ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ | ಇತಿಹಾಸ ಪಠ್ಯ ಮತ್ತು ಶೈಕ್ಷಣಿಕ ತತ್ವ

ಶೈಕ್ಷಣಿಕ ತತ್ವಗಳ ಆಧಾರದಲ್ಲಿ ಪಠ್ಯ ರಚನೆ ಇಂದಿನ ಅಗತ್ಯ
Published 30 ಮೇ 2023, 22:11 IST
Last Updated 30 ಮೇ 2023, 22:11 IST
ಅಕ್ಷರ ಗಾತ್ರ

ಇತಿಹಾಸ ಪಠ್ಯದ ಕುರಿತು ಸಾಕಷ್ಟು ಚರ್ಚೆಗಳಿವೆ. ಯಾವುದೇ ರಾಷ್ಟ್ರದಲ್ಲಿ ವರ್ತಮಾನವನ್ನು ಕಟ್ಟಲು ಇತಿಹಾಸವು ಪರೋಕ್ಷ ಸಾಧನವಾಗಿ ಬಳಕೆಯಾಗಿದೆ.‌ ಭಾರತದ ಸ್ವಾತಂತ್ರ್ಯ ಹೋರಾಟದಲ್ಲೂ ಇದು ನಡೆದಿದೆ. ಆದರೆ ಇತಿಹಾಸ ಬೋಧನೆಯ ಉದ್ದೇಶವೇ ರಾಷ್ಟ್ರೀಯತೆಯನ್ನು ಕಟ್ಟುವುದಾಗಿರುವುದಿಲ್ಲ. ರಾಷ್ಟ್ರೀಯತೆಯ ವಿಚಾರವು ವರ್ತಮಾನದ ನಾಗರಿಕ ಪ್ರಜ್ಞೆಯನ್ನು ರೂಪಿಸುವ ಜವಾಬ್ದಾರಿ ಹೊಂದಿರುವ ‘ರಾಜ್ಯಶಾಸ್ತ್ರ’ದ ಉದ್ದೇಶವಾಗಿದೆ. ಆ ರಾಜಕೀಯ ಆಶಯಗಳು ಸಂವಿಧಾನದ ಆಶಯವನ್ನು ತಳಹದಿಯಾಗಿ ಹೊಂದಿರುತ್ತವೆ. ಇತಿಹಾಸದಲ್ಲಿ ಕೆಲ ವಂಶಗಳು ಇದಕ್ಕೆ ಪೂರಕವಾಗಿಯೂ ಬರಬಹುದು, ಕೆಲ ವಂಶಗಳು ವಿರುದ್ಧವಾಗಿಯೂ ಬರಬಹುದು. ಆದರೆ ಇದಕ್ಕೆ ಅನುಗುಣವಾಗಿಯೇ ಇತಿಹಾಸದ ಮರುನಿರೂಪಣೆ ಮಾಡಬಾರದು. ಏಕೆಂದರೆ, ಇತಿಹಾಸದ ಉದ್ದೇಶ ಬೇರೆಯದೆ ಆಗಿರುತ್ತದೆ.

ಇತಿಹಾಸ ಬೋಧನೆಯ ಉದ್ದೇಶವು ವಿಶಾಲ ದೃಷ್ಟಿಕೋನವನ್ನು ಬೆಳೆಸುವುದು, ಸೌಂದರ್ಯ ಪ್ರಜ್ಞೆ, ಜೀವನ ಮೌಲ್ಯಗಳ ಅರಿವು, ಚಿಂತನಾ ಸಾಮರ್ಥ್ಯದ ಉನ್ನತೀಕರಣ, ಮನುಷ್ಯರನ್ನು ಅರಿತುಕೊಳ್ಳುವುದು ಮುಂತಾದವು. ಇತಿಹಾಸದ ಅಭ್ಯಾಸದಲ್ಲಿ ‘ಇದು ಹೀಗೆ ಇರಬೇಕಿತ್ತು’ ಎನ್ನುವ ಕುರಿತ ವರ್ತಮಾನದ ಚಿಂತನಾ ಕ್ರಮದ ಮಾನಸಿಕ ಒತ್ತಡ ಇರಬಾರದು. ಇರುವುದನ್ನು ಇರುವ ಹಾಗೆಯೇ ಸ್ವೀಕರಿಸಬೇಕು ಎಂಬ ಸಹಜ ಸ್ಥಿತಿಯನ್ನು ಒಪ್ಪಿಕೊಂಡಿರಬೇಕು.

ಪಠ್ಯವನ್ನು ರಚಿಸುವಾಗ ರಾಜಕೀಯ, ಧಾರ್ಮಿಕ, ಆರ್ಥಿಕ, ಸಾಮಾಜಿಕ ಸಿದ್ಧಾಂತಗಳು ಪ್ರಮುಖ‌ ಆಧಾರವಾಗಬಾರದು. ಮೊದಲನೆಯದಾಗಿ, ಮಕ್ಕಳ ಮನೋವಿಜ್ಞಾನ, ಬೋಧನಾ ಪದ್ಧತಿ, ಶಿಕ್ಷಣ ತತ್ವಗಳು ಮತ್ತು ಬೋಧನೋದ್ದೇಶಗಳು ಪ್ರಮುಖ ಆಧಾರಗಳಾಗಬೇಕು. ಇವೆಲ್ಲದರಲ್ಲಿ ಕಲಿಕಾ ಪ್ರಕ್ರಿಯೆಗೆ ಇರುವ ಪ್ರಧಾನ ಉದ್ದೇಶ ಎಲ್ಲಕ್ಕೂ ಮೂಲವಾಗಿದೆ. ಕಲಿಕಾರ್ಥಿಯ ವರ್ತನೆಯಲ್ಲಿ ಸಕಾರಾತ್ಮಕವಾದ ಪರಿವರ್ತನೆಯನ್ನು ತರುವುದು ಕಲಿಕಾ ಪ್ರಕ್ರಿಯೆಯ ಮೂಲ ಉದ್ದೇಶ. ಮನುಷ್ಯರನ್ನು ಇತರ ಮೃಗಗಳಿಗಿಂತ ಬೇರೆಯಾಗಿಸುವ ಅಂಶವಿದು. ಪ್ರತಿಯೊಂದು ಜೀವಿಯಲ್ಲೂ ಸ್ವಭಾವಗಳಿರುತ್ತವೆ. ಮನುಷ್ಯರಲ್ಲಿ ಅದು ಒಳ್ಳೆಯ ಮತ್ತು ಕೆಟ್ಟ ಸ್ವಭಾವಗಳು ಎಂದು ವಿಂಗಡಿಸಲ್ಪಡುತ್ತವೆ. ಈ ವಿಂಗಡಣೆಯಲ್ಲಿ ಕೆಟ್ಟ ಸ್ವಭಾವಗಳನ್ನು ಪ್ರಜ್ಞಾಪೂರ್ವಕವಾಗಿ ಕೈಬಿಟ್ಟು ಒಳ್ಳೆಯ ಸ್ವಭಾವಗಳು ರೂಢಿಯಾಗುವ ಹಾಗೆ ಮಾಡುವುದು ಔಪಚಾರಿಕ ಶಿಕ್ಷಣದ ಉದ್ದೇಶವಾಗಿದೆ. ಆದರೆ ಒಳ್ಳೆಯದು, ಕೆಟ್ಟದ್ದು ಎನ್ನುವುದು ಕೂಡ ಸಾಪೇಕ್ಷ ಮೌಲ್ಯಗಳಾಗಿವೆ. ನಿರ್ದಿಷ್ಟ ಸಂದರ್ಭದಲ್ಲಿ ಒಳ್ಳೆಯದು ಎನಿಸುವುದೇ ಮತ್ತೊಂದು ಸಂದರ್ಭದಲ್ಲಿ ಕೆಟ್ಟದ್ದೂ ಆಗಬಹುದು.‌ ಆಗ ಯಾವುದನ್ನು ಯಾವ ಸಂದರ್ಭದಲ್ಲಿ ಆದ್ಯತೆಯಾಗಿ ತೆಗೆದುಕೊಳ್ಳಬೇಕು ಎಂಬ ಪ್ರಶ್ನೆ ಬರುತ್ತದೆ. ಈ ಸಮಸ್ಯೆಯನ್ನು ಪರಿಹರಿಸುವುದು ಮನುಷ್ಯರ ವಿವೇಕ. ಆದ್ದರಿಂದ ಮನುಷ್ಯರನ್ನು ವಿವೇಕಿಗಳನ್ನಾಗಿಸುವುದು ಶಿಕ್ಷಣದ ಧ್ಯೇಯವಾಗಿರುತ್ತದೆ. ಇತಿಹಾಸ, ವಿಜ್ಞಾನ, ಗಣಿತ ಅಥವಾ ಇನ್ನೇನನ್ನು ಬೋಧಿಸುವಾಗಲೂ ಈ ಅಂಶ ಇದ್ದೇ ಇರುತ್ತದೆ.

ಪಠ್ಯಪುಸ್ತಕವನ್ನು ರಚಿಸುವಾಗ ಬೋಧನಾ ಪದ್ಧತಿ ಮತ್ತು ಮೌಲ್ಯಮಾಪನ ಎಂಬ ಇನ್ನೆರಡು ಅಂಶಗಳಿಗೆ ಮಹತ್ವ ಕೊಡಬೇಕು. ಬೋಧನಾ ಪದ್ಧತಿಯಲ್ಲಿ ಮಗುವಿಗೆ ಸಂಬಂಧಿಸಿದ್ದು ಮಗುವಿನ ದೈಹಿಕ ವಯಸ್ಸು ಮತ್ತು ಮಾನಸಿಕ ವಯಸ್ಸು. ಹದಿಹರೆಯದ ಹಂತಕ್ಕೆ ಹೇಳುವುದಾದರೆ, ಇತಿಹಾಸದಲ್ಲಿ ಆದ ದೌರ್ಜನ್ಯಗಳನ್ನು ‘ದೌರ್ಜನ್ಯಗಳಾಗಿವೆ’ ಎನ್ನುವಲ್ಲಿಗೆ ಸೀಮಿತಗೊಳಿಸಬೇಕು. ಕ್ರೌರ್ಯದ ವಿವರಗಳನ್ನೇ ಕೊಡಲು ಹೋಗಬಾರದು. ಒಂದು ವೇಳೆ ಅಂತಹ ವಿವರಗಳಿದ್ದರೆ ಬೋಧಿಸುವಾಗ ಅಧ್ಯಾಪಕರು ಅದನ್ನು ಮಕ್ಕಳ‌ ಮನಃಸ್ಥಿತಿಗೆ ಹೊಂದಿಕೊಳ್ಳುವ ಹಾಗೆ ಮರು ಹೊಂದಾಣಿಕೆ ಮಾಡಿಕೊಳ್ಳಬಹುದು.‌ ಶೈಕ್ಷಣಿಕವಾಗಿ ಅದು ಸರಿ. ಆದರೆ ಅಧಿಕೃತ ಪಠ್ಯದಲ್ಲಿ ಬಂದಾಗ ಶೈಕ್ಷಣಿಕ ತತ್ವಗಳ ಜ್ಞಾನ ಇಲ್ಲದವರು ಶಿಕ್ಷಣದೊಂದಿಗೆ ಸೇರಿಕೊಂಡಾಗ, ‘ಪಾಠ ಪುಸ್ತಕದಲ್ಲಿದ್ದರೂ ಯಾಕೆ ವಿವರಿಸಲಿಲ್ಲ?’ ಎಂಬ ಆಕ್ಷೇಪಗಳು ಶೈಕ್ಷಣಿಕ ಕಿರುಕುಳವನ್ನು ಸೃಷ್ಟಿಸಲು ಅವಕಾಶ ಇರುತ್ತದೆ.‌ ಆದ್ದರಿಂದ ಪಾಠ ಪುಸ್ತಕವನ್ನು ರಚಿಸುವಾಗಲೇ ಈ ಎಚ್ಚರಿಕೆ ಇರಬೇಕು. ಹಾಗೆಂದು, ಹೇಳಬೇಕಾದ ವಿವರಗಳನ್ನು ಹೇಳದೇ ಇರುವುದಲ್ಲ.‌ ಹೇಗೆ ಹೇಳಬೇಕು ಎಂದು ಗೊತ್ತಿದ್ದು ಹೇಳಬೇಕಾಗುತ್ತದೆ.

ಪಠ್ಯಗಳು ಮೌಲ್ಯಮಾಪನಕ್ಕೆ ಆಧಾರಗಳೂ ಹೌದು. ಮೌಲ್ಯಮಾಪನದ ವಿಚಾರ ಬಂದಾಗ ಅಂಕಗಳ ಹಂಚಿಕೆಯ ವಿಧಾನ ಮುಖ್ಯವಾಗುತ್ತದೆ. ಉದಾಹರಣೆಗೆ, ಬಹು ದೀರ್ಘಕಾಲದಿಂದ ಹತ್ತನೆಯ ತರಗತಿಯ ಇತಿಹಾಸದಲ್ಲಿ ಪ್ರಧಾನ ಪ್ರಶ್ನೆಯ ಅಂಕ ‘ಗಾಂಧಿ ಯುಗ’ಕ್ಕೆ ಹೋಗಿದೆ. ಗಾಂಧಿ, ನೆಹರೂ, ಸುಭಾಷ್‌ಚಂದ್ರ ಬೋಸ್, ಅಂಬೇಡ್ಕರ್, ಬುಡಕಟ್ಟು ಬಂಡಾಯಗಳು, ರೈತ ಬಂಡಾಯಗಳು- ಹೀಗೆ ಆ ಪಾಠದ ವಿಷಯಗಳಿಂದ ಪ್ರಧಾನ ಪ್ರಶ್ನೆ ಬರುತ್ತದೆ. ಪ್ರಧಾನ ಪ್ರಶ್ನೆಯಾಗಿ ಬರುವ ವಿಷಯವೂ ಬಹಳಷ್ಟು ವಿಸ್ತಾರವಾಗಿ ಪಾಠ ಪುಸ್ತಕದಲ್ಲಿ ಮಂಡನೆಯಾಗಿರುತ್ತದೆ. ಈ ಬಾರಿ ಸಣ್ಣ ವ್ಯತ್ಯಾಸ ಆಯಿತು. ‘ಭಾರತಕ್ಕೆ ಯುರೋಪಿಯನ್ನರ ಆಗಮನ’ ಪಾಠದಲ್ಲಿ, ಮಾರ್ತಾಂಡ ವರ್ಮನು ಡಚ್ಚರನ್ನು ಎದುರಿಸಿದ ವಿಷಯ ಮೊದಲ ಬಾರಿಗೆ ಬಂದಿದೆ. ಪ್ರೌಢ ಶಿಕ್ಷಣದಲ್ಲೇ ಇದುವರೆಗೆ ಬಾರದ ವಿಚಾರವನ್ನು ಕೊಟ್ಟದ್ದು ಸಮರ್ಪಕವಾಗಿದೆ. ಆದರೆ ಅದರ ವಿವರಣೆ ಬಹಳಷ್ಟು ದೀರ್ಘವಾಗಿ ಬೆಳೆದಿದೆ. ಅಷ್ಟು ದೀರ್ಘ ವಿವರಣೆ ಇದ್ದಾಗ ಅದೇ ಪ್ರಧಾನ ಪ್ರಶ್ನೆಗೆ ಅರ್ಹವಾಗುತ್ತದೆ. ಆದರೆ ಶೈಕ್ಷಣಿಕ ದೃಷ್ಟಿಯಿಂದ ಆಧುನಿಕ ಇತಿಹಾಸದಲ್ಲಿ ಗಾಂಧಿ ಯುಗಕ್ಕೆ ಇರುವ ‘ತೂಕ’, ‘...ಯುರೋಪಿಯನ್ನರ ಆಗಮನ’ಕ್ಕೆ ಇಲ್ಲ. ಆಗ ಪಾಠದ ತೂಕ ಮತ್ತು ಮೌಲ್ಯಮಾಪನದ ನಡುವಿನ ಹೊಂದಾಣಿಕೆಯಲ್ಲಿ ಸಮಸ್ಯೆಗಳು ಬರುತ್ತವೆ. ಇಂತಹ ಸಂದರ್ಭದಲ್ಲಿ ಸೇರ್ಪಡೆಗಳನ್ನು ಆಯಾ ಪಾಠದ ತೂಕಕ್ಕೆ ಹೊಂದುವಷ್ಟೇ ಪ್ರಮಾಣದಲ್ಲಿ ಮಾಡುವ ಜವಾಬ್ದಾರಿ ಪಠ್ಯಪುಸ್ತಕ ರಚನೆಕಾರರಿಗೆ ಇರಬೇಕಾಗುತ್ತದೆ.

ಇದೇ ರೀತಿಯಲ್ಲಿ ಒಂದು ಪಾಠ ಪುಸ್ತಕದ ವಿವಿಧ ಪಾಠಗಳ ಗಾತ್ರ ಮತ್ತು ವೈಚಾರಿಕ ಮಹತ್ವಕ್ಕೆ ಅನುಗುಣವಾಗಿ, ಪ್ರತೀ ಪಾಠಕ್ಕೂ ಎಷ್ಟು ಗಂಟೆಯನ್ನು ಬಳಸಬೇಕು ಎಂದು ಸಮಯದ ಹಂಚಿಕೆ ಆಗಿರುತ್ತದೆ.‌ ಇತ್ತೀಚಿನ ದಿನಗಳಲ್ಲಿ ಬೇಗ ಪಾಠಗಳನ್ನು ಮುಗಿಸಿ, ಪ್ರಶ್ನೋತ್ತರಗಳ ಅಭ್ಯಾಸ ಮಾಡಿಸಿ ಅಂಕಗಳನ್ನು ಹೆಚ್ಚಿಸುವ ಕಲ್ಪನೆಯಿಂದಾಗಿ ವಾಸ್ತವದಲ್ಲಿ ಸಮಯ ಹಂಚಿಕೆ ಪಾಲನೆಯಾಗುತ್ತಿಲ್ಲ. ಕೋವಿಡ್ ಕಾಲದಲ್ಲಿ ಈ ಪದ್ಧತಿಯೇ ಹೊರಟು ಹೋದಂತಾಗಿದೆ.‌ 10 ತಿಂಗಳ ಪಾಠವನ್ನು ಆರು ತಿಂಗಳಲ್ಲಿ ಮುಗಿಸಬೇಕಾದರೆ ತಿಂಗಳಲ್ಲಿ ಎಷ್ಟು ಪಾಠಗಳನ್ನು ಮುಗಿಸಬೇಕು ಎಂದು ಗುಣಾಕಾರ ಮಾಡಿ ಸಮಯ ವಿಂಗಡಣೆ ಮಾಡಲಾಯಿತು.‌ ಆದರೆ ಆ ರೀತಿ ಮಾಡಲು ಬರುವುದಿಲ್ಲ. ಆ ಪದ್ಧತಿಯೇ ಅವೈಜ್ಞಾನಿಕವಾಗಿತ್ತು. ಒಂದು ಪಾಠಕ್ಕೆ ಮೂರು ಗಂಟೆ ಎಂದು ನಿಗದಿಯಾದ ಮೇಲೆ ಅದನ್ನು ಒಂದೂವರೆ ಗಂಟೆಗೆ ಇಳಿಸಿ ಬೋಧಿಸುವುದು ಹೇಗೆ? ಆಗ ಬೋಧನಾ ಪದ್ಧತಿಯನ್ನು ಅನುಸರಿಸಲು ಅಗುವುದಿಲ್ಲ. ಬದಲಿಗೆ ಹತ್ತು ತಿಂಗಳು ಪೂರ್ತಿ‌ ಲಭ್ಯ ಇಲ್ಲದಿರುವುದರಿಂದ ಲಭ್ಯ ಇರುವ ಆರು ತಿಂಗಳಿಗೆ ಎಷ್ಟು ಪಾಠಗಳು ಹಂಚಿಕೆಯಾಗಿವೆಯೋ ಅಷ್ಟೇ ಸಾಕು ಎಂಬ ನಿರ್ಧಾರ ವೈಜ್ಞಾನಿಕವಾಗಿ ಸಮರ್ಥನೀಯವಾಗಿತ್ತು.

ಪಾಠಗಳಿಗೆ ಸಮಯ ಹಂಚಿಕೆಯ ಸಮಸ್ಯೆಯಿಂದಾಗಿ ಆಗಬೇಕಾದ ಕಲಿಕಾ ಪರಿಣಾಮ ಆಗುವುದಿಲ್ಲ. ಸಮಯ ಹಂಚಿಕೆಯನ್ನು ತಕ್ಕ ಮಟ್ಟಿಗಾದರೂ ಅನುಸರಿಸಿದಾಗ ಮಾತ್ರ ಬೋಧನಾ ಪದ್ಧತಿಯ ಪ್ರಕಾರ ಬೋಧನೆಯನ್ನು ಸ್ವಲ್ಪಮಟ್ಟಿಗೆ ನಡೆಸಲು ಸಾಧ್ಯವಾಗುತ್ತದೆ. ಇದರ ಅರಿವು ಪಠ್ಯಪುಸ್ತಕ ರಚನೆಕಾರರಿಗೆ ಇರಬೇಕಾಗುತ್ತದೆ.

ಬೋಧನೆಯಲ್ಲಿ ಉಪನ್ಯಾಸ ಪದ್ಧತಿ, ಸಂವಾದ ಪದ್ಧತಿ, ಸಂಕಿರಣ ಪದ್ಧತಿ, ಚಟುವಟಿಕೆ ಪದ್ಧತಿ, ಕಥನ ಪದ್ಧತಿ, ಪ್ರಯೋಗ ಪದ್ಧತಿ, ಕ್ಷೇತ್ರಾಧ್ಯಯನ ಪದ್ಧತಿ... ಹೀಗೆ ಹಲವಾರು ಪದ್ಧತಿಗಳಿರುತ್ತವೆ. ಡಿ.ಇಡಿ, ಬಿ.ಇಡಿ, ಎಂ.ಇಡಿ ಮಾಡಿದ ಅಧ್ಯಾಪಕರಿಗೆ ಇದು ತಿಳಿದಿರುತ್ತದೆ. ಯಾವ ಪಾಠದ ಯಾವ ವಿಷಯಕ್ಕೆ ತನ್ನ ವಿದ್ಯಾರ್ಥಿಗಳ ಮಟ್ಟಕ್ಕೆ, ತನ್ನ‌ ಪರಿಸರದಲ್ಲಿ ಯಾವ ಪದ್ಧತಿಯನ್ನು ಅನುಸರಿಸಬಹುದು ಎಂದು ಅಧ್ಯಾಪಕರು ನಿರ್ಧರಿಸಬೇಕು. ಅದು ವಿದ್ಯಾರ್ಥಿಯನ್ನು ಬಲ್ಲ ಅಧ್ಯಾಪಕರಿಗೆ ಇರುವ ಸ್ವಾತಂತ್ರ್ಯ. ವಿದ್ಯಾರ್ಥಿಗಳನ್ನು ವೈಯಕ್ತಿಕವಾಗಿ ಬಲ್ಲವರಲ್ಲದವರಿಗೆ ಇದನ್ನು ನಿರ್ಧರಿಸಲು ಆಗುವುದಿಲ್ಲ. ಆದರೆ ಪಠ್ಯಪುಸ್ತಕ ರಚನೆಕಾರರು ಸೂಕ್ತ ಪದ್ಧತಿಯನ್ನು ಅಧ್ಯಾಪಕರು ಅಳವಡಿಸಿಕೊಳ್ಳಲು ಅವಕಾಶ ಇರುವ ಹಾಗೆ ಪಠ್ಯಪುಸ್ತಕವನ್ನು ರಚಿಸಬೇಕಾಗುತ್ತದೆ. ಪಠ್ಯದಲ್ಲಿ ಅತಿಯಾಗಿ ವಿಷಯಗಳನ್ನು ತುಂಬಿ, ಅದೆಲ್ಲವನ್ನೂ ಮಕ್ಕಳಿಗೆ ಕಲಿಸಬೇಕು ಎಂದು ಹೇಳಿದಾಗ ಅಧ್ಯಾಪಕರು ಕ್ಷಿಪ್ರವಾಗಿ ವಿವರಿಸುವ ಉಪನ್ಯಾಸ ಪದ್ಧತಿಯನ್ನು ಆಯ್ದುಕೊಳ್ಳುವುದು ಅವರಿಗೆ ಅನಿವಾರ್ಯವಾಗುತ್ತದೆ. ಏಕೆಂದರೆ, ಉಳಿದ ಪದ್ಧತಿಗಳಿಗೆ ಸಮಯ ಜಾಸ್ತಿ ಬೇಕು. ಪಠ್ಯ ವಿಷಯವೇ ಹೊರೆಯಾದಾಗ ಪಾಠಗಳನ್ನು ಮುಗಿಸುವ ಅವಸರ ಇರುತ್ತದೆ.‌ ಆದ್ದರಿಂದ ಔಚಿತ್ಯಕ್ಕೆ ಅನುಗುಣವಾಗಿ ಬೋಧನಾ ಪದ್ಧತಿಯನ್ನು ಅಳವಡಿಸಲು ಆಗುವುದಿಲ್ಲ.

ರಾಜಕೀಯ ಧೋರಣೆ ಏನಾದರೂ ಇರಬಹುದು. ಅದನ್ನು ರಾಜಕೀಯಾತ್ಮಕವಾಗಿ ಸಾಧಿಸಬೇಕು. ಪಠ್ಯದ ವಿಷಯದಲ್ಲಿ ಶೈಕ್ಷಣಿಕ ತತ್ವಗಳ ಆಧಾರದಲ್ಲಿ ಪಠ್ಯ ರಚನೆ ಮಾಡಿ, ಇತಿಹಾಸ ಪಠ್ಯವನ್ನು ಅರ್ಥಪೂರ್ಣಗೊಳಿಸುವ ಅಗತ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT