ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ | ಡೋಪಿಂಗ್‌ ಪಿಡುಗಿಗೆ ‘ಮದ್ದು‘ ಅರೆಯುವ ಕಾಲ

Published 8 ಸೆಪ್ಟೆಂಬರ್ 2023, 19:55 IST
Last Updated 8 ಸೆಪ್ಟೆಂಬರ್ 2023, 19:55 IST
ಅಕ್ಷರ ಗಾತ್ರ

ಚೀನಾದಲ್ಲಿ ಏಷ್ಯನ್ ಕ್ರೀಡಾಕೂಟ ಆರಂಭವಾಗಲು ಇನ್ನೇನು ಕೆಲವೇ ದಿನಗಳು ಉಳಿದಿವೆ. ಭಾರತದ ಅಥ್ಲೀಟ್‌ಗಳು ಎಷ್ಟು ಪದಕ ಜಯಿಸಬಹುದು ಎಂಬ ಲೆಕ್ಕಾಚಾರಗಳೂ ಆರಂಭವಾಗಿವೆ. ಆದರೆ ಇತ್ತೀಚೆಗೆ ಬಂದ ಸುದ್ದಿಯೊಂದು ಕ್ರೀಡಾವಲಯದಲ್ಲಿ ಆಘಾತ ಮೂಡಿಸಿದೆ.

ಏಷ್ಯನ್ ಕ್ರೀಡಾಕೂಟಕ್ಕೆ ತೆರಳಲು ಆಯ್ಕೆಯಾಗಿದ್ದ ಭಾರತದ 14 ವರ್ಷದ ಈಜುಪಟುವೊಬ್ಬ ಉದ್ದೀಪನ ಮದ್ದು ಸೇವನೆ ಮಾಡಿ ಸಿಕ್ಕಿಬಿದ್ದಿದ್ದಾನೆ. ಒಟ್ಟು ಏಳು ಜೂನಿಯರ್ ಕ್ರೀಡಾಪಟುಗಳು ರಾಷ್ಟ್ರೀಯ ಮತ್ತು ಅರ್ಹತಾ ಚಾಂಪಿಯನ್‌ಷಿಪ್‌ ನಂತರ ನಡೆದ ಮಾದರಿಗಳ (ಮೂತ್ರ ಹಾಗೂ ರಕ್ತ) ಪರೀಕ್ಷೆಯಲ್ಲಿ ಉದ್ದೀಪನ ಮದ್ದು ಸೇವಿಸಿರುವುದು ಪತ್ತೆಯಾಗಿದೆ.

‘ಅಬ್ಬಾ... ಇವರು ಏಷ್ಯನ್ ಕ್ರೀಡಾಕೂಟಕ್ಕೆ ಹೋಗಿ ಅಲ್ಲಿ ಸಿಕ್ಕಿಬಿದ್ದಿದ್ದರೆ ದೇಶದ ಮಾನ ಮರ್ಯಾದೆ ಹರಾಜಾಗುತ್ತಿತ್ತು. ಇಲ್ಲಿಯೇ ಸಿಕ್ಕಿಹಾಕಿಕೊಂಡಿದ್ದು ಒಳ್ಳೆಯದಾಯಿತು’ ಎಂದು ಸಮಾಧಾನಪಟ್ಟುಕೊಂಡು ಸುಮ್ಮನಾಗುವ ವಿಷಯ ಇದಲ್ಲ. ಈ ಕ್ರೀಡಾಪಟುಗಳಿಂದ ಪಡೆದ ಮಾದರಿಯಲ್ಲಿ ನಿಷೇಧಿತ ಸ್ಟಿರಾಯ್ಡ್‌ ಅಂಶಗಳು ಪತ್ತೆಯಾಗಿರುವುದು ಆತಂಕಕಾರಿ ಬೆಳವಣಿಗೆ. ಜೂನಿಯರ್ ಹಂತದಲ್ಲಿಯೂ ಉದ್ದೀಪನ ಮದ್ದು ತನ್ನ ಕಬಂಧಬಾಹುಗಳನ್ನು ಚಾಚುತ್ತಿರುವುದರ ಸಂಕೇತ ಇದು. ಕೆಲವು ತಿಂಗಳುಗಳ ಹಿಂದೆ ದಾವಣಗೆರೆ ಸಮೀಪದ ಊರೊಂದರಲ್ಲಿ ನಡೆದಿದ್ದ ರಾಷ್ಟ್ರೀಯ ಕುಸ್ತಿ ಪಂದ್ಯಾವಳಿ ಸ್ಥಳದ ಸಮೀಪ ನಿಷೇಧಿತ ಮದ್ದುಗಳ ಸ್ಯಾಷೆಗಳು, ಸಿರಿಂಜ್‌ಗಳು ಪತ್ತೆಯಾಗಿದ್ದು ವರದಿಯಾಗಿತ್ತು. 

ಈ ರೀತಿಯಾಗಲು ಆಟಗಾರರಿಗೆ ಅರಿವಿನ ಕೊರತೆ ಇದೆಯೇ? ಅವರಿಗೆ ತಿಳಿವಳಿಕೆ ನೀಡಬೇಕಾದ ಫೆಡರೇಷನ್‌ಗಳು, ತರಬೇತುದಾರರು ಹಾಗೂ ತಂಡದ ನೆರವು ಸಿಬ್ಬಂದಿಯ ಕರ್ತವ್ಯಲೋಪ ಕಾರಣವೇ ಎಂಬ ಪ್ರಶ್ನೆಗಳು ಮೂಡುವುದು ಸಹಜ.

ಜೂನಿಯರ್ ಕ್ರೀಡಾಪಟುಗಳಲ್ಲಿ ತಿಳಿವಳಿಕೆ ಇಲ್ಲದಿರಬಹುದು. ಕೋಚ್‌ಗಳು ಮತ್ತಿತರರ ಕೈವಾಡವೂ ಇರಬಹುದು. ಆದರೆ ದ್ಯುತಿ ಚಾಂದ್, ಒಲಿಂಪಿಯನ್ ಡಿಸ್ಕಸ್ ಥ್ರೋ ಅಥ್ಲೀಟ್ ಕಮಲ್‌ಪ್ರೀತ್ ಕೌರ್, ಜುಡೊ ಪಟು ಜಸ್ಲೀನ್ ಸಿಂಗ್, ಜಿಮ್ನಾಸ್ಟ್ ದೀಪಾ ಕರ್ಮಾಕರ್, ಜಾವೆಲಿನ್ ಥ್ರೋ ಪಟು ಶಿವಪಾಲ್ ಸಿಂಗ್, ಕ್ರಿಕೆಟಿಗ ಪೃಥ್ವಿ ಶಾ ಅವರಂತಹ ಅನುಭವಿ ಕ್ರೀಡಾಪಟುಗಳೂ ಈ ಜಾಲಕ್ಕೆ ಬಿದ್ದಿರುವುದು ಸೋಜಿಗ. 

ಅದಕ್ಕಾಗಿಯೇ ಅತಿ ಹೆಚ್ಚು ಉದ್ದೀಪನ ಮದ್ದು ಸೇವನೆ ಪ್ರಕರಣಗಳು ವರದಿಯಾಗುವ ದೇಶಗಳ ಪಟ್ಟಿಯಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ಇತ್ತೀಚೆಗಷ್ಟೇ ವಿಶ್ವ ಉದ್ದೀಪನ ಮದ್ದು ತಡೆ ಘಟಕ (ವಾಡಾ) ಪ್ರಕಟಿಸಿರುವ ಪಟ್ಟಿಯಲ್ಲಿ ರಷ್ಯಾ ಅಗ್ರಸ್ಥಾನದಲ್ಲಿದ್ದು, ಭಾರತ ನಂತರದ ಸ್ಥಾನದಲ್ಲಿದೆ. ಇದಕ್ಕೆ ಇಲ್ಲಿಯ ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕದ (ನಾಡಾ) ಅದಕ್ಷತೆಯೂ ಕಾರಣ ಎಂದು ವಾಡಾ ಇತ್ತೀಚೆಗೆ ಕಿಡಿಕಾರಿತ್ತು.

ಅಥ್ಲೀಟ್‌ಗಳ ಚಲನವಲನ ಮಾಹಿತಿ ನಿರ್ವಹಣೆ ಮತ್ತು ಉದ್ದೀಪನ ಮದ್ದು ಸೇವನೆ ಪರೀಕ್ಷೆಗಳಲ್ಲಿ ವೈಫಲ್ಯವನ್ನೂ ವಾಡಾ ಗುರುತಿಸಿದೆ. ತಾನೇ ನಡೆಸಿದ ತನಿಖೆಯಲ್ಲಿ 12 ಅಥ್ಲೀಟ್‌ಗಳು ಡೋಪಿಂಗ್ ಮಾಡಿರುವುದನ್ನು ಖಚಿತಪಡಿಸಿದೆ. ಅಲ್ಲದೆ ಚಲನವಲನ ದಾಖಲಾಗದ 97 ಪ್ರಕರಣಗಳನ್ನು ಪತ್ತೆ ಮಾಡಿದೆ. ಇದರಲ್ಲಿ ಭಾರತದ 70 ಅಥ್ಲೀಟ್‌ಗಳೂ ಸೇರಿದ್ದಾರೆ.

ವಾಡಾದ ಸ್ವತಂತ್ರವಾದ ಗುಪ್ತಚರ ಮತ್ತು ತನಿಖಾ ಸಂಸ್ಥೆಯ ವರದಿಯಲ್ಲಿ ಈ ಮಾಹಿತಿಗಳನ್ನು ಬಹಿರಂಗಪಡಿಸಲಾಗಿದೆ. ಭಾರತದಲ್ಲಿ ನಾಡಾ ನಡೆಸುವ ಪರೀಕ್ಷಾ ವಿಧಾನಗಳು ಸಮಂಜಸವಾಗಿಲ್ಲ. ವಾಡಾ ನಿಯಮಾವಳಿ ಮತ್ತು ಅಂತರರಾಷ್ಟ್ರೀಯ ದರ್ಜೆಗೆ ಅನುಗುಣವಾಗಿ ಇಲ್ಲ ಎಂದೂ ಉಲ್ಲೇಖಿಸಿದೆ. 2018ರಿಂದಲೇ ‘ಆಪರೇಷನ್ ಕರೋಸಿಲ್’ ಆರಂಭಿಸಿದೆ.ಅದರ ಪ್ರಕಾರ ನಾಡಾದ ನೋಂದಾಯಿತ ಪರೀಕ್ಷೆ ತಂಡ (ಆರ್‌ಟಿಪಿ) ಸರಿಯಾದ ಮೇಲ್ವಿಚಾರಣೆ ನಡೆಸಿಲ್ಲ. ಅಥ್ಲೀಟ್‌ಗಳ ಚಲನವಲನದ ಮಾಹಿತಿ ನಿರ್ವಹಣೆ ಸೂಕ್ತ ವಾಗಿಲ್ಲ ಎಂದೂ ವಾಡಾ ಅಸಮಾಧಾನ ವ್ಯಕ್ತಪಡಿಸಿತ್ತು.

ಭಾರತದಲ್ಲಿ ಕ್ರೀಡಾಪಟುಗಳ ಸಂಖ್ಯೆ ಹೆಚ್ಚಾಗುತ್ತಿದೆ ಮತ್ತು ತಂತ್ರಜ್ಞಾನ ಬಳಕೆ ವೃದ್ಧಿಯಾಗುತ್ತಿದೆ. ಈ ಕಾರಣದಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಾದರಿಗಳನ್ನು ಸಂಗ್ರಹಿಸಲಾಗುತ್ತಿದೆ. ಆದರೆ, ದೆಹಲಿಯಲ್ಲಿ ಇರುವ ಏಕೈಕ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಬೇಕು. ಇದರಿಂದಾಗಿ ಫಲಿತಾಂಶಗಳು ಬರುವುದು ವಿಳಂಬವಾಗುತ್ತಿದೆ.

‘ಅಂತರರಾಷ್ಟ್ರೀಯ ಮಟ್ಟದಲ್ಲಿ ಮದ್ದು ಪರೀಕ್ಷಾ ವಿಧಾನಗಳು ಬಹಳ ಮುಂದುವರಿದಿವೆ. ತಂತ್ರಜ್ಞಾನ ಬಹಳಷ್ಟು ಸುಧಾರಣೆಯಾಗಿದೆ. ಯಾವುದೇ ನಿಷೇಧಿತ ಮದ್ದು ಸೇವನೆ ಮಾಡಿದರೂ ಒಂದಿಲ್ಲೊಂದು ಹಂತದಲ್ಲಿ ಸಿಕ್ಕಿಬೀಳುವುದು ಖಚಿತ. ಮೊದಲು ಮೂತ್ರದ ಮಾದರಿ ಮತ್ತು ರಕ್ತದ ಮಾದರಿಗಳನ್ನು ಪರೀಕ್ಷಿಸಲಾಗುತ್ತಿತ್ತು. ಈಗ ಡಿಬಿಎಸ್‌ಟಿ ವಿಧಾನ ಅಂದರೆ ರಕ್ತದ ಒಣಗಿದ ಕಲೆಗಳ ಪರೀಕ್ಷೆ ಆರಂಭಿಸಲಾಗಿದೆ. ಈ ವಿಧಾನದಲ್ಲಿ ಕ್ರೀಡಾಪಟುವಿನ ರಕ್ತದ ಕೆಲವು ಹನಿಗಳನ್ನು ಕಾಗದದ (ವಿಶೇಷ ಬ್ಲಾಟಿಂಗ್ ಪೇಪರ್) ಮೇಲೆ ಹಾಕಲಾಗುತ್ತದೆ. ಅದು ಒಣಗಿದ ನಂತರ ಪ್ಯಾಕ್ ಮಾಡಿ ಪ್ರಯೋಗಾಲಯಕ್ಕೆ ಕಳಿಸಲಾಗುತ್ತದೆ. ಅಲ್ಲಿ ಅದನ್ನು ಪರೀಕ್ಷೆ ಮಾಡಲಾಗುತ್ತದೆ. ಈ ವಿಧಾನವು ಈಗ ಹೆಚ್ಚು ಅನುಕೂಲ ಮತ್ತು ರವಾನೆಯೂ ಸುಲಭ. ಅಥ್ಲೀಟ್‌ಗಳಿಗೂ ಹೆಚ್ಚು ತೊಂದರೆ ಇಲ್ಲ. ಫಲಿತಾಂಶ ಕೂಡ ಬೇಗ ಸಿಗುತ್ತದೆ. ಏಷ್ಯಾಮಟ್ಟದ ಟೂರ್ನಿಗಳಲ್ಲಿ ಇದು ನಡೆಯಲಿದೆ. ಆದರೆ ಭಾರತದಲ್ಲಿ ಇದು ಇನ್ನೂ ಬಳಕೆಗೆ ಬಂದಿರುವ ಬಗ್ಗೆ ಮಾಹಿತಿ ಇಲ್ಲ’ ಎಂದು ಫಿಫಾ ಮತ್ತು ಏಷ್ಯಾ ಫುಟ್‌ಬಾಲ್ ಕಾನ್ಫೆಡರೇಷನ್ (ಎಎಫ್‌ಸಿ) ಡೋಪಿಂಗ್ ನಿಯಂತ್ರಣ ಅಧಿಕಾರಿ ಹಾಗೂ ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್ ವೈದ್ಯಕೀಯ ಸಮಿತಿ ಮುಖ್ಯಸ್ಥ ಡಾ. ಕಿರಣ ಕುಲಕರ್ಣಿ ಹೇಳುತ್ತಾರೆ.

ಕ್ರೀಡಾಪಟುಗಳು ಡೋಪಿಂಗ್ ಜಾಲಕ್ಕೆ ಬೀಳಲು ಕೆಲವು ಕಾರಣಗಳನ್ನೂ ಅವರು ಗುರುತಿಸಿದ್ದಾರೆ. ಅಥ್ಲೀಟ್‌ಗಳಿಗೆ ಬಾಲ್ಯದಿಂದಲೇ ನಿಷೇಧಿತ ಮದ್ದುಗಳ ಬಳಕೆಯ ಕುರಿತು ಅರಿವು ಮೂಡಿಸದಿರುವುದು ಪ್ರಮುಖ ಕಾರಣ. ಅಲ್ಲದೆ, ಅಥ್ಲೀಟ್‌ಗಳು ತಮಗೆ ಅನಾರೋಗ್ಯ ಅಥವಾ ಗಾಯದ ಸಮಸ್ಯೆಗಳಾದಾಗ ಅರ್ಹ ಕ್ರೀಡಾವೈದ್ಯರ ಬಳಿಯೇ ಚಿಕಿತ್ಸೆ ಪಡೆಯಬೇಕು. ಕ್ರೀಡಾ ವೈದ್ಯರಿಗೆ ನಿಷೇಧಿತ ಮದ್ದುಗಳ ಅರಿವು ಇರುವುದರಿಂದ ಸೂಕ್ತ ಔಷಧಿಗಳನ್ನು ನೀಡುತ್ತಾರೆ. ಆದ್ದರಿಂದ ಸಂಭವನೀಯ ಅಪಾಯವನ್ನು ತಪ್ಪಿಸಬಹುದು. ಇನ್ನೊಂದೆಡೆ, ಕೆಲವು ಫಿಸಿಯೊಥೆರಪಿಸ್ಟ್‌ಗಳು, ಟ್ರೇನರ್‌ಗಳು ಮತ್ತು ಜಿಮ್ನಾಷಿಯಂಗಳಲ್ಲಿರುವ ತರಬೇತುದಾರರು ಪೌಷ್ಟಿಕ ಆಹಾರದ ಹೆಸರಿನಲ್ಲಿ ನೀಡುತ್ತಿರುವ ಔಷಧಿಗಳು ಅಪಾಯಕಾರಿಯಾಗುತ್ತಿವೆ.

ಇವುಗಳಲ್ಲಿಯೂ ಸ್ಟಿರಾಯ್ಡ್‌ಗಳು ಇರುತ್ತವೆ. ಅವು ಆ ಕ್ಷಣಕ್ಕೆ ಸಾಮರ್ಥ್ಯ ವೃದ್ಧಿ ಮಾಡಿದರೂ ದೀರ್ಘ ಸಮಯದಲ್ಲಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತವೆ. ಹಾರ್ಮೋನು ಅಸಮತೋಲನ, ಹೃದಯಾಘಾತ, ಮೂತ್ರಪಿಂಡ ವೈಫಲ್ಯದಂತಹ ತೊಂದರೆಗಳಿಗೆ ತುತ್ತಾಗುವ ಸಂಭವಗಳು ಹೆಚ್ಚು. ಇನ್ನೊಂದೆಡೆ, ಸಿಕ್ಕಿಬಿದ್ದರೆ ಕ್ರೀಡಾಪಟುವಿನ ಮತ್ತು ದೇಶದ ಮಾನವೂ ಹರಾಜಾಗುತ್ತದೆ.

ಕ್ರೀಡಾಪಟುಗಳಿಗೆ ನಿಷೇಧವಾಗಿರುವ ಕೆಲವು ಸ್ಟಿರಾಯ್ಡ್‌ಗಳನ್ನು ಕ್ರೀಡಾಪಟುಗಳಲ್ಲದ ರೋಗಿಗಳ ಚಿಕಿತ್ಸೆಗೆ ಬಳಕೆ ಮಾಡಲು ಅನುಮತಿ ಇದೆ. ಅಥ್ಲೀಟ್‌ಗಳು ತಮಗೆ ಅನಾರೋಗ್ಯವಿದ್ದಾಗ ಇಂತಹ ಚಿಕಿತ್ಸೆಗೆ ಒಳಗಾದರೆ ಮುಂದೆ ಸ್ಪರ್ಧೆಯ ಸಂದರ್ಭದಲ್ಲಿ ತೊಂದರೆಯಾಗುವುದು ಸಹಜ. ಆದ್ದರಿಂದ ಯಾವುದೇ ಗುಳಿಗೆ, ಔಷಧಿ ತೆಗೆದುಕೊಳ್ಳುವ ಮುನ್ನ ಕ್ರೀಡಾ ವೈದ್ಯರಿಂದ ಸಲಹೆ ಪಡೆಯುವುದು ಸೂಕ್ತ.

ಇದೆಲ್ಲಕ್ಕಿಂತ ಹೆಚ್ಚಾಗಿ ಇಂತಹ ಅರಿವಿನ ಬೆಳಕು ಹಚ್ಚುವ ಅಚ್ಚುಕಟ್ಟಾದ ವ್ಯವಸ್ಥೆಯೊಂದು ಅಭಿವೃದ್ಧಿಯಾಗಬೇಕಾದ ತುರ್ತು ಈಗ ಇದೆ. ನೀರಜ್‌ ಚೋಪ್ರಾ ಅವರಂತಹ ಅಥ್ಲೀಟ್‌ಗಳು ಭಾರತಕ್ಕೆ ಚಿನ್ನದ ಕಿರೀಟ ತೊಡಿಸಿದ್ದಾರೆ. ಪಿ.ವಿ. ಸಿಂಧು, ಮೀರಾಬಾಯಿ ಚಾನು, ಎಚ್‌.ಎಸ್. ಪ್ರಣಯ್, ಅಭಿನವ್ ಬಿಂದ್ರಾ, ಬಜರಂಗ್ ಪೂನಿಯಾ ಮತ್ತಿತರ ಕ್ರೀಡಾಪಟುಗಳು ಕೀರ್ತಿಪತಾಕೆ ಹಾರಿಸಿದ್ದಾರೆ. ಅವರ ಸ್ಫೂರ್ತಿಯಿಂದ ಕ್ರೀಡೆಗಳತ್ತ ವಾಲುತ್ತಿರುವ ನವಪ್ರತಿಭೆಗಳ ದಂಡು ದೊಡ್ಡದಿದೆ. ಆದರೆ ಯಶಸ್ಸು ಎಂಬುದು ರಾತ್ರಿ ಬೆಳಗಾಗುವುದರೊಳಗೆ ಒಲಿಯುವುದಿಲ್ಲ. ಅದಕ್ಕಾಗಿ ನಿರಂತರ ಶ್ರಮ, ಆತ್ಮವಿಶ್ವಾಸ ಇರಬೇಕು. ಅದಕ್ಕಾಗಿ ಡೋಪಿಂಗ್‌ನಂತಹ ಅಡ್ಡಹಾದಿ ಹಿಡಿಯುವ ಆಟಗಾರರೂ ಇದ್ದಾರೆ. ಇದು ತಪ್ಪಬೇಕು. ಅದಕ್ಕಾಗಿ ಎಲ್ಲ ಕ್ರೀಡಾ ಫೆಡರೇಷನ್‌ಗಳೂ ವೃತ್ತಿಪರವಾಗಬೇಕು. ಕೇಂದ್ರ ಕ್ರೀಡಾ ಸಚಿವಾಲಯವು ಡೋಪಿಂಗ್ ಪಿಡುಗಿಗೆ ಮದ್ದು ಅರೆಯಲು ಆದ್ಯತೆ ನೀಡುವುದೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT