ಬುಧವಾರ, 12 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಯುಷ್ಯ ಹಿರಿದು, ಭಾಷೆ ಕಿರಿದು

ಬಿಎಚ್‍ಯು ವಿದ್ಯಾರ್ಥಿಗಳು ಬೆಳಕಿನ ನಗರದಲ್ಲಿ ಅಂಧತ್ವ ಪ್ರದರ್ಶಿಸುತ್ತಿರುವುದು ವಿಪರ್ಯಾಸ
Last Updated 27 ನವೆಂಬರ್ 2019, 9:24 IST
ಅಕ್ಷರ ಗಾತ್ರ

ಕೆಲವು ವರ್ಷಗಳ ಹಿಂದೆ ಅಶೋಕ ವಿಶ್ವವಿದ್ಯಾಲಯದ ಪ್ರೊ. ಸೀಕತ್ ಮಜುಂದಾರ್ ಅವರು, ಚೀನಿ ಕಾವ್ಯದ ಪ್ರವರ್ಧನೆಗೆಂದು ಸ್ಟ್ಯಾನ್‌ಫರ್ಡ್‌ನಲ್ಲಿ ಸ್ಥಾಪಿಸಿದ್ದ ಕನ್‍ಫ್ಯೂಷಿಯಸ್ ಚೇರ್‌ನ ಸದಸ್ಯರಾಗಿದ್ದರು. ಅಲ್ಲಿ ಅವರ ಚೀನಿ ಸಹೋದ್ಯೋಗಿಯೊಬ್ಬರು ‘ಚೀನಾ ಸರ್ಕಾರವು ಈ ಕನ್‍ಫ್ಯೂಷಿಯಸ್ ಚೇರ್‌ನಲ್ಲಿ ಒಬ್ಬ ಬಿಳಿಯ ಚರ್ಮದವನನ್ನು ನೋಡಬೇಕೆಂದು ಬಯಸುತ್ತದೆ’ ಎಂದು ಹೇಳಿದ್ದರಂತೆ. ಏತಕ್ಕೆಂದು ಕುತೂಹಲಕ್ಕೆ ವಿಚಾರಿಸಿದಾಗ ಆ ಚೀನಿ ಸಹೋದ್ಯೋಗಿ ‘ವಿದೇಶಿಯರು ಚೀನಿ ಸಂಸ್ಕೃತಿಗೆ ಸೇವೆ ಸಲ್ಲಿಸುವುದನ್ನು ನೋಡಲು ನಮಗೆ ಸಂತೋಷವಾಗುತ್ತದೆ. ನಮ್ಮ ಸಂಸ್ಕೃತಿ ಅದೆಷ್ಟು ವ್ಯಾಪಕ ವಾದುದೆಂದರೆ, ಚೀನೀಯರು ಮಾತ್ರವಲ್ಲ; ಇಡೀ ಜಗತ್ತೇ ಚೀನಿ ಸಂಸ್ಕೃತಿ ಶೋಧನೆಯಲ್ಲಿ ತೊಡಗಿದೆ ಎಂಬ ಸಂದೇಶ ಹೊರಜಗತ್ತಿಗೆ ತಲುಪುತ್ತದೆ’ ಎಂದು ಉತ್ತರಿಸಿ ದ್ದರು. ಆದರೆ ಭಾರತೀಯರು ಸಂಸ್ಕೃತ ಭಾಷೆಯನ್ನು ಕುಬ್ಜಗೊಳಿಸಲು, ನಿರ್ನಾಮ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ. ಸಂಸ್ಕೃತ ಮೃತಭಾಷೆ ಎನಿಸಿಕೊಳ್ಳಲು ಇಂತಹವರ ಕೊಡುಗೆಯೂ ಬಹಳಷ್ಟಿದೆ.

ಇಂದು ಕಾಶಿಯ ಬನಾರಸ್‌ ಹಿಂದೂ ವಿಶ್ವವಿದ್ಯಾಲಯವು (ಬಿಎಚ್‍ಯು) ಕ್ಷುಲ್ಲಕ ಕಾರಣಕ್ಕಾಗಿ ವಿವಾದದ ಕೇಂದ್ರವಾಗಿದೆ. ಹಿಂದೂ ತತ್ವವನ್ನು ಬೋಧಿಸಲು ಫಿರೋಜ್ ಖಾನ್ ಎಂಬ ಮುಸ್ಲಿಂ ಪ್ರೊಫೆಸರರನ್ನು ನೇಮಿಸಲಾಗಿದೆ ಎಂಬ ಕಾರಣಕ್ಕೆ, ದಾರಿ ತಪ್ಪಿದ ಕೆಲವು ವಿದ್ಯಾರ್ಥಿಗಳು ಗಲಭೆ ಮಾಡುತ್ತಿದ್ದಾರೆ, ಅವರ ತರಗತಿಯನ್ನು ಬಹಿಷ್ಕರಿಸಿದ್ದಾರೆ.

ಈ ವಿದ್ಯಾರ್ಥಿಗಳ ವರ್ತನೆ ಅನುಚಿತ ಮಾತ್ರವಲ್ಲ, ಅನೈತಿಕ ಮತ್ತು ಅಸಾಂವಿಧಾನಿಕ ಕೂಡ. ಹಾಗೆ ನೋಡಿದರೆ ಪ್ರೊ. ಫಿರೋಜ್ ಖಾನ್‍ರೇನೂ ಮಾಮೂಲಿ ಅಭ್ಯರ್ಥಿಯಲ್ಲ. ಅವರ ಇಡೀ ಕುಟುಂಬ ಸಂಸ್ಕೃತಕ್ಕೆ ತಮ್ಮ ಜೀವಿತವನ್ನು ಮುಡಿಪಾಗಿರಿಸಿದೆ. ಅವರ ತಂದೆ ರಂಜಾನ್ ಖಾನ್ ಸಂಸ್ಕೃತ ವಿದ್ವತ್ತಿನಲ್ಲಿ ‘ಶಾಸ್ತ್ರೀ’ ಪದವಿ ಪಡೆದವರು. ಈ ಬೆಳವಣಿಗೆಗಳಿಗೆ ಪ್ರತಿಕ್ರಿಯಿಸಿರುವ ಫಿರೋಜ್‌ ಖಾನ್‌ ‘ನನ್ನಲ್ಲಿ ಸಂಸ್ಕೃತದ ಒಲವು ಮೂಡಿಸಿದವರು ಸಂಸ್ಕೃತ ಪ್ರೇಮಿಯಾದ ನನ್ನ ತಂದೆ. ಅವರ ಸಂಸ್ಕಾರದ ಪ್ರಭಾವದಲ್ಲೇ ನಾನು ನನ್ನ ಮಕ್ಕಳನ್ನೂ ಬೆಳೆಸಿದೆ. ಸಂಸ್ಕೃತ ನಮ್ಮ ಮನೆತನದ ನರನಾಡಿಗಳಲ್ಲೂ ಹರಿಯುತ್ತಿದೆ. ಈ ವಿದ್ಯಾರ್ಥಿಗಳು ನಮ್ಮ ಈ ಹಿನ್ನೆಲೆಯನ್ನು ಅರಿಯದೆ ಗಲಭೆ ಮಾಡುತ್ತಿರುವುದು ವಿಷಾದಕರ’ ಎಂದಿದ್ದಾರೆ.

ಕಾಶಿಯಲ್ಲಿ ಕೋಮು ದ್ವೇಷ ಹರಡುವ ಪ್ರಯತ್ನ ಈ ಹಿಂದೆ ನಡೆದಿಲ್ಲವೆಂದಲ್ಲ. ಘಜ್ನಿ ಮಹಮ್ಮದ್‍ನ ಕಾಲದಿಂದ ಹಿಡಿದು, ಬಿಎಚ್‍ಯು ವಿದ್ಯಾರ್ಥಿಗಳ ಇಂದಿನ ಈ ಪ್ರತಿಭಟನೆಯವರೆಗೂ ಹಲವಾರು ಬಗೆಯ ಪ್ರಯತ್ನಗಳು ನಡೆದಿವೆ. ಈ ವಿದ್ಯಾರ್ಥಿ ಪ್ರತಿಭಟನೆಯು ಘಜ್ನಿ ದಾಳಿಗಿಂತಲೂ ಅಪಾಯಕಾರಿಯಾದುದು. ಘಜ್ನಿ ನಮ್ಮ ಸಂಸ್ಕೃತಿಯ ಹೊರರೂಪವನ್ನು ಭಗ್ನಗೊಳಿಸಿದರೆ, ಇವರು ಇದರ ಅಂತಃಸತ್ವವನ್ನೇ ನಾಶ ಮಾಡಲು ಹೊರಟಿದ್ದಾರೆ. ಆದರೆ, ಇಂತಹ ಪ್ರಯತ್ನ ಈತನಕ ಯಶಸ್ವಿಯಾಗಿಲ್ಲ. ಏಕೆಂದರೆ ಕಾಶಿಯ ನೆಲದ ಗುಣವೇ ಅಂತಹುದು. ಅದು ಭಾರತದ ಸರ್ವಧರ್ಮ ಸಮನ್ವಯಕ್ಕೆ ಒಂದು ಜೀವಂತ ಉದಾಹರಣೆಯಾಗಿದೆ.

ಇದು ಪಾರ್ಶ್ವನಾಥ, ಶ್ರೇಯಾಂಸ ಮುಂತಾದ ಹಲವು ತೀರ್ಥಂಕರರ ಜನ್ಮಭೂಮಿಯಾಗಿದೆ. ಗೌತಮ ಬುದ್ಧ ವಿಹರಿಸಿದ ಪುಣ್ಯಕ್ಷೇತ್ರವಾಗಿದೆ. ಗುರುನಾನಕರಂತಹ ಸಿಖ್‌ ಅನುಭಾವಿಗಳು ಇಲ್ಲಿ ಹಲವು ವಿದ್ವತ್ ಚರ್ಚೆಗಳನ್ನು ನಡೆಸಿದ್ದಾರೆ. ಅಸ್ಪೃಶ್ಯತೆಯ ಜಾಡ್ಯದತ್ತ ಆದಿಶಂಕರರ ಕಣ್ತೆರೆಸಿದ ಬೆಳಕಿನ ಕೇಂದ್ರವಾಗಿದೆ. ಪ್ರತಿ ಮುಂಜಾನೆ ಬಿಸ್ಮಿಲ್ಲಾ ಖಾನ್ ಅವರ ಸಂಗೀತದ ನಾದ ಸವಿದ ಮೇಲಷ್ಟೇ ಕಾಶಿ ವಿಶ್ವನಾಥನಿಗೆ ಬೆಳಗಾಗುತ್ತದೆ. ಒಮ್ಮೆ ಅಮೆರಿಕದ ಪ್ರಸಿದ್ಧ ವಿಶ್ವವಿದ್ಯಾಲಯವೊಂದು ಬಿಸ್ಮಿಲ್ಲಾ ಖಾನ್‍ ಅವರಿಗೆ ಪೌರತ್ವ, ಬಂಗಲೆ, ಐಷಾರಾಮಿ ಬದುಕು, ಯಥೇಚ್ಛ ಹಣ ಎಲ್ಲವನ್ನೂ ನೀಡಲು ಮುಂದೆ ಬಂದಿತು. ಆದರೆ ಅವರಿಗೆ ಕಾಶಿಯನ್ನು ಬಿಟ್ಟುಹೋಗಲು ಇಷ್ಟವಿರಲಿಲ್ಲ. ಈ ಪ್ರಸ್ತಾಪವನ್ನು ವಿನಯದಿಂದಲೇ ನಿರಾಕರಿಸಿದ ಬಿಸ್ಮಿಲ್ಲಾ ಖಾನ್ ‘ನನಗೆ ಜೀವದಾಯಿಯಾದ ಗಂಗಾನದಿಯನ್ನೂ ನನ್ನೊಂದಿಗೆ ಕರೆತರಬಹುದೇ?’ ಎಂದು ಅವರೊಂದಿಗೆ ಹಾಸ್ಯಚಟಾಕಿ ಹಾರಿಸಿದ್ದರಂತೆ.

ಭಾರತದ ಉಳಿದೆಲ್ಲ ಭಾಗಗಳಲ್ಲಿ ಇನ್ನೂ ಕನಸಾಗಿರುವ ರಾಷ್ಟ್ರೀಯತೆ, ತಾಯ್ನೆಲದ ಪ್ರೀತಿ, ಸರ್ವಧರ್ಮ ಸಮನ್ವಯವು ಕಾಶಿಯಲ್ಲಿ ಅನಾದಿ ಕಾಲದಿಂದಲೂ ಸಹಜವಾಗೇ ನೆಲೆಸಿವೆ. ಕಾಶಿಯ ಈ ವೈಶಿಷ್ಟ್ಯವನ್ನು ‘ಗಂಗಾ ಜಮುನಾ ತಹಜೀಬ್’ ಎಂದು ವರ್ಣಿಸುತ್ತಾರೆ. ಕಾಶಿ ಎಂದರೆ ‘ಬೆಳಕು’ ಎಂದರ್ಥ. ಆದರೆ ಬಿಎಚ್‍ಯು ವಿದ್ಯಾರ್ಥಿಗಳು ಬೆಳಕಿನ ನಗರದಲ್ಲಿ ಇದ್ದುಕೊಂಡು ತಮ್ಮ ಕತ್ತಲೆಯನ್ನು, ಕುರುಡುತನವನ್ನು ಪ್ರದರ್ಶಿಸುತ್ತಿರುವುದು ವಿಪರ್ಯಾಸ.

ಮುಸ್ಲಿಂ ಪ್ರಾಧ್ಯಾಪಕ ಬೇಡವೆಂದು ಗಲಭೆ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಕಾಶಿಯ ಮಹತ್ವ ಹಾಗಿರಲಿ, ಭಾರತೀಯ ಸತ್ವದ ಪರಿಚಯವೂ ಇದ್ದಂತಿಲ್ಲ. ಹಲವಾರು ಮುಸ್ಲಿಂ ಕವಿಗಳು, ವಿದ್ವಾಂಸರು ಸಂಸ್ಕೃತ ವಾಙ್ಮಯಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಉಪನಿಷತ್ತುಗಳನ್ನು ಔರಂಗಜೇಬನ ಸಹೋದರ ದಾರಾಶಿಕೋ; ರಾಮಾಯಣ, ಮಹಾಭಾರತಗಳನ್ನು ಪರ್ಷಿಯನ್ ಭಾಷೆಗೆ ಅಬ್ದುಲ್ ಖಾದಿರ್ ಬದೌನಿ ಅನುವಾದಿಸಿದ್ದರು. 10ನೇ ಶತಮಾನದ ಇರಾನಿ ವಿದ್ವಾಂಸ ಆಲ್ ಬರೂನಿ ಭಾರತಕ್ಕೆ ಬಂದು ಸಂಸ್ಕೃತ ಕಲಿತಿದ್ದ. ಭಾರತೀಯ ವಿಜ್ಞಾನ, ಆಯುರ್ವೇದ, ಗಣಿತ, ಖಗೋಳಶಾಸ್ತ್ರ ಮುಂತಾದ ವಿಷಯಗಳ ಕುರಿತಾದ ಪ್ರಾಚೀನ ಶಾಸ್ತ್ರ
ಗ್ರಂಥಗಳನ್ನು ಅರಬ್ ಸಂಸ್ಕೃತಿಗೆ ಪರಿಚಯಿಸಿದ್ದ. ಅವನ ತಾರೀಖ್ ಅಲ್ ಹಿಂದ್ 9ನೇ ಶತಮಾನದ ಭಾರತೀಯ ಸಮಾಜ, ಸಂಸ್ಕೃತಿಗಳಿಗೆ ಹಿಡಿದ ಕೈಗನ್ನಡಿಯಾಗಿದೆ. ಈ ಹಿನ್ನೆಲೆಯಲ್ಲಿ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಸಂಸ್ಕೃತ ವಿಭಾಗದಲ್ಲಿ ಫಿರೋಜ್ ಖಾನ್‍ರಂಥವರು ಪಾಠ ಪ್ರವಚನಗಳಲ್ಲಿ ತೊಡಗುವುದು ಆಶ್ಚರ್ಯದ ಸಂಗತಿಯಲ್ಲ, ಅಪಚಾರದ ಸಂಗತಿಯಂತೂ –ಯಾವ ಅರ್ಥದಲ್ಲೂ– ಅಲ್ಲವೇ ಅಲ್ಲ.

ಇದು ಸಾಲದೆಂದು ‘ಸನಾತನ ಹಿಂದೂ ಧರ್ಮದ ಪೋಷಣೆ, ಸಂಘಟನೆಗಾಗಿ ಮಾಳವೀಯರು ಹಿಂದೂ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದರು’ ಎಂದು ವಿದ್ಯಾರ್ಥಿಗಳು ಅಪಪ್ರಚಾರ ಮಾಡುತ್ತಿರುವುದಂತೂ ಅಕ್ಷಮ್ಯ ಅಪರಾಧ. ಮಾಳವೀಯರು ಸಿದ್ಧಪಡಿ ಸಿದ್ದ ಕರಡನ್ನು ಸಮಗ್ರವಾಗಿ ಅಧ್ಯಯನ ಮಾಡದೆ ಅದರ ಕೆಲವು ಆಯ್ದ ಸಾಲುಗಳನ್ನು ಎತ್ತಿಕೊಂಡು ಈ ವಿದ್ಯಾರ್ಥಿಗಳು ಮಾಳವೀಯರ ಆಶಯವನ್ನು ಅಪವ್ಯಾಖ್ಯಾನಿಸುತ್ತಿದ್ದಾರೆ. 1915ರ ಬನಾರಸ್ ಹಿಂದೂ ವಿಶ್ವವಿದ್ಯಾಲಯ ಕಾಯ್ದೆ, ಪರಿಚ್ಛೇದ 4ರ ಉಪಬಂಧ (1)ರಲ್ಲಿ ‘ಪ್ರಾಧ್ಯಾಪಕ ಹುದ್ದೆಗೆ ಅಭ್ಯರ್ಥಿಯ ಜಾತಿ, ಧರ್ಮ, ಜನಾಂಗಗಳನ್ನು ಪರಿಗಣಿಸುವಂತಿಲ್ಲ’ ಎಂದು ಸ್ಪಷ್ಟವಾದ ಉಲ್ಲೇಖವಿದೆ. ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಮಾಳವೀಯರು ಬಹಳ ಸ್ಪಷ್ಟವಾಗಿಯೇ ‘ಅತ್ಯಂತ ಸಮರ್ಥರಾದ ಭಾರತೀಯ/ವಿದೇಶಿ ಶಿಕ್ಷಕರ ಸೇವೆಯನ್ನು ಬಳಸಿಕೊಳ್ಳಲಾಗುವುದು’ ಎಂದಿದ್ದರು. ಆ ಕಾಲದಲ್ಲಿ ಭಾರತೀಯ ಅಧ್ಯಯನದಲ್ಲಿ ಪ್ರಕಾಂಡ ಪಂಡಿತರಾಗಿದ್ದ ಹಲವು ಬ್ರಿಟಿಷ್ ವಿದ್ವಾಂಸರು ಭಾರತದಲ್ಲಿ ನೆಲೆಸಿದ್ದರು. ಬ್ರಿಟಿಷರು ಹಿಂದೂಗಳಂತೂ ಆಗಿರಲಿಲ್ಲವಷ್ಟೇ!

ಕಾಶ್ಮೀರ ವಿಶ್ವವಿದ್ಯಾಲಯದ ಸಂಸ್ಕೃತ ವಿಭಾಗದಲ್ಲಿ ಮುಸ್ಲಿಂ ಪ್ರಾಧ್ಯಾಪಕರ ಸಂಖ್ಯೆಯೇ ಹೆಚ್ಚು, ಅಲಿಗಡ ಮುಸ್ಲಿಂ ವಿಶ್ವವಿದ್ಯಾಲಯವೂ ಸಂಸ್ಕೃತ ವಿಭಾಗ ತೆರೆದಿದ್ದು ಅಲ್ಲಿ ಶೇ 50ರಷ್ಟು ವಿದ್ಯಾರ್ಥಿಗಳು ಮುಸ್ಲಿಮರಾಗಿದ್ದಾರೆ. ಆದರೆ ಬನಾರಸ್ ವಿದ್ಯಾರ್ಥಿಗಳು ಮಾತ್ರ ವೇದಶಾಸ್ತ್ರಗಳನ್ನು ವೈದಿಕರೇ ಕಲಿಸಬೇಕು, ಮುಸ್ಲಿಮರು ಕಲಿಸ ಬಾರದು ಎಂದು ಹಟ ಹಿಡಿದಿದ್ದಾರೆ. ಹಾಗಿದ್ದರೆ ಜೈನ, ಬೌದ್ಧ ಶಾಸ್ತ್ರಗಳನ್ನು ಆಯಾ ಮತದವರೇ ಕಲಿಸಬೇಕೇ? ಕನ್ನಡದ ಕೆಲಸವನ್ನು ಕನ್ನಡಿಗರೇ ಮಾಡಬೇಕೆಂದು ನಾವು ಹಟ ಹಿಡಿದಿದ್ದರೆ, ರೆ.ಕಿಟ್ಟೆಲ್, ಬಿ.ಎಲ್. ರೈಸ್, ಫ್ಲೀಟ್ ಮುಂತಾದವರ ಸೇವೆಯನ್ನು ನಿರಾಕರಿಸಿದ್ದರೆ, ಅದರಿಂದ ಕನ್ನಡ ಅಧ್ಯಯನದ ಆತ್ಮಹತ್ಯೆ ಆಗುತ್ತಿತ್ತು. ಇಂದು ಬನಾರಸ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಈ ಆತ್ಮಹತ್ಯೆಯ ಹಾದಿಯನ್ನೇ ಹಿಡಿದಿದ್ದಾರೆ ಎನಿಸುತ್ತದೆ.

ಲೇಖಕ: ಸಹಾಯಕ ಪ್ರಾಧ್ಯಾಪಕ,ಜ್ಯೋತಿನಿವಾಸ್‌ ಕಾಲೇಜ್‌, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT