ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಜಾತಿಗಣತಿ ಮತ್ತು ಅಸ್ಮಿತೆಯ ರಾಜಕಾರಣ

ಕೆಲವು ಜಾತಿಗಳಿಗೆ ಐಡೆಂಟಿಟಿ ಕುರಿತ ಅಭದ್ರತೆ ತೀವ್ರಗೊಂಡಿರುವುದು ಸ್ಪಷ್ಟ
Published 8 ಅಕ್ಟೋಬರ್ 2023, 23:35 IST
Last Updated 8 ಅಕ್ಟೋಬರ್ 2023, 23:35 IST
ಅಕ್ಷರ ಗಾತ್ರ

ಬಿಹಾರದ ನಿತೀಶ್‌ ಕುಮಾರ್‌ ನೇತೃತ್ವದ ಸರ್ಕಾರವು ರಾಜ್ಯದ ಜಾತಿ ಜನಗಣತಿಯನ್ನು ಪ್ರಕಟಿಸಿದ ಕಾರಣದಿಂದ, ದೇಶದ ರಾಜಕಾರಣದ ಸಂರಚನೆ ಮತ್ತು ಚೌಕಟ್ಟುಗಳು ಬದಲಾಗುವ ಸಾಧ್ಯತೆ ಇದೆ. ಜಾತಿಯು ಭಾರತದ ವಾಸ್ತವ. ಅದು ಐಡೆಂಟಿಟಿಯ ಬಹುಮುಖ್ಯ ಸಂಗತಿಯಾಗಿ, ಶಕ್ತಿಯ ರೂಪಕವಾಗಿ, ಸಂಘರ್ಷದ ಕುರುಹಾಗಿ, ಶೋಷಣೆಯ ಕೇಂದ್ರಬಿಂದುವಾಗಿ, ಅಸಮಾನ ಭಾರತದ ಬಹುದೊಡ್ಡ ರೂಪಕವಾಗಿದೆ. ಅದನ್ನು ಬಿಟ್ಟು ಭಾರತವನ್ನು ಕಲ್ಪಿಸಿಕೊಳ್ಳುವುದು ಅಸಾಧ್ಯ.

ಜನಗಣತಿಯೇ ಕೆಲವು ಜಾತಿಗಳನ್ನು ಹುಟ್ಟು
ಹಾಕಿದ್ದನ್ನು 1871ರಿಂದ ಆರಂಭಗೊಂಡ ಸಾರ್ವತ್ರಿಕ ಜನಗಣತಿಗಳು ನಮಗೆ ತಿಳಿಸುತ್ತವೆ. ಜನಗಣತಿದಾರರು ಅಕ್ಷರಗಳನ್ನು ತಪ್ಪಾಗಿ ನಮೂದಿಸುವ ಮೂಲಕ ಹೊಸ ಜಾತಿಗಳನ್ನು, ಅಸ್ಪಷ್ಟ ಜಾತಿಗಳನ್ನು, ಸಮುದಾಯಗಳನ್ನು ಹುಟ್ಟುಹಾಕಿದ್ದು ಅಷ್ಟೇ ಸತ್ಯ. ಜನಗಣತಿಯು ಅಗಾಧ ಪ್ರಮಾಣದ ಮಾಹಿತಿಗಳನ್ನು ನೀಡುತ್ತಾ ದೇಶದ ಜಾತಿಗಳನ್ನು ವರ್ಗೀಕರಿಸುತ್ತಾ ಹೋಯಿತು. ಅದು ಜಾತಿಗಳೊಳಗೆ ಉಪಜಾತಿಗಳನ್ನು ಸೃಷ್ಟಿಸಿತು, ಕ್ರಿಮಿನಲ್‌ ಟ್ರೈಬ್‌ಗಳು, ಅಲೆಮಾರಿ, ಅರೆಅಲೆಮಾರಿ, ಏಷ್ಯಾಟಿಕ್‌ ಮತ್ತು ಏಷ್ಯಾಟಿಕೇತರ ಜಾತಿಗಳೆಂದು ವಿಭಜಿಸಿತು, ವರ್ಣಸಂಕರದಾಚೆ ಇರುವ ಕಸುಬು ಆಧಾರಿತ ಜಾತಿಗಳನ್ನು ಗುರುತಿಸಿತು. ಬಹಳ ಮುಖ್ಯವಾಗಿ, ಜಾತಿಯನ್ನು ಆರ್ಯನ್ನರ ಕೊಡುಗೆ ಎಂದು ಮತ್ತೆ ಮತ್ತೆ ವಾದಿಸುತ್ತಾ, ಅದು ಪ್ರಧಾನ ಸಂಕಥನವಾಗಿ ರೂಪುಗೊಳ್ಳುವಂತೆ ನೋಡಿಕೊಂಡಿತು.

ವಸಾಹತುಶಾಹಿಯು ವಿವಿಧ ಮತಧರ್ಮ
ಗಳಲ್ಲಿ- ಸಿಖ್ಖರು, ಬೌದ್ಧರು, ಕ್ರೈಸ್ತರು, ಜೈನರು ಮತ್ತು ಮುಸಲ್ಮಾನರು- ಜಾತಿಗಳ ಅಸ್ತಿತ್ವವನ್ನು ಗುರುತಿಸಿ ದಾಖಲಿಸಿತ್ತು. ವಿರೋಧಾಭಾಸವೆಂದರೆ, ಈ ಮತಗಳಲ್ಲಿ ಜಾತಿಯ ಚೌಕಟ್ಟುಗಳು ಎಷ್ಟೇ ಗಟ್ಟಿಯಾಗಿದ್ದರೂ ಕೆಲವು ಸಂದರ್ಭಗಳಲ್ಲಿ ಅವು ತಮ್ಮ ಸಂರಚನೆ ಮತ್ತು ಚಲನಶೀಲತೆಯಲ್ಲಿ ಹಿಂದೂ ಜಾತಿಗಳಿಗಿಂತ ವಿಭಿನ್ನ
ವಾಗಿದ್ದವು. ಅವುಗಳಲ್ಲಿ ಕಟ್ಟುನಿಟ್ಟಿನ ಶ್ರೇಣೀಕೃತ ವ್ಯವಸ್ಥೆ ಇರಲಿಲ್ಲ. ಕೆಳವರ್ಗಗಳು ಮತಾಂತರಗೊಂಡ ಕೂಡಲೇ ಮೇಲ್ವರ್ಗಗಳ ಸ್ಥಾನಮಾನವನ್ನು ಪಡೆಯಬಹುದಿತ್ತು. ಒಟ್ಟಾರೆಯಾಗಿ, ಹೊಸ ಮತಗಳು ತಕ್ಕಮಟ್ಟಿಗೆ ಚಲನಶೀಲತೆಗೆ ಅವಕಾಶವನ್ನು ನೀಡುತ್ತಿದ್ದವು. ವಾಸ್ತವವಾಗಿ, ಮತಾಂತರಗೊಂಡ ಸಮುದಾಯಗಳು ಅಸ್ಪಷ್ಟ ಜಾತಿಗಳನ್ನು, ಸಮನ್ವಯ ಸಂಸ್ಕೃತಿಗಳನ್ನು, ಪರ್ಯಾಯ ಪಂಥಗಳನ್ನು ಹುಟ್ಟುಹಾಕಿದ್ದವು. ವಿವಿಧ ಹಿಂದೂ ಜಾತಿಗಳೊಂದಿಗಿನ ದೀರ್ಘಕಾಲದ ಒಡನಾಟ, ಸಾಂಸ್ಕೃತಿಕ ಅನುಸಂಧಾನ, ಮುಖಾಮುಖಿಯು ಬುಡ
ಕಟ್ಟುಗಳನ್ನು ಹಿಂದೂ ಜಾತಿಯನ್ನಾಗಿಸಿದವು. ಇದನ್ನು ಕ್ಷತ್ರಿಯೀಕರಣ, ರಜಪೂತೀಕರಣ ಎಂದೆಲ್ಲಾ ಕರೆಯುವುದು ವಾಡಿಕೆ. ಇದು ‘ಸಂಸ್ಕೃತಾನುಕರಣ’ ಎಂಬ ಎಂ.ಎನ್‌.ಶ್ರೀನಿವಾಸ್‌ ಅವರ ಶಬ್ದಾವಳಿಗೆ ಪರ್ಯಾಯವಾಗಿ ವಸಾಹತುಶಾಹಿ ಹುಟ್ಟುಹಾಕಿದ ಪರಿಕಲ್ಪನೆ.

ವಾಸ್ತವವಾಗಿ, ಜಾತಿಯ ಜನಗಣತಿ ವಿವಿಧ ಜಾತಿಗಳಿಗೆ ಹೊಸ ಅಸ್ಮಿತೆಯನ್ನು, ಸಂಘಟನಾ ಶಕ್ತಿಯನ್ನು, ಹೊಸ ಕಲ್ಪಿತ ಇತಿಹಾಸವನ್ನು ಕಟ್ಟುವಲ್ಲಿ, ಸಾಂಸ್ಕೃತಿಕ ಚಹರೆಗಳನ್ನು ದಾಖಲಿಸುವಲ್ಲಿ ಸಹಕರಿಸಿದ್ದೂ ಇದೆ. ಅದೇ ಸುಮಾರಿಗೆ ಜನಗಣತಿಯು ಬೈನರಿಗಳನ್ನು (ದ್ವಂದ್ವಾತ್ಮಕ ಅವಳಿ) ಕೂಡ ನಿರ್ಮಿಸಿತ್ತು: ಬಲಾಢ್ಯ–ಬಲಹೀನ, ಬಹುಸಂಖ್ಯಾತ–ಅಲ್ಪಸಂಖ್ಯಾತ, ಹಿಂದುಳಿದ–ಮುಂದುವರಿದ, ಮೇಲರಿಮೆಯ–ಕೀಳರಿಮೆಯ, ಯಜಮಾನಿಕೆಯ–ಅಂಚಿನ... ಇಂತಹ ಬೈನರಿಗಳು ವಸಾಹತುಶಾಹಿ ಕಾಲದಲ್ಲಿ ಹೊಸ ಹೊಸ ಸಂಕಥನಗಳಿಗೆ ದಾರಿ ಮಾಡಿಕೊಟ್ಟಿದ್ದವು. ಅವುಗಳಲ್ಲಿ ಬಹುಮುಖ್ಯ ಎನಿಸುವುದು ಹಿಂದುಳಿದ ವರ್ಗಗಳ ಕುರಿತಾದದ್ದು. ಅದೆಂದರೆ, ಹಿಂದುಳಿದ ವರ್ಗಗಳನ್ನು ಹೇಗೆ ಗುರುತಿಸುವುದು, ರಾಜಕೀಯ ಅಧಿಕಾರದಲ್ಲಿ, ಶೈಕ್ಷಣಿಕ ಪಾಲುದಾರಿಕೆಯಲ್ಲಿ ಅವುಗಳಿಗೆ ಎಷ್ಟು ಪ್ರಮಾಣದ ಅವಕಾಶ ನೀಡಬೇಕು ಎಂಬಂತಹ ವಿಷಯಗಳೇ ಆಗಿವೆ.

ವಸಾಹತುಶಾಹಿಯು ರಾಜಕಾರಣದ ಅಸ್ಮಿತೆಗೆ ಒಂದು ಮಹತ್ತರವಾದ ಕೊಡುಗೆಯನ್ನು ನೀಡಿದೆ. ಅದು, ಸಂಖ್ಯಾಧಾರಿತವಾಗಿ ಜಾತಿಗಳನ್ನು ದಾಖಲಿಸುವಾಗ, ಕೆಲ ಜಾತಿಗಳು ಅತ್ಯಂತ ಕನಿಷ್ಠ ಸಂಖ್ಯೆಯಲ್ಲಿದ್ದರೂ
ಅವುಗಳನ್ನು ತನ್ನ ಪಟ್ಟಿಯಲ್ಲಿ ದಾಖಲಿಸಿತ್ತು. ದುರಂತವೆಂದರೆ, ಈ ರೀತಿಯ ದಾಖಲಿಸುವಿಕೆ ಮುಂದೆ ನಿಂತುಹೋಯಿತು. ಇದರಿಂದ, ಚಿಕ್ಕಪುಟ್ಟ ಜಾತಿಗಳು ಅಸ್ತಿತ್ವದಲ್ಲಿದ್ದರೂ ಐತಿಹಾಸಿಕವಾಗಿ ಸರ್ಕಾರಿ ಪಟ್ಟಿಯಿಂದ ಕಣ್ಮರೆಯಾದವು. ಹತ್ತು ಹಲವು ಆಯೋಗಗಳ ಪಟ್ಟಿಗಳೊಳಗೆ ಅವು ಸೇರ್ಪಡೆಯಾಗಲಿಲ್ಲ.
ಇಂದಿಗೂ ಅದೇ ಸ್ಥಿತಿ ಮುಂದುವರಿದಿದೆ. ಈಗಲೂ ಹಲವು ಜಾತಿಗಳು ತಮ್ಮ ಅಸ್ಮಿತೆಯನ್ನು ದಾಖಲಿಸಲು ಪರಿತಪಿಸುತ್ತಿವೆ. ಅದೇನೇಇದ್ದರೂ 1931ರಲ್ಲಿ ಜಾತಿಯ ಜನಗಣತಿ ನಿಂತುಹೋಯಿತು. ಅದರರ್ಥ, ಜಾತಿ ವಿಷಯ ಮುಗಿದ ಅಧ್ಯಾಯವಾಯಿತು ಎಂದೇ? ವಾಸ್ತವವೆಂದರೆ, ಜಾತಿಯು ಭಾರತದ ಸಾಮಾಜಿಕ ಸಂರಚನೆಯ ಜೀವಂತಿಕೆಯಾಗಿ, ಬೈನರಿಗಳು, ಅಸ್ಮಿತೆಯ ಕುರುಹಾಗಿ ಉಳಿದುಬಿಟ್ಟಿತ್ತು. ಹೀಗಾಗಿಯೇ ವಿವಿಧ ರಾಜ್ಯಗಳಲ್ಲಿ ಮತ್ತೆ ಮತ್ತೆ ಜಾತಿ ಆಧಾರಿತ ಜನಗಣತಿಗೆ ಬೇಡಿಕೆ ಬಂದಿರುವುದು.

ಕರ್ನಾಟಕದಲ್ಲಿ ಎಚ್‌.ಕಾಂತರಾಜ ನೇತೃತ್ವದ ಆಯೋಗವು ಎಲ್ಲ ಜಾತಿಗಳ ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿ ದಾಖಲಿಸಿ, ವರದಿ ಸಿದ್ಧಪಡಿಸಿದೆ. ಈ ನಡುವೆ ಕೆಲವು ಜಾತಿಗಳಿಗೆ ಅದರಲ್ಲೂ ಬಲಾಢ್ಯ ಜಾತಿಗಳಿಗೆ ಐಡೆಂಟಿಟಿ ಕುರಿತ ಅಭದ್ರತೆ ತೀವ್ರಗೊಂಡಿರುವುದು ಸ್ಪಷ್ಟ. ಜಾತಿಗಳ ಪ್ರಮಾಣ ಮತ್ತು ಸಂಖ್ಯೆಯನ್ನು ಸಾರ್ವಜನಿಕ
ಗೊಳಿಸಿದರೆ, ಬಲಾಢ್ಯ ಜಾತಿಗಳು ತಮ್ಮ ಸಾಮಾಜಿಕ, ರಾಜಕೀಯದ ಯಜಮಾನಿಕೆಯನ್ನು ಕಳೆದುಕೊಳ್ಳ
ಬಹುದು ಎಂಬ ಭಯ ಇಲ್ಲಿದೆ. ಇದೇ ಸ್ಥಿತಿ ಅಖಿಲ ಭಾರತ ಮಟ್ಟದಲ್ಲೂ ಪ್ರತಿಧ್ವನಿಸಿದರೆ ಅಚ್ಚರಿಪಡಬೇಕಾಗಿಲ್ಲ. ವಾಸ್ತವದಲ್ಲಿ, ಮತ್ತೊಮ್ಮೆ ಜಾತಿ ಜನಗಣತಿಯನ್ನು ಆರಂಭಿಸಿದರೆ ಆಗುವ ರಾಜಕೀಯ- ಸಾಮಾಜಿಕ ಪಲ್ಲಟ ಮತ್ತು ಸಂರಚನೆಯ ಬದಲಾವಣೆಯನ್ನು ಊಹಿಸಲು ಅಸಾಧ್ಯ. ಬೈನರಿಗಳು, ಕಥನಗಳು, ಅಧಿಕಾರ ಸ್ಥಾನಮಾನ ಬದಲಾಗಬಹುದು. ಈ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ನಡವಳಿಕೆ ಹೇಗಿರಬಹುದು? ಆ ವರ್ಗಗಳ ಜನರು ಬಹುಸಂಖ್ಯಾತ ವರ್ಗವಾಗಿ (ಮೆಜಾರಿಟೇರಿಯನಿಸಂ) ಬಲಾಢ್ಯ ಜಾತಿಗಳ ಇನ್ನೊಂದು ರೂಪಕ ಆಗುತ್ತಾರೆಯೇ? ಹಿಂದುಳಿದ- ವಂಚಿತ ಆದರೆ ಬಹುಸಂಖ್ಯಾತರೆಂದು ಗುರುತಿಸಲ್ಪಡುತ್ತಾರೆಯೇ? ಕಣ್ಮರೆಯಾಗಿ ಹೋಗಿರುವ ನೂರಾರು ಜಾತಿಗಳಿಗೆ, ಉಪಜಾತಿಗಳಿಗೆ ರಾಜಕೀಯ ಅಸ್ಮಿತೆ ನೀಡಬಲ್ಲರೇ ಎಂಬಂತಹ ಪ್ರಶ್ನೆಗಳು ಸಹಜವಾಗಿ ಮೂಡುತ್ತವೆ.

ಹಿಂದುಳಿದ ವರ್ಗವೆಂಬ ಪರಿಕಲ್ಪನೆಯ ಮೇಲೆ ಈ ಹಿಂದೆ ಬಹಳಷ್ಟು ಚರ್ಚೆಗಳು ನಡೆದಿವೆ. ಚಿಂತಕ ಜಾನ್‌ ರಾಲ್ಸ್‌, ‘ಎಲ್ಲಾ ಪ್ರಜೆಗಳಿಗೆ ನ್ಯಾಯ
ಸಮ್ಮತವಾದ, ಅದರಲ್ಲೂ ಶಿಕ್ಷಣ, ಸರ್ಕಾರಿ ಉದ್ಯೋಗ, ಆರೋಗ್ಯದಂತಹ ಕ್ಷೇತ್ರಗಳಲ್ಲಿ ಅವಕಾಶಗಳನ್ನು ಕಲ್ಪಿಸುವುದೇ ನ್ಯಾಯ‌’ ಎಂದು ಹೇಳುತ್ತಾರೆ. ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಅವರ ಪ್ರಕಾರ, ಸಾಮಾಜಿಕ ನ್ಯಾಯವು ಸಮುದಾಯಗಳ ಪರಿಕಲ್ಪನೆಯಲ್ಲಿ ಹುದುಗಿದೆ. ಇವುಗಳನ್ನು ಗಮನದಲ್ಲಿ ಇಟ್ಟುಕೊಂಡು ಹಿಂದುಳಿದ ವರ್ಗಗಳನ್ನು ವಿಶ್ಲೇಷಿಸಿದರೆ, ಈ ವರ್ಗಗಳು ಸದಾ ವಂಚಿತ ಸಮುದಾಯಗಳೆಂದು ಥಟ್ಟೆಂದು ನಿರ್ಧರಿಸಬಹುದು. ವಾಸ್ತವವಾಗಿ ಗೊಂದಲವಿರುವುದು ಸರ್ಕಾರದ ಅಥವಾ ವಿವಿಧ ಆಯೋಗಗಳು ಬಳಸಿದ ಮಾನದಂಡಗಳಲ್ಲಿ. ಅವು ಕಾಲಕಾಲಕ್ಕೆ, ಆಯಾ ಆಯೋಗಕ್ಕೆ ತಕ್ಕಂತೆ ಬದಲಾಗುತ್ತಾ ಹೋದವು. ಇದಕ್ಕೆ ಕರ್ನಾಟಕವೂ ಅಪವಾದವಾಗಿಲ್ಲ. 1919ರ ಲೆಸ್ಲಿ ಮಿಲ್ಲರ್‌ ಸಮಿತಿಯ ಶಿಫಾರಸಿನಿಂದ ಕಾಂತರಾಜ ಆಯೋಗದ ತನಕ, ಕಾಕಾ ಕಾಲೇಕರ್‌ ಅವರಿಂದ ಮಂಡಲ್‌ ಆಯೋಗದತನಕದ ವರದಿಗಳನ್ನು ಅವಲೋಕಿಸಿದಾಗ, ಈ ಮಾನದಂಡಗಳು ಬದಲಾಗುತ್ತಾ ಹೋದದ್ದು ಸ್ಪಷ್ಟವಾಗುತ್ತದೆ.

ಭಾರತದ ಎಲ್ಲಾ ರಾಜ್ಯಗಳಲ್ಲಿ ಹರಿದು ಹಂಚಿಹೋಗಿರುವ ಹಿಂದುಳಿದ ವರ್ಗಗಳ ರಾಜಕಾರಣ ಇದೇ ಕಾರಣಕ್ಕೆ ವಿವಿಧ ರೂಪಗಳನ್ನು ಪಡೆಯುತ್ತದೆ. ಬದಲಾದ ಸನ್ನಿವೇಶದಲ್ಲಿ, ಕೆಲವು ಹಿಂದುಳಿದ ವರ್ಗಗಳು ಹೊಸ ಅಸ್ಮಿತೆಯ ಬೇಡಿಕೆಯನ್ನು ಮುಂದಿಟ್ಟಿರುವುದು ಇದೇ ಕಾರಣಕ್ಕಾಗಿ. ಕೆಲವು ಜಾತಿಗಳು ಹಿಂದುಳಿಯುವಿಕೆಯ ಪಟ್ಟಿಯಿಂದ ‘ಅತಿ ಹಿಂದುಳಿಯುವಿಕೆ’ಗೆ ತವಕಿಸಿದ್ದು, ಮೀಸಲಾತಿಯಲ್ಲಿ ಹೆಚ್ಚುವರಿ ಪ್ರಮಾಣದ ಬೇಡಿಕೆಯನ್ನು ಇಟ್ಟಿರುವುದು ಮತ್ತು ದೇಶದ ವಿವಿಧೆಡೆ ಜಾತಿಯ ಜನಗಣತಿಗೆ ಒತ್ತಾಯಿಸಿದ್ದನ್ನೆಲ್ಲ ಈ ಆಧಾರದಲ್ಲಿ ನೋಡಬೇಕು. ಇದು, ಮಂಡಲೋತ್ತರ ಕಾಲದ ಹೊಸ ಐಡೆಂಟಿಟಿ ಅಥವಾ ಅಸ್ಮಿತೆ ರಾಜಕಾರಣಕ್ಕೆ ಮುನ್ಸೂಚನೆಯನ್ನು ನೀಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT