ಬುಧವಾರ, 29 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ | ಭಾಷಾ ಬೋಧನೆಯ ದಕ್ಷತೆ ಹೆಚ್ಚಲಿ

ಸಾಹಿತ್ಯದ ಆಚೆಗೂ ಇರುವ ಕನ್ನಡದ ಸಾಧ್ಯತೆಯನ್ನು ಕಂಡುಕೊಳ್ಳಬೇಕಿದೆ
Published 1 ನವೆಂಬರ್ 2023, 19:30 IST
Last Updated 1 ನವೆಂಬರ್ 2023, 19:30 IST
ಅಕ್ಷರ ಗಾತ್ರ

ಕನ್ನಡ ಮಾಧ್ಯಮ ಶಿಕ್ಷಣದ ಹಿನ್ನಡೆ ಬಗ್ಗೆ ನಿರಂತರವಾಗಿ ಚರ್ಚೆಗಳು ನಡೆಯುತ್ತಿವೆ. ಆದರೆ, ಈ ಬಗೆಯ ಚರ್ಚೆಗಳು ಸೂಕ್ತ ಪರಿಹಾರದ ದಾರಿಗಳನ್ನು ತೆರೆಯದ ಹೊರತು ಚರ್ಚೆಯಿಂದಲೇ ಪರಿಸ್ಥಿತಿ ಸುಧಾರಿಸಲು ಸಾಧ್ಯವಿಲ್ಲ. ಇಂದಿನ ಶೈಕ್ಷಣಿಕ ಸನ್ನಿವೇಶದಲ್ಲಿ ಕನ್ನಡ ಮಾಧ್ಯಮ ಶಿಕ್ಷಣದ ಬಗ್ಗೆ ವಹಿಸುವ ಕಾಳಜಿಗಿಂತಲೂ ಹೆಚ್ಚು ಕಾಳಜಿಯನ್ನು ಕನ್ನಡ ಭಾಷಾ ಬೋಧನೆಯ ಕಡೆಗೆ ವಹಿಸಬೇಕಾಗಿದೆ.‌ ಏಕೆಂದರೆ, ಕಲಿಕಾ ಮಾಧ್ಯಮ ಯಾವುದೇ ಆಗಿದ್ದರೂ ಕನ್ನಡ ಭಾಷಾ ಕಲಿಕೆಯು ಸಾಮಾನ್ಯವಾಗಿ ಹೆಚ್ಚಿನ ವಿದ್ಯಾರ್ಥಿಗಳನ್ನು ಒಳಗೊಳ್ಳುತ್ತದೆ.

ಕನ್ನಡವು ಮಾತೃಭಾಷೆ ಎಂಬ ನೆಲೆಯಲ್ಲಿ ಬೋಧನೆ- ಕಲಿಕೆ ಪ್ರಕ್ರಿಯೆಯ ಸಂದರ್ಭದಲ್ಲಿ ಬಹಳಷ್ಟು ನಿರ್ಲಕ್ಷ್ಯಕ್ಕೆ ಒಳಗಾಗುವ ಪಠ್ಯಗಳಲ್ಲೊಂದಾಗಿದೆ. ಎಲ್ಲರಿಗೂ ಗೊತ್ತಿರುವ ಭಾಷೆ ಎನ್ನುವುದೇನೋ ನಿಜ.‌ ಆದರೆ, ಪರಿಸರದಿಂದ ಬರುವ ಭಾಷಾ ಜ್ಞಾನವು ಔಪಚಾರಿಕ ಅಭ್ಯಾಸದಿಂದ ಲಭ್ಯವಾದ ವ್ಯವಸ್ಥಿತ ಜ್ಞಾನದ ಮಾದರಿಯಲ್ಲಿ ಉಂಟಾದ ಕಲಿಕೆಯಾಗಿರುವುದಿಲ್ಲ. ಆದರೆ, ಯಾವುದೇ ಭಾಷೆಯ ಕಲಿಕೆಗೆ ಆಧಾರವಾಗಿ ಮಾತೃಭಾಷೆಯೇ ಕಾರ್ಯನಿರ್ವಹಿಸಬೇಕಾಗಿರುತ್ತದೆ.‌ ಭಾಷಾ ನಿಯಮಗಳು ಮತ್ತು ಭಾಷಾ ಕೌಶಲಗಳು ಸುಲಭವಾಗಿ ಅರ್ಥವಾಗಲು ಮಾತೃಭಾಷೆಯು ಪ್ರಮುಖ ಸಾಧನ. ಮಾತೃಭಾಷೆಯ ಕಲಿಕೆ ಸಮರ್ಪಕವಾಗಿ ನಡೆದರೆ ಇತರ ಭಾಷೆಗಳ ಕಲಿಕೆಗೆ ಸಕಾರಾತ್ಮಕ ಕಲಿಕಾ ವರ್ಗಾವಣೆ ನಡೆದು ಹೊಸ ಭಾಷೆಯನ್ನು ಸುಲಭವಾಗಿ ಮತ್ತು ಗೊಂದಲರಹಿತವಾಗಿ ಕಲಿಯಲು ಸಾಧ್ಯ. ಆದಕಾರಣ, ಇತರೆಲ್ಲ ಕಲಿಕೆಗಳನ್ನು ಸುಲಭಗೊಳಿಸಲು ಕನ್ನಡವನ್ನು ಒಂದು ಭಾಷೆಯಾಗಿ ಸಮರ್ಪಕವಾಗಿ ಕಲಿತುಕೊಳ್ಳಬೇಕಾದ ಅಗತ್ಯವಿದೆ.

ಕನ್ನಡ ಭಾಷೆಯ ಬೋಧನೆಯನ್ನು ಪರಿಣಾಮಕಾರಿಯಾಗಿಸುವ ದಿಸೆಯಲ್ಲಿ ಹೊಸ ಆಲೋಚನೆಗಳ ಅಗತ್ಯವಿದೆ.‌ ಮೊದಲನೆಯದಾಗಿ, ಪಠ್ಯಪುಸ್ತಕವನ್ನು ಆಕರ್ಷಕಗೊಳಿಸಬೇಕು. ಕನ್ನಡ ಭಾಷಾ ಪಠ್ಯಗಳನ್ನು ಅವುಗಳ ಸಾಂಪ್ರದಾಯಿಕ ಕ್ರಮಗಳಿಂದ ಹೊರಕ್ಕೆ ತರಬೇಕು. ಕನ್ನಡ ಸಾಹಿತ್ಯದ ವಿವಿಧ ಕಾಲಗಳ, ವಿವಿಧ ಪ್ರಕಾರಗಳ ಸಾಹಿತ್ಯ ಮತ್ತು ಹೊಸಗನ್ನಡ ಕಾಲದ ಪ್ರಾತಿನಿಧಿಕ ಬರಹಗಳ ಸಂಕಲನದ ರೂಪವಾಗಿ ಪಠ್ಯವನ್ನು ರೂಪಿಸುವುದನ್ನು ಬಿಟ್ಟು, ಸಾಹಿತ್ಯದ ಆಚೆಗೂ ಇರುವ ಕನ್ನಡದ ಸಾಧ್ಯತೆಗಳನ್ನು ಕಂಡುಕೊಳ್ಳಬೇಕು.

ಕರ್ನಾಟಕದ ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆ ಸ್ವರೂಪದಲ್ಲಿ ಕನ್ನಡದ ಬಳಕೆ ಇದೆ. ಭಾಷೆಯ ಬಳಕೆಯ ಬಹುರೂಪಗಳನ್ನು ಪಠ್ಯಗಳು ಒಳಗೊಳ್ಳಬೇಕು. ಈ ರೀತಿಯ ಭಾಷಾ ತುಣುಕುಗಳು ಯಾರೋ ಒಬ್ಬ ಲೇಖಕರಿಂದಲೇ ಬರೆಯಲ್ಪಟ್ಟದ್ದಾಗಿರಬೇಕಾಗಿಲ್ಲ.‌ ಜನಜೀವನದ ನಡುವಿನಿಂದಲೇ ಅಂತಹ ತುಣುಕುಗಳನ್ನು ಆರಿಸಬಹುದು. ಅಂತಹ ರಚನೆಗಳು ಕಥೆಯಾಗಿ, ಪದ್ಯವಾಗಿ, ನುಡಿಗಟ್ಟಾಗಿ, ಪರಿಕಲ್ಪನೆಯಾಗಿ ಬಳಕೆಯಲ್ಲಿರುತ್ತವೆ.‌ ಅವೆಲ್ಲವನ್ನೂ ಪಠ್ಯವು ಬಳಸಿಕೊಳ್ಳಲು ಸಾಧ್ಯವಾಗಬೇಕು.‌ ಆಗ ಭಾಷೆಯ ನಿಗದಿತ ನಮೂನೆಯ ಕಲಿಕೆಯ ವ್ಯಾಪ್ತಿ ದೊಡ್ಡದಾಗುತ್ತದೆ. ಕಲಿಕಾಂಶಗಳು ಆಕರ್ಷಕವಾಗುತ್ತವೆ. ಪಠ್ಯಪುಸ್ತಕ ರಚಿಸುವಾಗ ಮಕ್ಕಳ ಮನೋ ಮಟ್ಟಕ್ಕೆ ಸೂಕ್ತವಾಗುವಂತೆ ಕಲಿಕಾಂಶಗಳ ಸಂಯೋಜನೆಗೆ ಆದ್ಯತೆ ನೀಡಬೇಕು. ಕಿರಿಯ ಪ್ರಾಥಮಿಕ ಹಂತದ ಮಕ್ಕಳಿಗೆ ತಾಳಕ್ಕೆ ಹೊಂದಾಣಿಕೆಯಾಗುವ ಹಾಡು, ದೃಶ್ಯರೂಪದಲ್ಲಿ ಭಾಸವಾಗುವಂತಹ ಹಾಡು, ಅಭಿನಯಿಸಲು ಸುಲಭವಾಗುವಂತಹ ಗೀತೆಗಳು ಅವರ ಮನೋ ಮಟ್ಟಕ್ಕೆ ಹೊಂದಿಕೊಳ್ಳುತ್ತವೆ. ಮಕ್ಕಳ ವಿಕಾಸದ ತತ್ವಗಳನ್ನು ಪರಿಗಣಿಸಿ, ಅದಕ್ಕೆ ಅನುಗುಣವಾದ ಕಲಿಕಾಂಶಗಳನ್ನು ಪಠ್ಯದಲ್ಲಿ ತರಬೇಕು.

ಕನ್ನಡ ಬೋಧನೆಯನ್ನು ಆಕರ್ಷಕಗೊಳಿಸಬೇಕಾದರೆ ಬೋಧನೆಯು ‘ಪಠ್ಯ ಸ್ವರೂಪ’ಕ್ಕೆ ನಿಷ್ಠವಾಗುವುದರಿಂದ ಹೊರಬರಬೇಕು. ಈ ವಿಚಾರವು ಶಾಲಾ ಸನ್ನಿವೇಶಕ್ಕೆ ಸಂಬಂಧಿಸಿದ್ದಾಗಿದೆ. ಯಾವುದೇ ಪಠ್ಯದ ಬೋಧನೆಯಲ್ಲಿ ಬೋಧನಾ ವಿಧಾನವನ್ನು ಹೇಗೆ ಬೇಕಾದರೂ ಮಾಡಲು ಅವಕಾಶವಿದೆ. ಉದಾಹರಣೆಗೆ ಪಠ್ಯ ವಿಷಯಗಳಲ್ಲೇ ಸ್ಥಳೀಯತೆಯನ್ನು ತರುವುದು ಆಡಳಿತ ವ್ಯವಸ್ಥೆಯೇ ಪಠ್ಯವನ್ನು ಸ್ಥಳೀಕರಣ ಮಾಡುವ ವಿಧಾನವಾಗಿದೆ. ಆದರೆ, ಪಠ್ಯದ ಅಂಶಗಳು ಸ್ಥಳೀಕರಣಗೊಂಡಿಲ್ಲದೇ ಇದ್ದಾಗಲೂ ಅಧ್ಯಾಪಕರು ಬೋಧನೆಯನ್ನು ಸ್ಥಳೀಕರಣಗೊಳಿಸಿ ಮಾಡಬಹುದಾಗಿದೆ. ಬೋಧನಾ ವಿಧಾನವು ಪಠ್ಯದ ಧ್ಯೇಯೋದ್ದೇಶಗಳನ್ನು ಸಾಧಿಸಬೇಕು ಎಂಬುದನ್ನು ಹೊರತುಪಡಿಸಿದರೆ ಬೋಧನಾ ಪದ್ಧತಿಯಲ್ಲಿ ವೈವಿಧ್ಯ, ನಾವೀನ್ಯ ಇರಬಾರದೆಂದು ಇಲ್ಲ. ಆದರೆ, ಇದನ್ನು ಸಾಧಿಸಲು ಅಧ್ಯಾಪಕರು ಸಮರ್ಥರಿರಬೇಕು.‌ ಶಾಲಾ ಆಡಳಿತದಲ್ಲಿ ಅದಕ್ಕೆ ಪೂರಕ ಸಂಗತಿಗಳಿರಬೇಕು.‌ ಅಧ್ಯಾಪಕ- ಪೋಷಕ ಸಂಬಂಧ ಉತ್ತಮವಾಗಿರಬೇಕು.

ಪಠ್ಯ ವಿಷಯಗಳನ್ನು ಸ್ಥಳೀಕರಣಗೊಳಿಸಲು ಹೆಚ್ಚು ಸಹಾಯಕವಾಗಿರುವುದು ಕನ್ನಡ ಪಠ್ಯವೇ ಆಗಿದೆ. ಪಠ್ಯವು ಹೇಳುವ ಕಲಿಕಾಂಶಗಳಿಗೆ ಸ್ಥಳೀಯವಾದ ಆಯಾಮಗಳು ಹಲವು ಬಗೆಯಲ್ಲಿರುತ್ತವೆ. ಅವುಗಳನ್ನು ಬೋಧನೆ ಮತ್ತು ಕಲಿಕಾ ಪ್ರಕ್ರಿಯೆಗೆ ಅಳವಡಿಸಿದಂತೆಲ್ಲ ಮಕ್ಕಳಿಗೆ ಕಲಿಕಾಂಶಗಳು ಅವರ ಅನುಭವಕ್ಕೆ ಹತ್ತಿರವಾಗಿ ಆಕರ್ಷಕವಾಗುತ್ತವೆ. ಕಲಿಕಾ ದಕ್ಷತೆ ಹೆಚ್ಚುತ್ತದೆ.‌ ಕನ್ನಡ ಭಾಷಾ ಬೋಧನೆಗೆ ಸ್ಥಳೀಯ ಕಥೆ, ಹಾಡು, ಲಾವಣಿ, ಸ್ಥಳಪುರಾಣ, ಐತಿಹ್ಯ, ನಂಬಿಕೆ, ಕಲೆ, ವೃತ್ತಿಗಳು, ಕೌಶಲುಗಳಂಥ ಪರಿಕರಗಳ‌ ಬಳಕೆಯನ್ನು ಹೆಚ್ಚಿಸಬೇಕು. ಕನ್ನಡ ಭಾಷಾ ಕಲಿಕೆಯು ಮಕ್ಕಳಿಗೆ ಅವರ ಪರಿಸರದ ಅನುಭವಗಳೇ ಪಠ್ಯವಾಗಿ ದೊರೆತ ಹಾಗೆ ಭಾಸವಾಗಬೇಕು.

ಭಾಷಾ ಪಠ್ಯದ ಕಲಿಕೆಯು ಭಾಷಾ ಕೌಶಲಗಳಿಗೆ ಆದ್ಯತೆ ನೀಡಬೇಕು.‌ ಆದರೆ ಈಗ ಹಾಗಿಲ್ಲ. ವ್ಯಾಕರಣ, ಛಂದಸ್ಸಿನ ಭಾಗಗಳನ್ನು ಹೊರತುಪಡಿಸಿದರೆ, ಉಳಿದ ವಿಚಾರಗಳು ಭಾಷೆಯ ಮೂಲಕ ಹೇಳಲಾಗಿರುವ ವಿಚಾರವನ್ನು ಕಲಿಕಾ ವಸ್ತುವಾಗಿ ಪರಿಗಣಿಸಲಾಗುತ್ತಿದೆ. ಉದಾಹರಣೆಗೆ, ಒಂದು ವಚನವನ್ನು ಅಭ್ಯಾಸ ಮಾಡುವಾಗ ವಚನದಲ್ಲಿ ಪ್ರಸ್ತಾಪವಾಗಿರುವ ವಿಷಯವನ್ನು ಮಕ್ಕಳಿಗೆ ಮನದಟ್ಟು ಮಾಡುವುದಕ್ಕೆ ಪ್ರಾಮುಖ್ಯ ನೀಡಲಾಗುತ್ತದೆ. ಆದರೆ, ಇದು ಭಾಷಾ ಬೋಧನೆಯ ಸರಿಯಾದ ವಿಧಾನವಲ್ಲ.‌ ವಿಷಯಕ್ಕೆ ಆದ್ಯತೆಯನ್ನು ನೀಡಿದರೆ, ಅದು ಇತಿಹಾಸ ಬೋಧನೆಯಂತಾಗುತ್ತದೆ. ಬದಲಿಗೆ ವಚನದಲ್ಲಿ ಬಂದಿರುವ ವಸ್ತುವು ವಚನ ಸಾಹಿತ್ಯದ ನೆಲೆಯಲ್ಲಿ ಹೊಂದಿರುವ ಸಾಂಸ್ಕೃತಿಕ ದೃಷ್ಟಿಕೋನ, ವಚನದಲ್ಲಿ ಬಳಕೆಯಾಗಿರುವ ಭಾಷಾ ಕೌಶಲ ಹೇಗಿದೆ ಎಂಬ ನೆಲೆಯಲ್ಲಿ ಬೋಧಿಸಲ್ಪಡಬೇಕು. ಇಂಗ್ಲಿಷ್, ಹಿಂದಿ, ಸಂಸ್ಕೃತದಂತಹ ಭಾಷೆಗಳಾದಾಗ ಭಾಷಾ ಕೌಶಲಗಳು ಪರಿಸರದಲ್ಲೇ ಕಾಣಿಸುವ ಸಂಗತಿಗಳಲ್ಲ.‌ ಆದ್ದರಿಂದ ಭಾಷಾ ಕೌಶಲಗಳನ್ನು ಅಲ್ಲಿ ಮಕ್ಕಳ ಅನುಭವಕ್ಕೆ ತರಲು ಕಷ್ಟವಾಗುತ್ತದೆ. ಕನ್ನಡ ಭಾಷೆಯ ವಿಚಾರ ಹಾಗಲ್ಲ. ಎಲ್ಲವೂ ಮಗುವಿನ ಪರಿಸರದಲ್ಲೇ ಇರುವುದರಿಂದ ಭಾಷಾ ಕೌಶಲವನ್ನು ಕೂಡ ಮಕ್ಕಳ ಅನುಭವಕ್ಕೆ ತರಲು ಸುಲಭವಾಗುತ್ತದೆ. ಭಾಷಾ ಕೌಶಲಗಳ ಅರಿವು ಭಾಷೆಯ ವಿಕಾಸಕ್ಕೆ ಸಹಾಯಕವಾಗಿದೆ.

ನಮ್ಮ‌ ಶೈಕ್ಷಣಿಕ ಸನ್ನಿವೇಶದಲ್ಲಿ ಯಾವುದೇ ಕಲಿಕೆಯು ಪರೀಕ್ಷೆಯ ವಿನ್ಯಾಸಕ್ಕೆ ತಕ್ಕಂತೆ ಹೊಂದಿಕೊಂಡಿರುತ್ತದೆ. ಅಂದರೆ, ಕಲಿಕೆಯ ಉದ್ದೇಶ ಪರೀಕ್ಷೆಯಲ್ಲಿ ಕೇಳಲಾಗುವ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ಕೊಡಲು ಸಾಧ್ಯವಾಗುವಂತೆ ಇರಬೇಕು ಎನ್ನುವ ಪರಿಕಲ್ಪನೆಯ ಆಧಾರದಲ್ಲಿರುತ್ತದೆ.‌ ಬೋಧನೆ ಮತ್ತು ಕಲಿಕೆಯಲ್ಲಿ ಭಾಷಾ ಕೌಶಲಗಳು ಮಹತ್ವವನ್ನು ಪಡೆಯಬೇಕಾದರೆ ಭಾಷಾ ಪಠ್ಯಗಳ ಪರೀಕ್ಷೆಯ ವಿನ್ಯಾಸದಲ್ಲಿ ಸುಧಾರಣೆ ತರಬೇಕು.‌ ಪರೀಕ್ಷೆಯಲ್ಲಿ ಕೇಳಲಾಗುವ ಪ್ರಶ್ನೆಗಳು ಪಠ್ಯಪುಸ್ತಕದ ವಿಚಾರಗಳನ್ನು ಉತ್ತರವಾಗಿ ಬಯಸುವಂತಹ ಪ್ರಶ್ನೆಗಳಾಗಿರಬಾರದು.‌ ಬದಲಿಗೆ ಪಠ್ಯ ವಿಚಾರಗಳಲ್ಲಿರುವ ಭಾಷಾ ಕೌಶಲಗಳನ್ನು ಉತ್ತರವಾಗಿ ಬಯಸುವ ಪ್ರಶ್ನೆಗಳಾಗಿರಬೇಕು.‌ ಅಂತಿಮ‌ ಪರೀಕ್ಷೆಯ ಪ್ರಶ್ನೆಪತ್ರಿಕೆಗಳ ವಿನ್ಯಾಸವನ್ನು ಭಾಷಾ ಕೌಶಲ ಆಧಾರಿತವಾಗಿ ಬದಲಿಸಿದಾಗ ಕಾಲಕಾಲಕ್ಕೆ ನಡೆಸುವ ಮೌಲ್ಯಮಾಪನ ಪದ್ಧತಿಯಲ್ಲೂ ಪರೀಕ್ಷಾ ವಿನ್ಯಾಸದ ಪ್ರಭಾವ ಉಂಟಾಗುತ್ತದೆ. ಅವು ಕೂಡ ಭಾಷಾ ಕೌಶಲ ಆಧಾರಿತವಾಗುತ್ತವೆ.‌ ಆಗ ಪಾಠ ಬೋಧನಾ ಕ್ರಮಗಳಲ್ಲೂ ಭಾಷಾ ಕೌಶಲಗಳಿಗೆ ಪ್ರಾಮುಖ್ಯ ಬರುತ್ತದೆ.

ಶಿಕ್ಷಣದ ಉದ್ದೇಶವು ಹೆಚ್ಚು ಔದ್ಯೋಗಿಕ ರೂಪದ್ದಾಗುತ್ತಾ ಹೋದಂತೆ ಯಾವುದೇ ಭಾಷೆಯ ಜ್ಞಾನ ಕಡಿಮೆಯಾಗುತ್ತಾ ಹೋಗುತ್ತದೆ. ಭಾಷಾ ಕೌಶಲಗಳ ಕೊರತೆ ಇಂದಿನ ಶೈಕ್ಷಣಿಕ ಸನ್ನಿವೇಶದ ಸಾಮಾನ್ಯ ಲಕ್ಷಣವಾಗಿದೆ.‌ ಭಾಷಾ ಜ್ಞಾನದ ಕೊರತೆಯು ಹೆಚ್ಚು ಜ್ಞಾನ ಗಳಿಸಲು ಇರುವ ಸಾಧ್ಯತೆಗಳನ್ನು ಕ್ರಮೇಣ  ಕಡಿಮೆಗೊಳಿಸುತ್ತದೆ. ಕಲಿಕಾನುಭವಗಳನ್ನು ಕುಗ್ಗಿಸುತ್ತದೆ.‌ ಆದಕಾರಣ, ಭಾಷಾ ವಿಕಾಸದ ಪ್ರಾಥಮಿಕ ನೆಲೆಯಾದ ಮಾತೃಭಾಷೆಯ ಕಲಿಕೆಯ ದಕ್ಷತೆಯನ್ನು ಹೆಚ್ಚಿಸಲು ಆದ್ಯತೆ ನೀಡಲೇಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT