ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ಸೋರುತಿಹುದು ಮನೆಯ ಮಾಳಿಗೆ

ಹಿಂದಕ್ಕೆ ಚಲಿಸುತ್ತಿದೆಯೇ? ಹೊಸ ಪಾಳೇಗಾರರ ಅಟ್ಟಹಾಸಕ್ಕೆ ಶರಣಾಗುತ್ತಿರುವ ಸೂಚನೆಗಳೇ?
Published 28 ಡಿಸೆಂಬರ್ 2023, 0:07 IST
Last Updated 28 ಡಿಸೆಂಬರ್ 2023, 0:07 IST
ಅಕ್ಷರ ಗಾತ್ರ

‘ಕತ್ತಿ ಪರದೇಶಿಯಾದರೆ ಮಾತ್ರ ನೋವೆ? ನಮ್ಮವರೆ ಹದಹಾಕಿ ತಿವಿದರದು ಹೂವೆ?’ ಕುವೆಂಪು ಅವರ ಕವಿತೆಯ ಸಾಲು, ನಾಡು ಸ್ವತಂತ್ರವಾಗುವುದು ಎಷ್ಟು ಮುಖ್ಯವೋ ಅಷ್ಟೇ ಮುಖ್ಯವಾದುದು ಅದು ನಿರ್ಮಿಸಿ ಕೊಳ್ಳುವ ಸಾಮಾಜಿಕ ಬದುಕು ಎಂಬುದನ್ನು ಅತ್ಯಂತ ಖಚಿತವಾಗಿ ಹೇಳುತ್ತದೆ. ಸಾಮಾಜಿಕ ಬದುಕೇ ಅಸಮ ತೆಯ ಕೆಸರಿನಲ್ಲಿ ಮುಳುಗಿದ್ದರೆ ಯಾವ ರಾಜಕೀಯ ಸ್ವಾತಂತ್ರ್ಯ ಇದ್ದು ಏನು ಫಲ? ಒಲಿಂಪಿಕ್‍ ಕೂಟದಲ್ಲಿ ದೇಶದ ಕೀರ್ತಿಪತಾಕೆ ಹಾರಿಸಿದ ಸಾಧಕರ ಅಹವಾಲುಗಳನ್ನೇ ಕೇಳದ ಮೇಲೆ ಇನ್ನು ಉಳಿದವರ ಪಾಡೇನು? ಕೊನೆಗೂ ಸಾಕ್ಷಿ ಮಲಿಕ್ ಒಬ್ಬ ‘ಹೆಣ್ಣು’ ಮಾತ್ರ ಆಗುತ್ತಾ, ಹೆಣ್ಣು ಬಾಯಿಬಿಟ್ಟರೆ ಮಣ್ಣಾಗುತ್ತಾಳೆ ಎಂಬ ಎಚ್ಚರಿಕೆಯನ್ನು ಇಡೀ ದೇಶಕ್ಕೇ ಕೊಡುತ್ತಿರುವ ಅಪಾಯವನ್ನು ಅರಿಯದ ನಮ್ಮ ಅಸಂಖ್ಯ ‘ಮುಗ್ಧರು’ ಒಂದೋ ಬಾಯಿ ಮುಚ್ಚಿಕೊಂಡಿದ್ದಾರೆ, ಇಲ್ಲವೇ ಅವಳ ವಿರುದ್ಧ ವಾದ ಮಾಡುವ ‘ಸೇವೆ’ಯಲ್ಲಿ ತೊಡಗಿಕೊಂಡಿದ್ದಾರೆ.

ಸಾಕ್ಷಿ ಮತ್ತಿತರರು ಎತ್ತಿರುವ ಪ್ರಶ್ನೆ ಯಾವ ಕಾರಣಕ್ಕೂ ವೈಯಕ್ತಿಕವಾದುದಲ್ಲ. ಯಾವುದೇ ಆಟದಲ್ಲಿ ತೊಡಗಿಸಿ ಕೊಂಡಿರುವ ಯಾವುದೇ ಮಗುವಿನ ಕೂದಲೂ ಕೊಂಕದಂತೆ ನೋಡಿಕೊಳ್ಳುವ ಹೊಣೆಗಾರಿಕೆ ದೇಶದ ಆಳುವವರದು ಮತ್ತು ಪ್ರಜೆಗಳದೂ ಆಗಿದೆ. ಇಲ್ಲವಾದಲ್ಲಿ ಎಲ್ಲಿ ನಮ್ಮ ರಾಷ್ಟ್ರಗೀತೆ ಮೊಳಗಿದರೇನು? ಅದರ ಹಿಂದೊಂದು ಶೋಕಗೀತೆ ಇರುವುದಾದರೆ? ಇಷ್ಟು ಜನ ಸಂಖ್ಯೆಯ ಅಪಾರ ಪ್ರತಿಭಾವಂತರ ಈ ನೆಲದಲ್ಲಿ ಅಂಜಿಕೆ, ಅಡೆತಡೆ, ತರತಮಗಳಿಲ್ಲದ ಸಾಮಾಜಿಕತೆಯು ಇದ್ದಿದ್ದೇ ಆಗಿದ್ದರೆ ಭಾರತ ಸದಾ ಮೊದಲ ಸ್ಥಾನದಲ್ಲೇ ಇರುತ್ತಿರಲಿ ಲ್ಲವೇ? ಮೆಡಲು ತಂದುಕೊಡುತ್ತಿರುವ ಈ ಬಡಮಕ್ಕಳ ಕತ್ತಿನ ಮೇಲೆ ಕಾಲಿಟ್ಟಿರುವ ಮತಿಹೀನರ ಬಗೆಗೆ ಇಡೀ ದೇಶಕ್ಕೇ ಭಯವೇ? ಪ್ರಚಂಡ ನಾಯಕರಿಗೂ ನಡುಕವೇ?

ದೇಶಭಕ್ತಿಯನ್ನು ಕಾರ್ಡಿನಂತೆ ಚಲಾಯಿಸುವವರಿಗೆ ದೇಶೀಯರನ್ನೇ ದೇಶದ್ರೋಹಿಗಳಾಗಿಸುವಲ್ಲಿರುವ ಅಮಿತ ಉತ್ಸಾಹದ ಹಿಂದಿರುವುದು ದೇಶಹಿತವಲ್ಲ, ಸ್ವಹಿತ ಎಂಬುದಿನ್ನೂ ಯಾಕೆ ಅರಿವಿಗೆ ಬರುತ್ತಿಲ್ಲ? ‘ಮಾನವೀಯತೆಯಿಲ್ಲದ ರಾಷ್ಟ್ರೀಯತೆಯನ್ನು ನಾನು ಒಪ್ಪುವುದಿಲ್ಲ’ ಎಂದು ರವೀಂದ್ರನಾಥ ಟ್ಯಾಗೋರ್ ಹೇಳುತ್ತಾರೆ. ಇದೊಂದು ಸರಳ ಹೇಳಿಕೆಯಲ್ಲ ಎಂಬುದಕ್ಕೆ ಇಂದು ಜಗತ್ತಿನಲ್ಲಿ ನಡೆಯುತ್ತಿರುವ ವಿದ್ಯಮಾನಗಳೇ ನಿದರ್ಶನ.

ರಾಷ್ಟ್ರೀಯತೆಯು ಅಸ್ತ್ರವಾದಾಗ ಅದು ಎಲ್ಲರ ಕೈಗೆ ಸಿಗುವ ಯಜಮಾನಿಕೆಯಾಗಿ ಬದಲಾಗುತ್ತದೆ. ಆ ಯಜ ಮಾನಿಕೆಯ ಮತ್ತು ಏರಿದಾಗ ಅಲ್ಲಿ ಕರುಣೆ, ಮೈತ್ರಿಗೆ ಅವಕಾಶವಾಗಲೀ ಅರ್ಥವಾಗಲೀ ಇರುವುದಿಲ್ಲ. ಎಲ್ಲೋ ಕೆಲವರು ಅಂತಃಕರಣದಿಂದ ಮಿಡಿಯುವ, ಸಹಾಯ ಮಾಡುವ ಸಂಗತಿಗಳು ಅಪರೂಪದಲ್ಲಿ ಕಾಣಿಸಬಹುದು. ಉಳಿದಂತೆ ಜನಸಾಮಾನ್ಯರೂ ದಡ್ಡುಗಟ್ಟಿ ಹೋಗುತ್ತಾರೆ. ಹೆಂಗಸರೂ ಈ ಉನ್ಮಾದವನ್ನು ಆಘ್ರಾಣಿಸತೊಡಗುತ್ತಾರೆ. ಸಮೂಹ ಸನ್ನಿಯ ಸನ್ನಿವೇಶ ನಿರ್ಮಾಣವಾಗಿ ಅದು ಅವರಿಗೆ ಭದ್ರತೆಯ ಭ್ರಮೆಯನ್ನು ಹುಟ್ಟುಹಾಕತೊಡಗುತ್ತದೆ. ಈಗಷ್ಟೇ ಹುಟ್ಟಿದ ಮಗುವೂ ಅವರಲ್ಲಿ ಮೃದುತ್ವವನ್ನು ಹುಟ್ಟಿಸಲಾರದಷ್ಟು ಅಮಾನುಷತೆಯು ರಕ್ತಗತವಾಗುವ ಪರಿಯ ಅಗಾಧತೆಯನ್ನು ಅಂದಾಜಿಸಬಹುದು.

ಪ್ಯಾಲೆಸ್ಟೀನ್ ಸಿನಿಮಾ ‘ಫರಾ’ದಲ್ಲಿ ಒಂದು ದೃಶ್ಯ ಬರುತ್ತದೆ. 1948ರಲ್ಲಿ ಪ್ಯಾಲೆಸ್ಟೀನಿಯನ್ನರ ಮನೆ ಮನೆಯನ್ನೂ ಆಕ್ರಮಿಸಿ, ನಿಶ್ಶಸ್ತ್ರಗೊಳಿಸಿ ಅಟ್ಟಲಾಗುತ್ತದೆ. ದಾಳಿಗೆ ಸಿಲುಕಿದ ತುಂಬು ಗರ್ಭಿಣಿಯು ತನ್ನ ಗಂಡ, ಇಬ್ಬರು ಹೆಣ್ಣುಮಕ್ಕಳೊಂದಿಗೆ ಓಡುವಾಗ ಹೆರಿಗೆ ನೋವು ಕಾಣಿಸಿಕೊಳ್ಳುತ್ತದೆ. ಸುರಕ್ಷಿತ ಎನಿಸಿದ ಖಾಲಿ ಮನೆಯೊಂದರೊಳಗೆ ಗಂಡನ ಸಹಾಯದಿಂದ ಹೆರಿಗೆಯಾಗಿ ಗಂಡುಮಗುವೊಂದು ಜನಿಸುತ್ತದೆ. ಇಸ್ರೇಲ್‍ ಪಡೆ ಅಲ್ಲಿಗೂ ನುಗ್ಗುತ್ತದೆ. ಅವರು ಅಡಗಿಕೊಂಡರೂ ಉಪಯೋಗವಾಗದೆ ಸಾಲಾಗಿ ನಿಲ್ಲಿಸಿ ಶೂಟ್‍ ಮಾಡುತ್ತಾರೆ. ಅವರಲ್ಲಿ ಒಬ್ಬ ಹೆಂಗಸೂ ಇರುತ್ತಾಳೆ. ಅವಳಿಗೆ ಕರುಣೆಯ ಪಸೆಯೂ ಇರುವುದಿಲ್ಲ.

ಹುಟ್ಟಿದ ಮಗುವಿಗೇಕೆ ಒಂದು ಬುಲೆಟ್ ವೇಸ್ಟ್ ಮಾಡುವುದು, ಹಾಗೇ ಕೊಲ್ಲು ಎಂದು ಸೈನಿಕನಿಗೆ ಸೀನಿಯರ್ ಆದೇಶಿಸುತ್ತಾನೆ. ಅವನಿಗೆ ಕಷ್ಟವೆನಿಸಿ ಮಗುವಿನ ಮೇಲೆ ತನ್ನ ಕರ್ಚೀಫ್ ಹೊದೆಸಿ ಹಾಗೇ ಬಿಟ್ಟು ಹೋಗುತ್ತಾನೆ. ಅದು ಅಲ್ಲೇ ಬಿಸಿಲಲ್ಲಿ ಅತ್ತು ಅತ್ತು ಸತ್ತುಹೋಗುತ್ತದೆ. ಅವರದೇ ದೇಶದಲ್ಲಿ, ಅವರುಗಳದೇ ಮನೆಗಳಲ್ಲಿ ಅವರುಗಳೇ ಅನಾಥರಾದ ‘ನಕ್ಬಾ’ ಎಂಬ ಹೆಸರಿನ ಆಕ್ರಮಣದ ಸಂದರ್ಭವಿದು. ಈ ಆಕ್ರಮಣ ಮಾಡಿದ ಇಸ್ರೇಲಿಗರಿಗೆ ಜಗತ್ತು ಇಂದು ಹೆದರುತ್ತಿದೆ! ಅವರು ಕೇಳದಿದ್ದರೂ, ಯಾಚಿಸದಿದ್ದರೂ ಸಹಾಯಹಸ್ತ ಚಾಚಿ ನಿಂತಿದೆ! ಇಂತಹ ಮನಃಸ್ಥಿತಿಯಲ್ಲಿ ನಾವೂ ಇರುವಾಗ ಸಾಕ್ಷಿ ಮಲಿಕ್, ಬಜರಂಗ್‌ ಪೂನಿಯಾ ಅವರಿಗೆ ಬೆಂಬಲ ಬರುವುದಾದರೂ ಎಲ್ಲಿಂದ?

ನಾವು ಸದಾ ಸುಳ್ಳುಗಳನ್ನೇ ವೈಭವೀಕರಿಸಿ ಬದುಕುವುದನ್ನು ಇಷ್ಟಪಡುತ್ತೇವೆ. ಆದರೆ ಸತ್ಯ ಹೇಳಿದ ಕೂಡಲೇ ಶತ್ರುಗಳಾಗಿಬಿಡುತ್ತೇವೆ. ಸಮಾಜದಲ್ಲಿನ ಅಧಿಕಾರದ ಸ್ಥಾನಗಳನ್ನು ಹಿಡಿದಿದ್ದ ಕೆಲವೇ ಕೆಲವು ಜಾತಿಯ ಜನರು ಅಧಿಕಾರಹೀನ ಜಾತಿಯ ಹೆಂಗಸರನ್ನು ಹೇಗೆ ನಡೆಸಿಕೊಂಡಿದ್ದರು ಎಂಬ ಇತಿಹಾಸವನ್ನೇ ಮರೆಮಾಚಿ, ಇನ್ನೊಂದು ಧರ್ಮದ ಕತೆಗಳನ್ನು ಮುನ್ನೆಲೆಗೆ ತರುತ್ತೇವೆ. ದೇವನೂರ ಮಹಾದೇವ ಅವರ ‘ಮಾರಿಕೊಂಡವರು’ ಕತೆಯನ್ನು ಮತ್ತೊಮ್ಮೆ ಓದಿ ನೋಡಿ. ಬಡತನದ ದಳ್ಳುರಿಯಲ್ಲಿ ಬೆಂದ ಜನ ಹಸಿವಿನಲ್ಲಿ ಬೇಯುವುದಷ್ಟೇ ಅಲ್ಲ ಜೊತೆಗೇ ಹೆಂಗಸರ ದೇಹದ ಮೇಲೆ ಅಧಿಕಾರಸ್ಥ ಜಾತಿಗಳ ಗಂಡಸರು ಮಾಡುವ ಆಕ್ರಮಣಗಳನ್ನೂ ಮೌನವಾಗಿ ಸಹಿಸಿಕೊಳ್ಳಬೇಕಾದ ಅಸಹಾಯಕತೆಯನ್ನು ಬಡ ಹೆಂಗಸರು ಮತ್ತು ಗಂಡಸರ ಮೇಲೆ ಹೇರಿರುತ್ತಾರೆ. ತಮ್ಮ ಸ್ವಾಭಿಮಾನವನ್ನೇ ಮಾರಿಕೊಳ್ಳುವ ಒತ್ತಡದಲ್ಲಿದ್ದವರು ಕಾಲಾಂತರ ದಲ್ಲಿ ಸರ್ಕಾರದ ಕೆಲವು ಯೋಜನೆಗಳ ಫಲವಾಗಿ ಅಕ್ಷರವನ್ನೂ ಅನ್ನವನ್ನೂ ಆ ಮೂಲಕ ತಕ್ಕಮಟ್ಟಿನ ಸ್ವಾವಲಂಬನೆಯನ್ನೂ ಸಾಧಿಸಲು ಸಾಧ್ಯವಾಯಿತು.

ಹಿಂದೂ ಹೆಂಗಸರ ಮೇಲಿನ ಈ ಹಿಂದೂ ಗಂಡಸರ ಆಕ್ರಮಣಗಳ ಇತಿಹಾಸವನ್ನು ಮರೆಮಾಚಿ ಹೊಸ ಕತೆ ಕಟ್ಟುತ್ತಿರುವವರು ಧರ್ಮವನ್ನು ಮತ್ತೆ ಯಜಮಾನಿಕೆಯ ಅಸ್ತ್ರವಾಗಿಸಿ, ಇದೇ ಬಡ ಹಿಂದೂಗಳನ್ನು ತಮ್ಮ ದಾಳಗಳಾಗಿಸಿಕೊಳ್ಳಲು, ಕಾಲಾಳುಗಳನ್ನಾಗಿಸಿಕೊಳ್ಳಲು ಬಲೆ ಹೆಣೆಯುತ್ತಿದ್ದು ಅದರಲ್ಲಿ ಯಶಸ್ವಿಯೂ ಆಗುತ್ತಿದ್ದಾರೆ. ಇಂದು ಇವರು ಇದಕ್ಕಾಗಿ ಬೇರೆ ಧರ್ಮದವರನ್ನು ಶತ್ರು ಸ್ಥಾನದಲ್ಲಿ ನಿಲ್ಲಿಸುತ್ತಿದ್ದಾರೆ.

ಮಣಿಪುರ ಎಂಬ ಪುರಾತನ ಪರಂಪರೆಯ ನಾಡು ಇವರಿಗೀಗ ನೆನಪಿಗೇ ಬರುವುದಿಲ್ಲ. ಮಣಿಪುರವಾದರೇನು? ಬೆಳಗಾವಿಯ ಹೊಸ ವಂಟಮೂರಿ ಆದರೇನು? ಎರಡೂ ಅಕ್ಷಮ್ಯ, ನಾಚಿಕೆಗೇಡಿನ ಪ್ರಕರಣಗಳೇ. ಆದರೆ ಬೆಳಗಾವಿಗೆ ಓಡೋಡಿ ಬಂದು ಅಲ್ಲಿನ ಲೈಟುಕಂಬಗಳನ್ನು ಪರಿಶೀಲಿಸುವ, ಉಡುಪಿಗೆ ಬಂದು ಶೌಚಾಲಯದಲ್ಲಿ ಕ್ಯಾಮೆರಾ ಹುಡುಕುವ ಟಾಸ್ಕ್‌ಗಳನ್ನು ತಲೆಮೇಲೆ ಹೊತ್ತ ಸೊಫಿಸ್ಟಿಕೇಟೆಡ್ ಹೆಂಗಸರನ್ನು ನೋಡುವಾಗ ನನಗೆ ಇನ್ನೊಂದು ಪ್ಯಾಲೆಸ್ಟೀನಿ ಸಿನಿಮಾ ನೆನಪಾಗುತ್ತಿದೆ. ‘3000 ನೈಟ್ಸ್’ ಎಂಬ ಈ ಸಿನಿಮಾದಲ್ಲಿ ನವವಿವಾಹಿತ ನಿಷ್ಪಾಪಿ ಪ್ಯಾಲೆಸ್ಟೀನ್ ಯುವತಿಯನ್ನು ಜೈಲಿಗೆ ತಳ್ಳುತ್ತಾರೆ. ಅವಳು ಗರ್ಭಿಣಿ ಎಂಬುದು ಆ ನಂತರ ಗೊತ್ತಾಗುತ್ತದೆ. ಗರ್ಭಪಾತಕ್ಕೆ ಒಪ್ಪದೆ ಅಲ್ಲಿಯೇ ಹೆತ್ತು ಬೆಳೆಸಲು ಆಕೆ ನಿರ್ಧರಿಸುತ್ತಾಳೆ. ಗಂಡುಮಗು ಜನಿಸಿದಾಗ ಜೈಲಿನ ಹೆಂಗಳೆಯರಲ್ಲೊಂದು ಸಂಚಲನ ಆಗುತ್ತದೆ. ಆದರೆ ಇಸ್ರೇಲಿ ಕೈದಿ ಹೆಂಗಸರು, ‘ಇನ್ನೊಬ್ಬ ಭಯೋತ್ಪಾದಕನನ್ನು ಹುಟ್ಟಿಸಿದೆಯಾ?’ ಎಂದು ಅರಚುವುದನ್ನೂ ಇಸ್ರೇಲ್ ಸ್ತ್ರೀ ಪೊಲೀಸ್ ಅಧಿಕಾರಿಗಳು ಅತ್ಯಂತ ಕ್ರೂರವಾಗಿ ಹೆಂಗಸರನ್ನು ನಡೆಸಿಕೊಳ್ಳುವು
ದನ್ನೂ ನೋಡಿದಾಗ, ಮಾನವೀಯತೆ ಎಂಬುದರ ಅರ್ಥವಾದರೂ ಏನು ಎಂಬ ದೊಡ್ಡ ಪ್ರಶ್ನೆ ಹುಟ್ಟಿ
ಕೊಳ್ಳುತ್ತದೆ.

ನಮ್ಮಲ್ಲೇ ಮುಸ್ಲಿಂ ಹೆಂಗಸರನ್ನು ಅತ್ಯಂತ ಹೀನಾಯ ವಾಗಿ ಲೇವಡಿ ಮಾಡುವ ಅಸಹ್ಯ ಭಾಷಣಕಾರರು ತಮ್ಮದೇ ಧರ್ಮದ ಹೆಂಗಸರನ್ನು ಗೌರವಿಸಲು ಸಾಧ್ಯವೇ? ಸಾಕ್ಷಿ ಮಲಿಕ್ ವ್ಯವಸ್ಥೆಗೆ ಶರಣಾಗಬೇಕೆಂದು ಬಯಸುವವರು ಹೆಣ್ಣಿನ ದೇಹದ ಘನತೆಯನ್ನು ಗೌರವಿ ಸುತ್ತಾರೆ ಎಂದು ನಿರೀಕ್ಷಿಸಬಹುದೇ? ಇವೆಲ್ಲವೂ ಇವರಿಗೆ ಜಾತಿ, ಧರ್ಮ, ಪ್ರದೇಶ, ಪಕ್ಷದಂತಹ ‘ಲಾಭ’ಗಳೊಂದಿಗೆ ತಗಲುಹಾಕಿಕೊಂಡಿರುವ ಅಂತಃಸಾಕ್ಷಿಯಿಲ್ಲದ ಬಾಹ್ಯ ಚರ್ಮಗಳು ಅಷ್ಟೇ. ಆದರೆ ದೇಶದ ಕೀರ್ತಿಪತಾಕೆಯನ್ನು ಬಾನೆತ್ತರಕ್ಕೆ ಏರಿಸಲು ಸಾಕ್ಷಿ ಮಲಿಕ್‍ಳ ಪಾದ ಗಳನ್ನು ಪೊರೆದ ಬೂಟುಗಳು ಈ ದೇಶ ಎಚ್ಚರಿಕೆಯಿಂದ ಗಮನಿಸಬೇಕಾದ ಹೊಸ ರೂಪಕಗಳು. ಈ ಅರಿವು ನಮ್ಮನ್ನು ಪೊರೆಯಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT