ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಳಿ ಹೊಗೆಯ ಗೂಡಿಗೆ: ಗುರುರಾಜ್ ಎಸ್. ದಾವಣಗೆರೆ ಅವರ ಲೇಖನ

ಪರಿಸರಸ್ನೇಹಿ ಸೌರ ಒಲೆಗಳ ಬಳಕೆಗೆ ಒತ್ತು ನೀಡಬೇಕಾದ ಅಗತ್ಯ ಇದೆ
Last Updated 7 ಏಪ್ರಿಲ್ 2023, 21:00 IST
ಅಕ್ಷರ ಗಾತ್ರ

ಆಂಧ್ರಪ್ರದೇಶದ ಶೇಂಗಾ ಬೆಳೆಗಾರ ಚಂದ್ರಶೇಖರ ರೆಡ್ಡಿ, ಹರಿಯಾಣದ ಗೃಹಿಣಿ ಗೀತಾ, ಗಾಜಿಯಾಬಾದ್‍ನ ಸ್ವಚ್ಛತಾ ಕಾರ್ಮಿಕ ನರೇಶ್, ಸಾಗರದ ರೈತ ಮಹೇಶ ಇವರೆಲ್ಲರಿಗೂ ಈಗ ಅಡುಗೆ ಅನಿಲ ಕೊಳ್ಳಲು ದುಡ್ಡು ಹೊಂದಿಸುವುದೇ ತಾಪತ್ರಯ. ಅಡುಗೆ ಅನಿಲದ ಬೆಲೆ ಸಿಲಿಂಡರಿಗೆ ಸಾವಿರ ರೂಪಾಯಿ ದಾಟಿರುವುದರಿಂದ ಇವರೆಲ್ಲ ಅಡುಗೆ ಸೇರಿದಂತೆ ಗೃಹಕೃತ್ಯಗಳಿಗೆ ಒಣ ಕಟ್ಟಿಗೆಯನ್ನೇ ಉರುವಲನ್ನಾಗಿ ಬಳಸುವ ನಿರ್ಧಾರ ಮಾಡಿದ್ದಾರೆ. ಯಾವ ಹೊಗೆಯಿಂದ ಬಿಡುಗಡೆ ಪಡೆದಿ ದ್ದರೋ ಅದೇ ಹೊಗೆಯ ವಿಷವರ್ತುಲಕ್ಕೆ ಮತ್ತೆಸಿಕ್ಕಿಹಾಕಿಕೊಳ್ಳುತ್ತಿದ್ದಾರೆ. ಹಳ್ಳಿಗಾಡಿನ ಜನರ ಶ್ವಾಸಕೋಶಗಳು ಅನಾರೋಗ್ಯಕರ ಹೊಗೆಯಿಂದ ತುಂಬಿಹೋಗಲಿವೆ.

ಅರಣ್ಯದಂಚಿನ ಊರುಗಳ ಜನ ಕಾಡಿನ ಕಟ್ಟಿಗೆ ಯನ್ನೇ ಮನೆಯ ಕೆಲಸಗಳಿಗೆ ಉರುವಲನ್ನಾಗಿ ಬಳಸು ತ್ತಿದ್ದ ಕಾಲವಿತ್ತು. ಕೆಲವೆಡೆ ಈಗಲೂ ಇದೆ. ಒಣಮರ, ಮರದ ಟೊಂಗೆ, ಎಲೆಗಳು, ಕೆರೆ ಏರಿಯ ಜಾಲಿಮರದ ತುಂಡುಗಳನ್ನು ಉರುವಲನ್ನಾಗಿ ಉಪಯೋಗಿಸುವ ದೊಡ್ಡ ಜನಸಂಖ್ಯೆ ದೇಶದಲ್ಲಿತ್ತು. ಬಯಲುಸೀಮೆ, ಮಲೆನಾಡಿನ ಮನೆಗಳಲ್ಲಿ ಬೆಲ್ಲ ತಯಾರಿಸಲು, ಅಡುಗೆಗೆ, ಸ್ನಾನಕ್ಕೆ ನೀರು ಕಾಯಿಸಲು ಕಟ್ಟಿಗೆಯ ಬಳಕೆ ಯಥೇಚ್ಛವಾಗಿ ನಡೆಯುತ್ತಿತ್ತು. ಮಳೆಗಾಲದ ದಿನಗಳಲ್ಲಿ ಒಣಗಿದ ಕಟ್ಟಿಗೆ ಸಿಗುವುದಿಲ್ಲ ಎಂಬ ಕಾರಣಕ್ಕಾಗಿ, ಮಳೆ ಗಾಲ ಮುಗಿಯುವವರೆಗೆ ಬೇಕಾಗುವಷ್ಟು ಕಟ್ಟಿಗೆ, ತೆಂಗಿನ ಸೋಗೆ, ಚಿಪ್ಪುಗಳನ್ನು ಕೂಡಿಡಲಾಗುತ್ತಿತ್ತು. ಯಾವಾಗ ನೈಸರ್ಗಿಕ ಅನಿಲವನ್ನು ಸಿಲಿಂಡರ್‌ಗಳಲ್ಲಿ ತುಂಬಿ ಅಡುಗೆ ಮನೆಗಳಲ್ಲಿ ಬಳಸುವ ಪದ್ಧತಿ ಆರಂಭವಾಯಿತೋ ಆಗ ಕಾಡಿನ ಮರಗಿಡಗಳ ಮೇಲಿನ ಒತ್ತಡ ಸ್ವಲ್ಪ ಮಟ್ಟಿಗೆ ಕಡಿಮೆಯಾಯಿತು.

ಕೋವಿಡ್ ಸಾಂಕ್ರಾಮಿಕಕ್ಕಿಂತ ಮುಂಚೆ, ದೇಶದಲ್ಲಿ ಅಡುಗೆ ಅನಿಲ ಬಳಸುತ್ತಿದ್ದ ಪ್ರತೀ ಕುಟುಂಬವೂ ಇದಕ್ಕಾಗಿ ದಿನವೊಂದಕ್ಕೆ ಕನಿಷ್ಠ ₹ 15ನ್ನು ಖರ್ಚು ಮಾಡುತ್ತಿತ್ತು. ಈಗ ಎರಡು ಪಟ್ಟು ಖರ್ಚು ಮಾಡ ಬೇಕಿದೆ. ತಮಿಳುನಾಡು ಮತ್ತು ಕರ್ನಾಟಕದಲ್ಲಿ ಗೃಹ ಬಳಕೆಗಾಗಿ ಕಡಿಮೆ ಇಂಧನ ಬಳಸುವ ಅಡುಗೆ ಒಲೆ ಒದಗಿಸುತ್ತಿರುವ ‘ಸಸ್ಟೇನ್‌ಟೆಕ್ ಇಂಡಿಯಾ ಪ್ರೈವೇಟ್ ಲಿಮಿಟೆಡ್’ನ ಸ್ವಾತಿ ಭೋಗ್ಲೆ, ಕೋವಿಡ್ ನಂತರದ ದಿನಗಳಲ್ಲಿ ಬಹುತೇಕ ಕೃಷಿ ಕಾರ್ಮಿಕರ ಕುಟುಂಬಗಳ ತಲಾದಾಯ ತುಂಬಾ ಕಡಿಮೆಯಾಗಿದೆ, ಅಡುಗೆ ಅನಿಲದ ದರ ಏರಿಕೆ ಬಹುತೇಕ ಕುಟುಂಬಗಳಿಗೆ ನಿಲುಕದ ಖರ್ಚೇ ಆಗಿದೆ ಎನ್ನುತ್ತಾರೆ.

ಒಂದು ಲೆಕ್ಕಾಚಾರದ ಪ್ರಕಾರ, ಹಳ್ಳಿಯ ಜನ ತಮ್ಮ ಆದಾಯದ ಶೇ 6.7ರಷ್ಟನ್ನು ಅಡುಗೆ ಅನಿಲಕ್ಕಾಗಿ ಖರ್ಚು ಮಾಡುತ್ತಾರೆ. ಇದು ಅಡುಗೆ ಅನಿಲದ ಬಳಕೆ ಪ್ರಾರಂಭಿ ಸುವುದಕ್ಕಿಂತ ಮುಂಚಿನ ಖರ್ಚಿಗಿಂತ ಶೇ 40ರಷ್ಟು ಹೆಚ್ಚು. ಎರಡು ವರ್ಷಗಳ ಹಿಂದೆ ₹ 580ರಷ್ಟಿದ್ದ ಎಲ್‍ಪಿಜಿ ಸಿಲಿಂಡರ್‌ನ ಬೆಲೆ ಈಗ ₹ 1,000 ದಾಟಿದೆ. ತಮಿಳುನಾಡಿನ ಕೆಲವು ಪಟ್ಟಣಗಳಲ್ಲಿ ಆರ್ಥಿಕವಾಗಿ ಹಿಂದುಳಿದ ಜನ ಈಗಲೂ ಅಡುಗೆಗಾಗಿ ಸೀಮೆಎಣ್ಣೆ ಬಳಸುತ್ತಿದ್ದಾರೆ. ಸಾರ್ವಜನಿಕ ಪಡಿತರ ಅಂಗಡಿಗಳಲ್ಲಿ
₹ 15ಕ್ಕೆ ಒಂದು ಲೀಟರ್ ಸೀಮೆಎಣ್ಣೆ ದೊರಕುತ್ತದೆ. ಇದೇ ಸೀಮೆಎಣ್ಣೆ ಕಾಳಸಂತೆಯಲ್ಲಿ ₹ 100- 120ಕ್ಕೆ ಒಂದು ಲೀಟರ್‌ನಂತೆ ಮಾರಾಟವಾಗುತ್ತಿದೆ.

ನಿಶ್ಚಿತ ಆದಾಯವಿರದ ರೈತರು, ಕೂಲಿ ಕಾರ್ಮಿಕರು ಒಣಸೌದೆಯನ್ನು ಬಳಸುತ್ತಾರೆ. ಬಿಹಾರ, ಉತ್ತರ
ಪ್ರದೇಶದ ಗ್ರಾಮೀಣ ಜನರು ದನದ ಸೆಗಣಿಯಿಂದ ಮಾಡಿದ ಕುರುಳನ್ನು ಸುಟ್ಟು ಅಡುಗೆ ಮಾಡುತ್ತಾರೆ. ಉತ್ತರ ಭಾರತದ ಅನೇಕ ಮನೆಗಳಲ್ಲಿ ಅಡುಗೆಗೆ ಈಗಲೂ ಕಟ್ಟಿಗೆಯೇ ಉರುವಲಾಗಿದೆ. ಇದು ಅಪಾರ ಪ್ರಮಾಣದ ಹೊಗೆ ಹೊಮ್ಮಿಸುವುದರಿಂದ ಶ್ವಾಸಕೋಶಕ್ಕೆ ದೊಡ್ಡಮಟ್ಟದ ಹಾನಿಯಾಗುತ್ತಿದೆ.

ದೆಹಲಿಯ ಅಬ್ಸರ್ವರ್ ರಿಸರ್ಚ್ ಫೌಂಡೇಶನ್ ಪ್ರಕಾರ, ಹಿಂದಿನ ಎಂಟು ವರ್ಷಗಳ ಅವಧಿಯಲ್ಲಿ ಅಡುಗೆ ಅನಿಲದ ಬೆಲೆ ದುಪ್ಪಟ್ಟಾಗಿದೆ. ಈ ಅವಧಿಯಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಶೇ 48ರಷ್ಟು ಕಡಿಮೆಯಾದರೂ ನಮ್ಮಲ್ಲಿ ಏರಿಕೆ ಕಂಡ ಬೆಲೆಯೇ ಮುಂದುವರಿದಿದೆ. ಆರ್ಥಿಕ ಅನುಕೂಲ ಇರುವ ವರಿಗೆ ಸಿಲಿಂಡರ್‌ ಬೆಲೆ ಏರಿಕೆಯು ಹೆಚ್ಚಿನ ಹೊರೆ ಅನಿಸದೇ ಇರಬಹುದು. ಆದರೆ ಉಳಿದವರಿಗೆ ಸಂಕಷ್ಟ ಎದುರಾಗಿದೆ.

ಸರ್ಕಾರಿ ಲೆಕ್ಕದಂತೆ, ಈಗ 9 ಕೋಟಿ ಜನರಿಗೆ ಉಚಿತ ಅಡುಗೆ ಅನಿಲ ಸಂಪರ್ಕ ನೀಡಲಾಗಿದೆ. ಆದರೆ ಇವರಲ್ಲಿ ಒಂದು ಕೋಟಿ ಜನರಿಗೆ ಇಡೀ ವರ್ಷಕ್ಕೆ ಸಿಕ್ಕ ರೀಫಿಲ್ ಸಿಲಿಂಡರ್ ಬರೀ ಒಂದು! ಗ್ಯಾಸ್‍ನ ಸಹವಾಸವೇ ಬೇಡ ಎಂದು ಎಲ್‍ಪಿಜಿ ಬದಲಿಗೆ ಸೌದೆ ಉರಿಸುವುದರಿಂದ
ಶೇ 81ರಷ್ಟು ಮಹಿಳೆಯರು ತೀವ್ರ ಕೆಮ್ಮಿನಿಂದ ಮತ್ತು
ಶೇ 65ರಷ್ಟು ಮಹಿಳೆಯರು ಕಣ್ಣುರಿಯಿಂದ ಬಳಲುತ್ತಿ ದ್ದಾರೆ ಎಂದು ಮಧ್ಯಪ್ರದೇಶದ ಸ್ವಯಂಸೇವಾ ಸಂಸ್ಥೆಯೊಂದು ವರದಿ ಮಾಡಿದೆ. ಮನೆಯೊಳಗಿನ ಮಾಲಿನ್ಯದಿಂದ ವಾರ್ಷಿಕ ಆರು ಲಕ್ಷ ಜನ ಸಾವಿಗೀಡಾಗುತ್ತಾರೆ ಎಂದು ಲ್ಯಾನ್ಸೆಟ್ ನಿಯತಕಾಲಿಕ ವರದಿ ಮಾಡಿದೆ.

ಸೌದೆ, ಅಡುಗೆ ಅನಿಲದ ಬದಲಿಗೆ ಸೌರ ಒಲೆಗಳನ್ನು ಉಪಯೋಗಿಸಲು ಬಹಳಷ್ಟು ಅವಕಾಶಗಳಿವೆ. ರೀಚಾರ್ಜ್ ಮಾಡಬಲ್ಲ ‘ಸೂರ್ಯ ನೂತನ್’ ಎಂಬ ಸೌರ ಒಲೆಯೂ ಮಾರುಕಟ್ಟೆಗೆ ಬಂದಿದೆ. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯು ನಿರ್ಮಿಸಿರುವ ಪರಿಸರ ಸ್ನೇಹಿ ‘ಅಸ್ತ್ರ’ ಒಲೆ ರಾಜ್ಯದ ಬಹುಸಂಖ್ಯೆಯ ಅಡುಗೆ ಮನೆಗಳಲ್ಲಿ ಬಳಕೆಯಲ್ಲಿದೆ. ಶಾಲೆ, ಆಸ್ಪತ್ರೆ, ಆಶ್ರಮ
ಗಳಲ್ಲೂ ಜಾಗ ಪಡೆದಿರುವ ಅಸ್ತ್ರ ಒಲೆ ಕಡಿಮೆ ಖರ್ಚು ಮತ್ತು ಹೆಚ್ಚಿನ ಅನುಕೂಲ ಒದಗಿಸುತ್ತಿದೆ.

ಸುಮಾರು 50 ವರ್ಷಗಳ ಹಿಂದೆ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಪ್ರಾರಂಭವಾದ ಅಸ್ತ್ರ (ASTRA- ಅಪ್ಲಿಕೇಶನ್ ಆಫ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ ಫಾರ್‌ ರೂರಲ್ ಏರಿಯಾಸ್) ಈಗ ಸಿಎಸ್‌ಟಿ- ಸೆಂಟರ್ ಫಾರ್ ಸಸ್ಟೇನಬಲ್ ಟೆಕ್ನಾಲಜೀಸ್‌ ಹೆಸರಿನಲ್ಲಿ ಗ್ರಾಮೀಣ ಜನರ ಬದುಕಿನ ಸುಧಾರಣೆಗೆ ಬಿಡುವಿಲ್ಲದೆ ದುಡಿಯುತ್ತಿದೆ. ಆಗ ಸಂಸ್ಥೆಯ ನಿರ್ದೇಶಕರಾಗಿದ್ದ ವಿಜ್ಞಾನಿ ಸತೀಶ್ ಧವನ್, ವಿಜ್ಞಾನದಿಂದ ಸಮಾಜಕ್ಕೆ ಹೆಚ್ಚಿನ ನೆರವು ಸಿಗಬೇಕೆಂಬ ಕಾರಣಕ್ಕೆ ಅಸ್ತ್ರ ಒಲೆ
ಪ್ರಾರಂಭಿಸಿದ್ದರು. ಈ ಒಲೆಗಳನ್ನು ಗ್ರಾಮೀಣ ಪ್ರದೇಶಕ್ಕಷ್ಟೇ ಅಲ್ಲ, ಬೆಂಗಳೂರು, ಮಂಡ್ಯದಂತಹ ನಗರಗಳ ವೃದ್ಧಾಶ್ರಮ, ಶಾಲೆ, ಹೋಟೆಲ್‌ಗಳಲ್ಲೂ ನಿರಂತರವಾಗಿ ಬಳಸಲಾಗುತ್ತಿದೆ. ಶಿರಸಿ ತಾಲ್ಲೂಕಿನ 25 ಹಳ್ಳಿಗಳ ಅನೇಕ ಮನೆಗಳಲ್ಲಿ ಸಿಎಸ್‌ಟಿಯಿಂದ ತರಬೇತಿ ಪಡೆದ ನುರಿತ ಕೆಲಸಗಾರರು ನಿರ್ಮಿಸಿರುವ ಒಲೆಗಳು ಅಡುಗೆಗೆ, ಬಿಸಿನೀರು ಕಾಯಿಸಲು ಬಳಕೆಯಾಗುತ್ತಿವೆ.

‘ಅಸ್ತ್ರ ಒಲೆ ಬಂದಾಗಿನಿಂದ ಕಾಡಿನ ಕಟ್ಟಿಗೆ ಆಯು ವುದನ್ನು ಕಡಿಮೆ ಮಾಡಿದ್ದೇನೆ’ ಎನ್ನುವ ಶಿರಸಿಯ ಚಂದ್ರಕಲಾ, ‘ಹೊಗೆ, ಘಾಟು ಇಲ್ಲದೆ ಅಡುಗೆಯಾಗು ತ್ತಿದೆ, ಪಾತ್ರೆಗಳನ್ನು ಬಿಸಿನೀರಿನಲ್ಲಿ ತೊಳೆಯುವಷ್ಟು ಸೌಕರ್ಯ ಸಿಕ್ಕಿದೆ’ ಎನ್ನುತ್ತಾರೆ. ಅಸ್ತ್ರ ಒಲೆಯಲ್ಲಿ ಮಾಡಿದ ಅಡುಗೆ ರುಚಿಯಾಗಿರುತ್ತದೆ ಮತ್ತು ಆಹಾರ ಪೋಷ ಕಾಂಶಗಳು ನಾಶಗೊಳ್ಳುವುದಿಲ್ಲ ಎನ್ನುವ ಕೆಂಗೇರಿ, ದೇವನಹಳ್ಳಿ, ಮಂಡ್ಯದ ಹೋಟೆಲ್ ಮಾಲೀಕರು, ಗ್ಯಾಸ್‌ಗಾಗಿ ಮಾಡುವ ಖರ್ಚಿನಲ್ಲಿ ಬಹಳಷ್ಟು ಹಣ
ಉಳಿತಾಯವಾಗುತ್ತದೆ ಎನ್ನುತ್ತಾರೆ.

ಭೂಮಿಯ ಬಿಸಿ ತಡೆಯುವಲ್ಲಿ ಸುಧಾರಿತ ಹಾಗೂ ಸುಸ್ಥಿರ ತಂತ್ರಜ್ಞಾನ ಬಳಸುತ್ತೇವೆ ಎಂದು ಜಾಗತಿಕ ಒಪ್ಪಂದಕ್ಕೆ ಅನುಸಾರವಾಗಿ ಮಾತು ಕೊಟ್ಟಿರುವ ನಾವು, ಅಡುಗೆ ಮನೆಯ ಪರಿಸರವನ್ನು ಶುಚಿಯಾಗಿ ಇಟ್ಟುಕೊಳ್ಳಬೇಕಿದೆ. ಸುಸ್ಥಿರ ಅಭಿವೃದ್ಧಿ ಗುರಿಗಳ ಪೈಕಿ ಶುದ್ಧ ಇಂಧನ, ಉತ್ತಮ ಆರೋಗ್ಯ, ಜೀವನಮಟ್ಟ ಸುಧಾರಣೆ ಕಡೆ ಒತ್ತು ನೀಡುವ ಕೆಲಸಗಳು ಗಂಭೀರವಾಗಿ ನಡೆಯಬೇಕಿದೆ. ಹಾಗಿದ್ದಾಗ, ಅಡುಗೆ ಅನಿಲದ ಬೆಲೆ ದುಬಾರಿ ಎಂಬ ಕಾರಣಕ್ಕಾಗಿ ಜನರು ತಮ್ಮ ಆರೋಗ್ಯ ಹಾಳು ಮಾಡುವ, ಪರಿಸರ ಮಾಲಿನ್ಯಕ್ಕೆ ಕಾರಣವಾಗುವ ಹಳೆಯ ಸಾಂಪ್ರದಾಯಿಕ ಇಂಧನ ಮೂಲಗಳತ್ತ ಮುಖ ಮಾಡುವುದನ್ನು ರಚನಾತ್ಮಕವಾಗಿ ತಡೆಯಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT