ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಿಧಾನ: ಇನ್ನಷ್ಟು ಅರಿಯೋಣ

ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯ: ಅಂಬೇಡ್ಕರ್‌ ಪರಿಕಲ್ಪನೆ ಹೇಳುವುದೇನು?
Published 9 ಫೆಬ್ರುವರಿ 2024, 20:20 IST
Last Updated 9 ಫೆಬ್ರುವರಿ 2024, 20:20 IST
ಅಕ್ಷರ ಗಾತ್ರ

ಕರ್ನಾಟಕ ಸರ್ಕಾರವು ‘ಸಂವಿಧಾನ ಜಾಗೃತಿ ಜಾಥಾ’ವನ್ನು ನಡೆಸುತ್ತಿದೆ. ಈ ಜಾಥಾದ ವಾಹನವು ಪ್ರತಿ ಗ್ರಾಮದಲ್ಲೂ ಸಂಚರಿಸಿ, ಸಂವಿಧಾನದ ತಿಳಿವನ್ನು ಮೂಡಿಸುವ ಉದ್ದೇಶವನ್ನು ಹೊಂದಿದೆ. ಆಗ ನಡೆಯುವ ಸಭೆಗಳಲ್ಲಿ ಸಂವಿಧಾನದ ಪೀಠಿಕೆಯ ಬಗ್ಗೆ ಮತ್ತು ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯದ ಬಗ್ಗೆ ಅಂಬೇಡ್ಕರ್‌ ಅವರ ಪರಿಕಲ್ಪನೆಗಳ ಕುರಿತಾಗಿ ತಿಳಿವಳಿಕೆ ಮೂಡಿಸಬೇಕೆಂದು ಹೇಳಲಾಗಿದೆ. ಈ ಚೌಕಟ್ಟಿನ ಒಳಗೆ ಎರಡು ಪ್ರಧಾನ ಹಂತಗಳಿವೆ. ಮೊದಲನೆಯದು, ಸಂವಿಧಾನದ ಪ್ರಸ್ತಾವನೆಯ ಕುರಿತಾದ ತಿಳಿವಳಿಕೆ. ಎರಡನೆಯದು, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯದ ಕುರಿತಾಗಿ ಅಂಬೇಡ್ಕರ್‌ ಅವರ ಪರಿಕಲ್ಪನೆಗಳ ಕುರಿತ ತಿಳಿವಳಿಕೆ.

ಸಂವಿಧಾನದ ಪೀಠಿಕೆಯು ‘ಭಾರತದ ಜನರಾದ ನಾವು’ ಎಂದು ಪ್ರಾರಂಭವಾಗುತ್ತದೆ. ದೇಶದ ಅಂತಿಮ ಅಧಿಕಾರವು ಜನರ ಬಳಿಯೇ ಇದೆ ಎಂಬುದು ಇದರ ಅರ್ಥ. ‘ಕಾನ್‌ಸ್ಟಿಟ್ಯೂಟ್ ಇಂಡಿಯಾ’ ಎನ್ನುವ ವಿಚಾರವು ಬಲು ಮಹತ್ವದ್ದು.‌ ಇನ್ನು ಮುಂದೆ ಭಾರತವನ್ನು ನಾವೆಲ್ಲ ಸೇರಿ ಹೀಗೆ ರೂಪಿಸಲಿದ್ದೇವೆ ಎನ್ನುವ ಭಾವವನ್ನು ಇದು ಧ್ವನಿಸುತ್ತದೆ. ಯಾವ ರೂಪದಲ್ಲಿ? ಪರಮಾಧಿಕಾರವಿರುವ, ಸಮಾಜವಾದಿ, ಸೆಕ್ಯುಲರ್, ಪ್ರಜಾಸತ್ತಾತ್ಮಕ ಗಣರಾಜ್ಯ. ಅಂದರೆ, ದೇಶವು ಆಂತರಿಕವಾಗಿ ಮತ್ತು ಬಾಹ್ಯವಾಗಿ ಪರಮಾಧಿಕಾರವನ್ನು ಹೊಂದಿರುವಂತೆ ಮಾಡಬೇಕು. ಅದುವರೆಗೆ ಬ್ರಿಟಿಷರ ದಾಸ್ಯ ಇತ್ತು, ಇನ್ನು ಯಾವ ಅಧೀನತೆಯೂ ಇಲ್ಲ ಎಂಬುದನ್ನು ಇದು ಸೂಚಿಸುತ್ತದೆ.

ಸಮಾಜವಾದಿ, ಅಂದರೆ ಸಂಪತ್ತು ಸಮಾನವಾಗಿ ಹಂಚಿಕೆಯಾಗಿ, ತಾರತಮ್ಯ ಇಲ್ಲದಿರುವಂತಹ ದೇಶವಾಗಿ ಇರಬೇಕಾದದ್ದನ್ನು ಇದು ತಿಳಿಸುತ್ತದೆ. ‘ಸೆಕ್ಯುಲರ್’ ಎಂದರೆ ‘ಲೌಕಿಕ’ ಎಂದು ಅರ್ಥ. ಅಂದರೆ ಭಾರತವು ಒಂದು ಲೌಕಿಕ ರಾಷ್ಟ್ರವಾಗಬೇಕು ಎಂದು ಇದು ಸೂಚಿಸುತ್ತದೆ. ಸೆಕ್ಯುಲರ್ ಎನ್ನುವ ಪರಿಕಲ್ಪನೆಯು ಸ್ಪಷ್ಟ ವ್ಯಾಖ್ಯಾನವನ್ನು ಇಂದಿಗೂ ಪಡೆದಿಲ್ಲ. ಈ ದಿಸೆಯಲ್ಲಿ ಖಚಿತ ವ್ಯಾಖ್ಯಾನ ದೊರಕುವತನಕ ಮತಧರ್ಮಗಳು ಮತ್ತು ಜಾತಿಸಂಬಂಧಿ ವಿಷಯಗಳು ಸಾರ್ವಜನಿಕ ಜೀವನವನ್ನು ಅತಿಯಾಗಿ ಕಾಡದೆ ಇರುವಂತಹ ರಾಷ್ಟ್ರ ಎಂಬರ್ಥದಲ್ಲಿ ಸೆಕ್ಯುಲರ್ ಎಂಬ ಪರಿಕಲ್ಪನೆಯನ್ನು ಸ್ವೀಕರಿಸಬಹುದು ಎನಿಸುತ್ತದೆ.

ಪ್ರಜಾಸತ್ತಾತ್ಮಕ ಎಂದರೆ ಜನರ ಪ್ರಭುತ್ವ ಇರುವ ಎಂತಲೂ, ಗಣರಾಜ್ಯ ಎಂದರೆ ಚುನಾಯಿತ ಮುಖ್ಯಸ್ಥರನ್ನು ಹೊಂದಿದ ಎಂತಲೂ ಅರ್ಥವಿದೆ. ನಂತರದಲ್ಲಿ ‘ಭಾರತದ ಎಲ್ಲ ಪೌರರಿಗೆ ಸಾಮಾಜಿಕ, ರಾಜಕೀಯ, ಆರ್ಥಿಕ ನ್ಯಾಯವನ್ನು ಕೊಡುವಂತಹ’ ಎಂದು ಬರುತ್ತದೆ. ಆ ನಂತರ, ಚಿಂತಿಸುವ, ಚಿಂತಿಸಿದ್ದನ್ನು ಅಭಿವ್ಯಕ್ತಪಡಿಸುವ, ಏನನ್ನು ಬೇಕಾದರೂ ನಂಬುವ, ನಂಬಿದ್ದರ ಬಗ್ಗೆ ವಿಶ್ವಾಸವಿಡುವ, ವಿಶ್ವಾಸವಿಟ್ಟದ್ದನ್ನು ಪ್ರಾರ್ಥಿಸುವ ಸ್ವಾತಂತ್ರ್ಯ ಎಲ್ಲ ಭಾರತೀಯರಿಗೂ ಇರುವ ಹಾಗೆ ರಾಷ್ಟ್ರವನ್ನು ರೂಪಿಸುತ್ತೇವೆ ಎಂದು ಹೇಳಲಾಗಿದೆ.

ಸ್ಥಾನಮಾನದಲ್ಲಿ ಸಮಾನತೆ ಮತ್ತು ಅವಕಾಶವನ್ನು ಪಡೆಯುವುದರಲ್ಲಿ ಸಮಾನತೆ ಇರುವ ರಾಷ್ಟ್ರವಾಗಿ ರೂಪಿಸಬೇಕು ಎಂಬುದು ಮುಂದಿನ ವಿಚಾರವಾಗಿದೆ. ಸ್ಥಾನಮಾನ ಸಮಾನತೆ ಎಂದರೆ ಯಾರೇ ವ್ಯಕ್ತಿ ಯಾವುದೇ ಉದ್ಯೋಗದಲ್ಲಿದ್ದರೂ, ಯಾವುದೇ ಪ್ರದೇಶ, ಸಮುದಾಯ, ಭಾಷೆಯಂತಹ ಭಿನ್ನ ಸ್ಥಿತಿಯಲ್ಲಿದ್ದರೂ ಸಮಾನ ಗೌರವಕ್ಕೆ ಪಾತ್ರನಾಗಬೇಕು ಎಂದು ಅರ್ಥ.‌ ಸಂವಿಧಾನದ ಒಂದನೆಯ ವಿಧಿನಿಯಮದ ಪ್ರಕಾರ ‘ಭಾರತವು ರಾಜ್ಯಗಳ ಒಕ್ಕೂಟವಾಗಿದೆ‌’. ಈ ಒಕ್ಕೂಟ ಅದೇ ರೀತಿಯಲ್ಲಿ ಉಳಿಯಬೇಕಾದರೆ ಒಗ್ಗಟ್ಟು ಇರಬೇಕು ಎಂಬ ಆಶಯವನ್ನು ಇದು ಸೂಚಿಸುತ್ತದೆ.

ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯದ ಕುರಿತಂತೆ ಅಂಬೇಡ್ಕರ್ ಅವರ ಪರಿಕಲ್ಪನೆಗಳನ್ನು ಹೇಳಬೇಕು ಎಂದು ಸರ್ಕಾರದ ಆದೇಶವಿದೆ. ಇದೇ ಪರಿಕಲ್ಪನೆಗಳು ಬೇರೆ ಬೇರೆ ಸೈದ್ಧಾಂತಿಕ ವಿವರಣೆಯಲ್ಲಿ ಸ್ವಲ್ಪ ಭಿನ್ನ ರೂಪವನ್ನು ತಳೆಯುತ್ತವೆ. ಹಾಗಿರುವಾಗ, ಈ ಪರಿಕಲ್ಪನೆಗಳ ಬಗ್ಗೆ ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರಾಗಿದ್ದ ಅಂಬೇಡ್ಕರ್‌ ಅವರು ಯಾವ ಚಿಂತನೆಯನ್ನು ಹೊಂದಿದ್ದರು ಎಂಬುದು ಪ್ರಸ್ತುತವಾಗಿದೆ.

ಸಾಮಾಜಿಕ ನ್ಯಾಯ ಎನ್ನುವುದು ‘ಸಮಾನತೆ’ಯ ತತ್ವಕ್ಕಿಂತ ಹೆಚ್ಚಾಗಿ ‘ಸಮತೆ’ಯ ತತ್ವವನ್ನು ಆಧರಿಸಿದೆ. ಒಬ್ಬ ತಾಯಿಗೆ ನಾಲ್ವರು ಮಕ್ಕಳಿದ್ದು, ಅವುಗಳಲ್ಲಿ ಒಂದು ಮಗು ರಕ್ತಹೀನತೆಯಿಂದ ದುರ್ಬಲವಾಗಿದೆ ಎಂದು ಭಾವಿಸಿ‌. ಆಗ ತಾಯಿ ದುರ್ಬಲ ಮಗುವಿನ ಬಗ್ಗೆ ಜಾಸ್ತಿ ಕಾಳಜಿ ವಹಿಸಬೇಕೋ ಬೇಡವೋ? ಆಗ ಉಳಿದ ಮಕ್ಕಳೆಲ್ಲ, ‘ಅಕೋ ಆ ಮಗುವಿಗೆ ನೀನು ಜಾಸ್ತಿ ಕೊಟ್ಟಿ’ ಎಂದು ಗಲಾಟೆ ಮಾಡಿದರೆ ಹೇಗಾದೀತು? ಈ ನಡವಳಿಕೆಯೇ ಸಮತೆಯ ತತ್ವ.

ಸಾಮಾಜಿಕ ನ್ಯಾಯದ ಸಾಧನೆ ಆಗಬೇಕಾದರೆ ಸರ್ಕಾರ ನಿರ್ಜೀವ ಕಾನೂನು ಜಾರಿ ಪ್ರಾಧಿಕಾರದ ಹಾಗೆ ವರ್ತಿಸಿದರೆ ಆಗುವುದಿಲ್ಲ. ಅದು ಮಾತೃಹೃದಯದಿಂದ ವರ್ತಿಸಬೇಕಾಗುತ್ತದೆ. ದುರ್ಬಲ ವರ್ಗಗಳಿಗೆ ಸ್ವಲ್ಪ ಜಾಸ್ತಿ ಪ್ರಾಮುಖ್ಯವನ್ನು ಕೊಡಬೇಕು. ಅದರ ಜೊತೆಗೇ, ಗಲಾಟೆ ಮಾಡಿದ ಸಮರ್ಥ ಮಕ್ಕಳಿಗೆ, ‘ನಿಮಗೆ ಆ ಮಗುವಿನಷ್ಟು ನನ್ನ ಸಹಾಯದ ಅಗತ್ಯ ಇಲ್ಲ’ ಎಂಬುದನ್ನು ಅರ್ಥ ಮಾಡಿಸುವ ಹಾಗೆ ದುರ್ಬಲರನ್ನು ತಾನು ಜಾಸ್ತಿ ನಿರ್ವಹಿಸಬೇಕಾದ ಅಗತ್ಯವನ್ನು ಸಮರ್ಥ ಪೌರರಿಗೆ ಅರ್ಥ ಮಾಡಿಸಬೇಕಾಗುತ್ತದೆ.

ಇವೆಲ್ಲವೂ ಪರಸ್ಪರ ಸದ್ಭಾವನೆ ಇಲ್ಲದೆ ಆಗುವುದಿಲ್ಲ. ಆದ್ದರಿಂದಲೇ ಅಂಬೇಡ್ಕರ್ ಅವರು ಭ್ರಾತೃತ್ವ ಭಾವದ ಅಗತ್ಯವನ್ನು ವಿವರಿಸಿದ್ದಾರೆ. ಅವರು ಮೂರು ಬಗೆಯ ನ್ಯಾಯದ ಸಮಗ್ರತೆಯನ್ನು ಪ್ರತಿಪಾದಿಸಿದ್ದಾರೆ. ಅವರ ಪ್ರಕಾರ, ನ್ಯಾಯದ ಸಮಗ್ರತೆಯು ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವದ ತತ್ವಗಳನ್ನು ಆಧರಿಸಿದೆ. ಸ್ವಾತಂತ್ರ್ಯವನ್ನು ಸಮಾನತೆಯಿಂದ, ಸಮಾನತೆಯನ್ನು ಭ್ರಾತೃತ್ವದಿಂದ ಪ್ರತ್ಯೇಕಿಸಲು ಆಗುವುದಿಲ್ಲ ಎಂದು ಅಂಬೇಡ್ಕರ್ ಹೇಳುತ್ತಾರೆ. ಅವರು ತನಗಿಂತ ಕೀಳು ಎಂಬ ಭಾವನೆಯನ್ನು ಹೊಂದಿಲ್ಲದೇ ಇರುವುದು ಮತ್ತು ತಾನು ಅವರಿಗಿಂತ ಕೀಳು ಎಂಬ ಭಾವನೆಯನ್ನು ಹೊಂದಿಲ್ಲದೇ ಇರುವುದು ಭಾವನಾತ್ಮಕ ಸಮಾನತೆ. ಭಾವನಾತ್ಮಕ ಸಮಾನತೆ ಇಲ್ಲದೆ ಬೇರೆ ಯಾವ ಸಮಾನತೆಯನ್ನೂ ಸಾಧಿಸಲು ಆಗುವುದಿಲ್ಲ. ‘ದಾಸ್ಯ’ದ ಭಾವನೆ ಇಲ್ಲದಿರುವುದೇ ಸ್ವಾತಂತ್ರ್ಯ. ಅಂದರೆ ಸ್ವಾತಂತ್ರ್ಯವು ಸಮಾನತೆಯ ತತ್ವವನ್ನು ಆಧರಿಸಿದೆ.

ಎಲ್ಲರೂ ನನ್ನವರು ಅಥವಾ ನನ್ನ ಸಹೋದರ, ಸಹೋದರಿ ಸಮಾನರು ಎಂಬ ಭಾವನೆ ಇದ್ದಾಗ ಮಾತ್ರ ಅಸೂಯೆ ಇಲ್ಲದೆ ಸಮಾನತೆಯ ಭಾವನೆಯನ್ನು ಹೊಂದಿರಲು ಸಾಧ್ಯ. ಈ ಭಾವಸ್ಥಿತಿಯೇ ಭ್ರಾತೃತ್ವ. ಅಂದರೆ, ಭ್ರಾತೃತ್ವದ ಪರಿಕಲ್ಪನೆಯು ದ್ವೇಷ ಭಾವನೆ ಮತ್ತು ದ್ವೇಷ ಪ್ರತಿಪಾದನೆಗೆ ವಿರುದ್ಧವಾಗಿದೆ.

ಅಂಬೇಡ್ಕರ್ ಅವರ ಸಾಮಾಜಿಕ ನ್ಯಾಯದ ಪರಿಕಲ್ಪನೆಗೆ ಸಾಕ್ಷಿಯಾಗಿ, ಆಗ ಜಾರಿಗೆ ಬಾರದ, ಆದರೆ ಈಗ ಜಾರಿಗೆ ಬಂದಿರುವ ಅಂಶಗಳನ್ನು ಒಳಗೊಂಡ ‘ಹಿಂದೂ ಕೋಡ್ ಬಿಲ್’ ಅನ್ನು ಹೇಳಬಹುದು. ಅದರಲ್ಲಿ ಮಹಿಳೆಯರಿಗೆ ಸಂಬಂಧಿಸಿದಂತೆ ನಾಲ್ಕು ಅಂಶಗಳಿವೆ: 1. ಪತಿಯನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕು. 2. ವಿಚ್ಛೇದನದ ಹಕ್ಕು. 3. ಆಸ್ತಿಯ ಹಕ್ಕು. 4. ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣುಮಕ್ಕಳು ಮತ್ತು ವಿಧವೆ ಸೊಸೆಗೆ ಹಕ್ಕು ಇದೆ. ಈ ಅಂಶಗಳು, ಪಾರಂಪರಿಕವಾಗಿ ಅವಕಾಶ ವಂಚಿತರಾದವರಿಗೆ ಅವಕಾಶಗಳನ್ನು ಸೃಷ್ಟಿಸುವ ಪರಿಕಲ್ಪನೆಯ ಬಗ್ಗೆ ಹೇಳುತ್ತವೆ.

ಜಾತಿ ಆಧಾರಿತ ಮೀಸಲಾತಿಗೆ ಸಂಬಂಧಿಸಿದಂತೆ, ಅವಕಾಶವಂಚಿತ ವರ್ಗಗಳಿಗೆ ಅವಕಾಶದ ಸೃಷ್ಟಿಯ ಪರಿಕಲ್ಪನೆ ಇದೆ. ಅಂಬೇಡ್ಕರ್ ಅವರ ಪ್ರಕಾರ, ಸಾಮಾಜಿಕ ಸ್ವಾತಂತ್ರ್ಯವು ಜಾತಿಯನ್ನು ಮೀರಿ ನಿಲ್ಲುವ ಮನೋಭಾವವನ್ನು ಅವಲಂಬಿಸಿದೆ. ಜಾತಿ ಎನ್ನುವುದು ಭಾರತದ ಸಾಮಾಜಿಕ ವಾಸ್ತವ. ಅದು ಅದರದೇ ಆದ ಸಾಂಸ್ಕೃತಿಕ ಪರಿಸರವನ್ನು ನಿರ್ಮಿಸುತ್ತದೆ. ಅದು ಕೆಲವರಿಗೆ ವಿಕಾಸಕ್ಕೆ ಅನುಕೂಲಕರವಾಗಿಯೂ ಇನ್ನು ಕೆಲವರಿಗೆ ಪ್ರತಿಕೂಲಕರವಾಗಿಯೂ ಬಂದಿರುತ್ತದೆ. ಆದ್ದರಿಂದ ತನ್ನ ಜಾತಿಯಿಂದಾಗಿಯೇ ತಾನು ಸರ್ವ ಸಮರ್ಥ ಎಂಬ ಭಾವನೆಯನ್ನೂ, ತನ್ನ ಜಾತಿಯಿಂದಾಗಿ ತಾನು ಯಾವುದಕ್ಕೂ ಸಮರ್ಥನಲ್ಲ ಎಂಬ ಭಾವನೆಯನ್ನೂ ತೊರೆದಾಗ ಜಾತಿಯನ್ನು ಮೀರಿ ನಿಲ್ಲಲು ಆಗುತ್ತದೆ. ಆಗ ಅಲ್ಲಿ ಸಾಮಾಜಿಕ ನ್ಯಾಯಕ್ಕೆ ಪೂರಕವಾದ ಸ್ಥಿತಿ ನಿರ್ಮಾಣವಾಗುತ್ತದೆ.

ಅಂಬೇಡ್ಕರ್ ಅವರ ಆರ್ಥಿಕ ನ್ಯಾಯದ ಪರಿಕಲ್ಪನೆಯು ಕೈಗಾರಿಕೀಕರಣಕ್ಕೆ ಒತ್ತು ಕೊಟ್ಟ ಸಮಾಜವಾದಿ ಆಶಯವಾಗಿತ್ತು. ಕೃಷಿಯು ಸಾಮೂಹಿಕ ಒಡೆತನದಲ್ಲಿರಬೇಕು ಎಂದು ಪ್ರತಿಪಾದಿಸಿದ್ದ ಅಂಬೇಡ್ಕರ್, ಕೃಷಿ ಮತ್ತು ಕೈಗಾರಿಕೆಗಳ ರಾಷ್ಟ್ರೀಕರಣ ಆಗಬೇಕು ಎಂದಿದ್ದರು. ಆದರೆ ಅದನ್ನು ಮಾಡಲು ಆಗಲಿಲ್ಲ. ಮಿಶ್ರ ಆರ್ಥಿಕ ನೀತಿ ಜಾರಿಗೆ ಬಂದಿತು. ನಮ್ಮಲ್ಲಿ ಸಹಕಾರಿ ಬೇಸಾಯ ಪದ್ಧತಿಯು ಪಂಜಾಬ್‌ನಂತಹ ಕೆಲವು ರಾಜ್ಯಗಳಲ್ಲಿ ಯಶಸ್ವಿಯಾಗಿದೆ. ಈ ಪದ್ಧತಿಯು ಅಂಬೇಡ್ಕರ್ ಅವರ ಆಶಯವನ್ನು ಹೋಲುತ್ತದೆ.

ಸಾಮಾಜಿಕ ಮತ್ತು ಆರ್ಥಿಕ ನ್ಯಾಯವನ್ನು ಪಡೆಯಲು ರಾಜಕೀಯ ನ್ಯಾಯವೂ, ಸಾಮಾಜಿಕ ಮತ್ತು ಆರ್ಥಿಕ ನ್ಯಾಯದ ಮೂಲಕ ರಾಜಕೀಯ ನ್ಯಾಯವೂ ಪರಸ್ಪರ ಪೂರಕವಾಗಿವೆ. ದುರ್ಬಲ ಸಮುದಾಯಗಳಿಗೂ ರಾಜಕೀಯ ಪ್ರತಿನಿಧಿತ್ವ ಸಿಗಬೇಕು ಎನ್ನುವುದು ಇಲ್ಲಿನ ಆಶಯವಾಗಿದ್ದು, ಪಂಚಾಯತ್‌ರಾಜ್ ವ್ಯವಸ್ಥೆಯಲ್ಲಿ ಅದನ್ನು ಈಗಾಗಲೇ ಜಾರಿಗೊಳಿಸಲಾಗಿದೆ. ಗಾಂಧೀಜಿ ಮತ್ತು ಅಂಬೇಡ್ಕರ್ ಅವರ ನಡುವೆ ನಡೆದ ‘ಪೂನಾ ಒಪ್ಪಂದ’ದಂತೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಶಾಸನಸಭೆಗಳಿಗಾಗಿ ಮೀಸಲು ಕ್ಷೇತ್ರಗಳನ್ನು ಒದಗಿಸುವುದನ್ನು ಸಂವಿಧಾನವು ಅಳವಡಿಸಿಕೊಂಡಿದೆ. ಆ ಮೂಲಕ ಶಾಸನಸಭೆಗಳಲ್ಲೂ ರಾಜಕೀಯ ನ್ಯಾಯದ ಪರಿಕಲ್ಪನೆಯನ್ನು ಜಾರಿಗೊಳಿಸಲಾಗಿದೆ.

ಅಂಬೇಡ್ಕರ್‌ ಅವರ ಒಟ್ಟೂ ಚಿಂತನೆಗಳ ಆಶಯವನ್ನು ಅವರು ಪ್ರಕಟಿಸಿದ ನಾಲ್ಕು ಪತ್ರಿಕೆಗಳ ಹೆಸರುಗಳು ಸೂಚಿಸುವ ಭಾವಗಳ ಮೂಲಕ ಅರ್ಥ ಮಾಡಿಕೊಳ್ಳಬಹುದು. ಮೊದಲು ‘ಮೂಕನಾಯಕ’. ಮಾತೇ ಹೊರಡದ ಸ್ಥಿತಿಯ ಭಾವ. ನಂತರ ‘ಬಹಿಷ್ಕೃತ ಭಾರತ’. ಪ್ರತಿರೋಧದ ತೀಕ್ಷ್ಣತೆಯ ಭಾವ. ಆ ನಂತರ ‘ಜನತಾ’. ಎಲ್ಲರನ್ನೂ ಒಳಗೊಳಿಸಿಕೊಂಡ ಭಾವ. ಕೊನೆಯದು ‘ಪ್ರಬುದ್ಧ ಭಾರತ’. ಅದು ಸಂವಿಧಾನದ ಆಶಯವೂ ಹೌದು. ಆದರೆ ಸಂವಿಧಾನದ ಆಶಯಗಳು ಅಂತಿಮಗೊಂಡಿವೆ ಎಂದು ಭಾವಿಸುವುದಕ್ಕಿಂತ ಭಾರತದ ಜನರಾದ ನಾವು ಆ ಆಶಯಗಳನ್ನು ಸಾಧಿಸಬೇಕಾಗಿದೆ ಎಂಬ ಬದ್ಧತೆಯ ತಿಳಿವಳಿಕೆಯು ಇಂದಿನ ಅಗತ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT