‘ನನ್ನನ್ನು ಮತ್ತೆ ಹೊಟ್ಟೆಯೊಳಗೆ ಹಾಕಿ ಬಿಳಿಯಾಗಿ ಮತ್ತು ಸುಂದರಿಯಾಗಿ ಹೊರಗೆ ಕರೆತರುತ್ತೀಯಾ ಎಂದು ನಾಲ್ಕು ವರ್ಷದವಳಿದ್ದಾಗ ಅಮ್ಮನನ್ನು ನಾನು ಕೇಳಿದ್ದೆ. ಚೆನ್ನಾಗಿಲ್ಲದ ಬಣ್ಣದವಳು ಎಂಬ ಸಂಕಥನದ ಅಡಿಯಲ್ಲಿ ಹುದುಗಿ 50ಕ್ಕೂ ಹೆಚ್ಚು ವರ್ಷ ಬದುಕಿದ್ದೇನೆ’.

ತಮ್ಮ ಕಪ್ಪು ಬಣ್ಣದ ಕುರಿತು ಕೇಳಿಬಂದಿರುವ ಅವಮಾನಕರ ಪ್ರತಿಕ್ರಿಯೆಗಳಿಗೆ ಉತ್ತರವಾಗಿ ಕೇರಳ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾರದಾ ಮುರಳೀಧರನ್ ಅವರು ಫೇಸ್ಬುಕ್ನಲ್ಲಿ ಹಾಕಿರುವ ಮನ ಕಲಕುವಂತಹ ಪೋಸ್ಟ್ ಇದು. ನಮ್ಮ ಸಾರ್ವಜನಿಕ ಸಂಸ್ಕೃತಿಯಲ್ಲಿ ಅತ್ಯಂತ ಮಹತ್ವದ ಕ್ಷಣ ಎಂದು ಇದನ್ನು ಪರಿಗಣಿಸಲೇಬೇಕು. ಭಾರತದ ಕೋಟ್ಯಂತರ ಮಹಿಳೆಯರು (ಹಲವು ಗಂಡಸರು ಕೂಡ) ದಿನವೂ ಅನುಭವಿಸುವ ಭಾವನೆಗಳಿಗೆ, ಜೀವನದ ಉದ್ದಕ್ಕೂ ಅನುಭವಿಸುವ ಚಿತ್ರಹಿಂಸೆಗೆ ಶಾರದಾ ಅವರು ಅಕ್ಷರ ರೂಪ ಕೊಟ್ಟಿದ್ದಾರೆ. ಇಂತಹುದನ್ನು ಅನುಭವಿಸಿ ಬಂದಿದ್ದೇನೆ ಎಂದು ಹೇಳಲು ಅಂತಃಶಕ್ತಿ ಬೇಕು. ಇದನ್ನು ಸಾರ್ವಜನಿಕವಾಗಿ ಹೇಳಲು ದಿಟ್ಟತನ ಇರಬೇಕು. ವಿಶೇಷ ಸ್ಥಾನ, ಮಾತನಾಡುವ ಶಕ್ತಿ ಮತ್ತು ಮಾತನಾಡಿದರೆ ಕೇಳುತ್ತಾರೆ ಎಂಬ ಭರವಸೆ ಇರಬೇಕು. ಆ ವಿಶೇಷ ಸ್ಥಾನವೇ ವಿಮೋಚನೆಯ ಅವಕಾಶವನ್ನೂ ಒದಗಿಸುತ್ತದೆ ಎಂಬುದಕ್ಕೆ ಇಲ್ಲೊಂದು ನಿದರ್ಶನ ಇದೆ.

ಸರಿಯಾಗಿ 65 ವರ್ಷಗಳ ಹಿಂದೆ, 1960ರ ಮಾರ್ಚ್ನಲ್ಲಿ ರಾಮಮನೋಹರ ಲೋಹಿಯಾ ಅವರು ‘ಸ್ಕಿನ್ ಕಲರ್ ಆ್ಯಂಡ್ ಬ್ಯೂಟಿ’ (‘ಇಂಟರ್ವಲ್ ಡ್ಯೂರಿಂಗ್ ಪಾಲಿಟಿಕ್ಸ್’ ಸಂಕಲನದಲ್ಲಿದೆ) ಎಂಬ ಅಸಾಧಾರಣ ಪ್ರಬಂಧವನ್ನು ಬರೆದಿದ್ದರು. ‘ಬಣ್ಣದ ದಬ್ಬಾಳಿಕೆ’ಯ ಆರಂಭಿಕ ವಿಮರ್ಶೆಗಳಲ್ಲಿ ಇದೂ ಒಂದು. ಹೆಣ್ಣಿನ ಸೌಂದರ್ಯ ಬಣ್ಣದಲ್ಲಿದೆ ಎಂಬ ಮಿಥ್ಯೆಯನ್ನು ಒಡೆಯಲು ಲೋಹಿಯಾ ಬಯಸಿದ್ದರು. ‘ಹೆಣ್ಣು ಕಪ್ಪಾಗಿದ್ದರೂ ಬೆಳ್ಳಗಿದ್ದರೂ ಪ್ರೀತಿಸುವ ಮತ್ತು ಪ್ರೀತಿಗೊಳಪಡುವ ಆಕೆಯ ಸೌಂದರ್ಯವು ನಕ್ಷತ್ರಗಳಿಂದ ಕಂಗೊಳಿಸುವ ಆಕಾಶದಂತೆ ಇರುತ್ತದೆ’ ಎಂದು ಬರೆದಿದ್ದರು.

ಚರ್ಮದ ಬಣ್ಣವು ಬಿಳಿಯಾಗಿರಬೇಕು ಎಂಬ ಹಂಬಲವು ಸರಳವಾದ ವ್ಯವಹಾರ ಅಲ್ಲ ಎಂಬುದು ಶಾರದಾ ಅವರ 305 ಪದಗಳ ಪೋಸ್ಟ್ ಮತ್ತು ಲೋಹಿಯಾ ಅವರ ಪ್ರಬಂಧವನ್ನು ಓದಿದಾಗ ಅರ್ಥವಾಗು
ತ್ತದೆ. ಕಪ್ಪು ಬಣ್ಣದ ಕುರಿತು ಇರುವ ಪೂರ್ವಗ್ರಹವನ್ನು ಅರ್ಥ ಮಾಡಿಕೊಳ್ಳಲು ಹೊರಟರೆ, ನಮ್ಮ ಕಾಲದ ಸಂಸ್ಕೃತಿ, ಸಮಾಜ, ಆರ್ಥಿಕ ಮತ್ತು ರಾಜಕೀಯ ಅಸಮಾನತೆಯ ಕೊನೆಯಿಲ್ಲದ ಸ್ವರೂಪವು ಕಣ್ಣ ಮುಂದೆ ಬರುತ್ತದೆ. ‘ಸೌಂದರ್ಯವು ರಾಜಕಾರಣ. ಅದು, ಮನುಷ್ಯ ಮೌಲ್ಯದ ಮೇಲೆ ಹೋರಾಡಿ ಗೆದ್ದವರು ತಮ್ಮದೆಂದು ಹೇಳಿಕೊಳ್ಳುವ ಪಾರಿತೋಷಕ. ಕುರೂಪತನ ಎಂಬ ಕುಟುಕುವಿಕೆಯು ಒಂದು ಆಯುಧ; ಕೆಲವು ಗುಂಪುಗಳು ಕೀಳು, ಹಾಗಾಗಿಯೇ ಕುರೂಪಿ ಎಂದು ಸಮಾಜದ ಶ್ರೇಣೀಕರಣದ ಮೇಲಿನ ಸ್ತರದಲ್ಲಿ ಇರುವವರು ತಮ್ಮ ಮೇಲರಿಮೆಯನ್ನು ಸ್ಥಾಪಿಸಲು ಬಳಸುವ ಆಯುಧ’ ಎಂದು ಮ್ಯಾಕ್ಸೀನ್ ಲೀಡ್ಸ್ ಕ್ರೆಗ್ ಅವರು ‘ಬ್ಯೂಟಿ ಪಾಲಿಟಿಕ್ಸ್’ ಕೃತಿಯಲ್ಲಿ ಹೇಳುತ್ತಾರೆ.

ಈ ವಿದ್ಯಮಾನವನ್ನು ಶಾರದಾ ಅವರು ನಿರ್ಭಿಡೆಯಿಂದ ಕಪ್ಪಿನ ಬಗೆಗಿನ ಪೂರ್ವಗ್ರಹ ಎಂದು ಬಣ್ಣಿಸುತ್ತಾರೆ. ಈ ಪೂರ್ವಗ್ರಹವನ್ನು ಅವರು ಮತ್ತಷ್ಟು ಸ್ಪಷ್ಟಪಡಿಸುತ್ತಾರೆ: ‘ಇದು ಬಣ್ಣದ ಬಗೆಗಿನ ಪೂರ್ವಗ್ರಹವಷ್ಟೇ ಅಲ್ಲ, ಕಪ್ಪು ಎಂದರೆ ಅದು ಎಂದೂ ಒಳ್ಳೆಯದು ಮಾಡದು, ಕಪ್ಪು ಎಂಬುದು ಕೆಡುಕು, ಈ ಹಸಿ ದಬ್ಬಾಳಿಕೆಯೇ ಕತ್ತಲಿನ ಕೇಂದ್ರ’. ಗಾಢ ಛಾಯೆ ಎಂಬಂತಹ ನಯ– ನಾಜೂಕಿನ ಪದವನ್ನು ಅವರು ಬಳಸುವುದಿಲ್ಲ. ತಮ್ಮದು ಉಜ್ವಲವಾದ ಕಪ್ಪು ಬಣ್ಣ ಎನ್ನುತ್ತಾರೆ.

ಲೋಹಿಯಾ ಅವರು ಅಮೆರಿಕದ ಕಪ್ಪುವರ್ಣೀಯರ ಚಳವಳಿಯ ಜೊತೆಗೆ ಗುರುತಿಸಿಕೊಂಡಿದ್ದರು. ಜನಾಂಗೀಯ ತಾರತಮ್ಯದ ವಿರುದ್ಧ ಪ್ರತಿಭಟಿಸಿ ಅವರು ಅಲ್ಲಿ ಬಂಧನಕ್ಕೂ ಒಳಗಾಗಿದ್ದರು. ‘ಯುರೋಪ್ನ ಬಿಳಿಯರು ಈ ಜಗತ್ತನ್ನು ಆಳಿದ ರೀತಿಯಲ್ಲಿ ಆಫ್ರಿಕಾದ ನೀಗ್ರೊಗಳು (ಆಗ ಈ ಪದದ ಬಳಕೆ ಇನ್ನೂ ಇತ್ತು) ಆಳಿರುತ್ತಿದ್ದರೆ ಹೆಣ್ಣಿನ ಸೌಂದರ್ಯದ ಮಾನದಂಡ ಭಿನ್ನವಾಗಿರುತ್ತಿತ್ತು ಎಂಬುದರಲ್ಲಿ ಅನುಮಾನವೇ ಇಲ್ಲ. ಕವಿಗಳು ಮತ್ತು ಪ್ರಬಂಧಕಾರರು ನೀಗ್ರೊ ಚರ್ಮವು ಮೃದು ರೇಷ್ಮೆಯಂತೆ, ಸ್ಪರ್ಶ ಮತ್ತು ನೋಟವು ಹಿತಕರ ಎಂದು ಬಣ್ಣಿಸುತ್ತಿದ್ದರು. ಸುಂದರವಾದ ತುಟಿಗಳು ಅಥವಾ ಸೊಬಗಿನ ಮೂಗಿಗೆ ನೀಗ್ರೊಗಳು ಉದಾಹರಣೆಯಾಗಿ ರಸಾಸ್ವಾದನೆಯ ವಿಧಾನವೇ ಬೇರೆ ಆಗಿರುತ್ತಿತ್ತು’ ಎಂದು ಲೋಹಿಯಾ ಪ್ರತಿಪಾದಿಸಿದ್ದರು.

50 ವರ್ಷಗಳಿಂದ ‘ಈ ಸಂಕಥನದ ಹಿಂದೆ ಹುದುಗಿಹೋಗಿದ್ದೆ’ ಎಂಬ ಶಾರದಾ ಅವರ ಮಾತುಗಳು ಈ ತಾರತಮ್ಯವು ಎಷ್ಟು ವ್ಯಾಪಕ ಮತ್ತು ಗಾಢ ಎಂಬುದನ್ನು ಗುರುತಿಸುತ್ತದೆ. ವರ್ಣೀಯ ಹೆಣ್ಣು ತಳಮಳ ಮತ್ತು ಕೀಳರಿಮೆಯನ್ನೇ ಉಂಡು ಬೆಳೆಯುತ್ತಾಳೆ ಎಂಬುದನ್ನು ಲೋಹಿಯಾ ನಮಗೆ ನೆನಪಿಸುತ್ತಾರೆ. ಸರ್ವವ್ಯಾಪಿ ವಾಸ್ತವವನ್ನು ಗುರುತಿಸಲು ಅವರ ಮಾತುಗಳು ನಮಗೆ ನೆರವಾಗುತ್ತವೆ. ಬಿಳಿಯು ಸೌಂದರ್ಯದ ಅನ್ವರ್ಥನಾಮ ಎಂದು ಭಾರತದ ಸಿನಿಮಾ ರಂಗ ಪರಿಗಣಿಸುತ್ತದೆ. ಕಪ್ಪು ವರ್ಣೀಯರನ್ನು ತಾರತಮ್ಯದಿಂದ ನೋಡಲಾಗುತ್ತಿದೆ, ಅದೊಂದು ಕಳಂಕ ಎಂದು ಪರಿಗಣಿಸಲಾಗುತ್ತಿದೆ ಎಂಬುದನ್ನು ಭಾರತೀಯ ಸಾಹಿತ್ಯವು ಗುರುತಿಸಿದೆ. ಅಭಿರುಚಿ ಹೇಗಿದೆ ಎಂಬುದಕ್ಕೆ ಮಾರುಕಟ್ಟೆಗಳು– ಮದುವೆ ಮಾರುಕಟ್ಟೆ ಮತ್ತು ಸೌಂದರ್ಯವರ್ಧಕ ಉತ್ಪನ್ನಗಳ ಮಾರುಕಟ್ಟೆ– ಅತ್ಯುತ್ತಮ ಸೂಚಕಗಳಾಗಿವೆ. ಮದುವೆಗೆ ಸಂಬಂಧಿಸಿದ ಜಾಹೀರಾತುಗಳಲ್ಲಿ ಈ ಕುರಿತಂತೆ ಯಾವುದೇ ದ್ವಂದ್ವ ಇಲ್ಲ. ಭಾರತದ ಚರ್ಮದ ಆರೈಕೆಯ ಉತ್ಪನ್ನ ಮಾರುಕಟ್ಟೆಯಲ್ಲಿ ಅರ್ಧದಷ್ಟು ಉತ್ಪನ್ನಗಳು ಒಂದಲ್ಲ ಒಂದು ರೀತಿಯಲ್ಲಿ ಚರ್ಮದ ಬಣ್ಣವನ್ನು ಬಿಳಿ ಮಾಡುವವೇ ಆಗಿವೆ. ₹35 ಸಾವಿರ ಕೋಟಿಗೂ ಹೆಚ್ಚು ವಹಿವಾಟು ನಡೆಯುತ್ತಿದ್ದು ಪ್ರತಿವರ್ಷ ಶೇ 6ರಷ್ಟು ಬೆಳವಣಿಗೆಯೂ ಇದೆ. ಬಿಳಿ ಬಣ್ಣದ್ದು ಏನೇ ಇದ್ದರೂ ಅದಕ್ಕೊಂದು ಸಕಾರಾತ್ಮಕತೆಯ ಪ್ರಭೆ ಇದೆ. ಕಪ್ಪು ಇದಕ್ಕೆ ತದ್ವಿರುದ್ಧ. ಈ ಪೂರ್ವಗ್ರಹದ ಕೆಲವೊಂದು ಅಂಶಗಳು ನಮ್ಮ ಪ್ರತಿಭಟನೆಯ ಸಾರ್ವಜನಿಕ ಸಂಸ್ಕೃತಿಯ ಭಾಗವೂ ಆಗಿವೆ: ಕರಾಳ ದಿನ, ಕಪ್ಪು ಪಟ್ಟಿ ಹೀಗೆಯೇ ಮುಂದುವರಿಯುತ್ತದೆ.

ದಬ್ಬಾಳಿಕೆಯ ವ್ಯವಸ್ಥಿತ ಸ್ವರೂಪ ಹೇಗಿದೆ ಎಂಬುದನ್ನು ಗುರುತಿಸುವುದು ಮುಂದಿನ ಹಂತ. ಶಾರದಾ ಅವರ ಹೇಳಿಕೆಯು ಅವರು ಹೆಣ್ಣು ಎಂಬುದನ್ನು ಸೂಚಿಸುತ್ತದೆ. ಜಾತಿಯನ್ನು ಬಹಿರಂಗಪಡಿಸುವುದಿಲ್ಲ ಎಂದೂ ಶಾರದಾ ಅವರು ಹೇಳಿಕೊಂಡಿದ್ದಾರೆ. ಕಪ್ಪು ಬಣ್ಣದ ಕುರಿತು ಇರುವ ಪೂರ್ವಗ್ರಹವು ರಸಾಸ್ವಾದನೆಗೆ ಸಂಬಂಧಿಸಿದ್ದು ಮಾತ್ರ ಅಲ್ಲ, ಹಲವು ಶ್ರೇಣೀಕರಣಗಳಲ್ಲಿ ಬೇರೂರಿದೆ ಎಂಬುದನ್ನು ಲೋಹಿಯಾ ಗುರುತಿಸಿದ್ದಾರೆ. ಇದು ಅಧಿಕಾರದಲ್ಲಿ ನೆಲೆಯೂರಿರುವ ಸಾಂಸ್ಕೃತಿಕ ಮತ್ತು ರಾಚನಿಕ ತಾರತಮ್ಯವನ್ನು ಒಳಗೊಂಡಿರುವ ವ್ಯವಸ್ಥೆ. ಜಗತ್ತಿನಾದ್ಯಂತ ಕಪ್ಪಿನ ಕಳಂಕವನ್ನು ಹೊರಬೇಕಾದುದು ಹೆಣ್ಣಿನ ದೇಹವೇ ಆಗಿದೆ. ಭಾರತದಲ್ಲಿ ಈ ತಾರತಮ್ಯವು ಎರಡು ರೀತಿಯಲ್ಲಿ ವ್ಯಕ್ತವಾಗುತ್ತದೆ: ಜಾತಿ ತಾರತಮ್ಯ ಮತ್ತು ದಕ್ಷಿಣದ ಮೇಲೆ ಉತ್ತರದ ಪ್ರಾಬಲ್ಯ. ವರ್ಣ ದಬ್ಬಾಳಿಕೆಗೆ ಪ್ರತಿರೋಧ ಒಡ್ಡಿದರೆ ಅನ್ಯಾಯದ ಹಲವು ಆಯಾಮಗಳು ತೆರೆದುಕೊಳ್ಳುತ್ತವೆ. ಅವುಗಳೆಂದರೆ, ವಸಾಹತು, ಜನಾಂಗೀಯ, ಲಿಂಗತ್ವ, ಜಾತಿ, ಪ್ರಾದೇಶಿಕ.

ಪ್ರತಿರೋಧವು ಕಪ್ಪಿನ ಸೌಂದರ್ಯವನ್ನು ಸಂಭ್ರಮಿಸುವುದರೊಂದಿಗೆ ಆರಂಭಗೊಳ್ಳಬೇಕು. ನಂದಿತಾ ದಾಸ್ ಅವರು ದಶಕದ ಹಿಂದೆ ‘ಕಪ್ಪು ಸುಂದರ’ ಎಂಬ ಅಭಿಯಾನವನ್ನು ನಡೆಸಿದ್ದರು. ಈ ವಿಚಾರದಲ್ಲಿ ಸಾರ್ವಜನಿಕ ಪ್ರಜ್ಞೆಯನ್ನು ಬದಲಾಯಿಸಲು ನಡೆಸಿದ ಈ ಪ್ರಯತ್ನವು ದಿಟ್ಟವಾದುದಾಗಿತ್ತು.

ಇಂತಹ ಪ್ರತಿರೋಧ ರಾಜಕಾರಣದ ಭವಿಷ್ಯ ಏನು? ಲೋಹಿಯಾ ಅವರ ಪ್ರಬಂಧ ಪ್ರಕಟವಾಗಿ 65 ವರ್ಷಗಳಾದವು. ‘ಕಪ್ಪು ಸುಂದರ’ ಅಭಿಯಾನ ನಡೆದು ದಶಕ ಕಳೆದಿದೆ. ಆದರೆ ಏನೂ ಬದಲಾದಂತೆ ಕಾಣಿಸುತ್ತಿಲ್ಲ. ಸೌಂದರ್ಯವನ್ನು ಮೌಲ್ಯಮಾಪನ ಮಾಡುವ ವಿಧಾನಕ್ಕೆ ಸಂಬಂಧಿಸಿ ‘ರಸಾಸ್ವಾದನಾ ಕ್ರಾಂತಿ’ಯೊಂದು ನಡೆಯಬೇಕು ಎಂದು ಲೋಹಿಯಾ ಹೇಳಿದ್ದರು. ಈ ಕ್ರಾಂತಿಯು ಯಾವ ಮಾರ್ಗದಲ್ಲಿ ಸಾಗಬೇಕು ಎಂಬುದು ಸ್ಪಷ್ಟವಿಲ್ಲ. ಆದರೆ ಸಂಕುಚಿತವಾದ ಪಕ್ಷ ರಾಜಕಾರಣ ಅಥವಾ ಸರ್ಕಾರಿ ಮನಃಸ್ಥಿತಿಯ ರಾಜಕಾರಣ ಅಲ್ಲ ಎಂಬುದು ನಮಗೆ ತಿಳಿದಿದೆ. ಇಂತಹ ರಾಜಕಾರಣವು ಸಾಂಸ್ಕೃತಿಕ ರಾಜಕಾರಣ ಆಗಿರಬೇಕು. ಅದು ಯುವಜನರನ್ನು ವಿಶೇಷವಾಗಿ ಯುವತಿಯರನ್ನು ಕೇಂದ್ರೀಕರಿಸಿ ಇರಬೇಕು. ಸಾಮೂಹಿಕ ಮಾಧ್ಯಮಗಳಲ್ಲಿ ಪ್ರಕಟವಾಗುವ ಚಿತ್ರಣಗಳಿಗೆ ಸವಾಲೆಸೆಯಬೇಕು. ವಿದೇಶದಲ್ಲಿದ್ದು ಅಲ್ಲಿಂದ ಹಿಂದಿರುಗಿದ ಯುವಜನ ಅಲ್ಲಿ ಜನಾಂಗೀಯ ಮತ್ತು ವರ್ಣ ತಾರತಮ್ಯವನ್ನು ಎದುರಿಸಿರುತ್ತಾರೆ. ಅಂತಹವರೇ ಇಲ್ಲಿನ ವರ್ಣ ತಾರತಮ್ಯದ ಪ್ರತಿರೋಧಕ್ಕೆ ಕಿಡಿ ಹತ್ತಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.