ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರಜಾಪ್ರಭುತ್ವದ ತಾಯಿ’ಗೆ ಇದು ಸಮ್ಮತವೇ? ಸುಧೀಂದ್ರ ಕುಲಕರ್ಣಿ ಲೇಖನ

ಪ್ರಚಾರ ಮತ್ತು ವಾಸ್ತವದ ನಡುವಿನ ಅಂತರ ದಿನದಿನಕ್ಕೂ ವಿಸ್ತರಿಸುತ್ತಿದೆ
Last Updated 3 ಏಪ್ರಿಲ್ 2023, 19:04 IST
ಅಕ್ಷರ ಗಾತ್ರ

ಭಾರತಕ್ಕೆ ಮೊದಲ ಬಾರಿಗೆ ಜಿ-20 ಸಮೂಹದ ಅಧ್ಯಕ್ಷತೆ ವಹಿಸುವ ಅವಕಾಶ ಸಿಕ್ಕಿರುವುದು ಗೌರವಾರ್ಹ ಹಾಗೂ ಸಮಸ್ತ ದೇಶವಾಸಿಗಳಿಗೂ ಅಭಿಮಾನ ತರುವ ಸಂಗತಿ. ಆದರೆ ಸೆಪ್ಟೆಂಬರ್‌ನಲ್ಲಿ ಜರುಗಲಿರುವ ಶೃಂಗಸಭೆಗೆ ಸಂಬಂಧಿಸಿದಂತೆ ಸರ್ಕಾರ ಎಲ್ಲೆಡೆ ನಡೆಸಿರುವ ಪ್ರಚಾರದ ವೈಖರಿಯನ್ನು ನೋಡಿದರೆ, ಭಾರತಕ್ಕೆ ಈಗಾಗಲೇ ‘ವಿಶ್ವಗುರು’ ಮನ್ನಣೆ ಪ್ರಾಪ್ತವಾಗಿಬಿಟ್ಟಿದೆ ಹಾಗೂ ಜಗತ್ತಿನ ಎಲ್ಲ ಪ್ರಮುಖ ರಾಷ್ಟ್ರಗಳೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವವನ್ನು ಒಪ್ಪಿಕೊಂಡುಬಿಟ್ಟಿವೆ ಎಂಬಂತಹ ವಾತಾವರಣವನ್ನು ಸೃಷ್ಟಿಸಲಾಗುತ್ತಿದೆ.

ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಇದು ಪ್ರತಿವರ್ಷವೂ ಸರದಿಯಲ್ಲಿ (ರೊಟೇಟಿಂಗ್ ಪ್ರೆಸಿಡೆನ್ಸಿ) ಬರುವ ಅಧ್ಯಕ್ಷತೆ. 2022ರಲ್ಲಿ ಇಂಡೊನೇಷ್ಯಾ ಜಿ-20 ಅಧ್ಯಕ್ಷತೆ ವಹಿಸಿತ್ತು, 2024ರಲ್ಲಿ ಬ್ರೆಜಿಲ್ ವಹಿಸಲಿದೆ. 2008ರಿಂದ ನಡೆಯುತ್ತಿರುವ ಈ ಸಭೆಗಳಲ್ಲಿ ಅಮೆರಿಕ, ಟರ್ಕಿ, ಚೀನಾ, ಸೌದಿ ಅರೇಬಿಯಾದಂತಹ ದೇಶಗಳು ಈಗಾಗಲೇ ಈ ಗೌರವಕ್ಕೆ ಪಾತ್ರವಾಗಿವೆ. ಆದರೆ ಅಧ್ಯಕ್ಷತೆ ವಹಿಸಿರುವ ರಾಷ್ಟ್ರವೇ ಪ್ರಪಂಚದ ಮುಖಂಡ, ಅಲ್ಲಿನ ಮುಖ್ಯಸ್ಥರೇ ಜಗತ್ತಿನ ನೇತಾರ ಎಂಬ ರೀತಿಯಲ್ಲಿ ಈಗ ನಡೆಯುತ್ತಿರುವಂತಹ ಪ್ರಚಾರ, ಈ ಹಿಂದೆ ಯಾವ ದೇಶದಲ್ಲಿಯೂ ನಡೆದಿರಲಿಲ್ಲ.

1983ರಲ್ಲಿ ಭಾರತದ ಅಧ್ಯಕ್ಷತೆಯಲ್ಲಿ ದೆಹಲಿಯಲ್ಲಿ ನಡೆದ ಅಲಿಪ್ತ ರಾಷ್ಟ್ರಗಳ ಶೃಂಗಸಭೆಯಲ್ಲಿ 140 ದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರು ಇಂದಿನ ಹಾಗೆ ನೂರಾರು ಕೋಟಿ ರೂಪಾಯಿ ಖರ್ಚು ಮಾಡಿ, ದೇಶದಾದ್ಯಂತ ತಮ್ಮದೇ ಪೋಸ್ಟರುಗಳನ್ನು ಹಚ್ಚಿಸಿ ಸ್ವಗುಣಗಾನ ಮಾಡಿಕೊಂಡಿರಲಿಲ್ಲ. ಆದರೆ ಪ್ರಚಾರವೇ ಆಡಳಿತದ ಮುಖ್ಯ ಗುರಿ ಎಂದು ನಂಬಿರುವ ಬಿಜೆಪಿ ನೇತೃತ್ವದ ಇಂದಿನ ಸರ್ಕಾರ, 2024ರ ಸಂಸದೀಯ ಚುನಾವಣಾಪೂರ್ವದಲ್ಲಿ ಜಿ-20 ಅಧ್ಯಕ್ಷತೆಯನ್ನೂ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿರುವುದರಲ್ಲಿ ಆಶ್ಚರ್ಯವೇನಿಲ್ಲ.

ಇಲ್ಲಿ ಆಶ್ಚರ್ಯದ ಸಂಗತಿಯೆಂದರೆ, ಭಾರತವೇ ಜಗತ್ತಿನ ‘ಪ್ರಜಾಪ್ರಭುತ್ವದ ತಾಯಿ’ ಎಂಬ ಮೋದಿ ನೇತೃತ್ವದ ಸರ್ಕಾರದ ಘೋಷಣೆ. ಸಾವಿರಾರು ವರ್ಷಗಳ ಹಿಂದೆಯೂ ಭಾರತೀಯ ಉಪಖಂಡದಲ್ಲಿ ಗಣತಂತ್ರದ ಹಲವು ಮೌಲ್ಯಗಳು, ವ್ಯವಸ್ಥೆಗಳು ಇದ್ದವು. ರಾಜ ಮಹಾರಾಜರ ಕಾಲದಲ್ಲಿಯೂ ಗ್ರಾಮಪಾತಳಿಯಲ್ಲಿ
ಪಂಚಾಯಿತಿ ಪದ್ಧತಿ ಜೀವಂತವಾಗಿತ್ತು. ಆದರೆ ‘ಭಾರತವೇ ಪ್ರಜಾಪ್ರಭುತ್ವದ ಜನನಿ’ ಎಂದು ಈಗ ಡಂಗುರ ಬಾರಿಸುತ್ತಿರುವ ಸರ್ಕಾರ, ಪ್ರಜಾಪ್ರಭುತ್ವದ ನೀತಿ ನಿಯಮಗಳನ್ನು, ಸಂವಿಧಾನದ ಆಶಯಗಳನ್ನು ಪಾಲಿಸುತ್ತಿದೆಯೇ? ಇಲ್ಲ. ಪ್ರಚಾರ ಮತ್ತು ವಾಸ್ತವದ ನಡುವಿನ ಅಂತರ ದಿನದಿನಕ್ಕೂ ವಿಸ್ತರಿಸುತ್ತಿದೆ.

ಪ್ರಜಾಪ್ರಭುತ್ವದ ಮೊದಲನೇ ನಿಯಮವೆಂದರೆ, ಭಿನ್ನಾಭಿಪ್ರಾಯಗಳನ್ನು ಗೌರವಿಸುವುದು. ಸ್ವಾತಂತ್ರ್ಯದ ನಂತರ ಭಾರತದಲ್ಲಿ ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನು, ಸಂಸ್ಕೃತಿಯನ್ನು ಪೋಷಿಸುವುದರಲ್ಲಿ ಎಲ್ಲರಿಗಿಂತ ಹೆಚ್ಚು ಕೊಡುಗೆ ನೀಡಿದ ಜವಾಹರಲಾಲ್ ನೆಹರೂ ಒಂದು ಮಾತನ್ನು ಹೇಳುತ್ತಿದ್ದರು: ‘ನಾನು ನಿಮ್ಮ ವಿಚಾರಗಳನ್ನು ಒಪ್ಪದೇ ಇರಬಹುದು. ಆದರೆ ನಿಮ್ಮ ವಿಚಾರಗಳನ್ನು ಮುಕ್ತವಾಗಿ ಪ್ರಕಟಿಸುವ ನಿಮ್ಮ ಹಕ್ಕನ್ನು ನನ್ನ ಪ್ರಾಣವನ್ನು ಪಣಕ್ಕಿಟ್ಟಾದರೂ ಸಂರಕ್ಷಿಸುವೆ’. ರಾಜಕೀಯ ವಿರೋಧಿಗಳನ್ನು ಶತ್ರುಗಳೆಂದು ಭಾವಿಸಬಾರದು ಎಂದು ಅಟಲ್ ಬಿಹಾರಿ ವಾಜಪೇಯಿ ಅನೇಕ ಬಾರಿ ಹೇಳುತ್ತಿದ್ದರು. ಅಂದಿಗೂ ಇಂದಿಗೂ ಎಷ್ಟೊಂದು ವ್ಯತ್ಯಾಸ? ಇಂದು ಸರ್ಕಾರದ ನೀತಿ ನಿರ್ಣಯಗಳನ್ನು ವಿರೋಧಿಸುವವರು ‘ರಾಷ್ಟ್ರ ವಿರೋಧಿಗಳು’ ಎಂಬಂಥ ವಿಷಪೂರಿತ ವಾತಾವರಣವನ್ನು ಸೃಷ್ಟಿಸಲಾಗಿದೆ.

ಕೇಂದ್ರ ಕಾನೂನು ಸಚಿವ ಕಿರಣ್‌ ರಿಜಿಜು ಅವರ ಉದ್ಧಟತನದ ನಡೆಯೂ ಗಮನಾರ್ಹ. ನ್ಯಾಯಮೂರ್ತಿಗಳಿಗೆ ಬೆದರಿಕೆ ಹಾಕುವುದಕ್ಕೂ ಅವರು ಹಿಂದೆಮುಂದೆ ನೋಡಲಿಲ್ಲ. ‘ಕೆಲವು ನಿವೃತ್ತ ನ್ಯಾಯಮೂರ್ತಿಗಳು ದೇಶವಿರೋಧಿ ಗುಂಪುಗಳ ಭಾಗವಾಗಿದ್ದಾರೆ. ಅವರು ಇದಕ್ಕಾಗಿ ಬೆಲೆ ತೆರಲೇಬೇಕಾಗುತ್ತದೆ. ಯಾರೂ ತಪ್ಪಿಸಿಕೊಳ್ಳಲು ನಾವು ಬಿಡುವುದಿಲ್ಲ’ ಎಂದು ಅವರು ಎಚ್ಚರಿಕೆ ನೀಡಿದರು. ಸರ್ಕಾರದ ವಿರೋಧವೇ ರಾಷ್ಟ್ರವಿರೋಧ ಎಂಬ ಸಲೀಸಾದ ಸಮೀಕರಣವು ಪ್ರಜಾಪ್ರಭುತ್ವಕ್ಕೆ ಘಾತುಕವಾದುದು. ಆದ್ದರಿಂದ ನ್ಯಾಯಾಂಗ ವ್ಯವಸ್ಥೆಗೆ ಸಂಬಂಧಿಸಿದ ಎಲ್ಲರೂ- ಹಾಲಿ ಮತ್ತು ನಿವೃತ್ತ ನ್ಯಾಯಮೂರ್ತಿಗಳು, ವಕೀಲರು ಹಾಗೂ ನಾಗರಿಕರು- ಇದನ್ನು ಪ್ರತಿಭಟಿಸಲೇಬೇಕು.

ಎಲ್ಲರಿಗೂ ಸಮಾನ ನ್ಯಾಯ ಎಂಬುದು ಪ್ರಜಾ
ಪ್ರಭುತ್ವದ ಒಂದು ಮೂಲ ತತ್ವ. ಆದರೆ ‘75 ವರ್ಷಗಳಿಂದ ದೇಶದಲ್ಲಿ ಪಸರಿಸಿರುವ ಭ್ರಷ್ಟಾಚಾರವನ್ನು ನಿರ್ಮೂಲ
ಗೊಳಿಸುತ್ತೇವೆ’ ಎಂದು ಸಾರಿದ ಮೋದಿ ನೇತೃತ್ವದ ಸರ್ಕಾರ ಇಂದು ಮಾಡುತ್ತಿರುವುದೇನು? ಭ್ರಷ್ಟಾಚಾರದ ನಿರ್ಮೂಲನೆಗಾಗಿ ತೆಗೆದುಕೊಂಡ ಕ್ರಮಗಳನ್ನು ಎಲ್ಲರೂ ಸ್ವಾಗತಿಸಲೇಬೇಕು. ಆದರೆ ವಿರೋಧ ಪಕ್ಷಗಳ ಮುಖಂಡರ ವಿರುದ್ಧ ಮಾತ್ರ ಜಾರಿ ನಿರ್ದೇಶನಾಲಯ, ಸಿಬಿಐ, ಆದಾಯ ತೆರಿಗೆ ಇಲಾಖೆ ಅಂತಹವುಗಳನ್ನು ದುರುಪಯೋಗಪಡಿಸಿಕೊಂಡು, ಅವರನ್ನು ಜೈಲಿಗೆ ಕಳಿಸುವ ಇಂದಿನ ಪರಿಪಾಟ ಪಕ್ಷಪಾತಿ ಧೋರಣೆಯಿಂದ ಕೂಡಿದ್ದಲ್ಲವೇ? ಹಾಗಿದ್ದರೆ ಬಿಜೆಪಿಯಲ್ಲಿ ಭ್ರಷ್ಟ ರಾಜಕಾರಣಿಗಳು ಇಲ್ಲವೇ? ಭಯಮುಕ್ತ ರಾಜಕಾರಣ, ನಿರ್ಭೀತ ಸಮಾಜ ಇವು ಕೂಡ ಪ್ರಜಾಪ್ರಭುತ್ವದ ನಡೆಗಳು ತಾನೇ? ಆದರೆ ಇಂದು ಆಳುವ ಪಕ್ಷವನ್ನು ಬೆಂಬಲಿಸದಿರುವ ಎಲ್ಲರಲ್ಲೂ ಹೆದರಿಕೆಯನ್ನು ಹುಟ್ಟಿಸ ಲಾಗಿದೆ ಹಾಗೂ ಇಂಥ ಹೆದರಿಕೆಯನ್ನೇ ವಿರೋಧಿಗಳ ವಿರುದ್ಧದ ಅಸ್ತ್ರವನ್ನಾಗಿ ಬಳಸಿಕೊಳ್ಳಲಾಗುತ್ತಿದೆ.

ಮಾಧ್ಯಮ ಸ್ವಾತಂತ್ರ್ಯವು ಪ್ರಜಾಪ್ರಭುತ್ವದ ಅಡಿಗಲ್ಲು. ಇಂದು ದೇಶದಲ್ಲಿನ ಅನೇಕ ಮಾಧ್ಯಮ ಸಂಸ್ಥೆಗಳು ಬೃಹತ್‌ ಉದ್ಯಮಿಗಳ ಕೈವಶವಾಗುತ್ತಿವೆ. ಈ ಧನಾಢ್ಯ ಉದ್ಯಮಿಗಳಿಗೆ ವಾಕ್ ಸ್ವಾತಂತ್ರ್ಯವಾಗಲಿ, ಮಾಧ್ಯಮ ಸ್ವಾತಂತ್ರ್ಯವಾಗಲಿ ಅಥವಾ ಸಾಂವಿಧಾನಿಕ ಹಕ್ಕುಗಳ ರಕ್ಷಣೆಯಾಗಲಿ ಮುಖ್ಯವಲ್ಲ, ಅವರ ಔದ್ಯೋಗಿಕ ಹಿತಾಸಕ್ತಿಗಳೇ ಮುಖ್ಯ. ಇಂಥವರು ಸರ್ಕಾರದ ತಪ್ಪುಗಳನ್ನು ಎತ್ತಿತೋರಿಸುವ ಸಾಹಸ ಮಾಡಲಾರರು. ಏಕೆಂದರೆ ಇವರು ಕೂಡ ಭಯಗ್ರಸ್ತರೇ. ಹಿಂದಿನ ವರ್ಷದ ವರ್ಲ್ಡ್ ಪ್ರೆಸ್ ಸೂಚ್ಯಂಕದ ಪ್ರಕಾರ, ಮಾಧ್ಯಮ ಸ್ವಾತಂತ್ರ್ಯಕ್ಕೆ ಸಂಬಂಧಿಸಿದಂತೆ ಜಗತ್ತಿನ ದೇಶಗಳಲ್ಲಿ ಭಾರತದ ಸ್ಥಾನ 150ಕ್ಕೆ ಇಳಿದಿದೆ. ಇದೇ ಪರಿಸ್ಥಿತಿ ಮುಂದುವರಿದರೆ, ಈ ವಿಷಯದಲ್ಲಿ ನಮ್ಮ ದೇಶವು ಕಮ್ಯುನಿಸ್ಟ್ ಚೀನಾಕ್ಕೆ ಪೈಪೋಟಿ ಕೊಡಬಲ್ಲದು.

ಕೊನೆಯಲ್ಲಿ, ರಾಹುಲ್‌ ಗಾಂಧಿ ಅವರ ಮೇಲೆ ಕೈಗೊಳ್ಳಲಾದ ಕ್ರಮವನ್ನು ನೋಡೋಣ. 2019ರಲ್ಲಿ ಕೋಲಾರದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಷಣ ಮಾಡುವಾಗ ಅವರ ನಾಲಿಗೆ ತಪ್ಪಿದ್ದು ನಿಜ. ಪ್ರಬುದ್ಧ ಮುಖಂಡರು ಹೀಗೆ ಮಾಡಬಾರದು. ಆದರೂ ಅವರಿಗಿಂತ ಅನೇಕ ಪಟ್ಟು ಆಕ್ಷೇಪಾರ್ಹ ಹೇಳಿಕೆಗಳನ್ನು ಇತರ ಪಕ್ಷಗಳ ನೇತಾರರೂ, ಅಷ್ಟೇ ಅಲ್ಲ ಸ್ವತಃ ಮೋದಿಯವರೂ ಕೊಟ್ಟಿದ್ದಾರೆ. ಆದರೆ ರಾಹುಲ್ ಅವರನ್ನೇ ಗುರಿ ಮಾಡಿ, ಸಂಶಯಾಸ್ಪದ ರೀತಿಯಲ್ಲಿ ನಡೆದ ಮಾನಹಾನಿ ಪ್ರಕರಣದ ವಿಚಾರಣೆಯಲ್ಲಿ ಅವರಿಗೆ ಜೈಲುವಾಸದ ಶಿಕ್ಷೆ ನೀಡಿ, ಮರುದಿನವೇ ಅವರ ಲೋಕಸಭಾ ಸದಸ್ಯತ್ವವನ್ನು ರದ್ದುಗೊಳಿಸಿದ ನಿರ್ಣಯವು ಭಾರತದ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಅಭೂತಪೂರ್ವ. ಇವೆಲ್ಲ ಅಚಾನಕ್ ಆಗಿ ನಡೆದ ಘಟನಾವಳಿಗಳಲ್ಲ. ಇದರ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿಯವರ 4,000 ಕಿಲೊಮೀಟರುಗಳ ಯಶಸ್ವಿ ‘ಭಾರತ ಜೋಡೊ’ ಯಾತ್ರೆಗೆ ದೊರಕಿದ ಜನಬೆಂಬಲವೂ ಇದೆ ಹಾಗೂ ಹಿಂಡನ್‌ಬರ್ಗ್ ವರದಿ ಬಹಿರಂಗಗೊಂಡ ನಂತರ ಅವರು ಅದಾನಿ- ಮೋದಿ ನಡುವಿನ ಸಂಬಂಧದ ಬಗ್ಗೆ ಸಂಸತ್ತಿನಲ್ಲಿ ಎತ್ತಿದ ಅನನುಕೂಲಕರ ಪ್ರಶ್ನೆಗಳ ಕಾರಣವೂ ಇದೆ, ಇದರಿಂದಾಗಿಯೇ ಮಾನಹಾನಿ ಪ್ರಕರಣದ ನೆವದಲ್ಲಿ ಅವರಿಗೆ ಕಠಿಣ ಶಿಕ್ಷೆ ಕೊಡಲಾಯಿತು ಎಂಬುದು ರಾಜಕೀಯ ಪಂಡಿತರಿಗಷ್ಟೇ ಅಲ್ಲ ಸಾಮಾನ್ಯ ಜನರಿಗೆ ಕೂಡ ತಿಳಿದಿದೆ.

ಈ ಬಗೆಯ ಸೇಡಿನ ರಾಜಕಾರಣ ಪ್ರಜಾಪ್ರಭುತ್ವಕ್ಕೆಆರೋಗ್ಯಕರವೇ? ಭಾರತದ ಉದ್ಯೋಗ ಕ್ಷೇತ್ರದಲ್ಲಿ ನಡುಕ ಹುಟ್ಟಿಸಿದ ಅದಾನಿ ಪ್ರಕರಣದ ಬಗ್ಗೆ ಸಂಸತ್ತಿನಲ್ಲಿ ಒಂದಿಷ್ಟೂ ಚರ್ಚೆಗೆ ಆಸ್ಪದ ಕೊಡದ ಸರ್ಕಾರವು ಸಂಸತ್‌ ಸದಸ್ಯರ ಅಧಿಕಾರವನ್ನೂ ಹತ್ತಿಕ್ಕುತ್ತಿಲ್ಲವೇ?

ಒಂದೆಡೆ ಮೋದಿ ಅವರು ‘ಪ್ರಜಾಪ್ರಭುತ್ವದ ತಾಯಿ ಭಾರತ’ ಎಂದು ಪದೇಪದೇ ಸಾರುತ್ತಿದ್ದಾರೆ. ಅದೇ ಮತ್ತೊಂದೆಡೆ, ಅವರ ನೇತೃತ್ವದ ಸರ್ಕಾರವೇ ಯಾವುದೇ ಹಿಂಜರಿಕೆಯಿಲ್ಲದೆ ಪ್ರಜಾಪ್ರಭುತ್ವದ ಅವಹೇಳನ ಮಾಡುತ್ತಿದೆ. ಈ ಕಪಟಾಚಾರವನ್ನು ಭಾರತದ ಜಾಗೃತ ಜನರೂ ನೋಡುತ್ತಿದ್ದಾರೆ, ಹೊರಗಿನ ಜಗತ್ತೂ ನೋಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT