ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿಶ್ಲೇಷಣೆ: ಪಟೇಲ್, ಖರ್ಗೆ ದಾಖಲಿಸಿದ ಪ್ರತಿರೋಧ

ಜಾತಿಪ್ರಧಾನ ನುಡಿಗಟ್ಟುಗಳಿಂದ ಪ್ರಜ್ಞಾಪೂರ್ವಕವಾಗಿ ಆಚೆ ಬರಲು ಪ್ರಯತ್ನಿಸಬೇಕು
ಕಿರಣ್ ಎಂ. ಗಾಜನೂರು
Published 4 ಜುಲೈ 2024, 21:30 IST
Last Updated 4 ಜುಲೈ 2024, 21:30 IST
ಅಕ್ಷರ ಗಾತ್ರ

ಶಾಸಕರಾಗಿದ್ದ, ದಲಿತ ಸಮುದಾಯಕ್ಕೆ ಸೇರಿದ ಬಿ. ರಾಚಯ್ಯ ಅವರು ಒಮ್ಮೆ ಯಾವುದೋ ಸಭೆಯಲ್ಲಿ ರಾಮಕೃಷ್ಣ ಹೆಗಡೆ ಅವರನ್ನು ‘ಅತ್ಯಂತ ಬುದ್ಧಿವಂತರು, ಮೇಧಾವಿಗಳು’ ಎಂದು ಹೊಗಳುತ್ತಿದ್ದರು. ಆಗ ಮಧ್ಯಪ್ರವೇಶಿಸಿದ ಜೆ.ಎಚ್. ಪಟೇಲ್ ಅವರು, ‘ನೋಡಿ ರಾಚಯ್ಯ ಅವರೇ, ಸಂವಿಧಾನ ಬಂದ ಮೇಲೆ ನಿಮ್ಮ ಇತಿಹಾಸ ಆರಂಭವಾಗಿದೆ. ನನ್ನ ಇತಿಹಾಸ 800 ವರ್ಷಗಳ ಹಿಂದೆ ಬಸವಣ್ಣನವರ ಕಾರಣಕ್ಕೆ ಆರಂಭವಾಗಿದೆ...! ಆದರೆ, ರಾಮಕೃಷ್ಣ ಹೆಗಡೆಯವರ ಚರಿತ್ರೆಗೆ ಸಾವಿರಾರು ವರ್ಷಗಳ ಇತಿಹಾಸ ಇದೆ. ಹಾಗಾಗಿ ಅವರು ಬುದ್ಧಿವಂತ ಆಗಿರುವುದು, ಮೇಧಾವಿ ಆಗಿರುವುದು ಅತ್ಯಂತ ಸಹಜ ಮತ್ತು ನೈಸರ್ಗಿಕ’ ಎಂದು ತಮಾಷೆಯ ಧಾಟಿಯಲ್ಲಿ ಹೇಳಿ ಕುಳಿತುಬಿಟ್ಟರು.

ಆ ಮಾತಿಗೆ ಅಲ್ಲಿರುವ ಎಲ್ಲರೂ ನಕ್ಕಿದ್ದರು. ಆದರೆ ಪಟೇಲರು ನಮ್ಮ ಅಸಮಾನ ಸಾಮಾಜಿಕ ವ್ಯವಸ್ಥೆ, ಅದಕ್ಕೆ ಕಾರಣವಾದ ಇತಿಹಾಸವನ್ನು ಆ ಮಾತಿನ ಮೂಲಕ ಕಟ್ಟಿಕೊಟ್ಟಿದ್ದರು ಎಂಬ ಮಾತನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸದನದಲ್ಲಿ ಹಾಗೂ ಕೆಲವು ಸಾರ್ವಜನಿಕ ಭಾಷಣಗಳಲ್ಲಿ ಹೇಳಿದ್ದಿದೆ.

ರಾಜ್ಯಸಭೆಯಲ್ಲಿ ಇಂಥದ್ದೇ ಒಂದು ಪ್ರಸಂಗ ಈಚೆಗೆ ನಡೆದಿದೆ. ರಾಜ್ಯಸಭೆಯ ಸಭಾಪತಿ ಜಗದೀಪ್ ಧನಕರ್ ಅವರು ಚರ್ಚೆಯೊಂದರ ಸಂದರ್ಭದಲ್ಲಿ ಜೈರಾಮ್ ರಮೇಶ್ ಕುರಿತು ‘ನೀವು ಅತ್ಯಂತ ಬುದ್ಧಿವಂತರಿದ್ದೀರ, ಪ್ರತಿಭಾವಂತರಾಗಿದ್ದೀರ. ಯು ಆರ್ ಸೋ ಗಿಫ್ಟೆಡ್. ಹಾಗಾಗಿ, ನೀವು ತಕ್ಷಣವೇ ಮಲ್ಲಿಕಾರ್ಜುನ ಖರ್ಗೆಯವರ ಸ್ಥಾನವನ್ನು ಅಲಂಕರಿಸಬೇಕು’ ಎಂಬ ಮಾತು ಆಡಿದರು. ಇದಕ್ಕೆ ತಕ್ಷಣ ಪ್ರತಿಕ್ರಿಯೆ ನೀಡಿದ ಖರ್ಗೆಯವರು, ‘ಮಾನ್ಯ ಸಭಾಪತಿಯವರೇ, ನಿಮ್ಮ ಮಾತು ವರ್ಣವ್ಯವಸ್ಥೆಯನ್ನು ತಲೆಯಲ್ಲಿ ಇಟ್ಟುಕೊಂಡು ಮಾತನಾಡುವವರ ಮಾತಿನಂತಿದೆ. ಹಾಗಾಗಿಯೇ ಜೈರಾಮ್ ರಮೇಶ್ ಅವರು ಬುದ್ಧಿವಂತರಂತೆ, ನಾನು ಬುದ್ಧಿವಂತನಲ್ಲದವನಂತೆ ಕಾಣುತ್ತಿದೆ’ ಎಂದು ಖಾರವಾಗಿ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಭಾಪತಿ ಧನಕರ್, ‘ನಾನು ಆ ಅರ್ಥದಲ್ಲಿ ಹೇಳಲಿಲ್ಲ’ ಎಂಬ ಸಮಜಾಯಿಷಿ ನೀಡಿದರು. ಈ ಮೇಲಿನ ಎರಡೂ ಪ್ರಸಂಗಗಳಲ್ಲಿ ಪಟೇಲ್ ಮತ್ತು ಖರ್ಗೆಯವರ ಪ್ರತಿಕ್ರಿಯೆಗಳು, ವ್ಯಕ್ತಿಯು ಯಾವುದೇ ಜಾತಿಯಿಂದ ಬಂದಿದ್ದರೂ ತನಗೆ ಅರಿವಿಲ್ಲದಂತೆಯೇ ಜಾತಿಸಮಾಜ ರೂಪಿಸಿದ ನುಡಿಗಟ್ಟುಗಳನ್ನು ಹೇಗೆ ಬಳಸುತ್ತಿರುತ್ತಾನೆ, ಹೇಗೆ ಅಪ್ರಜ್ಞಾಪೂರ್ವಕವಾಗಿ ಆ ನುಡಿಗಟ್ಟು ಮತ್ತು ಅಲೋಚನಾ ಕ್ರಮ ಆತನ ಸಂವಾದದ ಭಾಗವಾಗಿಬಿಡುತ್ತದೆ, ಆ ಮಾದರಿಯ ನುಡಿಗಟ್ಟು ಬಳಸುವ ಮೂಲಕವೂ ಆತ ಜಾತಿವ್ಯವಸ್ಥೆ ಮತ್ತು ಅದನ್ನು ಪೋಷಿಸುವ ಸಾಮಾಜಿಕತೆಯನ್ನು ಗಟ್ಟಿಗೊಳಿಸುತ್ತಿರುತ್ತಾನೆ ಎಂಬ ಮಹತ್ವದ ಸಮಾಜಶಾಸ್ತ್ರೀಯ ಸಂಗತಿಯ ಕುರಿತು ನಮ್ಮ ಗಮನ ಸೆಳೆಯುತ್ತಿವೆ ಅನ್ನಿಸುತ್ತದೆ.

ಜಾತಿವ್ಯವಸ್ಥೆ ಮತ್ತು ಅದರ ಗುಣಲಕ್ಷಣಗಳ ಕುರಿತು ‘ಹೋಮೊ ಹೈರಾರ್ಕಿಕಸ್’ ಎಂಬ ಕೃತಿ ಬರೆದಿರುವ ಲೂಯಿಸ್ ಡುಮಾಂಟ್ ಅವರು, ಭಾರತದಲ್ಲಿ ಜಾತಿ ವ್ಯವಸ್ಥೆಯು ಶ್ರೇಷ್ಠ–ಕನಿಷ್ಠ ಹಾಗೂ ಶುದ್ಧ–ಅಶುದ್ಧ ಎಂಬ ಮುಖ್ಯವಾದ ಗುಣಲಕ್ಷಣಗಳನ್ನು ಆಧರಿಸಿದೆ, ಈ ಎರಡೂ ಗುಣಲಕ್ಷಣಗಳು ಈ ಸಮಾಜದ ಒಟ್ಟಾರೆ ಅಲೋಚನಾ ಕ್ರಮವನ್ನು ಪ್ರಭಾವಿಸುವ ತಾತ್ವಿಕತೆಯ ರಚನೆಗಳಾಗಿವೆ, ಈ ಗುಣಲಕ್ಷಣಗಳನ್ನು ಆಧರಿಸಿಯೇ ಇಲ್ಲಿನ ಸಮಾಜವು ಶ್ರೇಣೀಕರಣವನ್ನು ಪೋಷಿಸಿಕೊಂಡು, ಅದಕ್ಕೆ ಸಾಮಾಜಿಕ ಮಾನ್ಯತೆಯನ್ನು ಕೊಟ್ಟುಕೊಂಡಿದೆ ಎಂಬ ವಿಶ್ಲೇಷಣೆಯನ್ನು ಮುಂದಿಟ್ಟಿದ್ದಾರೆ.

ಅಂದರೆ ನಮ್ಮ ಸಮಾಜದಲ್ಲಿ ವ್ಯಕ್ತಿಯೊಬ್ಬನ ಸ್ಥಾನವು ಆತ ಒಳ್ಳೆಯವನೋ ಕೆಟ್ಟವನೋ ಎಂಬ ಅಂಶದ ಮೂಲಕ ಮಾತ್ರ ನಿರ್ಧಾರವಾಗುವುದಿಲ್ಲ. ಬದಲಾಗಿ ಆತ ಶ್ರೇಷ್ಠನೋ ಕನಿಷ್ಠನೋ ಅನ್ನುವುದೂ ಮುಖ್ಯವಾಗುತ್ತದೆ. ಶ್ರೇಷ್ಠ ಮತ್ತು ಕನಿಷ್ಠ ಎಂಬ ಗುರುತು ದಕ್ಕುವುದು ವ್ಯಕ್ತಿಯ ಅರ್ಹತೆಯ ಕಾರಣದಿಂದಲ್ಲ; ಬದಲಾಗಿ, ಆತ ಯಾವ ಜಾತಿಯಲ್ಲಿ ಹುಟ್ಟಿದ್ದಾನೆ ಎಂಬುದನ್ನು ಆಧರಿಸಿರುತ್ತದೆ. ಈ ಕುರಿತು ಬಹಳಷ್ಟು ವಿಶ್ಲೇಷಣೆಗಳು ಸಮಾಜಶಾಸ್ತ್ರ ಸಂಕಥನದಲ್ಲಿ ನಡೆದಿವೆ. ಆರಂಭದ ದಿನಗಳಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಪುಣೆಯ ಪ್ರಗತಿಪರ ಬ್ರಾಹ್ಮಣ ಯುವಕ ಎಂದು ಗಾಂಧೀಜಿ ಅಂದುಕೊಂಡಿದ್ದು ಇದಕ್ಕೆ ಒಳ್ಳೆಯ ಉದಾಹರಣೆ.

ಆಹಾರದ ವಿಷಯದಲ್ಲಿಯೂ ಶುದ್ಧ ಮತ್ತು ಅಶುದ್ಧ ಎನ್ನುವ ಜಾತಿ ಪರಿಭಾಷೆಗಳು ಅತ್ಯಂತ ಸಹಜವಾಗಿ ಬಳಕೆಯಾಗುತ್ತವೆ. ಉದಾಹರಣೆಗೆ, ನಾವು ಬೆಂಗಳೂರು ಸೇರಿದಂತೆ ಯಾವುದೇ ನಗರಕ್ಕೆ ಹೋದರೂ ಅಲ್ಲಿ ಸಸ್ಯಾಹಾರಿ ಮತ್ತು ಮಾಂಸಾಹಾರಿ ಹೊಟೇಲುಗಳು ಕಾಣಸಿಗುತ್ತವೆ. ಅದರಲ್ಲಿ ಮುಖ್ಯವಾಗಿ ಸಸ್ಯಾಹಾರಿ ಹೊಟೇಲಿನವರು ‘ಶುದ್ಧ-ಸಸ್ಯಾಹಾರಿ’ ಎಂಬ ಒಕ್ಕಣೆಯನ್ನು ಸೇರಿಸಿಕೊಂಡಿರುತ್ತಾರೆ. ಸಸ್ಯಾಹಾರಿ ಅಂದರೆ ಅರ್ಥವಾಗುತ್ತದೆ. ಆದರೆ, ಶುದ್ಧ-ಸಸ್ಯಾಹಾರಿ ಅಥವಾ ಪರಿಶುದ್ಧ-ಸಸ್ಯಾಹಾರಿ ಎಂಬ ನುಡಿಗಟ್ಟು?! ಈ ನುಡಿಗಟ್ಟು ಏಕೆ ಬಳಕೆಗೆ ಬಂದಿದೆ? ಏಕೆ ಎಲ್ಲಿಯೂ ನಮಗೆ ‘ಶುದ್ಧ ಮಾಂಸಾಹಾರಿ’ ಹೊಟೇಲ್ ಎಂಬ ಒಕ್ಕಣೆ ಕಾಣುವುದಿಲ್ಲ! ಮಾಂಸಾಹಾರ ಶುದ್ಧವಾಗಿರಲು ಸಾಧ್ಯವಿಲ್ಲವೇ ಎಂದು ಯೋಚಿಸುತ್ತಾ ಹೋದರೆ ‘ಶುದ್ಧ–ಅಶುದ್ಧ ಎನ್ನುವುದು ಆಹಾರದ ಒಳಗೆ ಇರುವ ಅಂತರ್ಗತ ಗುಣವಲ್ಲ; ಬದಲಾಗಿ, ಅದನ್ನು ನೋಡುತ್ತಿರುವ ಜಾತಿಸಮಾಜ ರೂಪಿಸಿರುವ ಕಣ್ಣೋಟದ ಸಮಸ್ಯೆ’ ಎಂದು ಲೂಯಿಸ್ ಗುರುತಿಸಿರುವ ಶ್ರೇಷ್ಠ–ಕನಿಷ್ಠ ಹಾಗೂ ಶುದ್ಧ–ಅಶುದ್ಧ ಎಂಬ ಜಾತಿವ್ಯವಸ್ಥೆಯ ಪೋಷಕ ತತ್ವಗಳಿಗೆ ಬಂದು ತಲುಪುತ್ತೇವೆ.

ನಮ್ಮ ಸಮಾಜದಲ್ಲಿ ಆಳವಾಗಿ ಬೇರೂರಿರುವ ಈ ಜಾತಿ ಮತ್ತು ಪುರುಷಪ್ರಧಾನ ನುಡಿಗಟ್ಟುಗಳು ಎಷ್ಟು ಅಪಾಯಕಾರಿ ಅಂದರೆ, ಸುಮ್ಮನೆ ಗಮನಿಸಿ ನೋಡಿದರೂ ಸಾಕು, ನಮ್ಮ ಜನ ಸಹಜವಾಗಿ ಬಳಸುವ ಬಹುತೇಕ ಬೈಗುಳಗಳು ಹೆಣ್ಣನ್ನು ಅಪಮಾನಕ್ಕೆ ಈಡುಮಾಡುವಂತಿರುತ್ತವೆ; ದಲಿತ ಸಮುದಾಯಗಳ ಜಾತಿಯ ಹೆಸರನ್ನು ಬೈಗುಳಗಳಾಗಿ ಬಳಸುವ ಮೂಲಕ ಅವರ ಅಸ್ಮಿತೆಯನ್ನೇ ಅಪಮಾನಕ್ಕೆ ಒಡ್ಡುತ್ತಿರುತ್ತವೆ. ಹಾಗಾಗಿಯೇ ಕೆಲವು ಬೈಗುಳಗಳ ಬಳಕೆಯನ್ನು ನಾವು ಕಾನೂನುಗಳ ಮೂಲಕ ನಿಷೇಧಿಸುವ ಮಟ್ಟಕ್ಕೆ ಹೋಗಿದ್ದೇವೆ. ಈ ಬೈಗುಳ ಬಳಸುವವನಿಗೆ ಇದು ಜಾತಿ ನುಡಿಗಟ್ಟು ಎಂಬ ಅರಿವು ಇರಬೇಕಿಲ್ಲ. ಆತ ಅದನ್ನು ಬಹಳ ಸಹಜವಾಗಿಯೇ ಬಳಸುತ್ತಿರುತ್ತಾನೆ. ಬಳಸುವವರಿಗೆ ಅದು ಸಹಜ. ಆದರೆ ಆ ನುಡಿಗಟ್ಟನ್ನು ಪೋಷಿಸುತ್ತಿರುವ ಸಾಮಾಜಿಕತೆ ಹಾಗೂ ಅದರ ಪರಿಣಾಮಗಳ ವಿಶ್ಲೇಷಣೆ ಮುಖ್ಯವಾಗುತ್ತದೆ.

ಈ ಹಿನ್ನೆಲೆಯಲ್ಲಿ, ಪಟೇಲ್ ಮತ್ತು ಖರ್ಗೆ ಅವರು ಈ ನುಡಿಗಟ್ಟುಗಳಿಗೆ ಪ್ರತಿರೋಧ ದಾಖಲಿಸುವ ಮೂಲಕ ‘ಈ ದೇಶದಲ್ಲಿನ ವರ್ಣವ್ಯವಸ್ಥೆ, ಅದರ ಭಾಗವಾದ ಜಾತಿವ್ಯವಸ್ಥೆ ತನಗೆ ಪೂರಕವಾಗಿ ವರ್ತಿಸುವ ಭಾಷೆಯನ್ನು, ನುಡಿಗಟ್ಟುಗಳನ್ನು ಹಾಗೂ ಅಲೋಚನಾ ಕ್ರಮವನ್ನು ರೂಪಿಸಿಕೊಂಡು ಅಸ್ತಿತ್ವದಲ್ಲಿವೆ. ಈ ಕಾಲಕ್ಕೆ ಅವುಗಳನ್ನು ಧೈರ್ಯವಾಗಿ ಪ್ರಶ್ನಿಸಬೇಕು. ಅದು ಕೂಡ ಜಾತಿವಿರೋಧಿ ಹೋರಾಟದ ಅತ್ಯಂತ ಮುಖ್ಯವಾದ ಘಟ್ಟ’ ಎನ್ನುವ ತತ್ವವನ್ನು ಹೇಳಿದ್ದಾರೆ ಅನ್ನಿಸುತ್ತದೆ.

‘ಜಾತಿ ಅಸಮಾನತೆಯ ಸಮಸ್ಯೆ ತಳಸಮುದಾಯದ ಸಮಸ್ಯೆ ಮಾತ್ರ ಅಲ್ಲ. ಅದು ನಮ್ಮ ಸಮಾಜದ ಕುರಿತು ಪ್ರಭಾವಿ ಜಾತಿಗಳು ಹೊಂದಿರುವ ಧೋರಣೆಯ ಸಮಸ್ಯೆ. ಆ ಧೋರಣೆಯನ್ನು ಗಟ್ಟಿಗೊಳಿಸುತ್ತಿರುವ ಭಾಷೆ, ನುಡಿಗಟ್ಟು ಮತ್ತು ಸಾಮಾಜಿಕ ಚರಿತ್ರೆಯ ಸಮಸ್ಯೆ’. ಆದ್ದರಿಂದ ಜಾತಿವಿನಾಶದ ಜವಾಬ್ದಾರಿಯ ಹೊರೆಯನ್ನು ದಲಿತರಿಗಿಂತ ಹೆಚ್ಚಾಗಿ ಪ್ರಭಾವಿ ಜಾತಿಯವರು ಹೊರಬೇಕಿದೆ. ಆ ಹಾದಿಯಲ್ಲಿ ಮೊದಲ ಹೆಜ್ಜೆಯಾಗಿ, ಅಪ್ರಜ್ಞಾಪೂರ್ವಕವಾಗಿ ಬಳಸುತ್ತಿರುವ ‘ಜಾತಿಪ್ರಧಾನ ನುಡಿಗಟ್ಟು’, ‘ಜಾತಿಪ್ರಧಾನ ಅಲೋಚನಾ’ ಕ್ರಮದಿಂದ ಪ್ರಜ್ಞಾಪೂರ್ವಕವಾಗಿ ಆಚೆ ಬರಲು ಪ್ರಯತ್ನಿಸಬೇಕಿದೆ.

ರಾಜ್ಯಸಭೆಯಲ್ಲಿ ಖರ್ಗೆಯವರು ಹೇಳಿದ ಪಾಠದ ಸಾರವೂ ಇದೇ ಆಗಿದೆ. ಅವರ ಈ ಪಾಠದ ಹಿಂದಿನ ಕಾಳಜಿಯನ್ನು ಅರ್ಥಮಾಡಿಕೊಳ್ಳುವ ಸೂಕ್ಷ್ಮ ಮನಸ್ಸು ಶಾಸನಸಭೆ ಹಾಗೂ ನಮಗೆ ಇದೆಯೇ ಎನ್ನುವುದು ಪ್ರಶ್ನೆ…

ಲೇಖಕ: ಸಹಾಯಕ ಪ್ರಾಧ್ಯಾಪಕ, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಕಲಬುರಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT