ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ; ಭಾರತದ ಆರ್ಥಿಕತೆ: ವಿಭಿನ್ನ ನೋಟ

ಹೊಸ ಚಿಂತನೆ ಅರಳುವುದಕ್ಕೆ ಪೂರಕವಾದ, ಉದ್ಯಮಶೀಲತೆಯನ್ನು ಬೆಳೆಸಬಲ್ಲ ಪರಿಸರ ಬೇಕು
Published 25 ಡಿಸೆಂಬರ್ 2023, 19:51 IST
Last Updated 25 ಡಿಸೆಂಬರ್ 2023, 19:51 IST
ಅಕ್ಷರ ಗಾತ್ರ

ಭಾರತದ ಆರ್ಥಿಕತೆ ಎತ್ತ ಸಾಗಿದೆ? ಕೆಲವರ ದೃಷ್ಟಿಯಲ್ಲಿ ಅದರ ಚಲನೆ ಅದ್ಭುತವಾಗಿ ಇದೆ. ಇನ್ನು ಕೆಲವರ ದೃಷ್ಟಿಯಲ್ಲಿ ಏನೂ ಸರಿಯಿಲ್ಲ. ಆದರೆ ಎಲ್ಲರೂ ಒಪ್ಪಿಕೊಳ್ಳಬಹುದಾದ ಒಂದು ಸತ್ಯವೆಂದರೆ, ನಮ್ಮ ದೇಶದ ಭವಿಷ್ಯದ ಬಗ್ಗೆ ನಮಗೊಂದು ಚೆಂದದ ಕನಸಿರಬೇಕು, ಗುರಿಯ ಬಗ್ಗೆ ಒಂದು ಸ್ಪಷ್ಟ ಕಲ್ಪನೆ ಇರಬೇಕು.

ಆರ್‌ಬಿಐ ಮಾಜಿ ಗವರ್ನರ್ ರಘುರಾಂ ರಾಜನ್ ಅವರಿಗೂ ಭಾರತದ ಆರ್ಥಿಕತೆಯ ಬಗ್ಗೆ ಒಂದು ಕನಸಿದೆ. ಅದನ್ನು ಸಾಕಾರಗೊಳಿಸುವುದಕ್ಕೆ ಅವರದೇ ಆದ ಆಲೋಚನೆಯೂ ಇದೆ. ಇದನ್ನು ಹಲವು ವರ್ಷಗಳಿಂದ ವಿವಿಧ ವೇದಿಕೆಗಳಲ್ಲಿ ಅವರು ಹೇಳುತ್ತಲೇ ಬಂದಿದ್ದಾರೆ. ಈಗ ರೋಹಿತ್ ಲಂಬಾ ಅವರೊಂದಿಗೆ ಕೂಡಿಕೊಂಡು ‘ಬ್ರೇಕಿಂಗ್ ದಿ ಮೌಲ್ಡ್- ರಿಇಮ್ಯಾಜಿನಿಂಗ್ ಇಂಡಿಯಾಸ್ ಎಕನಾಮಿಕ್ ಫ್ಯೂಚರ್’ ಅಂತ ಒಂದು ಪುಸ್ತಕವನ್ನೇ ಬರೆದಿದ್ದಾರೆ.

ನಮ್ಮಲ್ಲಿ ಒಳ್ಳೆಯ ಕೆಲಸಗಳಾಗಿವೆ. ಬೇರೆ ಎಷ್ಟೋ ದೇಶಗಳಿಗೆ ಹೋಲಿಸಿದರೆ ಬೆಳವಣಿಗೆ ಆಗಿದೆ. ಇಂಗ್ಲೆಂಡನ್ನು ಹಿಂದಿಕ್ಕಿದ್ದೇವೆ. ಆದರೆ ಸಾಧಿಸುವುದಕ್ಕೆ ಇನ್ನೂ ತುಂಬಾ ಇದೆ. ಉದಾಹರಣೆಗೆ, ನಮ್ಮಲ್ಲಿ ಹೆಚ್ಚಿನ ಯುವಕರಿಗೆ ಉದ್ಯೋಗ ಇಲ್ಲ. ಸಿಗುವ ಭರವಸೆಯೂ ಇಲ್ಲ. ಇನ್ನು ಮಹಿಳೆಯರಂತೂ ಐದು ಜನರಲ್ಲಿ ಒಬ್ಬರು ದುಡಿಯುತ್ತಿದ್ದಾರೆ. ಜಿ20 ದೇಶಗಳಲ್ಲೇ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಮಹಿಳಾ ಕಾರ್ಮಿಕರಿರುವ ದೇಶ ನಮ್ಮದು.

ಸಮಸ್ಯೆ ಇನ್ನಷ್ಟು ತೀವ್ರವಾಗಬಹುದು. ಜಾಗತಿಕ ಆರ್ಥಿಕತೆ ಸಂಕಟದಲ್ಲಿದೆ. ಕೆಲಸಗಳು ಯಾಂತ್ರೀಕರಣಗೊಳ್ಳುತ್ತಿವೆ. ಇನ್ನಷ್ಟು ಜನ ನಿರುದ್ಯೋಗಿಗಳಾಗಬಹುದು. ನಮ್ಮಲ್ಲಿ 140 ಕೋಟಿ ಜನರಿದ್ದೇವೆ. ಅದು ನಮ್ಮ ಶಕ್ತಿ. ಅದನ್ನು ಸಮರ್ಥವಾಗಿ ಬಳಸಿಕೊಳ್ಳಲು ಸಾಧ್ಯವಾಗಬೇಕು. ಅಂದರೆ ಹೆಚ್ಚೆಚ್ಚು ಉದ್ಯೋಗ ಸೃಷ್ಟಿಯಾಗಬೇಕು.

ಇದಕ್ಕೊಂದು ಪರಿಹಾರ ಬೇಕಿದೆ. ಉತ್ತರಕ್ಕಾಗಿ, ಆರ್ಥಿಕತೆ ಕ್ರಮಿಸಿದ ಹಾದಿಯತ್ತ ರಾಜನ್ ಚಿಕಿತ್ಸಕ ನೋಟ ಬೀರಿದ್ದಾರೆ. 1960- 70ರಲ್ಲಿ ವಸ್ತುಗಳ ಸಾಗಣೆ ವೆಚ್ಚ ತುಂಬಾ ಕಡಿಮೆಯಾಯಿತು. ಅಗ್ಗವಾಗಿ ಎಲ್ಲಿ ಉತ್ಪಾದಿಸಲು ಸಾಧ್ಯವೋ ಅಲ್ಲಿ ಉತ್ಪಾದಿಸಿ, ಅಲ್ಲಿಂದ ಬೇರೆಡೆಗೆ ಸಾಗಿಸುವುದು ಲಾಭದಾಯಕವಾಗಿತ್ತು. ಅಮೆರಿಕಕ್ಕೋ ಯುರೋಪಿಗೋ ಹೋಲಿಸಿದರೆ ಚೀನಾದಲ್ಲಿ ಉತ್ಪಾದನಾ ವೆಚ್ಚ ತುಂಬಾ ಅಗ್ಗವಾಗಿತ್ತು. ರೇಡಿಯೊ, ಟಿ.ವಿ. ಬಿಡಿಭಾಗಗಳನ್ನು ಜೋಡಿಸುವ ಕೆಲಸಕ್ಕೆ ಹೆಚ್ಚಿನ ನೈಪುಣ್ಯವೂ ಬೇಕಿರಲಿಲ್ಲ. ಬಹುರಾಷ್ಟ್ರೀಯ ಕಂಪನಿಗಳು ಚೀನಾದಲ್ಲಿ ಫ್ಯಾಕ್ಟರಿಗಳನ್ನು ಸ್ಥಾಪಿಸಿ, ರೇಡಿಯೊ, ಟಿ.ವಿ.ಗಳನ್ನು ಅಲ್ಲೇ ಜೋಡಿಸಿ, ಬೇರೆ ದೇಶಗಳಿಗೆ ಮಾರಿ ಲಾಭ ಮಾಡಿಕೊಂಡವು. ಚೀನಾದಲ್ಲಿ ಉತ್ಪಾದನಾ ಚಟುವಟಿಕೆ ಹೆಚ್ಚಿತು. ಅದು ಶ್ರೀಮಂತವಾದಂತೆ, ಮೂಲ ಸೌಕರ್ಯ ಹೆಚ್ಚಿದಂತೆ ಕೆಲಸಗಾರರು ವಿದ್ಯಾವಂತರಾದರು. ಬಿಡಿಭಾಗಗಳನ್ನು ತಯಾರಿಸುವುದೂ ಅಗ್ಗವಾಯಿತು. ಹಾಗಾಗಿ, ಉತ್ಪಾದನೆ ಪ್ರಕ್ರಿಯೆಯು ಸಂಪೂರ್ಣವಾಗಿ ಚೀನಾಕ್ಕೆ ಸ್ಥಳಾಂತರವಾಯಿತು. ಜಪಾನ್, ಕೊರಿಯಾ, ತೈವಾನ್ ಕೂಡ ಇದೇ ಹಾದಿ ಹಿಡಿದು, ಪ್ರಗತಿ ಸಾಧಿಸಿದವು.

ಈಗ ಭಾರತ ಈ ದಾರಿಯಲ್ಲಿ ಸಾಗಬೇಕೆಂದುಕೊಂಡಿದೆ. ಆದರೆ ಅದು ಸುಲಭವಲ್ಲ. ಅಗ್ಗದ ಕೂಲಿ ವಿಷಯಕ್ಕೆ ಬಂದಾಗ ಚೀನಾ, ತೈವಾನ್, ಬಾಂಗ್ಲಾ, ವಿಯೆಟ್ನಾಂ ಜೊತೆಗೆ ಭಾರತ ಸ್ಪರ್ಧಿಸಬೇಕಾಗಿದೆ. ಬಿಡಿಭಾಗಗಳನ್ನು ಚೀನಾ, ತೈವಾನ್ ತೀರಾ ಅಗ್ಗವಾಗಿ ತಯಾರಿಸುತ್ತಿವೆ. ಹಾಗಾಗಿ, ಉತ್ಪಾದನೆಯ ಎಲ್ಲ ಹಂತಗಳಲ್ಲೂ ಭಾರತಕ್ಕೆ ತೀವ್ರವಾದ ಪೈಪೋಟಿಯಿದೆ.

ಅದಕ್ಕೆ ಪರಿಹಾರವಾಗಿ ಭಾರತ ಸರ್ಕಾರ ಪಿಎಲ್‌ಐ- ಪ್ರೊಡಕ್ಷನ್ ಲಿಂಕ್ಡ್‌ ಇನ್ಸೆಂಟಿವ್ ಯೋಜನೆ ಜಾರಿಗೆ ತಂದಿದೆ. ಭಾರತದಲ್ಲೇ ತಯಾರಾಗುವ ಕೆಲವು ಉತ್ಪನ್ನಗಳಿಗೆ ಸಬ್ಸಿಡಿ ಕೊಡಲಾಗುತ್ತದೆ. ಉದಾಹರಣೆಗೆ, ಪ್ರತಿ ಮೊಬೈಲ್‌ ಫೋನಿಗೆ ಅದರ ಮಾರಾಟ ಬೆಲೆಯ ಶೇ 4ರಿಂದ 6ರಷ್ಟು ಸಬ್ಸಿಡಿ ಕೊಡಲಾಗುತ್ತಿದೆ. ರಾಜನ್ ಗುರುತಿಸುವಂತೆ, ಭಾರತದಲ್ಲಿ ಮೊಬೈಲ್ ಫೋನ್‌ಉತ್ಪಾದನೆ ಆಗುತ್ತಿಲ್ಲ. ಬಿಡಿಭಾಗಗಳ ಜೋಡಣೆಯಷ್ಟೇ ಆಗುತ್ತಿರುವುದು.

ಉತ್ಪಾದನಾ ಪ್ರಕ್ರಿಯೆ ಸಾಮಾನ್ಯವಾಗಿ ಮೂರು ಹಂತಗಳಲ್ಲಿ ನಡೆಯುತ್ತದೆ. ಮೊದಲನೆಯದು, ಉತ್ಪಾದನಾಪೂರ್ವ ಹಂತ. ಅಂದರೆ ಸಂಶೋಧನೆ, ವಿನ್ಯಾಸದಂತಹ ಬೌದ್ಧಿಕ ಕೆಲಸಗಳು ನಡೆಯುವ ಹಂತ. ಎರಡನೆಯದು, ಉತ್ಪಾದನಾ ಹಂತ. ಮೂರನೆಯದು, ಉತ್ಪಾದನೆಯ ನಂತರದ ಮಾರಾಟದ ಹಂತ. ಇದರಲ್ಲಿ ಮಾರ್ಕೆಟಿಂಗ್, ಪ್ರಚಾರದಂತಹವು ಬರುತ್ತವೆ. ಮೊದಲ ಹಾಗೂ ಕೊನೆಯ ಹಂತದಲ್ಲಿ ಗರಿಷ್ಠ ಬೆಲೆ ಸಿಗುತ್ತದೆ. ಕನಿಷ್ಠ ಹಣ ಸಿಗುವುದು ಮಧ್ಯದ, ಅಂದರೆ ಉತ್ಪಾದನೆಯ ಕೆಲಸಕ್ಕೆ. ಅದರಲ್ಲೂ ಬಿಡಿಭಾಗಗಳ ಜೋಡಣೆಗೆ ತುಂಬಾ ಕಡಿಮೆ ಸಿಗುತ್ತದೆ. ಉದಾಹರಣೆಗೆ, ಐಫೋನ್ ಗಮನಿಸೋಣ. ಅಲ್ಲಿ ಆ್ಯಪಲ್ ಕಂಪನಿ ಮಾಡುವುದು ಮೊದಲ ಹಾಗೂ ಕೊನೆಯ ಹಂತದ ಕೆಲಸ. ನಿಜವಾಗಿ ಐಫೋನನ್ನು ತಯಾರಿಸುವುದು ಫಾಕ್ಸ್‌ಕಾನ್ ಅನ್ನುವ ಕಂಪನಿ. ಅದು ಹೆಚ್ಚಾಗಿ ತಯಾರಾಗುವುದು ಚೀನಾದಲ್ಲಿ. ಆದರೆ ಆ್ಯಪಲ್ ಕಂಪನಿಗೆ ಒಟ್ಟು ಬೆಲೆಯ ಶೇ 60ರಷ್ಟು ಹೋಗುತ್ತದೆ. ಉತ್ಪಾದಿಸುವವರಿಗೆ ಸಿಗುವುದು ಶೇ 30ರಷ್ಟು. ಬಿಡಿಭಾಗಗಳನ್ನು ಜೋಡಿಸಿದ್ದಕ್ಕೆ ಸಿಗುವುದು ಬರೀ ಶೇ 4ರಷ್ಟು. ಸರ್ಕಾರ ಕೊಡುವ ಸಬ್ಸಿಡಿಗಿಂತ ಕಡಿಮೆ.

ಭಾರತವು ಕನಿಷ್ಠ ಬೆಲೆ ಸಿಗುವ ಬಿಡಿಭಾಗಗಳನ್ನು ಜೋಡಿಸುವ ಕೆಲಸಕ್ಕೆ ಪೈಪೋಟಿ ಮಾಡುತ್ತಿದೆ. ಅದರ ಬದಲು ಸಂಶೋಧನೆ ಹಾಗೂ ವಿನ್ಯಾಸಕ್ಕೆ ಅದು ಶ್ರಮಿಸಬೇಕು. ಅಲ್ಲಿ ನಮಗೆ ಸಾಮರ್ಥ್ಯವಿದೆ. ಇಂದು ಸುಮಾರು ಶೇ 20ರಷ್ಟು ಚಿಪ್‌ಗಳು ಭಾರತದಲ್ಲೇ ವಿನ್ಯಾಸಗೊಳ್ಳುತ್ತಿವೆ. ಆದರೆ ಅವನ್ನು ಜಾಗತಿಕ ಉದ್ದಿಮೆಗಳಿಗಾಗಿ ತಯಾರಿಸಲಾಗುತ್ತಿದೆ. ಭಾರತದ್ದೇ ಆದ ಚಿಪ್ ಉತ್ಪಾದನೆಯ ಉದ್ದಿಮೆಯಿಲ್ಲ. ಚಿಪ್ ಉತ್ಪಾದನೆಗಿಂತ ಚಿಪ್‌ ವಿನ್ಯಾಸ ಲಾಭದಾಯಕ. ಚಿಪ್‌ ವಿನ್ಯಾಸ ಮಾಡುವ ವಿಡಿಯಾ ಕಂಪನಿಯು ಚಿಪ್ ಉತ್ಪಾದಿಸುವ ಟಿಎಸ್‌ಎಂಸಿಗಿಂತ ಹಲವು ಪಟ್ಟು ಹೆಚ್ಚು ದುಡಿಯುತ್ತದೆ.

ಚೀನಾ ಮಾಡಿದಂತೆ ಬಿಡಿಭಾಗಗಳ ಜೋಡಣೆಯಿಂದ ಪ್ರಾರಂಭಿಸಿ ಮೇಲಿನ ಹಂತಕ್ಕೆ ಹೋಗುವ ಅವಶ್ಯಕತೆ ಭಾರತಕ್ಕಿಲ್ಲ. ಅದು ನೇರವಾಗಿ ಮೊಬೈಲ್ ಫೋನ್ ವಿನ್ಯಾಸದ ತಯಾರಿಗೇ ಪ್ರಯತ್ನಿಸಬಹುದು. ಒಂದು ಕಾಲದಲ್ಲಿ ಸೇವೆಯನ್ನು ರಫ್ತು ಮಾಡುವುದು ಕಷ್ಟವಾಗಿತ್ತು. ಈಗ ತಂತ್ರಜ್ಞಾನ ಬೆಳೆದಿದೆ. ಸೇವೆಯನ್ನು ರಫ್ತು ಮಾಡುವುದಕ್ಕೆ ಅವಕಾಶಗಳು ಹೆಚ್ಚುತ್ತಿವೆ. 2020ಕ್ಕೆ ಹೋಲಿಸಿದರೆ ಹಾಗೆ ರಫ್ತಾದ ಸೇವೆಯ ಪ್ರಮಾಣ 2022ರಲ್ಲಿ ಶೇ 12ರಷ್ಟು ಹೆಚ್ಚಿದೆ.

ಹಲವು ಹೊಸ ಉದ್ದಿಮೆಗಳು ಹುಟ್ಟಿಕೊಂಡಿವೆ. ಟಿಲ್ಫಿ ಸಂಸ್ಥೆ ತನ್ನ ವೆಬ್‌ಸೈಟ್ ಮೂಲಕ ಬನಾರಸ್ ಸಿಲ್ಕ್ ಸೀರೆಗಳನ್ನು ಜಗತ್ತಿನಾದ್ಯಂತ ಮಾರುತ್ತಿದೆ. ನವೀನ ವಿನ್ಯಾಸಗಳನ್ನು ಪರಿಚಯಿಸುವ ಮೂಲಕ ಹೆಚ್ಚು ಆಕರ್ಷಕ ಮಾಡಿದೆ. ಕಷ್ಟದಲ್ಲಿದ್ದ ಸಾಂಪ್ರದಾಯಿಕ ಕುಶಲಕರ್ಮಿಗಳ ಉತ್ಪನ್ನಕ್ಕೆ ಮಾರುಕಟ್ಟೆಯನ್ನು ಹಿಗ್ಗಿಸಿದೆ. ಉದ್ಯೋಗ ಹೆಚ್ಚಿದೆ. ಇಂತಹ ಹಲವು ಉದಾಹರಣೆಗಳು ಪುಸ್ತಕದಲ್ಲಿವೆ. ಇವರೆಲ್ಲಾ ಡಿಜಿಟಲ್ ಜ್ಞಾನವನ್ನು ಬಳಸಿಕೊಂಡು ಉತ್ಪಾದನೆಯನ್ನು ಹಿಗ್ಗಿಸುತ್ತಿದ್ದಾರೆ. ಇದನ್ನು ಹಲವು ಪಟ್ಟು ವಿಸ್ತರಿಸುವ ಸಾಧ್ಯತೆಯಿದೆ.

ಇದಕ್ಕೆ, ಹೊಸ ಚಿಂತನೆಗಳು ಹಾಗೂ ಉದ್ಯಮಶೀಲತೆಯನ್ನು ಬೆಳೆಸಬಲ್ಲ ಪರಿಸರ ನಿರ್ಮಾಣ ಆಗಬೇಕು. ಯುವಕರ ಬೌದ್ಧಿಕ ಸಾಮರ್ಥ್ಯ ಹೆಚ್ಚಬೇಕು. ಅದಕ್ಕಾಗಿ ಉತ್ತಮ ಗುಣಮಟ್ಟದ ವಿಶ್ವವಿದ್ಯಾಲಯಗಳು, ಸಂಶೋಧನಾ ಸಂಸ್ಥೆಗಳು ಬೇಕು. ಜಗತ್ತಿನ 200 ಅತ್ಯುತ್ತಮ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಭಾರತದ ಒಂದು ವಿಶ್ವವಿದ್ಯಾಲಯವೂ ಇಲ್ಲ. ಒಳ್ಳೆಯ ವಿಶ್ವವಿದ್ಯಾಲಯ ಇದ್ದ ಕಡೆ ಹೊಸ ಚಿಂತನೆಗಳು, ವಿಚಾರಗಳು, ಉತ್ಪನ್ನಗಳು ಸೃಷ್ಟಿಯಾಗುತ್ತವೆ.

ಹೊಸ ಚಿಂತನೆ, ಕ್ರಿಯಾಶೀಲತೆ ಅರಳಬೇಕಾದರೆ ಮುಕ್ತ ವಾತಾವರಣ ಬೇಕು. ಚರ್ಚೆ, ಸಂವಾದ ಇದ್ದ ಕಡೆ ಹೊಸ ಹೊಸ ವಿಚಾರಗಳು ಹುಟ್ಟಿಕೊಳ್ಳುತ್ತವೆ. ಅಂತಹ ಚಿಂತನೆಗಳನ್ನು ಬಳಸಿಕೊಳ್ಳುವುದಕ್ಕೆ ಉದ್ದಿಮೆಗಳು ಕ್ರಿಯಾಶೀಲವಾಗಬೇಕು. ಇವೆಲ್ಲಕ್ಕೂ ಪ್ರಜಾಸತ್ತೆ ಭದ್ರ ಬುನಾದಿಯನ್ನು ಒದಗಿಸುತ್ತದೆ. ಹಾಗಾಗಿ, ಭಾರತದ ಭವ್ಯ ಆರ್ಥಿಕತೆಯ ಕನಸು ನನಸಾಗಬೇಕಾದರೆ ನಮ್ಮ ಪ್ರಜಾಸತ್ತಾತ್ಮಕ ಸಂಸ್ಥೆಗಳು ಬಲಗೊಳ್ಳುತ್ತಾ ಹೋಗಬೇಕು ಹಾಗೂ ಅಧಿಕಾರ ಹೆಚ್ಚೆಚ್ಚು ವಿಕೇಂದ್ರೀಕರಣಗೊಳ್ಳುತ್ತಾ ಹೋಗಬೇಕು ಎನ್ನುತ್ತಾರೆ ರಾಜನ್-ರೋಹಿತ್.

ಅವರು ಪ್ರಾರಂಭಿಸಿರುವ ಸಂವಾದ ತೀರಾ ಸಕಾಲಿಕವಾದದ್ದು. ನಿಜ, ಅವರು ಎತ್ತಿರುವ ಎಲ್ಲಾ ಆರ್ಥಿಕ ಪ್ರಶ್ನೆಗಳು ನಮ್ಮ ನಿಮ್ಮೆಲ್ಲರ ಪ್ರಶ್ನೆಗಳು. ಅವನ್ನು ಯಾರಿಗೋ ನಿರ್ಧರಿಸಲು ಬಿಡಬಾರದು. ನಾವು, ಭವಿಷ್ಯದ ಆರ್ಥಿಕತೆಯ ಆಗುಹೋಗುಗಳನ್ನು ನೋಡುವ ಪ್ರೇಕ್ಷಕರಷ್ಟೇ ಅಲ್ಲ, ನಿರ್ಮಾಪಕರೂ ಹೌದು.

ವೇಣುಗೋಪಾಲ್‌
ವೇಣುಗೋಪಾಲ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT