ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್.ಆರ್.ಕೃಷ್ಣಮೂರ್ತಿ ಲೇಖನ: ವಿಪತ್ತು ನಿರ್ವಹಣೆ; ಅನುಕರಣೀಯ ಮಾದರಿ

‘ಜಾಗತಿಕ ಯಶೋಗಾಥೆ’ಯ ನಿದರ್ಶನ ಎನಿಸಿಕೊಂಡಿದೆ ಒಡಿಶಾ ಸರ್ಕಾರದ ಕಾರ್ಯತಂತ್ರ
Last Updated 24 ಅಕ್ಟೋಬರ್ 2021, 19:23 IST
ಅಕ್ಷರ ಗಾತ್ರ

ಕೇರಳದಲ್ಲಿ ಈಚೆಗೆ ಭಾರಿ ಪ್ರಮಾಣದ ಮಳೆ, ಪ್ರವಾಹ, ಭೂಕುಸಿತಗಳು ಸಂಭವಿಸುತ್ತಿದ್ದಾಗ ವಾಟ್ಸ್ಆ್ಯಪ್‌ನಲ್ಲಿ ಚಿತ್ರಸಹಿತವಾದ ಸಂದೇಶವೊಂದು ಹರಿದಾಡು ತ್ತಿತ್ತು. ಕೇರಳದಲ್ಲಿನ ನೈಸರ್ಗಿಕ ವಿಪತ್ತುಗಳನ್ನು ನಿರ್ವ ಹಿಸಲು, ಅಧಿಕಾರಿ ಮತ್ತು ರಾಜಕಾರಣಿಗಳ ದೊಡ್ಡ ನಿಯೋಗವೊಂದು 2017ರಲ್ಲಿ ನೆದರ್‌ಲೆಂಡ್ಸ್‌ಗೆ ಹೊರಡುವ ಮುನ್ನ ವಿಮಾನ ನಿಲ್ದಾಣದಲ್ಲಿ ತೆಗೆದ ಚಿತ್ರದ ಕೆಳಗೆ ‘ಕಳೆದ ನಾಲ್ಕು ವರ್ಷಗಳಲ್ಲಿ, ನೀವು ನೆದರ್‌ಲೆಂಡ್ಸ್‌ನಲ್ಲಿ ಕಲಿತ ವಿಷಯವನ್ನು ಎಲ್ಲಿ ಬಳಸಿದ್ದೀರಿ?’ ಎಂಬ ಕುಟುಕು ಇತ್ತು!

ಸ್ಥಳೀಯ ಸಮಸ್ಯೆಗಳ ನಿರ್ವಹಣೆ ಮತ್ತು ಪರಿಹಾರಕ್ಕೆ ವಿದೇಶಗಳ ಅನುಭವ ಹಾಗೂ ಕೌಶಲಗಳ ಮೂಲಕ ಉತ್ತರವನ್ನು ಕಂಡುಕೊಳ್ಳುವ ನೆಪದಲ್ಲಿ ನಡೆಯುವ ಸರ್ಕಾರಿ ವೆಚ್ಚದ ಪ್ರವಾಸ ನಮಗೆ ಹೊಸದೇನಲ್ಲ. ಈ ಪರಿಸ್ಥಿತಿಗೆ ಒಂದು ಅಪವಾದವೆಂದರೆ ಒಡಿಶಾ ರಾಜ್ಯ. ಈ ರಾಜ್ಯದ ‘ವಿಪತ್ತು ನಿರ್ವಹಣಾ ಸಿದ್ಧತೆ ಮತ್ತು ಕಾರ್ಯಾಚರಣೆ’ ಇಡೀ ಜಗತ್ತಿನ ಗಮನ ಸೆಳೆದಿದೆ. ವಿಶ್ವಬ್ಯಾಂಕ್ ಈ ಮಾದರಿಯನ್ನು ಎಲ್ಲ ದೇಶಗಳಿಗೆ ಶಿಫಾರಸು ಮಾಡಿದೆ. ಒಡಿಶಾದ ಎರಡು ಹಳ್ಳಿಗಳಿಗೆ ಉತ್ಕೃಷ್ಟ ಮಟ್ಟದ ‘ಸುನಾಮಿ ಸಿದ್ಧತೆ’ಗಾಗಿ ಯುನೆಸ್ಕೊ ಪ್ರಶಸ್ತಿ ನೀಡಿ ಗೌರವಿಸಿದೆ. 2013ರ ಫೈಲಾನ್ ಚಂಡಮಾರುತ ತಂದ ವಿಪತ್ತುಗಳನ್ನು ಒಡಿಶಾ ಸರ್ಕಾರ ನಿರ್ವಹಿಸಿದ ರೀತಿಯನ್ನು, ‘ಜಾಗತಿಕ ಯಶೋಗಾಥೆ’ಯ ನಿದರ್ಶನವೆಂದು ವಿಶ್ವಸಂಸ್ಥೆ ಮೆಚ್ಚಿ, ಒಡಿಶಾ ಮಾದರಿ ಯನ್ನು ಜಾಗತಿಕವಾಗಿ ಅನುಕರಣಯೋಗ್ಯವೆಂದು ಸಾರಿದೆ.

ಒಡಿಶಾ, ಮತ್ತೆ ಮತ್ತೆ ಚಂಡಮಾರುತದಿಂದ ಅಪಾಯಕ್ಕೀಡಾಗುವ ರಾಜ್ಯ. 1891- 2021ರ ಅವಧಿಯ 130 ವರ್ಷಗಳಲ್ಲಿ 100 ಚಂಡಮಾರುತಗಳು ಒಡಿಶಾ ತೀರವನ್ನು ಅಪ್ಪಳಿಸಿ ಆಸ್ತಿ, ಪ್ರಾಣಹಾನಿಗಳಿಗೆ ಕಾರಣವಾಗಿವೆ. ಸರಾಸರಿ ಪ್ರತೀ ನಾಲ್ಕು ವರ್ಷಗಳಿಗೊಮ್ಮೆ ಬಂದಿರುವ ಮಹಾ ಚಂಡಮಾರುತ (ಸೂಪರ್ ಸೈಕ್ಲೋನ್) ಅಪಾರ ಪ್ರಮಾಣದ ನಾಶವುಂಟುಮಾಡಿದೆ. ಹಿಂದೂ ಮಹಾಸಾಗರದ ಉತ್ತರಭಾಗದಲ್ಲಿ, 20ನೆಯ ಶತಮಾನದ ಅತ್ಯಂತ ಭೀಕರ ಮಹಾಚಂಡಮಾರುತವೆಂದು ದಾಖಲಾಗಿರುವ ‘ಬಿಒಬಿ-06’ ಎಂಬ ಹೆಸರಿನ ಮಹಾಚಂಡಮಾರುತವು 1999ರ ಅಕ್ಟೋಬರ್ 29 ರಂದು ಒಡಿಶಾ ಕರಾವಳಿಯನ್ನು ಅಪ್ಪಳಿಸಿದಾಗ ಸತ್ತವರ ಸಂಖ್ಯೆ ಸುಮಾರು 10,000. ಈ ಘಟನೆಯ ನಂತರ 2000ದ ಮಾರ್ಚ್‌ನಲ್ಲಿ ಒಡಿಶಾ ರಾಜ್ಯದ ಮುಖ್ಯಮಂತ್ರಿಯಾಗಿ ನವೀನ್ ಪಟ್ನಾಯಕ್ ಅಧಿಕಾರ ವಹಿಸಿಕೊಂಡರು. ‘ಬಂಗಾಳ ಕೊಲ್ಲಿಯ ಕರಾವಳಿಯಲ್ಲಿರುವುದರಿಂದ ಚಂಡ ಮಾರುತಗಳಿಂದ ನಾವು ತಪ್ಪಿಸಿಕೊಳ್ಳುವುದು ಸಾಧ್ಯವೇ ಇಲ್ಲ. ನಮಗಿರುವ ಏಕೈಕ ಮಾರ್ಗವೆಂದರೆ ಅವುಗಳನ್ನು ಎದುರಿಸಲು ಸದಾಕಾಲ ಸಿದ್ಧವಾಗಿರುವುದು’ ಎಂಬ ಅವರ ಪ್ರಾಮಾಣಿಕ ಸಂದೇಶ, ಎರಡು ದಶಕಗಳಿಂದ ರಾಜ್ಯದ ಎಲ್ಲ ವಿಪತ್ತು ನಿರ್ವಹಣಾ ಯೋಜನೆಗಳಿಗೆಪ್ರೇರಕಶಕ್ತಿಯಾಗಿದೆ.

ಎಲ್ಲ ರೀತಿಯ ನೈಸರ್ಗಿಕ ಅವಘಡಗಳ ಪರಿಣಾಮಕ್ಕೆ ನೇರವಾಗಿ ಮೊದಲು ಈಡಾಗುವವರು ಸ್ಥಳೀಯ ಸಮುದಾಯದ ಜನ. ಈ ಸಮುದಾಯ ಸನ್ನದ್ಧವಾಗದ ಹೊರತು ರಕ್ಷಣಾ ಮತ್ತು ಪರಿಹಾರ ಕಾರ್ಯಗಳು ಯಶಸ್ವಿಯಾಗುವುದಿಲ್ಲ. ಒಡಿಶಾ ಸರ್ಕಾರದ ಎಲ್ಲ ವಿಪತ್ತು ನಿರ್ವಹಣಾ ಕಾರ್ಯತಂತ್ರಗಳ ಮೂಲ ಮಂತ್ರವೆಂದರೆ ‘ವಿಕೇಂದ್ರೀಕರಣ, ಸ್ಥಳೀಯ ಸಮುದಾಯಗಳ ಭಾಗವಹಿಸುವಿಕೆ ಮತ್ತು ಅವರ ಸಾಮರ್ಥ್ಯ ವರ್ಧನೆ’.

ಒಡಿಶಾ ಮಾದರಿಯಲ್ಲಿ ಮುಖ್ಯವಾಗಿ ಎರಡುಭಾಗಗಳಿವೆ. ಮೊದಲನೆಯದು, ಚಂಡಮಾರುತದ ಪರಿಣಾಮಗಳನ್ನು ಎದುರಿಸಲು ಬೇಕಾದ ಆಧಾರ ರಚನೆಗಳು, ಸೌಕರ್ಯಗಳು ಮುಂತಾದವುಗಳ ನಿರ್ಮಾಣ. ಎರಡನೆಯದು, ಸ್ಥಳೀಯ ಸಮುದಾಯಗಳ ಕೌಶಲ ಮತ್ತು ಸಾಮರ್ಥ್ಯವರ್ಧನೆ. ಕಳೆದ 20 ವರ್ಷಗಳ ಅವಧಿಯಲ್ಲಿ, ಒಡಿಶಾ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ನಿಗಾವಣೆಯಲ್ಲಿ ಈ ಎರಡೂ ಕೆಲಸಗಳು ವ್ಯವಸ್ಥಿತವಾಗಿ ನಡೆದುಬಂದಿವೆ.

ಒಡಿಶಾಗೆ ಸುಮಾರು 450 ಕಿ.ಮೀ.ಗಳ ಉದ್ದದ ಕರಾವಳಿಯಿದೆ. ಬಾಲೇಶ್ವರ್, ಭದ್ರಕ್, ಗಂಜಾಂ, ಜಗತ್‍ಸಿಂಗ್‍ಪುರ್, ಕೇಂದ್ರಪಾರ, ಖೋರ್ಧಾ ಮತ್ತು ಪುರಿ ಕರಾವಳಿಯ ಜಿಲ್ಲೆಗಳು. 1999ರಲ್ಲಿ ಚಂಡಮಾರುತದಿಂದ ರಕ್ಷಣೆ ಪಡೆಯಲು ಈ ಜಿಲ್ಲೆಗಳಲ್ಲಿ ಇದ್ದ ‘ಚಂಡಮಾರುತ ಆಶ್ರಯ ತಾಣ’ಗಳ ಸಂಖ್ಯೆ 6. ಇಂದು ಸುಮಾರು 900 ವಿವಿಧೋದ್ದೇಶ ಚಂಡಮಾರುತ ಆಶ್ರಯ ತಾಣಗಳ ಜಾಲವಿದೆ. ಕಾಂಕ್ರೀಟ್‍ನಿಂದ ನಿರ್ಮಾಣ ಗೊಂಡಿರುವ ಪ್ರತೀ ಆಶ್ರಯ ತಾಣವೂ 1000 ಜನರಿಗೆ ಆಶ್ರಯವೊದಗಿಸುತ್ತದೆ. ಸಾಗರದಂಚಿನಿಂದ 1.5 ಕಿ.ಮೀ. ದೂರದಲ್ಲಿ, ಜನವಸತಿಯ ಮಧ್ಯದಲ್ಲೇ 122 ಜಾಗಗಳಲ್ಲಿ ಕಾವಲುಗೋಪುರಗಳನ್ನು ನಿರ್ಮಿಸಲಾಗಿದೆ. ಈ ಗೋಪುರಗಳಲ್ಲಿ ಅತ್ಯಂತ ವಿಶ್ವಾಸಾರ್ಹವಾದ ಕ್ಷಿಪ್ರ ಗತಿಯ ಮುನ್ಸೂಚನೆ ನೀಡಲು ಬೇಕಾದ ವ್ಯವಸ್ಥೆಗಳಿವೆ. ಸೈರನ್‍ಗಳ ಜೊತೆಗೆ ಸಾವಿರಾರು ಜನರಿಗೆ ಮೊಬೈಲ್ ಮೂಲಕ ಸಂದೇಶಗಳನ್ನು ಕಳುಹಿಸುವ ವ್ಯವಸ್ಥೆಯಿದೆ.

ಚಂಡಮಾರುತವನ್ನು ಎದುರಿಸಿ ಅದರ ಪರಿಣಾಮಗಳ ತೀಕ್ಷ್ಣತೆಯನ್ನು ತಗ್ಗಿಸುವ ಜವಾಬ್ದಾರಿಯನ್ನು, ತ್ವರಿತ ಕಾರ್ಯಾಚರಣೆಯ ಬಲದ (ಒಡಿಶಾ ಡಿಸಾಸ್ಟರ್ ರ‍್ಯಾಪಿಡ್ ಆ್ಯಕ್ಷನ್ ಫೋರ್ಸ್) ಘಟಕಗಳು ನಿರ್ವಹಿಸುತ್ತವೆ. ಇಂತಹ 22 ಘಟಕಗಳಿದ್ದು ಪ್ರತೀ ಘಟಕವೂ ರಕ್ಷಣೆ ಮತ್ತು ಪರಿಹಾರ ಕಾರ್ಯಗಳಿಗೆ ಬೇಕಾದ 64 ವಿವಿಧ ರೀತಿಯ ಯಂತ್ರೋಪಕರಣ ಗಳಿಂದ ಸಜ್ಜಿತವಾಗಿದೆ. ಈ ಘಟಕಗಳ ಜೊತೆಗೆ ಅಗ್ನಿಶಾಮಕ, ಸಾರ್ವಜನಿಕ ಕಾಮಗಾರಿ, ವಿದ್ಯುತ್ ಸರಬರಾಜು ಮುಂತಾದ ಇಲಾಖೆಗಳ ಸಿಬ್ಬಂದಿಯು ಹವಾಮಾನ ಇಲಾಖೆಯ ಮುನ್ಸೂಚನೆಯನ್ನು ಆಧರಿಸಿ, ಚಂಡಮಾರುತವು ಸಾಗರ ತೀರಕ್ಕೆ ಅಪ್ಪಳಿಸುವ ಮುಂಚೆಯೇ ಆಯಾ ಪ್ರದೇಶಗಳಲ್ಲಿ ಸಿದ್ಧವಾಗಿರುವುದು ಒಡಿಶಾ ವಿಪತ್ತು ನಿರ್ವಹಣಾ ಮಾದರಿಯ ವಿಶೇಷ.

ಚಂಡಮಾರುತವನ್ನು ಎದುರಿಸುವಲ್ಲಿ ಆಶ್ರಯ ತಾಣಗಳ ಪಾತ್ರ ಬಹುಮುಖ್ಯ. ಸಮುದಾಯದ ನಿಜವಾದ ಸಾಮರ್ಥ್ಯ ಗೋಚರಿಸುವುದು ಈ ಆಶ್ರಯ ಕೇಂದ್ರಗಳಲ್ಲಿ. ಪ್ರತೀ ಆಶ್ರಯ ತಾಣಕ್ಕೂ ಒಂದು ನಿರ್ವಹಣಾ ಸಮಿತಿ ಇದ್ದು, ಅದರಲ್ಲಿ ಸ್ಥಳೀಯ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ರಕ್ಷಣೆ, ಪರಿಹಾರ ಕಾರ್ಯ, ಪ್ರಥಮ ಚಿಕಿತ್ಸೆ, ಸಂಪರ್ಕ ಸಾಧನಗಳ ಬಳಕೆ, ಎಚ್ಚರಿಕೆಯ ಪ್ರಸಾರ, ಆಹಾರ, ಔಷಧ ಸಾಮಗ್ರಿಗಳ ಸಂಗ್ರಹ, ಸಮು ದಾಯ ಪಾಕಶಾಲೆಯ ನಿರ್ವಹಣೆ ಮುಂತಾದ ವಿವಿಧ ಕೆಲಸಗಳಲ್ಲಿ ಸಮುದಾಯದ ಸದಸ್ಯರಿಗೆ ತರಬೇತಿ ನೀಡ ಲಾಗಿದೆ. ತ್ವರಿತ ಕಾರ್ಯಪಡೆ, ವಿಪತ್ತು ನಿರ್ವಹಣಾ ತಂಡ ಗಳು ಬರುವವರೆಗೂ ಎಲ್ಲ ತುರ್ತು ಪರಿಸ್ಥಿತಿಯನ್ನೂ ನಿಭಾ ಯಿಸುವ ನಿರ್ವಹಣಾ ಸಮಿತಿ ಆನಂತರ ಅವರ ಎಲ್ಲ ಕೆಲಸಗಳಿಗೆ ಸಹಾಯ ನೀಡುತ್ತದೆ. ಚಂಡಮಾರುತದ ಋತು ಮುಗಿದ ನಂತರ ಈ ಆಶ್ರಯ ತಾಣಗಳನ್ನು ಶಾಲೆಗಳೂ ಸೇರಿದಂತೆ ಸಮುದಾಯದ ತರಬೇತಿ ಹಾಗೂ ಇನ್ನಿತರ ಚಟುವಟಿಕೆಗಳಿಗೆ ಬಳಸಲಾಗುತ್ತದೆ.

ಕಳೆದ 21 ವರ್ಷಗಳ ಅವಧಿಯಲ್ಲಿ ನಡೆದಿರುವ ಈ ಕೆಲಸಗಳು ಉತ್ತಮ ಫಲಿತಾಂಶ ನೀಡಿವೆ. ‘ಪ್ರತೀ ಪ್ರಾಣವೂ ಅಮೂಲ್ಯ. ಹೀಗಾಗಿ ಪ್ರಾಣಹಾನಿಯನ್ನೂ ಶೂನ್ಯಕ್ಕಿಳಿಸಬೇಕು’ ಎಂಬ ಮುಖ್ಯಮಂತ್ರಿಯ ನಿರ್ದೇಶನಕ್ಕೆ ಅನುಸಾರವಾಗಿ ನಡೆದಿರುವ ಕೆಲಸಗಳಿಂದ ಪ್ರಾಣಹಾನಿ ಬಹಳ ಕಡಿಮೆಯಾಗಿದೆ. 1999ರ ಮಹಾಚಂಡಮಾರುತ ದಲ್ಲಿ ಸತ್ತವರ ಸಂಖ್ಯೆ 10,000. ಒಡಿಶಾದಲ್ಲಿ 2021ರ ಮೇ ತಿಂಗಳ ಯಾಸ್ ಚಂಡಮಾರುತದಲ್ಲಿ ಸತ್ತವರ ಸಂಖ್ಯೆ ಕೇವಲ ಮೂರು. ಈ ಚಂಡಮಾರುತದಿಂದ ಅಸ್ತವ್ಯಸ್ಥವಾದ ಇಡೀ ಬಾಲಾಸೋರ್ ಜಿಲ್ಲೆಯ ವಿದ್ಯುತ್ ವ್ಯವಸ್ಥೆಯನ್ನು ಸರಿಪಡಿಸಲು ಹಿಡಿದ ಸಮಯ ಕೇವಲ ಎಂಟು ಗಂಟೆಗಳು. ಮೇ 23ರಂದು ಯಾಸ್ ಚಂಡಮಾರುತದ ನಿಖರ ಮುನ್ಸೂಚನೆ ದೊರೆತ ಎರಡೇ ದಿನಗಳಲ್ಲಿ ತಗ್ಗು ಪ್ರದೇಶಗಳಿಂದ 7.10 ಲಕ್ಷ ಜನರನ್ನು ಸ್ಥಳಾಂತರಿಸಲಾಯಿತು. ಪ್ರಸವದಿನ ಹತ್ತಿರವಿದ್ದ 2,500 ಗರ್ಭಿಣಿಯರನ್ನು ತ್ವರಿತಗತಿಯಲ್ಲಿ ಪತ್ತೆ ಮಾಡಿ ಸುರಕ್ಷಿತವಾದ ಆಸ್ಪತ್ರೆಗಳಿಗೆ ಸೇರಿಸಲಾಯಿತು. ಈ ಮುಂದಾಲೋಚನೆಯ ಕ್ರಮಕ್ಕೆ ಪ್ರಶಂಸೆಗಳ ಮಹಾಪೂರವೇ ಹರಿದುಬಂತು. 2020ರ ಆಗಸ್ಟ್‌ನಲ್ಲಿ, 12 ವಿವಿಧ ಅಂಶಗಳ ಆಧಾರದ ಮೇಲೆ ಸುನಾಮಿಯ ಸಿದ್ಧತೆಯನ್ನು ಪರಿಶೀಲಿಸಿದ ಯುನೆಸ್ಕೊ ಮತ್ತು ಇಂಟರ್ ಗವರ್ನಮೆಂಟಲ್ ಓಶನೋ ಗ್ರಫಿಕ್ ಕಮಿಷನ್ ತಂಡದ ಪರಿಣತರು, ಗಂಜಾಂ ಜಿಲ್ಲೆಯ ವೆಂಕಟ್ರೈಪುರ ಮತ್ತು ಜಗತ್‍ಸಿಂಗ್‍ಪುರಿ ಜಿಲ್ಲೆಯ ನೋಲಿಯಾಸಾಹಿ ಹಳ್ಳಿಗಳನ್ನು ಸುನಾಮಿ ಸಿದ್ಧ ಹಳ್ಳಿಗಳೆಂದು ಘೋಷಿಸಿ ಗೌರವಿಸಿದ್ದಾರೆ.

ಸರ್ಕಾರದ ವಿವಿಧ ಇಲಾಖೆಗಳ ನಡುವಿನ ಅಪರೂಪ ವಾದ ಸಹಕಾರ, ಸಂಯೋಜನೆಗಳು, ವಿಕೇಂದ್ರೀಕೃತ ಕಾರ್ಯಾಚರಣೆ, ಸ್ಥಳೀಯ ಸಮುದಾಯಗಳ ಸಕ್ರಿಯ ಸಹಭಾಗಿತ್ವ, ಒಡಿಶಾ ಮಾದರಿಯ ವಿಪತ್ತು ನಿರ್ವಹಣಾ ಸಿದ್ಧತೆಯನ್ನು ವಿಶಿಷ್ಟ, ಅನುಕರಣೀಯ ಮಾದರಿಯನ್ನಾಗಿ ಮಾಡಿರುವುದರಲ್ಲಿ ಆಶ್ಚರ್ಯವೇನಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT