ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ | ಹಿಮ್ಮುಖ ಚಲನೆಯ ಚಿಂತನಾಕ್ರಮ!

ಮಂಗಳನ ಅಂಗಳಕ್ಕೆ ಕಾಲಿಟ್ಟ ಕಾಲದಿಂದ ಮತ್ತೆ ತ್ರೇತಾಯುಗಕ್ಕೆ ಹೋಗಬೇಕೆ?
Published 24 ಜನವರಿ 2024, 19:39 IST
Last Updated 24 ಜನವರಿ 2024, 19:39 IST
ಅಕ್ಷರ ಗಾತ್ರ

ಅಯೋಧ್ಯೆಯ ವಿದ್ಯಮಾನಗಳ ಹಿಂದೆ ದೇವರು, ಧರ್ಮ, ಭಕ್ತಿ, ಇತಿಹಾಸ, ಸಂಸ್ಕೃತಿಯ ಪಾಲು ಅಥವಾ ಪಾತ್ರ ಮೀರಿದ ಸಮಕಾಲೀನ ರಾಜಕೀಯ ಲೆಕ್ಕಾಚಾರ ಇರುವುದು ಆಡುವ ಮಗುವಿಗೂ ಅರ್ಥವಾಗುವ ಸತ್ಯ. ಈ ಕಾರ್ಯಕ್ಕೆ ಆಯ್ದುಕೊಂಡ ಸಮಯ, ಸಂದರ್ಭ ಹಾಗೂ ಪ್ರಚಾರದ ವೈವಿಧ್ಯ-ವೈಖರಿ ಬಹಳಷ್ಟು ವಿಚಾರಗಳನ್ನು ಹೊರಚೆಲ್ಲಿವೆ.

ನಿಜಕ್ಕೂ ಶ್ರದ್ಧಾಭಕ್ತಿ ಹೊಂದಿದವರ ಸಂಭ್ರಮದ ಅಭಿವ್ಯಕ್ತಿಗೆ ಸಹಜವಾಗಿ ಮುಗ್ಧತೆ ಮತ್ತು ಸಂಯಮದ ಸಹಯೋಗವಿರುತ್ತದೆ. ಆದರೆ ಜನಸಾಮಾನ್ಯರಲ್ಲಿ ಸಮೂಹಸನ್ನಿ ಸೃಷ್ಟಿಸಲು ಪಣ ತೊಟ್ಟವರಿಗೆ ಇಡೀ ವಾತಾವರಣವನ್ನು ಹೇಗೆ ಭಾವನಾತ್ಮಕವಾಗಿ ಬಳಸಿಕೊಳ್ಳಬೇಕೆಂಬ ತಂತ್ರಮಂತ್ರಗಳು ಕರತಲಾಮಲಕ ಆಗಿರುತ್ತವೆ. ಇಂಥ ಚಟುವಟಿಕೆಗಳಲ್ಲಿ ವ್ಯಕ್ತಿಗಳು, ಸಂಘಗಳು, ಸಂಘಟನೆಗಳು ನಿರತವಾಗುವುದಕ್ಕೆ ಒಂದು ಮಿತಿ ಇರಲು ಸಾಧ್ಯ. ಆದರೆ ಒಂದು ಪ್ರಭುತ್ವವೇ ಇಂಥ ಪ್ರಕ್ರಿಯೆಗೆ ತನ್ನೆಲ್ಲಾ ಸಂಪನ್ಮೂಲಗಳ ಸಮೇತ ಚಾಲನೆ ನೀಡಿದರೆ ಏನಾಗಬೇಡ…!

ಈ ಮಾತಿಗೆ ನಿದರ್ಶನವಾಗಿ ವಿವಿಧ ನಾಯಕಮಣಿಗಳು ನೀಡುತ್ತಿರುವ ಹೇಳಿಕೆಗಳು, ಮಾಡುತ್ತಿರುವ ಪ್ರಚೋದನೆಗಳು ಮತ್ತು ವ್ಯಾಖ್ಯಾನಗಳನ್ನು ಗಮನಿಸಬಹುದು. ‘ಐನೂರು ವರ್ಷಗಳ ಕಾಯುವಿಕೆಯ ನಂತರ ಅಯೋಧ್ಯೆಯಲ್ಲಿ ಬಾಲರಾಮನ ಪ್ರತಿಷ್ಠಾಪನೆ ಆಗಿದೆ. ಮತ್ತೆ ತ್ರೇತಾಯುಗಕ್ಕೆ ಕಾಲಿಟ್ಟಂತೆ ಅನ್ನಿಸುತ್ತಿದೆ’ ಎನ್ನುತ್ತಾರೆ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ. ಇದು, ಮಂಗಳನ ಅಂಗಳಕ್ಕೆ ಕಾಲಿಟ್ಟ ಕಾಲದಲ್ಲಿ ಮತ್ತೆ ತ್ರೇತಾಯುಗಕ್ಕೆ ಕರೆದೊಯ್ಯುವ ಹಿಮ್ಮುಖ ಚಲನೆಯ ಚಿಂತನೆಯಾಗುತ್ತದೆ!

ಕೇಂದ್ರ ಗೃಹ ಸಚಿವ ಅಮಿತ್ ಶಾ, ‘ಈ ಕ್ಷಣಕ್ಕಾಗಿ ಹಲವಾರು ತಲೆಮಾರುಗಳು ತ್ಯಾಗ ಮಾಡಿವೆ. ಶ್ರೀರಾಮ ಜನ್ಮಭೂಮಿಯಲ್ಲಿ ಮತ್ತೆ ಮಂದಿರ ನಿರ್ಮಾಣ ಮಾಡುವ ಸಂಕಲ್ಪವನ್ನು ಅಲುಗಾಡಿಸಲು ಯಾವ ಬೆದರಿಕೆಗೂ ಸಾಧ್ಯವಾಗಲಿಲ್ಲ’ ಎಂದು ವಿವರಿಸಿದ್ದಾರೆ. ‘ರಾಮದ್ವೇಷಿಗಳಿಗೆ ತಕ್ಕ ಪಾಠ ಆಗಲಿದೆ’ ಎಂದು ಎಚ್ಚರಿಕೆ ನೀಡಿದ್ದಾರೆ ಕರ್ನಾಟಕದ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ.

ಈ ವಿಷಯದಲ್ಲಿ ಬಿಜೆಪಿ ಪರಿವಾರದ ನಿಲುವು, ಉದ್ದೇಶ, ಗುರಿಯು ಕಮಲದ ಪಕಳೆ ಮೇಲಿನ ಹನಿಯಷ್ಟೇ ನಿಚ್ಚಳ; ಅವರದು ಘೋಷಿತ ಬಲಪಂಥೀಯ ಹಾದಿ. ಆದರೆ ಇಡೀ ದೇಶವನ್ನು ಭಾವನಾತ್ಮಕ ಅಲೆಯಲ್ಲಿ ತೇಲಿಸುತ್ತಿರುವ ಈ ರಾಜಕೀಯ ಪಕ್ಷ ಮತ್ತು ಅದರ ಸಹವರ್ತಿ ಸಂಘಟನೆಗಳಿಗೆ ಪರ್ಯಾಯವನ್ನೋ ಪ್ರತಿರೋಧವನ್ನೋ ಒಡ್ಡಬೇಕಾದ ಇತರ ರಾಜಕೀಯ ಪಕ್ಷಗಳು ಏನು ಮಾಡುತ್ತಿವೆ? ತಾತ್ವಿಕವಾಗಿ, ತಾರ್ಕಿಕವಾಗಿ ಬಲಚಿಂತನೆಗೆ ಸಶಕ್ತ ಮುಖಾಮುಖಿ ಆಗಬೇಕಿದ್ದ ಪ್ರಮುಖ ಎಡಪಂಥೀಯ ರಾಜಕೀಯ ಪಕ್ಷಗಳು ಹೆಚ್ಚುಕಡಿಮೆ ತಮ್ಮ ಅಸ್ತಿತ್ವವನ್ನೇ ಕಳೆದುಕೊಂಡು ಕುಳಿತಿವೆ. ಅವು ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ಪಕ್ಷದ ನೆರಳನ್ನು ಆಶ್ರಯಿಸುವ ಅನಿವಾರ್ಯದ ಹಂತ ತಲುಪಿರುವುದು ಒಳ್ಳೆಯ ಬೆಳವಣಿಗೆಯೇನಲ್ಲ. ತಮ್ಮದೇ ಆದ ಸೀಮಿತ ಶಕ್ತಿ ಮತ್ತು ವ್ಯಾಪ್ತಿಯ ಅಡಚಣೆಯಲ್ಲಿ ತೊಳಲಾಡುತ್ತಿರುವ ಪ್ರಾದೇಶಿಕ ಪಕ್ಷಗಳ ನಡುವೆ ಹಿತಾಸಕ್ತಿ ಸಂಘರ್ಷವೂ ತೀಕ್ಷ್ಣವಾಗಿದೆ. ಹಾಗಾಗಿ, ಇವುಗಳಿಂದ ಸಂದರ್ಭದ ಬೇಡಿಕೆಗೆ ತಕ್ಕುದಾದ ಮಹತ್ವದ ಪಾತ್ರವನ್ನು ನಿರೀಕ್ಷಿಸುವುದು ಕಷ್ಟಸಾಧ್ಯ.

ಇನ್ನು, ದೇಶವ್ಯಾಪಿ ಅಷ್ಟಿಷ್ಟು ಅಸ್ತಿತ್ವ, ಪ್ರಭಾವ ಹೊಂದಿರುವ ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ ಕೂಡ ಬಸವಳಿದಂತೆ ಕಾಣಿಸುತ್ತಿದೆ. ಚುನಾವಣಾ ರಾಜಕಾರಣಕ್ಕಾಗಿ ಹಿಂದೂ ಮತಗಳ ಕ್ರೋಡೀಕರಣ ಪ್ರಕ್ರಿಯೆಯಲ್ಲಿ ತೀವ್ರವಾಗಿ ತೊಡಗಿರುವ ಬಿಜೆಪಿಯ ಪ್ರತಿಯೊಂದು ಹೆಜ್ಜೆಯೂ ಕಾಂಗ್ರೆಸ್ ಪಕ್ಷವನ್ನು ಸಂದಿಗ್ಧದಲ್ಲಿ ಮುಳುಗಿಸುತ್ತಿರುವುದು ಕಳವಳಕಾರಿಯಾದುದು. ಜಾತಿ, ಧರ್ಮ, ಭಾಷೆಯಂಥ ವಿಷಯಗಳಲ್ಲಿ ತುಸುವೇ ಎಚ್ಚರ ತಪ್ಪಿದರೂ ಭವಿಷ್ಯಕ್ಕೆ ಮುಳುವಾಗುವ ಅಪಾಯ ಶತಮಾನ ಪೂರೈಸಿದ ಪಕ್ಷಕ್ಕೆ ತಿಳಿಯದ್ದೇನಲ್ಲ. ಈ ಪಕ್ಷಕ್ಕೆ ತನ್ನ ರಾಜಕೀಯ ನಡಿಗೆಯುದ್ದಕ್ಕೂ ಇಂಥ ಆಟಗಳನ್ನೇ ಸೌಮ್ಯ ರೂಪದಲ್ಲಿ ಆಡುತ್ತಾ ಬಂದ ಬಹಳಷ್ಟು ಅನುಭವ ಕೂಡ ಇದೆ. ಆದಾಗ್ಯೂ ವರ್ತಮಾನದಲ್ಲಿ ಬಿಜೆಪಿ ಅಳವಡಿಸಿಕೊಂಡಿರುವ ಉಗ್ರ ಹಾಗೂ ಆಕ್ರಮಣಶೀಲ ನಡೆ ಕಾಂಗ್ರೆಸ್ಸನ್ನೂ ದಂಗುಬಡಿಸಿದಂತೆ ಕಾಣುತ್ತಿದೆ.

ಪತ್ರಕರ್ತೆ ನೀರಜಾ ಚೌಧರಿ ಅವರ ‘ಹೌ ಪ್ರೈಮ್‌ ಮಿನಿಸ್ಟರ್ಸ್ ಡಿಸೈಡ್’ ಕೃತಿಯಲ್ಲಿ ಕಾಂಗ್ರೆಸ್ಸಿನ ಚಿಂತಕರ ಚಾವಡಿ ಹೇಗೆ ಆಲೋಚಿಸುತ್ತದೆ ಎಂಬುದರ ಸೂಚನೆ ಸಿಗುವಂತಹ ಪ್ರಸಂಗದ ಉಲ್ಲೇಖವಿದೆ. ಅದು 1985ರ ಸಮಯ. ಸೋದರಸಂಬಂಧಿ ಅರುಣ್ ನೆಹರೂ ಅವರು ರಾಜೀವ್ ಗಾಂಧಿ ಅವರಿಗೆ ನೀಡಿದ ಸಲಹೆ: ‘ನೀನು ಮತ್ತೆ ಅಧಿಕಾರಕ್ಕೆ ಬರಬೇಕೆಂದರೆ ಮೂರು ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕು, ಸಮಾನ ನಾಗರಿಕ ಸಂಹಿತೆ ಜಾರಿಗೆ ಕ್ರಮ ಕೈಗೊಳ್ಳಬೇಕು ಮತ್ತು 370ನೇ ವಿಧಿ ರದ್ದಾಗಬೇಕು’. ಆ ಮೂಲಕ ಬಹುಸಂಖ್ಯಾತ ಹಿಂದೂಗಳ ಮತಗಳನ್ನು ಕ್ರೋಡೀಕರಿಸಿ ಗೆಲುವು ಸಾಧಿಸಬಹುದೆಂಬ ಲೆಕ್ಕಾಚಾರ ಅರುಣ್ ನೆಹರೂ ಅವರದಾಗಿತ್ತು.

ಇತಿಹಾಸದ ಗರಿಗಳನ್ನು ಸರಿಯಾಗಿ ಓದಿದರೆ, ಸೈದ್ಧಾಂತಿಕವಾಗಿ ಕಾಂಗ್ರೆಸ್ ಪಕ್ಷ ಖಡಕ್ ಆಗಿ ಎಡ ಅಥವಾ ಬಲ ಪಂಥಕ್ಕೆ ಸೇರದೆ ಮಧ್ಯದ ಹಾದಿ ಸವೆಸಿರುವುದು ಗೋಚರಿಸುತ್ತದೆ. ಅದು ಆರಂಭಿಕ ಕಾಲಘಟ್ಟದಲ್ಲಿ ಖಚಿತವಾಗಿ ಎಡಮಧ್ಯಮ ಮಾರ್ಗ ಅನುಸರಿಸಿದ್ದು ನಿಜ. ನಂತರದ ಅವಧಿಯನ್ನು ಹೊಯ್ದಾಟದ ಕಾಲ ಎಂದು ಗುರುತಿಸಬಹುದು. ಇತ್ತೀಚೆಗೆ ಬಲಮಧ್ಯಮದ ಕಡೆ ವಾಲುತ್ತಿರುವ ಸ್ಪಷ್ಟ ಲಕ್ಷಣಗಳನ್ನು ಕಾಣುತ್ತಿದ್ದೇವೆ. ರಾಹುಲ್ ಗಾಂಧಿಯವರ ಸರಣಿ ದೇವಾಲಯಗಳ ಭೇಟಿ, ಗೀತೆಯ ಉಲ್ಲೇಖ, ಹಿಂದುತ್ವ ಕುರಿತ ಮೃದುತ್ವವನ್ನು ಗಮನಿಸಬಹುದು. ಮೈಸೂರಿನ ವಿಚಾರವಾದಿ ಕೆ.ರಾಮದಾಸ್, ಹೋರಾಟಗಾರ ಪ್ರೊ. ಎಂ.ಡಿ.ನಂಜುಂಡಸ್ವಾಮಿ, ಸಮಾಜವಾದಿ ಪ.ಮಲ್ಲೇಶ, ವಿಮರ್ಶಕ ಜಿ.ಎಚ್.ನಾಯಕ ಅವರ ಒಡನಾಟ, ಪ್ರಭಾವದಲ್ಲಿ ವ್ಯಕ್ತಿತ್ವವನ್ನು ರೂಪಿಸಿಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಇತ್ತೀಚೆಗಿನ ಅವೈಚಾರಿಕ ವರ್ತನೆಗಳು ತಾತ್ವಿಕ ಶರಣಾಗತಿಗೆ ದ್ಯೋತಕವಾಗಿವೆ.

ಎಡಪಂಥೀಯ ಚಿಂತಕ ಎಂ.ಎನ್.ರಾಯ್ ಅವರ ಅನುಯಾಯಿಯಾದ ಎಸ್.ಆರ್.ಬೊಮ್ಮಾಯಿ ಅವರ ಪುತ್ರ ಬಸವರಾಜ ಬೊಮ್ಮಾಯಿ ಅವರಂತೂ ಆರ್‌ಎಸ್ಎಸ್ ಸದಸ್ಯರು ಕೂಡ ನಾಚುವಷ್ಟು ಕಟು ಹಿಂದುತ್ವವಾದಿ ಆಗಿಬಿಟ್ಟಿದ್ದಾರೆ. ಅವರು ‘ರಾಮನಿಗೂ ಕರ್ನಾಟಕಕ್ಕೂ ದೊಡ್ಡ ನಂಟಿದೆ. ಆಂಜನೇಯನ ಜನ್ಮಭೂಮಿ ಅಭಿವೃದ್ಧಿಪಡಿಸುವುದು ನಮ್ಮ ಮುಂದಿನ ಗುರಿ’ ಎಂದು ಈಗಾಗಲೇ ಘೋಷಿಸಿಬಿಟ್ಟಿದ್ದಾರೆ. ಇನ್ನು ಎಚ್.ಡಿ.ದೇವೇಗೌಡರ ಕುಟುಂಬಕ್ಕೂ ಅವರ ಪಕ್ಷಕ್ಕೂ ವೈಚಾರಿಕತೆಗೂ ಸಾವಯವ ಸಂಬಂಧವೇ ಇರಲಾರದು ಬಿಡಿ. ಈ ಗೊಂದಲ, ಸ್ಥಿತ್ಯಂತರಕ್ಕೆ ಅವರದೇ ಆದ ನಾನಾ ಕಾರಣಗಳು, ಸಮರ್ಥನೆಗಳು, ಸ್ವಾರ್ಥಗಳು ಇರುವುದೇನೋ ಸರಿ. ಆದರೆ ಒಬ್ಬ ಗಂಭೀರ ಸಾರ್ವಜನಿಕ ವ್ಯಕ್ತಿಯಾಗಿ, ಒಂದು ಜವಾಬ್ದಾರಿಯುತ ರಾಜಕೀಯ ಪಕ್ಷವಾಗಿ ವ್ಯಕ್ತಿತ್ವಕ್ಕೆ, ಘನತೆಗೆ ಚ್ಯುತಿ ತಂದುಕೊಳ್ಳಬಾರದಲ್ಲವೇ?

ಪ್ರಗತಿಪರ ವಿಚಾರಧಾರೆಯ ಹಿನ್ನೆಲೆಯಲ್ಲಿ ರೂಪುಗೊಂಡ ಇಂಥ ಅನೇಕ ಮನಸ್ಸುಗಳ ಹೊರಳುವಿಕೆಗೆ ಕಾರಣವಾಗಿ ಎದ್ದುಕಾಣುವುದು ಅಧಿಕಾರ ರಾಜಕಾರಣ. ಹೇಗಾದರೂ ಸರಿ ಚುನಾವಣೆ ಗೆಲ್ಲಬೇಕು, ಅಧಿಕಾರಕ್ಕೆ ಹತ್ತಿರವಾಗಬೇಕು. ಇಷ್ಟೇ ಲಾಜಿಕ್ಕು. ಈ ವಿಷಯದಲ್ಲಿ ವ್ಯಕ್ತಿಗಳನ್ನು ತೆಗಳುವುದೋ  ವ್ಯವಸ್ಥೆಯನ್ನು ದೂರುವುದೋ ಗೊತ್ತಿಲ್ಲ.

ಒಟ್ಟಾರೆ, ದೇಶದ ಪ್ರಜೆಗಳೆಲ್ಲಾ ಹಿಗ್ಗಿನಲ್ಲಿ ಮೆರೆಯುತ್ತಿರುವಾಗ ದೇಶ ಮಾತ್ರ ಅಸಹಾಯಕತೆಯಿಂದ ಕುಗ್ಗಿ ಕುಳಿತಿರುವ ಸನ್ನಿವೇಶವಿದು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT