ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿಶ್ಲೇಷಣೆ: ಗಿಡಮೂಲಿಕಾ ಕ್ಷೇತ್ರಕ್ಕೆ ಬೇಕು ಮದ್ದು!

Published 15 ಜೂನ್ 2024, 0:00 IST
Last Updated 15 ಜೂನ್ 2024, 0:00 IST
ಅಕ್ಷರ ಗಾತ್ರ

ಭಾರತೀಯ ವೈದ್ಯಕೀಯ ಪದ್ಧತಿಗಳು ಹಿಂದಿನ ಹತ್ತು ವರ್ಷಗಳಲ್ಲಿ ಸಾಗಿಬಂದ ಸಾಧನೆಯ ಪಥವನ್ನು ವರ್ಣಿಸುವ ಸಮಗ್ರ ವರದಿಯೊಂದನ್ನು ಕೇಂದ್ರ ಆಯುಷ್‌ ಇಲಾಖೆ ಇತ್ತೀಚೆಗೆ ಪ್ರಕಟಿಸಿದೆ. 2014ರಲ್ಲಿ ಪ್ರತ್ಯೇಕ ಆಯುಷ್‌ ಸಚಿವಾಲಯವೇ ಅಸ್ತಿತ್ವಕ್ಕೆ ಬಂದ ನಂತರ, ಯೋಗ ಹಾಗೂ ಆಯುರ್ವೇದವು ದೇಶ– ವಿದೇಶಗಳಲ್ಲಿ ಹೇಗೆ ಆರೋಗ್ಯ ಕ್ಷೇತ್ರದ ಮೇಲ್‌ಸ್ತರಕ್ಕೆ ದಾಪುಗಾಲು ಹಾಕುತ್ತಿವೆ ಎಂಬ ವಿವರ ಅದರಲ್ಲಿದೆ.

ಆಯುರ್ವೇದವಂತೂ ಏಷ್ಯಾ, ಪೂರ್ವ ಯುರೋಪ್‌, ಗಲ್ಫ್ ಪ್ರದೇಶದ ಅನೇಕ ರಾಷ್ಟ್ರಗಳಲ್ಲಿ ಅಧಿಕೃತ ವೈದ್ಯಕೀಯ ಪದ್ಧತಿಯಾಗಿ ಮನ್ನಣೆ ಪಡೆದಿದೆ. ಅಲ್ಲೆಲ್ಲ ಆಯುರ್ವೇದದ ಶಿಕ್ಷಣ, ಸಂಶೋಧನೆ, ವೈದ್ಯಕೀಯ ವೃತ್ತಿ ಹಾಗೂ ಆಯುರ್ವೇದ ಔಷಧಿಗಳಿಗೆ ಆದ್ಯತೆ ಸಿಗುತ್ತಿದೆ. ಆಯುರ್ವೇದ ಔಷಧ ಮಾರುಕಟ್ಟೆಯು ಜಾಗತಿಕವಾಗಿ ಇದೀಗ 10 ಬಿಲಿಯನ್ ಡಾಲರ್ (₹ 83,550 ಕೋಟಿ) ದಾಟಿದೆ. ಅದೀಗ ವಾರ್ಷಿಕ ಶೇ 16ಕ್ಕೂ ಹೆಚ್ಚು ವೇಗದಲ್ಲಿ ಬೆಳೆಯುತ್ತಿದ್ದು, ಇನ್ನು ಐದು ವರ್ಷಗಳಲ್ಲಿ 24 ಬಿಲಿಯನ್ ಡಾಲರ್ (ಸುಮಾರು ₹ 2 ಲಕ್ಷ ಕೋಟಿ) ದಾಟಲಿದೆ ಎಂದು ಉದ್ಯಮಕ್ಷೇತ್ರ ಅಂದಾಜಿಸಿದೆ!

ರಾಷ್ಟ್ರೀಯ ಆದಾಯ ಹಾಗೂ ಉದ್ಯಮದ ವಿಸ್ತರಣೆ ದೃಷ್ಟಿಕೋನದಿಂದ ಇದು ಗಮನಾರ್ಹ ಬೆಳವಣಿಗೆಯೇ ಸರಿ. ಜಾಗತಿಕವಾಗಿ ಈಗ ಆಯುರ್ವೇದದ ಸುವರ್ಣಕಾಲ. ಕೆಲವೇ ದಶಕಗಳ ಮೊದಲು ಭಾರತಕ್ಕೆ ಸೀಮಿತವಾಗಿದ್ದ ದೇಸಿ ಚಿಕಿತ್ಸಾ ಕ್ರಮವೊಂದು, ಇಂದು ಅಲೋಪಥಿಗೆ ಪೈಪೋಟಿ ನೀಡುವಂತೆ ಜಗತ್ತಿನಾ ದ್ಯಂತ ಪಸರಿಸುತ್ತಿರುವುದು ಮಹತ್ವದ ಸಂಗತಿಯೇ ಹೌದು. ಆದರೆ, ಈ ಬೆಳವಣಿಗೆ ನಿಜಕ್ಕೂ ಆರೋಗ್ಯಕರವಾಗಿ ಇದೆಯೇ? ಆಯುರ್ವೇದದ ಜಾಗತೀಕರಣದ ಈ ಪ್ರವಾಹದಲ್ಲಿ, ಅದರ ಮೂಲತತ್ವಗಳು ಹಾಗೂ ಗಿಡಮೂಲಿಕಾ ಔಷಧಿಗಳು ತಮ್ಮ ನೈಜ ಅಸ್ತಿತ್ವ ಕಾಪಾಡಿ ಕೊಳ್ಳುತ್ತಿವೆಯೇ? ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಾದ ಅಗತ್ಯವಿದೆ. ಇದು ಬರೀ ಆಯುರ್ವೇದ ಕ್ಷೇತ್ರದ ಹಿತಕ್ಕಾಗಿ ಮಾತ್ರವಲ್ಲ ಸಾರ್ವಜನಿಕ ಆರೋಗ್ಯದ ಸುರಕ್ಷೆಯ ದೃಷ್ಟಿಯಿಂದಲೂ ಬಹುಮುಖ್ಯ.

ಆಯುರ್ವೇದವು ಈಗ ಎದುರಿಸುತ್ತಿರುವ ಹಲವು ಗಂಭೀರ ಸವಾಲುಗಳಲ್ಲಿ, ಅದರ ಜೀವಾಳವಾಗಿರುವ ಗಿಡಮೂಲಿಕಾ ಕ್ಷೇತ್ರದ ಆಗುಹೋಗು ಪ್ರಮುಖವಾದದ್ದು. ನಿಸರ್ಗದಲ್ಲಿನ ಔಷಧಿಸಸ್ಯಗಳ ಸಂರಕ್ಷಣೆ, ಅವುಗಳ ಸಂವರ್ಧನೆ, ಸುಸ್ಥಿರ ಕೊಯಿಲು, ಔಷಧಿಗಳಲ್ಲಿ ಗುಣಮಟ್ಟದ ಮೂಲಿಕೆಗಳ ಬಳಕೆಯಂತಹ ಎಲ್ಲ ಆಯಾಮಗಳಲ್ಲೂ ಗಂಭೀರ ನ್ಯೂನತೆಗಳಿವೆ. ಗಿಡಮೂಲಿಕಾ ಕ್ಷೇತ್ರದ ಅಂಥ ನಾಲ್ಕು ಪ್ರಮುಖ ಆಯಾಮಗಳನ್ನು ಚರ್ಚಿಸುವ ಆಶಯ ಈ ಬರಹದ್ದು.

ಮೊದಲಿನದು, ನೈಸರ್ಗಿಕ ಔಷಧಿಸಸ್ಯ ವೈವಿಧ್ಯದ ಸಂರಕ್ಷಣೆ ಕುರಿತಾಗಿ. ನಮ್ಮ ನಾಡಿನ ಪರಿಸ್ಥಿತಿಯನ್ನೇ ಗಮನಿಸಿ. ರಾಜ್ಯದಲ್ಲಿ ಗುರುತಿಸಲಾಗಿರುವ ಸುಮಾರು 4,800ಕ್ಕೂ ಮಿಕ್ಕಿ ಹೂಬಿಡುವ ಸಸ್ಯಪ್ರಭೇದಗಳಲ್ಲಿ ಎರಡು ಸಾವಿರಕ್ಕೂ ಹೆಚ್ಚಿನ ಪ್ರಭೇದಗಳನ್ನು ನಿಖರವಾಗಿ ಔಷಧಿಮೂಲಿಕೆಗಳೆಂದು ಗುರುತಿಸಲಾಗಿದೆ. ಅವುಗಳಲ್ಲಿ ಆರುನೂರಕ್ಕೂ ಹೆಚ್ಚು ಪ್ರಭೇದಗಳನ್ನು ವಿವಿಧ ಮೂಲಿಕಾ ಉದ್ಯಮಗಳು ವಾಣಿಜ್ಯಿಕವಾಗಿ ಬಳಸುತ್ತಿವೆಯೆಂದು ರಾಜ್ಯ ಗಿಡಮೂಲಿಕಾ ಪ್ರಾಧಿಕಾರ ಲೆಕ್ಕ ಹಾಕಿದೆ. ಆದರೆ, ಹಿಂದಿನ ಎರಡು ದಶಕಗಳಿಂದ ಈ ಸಸ್ಯಸಂಪತ್ತಿನ ನೈಸರ್ಗಿಕ ನೆಲೆಗಳೆಲ್ಲ ವೇಗವಾಗಿ ನಾಶವಾಗುತ್ತಿವೆ.

ಅರಣ್ಯ, ನದಿತೀರ, ಜೌಗುಪ್ರದೇಶ, ಗೋಮಾಳದಂತಹವುಗಳ ಒತ್ತುವರಿ, ಅವೈಜ್ಞಾನಿಕ ಮೂಲಿಕೆ ಸಂಗ್ರಹಣೆ ಹಾಗೂ ಕಳ್ಳಸಾಗಣೆಯಂತಹ ಕಾರಣ ಗಳಿಂದಾಗಿ ಸಸ್ಯ ಸಂಪನ್ಮೂಲ ಬತ್ತುತ್ತಿದೆ. ಎಂಬತ್ತಕ್ಕೂ ಹೆಚ್ಚು ಅಮೂಲ್ಯ ಪ್ರಭೇದಗಳು ಈಗಾಗಲೇ ವಿನಾಶ ದಂಚಿಗೆ ತಲುಪಿವೆ ಎಂದು ರಾಜ್ಯ ಜೀವವೈವಿಧ್ಯ ಮಂಡಳಿ ದಾಖಲಿಸಿಯೂ ಆಗಿದೆ. ಉದ್ಯಮಗಳು ಬಳಸುವ ಮೂಲಿಕೆಗಳ ಶೇ 85ಕ್ಕೂ ಹೆಚ್ಚಿನ ಪಾಲು ಇಂದಿಗೂ ಕಾಡಿನಿಂದಲೇ ಹರಿದುಬರುತ್ತಿರುವಾಗ, ಭವಿಷ್ಯದ ಪರಿಸ್ಥಿತಿ ಏನಾದೀತು?

ಎರಡನೆಯದು, ಈ ಸಸ್ಯವೈವಿಧ್ಯದ ಮೇಲೆ ಹವಾ ಮಾನ ಬದಲಾವಣೆಯ ಪರಿಣಾಮಕ್ಕೆ ಸಂಬಂಧಿಸಿದ್ದು. ಈ ಕುರಿತು ಈಗಷ್ಟೇ ಸಂಶೋಧನಾ ಮಾಹಿತಿಗಳು ಲಭ್ಯವಾಗುತ್ತಿವೆ. ವೇಗವಾಗಿ ಏರುತ್ತಿರುವ ಸರಾಸರಿ ತಾಪಮಾನ, ಗಾಳಿಯ ತೇವಾಂಶದಲ್ಲಿ ವ್ಯತ್ಯಯ, ಅಕಾಲಿಕ ಮಳೆ, ಬದಲಾಗುತ್ತಿರುವ ಮಣ್ಣಿನ ರಾಸಾಯನಿಕ ಸಂರಚನೆಯಂತಹ ಅಂಶಗಳೆಲ್ಲ ತೀರಾ ವ್ಯತಿರಿಕ್ತ ಪರಿಣಾಮ ಉಂಟುಮಾಡುತ್ತಿರುವುದನ್ನು ನೆಲ್ಲಿ, ಅಣಲೆ, ಶಿವಣೆಯಂಥ ವ್ಯಾಪಕ ಬಳಕೆಯ ಪ್ರಭೇದಗಳಲ್ಲಿನ ಸಂಶೋಧನೆಗಳು ದಾಖಲಿಸಿವೆ.

ಗಿಡವೊಂದು ಔಷಧಿಯಾಗಿ ವರ್ತಿಸುವಲ್ಲಿ ಹಲವಾರು ಅಂಶಗಳ ಸಂಕೀರ್ಣ ಪ್ರಭಾವವಿರುತ್ತದೆ. ಅದರ ಬೀಜ ಪ್ರಸರಣದ ಪರಿ, ಬೆಳವಣಿಗೆಯ ವೇಗ, ಹೂಬಿಡುವ ಕಾಲ ಹಾಗೂ ಸಾಂದ್ರತೆ, ಮಿಡಿಕಚ್ಚುವ ಪ್ರಮಾಣ, ಸಸ್ಯಗಳಲ್ಲೇ ಅಂತರ್ಗತವಾಗಿದ್ದು ಅವುಗಳ ಜೀವರಾಸಾಯನಿಕಗಳ ಗುಣಧರ್ಮವನ್ನು ಬದಲಾಯಿಸುವ ಶಿಲೀಂಧ್ರದಂತಹ ಹತ್ತಾರು ಸಂಗತಿಗಳು ಔಷಧಿಯ ಗುಣಧರ್ಮವನ್ನು ನಿರ್ಧರಿಸುತ್ತವೆ. ಆದರೆ, ಹವಾಮಾನ ಬದಲಾವಣೆಯ ವಿಪರೀತ ಪರಿಣಾಮಗಳು ಮೂಲಿಕೆಗಳ ನೈಸರ್ಗಿಕ ಗುಣಧರ್ಮಗಳನ್ನೇ ಬದಲಾಯಿಸುತ್ತಿವೆ!

ಮೂರನೆಯದು, ಕೃಷಿಕ್ಷೇತ್ರದಿಂದ ಬರುವ ಗಿಡಮೂಲಿಕೆಗಳ ಪರಿಸ್ಥಿತಿ. ಹೊಲದಲ್ಲಿ ಬೆಳೆಯುವ ಈ ಉತ್ಪನ್ನಗಳಾದರೂ ಯೋಗ್ಯವಾಗಿ ಇವೆಯೇ? ಅಲ್ಲೂ ಹತ್ತಾರು ಸಮಸ್ಯೆಗಳು. ಅರಿಸಿನ, ಲವಂಗ, ಲೋಳೆಸರ, ಅಮೃತಬಳ್ಳಿ, ಕಚೋರಾದಂತಹ ಹಲವಾರು ಉತ್ಪನ್ನಗಳು ಇಂದು ಕೃಷಿಯಿಂದಲೇ ಪೂರೈಕೆಯಾಗುತ್ತಿವೆ. ವಿವಿಧ ವೈರಸ್, ಬ್ಯಾಕ್ಟೀರಿಯ, ಶಿಲೀಂಧ್ರ, ಕೀಟಗಳು ಅವನ್ನು ಬಾಧಿಸುವುದರಿಂದ, ಅವು ಸ್ರವಿಸುವ ವಿಷಕಾರಕ ರಾಸಾ ಯನಿಕಗಳು ಗಿಡಮೂಲಿಕೆಗಳ ಭಾಗಗಳಲ್ಲೇ ಉಳಿದುಬಿಡುತ್ತವೆ. ಇತ್ತೀಚಿನ ದಶಕಗಳಲ್ಲಿ ಅವುಗಳ ಪ್ರಮಾಣ ನಿಗದಿತ ಪ್ರಮಾಣಕ್ಕಿಂತ ಗಮನಾರ್ಹವಾಗಿ ಹೆಚ್ಚುತ್ತಿದೆ.

ಇನ್ನು, ಈ ಬಗೆಯ ಸೂಕ್ಷ್ಮಾಣುಜೀವಿಗಳು ಅಥವಾ ರೋಗಕಾರಕ ಕೀಟಗಳನ್ನು ಓಡಿಸಲು ರೈತರು ಅಪಾರ ಪ್ರಮಾಣದಲ್ಲಿ ಕ್ರಿಮಿನಾಶಕಗಳನ್ನು ಸಿಂಪಡಿ ಸುತ್ತಿದ್ದಾರೆ. ಹೀಗಾಗಿ, ಮಾರುಕಟ್ಟೆಗೆ ತಲುಪುವ ಅಶ್ವ ಗಂಧ, ಕಿರಾತಕಡ್ಡಿ, ಕಾಮಕಸ್ತೂರಿ, ಅರಿಸಿನ, ಶುಂಠಿಯಂತಹವುಗಳಲ್ಲಿ ಅಪಾಯಕಾರಿ ಮಟ್ಟದಲ್ಲಿ ಮೋನೊ ಕ್ರೋಟೊಫಾಸ್, ಕ್ಲೋರೊಪೈರಿಫಾಸ್, ಎಂಡೊಸಲ್ಫಾನ್‌ ನಂಥ ವಿಷಕಾರಿ ರಾಸಾಯನಿಕಗಳ ಶೇಷಾಂಶ ಕಂಡು ಬರುತ್ತಿದೆ! ಹೊಲದಿಂದ ಬರುವಾಗಲೇ ಮೂಲಿಕೆಗಳು ವಿಷವನ್ನು ಹೊತ್ತು ತಂದರೆ, ಅವನ್ನು ಆಧರಿಸಿದ ಆಯುರ್ವೇದ ಔಷಧಿಗಳ ಗುಣಮಟ್ಟ ಏನಾದೀತು?

ಅಂತಿಮವಾಗಿ, ಗಿಡಮೂಲಿಕೆಗಳನ್ನು ಕಚ್ಚಾವಸ್ತುವಾಗಿ ಬಳಸುವ ವೈವಿಧ್ಯಮಯ ಆಧುನಿಕ ಉದ್ಯಮಗಳ ಕುರಿತು. ಆಯುರ್ವೇದ ಔಷಧಿಗಳು, ಏಕಸಸ್ಯದ ಸಾರ, ಗಿಡಮೂಲಿಕೆಗಳ ಚೂರ್ಣದಂತಹ ನೂರಾರು ಬಗೆಯ ಉತ್ಪನ್ನಗಳನ್ನು ಅವು ತಯಾರಿಸಿ ಮಾರುತ್ತಿವೆ. ಆದರೆ, ಹಲವು ಉದ್ಯಮಗಳು ತಾವು ಬಳಸುವ ಸಸ್ಯಪ್ರಭೇದ ಗಳು ಹಾಗೂ ಅವುಗಳ ಪ್ರಮಾಣದ ಕುರಿತು ನೈಜ ಮಾಹಿತಿಯನ್ನು ಸರ್ಕಾರಕ್ಕೆ ಬಿಟ್ಟುಕೊಡುತ್ತಿಲ್ಲ. ಹೀಗಾಗಿ, ಯಾವೆಲ್ಲ ಪ್ರಭೇದಗಳು ಯಾವ ವ್ಯಾಪಾರಿ ಸರಪಣಿಗಳ ಮೂಲಕ ಉದ್ಯಮಗಳನ್ನು ಸೇರಿ, ಅವುಗಳ ಉತ್ಪನ್ನಗಳಾಗಿಮಾರುಕಟ್ಟೆ ತಲುಪುತ್ತಿವೆ ಎಂಬ ಸಂಪೂರ್ಣ ಚಿತ್ರಣವೇ ದೊರಕುತ್ತಿಲ್ಲ.

ಕಾಡು ಅಥವಾ ಕೃಷಿ- ಯಾವುದೇ ಮೂಲವಿದ್ದರೂ, ಉದ್ಯಮಗಳು ಅವನ್ನು ಅಲ್ಪವೆಚ್ಚದಲ್ಲಿಯೇ ದೊರಕಿಸಿ ಕೊಳ್ಳುತ್ತಿವೆ. ಗಿಡಮೂಲಿಕೆಗಳ ಸಂರಕ್ಷಣೆ ಹಾಗೂ ಸಂವರ್ಧನೆಯ ಜವಾಬ್ದಾರಿಯಿಂದ ಮಾತ್ರ ಸದಾ ನುಣುಚಿ ಕೊಳ್ಳುತ್ತಿವೆ!

ಇನ್ನು, ಆಯುರ್ವೇದದ ಹೆಸರಿನಲ್ಲಿ ಉದ್ಯಮಗಳು ಮಾರಾಟ ಮಾಡುತ್ತಿರುವ ಹಲವು ಔಷಧಿಗಳ ಗುಣಮಟ್ಟದ ಕುರಿತೂ ಗಂಭೀರ ದೂರುಗಳಿವೆ. ಹಲವು ಉದ್ಯಮಗಳು ಶಾಸ್ತ್ರೀಯ ಔಷಧಿಗಳಿಗಿಂತ ಹೆಚ್ಚಾಗಿ ತಮ್ಮದೇ ‘ಪೇಟೆಂಟ್ ಔಷಧಿ’ಗಳನ್ನು ಉತ್ಪಾದಿಸಿ ಮಾರುತ್ತಿವೆ. ಅಂಥ ಹೊಸ ಉತ್ಪನ್ನಗಳ ಕ್ಷಮತೆ ಕುರಿತು ವಿಶ್ವಾಸಾರ್ಹ ವೈಜ್ಞಾನಿಕ ಆಧಾರಗಳು ಇಲ್ಲದೆಯೂ ಬರೀ ಜಾಹೀರಾತಿನ ಬಲದಿಂದಲೇ ಗ್ರಾಹಕರನ್ನು ತಲುಪುತ್ತಿವೆ. ಆಯುರ್ವೇದ ತಜ್ಞರು ಹಾಗೂ ವೈದ್ಯರ ಹಂಗಿಲ್ಲದೆ, ಬರೀ ಮಾರುಕಟ್ಟೆ ಬಲದಿಂದ ಆಯುರ್ವೇದದ ಹೆಸರನ್ನು ಹಣವಾಗಿ ಪರಿವರ್ತಿಸುತ್ತಿರುವ ಉದ್ಯಮಲೋಕದ ಚಿತ್ರಣ ಇದು. ಇತ್ತ ಆಯುರ್ವೇದಕ್ಕೂ ವಂಚನೆ, ಅತ್ತ ಮುಗ್ಧ ರೋಗಿಗಳಿಗೂ ಮೋಸ!

ಆಯುರ್ವೇದದ ವಾಣಿಜ್ಯೀಕರಣದ ಓಟದಲ್ಲಿ, ಗಿಡಮೂಲಿಕಾ ಕ್ಷೇತ್ರದ ಗುಣಮಟ್ಟ ನಿಯಂತ್ರಣದ ಜವಾಬ್ದಾರಿಯನ್ನು ಸರ್ಕಾರ ಮರೆಯದಿರಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT