ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವತತ್ವ ಮತ್ತು ಸಮಷ್ಟಿ ಹಿತ

ಲೋಕದಾರ್ಶನಿಕರ ವಿಚಾರಗಳ ಬೆಳಕಲ್ಲಿ ಆತ್ಮನಿರೀಕ್ಷೆ ಮಾಡಿಕೊಳ್ಳಬೇಕಾದುದು ಅಗತ್ಯ
Last Updated 7 ಮೇ 2019, 2:37 IST
ಅಕ್ಷರ ಗಾತ್ರ

ಈಗ ಜಗತ್ತಿನ ಎಲ್ಲೆಡೆ ಮಾನವ ಘನತೆ ಮತ್ತು ಮಾನವೀಯತೆಗಳು ಆಘಾತಕ್ಕೆ ಒಳಗಾಗಿರುವುದನ್ನು ಕಾಣುತ್ತಿದ್ದೇವೆ. ಈ ದೃಷ್ಟಿಯಿಂದಲಾದರೂ ನಾವು ಲೋಕದಾರ್ಶನಿಕರ ವಿಚಾರಧಾರೆಯನ್ನು ನಮ್ಮ ನಿತ್ಯ ಬದುಕಿನಲ್ಲಿ ಅನುಷ್ಠಾನಗೊಳಿಸಬೇಕಾದ ಅಗತ್ಯವಿದೆ. ಈ ದಿಸೆಯಲ್ಲಿ, ನಾವೀಗ ಆಚರಿಸುತ್ತಿರುವ ‘ಬಸವ ಜಯಂತಿ’ ಸಂದರ್ಭದಲ್ಲಿ ಬಸವಣ್ಣನವರ ನಡೆ-ನುಡಿಗಳನ್ನು ಸಾಕ್ಷಿಯಾಗಿಟ್ಟುಕೊಂಡು ಆತ್ಮನಿರೀಕ್ಷೆ ಮಾಡಿಕೊಳ್ಳಬೇಕಾಗಿದೆ. ಬಸವಣ್ಣನವರು ನೀಡಿರುವ ಸಂದೇಶ ಯಾವುದೋ ಒಂದು ನಿರ್ದಿಷ್ಟ ಪ್ರದೇಶಕ್ಕೆ, ನಿರ್ದಿಷ್ಟ ಜನಾಂಗಕ್ಕೆ, ನಿರ್ದಿಷ್ಟ ಕಾಲಮಾನಕ್ಕೆ ನೀಡಿದ್ದಲ್ಲ; ಅದು ಸಾರ್ವಕಾಲಿಕವಾದ ಮತ್ತು ಸಮಸ್ತ ಮಾನವ ಸಮುದಾಯಕ್ಕೆ ಅನ್ವಯವಾಗುವ ಜೀವನ ಸಂದೇಶ!

ನಮಗೆ ಬಸವಣ್ಣನವರ ಬದುಕಿನ ನೈಜ ದರ್ಶನವಾಗುವುದು ಅವರನ್ನು ಕುರಿತಂತೆ ಬಂದಿರುವ ಪುರಾಣಗಳಿಂದಲ್ಲ; ಅವರಿಂದಲೇ ಮತ್ತು ಅವರ ಸಮಕಾಲೀನರಿಂದಲೇ ರಚಿತವಾಗಿರುವ ವಚನಗಳಿಂದ. ಹನ್ನೆರಡನೆಯ ಶತಮಾನದ ಶರಣರು ಸಾಹಿತ್ಯ ಭಂಡಾರಕ್ಕೆ ಕೊಟ್ಟಿರುವ ಒಂದು ಅನನ್ಯ ಕೊಡುಗೆ ವಚನ ಸಾಹಿತ್ಯ. ಬಸವಣ್ಣನವರು ನಡೆಸಿದ ಸಾಮಾಜಿಕ- ಧಾರ್ಮಿಕ ಚಳವಳಿ ಒಂದು ರೀತಿ ಜನಪರ ಸಾಹಿತ್ಯ ಚಳವಳಿಯೂ ಆಗಿತ್ತು. ಆ ಚಳವಳಿ ವಿಶ್ವದ ಇತಿಹಾಸದಲ್ಲೇ ನಡೆದ ಒಂದು ಅದ್ಭುತ ಪ್ರಯೋಗವಾಗಿತ್ತು; ಅಪ್ರತಿಮ ಕ್ರಾಂತಿಯಾಗಿತ್ತು.

ವಚನ ಸಾಹಿತ್ಯ ಸೃಷ್ಟಿಗೆ ಪ್ರೇರಣೆ ಒದಗಿಸಿದ್ದು 12ನೇ ಶತಮಾನದಲ್ಲಿದ್ದ ಪರಿಸ್ಥಿತಿ. ಅಂದಿನ ಧಾರ್ಮಿಕ ಕ್ಷೇತ್ರದಲ್ಲಿ ಪೂರ್ವಜನ್ಮ- ಪುನರ್ಜನ್ಮ ಸಿದ್ಧಾಂತ, ಮಾಯಾ-ಮೋಕ್ಷ ಸಿದ್ಧಾಂತ, ಕರ್ಮಸಿದ್ಧಾಂತ, ಅವತಾರವಾದ, ಸ್ವರ್ಗ ನರಕಗಳ ನಂಬಿಕೆಯನ್ನು ಜನರ ತಲೆಯಲ್ಲಿ ತುಂಬಲಾಗುತ್ತಿತ್ತು. ಹೋಮ-ಹವನ, ಶಾಂತಿ-ಸಮಾರಾಧನೆಗಳು ಮೇಲ್ವರ್ಗದವರ ಶಾಸ್ತ್ರಾಚರಣೆಗಳಾಗಿದ್ದರೆ, ಭೂತ-ಪ್ರೇತಗಳ ಕಲ್ಪನೆ, ಹರಕೆ-ಬಲಿ ಮೊದಲಾದವು ಕೆಳವರ್ಗದವರ ಆಚರಣೆಗಳಾಗಿದ್ದವು. ದೇವರು, ಧರ್ಮದ ಬಗೆಗೆ ಮೂಢನಂಬಿಕೆಗಳು ಜನರಲ್ಲಿ ಮನೆ ಮಾಡಿದ್ದವು.

ಸಾಮಾಜಿಕ ಕ್ಷೇತ್ರದಲ್ಲಿ ವರ್ಣಾಶ್ರಮ ವ್ಯವಸ್ಥೆಯು ವ್ಯಕ್ತಿಯ ಸ್ಥಾನಮಾನಗಳನ್ನು ನಿರ್ಧರಿಸುತ್ತಿತ್ತು. ಶೂದ್ರನು ದಾಸ್ಯದಲ್ಲಿ ಹುಟ್ಟಿರುವ ಕಾರಣ ಅವನು ಎಂದೆಂದೂ ದಾಸ್ಯದಲ್ಲಿ ಇರಬೇಕೆಂಬುದು ಕಟ್ಟಳೆಯಾಗಿತ್ತು. ಶೂದ್ರಾತಿ ಶೂದ್ರರೆನಿಸಿದ್ದ ಪಂಚಮರ ಸ್ಥಿತಿಯಂತೂ ಚಿಂತಾಜನಕವಾಗಿತ್ತು. ಅಂತರ್ಜಾತಿ ವಿವಾಹ ಅಪರಾಧವಾಗಿತ್ತು. ಬಾಲ್ಯವಿವಾಹವು ಪ್ರತಿಷ್ಠೆಯ ವಿಷಯವಾಗಿತ್ತು. ದೇವಾಲಯಗಳಿಗೆ ಎಲ್ಲರಿಗೂ ಪ್ರವೇಶವಿರಲಿಲ್ಲ; ಕೆಳವರ್ಗದವರಿಗೆ ಅಕ್ಷರಜ್ಞಾನದ ಅವಕಾಶವೇ ಇರಲಿಲ್ಲ.

ವ್ಯಕ್ತಿಗೆ ತನ್ನ ಒಲವಿನ ವೃತ್ತಿಯನ್ನು ಆರಿಸಿಕೊಳ್ಳಲು ಅವಕಾಶವಿರಲಿಲ್ಲ. ವಂಶಪರಂಪರೆಯ ಅಂಕುಶವಿತ್ತು. ವೃತ್ತಿಗಳಲ್ಲೂ ಮೇಲು-ಕೀಳುಗಳ ಪರಿಗಣನೆಯಿತ್ತು. ದುಡಿಯದೆಯೇ ಒಡೆಯರೆನಿಸಿಕೊಳ್ಳುವ ಒಂದು ವರ್ಗವೇ ಇತ್ತು. ಶ್ರಮಜೀವಿಗಳಿಗೆ ಸಾಮಾಜಿಕ ಸ್ಥಾನಮಾನಗಳು ಕನಸಾಗಿದ್ದವು. ಎಷ್ಟೇ ಭಾರವಾದರೂ ಕೆಳವರ್ಗದವರು ತೆರಿಗೆ ಸಲ್ಲಿಸುವುದು ಕಡ್ಡಾಯವಾಗಿತ್ತು.

ಹೀಗೆ ಮಾನವತ್ವವನ್ನೇ ಅಣಕಿಸುವ, ಮಾನವ ಘನತೆಯನ್ನೇ ಅಪಮೌಲ್ಯಗೊಳಿಸುವ ನೂರಾರು ಪದ್ಧತಿಗಳು ಮತ್ತು ಕಟ್ಟುಪಾಡುಗಳಿಂದ ಸಾಮಾನ್ಯ ಜನರು ಕ್ರೂರ ಶೋಷಣೆಗೆ ಒಳಗಾಗಿದ್ದರು; ಇದನ್ನೆಲ್ಲ ತಮ್ಮ ಸೂಕ್ಷ್ಮಮತಿಯಿಂದ ಅಧ್ಯಯನ ಮಾಡಿದ್ದ ಬಸವಣ್ಣನವರು, ಮೊದಲು ಧರ್ಮಶಾಸ್ತ್ರಗಳ ಟೊಳ್ಳನ್ನೆಲ್ಲ ಬಯಲಿಗೆಳೆದರು. ಜನಸಾಮಾನ್ಯರಲ್ಲಿ ವೈಚಾರಿಕ ಪ್ರಜ್ಞೆ ಮೂಡಿಸಲು ಮುಂದಾದರು. ವೈದಿಕ ಧರ್ಮ, ಜಾತಿ ಜಾಡ್ಯದ ಸಮಾಜ ವ್ಯವಸ್ಥೆಯನ್ನು ಧಿಕ್ಕರಿಸಿದರು. ಧಾರ್ಮಿಕ ಮತ್ತು ಸಾಮಾಜಿಕ ಸಮಾನತೆಯನ್ನು ಘೋಷಿಸಿದರು. ಶತಶತಮಾನಗಳ ಶಾಪದಂತಿದ್ದ ಅಸ್ಪೃಶ್ಯತೆಯ ಅನಿಷ್ಟವನ್ನು ತೊಡೆದು ಹಾಕಲು ಶ್ರಮಿಸಿದರು. ಆರ್ಥಿಕ ಸಮಾನತೆ, ವೃತ್ತಿ ಗೌರವ, ಸಮಾನ ವಿತರಣೆ ಮತ್ತು ಸಹಬಾಳ್ವೆಗೆ ಅನುವು ಮಾಡಿಕೊಟ್ಟರು. ಮಹಿಳೆಯರಿಗೆ ಪುರುಷ ಸಮಾನ ಸ್ಥಾನಮಾನ ಕಲ್ಪಿಸಿದರು.

ನಮಗೆಲ್ಲ ತಿಳಿದಿರುವಂತೆ, ಬಸವಣ್ಣನವರು ಹುಟ್ಟಿದ್ದು ಬ್ರಾಹ್ಮಣರ ಮನೆತನದಲ್ಲಿ. ಆದರೂ ಅಲ್ಲಿನ ಅರ್ಥಹೀನ ಸಾಂಪ್ರದಾಯಿಕ ವ್ಯವಸ್ಥೆಯ ಬಗೆಗೆ ಅವರಲ್ಲಿ ಅಸಹ್ಯವುಂಟಾಯಿತು. ವೈದಿಕ ಪದ್ಧತಿಯ ಉಪನಯನ ಸಂಸ್ಕಾರವನ್ನೇ ಪ್ರಶ್ನಿಸಿದರು. ಅದರಲ್ಲಿದ್ದ ಲಿಂಗಪಕ್ಷಪಾತದ ದೃಷ್ಟಿಗೆ ಸವಾಲೆಸೆದರು. ಅವರ ಸವಾಲಿಗೆ ಸಂಪ್ರದಾಯಸ್ಥರಿಂದ ಸಮರ್ಥ ಉತ್ತರ ದೊರೆಯದಿದ್ದಾಗ, ಆ ಹುಟ್ಟಿದ ಅಂಗಳವನ್ನೇ ಬಿಟ್ಟು ಹೊರಬಂದರು.

ಮುಂದೆ ಕೂಡಲ ಸಂಗಮ ಕ್ಷೇತ್ರಕ್ಕೆ ಹೋಗಿ, ಅಲ್ಲಿ ವೇದ, ಉಪನಿಷತ್ತು, ಆಗಮ, ಶಾಸ್ತ್ರ, ಪುರಾಣಗಳನ್ನೆಲ್ಲ ಆಳವಾಗಿ ಅಧ್ಯಯನ ಮಾಡಿದರು. ಅಲ್ಲಿನ ದೇವಾಲಯ ಸಂಸ್ಕೃತಿಯ ಅಸಂಗತಗಳನ್ನು, ಪುರೋಹಿತಶಾಹಿಯ ಶೋಷಕ ನೀತಿ ಕಂಡು ಅವರಿಗೆ ಜುಗುಪ್ಸೆಯೆನಿಸಿತು. ದೇವಾಲಯ ಸಂಸ್ಕೃತಿಗಿಂತ ಜೀವಾಲಯ ಸಂಸ್ಕೃತಿಯ ಅಗತ್ಯ ಮನಗಂಡು, ಸಂಪ್ರದಾಯದ ಶಾಸ್ತ್ರ ವಿಧಿಗಳ ಅರ್ಥಹೀನತೆಯನ್ನು ಅನಾವರಣಗೊಳಿಸಿದರು. ನಂತರ ಬಿಜ್ಜಳನ ಆಸ್ಥಾನ ಸೇರಿದಾಗ, ರಾಜಶಾಹಿಯ ನೀತಿಹೀನ ರೀತಿ ಪರಿಚಯವಾಯಿತು. ಜನಜಾಗೃತಿಯಾಗದಿದ್ದರೆ ಮಾನವ ಘನತೆ ಮಣ್ಣುಪಾಲಾಗುತ್ತದೆ ಎಂಬುದು ಬಸವಣ್ಣನವರಿಗೆ ಪೂರ್ಣ ಮನವರಿಕೆಯಾಯಿತು. ಈ ಎಲ್ಲ ಬಂಧನಗಳಿಂದ ಮತ್ತು ಅನಿಷ್ಟಗಳಿಂದ ಮುಕ್ತವಾದ ಒಂದು ಹೊಸ ಸಮಾಜದ ನಿರ್ಮಾಣಕ್ಕೆ ಸಂಕಲ್ಪ ಮಾಡಿದರು. ತಮ್ಮ ವಿಚಾರಧಾರೆಯ ಪ್ರಯೋಗಕ್ಕೆ ಕಲ್ಯಾಣವನ್ನು ಕೇಂದ್ರವನ್ನಾಗಿ ಮಾಡಿಕೊಂಡರು.

ಬಸವಣ್ಣನವರು ಕಲ್ಪಿಸಿದ್ದು ‘ಕಲ್ಯಾಣ ರಾಜ್ಯ’. ಅದಕ್ಕಾಗಿ ಅವರು ರೂಪಿಸಿದ ಅಲಿಖಿತ ಸಂವಿಧಾನದ ಮೂರು ಮಹತ್ವದ ಅಧಿನಿಯಮಗಳೆಂದರೆ, ಕಾಯಕ- ದಾಸೋಹ-ಅನುಭಾವ. ಈ ಶಬ್ದಗಳು ಹೊರಗಣ್ಣಿಗೆ ಭಿನ್ನವೆಂಬಂತೆ ಕಂಡರೂ ಆ ಮೂರರ ಕರುಳೂ ಒಂದೇ. ಈ ಶಬ್ದಗಳಿಗೆ ಬಸವಣ್ಣನವರು ಸಾಕ್ಷಾತ್ಕಾರದ ರೂಪ ಕೊಟ್ಟರು. ಬಸವಣ್ಣನವರ ವಿಶ್ವಸಂದೇಶ
ದಲ್ಲಿ ಜಾತಿ-ಮತಗಳ ಜಂಜಾಟವಿಲ್ಲ; ಪಂಥ-ಪಂಗಡಗಳ ಪ್ರಶ್ನೆಯಿಲ್ಲ; ಮೇಲು-ಕೀಳುಗಳ ಮಡಿವಂತಿಕೆ ಇಲ್ಲ; ವರ್ಣ-ವರ್ಗಗಳ ಭೇದವಿಲ್ಲ. ಪೂಜಾರಿ-ಪುರೋಹಿತರ ಪಾರುಪತ್ಯೆಯಿಲ್ಲ. ಹೆದರಿಕೆ-ಬೆದರಿಕೆಗಳ ಹಿಂಸೆಯಿಲ್ಲ; ಗುಡಿ-ಗುಂಡಾರಗಳ ಗ್ರಹಣವಿಲ್ಲ, ಶಾಸ್ತ್ರ-ಸಂಪ್ರದಾಯಗಳ ಸಂಕೋಲೆಯಿಲ್ಲ; ಪೂರ್ವಗ್ರಹ ಪೀಡೆಯಿಲ್ಲ. ಅದು ಪೂರ್ಣ ಮುಕ್ತ; ಪಾರದರ್ಶಕ; ಪ್ರಜಾಸತ್ತಾತ್ಮಕ!

ಸಂಪ್ರದಾಯದ ಕೆಲವು ಪಟ್ಟಭದ್ರ ಹಿತಾಸಕ್ತಿಗಳಿಂದ, ಕೆಲವರ ಅಸಹನೆ ಮತ್ತು ಸ್ವಾರ್ಥದಿಂದ, ಶರಣ ಪರಂಪರೆಯಲ್ಲೇ ಬಂದ ಕೆಲವರ ಅನಾಸಕ್ತಿಯಿಂದ, ಇನ್ನೂ ಕೆಲವು ಅತ್ಯಭಿಮಾನಿಗಳ ಅಭಿಜ್ಞತೆಯಿಂದ, ಕೆಲವರ ವಾದ-ವಿವಾದಗಳಿಂದ, ರಾಜಕೀಯ ಸಮಯ ಸಾಧಕರಿಂದ ಅನನ್ಯ ಮತ್ತು ಜಾತ್ಯತೀತ ಬಸವ ದರ್ಶನಕ್ಕೆ ಜಾತಿಯ ಕಳಂಕದ ಹೆಸರು ತಾಗಿರುವುದೊಂದು ದುರಂತದ ಸಂಗತಿ. ವಿಚಾರವಂತರೆಲ್ಲ ಈ ಬಗೆಗೆ ಗಂಭೀರ ಚಿಂತನೆ ನಡೆಸಿ, ಸಮಷ್ಟಿ ಹಿತದೃಷ್ಟಿ, ಸರ್ವಸಮನ್ವಯ, ಬಸವ ತತ್ವಗಳ ವಸ್ತುನಿಷ್ಠತೆಯನ್ನು ನಿರ್ಮಲ ಮನಸ್ಸಿನಿಂದ ಅರ್ಥಮಾಡಿಕೊಳ್ಳಬೇಕು.

ಬಸವಣ್ಣನವರ ದೂರದೃಷ್ಟಿಯ, ವಿಶ್ವ ವೈಶಾಲ್ಯದ ವಿಚಾರಗಳು ನಮ್ಮ ಮುಂದಿದ್ದರೂ, ಒಂದು ಕಡೆ ಗೆದ್ದಲು ಹಿಡಿದ ಅಪ್ರಸ್ತುತ ಸಂಪ್ರದಾಯದ ಗೊಡ್ಡುಮರಕ್ಕೆ ತೆಕ್ಕೆ ಬಿದ್ದಿರುವ ಜಂಗುಳಿ, ಮತ್ತೊಂದು ಕಡೆ ಬಸವಣ್ಣನ ಹೆಸರನ್ನೇ ಬಂಡವಾಳ ಮಾಡಿಕೊಂಡು ಅಂಗಡಿ ನಡೆಸುತ್ತಿರುವ ವ್ಯಂಗ್ಯ. ಈ ಎರಡೂ ಬವಣೆಗಳಿಂದ ಬಸವಣ್ಣನವರನ್ನು ಬಿಡಿಸಿ, ಅವರನ್ನು ಎಲ್ಲರ ಸೊತ್ತನ್ನಾಗಿ ಮಾಡುವ ಕೆಲಸ ವಿಧಾಯಕವಾಗಿ ನಡೆದು, ಬಸವಣ್ಣನವರ ಸಂದೇಶವನ್ನು ವಿಶ್ವದ ಎಲ್ಲೆಡೆ ಒಯ್ಯಬೇಕಾಗಿದೆ. ಆದುದರಿಂದ ನಾವು ಆಚರಿಸುತ್ತಿರುವ ‘ಬಸವ ಜಯಂತಿ’ ಕೇವಲ ಉಪಚಾರವಾಗಬಾರದು; ಪ್ರದರ್ಶನವಾಗಬಾರದು. ಅದು ಅರ್ಥಪೂರ್ಣವಾಗಬೇಕಾದರೆ ಬಸವಣ್ಣನವರ ಜೀವನಾದರ್ಶ ಪಾಲನೆಯಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT