ನಕ್ಷತ್ರಗಳು ತುಂಬಿರುವ ಒಂದು ರಾತ್ರಿ ನಿಮ್ಮ ಮನೆಯ ಅಂಗಳದಲ್ಲೋ, ಮಹಡಿಯಲ್ಲೋ ನಿಂತು ಹೊಳೆಯುತ್ತಿರುವ ಚಂದ್ರನನ್ನು ನೋಡುತ್ತಿರುವುದನ್ನು ಕಲ್ಪಿಸಿಕೊಳ್ಳಿ. ಈಗ ಒಂದು ಬಾಹ್ಯಾಕಾಶ ನೌಕೆಯಲ್ಲಿ ಕುಳಿತು, ವೇಗವಾಗಿ ಚಂದ್ರನ ಸುತ್ತಲೂ ಪರಿಭ್ರಮಣೆ ನಡೆಸುವುದನ್ನು ಊಹಿಸಿ. ಆದರೆ, ನೀವು ಚಂದ್ರನ ಅಂಗಳದಲ್ಲಿ ಇಳಿಯುತ್ತಿಲ್ಲ. ಬದಲಿಗೆ, ಭೂಮಿಯ ಮೇಲೆ ಎಂದೂ ಕಾಣದ, ಚಂದ್ರನ ವಿರುದ್ಧ ದಿಕ್ಕನ್ನೂ ನೋಡುವಷ್ಟು ಚಂದ್ರನ ಹತ್ತಿರದಿಂದ ನೀವು ಸಾಗುತ್ತೀರಿ. ಇದು ಬಾಲಿವುಡ್ ಅಥವಾ ಹಾಲಿವುಡ್ ವೈಜ್ಞಾನಿಕ ಚಲನಚಿತ್ರದ ದೃಶ್ಯದಂತೆ ಭಾಸವಾಗುತ್ತಿದೆ ಅಲ್ಲವೇ? ಆದರೆ, ಇದು ಇಂದು ಕೇವಲ ಕಲ್ಪನೆ ಮಾತ್ರವಲ್ಲ! ಮುಂದಿನ ಕೆಲ ವಾರಗಳಲ್ಲಿ, ನಾಲ್ವರು ಧೈರ್ಯಶಾಲಿ ಗಗನಯಾತ್ರಿಗಳು ನಾಸಾದ ಆರ್ಟೆಮಿಸ್ 2 ಯೋಜನೆಯ ಮೂಲಕ ಈ ಕಲ್ಪನೆಯನ್ನು ನನಸಾಗಿಸಲಿದ್ದಾರೆ. ಸಮಸ್ತ ಜಗತ್ತು, ಅದರಲ್ಲೂ ಇಸ್ರೊದ ಸಾಧನೆಗಳ ಕುರಿತು ಅಪಾರ ಹೆಮ್ಮೆ ಹೊಂದಿರುವ ಭಾರತ ಈ ಯೋಜನೆಯನ್ನು ಕುತೂಹಲದ ಕಣ್ಣುಗಳಿಂದ ವೀಕ್ಷಿಸಲಿದೆ.

ಈಗ ಚಂದ್ರ ಅನ್ವೇಷಣೆಯ ಕುರಿತೊಮ್ಮೆ ಗಮನ ಹರಿಸೋಣ. ಕೊನೆಯ ಬಾರಿಗೆ ಮಾನವರು ಚಂದ್ರನ ಬಳಿಗೆ ಸಾಗಿದ್ದು ಅಪೊಲೊ ಚಂದ್ರಾನ್ವೇಷಣಾ ಯೋಜನೆಗಳ ಕಾಲಘಟ್ಟದಲ್ಲಿ, ಅಂದರೆ 1972ರಲ್ಲಿ. ಅದಾಗಿ ಈಗಾಗಲೇ ಐವತ್ತಕ್ಕೂ ಹೆಚ್ಚು ವರ್ಷಗಳಾಗಿದ್ದು, ಅದು ನಮ್ಮಲ್ಲಿ ಬಹಳಷ್ಟು ಜನರು ಜನಿಸುವುದಕ್ಕೂ ಹಿಂದಿನ ಕಥೆ! ಆ ಕಾಲದಲ್ಲಿ ಕೈಗೊಂಡ ಯೋಜನೆಯಡಿ ನೀಲ್ ಆರ್ಮ್ಸ್ಟ್ರಾಂಗ್ ಅವರಂತಹ ಗಗನಯಾತ್ರಿಗಳು ಚಂದ್ರನ ಮಣ್ಣಿನ ಮೇಲೆ ನಡೆದಾಡಿ, ಬ್ರಹ್ಮಾಂಡದ ರಹಸ್ಯಗಳನ್ನು ಹೊಂದಿರುವ ಚಂದ್ರನ ಕಲ್ಲುಗಳನ್ನು ಸಂಗ್ರಹಿಸಿದರು. ಈ ದೃಶ್ಯಾವಳಿಗಳನ್ನು ಹಳೆಯ ಕಪ್ಪು ಬಿಳುಪು ಟಿವಿಗಳ ಮುಂದೆ ಕುಳಿತಿದ್ದ ವೀಕ್ಷಕರು ಬೆರಗು ಕಣ್ಣುಗಳಿಂದ ನೋಡಿದ್ದರು. ಆ ನಂತರ, ಚಂದ್ರ ಅನ್ವೇಷಣಾ ಯೋಜನೆಗಳು ಇದ್ದಕ್ಕಿದ್ದಂತೆ ತಣ್ಣಗಾದವು. ಅದು ಒಂದು ಜನಪ್ರಿಯ ಟಿವಿ ಸರಣಿ ದೀರ್ಘಕಾಲ ನಿಂತು ಹೋದಂತಾಗಿತ್ತು. ಈಗ ನಾಸಾ ಚಂದ್ರಾನ್ವೇಷಣೆಯನ್ನು ತನ್ನ ಆರ್ಟೆಮಿಸ್ ಯೋಜನೆಯ ಮೂಲಕ ಮರಳಿ ಆರಂಭಿಸುತ್ತಿದೆ. ಆರ್ಟೆಮಿಸ್ ಎನ್ನುವುದು ಗ್ರೀಕ್ ಭಾಷೆಯಲ್ಲಿ ಚಂದ್ರ ದೇವತೆಗೆ ಇರುವ ಹೆಸರು. ಆರ್ಟೆಮಿಸ್ ಕೇವಲ ಈಗ ಒಂದು ಬಾರಿಗೆ ಸೀಮಿತವಾಗಿರುವ ಸಾಹಸವಲ್ಲ. ಇದೊಂದು ದೀರ್ಘಾವಧಿಯ ಯೋಜನೆಯಾಗಿದ್ದು, ಮಾನವರನ್ನು ಚಂದ್ರನಂಗಳಕ್ಕೆ ಮರಳಿ ಕರೆದೊಯ್ದು, ಅಲ್ಲಿ ದೀರ್ಘಕಾಲ ನೆಲೆಸಲು ನೆರವಾಗುವಂತಹ ನೆಲೆಗಳನ್ನು ಸ್ಥಾಪಿಸಿ, ಕ್ರಮೇಣ ಮಂಗಳ ಗ್ರಹವನ್ನು ತಲುಪುವ ಗುರಿ ಹೊಂದಿದೆ. ಆಗ ಚಂದ್ರ ನಮ್ಮ ನೆರೆಯ ತರಬೇತಿ ಅಂಗಳವಾಗಲಿದ್ದು, ನಮಗೆ ಭೂಮಿಯಿಂದ ದೂರದಲ್ಲಿ ಪಾರಾಗಲು, ಗಾಳಿ, ನೀರಿನ ನಿರ್ವಹಣೆ, ಮತ್ತು ಕಠಿಣ ವಾತಾವರಣದಲ್ಲಿ ಆಹಾರ ಬೆಳೆಯುವುದನ್ನು ಕಲಿಯಲಾಗುತ್ತದೆ.

ಆರ್ಟೆಮಿಸ್ 2 ಯೋಜನೆ ಈ ಗುರಿಯ ಕೇಂದ್ರದಲ್ಲಿದೆ. ಆರ್ಟೆಮಿಸ್ 1 ಯೋಜನೆಯನ್ನು 2022ರಲ್ಲಿ ಕೈಗೊಳ್ಳಲಾಗಿದ್ದು, ಅದೊಂದು ಮಾನವ ರಹಿತ ಪರೀಕ್ಷೆಯಾಗಿತ್ತು. ಅದರಲ್ಲಿ ಸಿಬ್ಬಂದಿ ಹೊಂದಿರದ ಬಾಹ್ಯಾಕಾಶ ನೌಕೆ ಚಂದ್ರನ ಸುತ್ತಲೂ ಪರಿಭ್ರಮಣೆ ನಡೆಸಿ, ಎಲ್ಲವೂ ಸಮರ್ಥವಾಗಿ ಕಾರ್ಯಾಚರಿಸುತ್ತಿದೆ, ಬಾಹ್ಯಾಕಾಶದ ಅಪಾಯಗಳಾದ ವಿಕಿರಣ, ಅತಿಯಾದ ತಣ್ಣನೆಯ ವಾತಾವರಣವನ್ನು ಎದುರಿಸಲು ಬಾಹ್ಯಾಕಾಶ ನೌಕೆ ಸಮರ್ಥವಾಗಿದೆ ಎಂದು ಸಾಬೀತುಪಡಿಸಿತು. ಈಗ ಆರ್ಟೆಮಿಸ್ 2 ಯೋಜನೆ ನೈಜ ಗಗನಯಾತ್ರಿಗಳನ್ನು ಚಂದ್ರನ ಬಳಿಗೊಯ್ದು, ಹೊಸ ಸಾಧನೆ ನಿರ್ಮಿಸಲು ಸಿದ್ಧವಾಗಿದೆ. ಈ ನಾಲ್ವರು ಗಗನಯಾತ್ರಿಗಳು ಚಂದ್ರನ ಪರಿಭ್ರಮಣೆ ನಡೆಸಲಿದ್ದು, ಚಂದ್ರನ ಕುಳಿಗಳಿಂದ ತುಂಬಿರುವ ಮೇಲ್ಮೈಗೆ 100 ಕಿಲೋಮೀಟರ್ಗಳಷ್ಟು ಸನಿಹಕ್ಕೆ ತೆರಳಲಿದ್ದಾರೆ. ಆ ಬಳಿಕವೇ ಅವರು ಭೂಮಿಗೆ ಹಿಂದಿರುಗಲಿದ್ದಾರೆ. ಈ ಯೋಜನೆಯಲ್ಲಿ ಚಂದ್ರನ ಮೇಲ್ಮೈಯಲ್ಲಿ ಇಳಿಯುವುದಿಲ್ಲ. ಚಂದ್ರನ ಮೇಲೆ ಮಾನವರ ಲ್ಯಾಂಡಿಂಗನ್ನು ಆರ್ಟೆಮಿಸ್ 3 ಯೋಜನೆಯಲ್ಲಿ ಉದ್ದೇಶಿಸಲಾಗಿದೆ. ಆದರೆ, ಆರ್ಟೆಮಿಸ್ 2 ಹತ್ತು ದಿನಗಳ ಅವಧಿಯ ಯೋಜನೆಯಾಗಿದ್ದು, ಅಂದಾಜು 4.5 ಲಕ್ಷ ಕಿಲೋಮೀಟರ್ ಪ್ರಯಾಣವನ್ನು ಒಳಗೊಂಡಿದೆ. ಇದು ಬಾಹ್ಯಾಕಾಶದಲ್ಲಿ ಗಗನಯಾತ್ರಿಗಳ ಸಹಿಷ್ಣುತೆಯನ್ನೂ ಪರೀಕ್ಷಿಸಲಿದೆ. ಇದು ಒಂದು ರೀತಿಯಲ್ಲಿ ಹೊಸ ಕಾರನ್ನು ಸುದೀರ್ಘ ಪ್ರವಾಸಕ್ಕೆ ಒಯ್ಯುವ ಮುನ್ನ ಒಂದು ಹೆದ್ದಾರಿಯಲ್ಲಿ ಪರೀಕ್ಷಾ ಚಾಲನೆ ನಡೆಸಿದಂತಿರಲಿದೆ. ಇದರಲ್ಲಿ ಎಲ್ಲವೂ ದೀರ್ಘ ಪ್ರವಾಸಕ್ಕೆ ಸೂಕ್ತವಾಗಿದೆಯೇ ಎಂದು ತಿಳಿದುಬರುತ್ತದೆ.

ಈ ಮಹತ್ತರ ಪ್ರಯಾಣಕ್ಕೆ ಸ್ಪೇಸ್ ಲಾಂಚ್ ಸಿಸ್ಟಮ್ ಎನ್ನುವ ರಾಕೆಟ್ ಶಕ್ತಿ ನೀಡಲಿದೆ. ಇದು 98 ಮೀಟರ್ ಎತ್ತರದ ರಾಕೆಟ್ ಆಗಿದ್ದು, ಸ್ಟ್ಯಾಚ್ಯೂ ಆಫ್ ಲಿಬರ್ಟಿಗಿಂತಲೂ ಎತ್ತರವಾಗಿದೆ. ಈ ದೈತ್ಯ ರಾಕೆಟ್ ಅಸಾಧಾರಣ ಪ್ರಮಾಣದ ಥ್ರಸ್ಟ್ ಬಿಡುಗಡೆಗೊಳಿಸಲಿದ್ದು, ಟೇಕಾಫ್ ಸಂದರ್ಭದಲ್ಲಿ 13 ಬೋಯಿಂಗ್ 747 ಜೆಟ್ಗಳ ಥ್ರಸ್ಟ್ಗೆ ಸಮನಾಗಿರಲಿದೆ. ಇದು ಬಿಡುಗಡೆಗೊಳಿಸುವ ಬೆಂಕಿ ಕರಗಿದ ಲಾವಾಗಿಂತಲೂ ಹೆಚ್ಚು ಬಿಸಿಯಾಗಿರಲಿದೆ! ಇದರ ಮೇಲ್ಭಾಗದಲ್ಲಿ ಗಗನಯಾತ್ರಿಗಳ ಮನೆಯಾದ ಓರಿಯಾನ್ ಕ್ಯಾಪ್ಸೂಲ್ ಇರಲಿದೆ. ಇದೊಂದು 3 ಮೀಟರ್ ಅಗಲದ ಗೂಡಿನಂತಿದ್ದು, ಆಸನಗಳು, ಕಂಪ್ಯೂಟರ್ಗಳು, ಮತ್ತು ಗಾಳಿ ಮತ್ತು ನೀರಿನ ಮರುಬಳಕೆ ನಡೆಸುವ ಜೀವ ಬೆಂಬಲ ವ್ಯವಸ್ಥೆಗಳನ್ನು ಹೊಂದಿದೆ. ಇದು ಒಂದು ಅತ್ಯಾಧುನಿಕ ಕ್ಯಾಂಪಿಂಗ್ ವಾಹನವನ್ನು ಹೋಲುತ್ತದೆ. ಜನವರಿ 17, 2026ರಂದು ನಾಸಾ ಈ ದೈತ್ಯ ರಾಕೆಟ್ಟನ್ನು ಅದರ ಫ್ಲೋರಿಡಾದ ಜೋಡಣಾ ಕಟ್ಟಡದಿಂದ ಕೆನೆಡಿ ಬಾಹ್ಯಾಕಾಶ ಕೇಂದ್ರದ 39ಬಿ ಉಡಾವಣಾ ವೇದಿಕೆಗೆ ಸ್ಥಳಾಂತರಿಸಿತು. 6.4 ಕಿಲೋಮೀಟರ್ಗಳ ಈ ಪ್ರಯಾಣಕ್ಕೆ ಬರೋಬ್ಬರಿ 11 ಗಂಟೆಗಳೇ ಬೇಕಾದವು. ಈ ಬೃಹತ್ ರಾಕೆಟ್ಗೆ ಯಾವುದೇ ಹಾನಿಯಾಗದಂತೆ ಸಾಗಿಸುವ ಸಲುವಾಗಿ, ಒಂದು ಸೈಕಲ್ಗಿಂತಲೂ ನಿಧಾನವಾಗಿ, ಪ್ರತಿ ಗಂಟೆಗೆ ಕೇವಲ 1.6 ಕಿಲೋಮೀಟರ್ ವೇಗದಲ್ಲಿ ಸಾಗಿಸಲಾಯಿತು. ಈ ಸಾಗಾಣಿಕೆ ಒಂದು ಮಹತ್ವದ ಮೈಲಿಗಲ್ಲಾಗಿದ್ದು, ಹಾರ್ಡ್ವೇರ್ ಉಡಾವಣೆಗೆ ಸಜ್ಜಾಗಿರುವುದನ್ನು ಪ್ರದರ್ಶಿಸಿದೆ. ಇಂಜಿನಿಯರ್ಗಳು ಇತ್ತೀಚೆಗೆ ಓರಿಯನ್ ಕ್ಯಾಪ್ಸೂಲಿನ ಉಷ್ಣತಾ ಕವಚವನ್ನು ಪರೀಕ್ಷಿಸಿದ್ದು, ಇದು ಭೂಮಿಗೆ ಮರು ಪ್ರವೇಶಿಸುವ ಸಂದರ್ಭದಲ್ಲಿ 2,760 ಡಿಗ್ರಿ ಸೆಲ್ಸಿಯಸ್ ತಾಪಮಾನವನ್ನು ತಾಳಿಕೊಳ್ಳಬೇಕಿದ್ದು, ಬೆಂಕಿಯ ಮಳೆಯ ಎದುರು ರಕ್ಷಣೆ ನೀಡುವ ಅದ್ಭುತ ಕವಚದಂತೆ ಕಾರ್ಯಾಚರಿಸಲಿದೆ.

ಫೆಬ್ರುವರಿ 2ರ ವೇಳೆಗೆ ನಾಸಾ ʼವೆಟ್ ಡ್ರೆಸ್ ರಿಹರ್ಸಲ್ʼ ಎಂದು ಹೆಸರು ನೀಡಿರುವ ಒಂದು ಗಂಭೀರ ಪರೀಕ್ಷಾ ಪ್ರಯೋಗ ನಡೆಯಲಿದೆ. ಇದರಲ್ಲಿ ನಾಸಾದ ತಂಡ ರಾಕೆಟ್ ಒಳಗೆ ಅತ್ಯಂತ ತಣ್ಣಗಿನ, 2.7 ಮಿಲಿಯನ್ ಲೀಟರ್ ಇಂಧನವನ್ನು (-253 ಡಿಗ್ರಿ ಸೆಲ್ಸಿಯಸ್ ಮತ್ತು -183 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿರುವ ದ್ರವ ಜಲಜನಕ ಮತ್ತು ಆಮ್ಲಜನಕ) ತುಂಬಿಸಲಿದೆ. ಬಳಿಕ ಸಂಪೂರ್ಣ ಕೌಂಟ್ ಡೌನ್ ಪ್ರಕ್ರಿಯೆಯನ್ನು ಉಡಾವಣಾ ಕ್ಷಣದ ತನಕ ಪ್ರಾಯೋಗಿಕವಾಗಿ ನಡೆಸಲಾಗುತ್ತದೆ. ಬಳಿಕ ಇಂಜಿನ್ಗಳನ್ನು ಚಾಲ್ತಿಗೊಳಿಸದೆ, ಇಂಧನವನ್ನು ಹೊರ ತೆಗೆಯಲಾಗುತ್ತದೆ. ಈ ಪರೀಕ್ಷೆ ಏನಾದರೂ ಸಮಸ್ಯೆ ಇದ್ದರೆ ಗುರುತಿಸಿ, ಪರಿಹರಿಸಲು ನೆರವಾಗುತ್ತದೆ. ಇದನ್ನು ನೈಜ ಕ್ರಿಕೆಟ್ ಸರಣಿಗೂ ಮುನ್ನ ಆಡುವ ಅಭ್ಯಾಸ ಪಂದ್ಯಕ್ಕೆ ಹೋಲಿಸಬಹುದು. ಎಲ್ಲವೂ ಅಂದುಕೊಂಡಂತೆ ಸುಗಮವಾಗಿ ನಡೆದರೆ, ಫೆಬ್ರವರಿ 6, 2026ರ ವೇಳೆಗೆ ಉಡಾವಣೆ ನಡೆಸುವ ನಿರೀಕ್ಷೆಗಳಿವೆ. ಒಂದು ವೇಳೆ ಹವಾಮಾನದ ಕಾರಣಗಳಿಂದ ವಿಳಂಬ ಉಂಟಾದರೆ, ಉಡಾವಣೆಗೆ ಫೆಬ್ರವರಿ 15ರ ತನಕ ಪರ್ಯಾಯ ದಿನಗಳನ್ನೂ ನಿಗದಿಪಡಿಸಲಾಗಿದೆ. ಯಾಕೆಂದರೆ, ರಾಕೆಟ್ಗಳಿಗೆ ಬಿರುಗಾಳಿಗಳು ಅಥವಾ ಬಲವಾದ ಮಾರುತಗಳು ಪೂರಕವಾಗಿರುವುದಿಲ್ಲ.

ಈಗ ಈ ಯೋಜನೆಯಲ್ಲಿ ಹೊಸ ಅಧ್ಯಾಯ ಬರೆಯಲಿರುವ ಹೀರೊಗಳನ್ನು ಪರಿಚಯಿಸಿಕೊಳ್ಳೋಣ. ಬಾಹ್ಯಾಕಾಶ ನಿಲ್ದಾಣದಲ್ಲಿ ಕಾರ್ಯಾಚರಿಸಿದ ಅನುಭವ ಹೊಂದಿರುವ, ಅಮೆರಿಕನ್ ನೌಕಾಪಡೆಯ ಪೈಲಟ್ ಆಗಿರುವ ಕಮಾಂಡರ್ ರೀಡ್ ವೈಸ್ಮ್ಯಾನ್ ತನ್ನ ಅನುಭವದೊಡನೆ ಈ ಯೋಜನೆಯ ನೇತೃತ್ವ ವಹಿಸಲಿದ್ದಾರೆ. ಯೋಜನೆಯ ಪೈಲಟ್ ಆಗಿರುವ ವಿಕ್ಟರ್ ಗ್ಲೋವರ್ ಯಾವುದೇ ಚಂದ್ರ ಅನ್ವೇಷಣಾ ಯೋಜನೆಯಲ್ಲಿ ಪಾಲ್ಗೊಂಡಿರುವ ಮೊದಲ ಕರಿಯ ಜನಾಂಗದ ಗಗನಯಾತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದು, ಬಾಹ್ಯಾಕಾಶ ಎಲ್ಲರನ್ನೂ ಸ್ವಾಗತಿಸುತ್ತದೆ ಎನ್ನುವ ಸಂದೇಶವನ್ನು ನೀಡಿ, ಲಕ್ಷಾಂತರ ಜನರಿಗೆ ಸ್ಫೂರ್ತಿ ತುಂಬಲಿದ್ದಾರೆ. ಇನ್ನು ಯೋಜನಾ ತಜ್ಞರಾದ ಕ್ರಿಸ್ಟೀನಾ ಕೋಚ್ ಅವರು ಈಗಾಗಲೇ ಅತ್ಯಂತ ಸುದೀರ್ಘ ಕಾಲ ಬಾಹ್ಯಾಕಾಶ ಯಾತ್ರೆ ನಡೆಸಿರುವ ಮಹಿಳೆ ಎಂಬ ದಾಖಲೆ ನಿರ್ಮಿಸಿದ್ದು, ಚಂದ್ರನ ಪರಿಭ್ರಮಣೆ ನಡೆಸಿದ ಮೊದಲ ಮಹಿಳೆ ಎನಿಸಲಿದ್ದಾರೆ.

ಈ ಮೂಲಕ ಪ್ರತಿಭೆಗೆ ಯಾವುದೇ ಲಿಂಗಭೇದವಿಲ್ಲ ಎಂದು ಸಾರಲಿದ್ದಾರೆ. ಇನ್ನು ಕೆನೆಡಿಯನ್ ಗಗನಯಾತ್ರಿ ಜೆರೆಮಿ ಹ್ಯಾನ್ಸೆನ್ ಅವರು ಅಂತಾರಾಷ್ಟ್ರೀಯ ಸಹಭಾಗಿತ್ವಕ್ಕೆ ಸಾಕ್ಷಿಯಾಗಲಿದ್ದು, ವಿವಿಧ ದೇಶಗಳು ಒಂದು ದೊಡ್ಡ ಕನಸಿಗೆ ಹೇಗೆ ಕೈ ಜೋಡಿಸುತ್ತವೆ ಎನ್ನುವುದನ್ನು ಪ್ರದರ್ಶಿಸಲಿದ್ದಾರೆ. ಇವರೆಲ್ಲರೂ ಯಾವುದೋ ಚಲನಚಿತ್ರಗಳ ಸೂಪರ್ ಹೀರೋಗಳಲ್ಲ. ಇವರು ಅತ್ಯಂತ ಕಠಿಣ ತರಬೇತಿ ಪಡೆದಿರುವ, ತೂಕರಹಿತ ಸಿಮ್ಯುಲೇಟರ್ಗಳಲ್ಲಿ ತೇಲುವುದನ್ನು ಅಭ್ಯಾಸ ನಡೆಸಿರುವ, ಸಂಭಾವ್ಯ ಅಡೆತಡೆಗಳನ್ನು ಸರಿಪಡಿಸುವುದನ್ನು ಕಲಿತಿರುವ, ತಮ್ಮ ಕುಟುಂಬಗಳಿಂದ ದೂರವಿರುವಾಗ ಆಹಾರವನ್ನು ಹಂಚಿಕೊಂಡು ಸೇವಿಸುವ ಸಾಮಾನ್ಯ ಮಾನವರೇ ಆಗಿದ್ದಾರೆ. ಅವರು ಚಂದ್ರನ ಬಳಿ ಸಾಗಿದಾಗ, ಭೂಮಿ ಅವರಿಗೆ ದೂರದಲ್ಲಿರುವ ಒಂದು ನೀಲಿ ಬಣ್ಣದ ಸಣ್ಣ ಚೆಂಡಿನಂತೆ ಕಾಣಲಿದ್ದು, ನಮ್ಮ ಗ್ರಹ ಎಷ್ಟು ಅಮೂಲ್ಯವಾದುದು ಎಂಬ ಅರಿವು ಮೂಡಿಸಲಿದೆ.

ಈ ಯೋಜನೆ ಭಾರತೀಯರಿಗೆ ಏಕೆ ಮುಖ್ಯ?

ಬಾಹ್ಯಾಕಾಶ ಎನ್ನುವುದು ಶ್ರೀಮಂತರಿಗೆ ಸೀಮಿತವಾದ ಹವ್ಯಾಸವಲ್ಲ. ಅದು ಒಂದು ಪ್ರಾಯೋಗಿಕ ಪ್ರಗತಿಯೂ ಹೌದು. ನಮ್ಮ ಇಸ್ರೋದ ಚಂದ್ರಯಾನ 3 ಯೋಜನೆ 2023ರಲ್ಲಿ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದಿದ್ದು, ಭವಿಷ್ಯದಲ್ಲಿ ರಾಕೆಟ್ ಇಂಧನವಾಗಿ ಬಳಸಬಹುದಾದ, ಮಂಜುಗಡ್ಡೆಯ ರೂಪದಲ್ಲಿರುವ ನೀರನ್ನು ಪತ್ತೆಹಚ್ಚಿತ್ತು. ಇದು ಒಂದು ರೀತಿ ಉಚಿತ ಪೆಟ್ರೋಲನ್ನು ಪತ್ತೆಹಚ್ಚಿದಂತಾಗಿದೆ. ಆರ್ಟೆಮಿಸ್ 2 ಇಂತಹ ತಂತ್ರಜ್ಞಾನವನ್ನು ಇನ್ನಷ್ಟು ಆಧುನೀಕರಿಸಲಿದ್ದು, ಶುದ್ಧ ಇಂಧನಕ್ಕಾಗಿ ಉತ್ತಮ ಸೌರ ಫಲಕಗಳು, ಕ್ಯಾನ್ಸರ್ ಚಿಕಿತ್ಸೆಗೆ ಉತ್ತಮ ವಿಕಿರಣ ಫಲಕಗಳು, ಭಾರತೀಯ ಸ್ಟಾರ್ಟಪ್ಗಳಿಗೆ ಸ್ಫೂರ್ತಿ ನೀಡಬಲ್ಲ ರೋಬಾಟಿಕ್ಸ್ಗಳನ್ನು ಒಳಗೊಂಡಿದೆ. ಇದು ಇಂಜಿನಿಯರಿಂಗ್ ಮತ್ತು ವೈಜ್ಞಾನಿಕ ಅವಕಾಶಗಳನ್ನು ನಿರ್ಮಿಸಲಿದ್ದು, ನಮ್ಮ ಆರ್ಥಿಕತೆಗೂ ಉತ್ತೇಜನ ನೀಡಲಿದೆ. ಇನ್ನೊಂದು ಆಸಕ್ತಿಕರ ವಿಚಾರವೆಂದರೆ, ಸಾವಿರಾರು ಭಾರತೀಯರೂ ಸೇರಿದಂತೆ, 15 ಲಕ್ಷ ಜನರ ಹೆಸರುಗಳನ್ನು ಒಂದು ಯುಎಸ್ಬಿ ಡ್ರೈವ್ನಲ್ಲಿ ಸಂಗ್ರಹಿಸಿ, ಆರಿಯನ್ ಚಂದ್ರನ ಬಳಿಗೆ ಒಯ್ಯಲಿದೆ. ನಮ್ಮ ಹೆಸರುಗಳೂ ಅಲ್ಲಿದ್ದು, ಆ ಮೂಲಕ ನಾವೂ ಬಾಹ್ಯಾಕಾಶ ಅನ್ವೇಷಣೆಗೆ ಇಳಿದಂತಾಗಬಹುದು!

ಫೆಬ್ರುವರಿ ಈಗ ಹತ್ತಿರ ಬಂದಿದ್ದು, ದೀಪಾವಳಿಯ ಪಟಾಕಿಗೆ ಇರುವಂತಹ ಉತ್ಸುಕತೆಯೇ ಈಗಲೂ ಹೆಚ್ಚುತ್ತಿದೆ. ಇಂತಹ ಯೋಜನೆಗಳಲ್ಲಿ ವೇಗಕ್ಕಿಂತಲೂ ಸುರಕ್ಷತೆ ಮತ್ತು ಪರಿಪೂರ್ಣತೆ ಮುಖ್ಯವಾಗಿರುವುದರಿಂದ, ಒಂದಷ್ಟು ವಿಳಂಬಗಳು ಉಂಟಾಗಬಹುದು. ಆದರೆ, ಅಂತಿಮ ಫಲಿತಾಂಶ ಮಾತ್ರ ಅತ್ಯುತ್ತಮವಾಗಿರಲಿದೆ. ಈ ಯೋಜನೆ ಚಂದ್ರನ ಕುರಿತ ಆಸಕ್ತಿಯನ್ನು ಮರಳಿ ಚಾಲ್ತಿಗೊಳಿಸಿ, ನಾವೀನ್ಯತೆಗಳ ಹಂಚಿಕೊಳ್ಳುವಿಕೆಯ ಮೂಲಕ ಹವಾಮಾನ ಬದಲಾವಣೆಯಂತಹ ಸವಾಲುಗಳನ್ನು ಜೊತೆಯಾಗಿ ಎದುರಿಸಲು ಮಾನವ ಜನಾಂಗವನ್ನು ಒಗ್ಗೂಡಿಸಲಿದೆ. ಈ ರಾಕೆಟ್ ಆಕಾಶಕ್ಕೆ ಚಿಮ್ಮುವಾಗ, ಇದು ಕೇವಲ ಲೋಹ ಮತ್ತು ಬೆಂಕಿಯಲ್ಲ. ಬದಲಿಗೆ ಮಾನವ ಸಮುದಾಯದ ಇಚ್ಛಾಶಕ್ತಿಯ ಹಾರಾಟವಾಗಲಿದೆ. ಆ ಮೂಲಕ ಛಲ ಮತ್ತು ಬುದ್ಧಿವಂತಿಕೆಗಳ ಮೂಲಕ, ನಕ್ಷತ್ರಗಳೂ ನಮ್ಮ ನಿಲುಕಿನಲ್ಲಿವೆ ಎನ್ನುವುದನ್ನು ಸಾಬೀತುಪಡಿಸಲಾಗುತ್ತದೆ. ಚಂದ್ರ ಈಗ ನಮ್ಮನ್ನು ಬಳಿಗೆ ಕರೆಯುತ್ತಿದ್ದು, ನಾವು ಜೊತೆಯಾಗಿ ಉತ್ತರ ನೀಡಬೇಕಿದೆ.

(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.