳಲ್ಲಿ ನಡೆದಿದೆ. ಆದರೆ ಅದನ್ನು ಪ್ರಕಟಪಡಿಸುವ ಕ್ರಮದಲ್ಲಿ ವ್ಯತ್ಯಾಸ ಆಗಿದೆ. ಇದು ಸಹಜ ಪ್ರಕ್ರಿಯೆ. ಆದರೆ ವಿದ್ಯಾರ್ಥಿಗಳ ವರ್ತನೆಯಲ್ಲೇ ದೋಷಗಳು ಬೆಳೆಯುತ್ತಿವೆ. ಒಂದು ವಿಚಾರವನ್ನು ವಿರೋಧಿಸುವುದು ಎಂದರೆ ಆ ವಿಚಾರ ಹೇಳುವವನ ಭೌತಿಕ ನಾಶವನ್ನು ಬಯಸುವುದಲ್ಲ. ಆದರೆ ವಿಚಾರ ಹೇಳುವವನೇ ನಾಶವಾಗಬೇಕು ಎಂದು ಬಯಸುವ ಆಲೋಚನೆಗಳು ಬೆಳೆಯುತ್ತಿವೆ. ಇದಕ್ಕೆ, ಆಲೋಚನಾ ಕ್ರಮ ಹೇಗಿರಬೇಕೆಂದು ಅರ್ಥ ಮಾಡಿಸಲು ಸಾಧ್ಯವಾಗದ, ತನ್ನ ಆಲೋಚನೆಯನ್ನು ಯಾವ ವಿಧಾನದಲ್ಲಿ ಮಂಡಿಸಬೇಕು ಎಂದು ಕಲಿಸಲು ಸಾಧ್ಯವಾಗದ ಶಿಕ್ಷಣ ವ್ಯವಸ್ಥೆಯ ಜವಾಬ್ದಾರಿ ಇದೆ.

ಒಂದೆರಡು ತಲೆಮಾರುಗಳ ಹಿಂದೆ ಕೂಡ ವರ್ತನಾ ಕಲಿಕೆಯಲ್ಲಿ ಶಾಲಾ ಕಾಲೇಜುಗಳ ಪಾತ್ರ ದೊಡ್ಡ ಪ್ರಮಾಣದಲ್ಲಿ ಇರಲಿಲ್ಲ. ಅಧ್ಯಾಪಕರು ತರಗತಿಯಲ್ಲಿ ಸಾಂದರ್ಭಿಕವಾಗಿ ಹೇಳಿದ್ದೆಷ್ಟೋ ಅಷ್ಟೆ. ಆದರೆ ಆಗ ಕೃಷಿಕೇಂದ್ರಿತ ಜೀವನ ವ್ಯವಸ್ಥೆ, ಕೂಡು ಕುಟುಂಬಗಳ ಪ್ರಭಾವಗಳಿಂದಾಗಿ ಪರಿಸರದ ಅನುಭವಗಳಿಂದ ವರ್ತನೆಗಳ ಕಲಿಕೆ ನಡೆಯುತ್ತಿತ್ತು. ಈಗ ಬದಲಾದ ಪರಿಸರದಲ್ಲಿ ವರ್ತನಾ ಕಲಿಕೆ ಹೆಚ್ಚು ನಕಾರಾತ್ಮಕವಾಗುತ್ತಾ ಹೋಗಿದೆ. ಆದರೆ ಶಾಲೆಗಳಲ್ಲಿ ವರ್ತನಾ ಕಲಿಕೆಯೇ ಇಲ್ಲ! ಅಂದಮೇಲೆ ಪದವೀಧರರಾದರೂ ಅವರ ವರ್ತನೆ ಸರಿಯಿಲ್ಲ ಎಂದರೆ ಆಗುವುದಿಲ್ಲ. ಪದವಿಗೂ ವರ್ತನೆಗೂ ಸಂಬಂಧ ಇದೆಯೆಂದು ಭಾವಿಸಬೇಕಾದರೆ ಪದವಿಯಲ್ಲಿ ವರ್ತನೆಯನ್ನು ಕಲಿಸುವ ವ್ಯವಸ್ಥೆ ಇರಬೇಕು. ಆದರೆ ಆ ವ್ಯವಸ್ಥೆ ಇಲ್ಲ. ಆದ್ದರಿಂದ ಶಿಕ್ಷಣದಲ್ಲಿ ವರ್ತನಾ ಕಲಿಕೆಗೆ ಪೂರಕವಾದ ಅಂಶ ಮತ್ತು ಅದಕ್ಕಾಗಿ ಸಮರ್ಥ ಅಧ್ಯಾಪಕರ ವ್ಯವಸ್ಥೆಯನ್ನು ಮಾಡಬೇಕಾದ ಅಗತ್ಯವಿದೆ.

ಅರವಿಂದ ಚೊಕ್ಕಾಡಿ

ಅರವಿಂದ ಚೊಕ್ಕಾಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT