ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಜನತಂತ್ರದ ಜಾತ್ರೆಯಲ್ಲಿ ಕಾಣೆಯಾದ ಪ್ರಜೆ!

ನೀರಿಗಾಗಿ ಜನ ಪಡುತ್ತಿರುವ ಬವಣೆಯು ಚುನಾವಣಾ ಚರ್ಚೆಯ ಸಂಗತಿಯಾಗಬೇಕಲ್ಲವೇ?
Published 8 ಏಪ್ರಿಲ್ 2024, 23:30 IST
Last Updated 8 ಏಪ್ರಿಲ್ 2024, 23:30 IST
ಅಕ್ಷರ ಗಾತ್ರ

ಉತ್ತರ ಕನ್ನಡ ಜಿಲ್ಲೆಯ ಸಹ್ಯಾದ್ರಿ ಸೆರಗಿನ ಮುಂಡಗೋಡು ಸೀಮೆಯಲ್ಲಿ ಇತ್ತೀಚೆಗೆ ವ್ಯಾಪಕವಾಗಿ ತಿರುಗಾಡುವ ಸಂದರ್ಭ ಬಂತು. ಸುದ್ದಿ ಹಾಗೂ ಸಾಮಾಜಿಕ ಮಾಧ್ಯಮಗಳಿಂದಾಗಿ ನಾಡೆಲ್ಲ ಈಗ ಚುನಾವಣಾ ಜ್ವರದಲ್ಲಿ ಮುಳುಗಿರುವಂತೆ ತೋರುವುದಾದರೂ, ಆ ಭ್ರಮೆಯ ತೆರೆ ಸರಿಸಿ ನೋಡಿದರೆ, ಅಲ್ಲಿ ಕಂಡ ಬದುಕಿನ ಬಿಸಿಯೇ ಬೇರೆ!

ಪ್ರತಿ ಮನೆಗೂ ದಿನವೂ ಕನಿಷ್ಠ 55 ಲೀಟರ್‌ ನೀರು ಒದಗಿಸುವ ಉದ್ದೇಶದೊಂದಿಗೆ ‘ಜಲಜೀವನ ಮಿಷನ್’ ಯೋಜನೆಯಡಿ ಜೋಡಿಸಿರುವ ಬಹುಪಾಲು ಕೊಳವೆಮಾರ್ಗಗಳಲ್ಲಿ ನೀರು ಬರುತ್ತಿಲ್ಲ. ನೂರಾರು ಕೋಟಿ ಹಣ ವೆಚ್ಚ ಮಾಡಿ ಕೈಗೊಂಡ ‘ಕೆರೆ ತುಂಬಿಸುವ ಯೋಜನೆ’ಗಳಿಂದ ಒಂದು ಕೆರೆಗೂ ನೀರು ಹರಿದಿಲ್ಲ. ಹೊಳೆ-ತೊರೆ, ಕೆರೆಗಳೆಲ್ಲ ಬೇಸಿಗೆಯ ಮುನ್ನವೇ ಬತ್ತಿವೆ. ಎಗ್ಗಿಲ್ಲದೆ ತೋಡಿರುವ ಬಹುಪಾಲು ಕೊಳವೆಬಾವಿಗಳಲ್ಲಿ ರಾಡಿಮಣ್ಣು ಬರತೊಡಗಿದೆ.

ಜಲಮೂಲಗಳೇ ಇಲ್ಲದ ಮೇಲೆ ನೀರು ತರುವುದಾದರೂ ಎಲ್ಲಿಂದ? ಮೇಲ್ಮಣ್ಣಿನಲ್ಲಿ ಕನಿಷ್ಠ ತೇವಾಂಶವೂ ಇಲ್ಲದೆ, ಹಣ್ಣು, ತರಕಾರಿ ತೋಟಗಾರಿಕೆ ಬೆಳೆಗಳೆಲ್ಲ ಒಣಗಿ ಕೆಂಪಾಗುತ್ತಿವೆ. ಹೊಲ, ಗೋಮಾಳಗಳ ನೀರು, ಮೇವೆಲ್ಲ ಬರಿದಾಗಿ, ಜಾನುವಾರುಗಳನ್ನು ಕೊಟ್ಟಿಗೆಯಲ್ಲೇ ಕಷ್ಟಪಟ್ಟು ಸಲಹಬೇಕಿದೆ. ನೀರಿನ ಬರ ಹಾಗೂ ಬಿಸಿಗಾಳಿಯ ತಾಪಕ್ಕೆ ಜನಜೀವನ ಸೋತು ಸುಕ್ಕಾಗುತ್ತಿದೆ. ನಾಡಿನ ಬಹುತೇಕ ಗ್ರಾಮೀಣ ಪ್ರದೇಶದಲ್ಲಿ ಕಾಣುತ್ತಿರುವ ಚಿತ್ರಣವಿದು.

ನಗರ, ಪಟ್ಟಣಗಳ ಪರಿಸ್ಥಿತಿಯೂ ಭಿನ್ನವಾಗಿಲ್ಲ. ನಗರವಾಸಿಗಳಿಗೆ ಶುದ್ಧನೀರು ಒದಗಿಸುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ‘ಅಮೃತ್’ ಯೋಜನೆ 2015ರಿಂದಲೇ ಜಾರಿಯಲ್ಲಿದೆ. ಆದರೆ, ಬರಿದಾಗುತ್ತಿರುವ ಜಲಾಶಯಗಳು, ಕೊಳಚೆಯಾಗುತ್ತಿರುವ ಕೆರೆಗಳು ಹಾಗೂ ಖಾಲಿಯಾಗುತ್ತಿರುವ ಕೊಳವೆಬಾವಿಗಳಿಂದಾಗಿ ಪಟ್ಟಣಿಗರ ನೀರಿನ ಬವಣೆಯೂ ನೀಗುತ್ತಿಲ್ಲ. ಆರ್ಥಿಕ ಅಭಿವೃದ್ಧಿಯ ಒಮ್ಮುಖ ಓಟದಲ್ಲಿ ನೈಸರ್ಗಿಕ ಜಲಚಕ್ರದ ಸಂರಚನೆಯನ್ನೇ ನಿರ್ಲಕ್ಷಿಸಿದ್ದರಿಂದ ಉಂಟಾದ ಗಂಭೀರ ಪರಿಣಾಮಗಳನ್ನು ಊರು-ಕೇರಿ, ನಗರ-ಪಟ್ಟಣಗಳ ಎಲ್ಲೆಡೆ ಇಂದು ಕಾಣಬಹುದು. ತಂತ್ರಜ್ಞಾನ ಹಾಗೂ ಸಂಪತ್ತಿನ ಎರಕದಂತಿರುವ ಬೆಂಗಳೂರಿನ ಜಲಬವಣೆಯಂತೂ ನಗರೀಕರಣದಲ್ಲಿನ ವೈರುಧ್ಯಗಳನ್ನು ಬಿಂಬಿಸುವ ರೂಪಕವೇ ಆಗಿದೆ!

ಇಂದು ಎಲ್ಲೆಡೆ ಕಾಣುವ ಕಟುಸತ್ಯಗಳ ‘ಗೋಡೆಬರಹ’ಗಳಿವು. ಆದರೆ, ಅವನ್ನು ಅರ್ಥೈಸಿಕೊಂಡು ಜನರ ಸಂಕಷ್ಟಗಳಿಗೆ ದನಿಯಾಗಬೇಕಾದ ಚುನಾವಣೆಗಳು ಮಾತ್ರ, ಅಧಿಕಾರವೇರಲು ತವಕಿಸುವವರ ಹುಸಿ ಆಶ್ವಾಸನೆ ಹಾಗೂ ಒಣಚರ್ಚೆಗಳ ಮಾರುಕಟ್ಟೆಗಳಾಗುತ್ತಿವೆ. ಪ್ರಜಾಪ್ರಭುತ್ವದ ‘ಹಬ್ಬ’, ‘ಜಾತ್ರೆ’ ಎಂದೆಲ್ಲ ವರ್ಣಿಸಲ್ಪಡುವ ಈ ಸಾಂವಿಧಾನಿಕ ಪ್ರಕ್ರಿಯೆಯು, ಪ್ರಭುಗಳಾಗಲು ಹೊರಟವರ ‘ದರ್ಬಾರ್’ ಅಥವಾ ‘ಮೋಜಿನ ಜಾತ್ರೆ’ಗಳಂತೆ ಆಗುತ್ತಿವೆ. ಇಂಥ ಮಾಯಾಬಜಾರಿನಲ್ಲೂ ಜನರ ಆಶೋತ್ತರಗಳು ಅರಳಬೇಕೆಂದರೆ, ನಾಗರಿಕರು ಕ್ರಿಯಾಶೀಲರಾಗುವುದೊಂದೇ ದಾರಿ. ನೀರಿನಂಥ ಮಹತ್ವದ ಸಂಗತಿಗಳನ್ನು ಆಗ ಸಾರ್ವಜನಿಕ ಚರ್ಚೆಯ ಕೇಂದ್ರಬಿಂದುವಿಗೆ ತರಲು ಸಾಧ್ಯ.

ಈ ಹಿನ್ನೆಲೆಯಲ್ಲಿ, ಜಲಸುರಕ್ಷತೆಯ ಮೂರು ಪ್ರಮುಖ ಆಯಾಮಗಳನ್ನು ಇಲ್ಲಿ ಗಮನಿಸಬಹುದು. ಮೊದಲಿನದು, ನೀರಿನ ನಿರ್ವಹಣೆಯ ಆಡಳಿತಾತ್ಮಕ ಸಂಗತಿ. ಜಲಸಂಗ್ರಹ ಹಾಗೂ ವಿತರಣೆಯ ಬಹುತೇಕ ಅಧಿಕಾರಗಳು ಸಾಂವಿಧಾನಿಕವಾಗಿ ರಾಜ್ಯ ಸರ್ಕಾರಗಳಿಗೇ ಸೇರಿವೆ. ಹೀಗಾಗಿಯೇ, ಅಂತರರಾಜ್ಯ ನದಿಗಳ ನೀರಿನ ಬಳಕೆ ಕುರಿತಾಗಿ ಕೇಂದ್ರ ಹಾಗೂ ವಿವಿಧ ರಾಜ್ಯ ಸರ್ಕಾರಗಳ ನಡುವೆ ಸದಾ ಸಂಘರ್ಷ ಏರ್ಪಡುವುದು. ನದಿಗಳ ಸಹಜ ಹರಿವಿಗಾಗಿ ಕೈಗೊಳ್ಳಲೇಬೇಕಾದ ಪುನರುಜ್ಜೀವನ ಕಾರ್ಯಗಳಿಗೂ ಈ ಅಧಿಕಾರ ಹಂಚಿಕೆ ರಾಜಕಾರಣ ಹಲವು ಸಲ ತೊಡಕು ಉಂಟುಮಾಡುವುದಿದೆ. ನದಿಗಳೂ ಸೇರಿದಂತೆ ಜಲಚಕ್ರ ನಿರ್ವಹಣೆಯ ಎಲ್ಲ ಜವಾಬ್ದಾರಿಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸೂಕ್ತವಾಗಿ ಹಂಚಿಕೊಳ್ಳುವ ಸಮಗ್ರ ರಾಷ್ಟ್ರೀಯ ನೀತಿಯೊಂದರ ಜರೂರತ್ತಿದೆ ಈಗ.

ಆಡಳಿತದ ತಳಮಟ್ಟದಲ್ಲೂ ಪರಿಹರಿಸಬೇಕಾದ ಹಲವಾರು ಸಂಗತಿಗಳಿವೆ. ಉದಾಹರಣೆಗೆ, ಕಾಡಿನ ನದಿಮೂಲಗಳು ಹಾಗೂ ನಗರಗಳ ರಾಜಕಾಲುವೆಗಳು ಒತ್ತುವರಿಯಾಗುತ್ತಿವೆ. ಕೆರೆ ಮತ್ತು ನದಿಗಳ ಬಫರ್ ವಲಯಗಳಲ್ಲಿ ಅನಧಿಕೃತ ಸಾಗುವಳಿ ಹಾಗೂ ನಗರೀಕರಣ ಸಾಗಿದೆ. ನದಿಗಳಿಗೆ ನೀರುಣಿಸುವ ಜಲಾನಯನ ಪ್ರದೇಶದ ಗೋಮಾಳ ಹಾಗೂ ಅರಣ್ಯಪ್ರದೇಶಗಳು ವ್ಯಾಪಕವಾಗಿ ನಾಶವಾಗುತ್ತಿವೆ. ಕೊಳವೆಬಾವಿಯನ್ನಂತೂ ಯಾರು ಎಲ್ಲಿಯೂ ಯಾವ ಒಪ್ಪಿಗೆ ಇಲ್ಲದೆಯೇ ತೋಡಬಹುದು. ಕಂದಾಯ ಇಲಾಖೆಯೂ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸಮನ್ವಯ ಹಾಗೂ ಉತ್ತರದಾಯಿತ್ವ ಇರದೆ ಉಂಟಾದ ಆಡಳಿತ ವೈಫಲ್ಯವಿದು. ನೀರಿನ ಸಮಗ್ರ ನಿರ್ವಹಣೆಗೆ ಪರಿಣಾಮಕಾರಿಯಾದ ಕಾರ್ಯನೀತಿ ಈಗಲಾದರೂ ರೂಪುಗೊಳ್ಳಲೇಬೇಕಿದೆ.

ಎರಡನೆಯದು, ಜಲಮೂಲ ರಕ್ಷಣೆಯ ವಿಧಾನಗಳ ಅನುಷ್ಠಾನದ ಸವಾಲು. ನೈಸರ್ಗಿಕ ಜಲಚಕ್ರದ ವಿಜ್ಞಾನ ಆಧರಿಸಿ, ನೀರಿನ ಸಂರಕ್ಷಣೆ ಹಾಗೂ ಶುದ್ಧೀಕರಿಸುವ ಅಸಂಖ್ಯ ಪಾರಂಪರಿಕ ಮಾದರಿಗಳು, ನವೀನ ತಂತ್ರಜ್ಞಾನಗಳು ಇಂದು ಲಭ್ಯವಿವೆ. ಅವನ್ನು ಆಧರಿಸಿ ನೀರಿನ ಸದ್ಬಳಕೆ ಮಾಡುತ್ತಿರುವ ಯಶೋಗಾಥೆಗಳೂ ಬಹಳಷ್ಟಿವೆ. ಮಳೆನೀರು ಸಂಗ್ರಹಿಸುವುದು, ಕೆರೆಗಳ ಹೂಳು ಶೇಖರಣೆ ಪ್ರಮಾಣ ತಗ್ಗಿಸುವುದು, ನದಿ, ಕೆರೆಗಳ ಬಫರ್ ವಲಯದ ಹಸಿರೀಕರಣ, ಬಳಸಿದ ನೀರಿನ ಸಂಸ್ಕರಣೆ ಎಲ್ಲಕ್ಕೂ ಯಶಸ್ವಿ ಮಾದರಿಗಳಿವೆ. ಬೆಂಗಳೂರಿನಂಥ ನಗರಗಳಲ್ಲಿ ದೊರಕುವ ಭಾರಿ ಪ್ರಮಾಣದ ಕೊಳಚೆಯನ್ನೂ ವಿಕೇಂದ್ರೀಕೃತ ಹಾಗೂ ‘ಜೀವವೈಜ್ಞಾನಿಕ ತಂತ್ರ’ಗಳ ಮೂಲಕ ಯಶಸ್ವಿಯಾಗಿ ಶುದ್ಧೀಕರಿಸಲು ಸಾಧ್ಯವಿದೆ. ಗೊಂದಲದ ಗೂಡಾಗಿರುವ ಕೆ.ಸಿ. ವ್ಯಾಲಿ ಯೋಜನೆಯನ್ನೂ  ಪಾರದರ್ಶಕ ಆಡಳಿತ ಹಾಗೂ ಮೂರನೇ ಹಂತದ ಸಂಸ್ಕರಣೆಯಲ್ಲಿ ಜೈವಿಕ ತಂತ್ರಜ್ಞಾನದ ಸೂಕ್ತ ಅಳವಡಿಕೆಯ ಮೂಲಕ ಯಶಸ್ವಿಗೊಳಿಸಲು ಸಾಧ್ಯವಿದೆ. ನೀರಿನ ಸಂರಕ್ಷಣೆ, ಮಿತಬಳಕೆ ಹಾಗೂ ಮರುಬಳಕೆ ಕ್ಷೇತ್ರವು ಪಾರದರ್ಶಕ ಆಡಳಿತ ನೀತಿ ಮತ್ತು ಕಾರ್ಯಕ್ಷಮತೆಯ ವೃತ್ತಿಪರರಿಗಾಗಿ ಕಾಯುತ್ತಿದೆ ಅಷ್ಟೆ!

ಅಂತಿಮವಾಗಿ, ನೀರಿನ ಮಿತವ್ಯಯದ ಬಗೆಗೆ. ಎಲ್ಲೆಡೆಯೂ ಸದಾ ನೀರು ಪೂರೈಸುತ್ತಲೇ ಇರಲು ಜಲಮಂಡಳಿಗಳು ಅಥವಾ ನೀರಾವರಿ ನಿಗಮಗಳಿಗೆ ಭವಿಷ್ಯದಲ್ಲಿ ಸಾಧ್ಯವಾಗದು. ಅಗತ್ಯವಿದ್ದೆಡೆ ಮಾತ್ರ ಸೂಕ್ತ ಪ್ರಮಾಣದ ನೀರು ಒದಗಿಸುವ ಕ್ರಮಗಳನ್ನು ಎಲ್ಲರೂ ಒಪ್ಪುವುದು ಅನಿವಾರ್ಯವಾಗುತ್ತದೆ. ನಗರಗಳಲ್ಲಿ ಕುಡಿಯುವ ನೀರಿನ ಹೊರತಾಗಿ ಉಳಿದೆಲ್ಲ ಗೃಹೋಪಯೋಗಿ ಹಾಗೂ ವಾಣಿಜ್ಯ ಬಳಕೆಗೆ ಬಳಸಿದ ನೀರನ್ನು ಸಂಸ್ಕರಿಸಿ ಪುನಃ ಬಳಸುವ ಆಯ್ಕೆ ಅನಿವಾರ್ಯವಾಗುತ್ತದೆ. ಕೈಗಾರಿಕೆಗಳು ಹಾಗೂ ಉದ್ಯಮಗಳು ತಮ್ಮ ಕಾರ್ಯವಿಧಾನಗಳಲ್ಲಿ ನೀರನ್ನು ಮಿತವಾಗಿ ಬಳಸುವ ನೀತಿ ಹಾಗೂ ತಂತ್ರಗಳನ್ನು ಅನುಸರಿಸುವುದಂತೂ ತೀರಾ ಅಗತ್ಯ. ಇನ್ನು ಕೃಷಿ ಕ್ಷೇತ್ರದಲ್ಲಿ ಸೂಕ್ತ ನೆಲಬಳಕೆ ನೀತಿ, ಹನಿ ನೀರಾವರಿ, ಕಡಿಮೆ ನೀರು ಬೇಡುವ ಬೆಳೆಗಳಂತಹ ವಿಧಾನಗಳ ಅಳವಡಿಕೆ ಅನಿವಾರ್ಯ. ನೀರು ಸದಾ ಉಚಿತವಾಗಿ ದೊರೆಯುವ ವಸ್ತುವಲ್ಲ, ಬದಲಾಗಿ ವಿವೇಕದಿಂದ ಕಾಪಾಡಿಕೊಳ್ಳಬೇಕಾದ ನೈಸರ್ಗಿಕ ಸಂಪನ್ಮೂಲ ಎಂಬ ‘ಜಲಸಾಕ್ಷರತೆ’ ಸರ್ಕಾರಕ್ಕೆ ಮೊದಲು ಬರಬೇಕಿದೆ.

ಮುಂದಿನ ನೂತನ ಸರ್ಕಾರವು ಇಂಥ ಮಹತ್ವದ ಸಂಗತಿಗಳ ಕುರಿತು ತ್ವರಿತ ನಿರ್ಣಯ ಕೈಗೊಳ್ಳಬೇಕಾಗುತ್ತದೆ. ಈ ಕಾರ್ಯದಲ್ಲಿ ರಾಜ್ಯ ಸರ್ಕಾರಗಳು ವಿಶ್ವಾಸದಿಂದ ತೊಡಗಿಕೊಳ್ಳುವ ಹಾಗೂ ನಾಗರಿಕರು ಉತ್ಸಾಹದಿಂದ ಪಾಲ್ಗೊಳ್ಳುವಂಥ ಪರಿಣಾಮಕಾರಿ ಹಾಗೂ ಪಾರದರ್ಶಕವಾದ ‘ಸಮಗ್ರ ಜಲನೀತಿ’ಯನ್ನು ಕೇಂದ್ರದಲ್ಲಿ ಬರುವ ಹೊಸ ಸರ್ಕಾರ ರೂಪಿಸಬೇಕಿದೆ. ಇಲ್ಲವಾದಲ್ಲಿ, 2030ರ ವೇಳೆಗೆ ದೇಶದ ಅರ್ಧಕ್ಕೂ ಹೆಚ್ಚಿನ ಜನರು ನೀರಿನ ತೀವ್ರ ಕೊರತೆ ಎದುರಿಸಬಹುದು ಹಾಗೂ ಒಟ್ಟು ರಾಷ್ಟ್ರೀಯ ಉತ್ಪನ್ನದಲ್ಲಿ (ಜಿಡಿಪಿ) ಕೃಷಿಯ ಪಾಲು ಶೇ 12ಕ್ಕಿಂತಲೂ ಕೆಳಕ್ಕೆ ಕುಸಿಯಬಹುದು ಎಂದು ಅಧ್ಯಯನಗಳು ಈಗಾಗಲೇ ಎಚ್ಚರಿಸಿವೆ! ‘ಜಲಸುರಕ್ಷತೆ’ ಹಾಗೂ ‘ಆಹಾರ ಸುರಕ್ಷತೆ’ ಇವೆರಡೂ ಭಂಗವಾದರೆ ಭವಿಷ್ಯವೇನಾದೀತು?

ನೀರಿನಂಥ ಮೂಲಭೂತ ವಿಷಯಗಳಿಗೆ ಚುನಾವಣಾ ಪ್ರಣಾಳಿಕೆಗಳಲ್ಲಿ ಆದ್ಯತೆ ದೊರಕಲಿ. ಕುಸಿಯುತ್ತಿರುವ ನಿಸರ್ಗದ ನೆಲೆಗಟ್ಟನ್ನು ಸುಸ್ಥಿರಗೊಳಿಸಬಲ್ಲ ಸಂಸದರನ್ನು ಆಯ್ಕೆ ಮಾಡುವ ಸಾಮರ್ಥ್ಯ ‘ಪ್ರಜಾ-ಮತ’ಕ್ಕೆ ಬರಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT